ಪಂಚಮಹಾಪತಿವೃತೆಯರಲ್ಲಿ ತಾರಾ…

ಪಂಚಮಹಾಪತಿವೃತೆಯರಲ್ಲಿ ತಾರಾ…

ತಾರಾಂತರಂಗತಲ್ಲಣ…

ನಾನು ತಾರಾ. ಐವರು ಪತಿವ್ರತೆಯರಲ್ಲಿ ಒಬ್ಬಳೆಂದು ನನ್ನನ್ನು ಈ ಜಗತ್ತು ದೊಡ್ಡ ಸ್ಥಾನದಲ್ಲಿರಿಸಿದೆ. ಸೀತೆಗೆ ಸಮಾನಳಾದವಳೆಂದು ಹೇಳಿದೆ. ಆದರೆ ಆ ಸ್ಥಾನದ ಗುರುತರ ಪಾರಮ್ಯವನ್ನು ನಾನು ಹೊಂದಲು ನೀಡಿದ ಬೆಲೆಯೇನು ಎಂದು ಯಾವ ಗಂಡಸಾದರೂ ಯೋಚಿದಿದುದಿದೆಯೇ? ಅಥವಾ ಇದು ಆ ರೀತಿಯ ತನ್ನ ಕಿರುಕುಳವೆಲ್ಲವನ್ನೂ ಸಹಿಸಿಕೊಂಡು ಜೀವನದ ಎಲ್ಲ ಬದಲಾವಣೆಗಳಿಗೂ ಕೊರಳು ಕೊಟ್ಟವಳೆಂಬ ಒಂದೇ ಕಾರಣಕ್ಕಾಗಿ ನನಗೆ ಈ ಪುರುಷ ಜಗತ್ತು ಇತ್ತ ಸಂಭಾವನೆಯೋ? ಏನೇ ಇರಲಿ, ನಾನು ಅನುಭವಿಸಿದ ಆ ಮಾನಸಿಕ ಯಾತನೆ ಮಾತ್ರ ಯಾವುದೇ ಗಲ್ಲು ಶಿಕ್ಷೆಗೂ ಕಡಿಮೆಯಾದುದಲ್ಲ…

ನಾನು ಸಾಗರ ಮಂಥನದ ಸಮಯದಲ್ಲಿ ಸಾಗರತಳದಿಂದ ಬಂದ ಕನ್ಯೆ. ಈ ಕಾರಣದಿಂದಾಗಿ ಮಹಾಲಕ್ಷ್ಮಿಯ ಸೋದರಿ. ಕೇವಲ ನಾನಷ್ಟೇ ಅಲ್ಲ, ನನ್ನೊಂದಿಗೆ ಇನ್ನೂ ಐದು ಜನರು ಸಾಗರದ ತಳದಿಂದ ಎದ್ದು ಬಂದವರು. ಮೇನಕಾ, ರಂಭಾ, ಅಲಂಬುಜಾ, ಊರ್ವಶಿ, ರುಮಾ..  ಆದರೆ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದರೂ ಮಕ್ಕಳ ದೈವವು ಸಮನಾಗಿರದಿರುವಂತೆಯೇ ಮಹಾಲಕ್ಷ್ಮಿಯು ನಮ್ಮೊಂದಿಗೇ ಹುಟ್ಟಿದರೂ ಕೂಡ ಮಹಾವಿಷ್ಣುವಿನ ಮಡದಿಯಾಗಿ ಜಗನ್ಮಾತೆಯಾದರೆ, ನಮ್ಮೆಲ್ಲರದೂ ಒಂದೊಂದು ರೀತಿಯ ದೈವ! ಹಾಗೆ ನೋಡಿದರೆ ಉರ್ವಶಿ, ಮೇನಕೆಯರಿಗೆ ಹೋಲಿಸಿದಲ್ಲಿ ನಮ್ಮ ಜೀವನವೂ ಒಂದು ರೀತಿಯಲ್ಲಿ ಒಳ್ಳೆಯದೇ ಎಂದು ಹೇಳಬೇಕು. ಆದರೂ ನಾವಿಬ್ಬರೂ ಅಂದರೆ ರುಮಾ ಹಾಗೂ ನಾನು… ನನ್ನನ್ನು ಮನಸಾರೆ ಬಯಸಿದ ಸುಗ್ರೀವನಿಗೆ ನಾನು ಮಡದಿಯಾಗದೆ ಹೋದೆ. ರುಮೆಯನ್ನು ಬಯಸದೆಯೂ ಸುಗ್ರೀವನು ಮಹಾವಿಷ್ಣುವಿನ ಆಣತಿಯಂತೆ ಮದುವೆಯಾಗಬೇಕಾಯಿತು. ನಂತರವಾದರೂ ನಾವು ಪಾಲಿಗೆ ಬಂದದ್ದೇ ಪಂಚಾಮೃತವೆಂದು ತಿಳಿದು ನಮ್ಮ ನಮ್ಮ ಪತಿಗಳೊಂದಿಗೆ ಜೀವನ ಸಾಗಿಸಬಹುದಾಗಿತ್ತು. ಆದರೆ ವಿಧಿ ಅಷ್ಟಕ್ಕೇ ಸುಮ್ಮನಾಗಿಬಿಟ್ಟಿತೆ?

