ಗುಣಗಳೇ ಕರ್ಮಬೀಜಗಳು

ಗುಣಗಳೇ ಕರ್ಮಬೀಜಗಳು

‘‘ನೀನು ನಿರ್ಲಿಪ್ತಿಯಿಂದಿರುತ್ತ ಕರ್ಮವೆಸಗು. ಆದರೆ ಅದರ ಬಗ್ಗೆ ಲೌಕಿಕರಿಗೆ (ಭೋಗಫಲಾಸಕ್ತರಿಗೆ) ‘ಬುದ್ಧಿಭೇದ’ವನ್ನುಂಟು ಮಾಡಬೇಡ’’ ಎಂದು ಕೃಷ್ಣನು ಅರ್ಜುನನಿಗೆ ಹೇಳುತ್ತಿದ್ದನಷ್ಟೆ? ನಿರ್ಲಿಪ್ತಿಯನ್ನೂ ನೀತಿಯನ್ನೂ ಆದರ್ಶಗಳನ್ನೂ ‘ಆಚಾರ’ಕ್ಕೆ ಬಳಸುವುದಕ್ಕಿಂತ ಹೆಚ್ಚಾಗಿ ‘ಪ್ರಚಾರ’ಕ್ಕೇ ಬಳಸುವವರು ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ‘ನಿರ್ಲಿಪ್ತಿಯಿರುವುದು ಉಪದೇಶಕ್ಕಾಗಿ ಅಲ್ಲ, ಅನುಷ್ಠಾನಕ್ಕಾಗಿ’ ಎನ್ನುವ ಕೃಷ್ಣನ ಈ ಮಾತು ಅತ್ಯಂತ ಪ್ರಸ್ತುತವಾಗಿದೆ.
‘ಹಾಗಾದರೆ, ಸತ್ಯಧರ್ಮಗಳ ವ್ಯವಸ್ಥೆಯನ್ನು ಮುಕ್ತಕಂಠದಿಂದ ಬೆಂಬಲಿಸುತ್ತ, ಎಲ್ಲರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವುದು ತಪ್ಪೇ?’, ‘ದಾರಿ ತಪ್ಪುತ್ತಿರುವವರು ಸನ್ಮಾರ್ಗಕ್ಕೆ ಬರಲಿ ಎಂಬ ಸದುದ್ದೇಶದಿಂದ ನಾಲ್ಕು ಮಾತುಗಳನ್ನು ಹೇಳುವುದು ತಪ್ಪೇ?’ ಎಂಬ ಪ್ರಶ್ನೆ ಏಳಬಹುದು. ಅದಕ್ಕೆ ಕೃಷ್ಣನ ಮುಂದಿನ ಮಾತೇ ಉತ್ತರವಾಗಿದೆ – ‘ತಾನೂ ವಿಹಿತಕರ್ಮಗಳನ್ನು ಮಾಡುತ್ತ ಎಲ್ಲರೂ ಅದನ್ನು ಮಾಡುವಂತೆ ನೋಡಿಕೊಳ್ಳಬೇಕು.’
ಧರ್ಮವನ್ನು ಆಚರಿಸಬೇಕು, ಮುಕ್ತಕಂಠದಿಂದ ಬೆಂಬಲಿಸಬೇಕು, ಕಿರಿಯರಿಗೂ ಅಗತ್ಯವಿರುವವರಿಗೂ ತಿಳಿಹೇಳಲೂ ಬೇಕು. ಅದೇ ಸಹಜೀವನದ ಧರ್ಮ. ಅದಕ್ಕಾಗಿಯೇ ಅಲ್ಲವೇ ಶ್ರೀಕೃಷ್ಣನೂ ಅರ್ಜುನನಿಗೆ ಇಷ್ಟೆಲ್ಲ ಬೋಧಿಸುತ್ತಿರುವುದು! ಆದರೆ, ‘ಪ್ರಕೃತಿಯ ನೀತಿರೀತಿಗಳನ್ನು ಗಮನಿಸದೆ ಯಾರೂ ಯಾರನ್ನೂ ಅವಸರದಲ್ಲಿ ಬದಲಾಯಿಸಲಾಗದು’ ಎನ್ನುವ ಸೂಕ್ಷ್ಮಸತ್ಯವನ್ನು ಕೃಷ್ಣನು ಮನಗಾಣಿಸಲು ಯತ್ನಿಸುತ್ತಿದ್ದಾನೆ. ಮೊದಲು ‘ತಾನು’ ಆಚರಿಸಬೇಕು, ಆಗ ಇತರರೂ ಇವರ ಮಾರ್ಗದರ್ಶನ ಕೋರುವಂತಾಗಬೇಕು. ನುಡಿದಂತೆ ನಡೆಯಲಾಗದವನು ‘ಜಗತ್ತನ್ನು ಉದ್ಧರಿಸಲು’ ಹೊರಟರೆ, ಅದು ಅಸಮಂಜಸವಾದೀತು, ಹಾಸ್ಯಾಸ್ಪವೂ ಆದೀತು! ಆಚಾರವಂತನಾದವನು ಕೂಡ ಕೃತಕ ಪ್ರಭಾವ ಬೀರಿ ಇತರರಲ್ಲಿ ನಿರ್ಲಿಪ್ತಿ ಹಠಾತ್ತನೆ ಮೂಡಿಸಲಾಗದು. ಅಂತಹ ‘ಆರೋಪಿತ ನಿರ್ಲಿಪ್ತಿ’ಯ ಬೇಗ ಬಣ್ಣ ಮಾಸಿದಂತಾಗಿ ಅಳಿಯುತ್ತದೆ. ಅವರವರ ಪ್ರವೃತ್ತಿ ಹಾಗೂ ಜೀವನಾನುಭವಗಳೇ ಅವರವರ ಕೈಯಲ್ಲಿ ಆಯಾ ಕೆಲಸಗಳನ್ನು ಮಾಡಿಸುತ್ತವೆ.
