ಮಕ್ಕಳಲ್ಲಿ ಆತ್ಮ ಗೌರವ ಬೆಳೆಸುವ ಬಗ್ಗೆ

ಮಕ್ಕಳಲ್ಲಿ ಆತ್ಮ ಗೌರವ ಬೆಳೆಸುವ ಬಗ್ಗೆ

ಆತ್ಮಗೌರವ ವ್ಯಕ್ತಿಯೊಬ್ಬನಲ್ಲಿ ಇರಲೇಬೇಕಾದ ಒಂದು ಅಗತ್ಯ. ಆತ್ಮಗೌರವವಿಲ್ಲದ ಮನುಷ್ಯ ಎಂದರೆ ನಿರ್ಜೀವ ದೇಹವಿದ್ದಂತೆಯೇ ಸರಿ. ಮನುಷ್ಯನಲ್ಲಿ ಈ ಆತ್ಮಗೌರವವನ್ನು ಚಿಕ್ಕಂದಿನಿಂದಲೆ ಬೆಳೆಸಬೇಕಾಗುತ್ತದೆ. ಇದಕ್ಕಾಗಿ ಮಕ್ಕಳಿಗೆ ಶಾಲೆಯಿಂದಲೇ ಆತ್ಮ ಗೌರವ ಬೆಳೆಸುವುದರ ಬಗ್ಗೆ, ರ್ಯಾಗಿಂಗ್ ವಿರೋಧಿಸುವುದರ ಬಗ್ಗೆ, ತಮ್ಮ ಮನೋಭಾವನೆಗಳನ್ನು ಪ್ರದರ್ಶಿಸುವುದಕ್ಕೆ ಅವಕಾಶ ಕಲ್ಪಿಸುವುದರ ಬಗ್ಗೆ ಹೇಳಿಕೊಡಬೇಕು. ಅಷ್ಟೇ ಅಲ್ಲ, ಪಾಲಕರೂ ಕೂಡ ಮಕ್ಕಳಿಗೆ ಎಲ್ಲ ರೀತಿಯಲ್ಲಿ ಆಧಾರವಾಗಿರಬೇಕು. ಕೆಲವು ಮಕ್ಕಳಲ್ಲಿ ಸಮಸ್ಯೆ ಎದುರಿಸುವ ಎದೆಗಾರಿಕೆಯೂ ಕಡಿಮೆ ಇರುತ್ತದೆ. ಅವರು ಯಾವಾಗಲೂ ವಾಸ್ತವ ಜಗತ್ತಿನಿಂದ ದೂರ, ಕೇವಲ ಕಾಲ್ಪನಿಕ ಲೋಕದಲ್ಲಿಯೇ ವಿಹರಿಸುತ್ತಿರುತ್ತಾರೆ. ತಮ್ಮಿಂದಲೇ ಎಲ್ಲವೂ ಎಂಬ ಮನಸ್ಥಿತಿಯಲ್ಲಿರುತ್ತಾರೆ.
ಉನ್ಮಾದದ ಮನಸ್ಥಿತಿ ಅವರದು. ಯಾವಾಗಲೂ ಎಲ್ಲರೂ ತಮ್ಮದೇ ಕಾಳಜಿ ಮಾಡಲಿ ಎನ್ನುವ ಆಶೆ. ಅಲ್ಲದೆ ಅವರು ತಮಗೆ ಅತಿ ಹತ್ತಿರದ ವ್ಯಕ್ತಿಯ ಮೇಲೆ ಹೆಚ್ಚು ಅವಲಂಬಿಸಿರುತ್ತಾರೆ. ಅವರ ಪ್ರೀತಿಗಾಗಿ ಯಾವಾಗಲೂ ಹಾತೊರೆಯುತ್ತಿರುತ್ತಾರೆ. ಗೆಳೆಯರು, ಶಿಕ್ಷಕರು, ಆತ್ಮೀಯರಿಂದ ಯಾವಾಗಲೂ ಹೊಗಳಿಕೆಗೆ ಆಶೆ ಪಡುತ್ತಾರೆ. ಅಂಥವರಿಗೆ ಆತ್ಮೀಯರಿಂದ ಆಗುವ ಒಂದು ಸಣ್ಣ ನಿರಾಶೆ ಕೂಡ ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ.
ಇಂಥವರನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಅಂತರ್ಮುಖಿ ವ್ಯಕ್ತಿ ತ್ವದಿಂದ ಬಹಿರ್ಮುಖಿಯಾಗಿಸಲು ಪ್ರಯತ್ನಿಸಬೇಕು. ಇಂಥ ಮರುಕಳಿಸುವ ಚಟವಿರುವವರು ತಾವು ಸಾಯಲಿಕ್ಕೆ ಇರುವ ಕಾರಣಗಳಂತೆಯೇ ಬದುಕಲಿಕ್ಕೆ ಇರುವ ಕಾರಣಗಳನ್ನು ಕೂಡ ಬರೆದಿಡಬೇಕು. ಭವಿಷ್ಯದ ಯೋಜನೆಗಳ ಬಗ್ಗೆ ಚಿಂತಿಸಬೇಕು. ಇದು ತಮ್ಮನ್ನು ತಾವೇ ಆಂಥ ಆಲೋಚನೆಗಳಿಂದ ಹೊರಗೆಳೆಯೂವ ಪ್ರಯತ್ನ. ಸ್ವಸಹಾಯಕ್ಕಿಂತ ದೊಡ್ಡ ಸಹಾಯ ಬೇರೆ ಯಾವುದೂ ಇಲ್ಲ.
ಮನೆಯಲ್ಲಿ ಕೂಡ ಚಿಕ್ಕಂದಿನಿಂದಲೂ ಪಾಪ ಪುಣ್ಯಗಳ ಪರಿಕಲ್ಪನೆ, ಪಾಪಭೀತಿ, ಮೃತ್ಯು ಭಯ ಇವುಗಳ ಬಗ್ಗೆ ನೈತಿಕ ಪಾಠಗಳನ್ನು ಹೇಳಬೇಕು. ಶಿಸ್ತು ಪಾಲನೆಯ ಬಗ್ಗೆಯೂ ಹೇಳಿಕೊಡಬೇಕು. ದುರಾಶೆ, ದ್ವೇಷ, ಸಂಘರ್ಷ ಇತ್ಯಾದಿಗಳಿಂದ ದೂರ ಇರುವುದರ ಮೌಲ್ಯ ಪ್ರಜ್ಞೆಗಳನ್ನು ಪ್ರತಿಯೊಬ್ಬ ಪಾಲಕರೂ ಮಕ್ಕಳಿಗೆ ಚಿಕ್ಕಂದಿನಿಂದಲೂ ಬೋಧಿಸಿ, ನೀತಿಪಾಠಗಳ ಮೂಲಕ ಒಳ್ಳೆಯ ವಾತಾವರಣ ಕಲ್ಪಿಸಿದರೆ ಮುಂದೆ ಬರಬಹುದಾದ ಆತ್ಮಹತ್ಯಾ ಪ್ರಯತ್ನಗಳನ್ನು ತಡೆಗಟ್ಟಬಹುದು.