ವಾಲಿ ಹಾಗೂ ಸುಗ್ರೀವ ಇಬ್ಬರೂ ಮೊದಲು ರಾಮ ಲಕ್ಷ್ಮಣರಂತೇ ಪ್ರೀತಿಯಿಂದ ಇದ್ದವರು. ವಾಲಿಯು ಇಂದ್ರನ ಮಗ. ಆದರೆ ಶಚಿದೇವಿಯಲ್ಲಿ ಹುಟ್ಟಿದವನಲ್ಲ. ಅವರಿಬ್ಬರೂ ವಿಯತಿ ಎಂಬ ವಾನರಿಯಲ್ಲಿ ಹುಟ್ಟಿದವರು. ವಾಲಿಯೂ ದೇವೇಂದ್ರನಂತೆಯೇ ಮಹಾ ಶೂರ. ದೇವೇಂದ್ರನು ಎಂದಿನಂತೆ ತಾನು ಅನುಭವಿಸಿದ ಹೆಣ್ಣುಗಳ ಲೆಕ್ಕ ಇಟ್ಟವನಲ್ಲ. ಅವರ ಮಕ್ಕಳಿಗೆ ತಾನೇ ಪಿತನೆಂದು ಎದೆ ತಟ್ಟಿ ಹೇಳಿಕೊಂಡವನಲ್ಲ. ಹೀಗಾಗಿ ಅವರಿಬ್ಬರೂ ಕಿಷ್ಕಿಂಧೆಯಲ್ಲಿ ತಮ್ಮ ದೈವವನ್ನು ಕಂಡುಕೊಂಡಿದ್ದರು. ವಾಲಿಯು ಚಿಕ್ಕವನಾದರೂ ಅವನೇ ಕಿಷ್ಕಿಂಧೆಯ ರಾಜನಾಗಿದ್ದರೆ, ಸುಗ್ರೀವನು ಅವನ ಸೇನಾಪತಿ ಹಾಗೂ ಮಂತ್ರಿಯಾಗಿದ್ದನು. ದುಂಧುಭಿ  ಎಂಬ ಅಸುರನು ವಾಲಿಯೊಂದಿಗೆ ಯುದ್ಧದಲ್ಲಿ ಗೆಲ್ಲುವ ಸವಾಲು ಹಾಕಿದ್ದನು. ಇಬ್ಬರ ನಡುವೆ ಭಾರಿ ಯುದ್ಧ ನಡೆದು ದುಂಧುಭಿ ಸತ್ತೂ ಹೋದನು. ದುಂಧುಭಿಯ ಮರಣದ ವಾರ್ತೆಯನ್ನು  ಕೇಳಿದ ಅವನ ಸೋದರ ಮಾಯಾವಿ ವಾಲಿಯ ಮೇಲೆ ಕೋಪದಿಂದ ಯುದ್ಧಕ್ಕೆ ಬಂದನು. ಆದರೆ ವಾಲಿಯ ಮುಷ್ಟಿಯ  ಏಟುಗಳಿಗೆ ಹೆದರಿ ಅವನು ಗುಹೆಯಲ್ಲಿ ಅಡಗಿದ್ದ. ಸುಗ್ರೀವನನ್ನು ಗುಹೆಯ ಹೊರಗೆ ನಿಲ್ಲಿಸಿ  ಮಾಯಾವಿಯನ್ನು ಕೊಲ್ಲುವ ಉದ್ದೇಶದಿಂದ  ಗುಹೆಯ ಒಳಗೆ ಹೋದ ವಾಲಿ ಎಷ್ಟು ದಿನಗಳಾದರೂ ಬರದೆ ಹೋದದ್ದನ್ನೂ, ಗುಹೆಯ ಬಾಗಿಲಿನಲ್ಲಿ ರಕ್ತದ ಹೊಳೆಯೇ ಹರಿದುದನ್ನು  ಕಂಡು  ಸುಗ್ರೀವನು ತನ್ನ ಸೋದರನು ಸತ್ತನೆಂದೇ ಬಗೆದು ಆ ಗುಹೆಯ ಬಾಗಿಲಿಗೆ ಬಂಡೆಗಲ್ಲನ್ನು ಆನಿಸಿ ರಾಜ್ಯಕ್ಕೆ ಹಿಂದಿರುಗಿದ್ದ.  ಕಿಷ್ಕಿಂಧೆಯ ಹಿರಿಯರು ವಾಲಿಯ ಮರಣದ ಸುದ್ದಿಯನ್ನು ಸುಗ್ರೀವನಿಂದ ಕೇಳಿದವರು ತಮ್ಮ ಪದ್ಧತಿಗನುಸಾರವಾಗಿ ಸುಗ್ರೀವನಿಗೆ ಪಟ್ಟಗಟ್ಟಿದರು. ಹಾಗೂ ನನ್ನನ್ನು ಅವನ ಹೆಂಡತಿ ಎಂದು ಘೋಷಣೆಯನ್ನೂ ಮಾಡಿದ್ದರು.

