ಕರ್ಮವು ಬಗ್ಗಡವಾದರೆ ಪ್ರಜೆಗಳ ಅವನತಿ

ಕರ್ಮವು ಬಗ್ಗಡವಾದರೆ ಪ್ರಜೆಗಳ ಅವನತಿ

ಕೃಷ್ಣನು, ‘ದೊಡ್ಡವರು ತಪ್ಪೆಸಗಿದರೆ, ಕಿರಿಯರೂ ಅವರಂತೆಯೇ ತಪ್ಪೆಸಗಲಾರಂಭಿಸುತ್ತಾರೆ’ ಎಂದೂ, ‘ತನಗೆ ಇಹದಲ್ಲಿ ಯಾವ ಫಲಾಸಕ್ತಿಯೂ ಕರ್ಮಶೇಷವೂ ಇಲ್ಲದಿದ್ದರೂ ಧರ್ಮೈಕದೃಷ್ಟಿಯಿಂದ ಕರ್ಮವೆಸಗುತ್ತಿದ್ದೇನೆ’ ಎಂದೂ, ‘ತಾನು ಕರ್ಮವನ್ನು ಮಾಡದೆ ಸುಮ್ಮನಿದ್ದರೆ, ಲೋಕಜನರೂ ತನ್ನನ್ನೇ ಅನುಸರಿಸಿ ಕರ್ಮವನ್ನು ಬಿಟ್ಟುಬಿಡುತ್ತಾರೆ’ ಎಂದೂ ಹೇಳುತ್ತಿದ್ದನಷ್ಟೆ? ಮುಂದುವರಿಸುತ್ತಾನೆ:
ಸಂಕರಸ್ಯ ಚ ಕರ್ತಾ ಸ್ಯಾಂ ಉಪಹನ್ಯಾಂ ಇಮಾಃ ಪ್ರಜಾಃ || ಭ.ಗೀ.: 3.24 (ಈ ಮೂಲಕ ನಾನು ಸಂಕರಕ್ಕೂ, ಪ್ರಜೆಗಳ ನಾಶಕ್ಕೂ ಕಾರಣವಾದೇನು.)
‘ಸಂಕರ’ ಎಂದರೆ ‘ಬಗ್ಗಡ’ ಎಂದರ್ಥ. ಒಂದರಲ್ಲಿ ಸಲ್ಲದ ಅಂಶಗಳು ಕಲಬೆರಕೆಯಾಗಿ, ಅದರ ಶುದ್ಧಿಯನ್ನೂ, ಸತ್ವವನ್ನೂ ಕೆಡಿಸಿದಾಗ ಅದು ‘ಸಂಕರ’ವೆನಿಸುತ್ತದೆ. (‘ಸಂಕರ’ ಎಂದರೆ ‘ವರ್ಣ-ಸಂಕರ’ವೆಂದೂ, ‘ವರ್ಣ-ಸಂಕರ’ವೆಂದರೆ ‘ಅಂತರ್ವರ್ಣೀಯ-ವಿವಾಹ’ವೆಂದೂ ರೂಢಿಯ ಅರ್ಥಗಳಿವೆ. ಆದರೆ ಕರ್ಮಯೋಗದ ಈ ಚರ್ಚೆಯಲ್ಲಿ ಕೃಷ್ಣನು ‘ಸಂಕರ’ ಶಬ್ದವನ್ನು ‘ಕರ್ಮದಲ್ಲಿನ ಬಗ್ಗಡ’ ಎಂಬರ್ಥದಲ್ಲಿ ಬಳಸುತ್ತಿದ್ದಾನೆ ಎಂದು ಅರ್ಥಮಾಡಿಕೊಳ್ಳುವುದೇ ಪ್ರಸ್ತುತ.)
