ಕರ್ಮ ಮತ್ತು ಲೋಕ

ಕರ್ಮ ಮತ್ತು ಲೋಕ

ಸಮಾಜದಲ್ಲಿ ‘ದೊಡ್ಡವರು’ ಹೇಗೆ ವರ್ತಿಸುತ್ತಾರೋ ಸಾಮಾನ್ಯರೂ ಹಾಗೆ ವರ್ತಿಸಲಾರಂಭಿಸುತ್ತಾರಾದ್ದರಿಂದ ನಾಯಕರು ತಮ್ಮ ನಡೆನುಡಿಗಳ ವಿಷಯದಲ್ಲಿ ಎಚ್ಚರವಾಗಿರಬೇಕು ಎನ್ನುವ ಬುದ್ಧಿಮಾತನ್ನು ಅರ್ಜುನನಿಗೆ ಶ್ರೀಕೃಷ್ಣನು ಹೇಳುತ್ತಿದ್ದನಷ್ಟೆ? ಕೃಷ್ಣನು ತನ್ನದೇ ಉದಾಹರಣೆಯನ್ನು ನೀಡುತ್ತಾನೆ;
ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ |
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ||
ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತಂದ್ರಿತಃ |
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ || (ಭ.ಗೀ.: 3.22-23)
‘ಎಲೈ ಪಾರ್ಥನೆ! ನನಗೆ ಮೂರು ಲೋಕಗಳಲ್ಲೂ ಮಾಡಬೇಕಾದ ಕರ್ತವ್ಯ ಯಾವುದೂ ಇಲ್ಲ, ಪಡೆಯಬೇಕಾದ್ದು – ಬಿಡಬೇಕಾದ್ದು ಯಾವುದೂ ಇಲ್ಲ. ಆದರೂ ನಾನು ಕರ್ಮದಲ್ಲಿ ತೊಡಗಿರುತ್ತೇನೆ. ನಾನೇನಾದರೂ ಆಲಸ್ಯದಿಂದ ಕರ್ಮ ಮಾಡುವುದನ್ನು ಬಿಟ್ಟರೆ, ಮನುಷ್ಯರೂ ನನ್ನನ್ನೇ ಅನುಸರಿಸಿ ಕರ್ಮವನ್ನು ಬಿಟ್ಟುಬಿಡುತ್ತಾರೆ.’
ಯೋಗೇಶ್ವರನೂ ಸರ್ವಕರ್ಮಾತೀತನೂ ಪರಮಾತ್ಮನ ಅವತಾರನೂ ಆಗಿದ್ದ ಶ್ರೀಕೃಷ್ಣನಿಗೆ ಇಹದಲ್ಲಿನ ಯಾವ ಪದವಿ-ಕೀರ್ತಿ-ಫಲಗಳ ಅಗತ್ಯವಿರಲಿಲ್ಲವಾದರೂ, ಸತ್ಯ-ಧರ್ಮಗಳ ಉಳಿವು ಬೆಳೆವುಗಳ ಏಕೈಕ ಉದ್ದೇಶಕ್ಕಾಗಿ ಅವಿರತ ಶ್ರಮಿಸಿದವನು; ತನ್ನ ತನು-ಮನ-ಧನಗಳನ್ನು ಪರಹಿತಕ್ಕಾಗಿಯೂ ಧರ್ಮಸ್ಥಾಪನೆಗಾಗಿಯೂ ಆಜೀವನ ವಿನಿಯೋಗಿಸಿದ ಉದಾರಚರಿತನು ಅವನು. ಕೃಷ್ಣನು ಸಾಂಸಾರಿಕ ಹಾಗೂ ರಾಜನೈತಿಕ ಜವಾಬ್ದಾರಿಗಳ ನಡುವೆಯೂ ‘ತಾನು-ತನ್ನವರು-ತನ್ನ ಅನುಕೂಲ’ ಎಂದು ಕೂಡದೆ, ಅನೇಕ ಕಷ್ಟಗಳನ್ನೂ ಅಪಾಯಗಳನ್ನೂ ಶತ್ರುಕಾಟವನ್ನೂ ಎದುರಿಸಬೇಕಾದರೂ ಹಿಂಜರಿಯದೆ, ಆರ್ತರಿಗೂ ಸಜ್ಜನರಿಗೂ ಸಹಾಯ ಮಾಡಲು ಧಾವಿಸುತ್ತಿದ್ದವನು. ‘ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರೂ (ದೇವರು ಕೂಡ!) ತನ್ನ ಪಾಲಿನ ನಿತ್ಯನೈಮಿತ್ತಿಕ ಕರ್ಮಗಳನ್ನೂ ಧರ್ಮರಕ್ಷಣೆಯನ್ನೂ ಕರ್ತವ್ಯದೃಷ್ಟಿಯಿಂದ ಮಾಡಲೇಬೇಕು’ ಎನ್ನುವ ನೀತಿಯನ್ನು ನಿದರ್ಶಿಸಿ ತೋರಿಸಿದವನು.
