ಮಹಿಳೆ ನಡೆದು ಬಂದ ದಾರಿ-2

ಗಾಂಧಿ ಯುಗ ಹಾಗೂ ಸ್ವಾತಂತ್ರ್ಯಾನಂತರದ ದಶಕಗಳ ನಂತರದ ಕಾಲವು ಭಾರತೀಯ ಸಮಾಜದಲ್ಲಿಯ ಮಹಿಳೆಯರ ಸ್ಥಾನಮಾನದಲ್ಲಿ ಬೃಹತ್ ಬದಲಾವಣೆಗೆ ಸಾಕ್ಷಿಯಾಯಿತು. ಸಂವಿಧಾನವು ಲಿಂಗ ಸಮಾನತೆಯನ್ನು ಒಂದು ಮೂಲಭೂತ ಹಕ್ಕನ್ನಾಗಿ ಸಂಸ್ಥಾಪಿಸಿತು. ಆದರೆ 19ನೆಯ ಶತಮಾನದಲ್ಲಿಯ ಅತ್ಯಂತ ಹೀನ ಸ್ಥಿತಿಯಿಂದ, ಆಧೀನತೆಯಿಂದ ಹಾಗೂ ಅವನತಿಯ ಹಾದಿಯಿಂದ 20ನೆಯ ಶತಮಾನದ ಮಧ್ಯ ಭಾಗದಲ್ಲಿಯ ಸಮಾನತೆಯ ಸ್ಥಾನಮಾನ ಪಡೆಯುವವರೆಗಿನ ಮಹಿಳೆಯ ಈಗಿನ ಆಧುನಿಕ ಕಾಲದ ಬದಲಾವಣೆಯ ಪ್ರಕ್ರಿಯೆಯೇನೂ ಅಂಥ ಸರಳವಾದ ಪ್ರಗತಿಯ ಹಾದಿಯಾಗಿರಲಿಲ್ಲ.
ಸ್ವಾತಂತ್ರ್ಯಾನಂತರ ಮಹಿಳೆಯ ಸ್ಥಾನಮಾನದಲ್ಲಿ ಅನೇಕ ಕ್ರಾಂತಿಕಾರಿ ಬದಲಾವಣೆಗಳು ಆದವು. ಭಾರತೀಯ ಸಂವಿಧಾನವು ಅನೇಕ ಸಂಘ ಸಂಸ್ಥೆಗಳ ಮೂಲಕ ಮಹಿಳೆಯ ಸ್ಥಿತಿಯನ್ನು ಸುಧಾರಿಸಲು ಸರಕಾರವು ವಿಶೇಷ ಹಂತಗಳನ್ನು ಕೈಗೊಳ್ಳಲು ಅನುಕೂಲಗಳನ್ನು ಒದಗಿಸಿತು.
ಸಾಮಾಜಿಕ ಕಾಯಿದೆಗಳ ಮೂಲಕ ಮಹಿಳೆಯ ಸ್ಥಿತಿಗತಿಯಲ್ಲಿ ಒಂದು ತ್ವರಿತ ಹಾಗೂ ಪರಿಣಾಮಕಾರಿಯಾದ ಬದಲಾವಣೆಗಾಗಿ ಆಲೋಚಿಸಿತು. ಭಾರತೀಯ ಸಂವಿಧಾನವು ಜೀವದ ಸಂರಕ್ಷಣೆ, ವೈಯಕ್ತಿಕ ಸ್ವಾತಂತ್ರ್ಯದಂಥ ಕೆಲವೊಂದು ಮೂಲಭೂತ ಹಕ್ಕುಗಳನ್ನು ಭರವಸೆಯನ್ನು ನೀಡಿತು. ಭಾರತೀಯ ಮಹಿಳೆಯು ಭಾರತೀಯ ಪುರುಷನಂತೆಯೇ ಈ ಎಲ್ಲ ಹಕ್ಕುಗಳನ್ನೂ ಅನುಭವಿಸಲು ಅರ್ಹಳೆಂದು ಹೇಳಿತು. 14ನೇ ಕಲಮು ಕಾನೂನಿನ ಪ್ರಕಾರ ಸಮಾನತೆಯನ್ನು ಖಚಿತಗೊಳಿಸಿದರೆ 15 ನೇ ಕಲಮು ಕಾನೂನಿನೆದುರು ಹೆಣ್ಣು-ಗಂಡು ಎಂಬ ಯಾವುದೇ ಭೇದ ಭಾವವನ್ನೂ ನಿಷೇಧಿಸಿತು. 16(ಎ)ನೇ ಕಲಮು ಜಾತಿ, ಲಿಂಗ, ಸಮುದಾಯ, ಹುಟ್ಟಿದ ಸ್ಥಳ, ವಸತಿ ಅಥವಾ ಇವುಗಳಲ್ಲಿ ಯಾವುದೇ ಒಂದು ಕಾರಣಕ್ಕಾಗಿಯೂ ರಾಜ್ಯದ ಯಾವುದೇ ಕಛೇರಿಗಳಲ್ಲಿಯ ಉದ್ಯೋಗಗಳಿಗೂ ಯಾವುದೇ ರೀತಿಯ ತಾರತಮ್ಯವನ್ನು ಮಾಡುವುದನ್ನೂ ನಿಷೇಧಿಸಿತು.
