ಕರ್ಮಯೋಗ ಲಕ್ಷಣಗಳ ಮೆಲುಕು

ಕರ್ಮಯೋಗ ಲಕ್ಷಣಗಳ ಮೆಲುಕು

ಕರ್ಮ ಮಾಡಿಯೂ ಮಾಡದವನಂತೆ ನಿರ್ಲಿಪ್ತನಾಗಿರುವ, ಮಾಡದೆಯೂ ಮಾಡಿದವನಂತೆ ತೃಪ್ತನಾಗಿರುವ ಕೌಶಲ ಬಲ್ಲವನೇ ಬುದ್ಧಿವಂತ; ಅಂಥವನು ಎಲ್ಲವನ್ನೂ ‘‘ಮಾಡಿ ಮುಗಿಸಿದ ಕೃತಕೃತ್ಯ’’ನೆನಿಸುತ್ತಾನೆ’ ಎನ್ನುವ ಕರ್ಮಯೋಗಿಯ ಪರಿಯನ್ನು ಶ್ರೀಕೃಷ್ಣನು ವಿವರಿಸುತ್ತಿದ್ದ. ಕರ್ಮಯೋಗಿಯ ಲಕ್ಷಣಗಳನ್ನು ಮತ್ತಷ್ಟು ವಿವರಿಸುತ್ತಾನೆ ಕೃಷ್ಣ; ‘ಯದೃಚ್ಛಾಲಾಭಗಳಿಂದ (ತಾನಾಗಿ ಒದಗಿಬರುವ ಲಾಭಗಳಿಂದ) ಸಂತುಷ್ಟನಾಗಿರುವವನೂ, ದ್ವಂದ್ವರಹಿತನು (ಗೊಂದಲಗಳಿಲ್ಲದವನು), ಮತ್ಸರರಹಿತನು, ಸಿದ್ಧಿ-ಅಸಿದ್ಧಿಗಳ ವಿಷಯದಲ್ಲಿ ಸಮಭಾವದಿಂದಿರುವವನು ಕರ್ಮವನ್ನು ಮಾಡಿಯೂ ಅದಕ್ಕೆ ಬದ್ಧನಾಗುವುದಿಲ್ಲ. (4.22)

ಸುಖ-ಲಾಭ-ಕೀರ್ತಿ ಮುಂತಾದ ಲೌಕಿಕ ಲಾಭಗಳು ಯಾದೃಚ್ಛಿಕವಾಗಿ ಬರುತ್ತವೆ, ಹೋಗುತ್ತವೆ. ಲಾಭ ಬಂತೆಂದೋ ಬರಲಿಲ್ಲವೆಂದೋ ಕರ್ಮವನ್ನೇ ಬದಲಾಯಿಸುವ, ಬಿಡುವ ಅಥವಾ ಬೇಕೆಂಬಂತೆ ಮಾಡುವ ಸ್ವೇಚ್ಛಾಚಾರ ಸಲ್ಲದು. ಹಾಗೆ ಮಾಡಿದರೆ ವ್ಯಕ್ತಿಗಳಿಗೂ ಸಮಾಜಕ್ಕೂ ತೊಂದರೆಗಳಾಗುವುದು.

‘ದ್ವಂದ್ವ’: ಸುಖ-ದುಃಖಾದಿ ವಿಪರೀತಭಾವಗಳು ದ್ವಂದ್ವಗಳು. ಧರ್ಮಕರ್ಮಗಳನ್ನು ಆಚರಿಸುವಾಗ ಮನದಲ್ಲಿ ಮೋಹ, ಮಮಕಾರಗಳೆದ್ದು, ಸರಿ-ತಪ್ಪು ಯಾವುದು? ಎನ್ನುವ ಸ್ಪಷ್ಟತೆ ಇಲ್ಲದೆ, ಗೊಂದಲವೇಳುತ್ತದಲ್ಲ, ಅದೂ ದ್ವಂದ್ವವೇ! ಇನ್ನು, ಅಖಂಡ ಪರಮಾತ್ಮನಿಂದ ತಾನು ಬೇರೆಯೇ ಅಸ್ತಿತ್ವ ಎನ್ನುವ ಭ್ರಾಂತಿಯಲ್ಲೇ ಇರುವುದೂ ದ್ವಂದ್ವ. ಆತ್ಮತತ್ವ ಮರೆಸಿ ದೇಹ-ಮನ-ಬುದ್ಧಿಗಳಾಟಕ್ಕೆ ನಮ್ಮನ್ನು ಕಟ್ಟಿಹಾಕುವುದೂ ದ್ವಂದ್ವಭಾವ.