ಕರ್ಮದಲ್ಲಿ ನಿಷ್ಠೆಯು ಕುಗ್ಗಿ, ಉದ್ದೇಶದಲ್ಲಿ ಸ್ವಾರ್ಥವು ಬೆರೆತಾಗ, ವಿಧಿವಿಧಾನಗಳಲ್ಲಿ ಅಕ್ರಮವು ತಲೆಯೆತ್ತಿದಾಗ, ‘ಸಂಕರ’ವುಂಟಾಗುತ್ತದೆ. ಆಗ ಕರ್ಮವು ನೆಪಮಾತ್ರಕ್ಕೆ ನಡೆದರೂ, ಅದರಲ್ಲಿ ಗುಣಮಟ್ಟವಿರದು. ಹಾಗಾಗಿ ಪರಿಣಾಮವೂ ಕೆಡುತ್ತದೆ. ಕಿರಿಯರೂ ಆ ಕುತ್ಸಿತ ಕ್ರಮವನ್ನೇ ಕಲಿಯುತ್ತಾರೆ. ಕ್ರಮೇಣ ವ್ಯವಸ್ಥೆಯೇ ಕೆಟ್ಟು ಪ್ರಜೆಗಳು ಅವನತಿ ಹೊಂದುತ್ತಾರೆ. ಸಾರ್ವಜನಿಕ ರಸ್ತೆಯ ನವೀಕರಣ ಕಾರ್ಯದ ಉದಾಹರಣೆಯನ್ನೇ ತೆಗೆದುಕೊಳ್ಳೋಣ.
ಕರ್ಮ = ರಸ್ತೆಯ ನವೀಕರಣ. ಕರ್ತೃ = ಸರ್ಕಾರ. ಫಲಾನುಭವಿಗಳು = ಸಮಸ್ತ ನಾಗರಿಕರು. ಸಂಪನ್ಮೂಲ = ಸಾಮಾನ್ಯ ಜನರು ಕಟ್ಟುವ ತೆರಿಗೆಯಿಂದ ಸಂಗ್ರಹವಾದ ಹಣ. ಉದ್ದೇಶ = ‘ಜನರ ಸಂಚಾರ ಸುಗಮವಾಗುವಂತೆ ನೋಡಿಕೊಳ್ಳುವುದು’. ಕ್ರಮ = ಹೆಚ್ಚು ಬಾಳಿಕೆ ಬರುವಂತಹ ರಸ್ತೆಯ ನಿರ್ಮಾಣಕ್ಕಾಗಿ ಉತ್ತಮ ಗುಣಮಟ್ಟದ ವಸ್ತುಗಳ ಬಳಕೆ; ಅಚ್ಚುಕಟ್ಟಾದ ಕಾರ್ಯವೆಸಗುವ ಕರ್ಮಕರರ ನಿಯೋಜಿಸುವಿಕೆ; ಇದಕ್ಕೆಲ್ಲ ಬೇಕಾದ ಮಾನವ ಹಾಗೂ ದ್ರವ್ಯಸಂಪನ್ಮೂಲಗಳಿಗಾಗಿ ಸರ್ಕಾರಿ ಹಣವನ್ನು ಸರಿಯಾಗಿ ಬಳಸುವಿಕೆ. ಪರಿಣಾಮ = ಉತ್ತಮ ರಸ್ತೆಗಳು ನಿರ್ಮಾಣವಾಗಿ, ಸಂಚಾರ ಸುಗಮವಾಗುತ್ತದೆ, ಊರು ಸುಂದರವೂ ಸ್ವಚ್ಛವೂ ಆಗಿ ಕಂಗೊಳಿಸುತ್ತದೆ. ಎಲ್ಲರಿಗೂ ಸಂತೋಷ.