ಕೃಷ್ಣನು ಮುಂದಿನ ಶ್ಲೋಕದಲ್ಲಿ ಹೀಗೆ ಹೇಳುತ್ತಾನೆ:
ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ವಣಿ ಸರ್ವಶಃ |
ಅಹಂಕಾರವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ || 3.27
(‘ಕರ್ಮಗಳೆಲ್ಲ ಪ್ರಕೃತಿಯ ಗುಣಗಳಿಂದಾಗಿ ಮಾಡಲ್ಪಡುತ್ತವೆ. ಅಹಂಕಾರದಿಂದ ಮತಿಗೆಟ್ಟ ವ್ಯಕ್ತಿಯು ಮಾತ್ರವೇ ‘‘ನಾನೇ ಮಾಡುತ್ತಿದ್ದೇನೆ’’ ಎಂದು ಭ್ರಮಿಸುತ್ತಾನೆ).
ಎಲ್ಲರ ‘ಸ್ವಭಾವ’ವು ಅವರವರ ಅಂತರಂಗದಿಂದಲೇ ಅವರವರನ್ನು ಸದ್ದಿಲ್ಲದೆ ಆಯಾ ಕರ್ಮದ ಹಾದಿಯಲ್ಲಿ ನಡೆಸುತ್ತದೆ. ಜೀವನಾನುಭವಗಳು ಈ ಸ್ವಭಾವವನ್ನು ಮೆಲ್ಲನೆ ಪಕ್ವವಾಗಿಸುತ್ತವೆ. ಬಾಹ್ಯದಿಂದ ಸ್ವೀಕರಿಸಲಾಗುವ ಉಪದೇಶ-ಪ್ರೇರಣೆಗಳಿಗೂ ಪಾತ್ರವುಂಟು, ಇಲ್ಲವೆಂದಲ್ಲ, ಆದರೆ ಅವು ವ್ಯಕ್ತಿಯ ಮೂಲಭೂತಸ್ವಭಾವಕ್ಕೆ ‘ಪೂರಕ’ಗಳಷ್ಟೇ ಹೊರತು, ‘ನಿರ್ಣಾಯಕ’ವಾಗಲಾರವು. ಇದನ್ನೇ ‘ಹುಟ್ಟು ಗುಣ ಸುಟ್ಟರೂ ಹೋಗೊಲ್ಲ’ ಎಂಬ ಹಳೆಯ ಗಾದೆಯು ಸ್ವಲ್ಪ ವ್ಯಂಗ್ಯವಾಗಿ ಹೇಳಿರುವುದು!