ಸ್ವಾತಂತ್ರ್ಯಾನಂತರದ ಭಾರತದಲ್ಲಿ ಮಹಿಳೆಯ ಉನ್ನತಿಗಾಗಿ ಅನೇಕ ಕಾನೂನುಗಳ ಸರಣಿಯನ್ನೇ ಜಾರಿಗೊಳಿಸಿತು. ಈ ಶಾಸನಗಳನ್ನು ಮಹಿಳೆಯರಿಗೆ ಪುರುಷರಂತೆಯೇ ಸಮಾನ ಹಕ್ಕುಗಳನ್ನು ಹಾಗೂ ಸೌಲಭ್ಯಗಳನ್ನು ಕೊಡಲೆಂದು, ಮಹಿಳೆಯ ಬಗೆಗಿನ ತಾರತಮ್ಯವನ್ನು ಹೋಗಲಾಡಿಸಲೆಂದು, ಲೈಂಗಿಕ ಅಸಮಾನತೆಯನ್ನು ತೊಡೆದುಹಾಕಲೆಂದು ಹಾಗೂ ಅವರ ಸ್ವಯಂ ಅರಿವು, ಆತ್ಮಸಾಕ್ಷಾತ್ಕಾರ ಹಾಗೂ ಅಭಿವೃದ್ಧಿಯ ದಾರಿಯಲ್ಲಿ ಎದುರಾಗುವ ಬಾಹ್ಯ ಅಡೆತಡೆಗಳನ್ನು ಹೋಗಲಾಡಿಸಲೆಂದು ಜಾರಿಗೊಳಿಸಲಾಯಿತು.
ಮಹಿಳೆಯರ ಉನ್ನತಿಗಾಗಿ ಜಾರಿಗೊಳಿಸಲಾದ ಮಹತ್ವದ ಕಾನೂನುಗಳು:
1. 1955ರ ಹಿಂದೂ ಮದುವೆಯ ಕಾಯಿದೆ:
ಈ ಕಾಯಿದೆಯು ಮಹಿಳೆಗೆ ವಿಚ್ಛೇದನವನ್ನು ಪಡೆಯಲು ಹಾಗೂ ಇಂಥ ಪ್ರಕರಣಗಳನ್ನು ಕಾಪಾಡಲು ಕೂಡ ಸಮಾನ ಹಕ್ಕುಗಳನ್ನು ನೀಡಿತು.
2. 1956ರ ಹಿಂದೂ ದತ್ತು ಹಾಗೂ ಅದನ್ನು ನಿರ್ವಹಿಸಿಕೊಳ್ಳುವ ಕಾಯಿದೆ:
ಈ ಕಾಯಿದೆಯ ಸಹಾಯದಿಂದ ಮಹಿಳೆಯು ಒಂದು ಹುಡುಗ ಅಥವಾ ಹುಡುಗಿಯನ್ನು ತನ್ನ ಮಗ ಅಥವಾ ಮಗಳೆಂದು ದತ್ತು ಪಡೆಯಬಹುದು.
3. 1956ರ ಹಿಂದೂ ಅಪ್ರಾಪ್ತ ಹಾಗೂ ಪಾಲಕತ್ವದ ಕಾಯಿದೆ:
ಈ ಕಾಯಿದೆಯು ಮಹಿಳೆಗೆ ತನ್ನ ಅಪ್ರಾಪ್ತ ಮಗುವಿನ ಸಹಜ ಪಾಲಕಳೆಂದು ಕಾರ್ಯನಿರ್ವಹಿಸುವ ಅರ್ಹತೆಯನ್ನು ಒದಗಿಸಿತು.