ಇತ್ತ ಮಾಯಾವಿಯನ್ನು ಕೊಂದ ವಾಲಿಯು ಸುಗ್ರೀವನನ್ನು ಸಾಕಷ್ಟು ಬಾರಿ ಕೂಗಿ ಉತ್ತರ ಬಾರದಿದ್ದಾಗ ಕೋಪದಿಂದ ಗುಹೆಯ ಬಾಗಿಲಿಗೆ ಆನಿಸಿದ ಬಂಡೆಯನ್ನು ಕುಟ್ಟಿ ಪುಡಿ ಮಾಡಿ ಹೊರಬಂದಿದ್ದ. ರಾಜ್ಯಕ್ಕೆ ಮರಳಿದಾಗ ತನ್ನ ಸಿಂಹಾಸನದ ಮೇಲೆ ಕುಳಿತಿದ್ದ ಸುಗ್ರೀವನನ್ನು ಹಾಗೂ ಪಕ್ಕದಲ್ಲಿ ಕುಳಿತಿದ್ದ ನನ್ನನ್ನು ನೋಡಿ ವಾಲಿಗೆ ಸಿಟ್ಟು ನೆತ್ತಿಗೇರಿತ್ತು. ವಾಲಿ ಸುಗ್ರೀವನ ಎದೆಗೆ ಒದ್ದು ಅರಮನೆಯಿಂದ ಹೊರಗೆ ಹಾಕಿದ್ದ.

ಇಷ್ಟೇ ಆಗಿದ್ದರೆ ಒಳ್ಳೆಯದಿತ್ತೇನೋ. ತಡೆಯಲು ಬಂದ ನನ್ನ ಓರಗಿತ್ತಿ ರುಮೆಯನ್ನು ಸುಗ್ರೀವನ ಎದುರಲ್ಲೇ ಬರಸೆಳೆದು ಅಪ್ಪಿದ್ದ. ರುಮೆಯನ್ನು ಮದುವೆಯೂ ಆಗಿಬಿಟ್ಟ.