ಹಿರಿಯರೂ ನಾಯಕರೂ, ಅಗತ್ಯವಿರಲಿ ಇಲ್ಲದಿರಲಿ, ಕಿರಿಯರಿಗೂ ಅನುಚರರಿಗೂ ಮಾರ್ಗದರ್ಶನ ನೀಡಲಾದರೂ ಕರ್ತವ್ಯ ನಿಭಾಯಿಸಲೇಬೇಕು. ಇಲ್ಲದಿದ್ದಲ್ಲಿ, ‘ಹಿರಿಯರೇ ಮಾಡುವುದಿಲ್ಲ. ನಾವೇಕೆ ಮಾಡಬೇಕು?’ ಎನ್ನುತ್ತ ಕಿರಿಯರು ಕರ್ತವ್ಯಭ್ರಷ್ಟರಾಗುತ್ತಾರೆ. ‘ಸಂನ್ಯಾಸಿಯು ಜಿತೇಂದ್ರಿಯನೇ ಆಗಿದ್ದರೂ, ಶಿಷ್ಯರಿಗೆ ಮಾರ್ಗದರ್ಶನ ನೀಡುವುದಕ್ಕಾದರೂ ಇಂದ್ರಿಯನಿಗ್ರಹದ ಬಾಹ್ಯನಿಯಮಗಳನ್ನೆಲ್ಲ ಪಾಲಿಸಲೇಬೇಕಾಗುತ್ತದೆ’ ಎನ್ನುತ್ತಾರೆ ಶ್ರೀರಾಮಕೃಷ್ಣರು. ಕೃಷ್ಣನು ಹೇಳುತ್ತಾನೆ; ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಂ | (3.24) ‘ನಾನು ಕರ್ಮವನ್ನು ಮಾಡದೆ ಹೋದರೆ, ಲೋಕದ ಜನರೆಲ್ಲ (ಕೆಲಸಗಳನ್ನು ಕೈಬಿಟ್ಟು) ಅವನತಿ ಹೊಂದುತ್ತಾರೆ.’
‘ಕಿರಿಯರು ತನ್ನಿಂದಾಗಿ ದಾರಿ ತಪ್ಪಬಾರದು’ ಎನ್ನುವ ಇಷ್ಟು ಮಾತ್ರ ಎಚ್ಚರ ಹಿರಿಯರೆಲ್ಲರಲ್ಲಿದ್ದರೆ ಸಮಾಜದಲ್ಲಿ ಕಿರಿಯರು ದಾರಿ ತಪ್ಪುವಂತಹ ಪ್ರಸಂಗಗಳು ಗಮನೀಯವಾಗಿ ಕಡಿಮೆಯಾಗುತ್ತವೆ!