4. 1956ರ ಹಿಂದೂ ವಾರಸಾ ಹಕ್ಕು:
ಈ ಕಾಯಿದೆಯ ಪರಿಣಾಮವಾಗಿ ಮಹಿಳೆಯು ಕುಟುಂಬದ ಆಸ್ತಿಯಲ್ಲಿ ವಾರಸಾ ಹಕ್ಕನ್ನು ಪಡೆದಳು. ಇದನ್ನು ಹಿಂದೂ ಕಾಯಿದೆಯ ಒಂದು ಮೈಲಿಗಲ್ಲೆಂದು ಹೇಳಬಹುದು.
5. 1973ರ ಹಿಂದೂ ಮಹಿಳೆಯ ಆಸ್ತಿ ಹಕ್ಕು ಕಾಯಿದೆ:
ಈ ಕಾಯಿದೆಯು ಮಹಿಳೆಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿತು. ಈ ಕಾಯಿದೆಯನ್ವಯವಾಗಿ, ಮಗಳು, ವಿಧವೆ ಹಾಗೂ ತಾಯಿ, ಯಾರೇ ಇರಲಿ, ಮೃತರ ವಾರಸುದಾರರಾಗಿ ಹಕ್ಕನ್ನು ಪಡೆಯುತ್ತಾರೆ. ಈಗ ಮಹಿಳೆಯು ತಾನು ಬಯಸಿದಂತೆ ಆ ಇಡಿಯ ಆಸ್ತಿಯನ್ನು ಮಾರುವ, ಸಾಲಕ್ಕೆ ಉಪಯೋಗಿಸಿಕೊಳ್ಳುವ ಹಾಗೂ ವಿಲೇವಾರಿ ಮಾಡುವ ಹಕ್ಕನ್ನು ಪಡೆದಿದ್ದಾಳೆ. ಆದರೆ, 1956ರ ಹಿಂದೂ ವಾರಸಾ ಕಾಯಿದೆಯನ್ವಯ, ಮಹಿಳೆಯು ಗಂಡನ ಸಹವರ್ತಿ ಆಸ್ತಿಯಲ್ಲಿ ಭಾಗವನ್ನು ತನ್ನ ಜೀವನವಿಡೀ ಕೇವಲ ಅನುಭವಿಸಬಹುದು. ಅವಳನ್ನು ಆಸ್ತಿಯಿಂದ ದೂರಮಾಡಲು ಯಾರಿಗೂ ಯಾವುದೇ ಹಕ್ಕಿಲ್ಲ.
6. 1961ರ ವರದಕ್ಷಿಣಾ ವಿರೋಧಿ ಕಾಯಿದೆ:
ಈ ಕಾಯಿದೆಯನ್ವಯ ವರದಕ್ಷಿಣೆಯನ್ನು ಕೊಡುವುದು ಹಾಗೂ ತೆಗೆದುಕೊಳ್ಳುವುದು ಎರಡೂ ಅಪರಾಧವೇ. ಅದಕ್ಕಾಗಿ ಶಿಕ್ಷೆಯೂ ಇದೆ ಅಥವಾ ಹಾಗೂ ದಂಡವೂ ಇದೆ.
7. 1976ರ ಸಮಾನ ವೇತನ ಕಾಯಿದೆ:
ಈ ಕಾಯಿದೆಯು ಪುರುಷ ಹಾಗೂ ಸ್ತ್ರೀಯರಲ್ಲಿ ವೇತನ ತಾರತಮ್ಯವನ್ನು ಮಾಡಲು ಅವಕಾಶ ಕೊಡುವುದಿಲ್ಲ.
ಶಾಸನಗಳಲ್ಲದೆ, ಶಿಕ್ಷಣವೂ ಕೂಡ ಸಮಾಜದಲ್ಲಿ ಮಹಿಳೆಯ ಸ್ಥಾನಮಾನವನ್ನು ಉತ್ತಮಗೊಳಿಸುವಲ್ಲಿ ಮಹತ್ವದ ಅಂಶವಾಗಿ ಎಣಿಸಲ್ಪಡುತ್ತದೆ. ಆದ್ದರಿಂದ, ಮಹಿಳಾ ಶಿಕ್ಷಣವನ್ನು ಅಭಿವೃದ್ಧಿಗೊಳಿಸಲು ಸಕ್ರಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯದ ನಂತರ ಅತಿ ಶೀಘ್ರದಲ್ಲಿಯೇ ನಮ್ಮ ಜನಸಂಖ್ಯೆಯ ಅರ್ಧದಷ್ಟು ಸಂಖ್ಯೆಯನ್ನು ಶೈಕ್ಷಣಿಕ ಪ್ರಕ್ರಿಯೆಗೆ ಗುರಿಪಡಿಸದ ಹೊರತು ನಮ್ಮ ಸಮಾಜದ ಆಧುನಿಕೀಕರಣವು ದೂರದ ಕನಸಾಗಿಯೇ ಉಳಿಯಬಹುದೆಂಬ ಸತ್ಯವನ್ನು ಅರಿಯಲಾಯಿತು. ಅನೇಕ ಸಮಿತಿಗಳು ಹಾಗೂ ಆಯೋಗಗಳು ಶೈಕ್ಷಣಿಕ ಅವಕಾಶಗಳ ಅಗತ್ಯವನ್ನು ಒತ್ತಿಹೇಳಿದವು.