ಈಗ ವಾಲಿ ನನ್ನನ್ನು ತನ್ನ ವಶಕ್ಕೆ ತೆಗೆದುಕೊಂಡ.  ಆದರೆ ನನ್ನ ಗತಿಯೇನು ಎಂದು ಯಾರಾದರೂ ಯೋಚಿಸಿದರೇ? ಒಮ್ಮೆ ಒಬ್ಬನಿಗೆ ನನ್ನ ನಿಷ್ಠೆ, ಇನ್ನೊಮ್ಮೆ ಮತ್ತೊಬ್ಬನಿಗಾಗಿ! ನಾನೇನು ಆಟದ ಬೊಂಬೆಯೆ? ಆದರೂ ಎಲ್ಲವನ್ನೂ ಸಹಿಸಿದೆ. ಹೆಣ್ಣಲ್ಲವೆ? ಸೀತೆಯಾದರೇನು, ಅಹಲ್ಯೆ ಆದರೇನು? ನಾವೆಲ್ಲ ಸಹಿಸಲೆಂದೇ ಹುಟ್ಟಿದವರು!

ಸುಗ್ರೀವನು ವಾಲಿಯು ಹೊರದಬ್ಬಿದ ನಂತರ ಮತ್ತೆ ವಾಲಿಯ ಜೊತೆಗೆ ಯುದ್ಧ ಮಾಡಿದ.. ಮತ್ತೆ ಸೋತು ಓಡಿಹೋದ…

ಮನೆಗೆ ಬಂದ ವಾಲಿಯು ನಡೆದ ವಿಷಯವನ್ನು ನನ್ನೆದುರು  ಹೇಳಿದ್ದನು..

“ನಿನ್ನ ಆಕ್ರೋಶವು ಧರ್ಮಸಮ್ಮತವಾದುದಲ್ಲ…ಸುಗ್ರೀವನು ನಮಗೆ ಯಾವುದೇ ಕಾರಣಕ್ಕೂ ಮೋಸ ಮಾಡುವ ಬಗ್ಗೆ ಚಿಂತಿಸುವವನಲ್ಲ.. ಒಂದು ವೇಳೆ ಅವನು ಹಾಗೆ ಮಾಡಿದ್ದರೂ ನಿನ್ನ ಸ್ವಂತ ಸಹೋದರನ ಈ ಸಣ್ಣ ತಪ್ಪನ್ನು ಕ್ಷಮಿಸಿಬಿಡು. ಅವನಿಗೆ ತಿಳಿ ಹೇಳಬೇಕಾದ್ದು ನಿನ್ನ ಕರ್ತವ್ಯ.. ತನಗಿಂತ ಕಡಿಮೆ ಶಕ್ತಿ  ಹೊಂದಿರುವವರೊಂದಿಗೆ ಯುದ್ದಮಾಡುವುದು, ಅವರನ್ನು ಕೊಲ್ಲುವುದು ಧರ್ಮಸಮ್ಮತವಾದುದಲ್ಲ.. ನೀನು ಅವನನ್ನು ನಿನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಸಾಕಲಿಲ್ಲವೇ..  ನೆನಪು ಮಾಡಿಕೋ…  ಸುಗ್ರೀವನಿಗೆ ನಿನ್ನ ಬಗ್ಗೆ ಇರುವ ಭಾವನೆಯ ಬಗ್ಗೆ ಅರಿವಿದೆಯಾ? ನನಗೆ ತಂದೆ ತಾಯಿ. ಗುರು, ದೈವ, ಸ್ನೇಹಿತ ಎಲ್ಲವೂ ನನ್ನಣ್ಣನೇ ಎಂದು ಹೇಳಿದ್ದ.. ” ಹೀಗೆಲ್ಲ  ಹೇಳಿ ಅವರ ಬಾಲ್ಯದ ಜೀವನವನ್ನು ನೆನಪಿಸಿದ್ದೆ. ನನ್ನ ಮಾತು ಕೇಳಿದ ವಾಲಿಯ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ನನ್ನ ಮಾತಿಗೆ ಸಮ್ಮತಿಸಿದ್ದ ಕೂಡ.

