ಕರ್ಮವನ್ನು ಬಿಡಬೇಡ

ಕರ್ಮವನ್ನು ಬಿಡಬೇಡ

ಫಲಹೇತುವಾಗಿ ಕರ್ಮವೆಸಗಿದಲ್ಲಿ ಅಶಾಂತಿ ಹಾಗೂ ನೈಪುಣ್ಯಹ್ರಾಸವಾಗುತ್ತದೆ ಎನ್ನುವ ವಿಚಾರವನ್ನು ನೋಡಿದ್ದೇವೆ. ‘ಫಲವನ್ನೇ ಬಯಸಬಾರದೆಂದಮೇಲೆ ಕರ್ಮವನ್ನೇಕೆ ಮಾಡಬೇಕು? ಏನೂ ಮಾಡುವುದೇ ಬೇಡ ಬಿಡಿ!’ ಎಂದು ನಮ್ಮ ಮನಸ್ಸು ದಂಗೆಯೇಳಬಹುದು! ಎಷ್ಟಾದರೂ ಈ ರೀತಿ, ಭಾವಕಲ್ಲೋಲವನ್ನು ಏಳಿಸುವುದೇ ಭಾವುಕ ಮನಸ್ಸಿನ ಜಾಯಮಾನವಲ್ಲವೆ! ಆದರೆ ಹಾಗೆ ಕರ್ಮವನ್ನೇ ಬಿಟ್ಟುಬಿಡುವಂತಿಲ್ಲ ಎಂದು ತಕ್ಷಣವೇ ಎಚ್ಚರಿಸುತ್ತಾನೆ ಕೃಷ್ಣ- ಮಾ ತೇ ಸಂಗೋsಸ್ತ್ವ ಕರ್ಮಣಿ- ಭ.ಗೀ:2.47 (ಕರ್ಮದ ವಿಷಯದಲ್ಲಿ ಅಸಂಗತ್ವ ಬೇಡ.)
ಕರ್ಮ ಮಾಡಬೇಕು. ಆದರೆ ಫಲದ ಮೇಲೆ ನಿಯಂತ್ರಣವಿಲ್ಲ ಎನ್ನುವ ಸತ್ಯವನ್ನರಿತಿರಬೇಕು. ಕರ್ತವ್ಯೈಕದೃಷ್ಟಿಯಿಂದ ಕರ್ಮ ಮಾಡಬೇಕು ಎಂದರ್ಥ. ಅಕರ್ಮತ್ವ ಎನ್ನುವುದು ನಿಜಕ್ಕೂ ಅಸಾಧ್ಯ. ಈ ವಿಷಯವಾಗಿ ಕೃಷ್ಣನೇ ಮುಂದೆ ವಿಶದವಾಗಿ ಹೇಳಲಿದ್ದಾನೆ. ‘ನಾನು ಏನೂ ಮಾಡುವುದೇ ಇಲ್ಲ’ ಎಂದು ಕೈಚೆಲ್ಲಿ ಕೂರುವುದು ‘ಆತ್ಮವಂಚನೆ’. ಏಕೆಂದರೆ ದೇಹವು ಹುಟ್ಟು-ಸಾವು, ವೃದ್ಧಿ-ಹ್ರಾಸ-ಜೀರ್ಣಾದಿ ಪ್ರಕ್ರಿಯೆಗಳಲ್ಲಿ ಅನುಕ್ಷಣವೂ ತೊಡಗಿಯೇ ಇರುತ್ತದಲ್ಲ! ಬುದ್ಧಿಯು ಸಂಕಲ್ಪವಿಕಲ್ಪಗಳಲ್ಲಿಯೂ, ಮನಸ್ಸೂ ಸುಖದುಃಖಾದಿ ಸಂವೇದನೆಗಳಲ್ಲೂ ತೊಡಗಿಯೇ ಇರುತ್ತವಲ್ಲ! ಹೀಗಿರುವಾಗ ‘ಏನೂ ಮಾಡುವುದೇ ಇಲ್ಲ’ ಎಂದು ನಿರಾಶಾಭಾವ ತಾಳುವುದು ಅರ್ಥಹೀನವಲ್ಲವೆ?