ಈಗ ಜಗತ್ತಿನ ಪ್ರತಿಯೊಂದು ದೇಶವೂ ಇದರ ಬಗ್ಗೆ ಜಾಗೃತವಾಗಿವೆ. ಆಸ್ಟ್ರೇಲಿಯಾದಲ್ಲಿ ಈ ವಿಪತ್ತು ನಿವಾರಣಾ ಸೇವೆ ಎಂಬ ಹೆಸರಿನ ಸಂಸ್ಥೆ ಇದೆ.ಅಲ್ಲಿ ಆತ್ಮಹತ್ಯೆ ಕುರಿತು ಜಾಗೃತಿ ಮೂಡಿಸಲು ಸದಸ್ಯರಿಗೆ ತರಬೇತಿಯನ್ನು ಕೊಡುತ್ತಾರೆ. ಶಾಲೆ, ಕಾಲೇಜು ಮತ್ತು ಇತರ ಸಂಸ್ಥೆಗಳಲ್ಲಿ ಜಾಗೃತಿಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಶಿಕ್ಷಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಎಲ್ಲರೂ ಆತ್ಮಹತ್ಯೆಯ ವಿಚಾರವನ್ನು ತಲೆಯಲ್ಲಿರಿಸಿಕೊಂಡವರ ಜೊತೆಗೆ ಸಹಾನುಭೂತಿಯಿಂದ ಹೇಗೆ ಮಾತಾಡಬೇಕು, ಅವರ ಬಗ್ಗೆ ಗಮನವಿಡುವ, ಪಕ್ಷಪಾತವಿಲ್ಲದೆ ಅವರ ಮಾತು ಕೇಳಿಸಿಕೊಳ್ಳುವುದಕ್ಕೆ, ಸಹಾಯದ ಅಗತ್ಯವಿರುವವರಿಗೆ ಸಹಾಯ ನೀಡುವ ಬಗ್ಗೆಯೂ ತರಬೇತಿ ಕೊಡುತ್ತಾರೆ. ಅಂತಹ ಸಂಸ್ಥೆಗಳು ನಮ್ಮಲ್ಲಿಯೂ ಪ್ರಾರಂಭಿಸುವುದಕ್ಕೆ ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು, ಸಮಾಜ ಮುಂದೆ ಬರಬೇಕು.
ಇತ್ತೀಚೆಗೆ ನಮ್ಮ ದೇಶದಲ್ಲಿ ಯುವಕರ ಹಾಗೆಯೇ ರೈತಾಪಿ ವರ್ಗದವರ ಆತ್ಮಹತ್ಯೆಯೂ ಜನತೆಯ ಎದೆಗೆಡಿಸಿದೆ. ಪ್ರತಿ ದಿನ ಇಬ್ಬರು ಮೂವರು ಆತ್ಮಹತ್ಯೆಗೆ ಶರಣಾಗುತ್ತಾರೆ. ನಮ್ಮೆಲ್ಲರ ಜೀವನಕ್ಕೆ ಅತಿ ಅವಶ್ಯಕವಾದ ಆಹಾರ ಒದಗಿಸುವ ಅನ್ನದಾತನ ಪರಿಸ್ಥಿತಿಯೇ ಈ ಮಟ್ಟಕ್ಕೆ ಇಳಿಯುವುದಕ್ಕೆ ಕಾರಣವನ್ನು ಕಂಡು ಹಿಡಿದು ಆ ದಿಸೆಯಲ್ಲಿ ವಿಚಾರ ಮಾಡುವುದೂ ಅವಶ್ಯಕ. ಇಂಥ ಹೆಚ್ಚಿನ ಪ್ರಕರಣಗಳಲ್ಲಿ ಆ ರೈತ ಕುಟುಂಬಗಳ ಹದಗೆಟ್ಟ ಆರ್ಥಿಕ ಪರಿಸ್ಥಿತಿಯೇ ಮೂಲ ಕಾರಣವಾಗಿರುತ್ತದೆ. ನಮಗೆ ಸ್ವಾತಂತ್ರ್ಯ ಸಿಕ್ಕು 71 ವರ್ಷಗಳಾಗಿವೆ. ಈ ಅವಧಿಯಲ್ಲಿ ಅನೇಕ ಪಂಚವಾರ್ಷಿಕ ಯೋಜನೆಗಳನ್ನು ನಮ್ಮ ಸರಕಾರ ಹಮ್ಮಿಕೊಂಡಿತು. ಆರ್ಥಿಕವಾಗಿ, ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ಕೃಷಿಯಲ್ಲಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೂಡ ಸಾಕಷ್ಟು ಆಗಿದೆ. ಆದರೆ ರೈತರ ಪರಿಸ್ಥಿತಿ ಮಾತ್ರ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅದಕ್ಕೆ ಕಾರಣವೂ ನಿಚ್ಚಳವಾಗಿದೆ. ಕೃಷಿ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಮೊದಲಿನಂತೆ ಈಗ ಕೃಷಿಕರಿಗೆ ಮುಂದಿನ ವರ್ಷದ ಬಿತ್ತನೆಗೆ ಬೇಕಾಗುವ ಬೀಜಗಳನ್ನು ಇಟ್ಟುಕೊಳ್ಳಲೂ ಸಾಧ್ಯವಾಗುತ್ತಲಿಲ್ಲ. ಅದಕ್ಕೆ ಕಾರಣ ಅವರು ಹೊಸ ತಳಿಯ ಬೀಜಗಳನ್ನು ಅವಲಂಬಿಸಿರುವುದು. ಇಂತಹ ಬೀಜಗಳನ್ನು ತಾಂತ್ರಿಕ ಕಾರಣ ಗಳಿಂದಾಗಿ ಸಂಗ್ರಹಿಸಿ ಇಟ್ಟುಕೊಳ್ಳುವುದೂ ಸಾಧ್ಯವಿಲ್ಲ. ಅಲ್ಲದೆ ಹೊಸ ತಳಿಯ ಬೀಜಗಳಿಗೆ ರಸಗೊಬ್ಬರವು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಕೀಟನಾಶಕಗಳೂ ಕೂಡ ರಾಸಾಯನಿಕ ರೀತಿಯವೇ ಬೇಕಾಗುತ್ತವೆ. ಇವುಗಳ ಬೆಲೆಯೂ ಹೆಚ್ಚುತ್ತಲೇ ಇದೆ. ಇಷ್ಟೆಲ್ಲ ಖರ್ಚು ಮಾಡಿ ಬಿತ್ತನೆ ಮಾಡಿ, ಗೊಬ್ಬರ ಹಾಕಿದಮೇಲೆಯೂ ಒಮ್ಮೊಮ್ಮೆ ಮಳೆ ಕೈಕೊಡುತ್ತದೆ. ಮಳೆ ಚೆನ್ನಾಗಿ ಆಗಿ, ಬೆಳೆ ಬಂಪರ್ ಬಂದರೂ ಖರ್ಚು ಮಾಡಿದ್ದಕ್ಕೆ ತಕ್ಕಂತೆ ಬೆಲೆ ಬರುವುದಿಲ್ಲ. ಹೀಗಾಗಿ ರೈತ ನೆಲಕ್ಕೆ ಕುಸಿಯುತ್ತಾನೆ. ಅದೂ ಅಲ್ಲದೇ ಕೆಲವೊಮ್ಮೆ ಹೊಸ ತಳಿಯ ಬೀಜಗಳು ಒಳ್ಳೆಯ ತಳಿಯವೂ ಇರುವುದಿಲ್ಲ. ಜೊಳ್ಳು ಹೊರಡುತ್ತವೆ. ಅಲ್ಲದೆ ಈಗ ಚಿಕ್ಕ ಹಿಡುವಳಿದಾರರು ಕೂಡ ತಮ್ಮ ಕುಟುಂಬದ ಕಾಳುಕಡಿಯ ಅವಶ್ಯಕತೆ ಪೂರೈಸುವುದನ್ನು ಬಿಟ್ಟು, ಹಣದ ಬೆಳೆಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಖರ್ಚು ಹೆಚ್ಚು. ಮಾರುಕಟ್ಟೆ ಕೂಡ ಅನಿಶ್ಚಿತ. ಹೀಗಾಗಿ ಒಮ್ಮೊಮ್ಮೆ ರೈತರು ಬಂಡವಾಳವನ್ನು ಕೂಡ ಕಳೆದುಕೊಳ್ಳುತ್ತಾರೆ. ಅದನ್ನು ತಡೆಗಟ್ಟಲು ಚಿಕ್ಕ ಹಿಡುವಳಿ ರೈತರು ತಮ್ಮ ಕುಟುಂಬದ ಅವಶ್ಯಕತೆಯನ್ನು ಪೂರೈಸಲು ಗಮನ ಕೊಡಬೇಕು. ನಂತರವೇ ಹಣದ ಬೆಳೆಯತ್ತ ಗಮನ ಹರಿಸಬೇಕು. ಕೊಟ್ಟಿಗೆ ಗೊಬ್ಬರದ ಉಪಯೋಗ, ಸ್ಥಳೀಯ ಬೀಜ ಸಂಗ್ರಹಣೆಗಳ ಸೂಕ್ತ. ಸ್ವಾವಲಂಬನೆ ಅಗತ್ಯ.
