ಮುಚ್ಚಿದ ಕಣ್ಣುಗಳ ಹಿಂದೆ

ಮುಚ್ಚಿದ ಕಣ್ಣುಗಳ ಹಿಂದೆ
ಅದು 1960 – 61 ರ ಸಾಲು… ನಾನಾಗ ಎಂಟನೇ ವರ್ಗದ ವಿದ್ಯಾರ್ಥಿನಿ.
ನಮ್ಮ ಶಾಲೆ ಎರಡು-ಮೂರು ವರ್ಷಗಳ ಹಸುಗೂಸು. ನಮ್ಮದೇ ಎರಡನೇ ವರ್ಷದ ಬ್ಯಾಚ್ ಎಂಬಂತೆ ನೆನಪು… ಮಾಧ್ಯಮಿಕ ಶಾಲೆ ಪ್ರಾರಂಭಿಸುವ ವಿಚಾರ ಬಂದಾಗ ಬಯಲಲ್ಲಿ ಆಡುವ ಹುಡುಗರನ್ನು ಕರೆದುಕೊಂಡು ಹೋಗಿ ಅವರ ವಯಸ್ಸಿಗನುಗುಣವಾಗಿ ವರ್ಗಗಳಲ್ಲಿ ಕೂಡಿಸಿದ್ದರು. ಹೀಗಾಗಿ ನಮಗೆ ಶಾಲೆ “ಜೇಲು” ಅನಿಸದೇ ಮನೆಯದೇ Extended Version ಅನಿಸಿತ್ತು. ಅದಕ್ಕೆ ಶಾಲೆ ಎನ್ನುವುದಕ್ಕಿಂತ ಪಡಶಾಲೆ ಹೆಚ್ಚು ಸೂಕ್ತ ಹೆಸರು…
ಶ್ರೇಣಿ, ರ್ಯಾಂಕ್, ಪ್ರಶಸ್ತಿ ಸ್ಪರ್ಧೆಗಳೆಂಬ ಶಬ್ದಗಳು ನಮ್ಮ ಶಬ್ದಕೋಶದಲ್ಲಿರಲಿಲ್ಲ. ಕಾರ್ಯಕ್ರಮವೊಂದು ಮನೆಯಲ್ಲಿದ್ದರೆ ಮನೆಮಂದಿಯಲ್ಲಾ ಪಡಸಾಲೆಯಲ್ಲಿ ಹರಡುವುದಿಲ್ಲವೇ… ಹಾಗೆ ಸನ್ನಿವೇಶವಿರುತ್ತಿತ್ತು.
ಒಂದು ದಿನ ನಮ್ಮ ವಿಜ್ಞಾನದ ಗುರುಗಳ ಪಾಠ ನಡೆದಿತ್ತು. “ಕಣ್ಣುಗಳು ಹಾಗೂ ಅದರ ಕಾರ್ಯಗಳು” ಎಂಬುದು ವಿಷಯ. ಕರಿಹಲಿಗೆಯ ಮೇಲೆ ಎರಡು ಕಣ್ಣುಗಳು ಮೂಡಿದ್ದವು. ಅವರು ವಿವರಣೆ ಕೊಡುತ್ತಿದ್ದುದನ್ನು ನಾನು feel ಮಾಡುವುದು ನಡೆದಿತ್ತು. ನಾನು ಸರ್ ಗೆ ಒಂದು ಪ್ರಶ್ನೆ ಕೇಳಿದೆ “ಕಣ್ಣು ಕ್ಯಾಮೆರಾ ಇದ್ದ ಹಾಗೆ ಎಂದರೆ. ಎರಡೂ ಕಣ್ಣುಗಳಿಗೆ ಎರಡೆರಡು ಬಿಂಬಗಳು ಕಾಣಬೇಕು. ಒಂದೇ ಏಕೆ?” ಎಂದು. ಅವರೇನು ಉತ್ತರಿಸಿದರು ಎಂಬುದಿಲ್ಲಿ ಅಪ್ರಸ್ತುತ ಮೇಲೆದ್ದು ಎರಡನೇ ಪ್ರಶ್ನೆ ತೂರಿದೆ, “ಬಲಗಣ್ಣು ಮುಚ್ಚಿದರೆ ಎಲ್ಲ ಸ್ಪಷ್ಟವಾಗಿ ಕಾಣುತ್ತದೆ. ಅದೇ ಎಡಗಣ್ಣು ಮುಚ್ಚಿದರೆ ಏಕೆ ಕಾಣುವುದಿಲ್ಲ?” ಎಂದು.. ಸರ್ ಬೆಚ್ಚಿ ನನ್ನನ್ನು. ತಮ್ಮ ಬಳಿ ಕರೆದು ಬೋರ್ಡ್ ಮೇಲೆ ಬರೆದದ್ದನ್ನು ಓದಲು ಹೇಳಿದರು. ಬಲಗಣ್ಣು ಮುಚ್ಚಿ ಕ್ಷಣಾರ್ಧದಲ್ಲಿ ಓದಿ ಮುಗಿಸಿದೆ. ಎಡಗಣ್ಣು ಮುಚ್ಚಿದಾಗ ಎಲ್ಲ ಸಾರಿಸಿದ ಹಾಗಿತ್ತು. ಆಗಲಿಲ್ಲ. ಮರುದಿನ ಸರ್ ಯಾರಾದರೂ ದೊಡ್ಡವರನ್ನು ಕರೆದುಕೊಂಡು ಬಾ ಅಂದರು. ಮನೆಗೆ ಹೋಗಿ ಸುದ್ದಿ ಹೇಳಿದೆ.