ಇದು ವಿಶೇಷವಾಗಿ ಸ್ತ್ರೀಯರ ಸಲುವಾಗಿಯೇ ಅನೇಕ ಶಾಲೆಗಳು ಹಾಗೂ ಕಾಲೇಜುಗಳನ್ನು ತೆರೆಯುವದಕ್ಕೆ ಕಾರಣವಾಯಿತು.
ಆದರೂ, ಎಪ್ಪತ್ತರ ದಶಕದ ವರೆಗೂ ಮಹಿಳಾ ಶಿಕ್ಷಣದಲ್ಲಿಯ ಪ್ರಗತಿಯು ನಿಧಾನವಾಗಿಯೇ ಇತ್ತು. ವಾಸ್ತವದಲ್ಲಿ, ಅದಕ್ಕೆ ಯಾವುದೇ ಆರ್ಥಿಕ ಕಡ್ಡಾಯದ ಗೈರುಹಾಜರಿಯೂ ಒಂದು ಮುಖ್ಯ ಕಾರಣವಾಗಿತ್ತು. ಅವರು ತಮ್ಮ ಹಕ್ಕುಗಳನ್ನು ಹಾಗೂ ಸೌಕರ್ಯಗಳನ್ನು ಸಾಧಿಸಲು, ಒಂದು ಯೋಗ್ಯ ಜೀವನವನ್ನು ಹೊಂದಲು, ಹಾಗೂ ಆರ್ಥಿಕವಾಗಿ ಸ್ವತಂತ್ರರಾಗಲು ಮಹಿಳೆಯರಲ್ಲಿ ಒಂದು ನಿಧಾನಗತಿಯ ಬದಲಾವಣೆಯನ್ನು ಕಾಣಬೇಕಾದಲ್ಲಿ ಶಿಕ್ಷಣದ ಮೂಲಕ ಅವರು ಯೋಗ್ಯವಾದ ಕೌಶಲ್ಯವನ್ನು ಪಡೆಯುವುದು ಅಗತ್ಯವಾಗಿತ್ತು. ಆದ್ದರಿಂದ ಉನ್ನತ ಶಿಕ್ಷಣದ ಕ್ಷೇತ್ರದಲ್ಲಿ ಮಹಿಳಾ ಅನುಪಾತದಲ್ಲಿ ಒಂದು ಸ್ಥಿರವಾದ ಪ್ರಗತಿಯು ಕಂಡುಬಂದಿದೆ.
1991ರ ಜನಗಣತಿಯ ವರದಿಯಂತೆ, ಮಹಿಳೆಯು ಮನೆಯ ನಾಲ್ಕು ಗೋಡೆಗಳಿಂದ ಹೊರಬಂದು ನಗರ ಹಾಗೂ ಹಳ್ಳಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿರುವದರಲ್ಲಿ ಗಣನೀಯ ಏರಿಕೆಯಾಗಿದೆ. ಉದ್ಯೋಗದ ಅವಕಾಶಗಳು, ಕುಟುಂಬದಲ್ಲಿಯ ಆರ್ಥಿಕ ಸಂಕಷ್ಟ ಹಾಗೂ ಸಾಮಾಜಿಕ ಪರಿಸ್ಥಿತಿಗಳು ಮಹಿಳೆಯನ್ನು ಕುಟುಂಬದ ಹೊರಗೆ ಉದ್ಯೋಗವನ್ನು ಪಡೆಯಲು ಪ್ರೋತ್ಸಾಹಿಸುತ್ತವೆ. ಮಹಿಳೆಯ ಉದ್ಯೋಗದ ಬಗ್ಗೆ ಆಕೆಯ ಬಂಧುಗಳ ಧೋರಣೆ, ಅವಳ ಉದ್ಯೋಗದ ಬಗೆಗಿನ ಸ್ವಂತ ಆದ್ಯತೆಗಳು ಈಗ ಮೊದಲಿನ ನಂಬಿಕೆಗಳಿಗಿಂತ ಅತ್ಯಂತ ಭಿನ್ನವಾಗಿವೆ. ಜನರು ಈಗ ಮಹಿಳಾ ಉದ್ಯೋಗದ ಬಗ್ಗೆ ಸಕಾರಾತ್ಮಕ ಧೋರಣೆಯನ್ನು ಹೊಂದಿದ್ದಾರೆ.