ಜೀವನವೆಂದರೆ ಅದೊಂದು ಮಹಾ ಕರ್ಮಪ್ರವಾಹ. ನಾವೆಲ್ಲರೂ ಅದರೊಳಗಿನ ಬಿಂದುಗಳು. ಆ ಪ್ರವಾಹದಲ್ಲಿ ನಮ್ಮ ಸ್ಥಾನವೆಲ್ಲೋ, ಪಾತ್ರವೇನೋ, ವೇಗವೇನೋ, ಅದೆಲ್ಲವನ್ನೂ ಪ್ರವಾಹದ ಧಾರೆಯೇ ನಿರ್ಣಯಿಸುತ್ತದೆ! ಆಳಕ್ಕಿಳಿದು ತಣಿಯಬೇಕೋ! ಸುಳಿಗೆ ಸಿಲುಕಿ ತಿರುಗುತ್ತಿರಬೇಕೋ! ಅಲೆಯಲ್ಲಿ ಬೆರೆತು ಹೊಯ್ದಾಡಬೇಕೋ! ಬಂಡೆಗೆ ಬಡಿದು ಚೂರಾಗಬೇಕೋ! ದಡಕ್ಕೆ ಚಿಮ್ಮಿ ಒಣಗಬೇಕೋ! ಅದಾವುದೂ ಹೇಳಲಾಗದು! ಪ್ರವಾಹದ ನೀತಿಯಲ್ಲಿ ಎಲ್ಲವೂ ಇದ್ದದ್ದೇ! ಜೀವನಪ್ರವಾಹದಲ್ಲೂ ಅಷ್ಟೆ! ವಿಧಿಯ ಲೆಕ್ಕಾಚಾರದಲ್ಲಿ ಎಲ್ಲ ಅನುಭವಗಳೂ ಸರಿಯೇ! ‘ಮಾಡುವುದು’, ‘ಮಾಡದಿರುವುದು’ – ಎರಡೂ ನಮ್ಮ ವಶದಲ್ಲಿಲ್ಲ.
ಹಾಗಾದರೆ ನಮ್ಮದೆನ್ನುವ ಯಾವ ಇಚ್ಛೆಗೂ ಅರ್ಥವೇ ಇಲ್ಲವೆ? ಸ್ವಪ್ರಯತ್ನ, ಪರಿಶ್ರಮ, ಸ್ವೋಪಜ್ಞತೆಗಳಿಗೆ ಸ್ಥಾನವೇ ಇಲ್ಲವೆ? ಸ್ವತಂತ್ರವಾಗಿ ಮತ್ತೇನನ್ನೂ ಸಾಧಿಸಲು ಸಾಧ್ಯವೇ ಇಲ್ಲವೆ? ನಾವು ಸರ್ವಥಾ ಅಸಹಾಯಕರೆ? ಎಂದು ಕಂಗಾಲಾಗಬೇಕಿಲ್ಲ. ಒಂದು ಉಪಾಯವಿದೆ. ನಾವು ಆ ಅನಂತ ಪ್ರವಾಹದ ‘ಭಾಗ’ ಎಂದು ಭಾವಿಸಿ ಅದನ್ನು ಮನಸಾ ಒಪ್ಪಬೇಕು. ತಕ್ಷಣ, ಪ್ರವಾಹದ ಶಕ್ತಿಯೇ ‘ನಮ್ಮ ಶಕ್ತಿ’ ಎಂದೆನಿಸಿಬಿಡುತ್ತದೆ! ಇದಕ್ಕೆ ವ್ಯತಿರಿಕ್ತವಾಗಿ, ನಾವು ಕೇವಲ ‘ಬಿಂದು’ ಎಂದು ಭಾವಿಸಿ, ಕರ್ಮಪ್ರವಾಹವನ್ನು ವಿರೋಧಿಸಿದರೆ, ತಕ್ಷಣವೇ ಮಹಾಪ್ರವಾಹದಲ್ಲಿ ಗೊತ್ತುಗುರಿಯಿಲ್ಲದೆ ಎಲ್ಲೆಲ್ಲಿಗೋ ಕೊಚ್ಚಿಹೋಗುತ್ತಿರುವ ಅಸಹಾಯಕತೆಯನ್ನು ಅನುಭವಿಸುತ್ತೇವೆ! ‘ಭಗವಂತನ ಅನಂತ ಸೃಷ್ಟಿಯ ಮಹಾಲೀಲೆಯೊಳಗೇ ನಾವೂ ಒಂದಾಗಿದ್ದೇವೆ’ ಎಂಬ ಭಾವವಷ್ಟೇ ಸಾಕು! ಭವದಿಚ್ಛೆಗೆ ಮತಿ-ಮನಗಳು ಮಣಿಯುತ್ತವೆ. ನಮ್ಮ ‘ಫಲ’ದ ಹುಚ್ಚುಹಂಬಲವೂ ತಣ್ಣಗಾಗುತ್ತದೆ! ಇದೇ ಕರ್ಮರಹಸ್ಯ! ಇದನ್ನೇ ಆರ್ಷಪರಂಪರೆಯ ಮಹಾತ್ಮರೂ ಪಾಲಿಸಿ ಸಿದ್ಧಿಸಿಕೊಂಡು ತೋರಿದ್ದಾರೆ!
ನಮ್ಮ ಅಂತರಂಗದಲ್ಲಿ ಫಲಾಫಲಗಳ ಹಂಬಲವು ಕುಗ್ಗುತ್ತಿದ್ದಂತೆ, ಜೀವನದ ಎಲ್ಲ ಧರ್ಮಕರ್ಮಗಳನ್ನೂ ನೆಮ್ಮದಿಯಿಂದಲೂ ಕೌಶಲದಿಂದಲೂ ಮಾಡುವ ಪರಿಣತಿಯೂ ನಮ್ಮದಾಗುತ್ತದೆ. ಬೇಡವೆಂದೆನಿಸಿದಾಗ ಕಳಚಿಕೊಂಡು ಆತ್ಮಾರಾಮವಾಗಿರುವ ದೃಢತೆಯೂ ನಮಗೊದಗುತ್ತದೆ! ಇಂತಹ ಮನೋನ್ನತಿಯನ್ನು ಪಡೆದಂಥ ವ್ಯಕ್ತಿಯಿಂದಲೇ ಅಲ್ಲವೆ ಮಹತ್ಕಾರ್ಯಗಳು ಸಾಧ್ಯವಾದೀತು?!
ಕರ್ಮಣ್ಯೇವಾಧಿಕಾರಸ್ತೇ- ಎಂಬ ಈ ಶ್ಲೋಕದ ಮೊದಲ ಪಾದಾರ್ಧವು ಗೀತೆಯನ್ನೇ ಓದದಿರುವವರ ಬಾಯಲ್ಲೂ ನಲಿದು ನರ್ತಿಸುತ್ತದೆ! ಅದು ಅಷ್ಟು ಸ್ವಯಂಪ್ರಕಾಶವಾಗಿಬಿಟ್ಟಿದೆ! ಏಕೆಂದರೆ, ಈ ಒಂದು ಶ್ಲೋಕವೇ ನಮ್ಮ ಜೀವನದ ಅದೆಷ್ಟೋ ಗೊಂದಲಗಳಿಗೆ ಪರಿಹಾರವನ್ನು ಸೂಚಿಸಬಲ್ಲುದಾಗಿದೆ! ನಮ್ಮ ಕರ್ಮದ ಪರಿಯನ್ನೇ ಬದಲಾಯಿಸಿಬಲ್ಲುದಾಗಿದೆ! ಜೀವನವನ್ನು ನೋಡುವ ದೃಷ್ಟಿಯನ್ನೇ ಉದ್ದೀಪನಗೊಳಿಸಬಲ್ಲುದಾಗಿದೆ! ಜೀವನದ ಬಗೆಗಿನ ವ್ಯಾಮೋಹದ ಜಿಗಟನ್ನು ಬಿಡಿಸಿ, ನಿರ್ಮಲ ನಿಃಸ್ಪೃಹ ಜೀವನಪ್ರೀತಿಯನ್ನು ತುಂಬಬಲ್ಲುದಾಗಿದೆ! ಎಲ್ಲಕ್ಕಿಂತ ಮುಖ್ಯವಾಗಿ, ಸಾಕೆಂದೆನಿಸಿದಾಗ ಕಳಚಿಕೊಂಡು ಆಂತರ್ಮುಖವಾಗಲು ದಾರಿ ತೋರಿಸಬಲ್ಲುದಾಗಿದೆ!