ಈಗ, ಅದೇ ಸರ್ಕಾರವು, ಅದೇ ನಾಗರಿಕರಿಗಾಗಿ, ಅದೇ ಸಾರ್ವಜನಿಕ ಹಣದಿಂದ, ರಸ್ತೆ-ನವೀಕರಣವೆಂಬ ಅದೇ ‘ಕರ್ಮ’ವನ್ನು ಮಾಡುತ್ತಿದೆ ಎಂದಿಟ್ಟುಕೊಳ್ಳೋಣ. ಆದರೆ ಉದ್ದೇಶ ಹಾಗೂ ಕ್ರಮಗಳಲ್ಲಿ ಸ್ವಾರ್ಥ-ಮಮಕಾರಗಳ ಅವಗುಣಗಳ ‘ಸಂಕರ’ವುಂಟಾಗುತ್ತದೆ ಎಂದಿಟ್ಟುಕೊಳ್ಳೋಣ. ಆಗ ಆ ಕರ್ಮದ ಸ್ವರೂಪವೂ ಪರಿಣಾಮವೂ ಹೀಗಾದಾವು;
ಉದ್ದೇಶ = 1. ಜನರನ್ನು ಹೇಗಾದರೂ ಮೆಚ್ಚಿಸಿ ಮುಂದಿನ ಚುನಾವಣೆಯಲ್ಲಿ ಗೆದ್ದು ಬರಲು ರಸ್ತೆ ನವೀಕರಣ ‘ಮಾಡಿ ತೋರಿಸೋಣ’. 2. ಈ ನೆಪದಲ್ಲಿ ತಮ್ಮ ನೆಂಟರು ಮಿತ್ರರಿಗೆ, ‘ತಮ್ಮ ಜಾತಿ’ಯವರಿಗೆ ಹಾಗೂ ‘ತಮಗೇ’ ಮತ ಹಾಕುವವರಿಗೆ ಟೆಂಡರ್ ಕರೆದು, ಒಳಗೊಳಗೆ ವ್ಯವಹಾರ ಖುಲಾಯಿಸಿಬಿಡೋಣ! 3. ಸರ್ಕಾರಿ ಹಣವನ್ನು ಅಲ್ಲಿಲ್ಲಿ ಹಿಡಿದು ತಮ್ಮ ಜೇಬನ್ನೂ, ಪಾರ್ಟಿಯ ಖಜಾನೆಯನ್ನು ತುಂಬಿಸಿಕೊಳ್ಳೋಣ! 4. ಎಲ್ಲ ಸ್ತರಗಳಲ್ಲೂ ಸಾಧ್ಯವಾದಷ್ಟು ಲಂಚವನ್ನು ಗಿಟ್ಟಿಸಿಕೊಳ್ಳೋಣ!
ಕ್ರಮ = ‘ಚುನಾವಣೆ ಹತ್ತಿರ ಬಂದಾಗ ಮಾತ್ರ’ ರಸ್ತೆಯ ನವೀಕರಣಕ್ಕೆ ಕೈಹಾಕುವಿಕೆ; ತಮಗೆ ‘ಬೇಕಾದವರಿಗೆ’ ಮಾತ್ರ ಟೆಂಡರ್ ಕರೆಯುವಿಕೆ; ‘ಹೇಗೋ ಮಾಡಿ ಮುಗಿಸಿ ತೋರಿಸಿದರಾಯ್ತು’ ಎಂಬ ತ್ವರೆಯಲ್ಲಿ, ಕರ್ಮಗಾರಿಕೆಯ ಗುಣಮಟ್ಟದ ಬಗ್ಗೆ ಉದಾಸೀನ ತಾಳುವಿಕೆ; ಸರ್ಕಾರದಿಂದ ಹರಿದು ಬರುವ ಹಣದ ಹಾಗೂ ಲಂಚದ ಕಡೆಗೇ ಹೆಚ್ಚು ಗಮನ ಹರಿಯಿಸುವಿಕೆ; ಅಕ್ರಮಗಳಲ್ಲಿ ಸೋರಿಹೋಗಿ ಉಳಿದ ಸರ್ಕಾರಿ ಹಣದಿಂದ ಕಳಪೆ ವಸ್ತುಗಳನ್ನು ಕೊಳ್ಳುವಿಕೆ, ಗಡಿಬಿಡಿಯಲ್ಲಿ ಕಳಪೆ ಟಾರ್ ಸುರಿದು, ಸರಿಯಾಗಿ ಸಮತಟ್ಟೂ ಮಾಡದೆ, ರಸ್ತೆ ನವೀಕರಣ ‘ಮಾಡಿ ಮುಗಿಸಿ’, ‘ಇಷ್ಟೊಂದು ದೇಶಸೇವೆ ಮಾಡಿದ್ದೇವೆ ನೋಡಿ!’ ಎಂದು ಜಂಬ ಕೊಚ್ಚಿಕೊಳ್ಳುವಿಕೆ!