ಬ್ಯಾಂಕ್ ಗಳ ಸಾಲದ ಬಗ್ಗೆ ಹೇಳುವುದಾದರೆ ಅದು ಸುಲಭವಾಗಿ ಸಿಗದು. ಅದಕ್ಕಾಗಿ ಅವರು ದಲ್ಲಾಳಿಗಳನ್ನು ಅವಲಂಬಿಸಬೇಕಾಗುತ್ತದೆ. ಅದು ಸರಳ ರೀತಿಯಲ್ಲಿ ಸಿಗುವಹಾಗಾದರೆ ರೈತರು ಖಾಸಗಿ ಸಾಲದ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ. ಆತ್ಮಹತ್ಯೆಗಳೂ ಕಡಿಮೆ ಆಗುತ್ತವೆ. ಅಲ್ಲದೆ ರೈತರು ಬೆಳೆದ ಬೆಳೆಗಳನ್ನು ಸರಕಾರ ನೇರ ಖರೀದಿ ಮಾಡಬೇಕು.
ಒಟ್ಟಿನಲ್ಲಿ ಈ ಆತ್ಮಹತ್ಯೆಯಿಂದ ಉಂಟಾಗುವ ಸಾಮಾಜಿಕ ವೈಷಮ್ಯದ ಸ್ಥಿತಿಯನ್ನು ಗಮನಿಸಿದರೆ ಆತ್ಮಹತ್ಯೆ ಆಕಸ್ಮಿಕ ಅಲ್ಲ, ತೀವ್ರತರವಾದ ಮನೋವೈಕಲ್ಯದ ಸ್ಥಿತಿ ಎನ್ನುವುದು ತಿಳಿದುಬರುತ್ತದೆ. ಇದನ್ನು ತಡೆಗಟ್ಟಲು ಕುಟುಂಬ, ಸಮಾಜ, ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ ಎಂದು ಎನ್ನಿಸುತ್ತದೆ.
ಅಷ್ಟೇ ಅಲ್ಲ, ಸಮಾಜದಲ್ಲಿ ಅವಿರತವಾಗಿ ದೌರ್ಜನ್ಯ ಎಸಗುವ ದುಷ್ಟರನ್ನು, ಅಮಾಯಕ ಜನರನ್ನು ಹಿಂಸಿಸುವವರನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸುವದಲ್ಲದೆ ಮುಗ್ಧ ಜನರಿಗೆ ರಕ್ಷಣೆಯನ್ನು ಕೂಡ ನೀಡಬೇಕು. ಉಚಿತ ಶಿಕ್ಷಣ, ಆರೋಗ್ಯ ಯೋಜನೆ, ಸರ್ವರಿಗೂ ಉದ್ಯೋಗ, ವಸತಿ,ಅನ್ನ ಇಂಥ ಮೂಲಭೂತ ಸೌಲಭ್ಯ ದೊರೆಯುವ ಹಾಗೆ ಮಾಡಬೇಕು. ನೈತಿಕ ಶಿಕ್ಷಣ ಮೌಲ್ಯವು ಪ್ರಧಾನವಾಗಿರುವಂಥ ಸಮಾಜ ನಿರ್ಮಾಣವಾಗಬೇಕು. ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರಾಗಬೇಕು. ಜನರಿಗೆ ನೆಮ್ಮದಿಯ ಬದುಕು ಸಿಗಬೇಕು. ಅಂದರೆ ಮಾತ್ರ ಈ ಆತ್ಮಹತ್ಯೆ ಎನ್ನುವ ಭೀಕರ ಮನೋರೋಗದಿಂದ ಮಾನವ ವರ್ಗ ಮುಕ್ತವಾಗುತ್ತದೆ.

ಮಾಲತಿ ಮುದಕವಿ

Leave a Reply