ಈ ಶ್ಲೋಕದ ನಾಲ್ಕುಪಾದಗಳೂ ಉತ್ತರೋತ್ತರವಾಗಿ ಪೂರಕವಾಗಿವೆ: 1. ಕರ್ಮದ ಮೇಲೆ ಮಾತ್ರವೇ ನಮಗೆ ಅಧಿಕಾರ(ಹಿಡಿತ)ವಿರಲು ಸಾಧ್ಯ; 2. ಫಲದ ಮೇಲಿಲ್ಲ (ಅದು ಅನಿಶ್ಚಿತ); 3. ಹಾಗಾಗಿ ಫಲವನ್ನೇ ಬಯಸುತ್ತ ಕರ್ಮ ಮಾಡಬೇಡ (ಅದರ ಪರಿಣಾಮ ಅಶಾಂತಿ ಹಾಗೂ ಬಂಧನ); 4. ಹಾಗೆಂದು, ಮಾಡುವ ಕರ್ಮವನ್ನು ಬಿಟ್ಟುಬಿಡಬಾರದು.
ಸಿದ್ಧಿಯ ದಾರಿಯಲ್ಲಿ ಪಡೆಯುವುದೂ ಕಳೆದುಕೊಳ್ಳುವುದೂ ಎಲ್ಲವೂ ಸಂದರ್ಭಗಳು ಅಷ್ಟೆ. ಕ್ರಿಕೆಟ್ ಆಡುವಾಗ, ಫೀಲ್ಡರ್ ಕೆಲವೊಮ್ಮೆ ಹಿಂದುಹಿಂದಕ್ಕೆ ಸರಿಯುತ್ತ, ಕೈಗಳನ್ನು ಹಿಂದಕ್ಕೆ ಸೆಳೆಯುತ್ತ ಚೆಂಡನ್ನು ಹಿಡಿಯಬೇಕಾಗುತ್ತದೆ. ಇಲ್ಲಿ ಆತ ಹಿಮದಕ್ಕೆ ಸರಿಯುವುದು ಅಥವಾ ಬೀಳುವುದು, ‘ಸೋಲು’ ಎನಿಸದು. ಅದೂ ಚೆಂಡು ಹಿಡಿಯುವ ತಂತ್ರಗಳಲ್ಲಿ ಒಂದು! ಅಂತೆಯೇ ಜೀವನದಲ್ಲಿ ಆತ್ಮಶಕ್ತಿಯನ್ನು ಸಿದ್ಧಿಸಿಕೊಳ್ಳುವ ಹಾದಿಯಲ್ಲಿ, ಹಿಂದಕ್ಕೆ ಸರಿಯುವ, ಬಿಟ್ಟುಕೊಡುವ, ಬೀಳುವ, ಏಳುವ ಸಂದರ್ಭಗಳೂ ಆಟದ ಅಂಗಗಳೇ! ಜೀವನದಾಟದಲ್ಲೂ ಇಂತಹದ್ದೇ ಕ್ರೀಡಾಮನೋಭಾವದ ಚೈತನ್ಯವನ್ನು ತೋರ್ಪಡಿಸುವುದು ಜಾಣತನ ಎನ್ನುವುದು ಕೃಷ್ಣನ ಮಾತಿನ ನೀತಿ, ಕೃಷ್ಣನ ಜೀವನದ ರೀತಿ!
ಡಾ. ಆರತೀ ವಿ ಬಿ
ಕೃಪೆ : ವಿಜಯವಾಣಿ

Leave a Reply