ಪರಿಣಾಮ = ಕಳಪೆ ಟಾರ್, ಕೆಲವೇ ತಿಂಗಳಲ್ಲಿ ಕಿತ್ತುಕೊಂಡು ಬರಲಾರಂಭಿಸಿ, ರಸ್ತೆಯಲ್ಲಿ ಗುಂಡಿಗಳೆದ್ದು, ಊರು ಅಂದಗೆಟ್ಟು, ಸಂಚಾರ ದುರ್ಗಮವಾಗಿ, ಅಪಘಾತಗಳೂ ಸಾವುನೋವುಗಳು ಸಂಭವಿಸಿ, ಎಲ್ಲರಿಗೂ ಬೇಸರವುಂಟಾಗುತ್ತದೆ. ಕರ್ತೃವಿಗೆ ಪಾಪಪ್ರಜ್ಞೆ ಕಾಡುತ್ತದೆ(?!). ಜನರು ಪ್ರತಿವರ್ಷವೂ ಚುನಾವಣೆಯ ಹೊತ್ತಿಗೆ ರಸ್ತೆ ನವೀಕರಣದ ‘ನಾಟಕ ಪ್ರದರ್ಶನ’ವನ್ನು ನೋಡುತ್ತಿರಬೇಕು. ‘ಎಷ್ಟಾದರೂ ಇವರು ನಮ್ಮ ಜಾತಿಯವರಲ್ಲವೆ?!’ ಎಂದು ಅದದೇ ಭ್ರಷ್ಟ-ಅಭ್ಯರ್ಥಿಗಳನ್ನು ಚುನಾಯಿಸುವುದರಲ್ಲಿ ಸಮಾಧಾನಪಟ್ಟುಕೊಳ್ಳಬೇಕು!
ಇದೊಂದು ಉದಾಹರಣೆಯಷ್ಟೆ! ಅದೆಷ್ಟೋ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಹಿರಿಯರೂ ನಾಯಕರೂ ಮತಿಗೆಟ್ಟು ಪ್ರಾರಂಭಿಸಿದಂತಹ ಅದೆಷ್ಟೋ ಕುತ್ಸಿತ ‘ಪದ್ಧತಿ’ಗಳು ಉತ್ತರೋತ್ತರವಾಗಿ ಬೆಳೆದುಬಂದು, ಬೇರೂರಿ, ‘ಇದೆಲ್ಲ ತುಂಬ ಮಾಮೂಲಿ’ಯೆಂದು ‘ಮನ್ನಣೆ’ಯನ್ನೂ ಪಡೆದುಬಿಟ್ಟಿವೆ! ಯದ್ಯದಾಚರತಿ ಶ್ರೇಷ್ಠಃ ತತ್ತದೇವೇತರೋ ಜನಃ | ಭ.ಗೀ.: 3.21 ಎನ್ನುವ ಕೃಷ್ಣನ ಮಾತಿಗೆ ಇದಕ್ಕಿಂತ ನಿದರ್ಶನ ಬೇಕೆ?
ಹೀಗೆ, ಹಿರಿಯರು ಸಮಷ್ಟಿಭಾವವನ್ನು ಮರೆತು ‘ನಾನು-ನನ್ನಿಷ್ಟ!’ ಎಂಬ ಧಾವಂತದಲ್ಲಿ ತಪ್ಪೆಸಗಿದಾಗ, ಅವರನ್ನು ಅನುಸರಿಸುವ ಕಿರಿಯರೂ ಸಹಜವಾಗಿಯೇ ದಾರಿ ತಪ್ಪುತ್ತಾರೆ. ಹೀಗೆ ‘ಕರ್ಮದ ಪರಿಯಲ್ಲಿನ ಉದ್ದೇಶ ಹಾಗೂ ಕ್ರಮಗಳು ಸಂಕರಕ್ಕೊಳಗಾದಾಗ, ವ್ಯವಸ್ಥೆಗಳು ಕೆಟ್ಟು, ಪ್ರಜೆಗಳು ಅವನತಿಯತ್ತ ಸಾಗುತ್ತಾರೆ’ ಎನ್ನುವುದು ಆಚಾರ್ಯ ಕೃಷ್ಣನೀಯುತ್ತಿರುವ ಎಚ್ಚರಿಕೆ!
ಡಾ. ಆರತೀ ವಿ. ಬಿ.

ಕೃಪೆ : ವಿಜಯವಾಣಿ

Leave a Reply