ಆದರೆ ವಿಧಿಲಿಖಿತವೇ ಬೇರೆಯಾಗಿತ್ತು. ಶ್ರೀರಾಮನ  ಬೆಂಬಲದಿಂದ  ಸುಗ್ರೀವನು  ಮತ್ತೆ ಯುದ್ದಕ್ಕೆ ಸಿದ್ದನಾಗಿದ್ದನು..  ನಾನು ಆಗಲೂ ಇಷ್ಟು ಪೆಟ್ಟು ತಿಂದು ಸೋತು ಓಡಿಹೋದಂಥ ಸುಗ್ರೀವನು.ಒಂದೇ ಗಳಿಗೆಯ ಅವಧಿಯಲ್ಲಿ ಹಿಂದಿರುಗಿ ಬಂದು ನಿನ್ನನ್ನು ಯುದ್ಧಕ್ಕೆ ಕರೆಯುತ್ತಿದ್ದಾನೆ ಎಂದರೆ ಇಲ್ಲಿ ಏನೋ ಮೋಸವಿದೆ.ನೀನು ಹೋಗದಿರುವುದೇ ಒಳ್ಳೆಯದು” ಎಂದು ಹೇಳಿದರೂ ನನ್ನ ಮಾತು ಕೇಳದ ವಾಲಿಯು ಅವನನ್ನು ಭೆಟ್ಟಿ ಆಗಲು ಹೋಗಿದ್ದ. ಆದರೆ ವಾಲಿಯು ಹೋಗಿದ್ದುದು ಮೊದಲೇ ನಿರ್ಧರಿಸಿದಂತೇ ಯುದ್ದದ ನೆಪದಲ್ಲಿ ಹೋಗಿ ಸುಗ್ರೀವನನ್ನು ಮನೆಗೆ ಕರೆತರಲು.  ಅವನು ಹಿಂದೆಂದೂ ಇಲ್ಲದ ಖುಷಿಯಿಂದ ಸುಗ್ರೀವನತ್ತ ಧಾವಿಸಿದ್ದ.

ಶ್ರೀ ರಾಮನ ಮಾಲೆಯನು ಧರಿಸಿ ಕಾಯ್ದಿದ್ದ ಸುಗ್ರೀವನು ಬಂಡೆ ಮೇಲಿಂದ ನೆಗೆದು ವಾಲಿಯ ಮೇಲೆರಗಿ ಸೆಣಸಾಡಿದ್ದ.  ವಾಲಿಯು ಸುಗ್ರೀವನ ಸೆಣಸಾಟಕ್ಕೆ ಪ್ರತಿಕ್ರಿಯಿಸುತ್ತಾ ತನ್ನ ಮನದ ಮಾತನ್ನು ಹೇಳಲೂ  ಪ್ರಯತ್ನಿಸುತ್ತಿದ್ದ… ಆದರೆ ಅನಾಹುತವು ಸಂಭವಿಸಿಯೇ ಬಿಟ್ಟಿತ್ತು.  ಮರದಮರೆಯಿಂದ  ಕಾಯುತ್ತಿದ್ದ ಶ್ರೀ ರಾಮನು ವಾಲಿಯತ್ತ ಗುರಿಯಿಟ್ಟು ಬಾಣವನ್ನು ಬಿಟ್ಟಿದ್ದ. ಆ ಬಾಣವು ವಾಲಿಯ ಬೆನ್ನಿನಿಂದ ಎದೆಯನ್ನು ಸೀಳಿತ್ತು.

ಹೀಗೆ ನನ್ನ ಪತಿಯ ಅಂತ್ಯವಾಗಿತ್ತು… ನಾನು ಅದನ್ನು ತಪ್ಪಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನನ್ನ ಎದುರೇ ಪರಸತಿಯನ್ನು ಅಪ್ಪಿ ಮುದ್ದಾಡಿದರೂ ನಾನು ಅವನನ್ನು ಕ್ಷಮಿಸಿ ಮತ್ತೆ ಅವನ ಹಿತವನ್ನೇ ಬಯಸಿದ್ದೆ…

ನಮ್ಮ ಹೆಣ್ತನದ ಗರಿಮೆಯೇ ಕ್ಷಮೆ ಎಂದು ಹೇಳುವ ಈ ಪುರುಷ ಸಮಾಜವು ನಮಗಾಗಿ ಕೇವಲ ನಿಯಮಗಳನ್ನೇ ಮಾಡಿತ್ತು! ನಮ್ಮ ಮನದಾಳದ ಭಾವನೆಗಳನ್ನು ಅರಿಯುವ ಪ್ರಯತ್ನವನ್ನೇ ಯಾರೂ ಮಾಡಲಿಲ್ಲ! ಕೇವಲ ದಾಳಗಳಾದೆವೇ ಹೊರತು ನಮಗೆ ನಮ್ಮತನವೇ ಇಲ್ಲದಾಯ್ತು.

Leave a Reply