ಮೌನ ಮಾತಾಡಿದಾಗ

ಮೌನ ಮಾತಾಡಿದಾಗ
ನಾನು ಯಾವಾಗಲೂ ಗಡಿಬಿಡಿ ಗೌರಮ್ಮ… ತರಾತುರಿ ಆಗಬೇಕು. ಜೊಯ್ ಜೊಟ್ ಇಂದಿಗೂ ಆಗಲ್ಲ… ನಮ್ಮ ಯಜಮಾನರು ತದ್ವಿರುದ್ಧ ಸದಾ ತಲೆಮೇಲೆ ಐಸ್ ಇಟ್ಟುಕೊಂಡಷ್ಟೇ ತಂಪು… ಶಾಂತ… ನಿಧಾನ… ನಾವಿಬ್ಬರೂ ನೌಕರಿ ಮಾಡುವಾಗ ಮೂರು ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಈ ವೈರುಧ್ಯಗಳ ನಡುವೆ ಎಲ್ಲವನ್ನೂ ಸರಿತೂಗಿಸುವದು ನನಗೆ ನಿತ್ಯ ಸವಾಲು.
ಒಂದು ದಿನ ಇಬ್ಬರೂ ಊಟಕ್ಕೆ ಕುಳಿತಾಗಿತ್ತು. ನಮಗಿದ್ದದ್ದು ಹತ್ತು ಹೆಚ್ಚೆಂದರೆ ಹದಿನೈದು ನಿಮಿಷ… ನನಗೆ ತಪ್ಪಬಹುದಾದ ಬಸ್ಸಿನದೇ ಚಿಂತೆ… ಗಬಗಬನೇ ತಿಂದು ಎಲ್ಲ ಅಡಿಗೆ ಎತ್ತಿಟ್ಟು ತಟ್ಟೆ ಎತ್ತಿ ಬಚ್ಚಲಿಗೆ ಇಟ್ಟೆ. ನನ್ನ ಯಜಮಾನರು ನನ್ನ ಒಂದು ಥರ ನೋಡುತ್ತ ಕುಳಿತೇ ಇದ್ದರು. ನಾನು ಪ್ರಶ್ನಾರ್ಥಕವಾಗಿ ನೋಡಿದೆ… ನನಗೆ ಹೇಳಿದರು “ಯಾಕೆ ಇವತ್ತು ನನಗೆ ಒಂದೇ ಚಪಾತೀನಾ ? ನೀನು ಕೈ ತೊಳೆದುಕೊಂಡು ಬಂದು ಬಡಿಸುತ್ತೀ ಎಂದು ಕಾಯುತ್ತಲಿದ್ದೆ… ತಾಟು…?
ನನ್ನ ಗಡಿಬಿಡಿಯಲ್ಲೇ ಮುಳುಗಿದ ನಾನು ಅವರ ಖಾಲಿ ತಟ್ಟೆ ನೋಡಿ ನನ್ನಂತೆ ಅವರದೂ ಊಟ ಮುಗಿದಿರಬಹುದೆಂದು ಲೆಕ್ಕ ಹಾಕಿದ್ದೆ…
“ಹೀಗೆಂದು ಹೇಳಬಾರದೇ?”
“ನಿನಗೇ ನೆನಪಾಗುತ್ತೇನೋ ನೋಡುತ್ತಿದ್ದೆ…”
“ನೀನು ಹೋಗು…”
“ನೀವು ಊಟಮಾಡಬೇಕು ಮತ್ತೆ”
“ಇಲ್ಲ ಇವತ್ತೊಂದಿನ ಇಷ್ಟು ಸಾಕು”
“ನನಗೆ ಶಿಕ್ಷೆಯೇ? “ಬಯ್ಯುವದಾದರೆ ಬಯ್ಯಿರಿ… ಆದರೆ ಊಟ ಮುಗಿಸಿಕೊಂಡು”
“ಏನೂ ಬಯ್ಯುವದಿಲ್ಲ ಏನಾದರೂ ಅಂದರೆ ಮಾತು ಬೆಳೆದು ವಾದಕ್ಕೆ ತಿರುಗುತ್ತದೆ. ನಾನೊಂದು ನೀನೊಂದು ಬೆಳೆಸುತ್ತ ಹೋಗುತ್ತೇವೆ. ಕನಿಷ್ಠ ಒಂದು ಇಡೀ ದಿನ ಇಬ್ಬರಿಗೂ ಕಿರಿಕಿರಿ… ಮನಸ್ತಾಪ… ಬೇಡ… ನನ್ನ ಮೌನದಿಂದಾಗಿ ನಿನಗೆ ಈ ಘಟನೆ ಕಾಯಂ ನೆನಪಿರುತ್ತದೆ…”
ಇದು ಆಗಿ ಸುಮಾರು ನಲವತ್ತು ವರ್ಷಗಳೂ ಕಳೆದಿವೆ… ಆ ಘಟನೆ ಮರೆತಿಲ್ಲ.. ಇಂದಿಗೂ ಒಟ್ಟು ಎಲ್ಲರೂ ಊಟ ಮಾಡುವ ಪ್ರಸಂಗ ಬಂದಾಗ ಬೆನ್ನಹಿಂದೆ ನಿಧಾನ …. ನಿಧಾನ ಅಂದಂತೆ ಭಾಸವಾಗುತ್ತದೆ… ಎರಡೆರಡು ಸಲ ನನಗೆ ನಾನೇ ಖಾತ್ರಿ ಮಾಡಿಕೊಂಡು ಎಲ್ಲರೂ Table  ಬಿಟ್ಟು ಎದ್ದು ಹೋದ ಮೇಲೇಯೇ ಸ್ವಚ್ಛ ಮಾಡಲು ಕೈ ಹಾಕುವುದು.
ಇದು ಕ್ಷಮೆಯ ತೂಕ

 

Leave a Reply