ಸದಾ ತಡವಾಗಿಯೇ ಬರುವ ಶಿಕ್ಷಕರ ತರಗತಿಗೆ, ವಿದ್ಯಾರ್ಥಿಗಳೂ ತಡವಾಗಿಯೇ ಬರಲಾರಂಭಿಸುತ್ತಾರೆ! ಸಿಗರೇಟ್-ಕುಡಿತ-ಜೂಜುಗಳ ಅಭ್ಯಾಸವಿರುವ ವ್ಯಕ್ತಿಯ ಮಕ್ಕಳೂ ಆ ಚಟಗಳನ್ನು ಬೇಗ ಹತ್ತಿಸಿಕೊಳ್ಳುತ್ತಾರೆ! ಪರಸ್ಪರರಿಗೆ ಸುಳ್ಳು ಹೇಳುವ ಗಂಡ-ಹೆಂಡಿರ ಮಕ್ಕಳು ಸುಳ್ಳುಬುರುಕುರಾಗಿ ಬೆಳೆಯುತ್ತಾರೆ! ಸಂಸ್ಥೆಯ ಮುಖ್ಯಸ್ಥರು ಲಂಚ ತೆಗೆದುಕೊಂಡರೆ, ಸಿಬ್ಬಂದಿವರ್ಗದವರೆಲ್ಲ ಲಂಚ ಪಡೆಯಲಾರಂಭಿಸುತ್ತಾರೆ! ಕನ್ನಡ ಪದಗಳನ್ನು ಅಶುದ್ಧವಾಗಿ ಉಚ್ಚರಿಸುವ ಶಿಕ್ಷಕರಿಂದಾಗಿ, ವಿದ್ಯಾರ್ಥಿಗಳ ಭಾಷಾಸೌಷ್ಟವ ಕೆಡುತ್ತದೆ; ಅವರ ಮಕ್ಕಳೂ ಆ ತಪ್ಪುಗಳನ್ನೇ ಮೈಗೂಡಿಸಿಕೊಂಡು ಭಾಷೆ ಕಲಿಯುತ್ತಾರೆ! ‘ಅನನುಕೂಲ’ವನ್ನು ‘ಅನಾನುಕೂಲ’ ಎಂದೂ, ‘ದುರದೃಷ್ಟ’ವನ್ನು ‘ದುರಾದೃಶ್ಟ’ ಎಂದೂ ‘ಜಾತ್ಯತೀತ’ವನ್ನು ‘ಜಾತ್ಯಾತೀತ’ ಎಂದೂ ಕನ್ನಡಪದಗಳನ್ನು ಅಶುದ್ಧವಾಗಿ ನುಡಿಯುವ ಅಭ್ಯಾಸ ಇಂದು ಎಲ್ಲೆಲ್ಲೂ ಹರಡಿರುವುದು ಹೀಗೆಯೇ! ‘ಇಷ್ಟ-ಕಷ್ಟ-ನಷ್ಟ’ ಎಂಬ ಪದಗಳನ್ನು ‘ಇಸ್ಟ-ಕಸ್ಟ-ನಸ್ಟ’ ಎಂಬುದಾಗಿ ದುರುಚ್ಚಾರ ಮಾಡುವ ಚಟವಂತೂ ಕನ್ನಡದ ಟಿವಿ ಧಾರಾವಾಹಿ – ವಾರ್ತಾವಾಹಿನಿಗಳಲ್ಲೂ ಚಲನಚಿತ್ರಗಳಲ್ಲೂ ಸಂಕ್ರಮಿಸುತ್ತಿರುವುದು ದುರ್ದೈವ! ಬರಬರುತ್ತ ಅದು ‘ತಪ್ಪು’ ಎಂದು ಗುರುತಿಸಬಲ್ಲವರೇ ಕಡಿಮೆಯಾಗಿಬಿಡುತ್ತಿದ್ದಾರೆ! ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಎನ್ನುವ ಗಾದೆ ಸುಮ್ಮಸುಮ್ಮನೆ ಬಂದಿಲ್ಲ!