ಇಂದಿನ ದಿನಗಳಲ್ಲಿ, ಉತ್ಪಾದನೆಯ ಕೇಂದ್ರವು ಕುಟುಂಬದಿಂದ ಹೊರಗಿದೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಮಹಿಳಾ ಸಹಭಾಗಿತ್ವನ್ನು ಆರ್ಥಿಕ ಪರಿಸ್ಥಿತಿಗಳು ಅಪೇಕ್ಷಿಸುತ್ತಿವೆ. ಇದು ಕುಟುಂಬ ಹಾಗೂ ಅದರಂತೆಯೇ ಸಮಾಜದಲ್ಲಿ ಕೂಡ ಮಹಿಳೆಯ ಸ್ಥಾನವನ್ನು ವರ್ಧಿಸಿದೆ.
ಮಹಿಳೆಯ ಸ್ಥಾನಮಾನದ ಬಗೆಗಿನ ಸಮಿತಿಯ ವರದಿಯ ಪ್ರಕಾರ (1974) ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿ ವೃತ್ತಿಪರ, ತಾಂತ್ರಿಕ ಹಾಗೂ ಸಂಬಂಧಿತ ಕೆಲಸಗಾರರ, ಹಾಗೂ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವರ್ಗಗಳಲ್ಲಿ 1960ರಿಂದ ಈಚೆಗೆ ನಿರಂತರ ಏರಿಕೆಯು ಕಂಡುಬಂದಿದೆ. ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿಯ ಆಯ್ದ ವೃತ್ತಿಗಳ ಉದ್ಯೋಗ ಹಾಗೂ ತರಬೇತಿ ಅಂಕಿ-ಸಂಖ್ಯೆಗಳ ಮಹಾನಿರ್ದೇಶಕರು, ಶಿಕ್ಷಣ, ಮೆಡಿಕಲ್ ಹಾಗೂ ಅದಕ್ಕೆ ಸಂಬಂಧಿತ ಕೆಲಸಗಾರರು ಮತ್ತು ಟೆಲಿಫೋನ್ ಆಪರೇಟರುಗಳು ನಾಲ್ಕು ಉದ್ಯೋಗಗಳನ್ನು ಆಯ್ದ ಉದ್ಯೋಗಗಳನ್ನಾಗಿ ಆಯ್ಕೆ ಮಾಡಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ, ಮಹಿಳೆಯು ಈಗ ಪುರುಷರಂತೆಯೇ ಸಮಾನ ಹಕ್ಕುಗಳನ್ನು ಅನುಭವಿಸುತ್ತಿದ್ದಾಳೆ. ರಾಜಕೀಯ ಕ್ಷೇತ್ರದಲ್ಲಿಯ ಎರಡು ಮಹತ್ವದ ಹಕ್ಕುಗಳನ್ನು ಮಹಿಳೆಗೆ ನೀಡಲಾಗಿದ್ದು ಅವುಗಳೆಂದರೆ: ಮಹಿಳಾ ಮತಾಧಿಕಾರ ಮತ್ತು ಶಾಸಕಾಂಗಕ್ಕೆ ಅರ್ಹತೆ. ಸ್ವಾತಂತ್ರ್ಯಕ್ಕೂ ಮೊದಲು, 1946ರಲ್ಲಿ ಸಂವಿಧಾನ ಸಭೆಗಾಗಿ ಚುನಾವಣೆಗಳು ನಡೆದಾಗ ಸರೋಜಿನಿ ನಾಯಿಡು, ಹಂಸಾ ಮೆಹತಾ, ರೇಣುಕಾ ರಾಯ್ ಹಾಗೂ ಇತರ ಅನೇಕ ಪ್ರಸಿದ್ಧ ಮಹಿಳೆಯರು ಆಯ್ಕೆ ಹೊಂದಿದ್ದರು. 1952ರ ಲೋಕಸಭೆಯ ಮೊದಲನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಅನೇಕ ಮಹಿಳೆಯರು ಸ್ಪರ್ಧಿಸಿದ್ದರು.

Leave a Reply