‘ಮತ್ಸರ’ವು ನಕಾರಾತ್ಮಕ ಗುಣಗಳ ಪ್ರಾತಿನಿಧಿಕ ಗುಣ. ‘ಭೋಗಗಳನ್ನು ಪಡೆಯುವುದೇ ಆತ್ಯಂತಿಕ ಗುರಿ’ಯೆಂಬ ಭ್ರಾಂತಿ ಇರುವವರಿಗೆಲ್ಲ ಈ ಮಾತ್ಸರ್ಯಾದಿ ದುರ್ಗಣಗಳು ತಪ್ಪವು. ಸಿಕ್ಕಬೇಕು ಎನ್ನುವ ಕಾಮ-ಲೋಭಗಳು, ಸಿಕ್ಕಿದ್ದರ ಬಗ್ಗೆ ಮೋಹ-ಮದಗಳು, ಸಿಗದಿದ್ದರ ಬಗ್ಗೆ ಕ್ರೋಧ-ತಾಪಗಳು, ಮತ್ತೊಬ್ಬರಿಗೆ ಸಿಕ್ಕಿಬಿಟ್ಟಿದ್ದರ ಬಗ್ಗೆ ಮಾತ್ಸರ್ಯಭಾವವು¬ ಹೀಗೆ ಈ ನಕಾರಾತ್ಮಕ ಗುಣಗಳು ಸಾಗರದಲೆಗಳಂತೆ ಒಂದರ ಮೇಲೊಂದು ಎದ್ದೆದ್ದು ಬೀಳುತ್ತಲೇ ಇರುತ್ತವೆ. ಇವುಗಳನ್ನು ಅರಿವರ್ಗ ಎನ್ನಲಾಗುತ್ತದೆ. ಇದಕ್ಕೆ ವಶನಾದವನು ಎಂದೂ ಧರ್ಮಸೂಕ್ಷ್ಮಗಳನ್ನೂ ಕರ್ಮದ ಮರ್ಮವನ್ನೂ ಅರಿತು ಆಚರಿಸಲಾರ. ಮಾಡಬೇಕಾದ ಧರ್ಮಕರ್ಮಗಳನ್ನು ಬಿಡುತ್ತಾನೆ. ಭೋಗಪ್ರಸಕ್ತಿಯ ಭರದಲ್ಲಿ ಬೇಡದ ಕರ್ಮಗಳನ್ನು ಹಮ್ಮಿಕೊಂಡು ಪರದಾಡುತ್ತಾನೆ. ಕರ್ಮಯೋಗಿಗೆ ಮಾತ್ಸರ್ಯವಿಲ್ಲದಿರುವುದರ ಕಾರಣ ಇಂತಹ ದೌರ್ಬಲ್ಯಗಳಿರುವುದಿಲ್ಲ, ಆತ ಧರ್ಮಕರ್ಮಗಳ ವಿಷಯದಲ್ಲಿ ದೃಢಚಿತ್ತನಾಗಿರುತ್ತಾನೆ ಎನ್ನುವುದು ತಾತ್ಪರ್ಯ.