7 ಮಕ್ಕಳಲ್ಲಿ ನಾನು ನಾಲ್ಕನೆಯವಳು. ಹಿರಿಯರ ಜವಾಬ್ದಾರಿಯೂ ಇಲ್ಲ ಕಿರಿಯರ ಅಕ್ಕರೆಯೂ ಇಲ್ಲ. ಯಾರೂ ನನ್ನನ್ನು ಗಂಭೀರವಾಗಿ ಪರಿಗಣಿಸಲೇಯಿಲ್ಲ.
ಮತ್ತೊಮ್ಮೆ ಹೇಳಿದೆ. ನನ್ನ ಹಿರಿಯಣ್ಣ ತಮಾಷೆ ಮಾಡಿದ, “ನಿಂಗ ಚಾಳೀಸ ಹಾಕ್ಕೊಂಡು ಸಾಲ್ಯಾಗ ಡೌಲು ಬಡೀ ಬೇಕಾಗೇದ, ನಾವು ಯಾರೂ ಬರುವುದಿಲ್ಲ. ಒಂದು ಕಣ್ಣು ಸರಿ ಅದನೋ ಇಲ್ಲೋ ಸಾಕು ಹೋಗು.ಮುಂದ ನೋಡೋಣಂತ” ಅಷ್ಟೇನೂ ಅನುಕೂಲಸ್ಥರಲ್ಲದ ನಮಗೆ ಅದು ಅನಿವಾರ್ಯವಾಗಿತ್ತು. ಅಲ್ಲದೆ ಆ ಕಾಲದಲ್ಲಿ ಚಿಕ್ಕ-ಪುಟ್ಟ ತಕರಾರಿಗೆ ಯಾರೂ ಡಾಕ್ಟರರ ಹತ್ತಿರ ಹೋಗುವುದು ತುಂಬಾನೇ ಅಪರೂಪ. ಅಲ್ಲದೇ ಸಮಸ್ಯೆ ಗಂಭೀರತೆಯ ಅರಿವು ಆಗದಿರುವ ಸಾಧ್ಯತೆಉಂಟು…
ಮತ್ತೇರಡು ವರ್ಷಗಳು ಉರುಳಿ ಓದುವುದು ಹೆಚ್ಚಾದಾಗ ಧಾರವಾಡದಲ್ಲಿ ತೋರಿಸಲೇ ಬೇಕಾಯಿತು. ಸುದೀರ್ಘ ತಪಾಸಣೆಯ ನಂತರ ಗೊತ್ತಾದದ್ದು… ಈ ತಕರಾರು ಬಹಳ ಹಿಂದಿನದು. ಚಿಕ್ಕವಳಿದ್ದಾಗಲೇ ಏನೋ ಪೆಟ್ಟು ಇಲ್ಲವೇ ತೀವ್ರ ಜ್ವರ ಬಾಧೆಯಿಂದ ಕಣ್ಣಿನ ಸುತ್ತ ಮುತ್ತಲಿನ ನರಗಳು ಬಲ ಕಳೆದುಕೊಂಡಿವೆ. ಏನೂ ಮಾಡಲಾಗದು. ಅಲ್ಲಿಗೆ ನಾನು ಶುಕ್ರಾಚಾರ್ಯರ ಮೊಮ್ಮಗಳು ಪಟೌಡಿ ನವಾಬನ ಸಂಬಂಧಿಯಾದೆ. ಇನ್ನೊಂದು ಕಣ್ಣು ಪ್ರತಿಶತ 20 ಮಾತ್ರ ಉಪಯೋಗ ಆದರೆ ಓದು ಬರಹಕ್ಕೆ ಉಪಯೋಗವಿಲ್ಲ ಎಂಬುದನ್ನು ಅರಗಿಸಿಕೊಳ್ಳಲೇ ಬೇಕಾಯಿತು. ಅದೃಷ್ಟವೆಂದರೆ ಇನ್ನೊಂದು ಕಣ್ಣು ಪರಿಪೂರ್ಣವಾಗಿ fit ಇದ್ದು ಎರಡರ ಕೆಲಸವನ್ನೂ ಸಂಭಾಳಿಸಿದೆ. ನನ್ನ ಕಣ್ಣಲ್ಲವೇ?! ನನ್ನಂತೆಯೇ ಕಿರಿ ವಯಸ್ಸಿಗೆ ‘ಸಾಥಿ’ ಪತಿಯನ್ನು ಕಳೆದುಕೊಂಡರೂ ಏಕಾಂಗಿಯಾಗಿ ಎರಡರದೂ ಜವಾಬ್ದಾರಿ ನಿಭಾಯಿಸಿ ಮುಟ್ಟಿಸಿದೆ.
ಈಗ ನನಗೆ ಮಧುಮೇಹದ ತಕರಾರು. ಪ್ರತಿವರ್ಷ ಕಣ್ಣಿನ ತಪಾಸಣೆ ಆಗಲೇಬೇಕು… ಮೊನ್ನೆ ಹೋದಾಗ ಕಣ್ಣಿಗೆ ಡ್ರಾಪ್ಸ್ ಹಾಕಿ 40 ನಿಮಿಷ ಕಣ್ಮುಚ್ಚಿ ಕಾಯಲು ಹೇಳಿದಾಗ ‘ಮುಚ್ಚಿದ ಕಣ್ಣುಗಳ ಹಿಂದೆ’ ಬಿಚ್ಚಿಕೊಂಡ ರೀಲು ಇದು.

Leave a Reply