ಮನುಷ್ಯರಿಗೆ ಕರ್ತವ್ಯಗಳನ್ನು ನಿಭಾಯಿಸುವಾಗ ಹಲವೊಮ್ಮೆ ಬೋರ್ ಆದರೂ, ನಿರಾಶೆ-ಅಸಮಾಧಾನಗಳು ಕಾಡಿದರೂ, ಕರ್ತವ್ಯಗಳನ್ನು ಒಮ್ಮೆಲೇ ಕೈಬಿಡುವಂತಿಲ್ಲ. ಅದರಲ್ಲೂ ಪೋಷಕರು, ಶಿಕ್ಷಕರು, ಜನನಾಯಕರು ಹಾಗೂ ಸಾರ್ವಜನಿಕವಾಗಿ ಪ್ರಭಾವಶಾಲಿಯಾದವರು ಮತ್ತಷ್ಟು ಎಚ್ಚರವಾಗಿರುವುದು ಅನಿವಾರ್ಯ.
ರಾಜ/ಮಂತ್ರಿಯ ಹುದ್ದೆಯನ್ನು ಅಲಂಕರಿಸಿದ ಮೇಲೆ ‘ನನಗಿದು ಬೋರ್ ಆಗ್ತಿದೆ, ನನ್ನ ಪರಿವಾರ-ಗಳಿಕೆಗೆ ಹೆಚ್ಚು ಸಮಯ ಕೊಡುತ್ತೇನೆ. ನನ್ನ ಜೀವನ! ನನ್ನ ಇಷ್ಟ!’ ಎಂಬ ಧೋರಣೆ ತಾಳಿದರೆ, ಅಧಿಕಾರಿಗಳೂ ಜನಸಾಮಾನ್ಯರೂ ಹಾಗೇ ತಮ್ಮ ತಮ್ಮ ಅನುಕೂಲದ ಮಾರ್ಗವನ್ನು ನೋಡಿಕೊಳ್ಳುತ್ತಾರೆ, ಸಮಾಜದ ವ್ಯವಸ್ಥೆಯೇ ಕೆಡುತ್ತ ಹೋಗುತ್ತದೆ, ಅನ್ಯಾಯಗಳು ಮೊದಲಾಗುತ್ತವೆ. ಸ್ವಾತಂತ್ರ್ಯೊತ್ತರದ ಪ್ರಾರಂಭದ ದಿನಗಳಲ್ಲಿ ದೂರದೃಷ್ಟಿಯಿಲ್ಲದ ಕುತ್ಸಿತಬುದ್ಧಿಯ ಕೆಲವು ರಾಷ್ಟ್ರೀಯ ನಾಯಕರು ಜಾತಿಗಣತಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ನಿಲ್ಲಿಸುವ ರಾಜಕೀಯತಂತ್ರಗಳನ್ನು ಹೂಡಿದರು. ಅದರಿಂದಾಗಿ ಇಂದು ಯೋಗ್ಯತೆಯನ್ನು ನೋಡುವ ಬದಲು, ಜಾತಿ ನೋಡಿ ಮತ ಹಾಕುವ ಮನೋರೋಗವೇ ದೇಶಾದ್ಯಂತ ವ್ಯಾಪಿಸಿಬಿಟ್ಟಿದೆ! ಅದರಿಂದ ಆಗುತ್ತಿರುವ ಮತ-ಕಲಹಗಳಿಗೂ ಕೊನೆಮೊದಲೇ ಇಲ್ಲ!
ಸಮಾಜದಲ್ಲೂ ನಡೆಯುವ ಇಂತಹ ಪ್ರಸಂಗಗಳನ್ನೆಲ್ಲ ಗಮನಿಸಿದರೆ ಸಾಕು, ಶ್ರೀಕೃಷ್ಣನು ‘ಹಿರಿಯರು ಕಿರಿಯರೆದುರು ಆದರ್ಶಪ್ರಾಯರಾಗಿ ಬದುಕಬೇಕು, ಎಚ್ಚರ ತಪ್ಪಬಾರದು’ ಎಂದು ಹೇಳುವ ಮಾತಿನ ಮಹತ್ವ ನಮಗೆ ಅರ್ಥವಾಗುತ್ತದೆ!

– ಡಾ. ಆರತೀ ವಿ. ಬಿ.

ಕೃಪೆ : ವಿಜಯವಾಣಿ

Leave a Reply