ಸಿದ್ಧಿ ಹಾಗೂ ಅಸಿದ್ಧಿಗಳ ವಿಷಯದಲ್ಲಿ ಸಮಭಾವ: ಸಿದ್ಧಿ ಹಾಗೂ ಅಸಿದ್ಧಿಗಳು ಜೀವನದಲ್ಲಿ ಅನಿಶ್ಚಿತ. ಎಲ್ಲ ಮನೋರಥಗಳೂ ಪ್ರಯತ್ನಗಳೂ ಅಂದುಕೊಂಡ ಕಾಲಕ್ಕೆ, ಅಂದುಕೊಂಡ ಬಗೆಯಲ್ಲೇ ಕೈಗೂಡವು. ಆ ಎಲ್ಲ ಆಗುಹೋಗುಗಳಿಗೂ ಭಾವುಕರಾಗಿ ಕುಣಿಯುತ್ತ ಕುಸಿಯುತ್ತ ಹೋದರೆ ಮನಸ್ಸಿಗೂ ದೇಹಕ್ಕೂ ಕಾಯಿಲೆ ಖಂಡಿತ. ಜೀವನದ ಆತ್ಯಂತಿಕ ಗುರಿಯ ಹಾದಿಯಲ್ಲಿ ನೋವು-ನಿರಾಶೆ-ಸೋಲು- ಅಪಮಾನಾದಿಗಳು ಬಂದುಹೋಗುತ್ತವೆ. ಇವುಗಳನ್ನು ಮೊದಲೇ ನಿರೀಕ್ಷಿಸಿದ್ದು ಸಮಭಾವದಿಂದಿರುವುದು ಜಾಣತನ. ಹಾಗಿರಬಲ್ಲವನು ಮಾತ್ರವೇ ತಲೆ ಕೆಡಿಸಿಕೊಳ್ಳದೇ ಗಮ್ಯದತ್ತ ಶಾಂತವಾಗಿ ಸಾಗಬಲ್ಲ.

ಹೀಗೆ ಯಾವ ವ್ಯಕ್ತಿಯಲ್ಲಿ ‘ಯದೃಚ್ಛಾ-ಲಾಭ-ಸಂತೋಷ’ಭಾವವೂ, ಸಮಚಿತ್ತತೆಯೂ ಇದ್ದು, ಮಾತ್ಸರ್ಯ ಹಾಗೂ ದ್ವಂದ್ವಗಳು ಇರುವುದಿಲ್ಲವೋ, ಅಂತಹ ಕರ್ಮಯೋಗಿಯು ಎಲ್ಲರಂತೆಯೇ ಎಲ್ಲ ಕರ್ಮಗಳನ್ನು ಮಾಡುತ್ತ ಹೋದರೂ, ಅವನು ಅದಾವುದರಿಂದಲೂ ‘ಬದ್ಧ’ನಾಗುವುದಿಲ್ಲ. ಅಷ್ಟೇ ಅಲ್ಲ, ಅವನ ನಿಶ್ಚಲಮತಿಯು ಅವನಲ್ಲಿ ಅಮಿತ ಕೌಶಲ ಹಾಗೂ ದಕ್ಷತೆಗಳನ್ನು ಮೂಡಿಸುತ್ತದೆ. ಹಾಗಾಗಿ ಸಾಮಾನ್ಯರು ಮಾಡುವ ಕರ್ಮಗಳಿಗಿಂತ ಇಂತಹ ಸ್ಥಿತಪ್ರಜ್ಞನು ಮಾಡುವ ಕರ್ಮದಿಂದ ಅವನಿಗೂ ಸಮಾಜಕ್ಕೂ ಉನ್ನತೋನ್ನತ ಶ್ರೇಯಸ್ಸು ಸಿದ್ಧಿಸುತ್ತದೆ.

‘ಸಂಗವಿಲ್ಲದವನೂ ಮುಕ್ತನೂ, ಜ್ಞಾನದಲ್ಲಿ ಪ್ರಜ್ಞೆಯನ್ನು ನೆಲೆಗೊಳಿಸಿದವನೂ, ಯಜ್ಞಕ್ಕಾಗಿ (ಯಜ್ಞಭಾವದಿಂದ) ಕರ್ಮವೆಸಗುವವನೂ ಆದವನ ವಿಷಯದಲ್ಲಿ ಎಲ್ಲವೂ (ಎಲ್ಲ ಕರ್ಮಗಳೂ) ಲೀನವಾಗುತ್ತವೆ (ಮುಗಿದುಹೋಗುತ್ತವೆ).’ (4.23)

‘ಸಂಗ’ವೆಂದರೆ ಮೋಹ, ಮಮಕಾರ. ಮಾಡುವ ಕರ್ಮದಲ್ಲಿ ಸಂಪರ್ಕಕ್ಕೆ ಬರುವ ವ್ಯಕ್ತಿಗಳ ಬಗ್ಗೆ, ಆಯಾ ಸ್ಥಾನ-ಮಾನ-ಲಾಭಾಲಾಭಗಳ ಬಗ್ಗೆ ‘ನನ್ನದು’, ‘ನನಗೆ ಬೇಕು’ ಎನ್ನುವ ಮೋಹ-ಮಮಕಾರಗಳು ಹುಟ್ಟುತ್ತವಲ್ಲ, ಅದೇ ‘ಸಂಗ’. ಈ ಸಂಗವೇ ಮನದಲ್ಲಿ ವ್ಯಕ್ತಿಗಳ ಬಗ್ಗೆ ಪಕ್ಷಪಾತ, ವ್ಯಾಮೋಹಗಳನ್ನೋ ದ್ವೇಷಾಸೂಯೆಗಳನ್ನೋ ಮೂಡಿಸಿ ಕೆಲಸವನ್ನು ಕೆಡಿಸುವುದು. ಕರ್ಮಯೋಗಿಯು ಸಂಗವನ್ನು ಬಿಟ್ಟವನು.

ಮುಕ್ತನು ಎಂದರೆ ಸಂಗ ಬಿಟ್ಟು ಸರ್ವತಂತ್ರ ಸ್ವತಂತ್ರವಾಗಿರುವವನು. ಯಜ್ಞಕ್ಕಾಗಿ (ಯಜ್ಞಭಾವದಿಂದ) ಕರ್ಮವನ್ನು ಮಾಡುವವನ ಎಲ್ಲ ಕರ್ಮಗಳೂ (ಕರ್ಮದ ಅಪೇಕ್ಷೆಗಳು, ಬಂಧಗಳೂ) ಅಳಿಯುತ್ತವೆ (ಮುಗಿಯುತ್ತವೆ).’ (4.23)

ಯಜ್ಞಭಾವದಿಂದ ಕರ್ಮವನ್ನು ಮಾಡುವುದರ ಬಗ್ಗೆ ಶ್ರೀಕೃಷ್ಣನು ಈಗಾಗಲೇ ಸಾಕಷ್ಟು ರ್ಚಚಿಸಿದ್ದಾನೆ. ಸಾರವತ್ತಾಗಿ ಅದನ್ನೆಲ್ಲ ಸ್ಮರಿಸೋಣ. ಕರ್ಮವು ಯಜ್ಞವೆನಿಸಬೇಕಾದರೆ – ‘ನಾನು ಮಾಡಿದೆ’ ಎಂಬ ಕರ್ತೃಭಾವವಿರಬಾರದು; ‘ನಾನು ಅನುಭವಿಸುವೆ’ ಎಂಬ ‘ಭೋಕ್ತೃಾವ’ವಿರಬಾರದು; ಭೋಗಫಲಕ್ಕಾಗಿ ಕರ್ಮವೆಸಗಬಾರದು; ಕರ್ತವ್ಯೈದೃಷ್ಟಿಯಿಂದ ಅಥವಾ ಧರ್ಮಸಾಧನೆಗಾಗಿ ಮಾತ್ರವೇ ಕರ್ಮವೆಸಗಬೇಕು; ಕರ್ಮವನ್ನು ದೇವತಾಪ್ರೀತ್ಯರ್ಥವಾಗಿ ಮಾಡಬೇಕು; ಕರ್ಮದ ಸತ್ಪಲಗಳನ್ನು ಎಲ್ಲರೊಡನೆ ಹಂಚಿಕೊಳ್ಳಬೇಕು. ಹೀಗೆ, ಯಜ್ಞಭಾವದಿಂದ ಕರ್ಮವೆಸಗುವವನ ವಿಷಯದಲ್ಲಿ ಕರ್ಮಕ್ಷಯವಾಗುತ್ತದೆ ಅರ್ಥಾತ್ ಕರ್ಮಗಳೆಲ್ಲ ಮುಗಿದು ಮುಕ್ತಾವಸ್ಥೆ ಸಿದ್ಧಿಸುತ್ತದೆ ಎನ್ನುವುದು ತಾತ್ಪರ್ಯ.

ಡಾ. ಆರತೀ ವಿ.ಬಿ.

ಕೃಪೆ: ವಿಜಯವಾಣಿ

Leave a Reply