ಗುಣಗಳಿಗನುಗುಣವಾಗಿ ಕರ್ಮಗಳೂ ಸಾಗುತ್ತವೆ. ಗುಣವಿಭಾಗವೆಂದರೆ, ‘ತ್ರಿಗುಣಗಳಾದ ಸತ್ವರಜಸ್ತಮೋಗುಣಗಳು’ ಎಂದು ಅರ್ಥಮಾಡಿಕೊಳ್ಳಬಹುದು. ಅಥವಾ ಸಾಂಖ್ಯಾದಿ ದರ್ಶನಗಳು ಪಟ್ಟಿ ಮಾಡುವ ‘ಪಂಚಮಹಾಭೂತಗಳು, ಪಂಚಜ್ಞಾನೇಂದ್ರಿಯಗಳು, ಪಂಚಕಮೇಂದ್ರಿಯಗಳು, ಪಂಚತನ್ಮಾತ್ರಗಳು, ಪ್ರಕೃತಿ, ಮಹತ್, ಬುದ್ಧಿ, ಅಹಂ ಮತ್ತು ಮನಸ್’ ಎಂಬ ಮಹಾಗುಣಗಳು ಎಂದೂ ಅರ್ಥಮಾಡಿಕೊಳ್ಳಬಹುದು. ಜೀವರೊಳಗೆ ನಿಂತ ಈ ಮಹಾಗುಣಗಳು, ಪರಸ್ಪರರ ಸಂಯೋಗದಿಂದ ನಿತ್ಯವೂ ಕರ್ಮಗಳ ಲೀಲೆಯನ್ನಾಡಿಸುತ್ತವೆ. ಮುಂದಿನ ಶ್ಲೋಕದಲ್ಲಿ ಹೇಳುತ್ತಾನೆ ಕೃಷ್ಣ:
ತತ್ತ್ವವಿತ್ತು ಮಹಾಬಾಹೋ ಗುಣಕರ್ಮವಿಭಾಗಯೋಃ |
ಗುಣಾ ಗುಣೇಷು ವರ್ತಂತ ಇತಿ ಮತ್ವಾ ನ ಸಜ್ಜತೇ || 3.28
(‘ಈ ಗುಣಕರ್ಮವಿಭಾಗಗಳನ್ನು ತಿಳಿದಂತಹ ತತ್ವಜ್ಞನು, ಗುಣಗಳು ಗುಣಗಳಲ್ಲೇ ವರ್ತಿಸುತ್ತವೆ ಎನ್ನುವುದನ್ನು ತಿಳಿಯುತ್ತಾನಾದ್ದರಿಂದ, ಅದರಲ್ಲಿ ಆಸಕ್ತನಾಗುವುದಿಲ್ಲ.’)
ಜೀವರಲ್ಲಿ ನಿಂತ ಗುಣಗಳು ಗುಣಗಳ ಮಟ್ಟದಲ್ಲೇ ವರ್ತಿಸುತ್ತವೆ, ವಿಧವಿಧ ಕರ್ಮವನ್ನು ಪ್ರೇರೇಪಿಸುತ್ತವೆ. ಈ ಗುಣಗಳ ಲೀಲಾವಿಲಾಸದಲ್ಲಿ ಸರ್ವಜೀವರ ವಿಕಾಸವು ತಾನಾಗಿಯೇ ನಡೆಯುತ್ತದೆ. ಈ ನಿತ್ಯಲೀಲೆಯನ್ನು ರಸದೃಷ್ಟಿಯಿಂದ ಕಂಡು, ಅದರೊಳಗೆ ತಾನೂ ನಿರ್ಲಿಪ್ತಿಯಿಂದ ತೊಡಗಬೇಕು, ಧರ್ಮೈಕದೃಷ್ಟಿಯಿಂದ ಲೋಕಕಲ್ಯಾಣಕಾರಕವಾದ ಸತ್ಕರ್ಮಗಳನ್ನು ಮಾಡುತ್ತ ಸಾಗಬೇಕು, ಅಷ್ಟೇ. ಅದರ ಬದಲು, ‘ತಾನೇ’ನೋ ಎಲ್ಲರನ್ನೂ ಎಲ್ಲವನ್ನೂ ಒಮ್ಮೆಲೆ ಬದಲಾಯಿಸಿಬಿಡಬೇಕು ಎನ್ನುವ ಆತುರ ತೋರುವುದು ಹಾಸ್ಯಾಸ್ಪದ. ಅಹಂಕಾರಜನ್ಯವೂ ಹೌದು.
ಲೋಕದಲ್ಲಿ ನೋಡುತ್ತೇವೆ- ಯಾವ ತಾಯ್ತಂದೆಯರು, ಶಿಕ್ಷಕರು, ಗುರುಗಳು, ಹಿರಿಯರು ಕಿರಿಯರನ್ನು ಅಗತ್ಯಕ್ಕಿಂತ ಹೆಚ್ಚು ‘ಪ್ರಭಾವ’ಗೊಳಿಸಲು ನೋಡುತ್ತರೋ, ಅವರನ್ನು ಸಂಪೂರ್ಣವಾಗಿ ‘ತಾವಿಟ್ಟ ಹೆಜ್ಜೆಗಳಲ್ಲೇ ನಡೆ’ಯುವಂತೆ ಕೃತಯತ್ನಗಳನ್ನು ಮಾಡುತ್ತಾರೋ, ಅಂತಹ ಪ್ರಸಂಗಗಳಲ್ಲಿ ಕಿರಿಯರು ಮನೋದಾಸ್ಯಕ್ಕೊಳಗಾಗಿ ಕುಗ್ಗುವುದೋ ಅಥವಾ ದಂಡೆದ್ದು ಮುಗಿಬೀಳುವುದೋ ನಡೆಯುತ್ತದೆ. ಆದರೆ ಯಾವ ಹಿರಿಯರು ಕಿರಿಯರ ಸ್ವಭಾವಸಿದ್ಧ ಪ್ರವೃತ್ತಿ ಸಾಮರ್ಥ್ಯ ಸಾಧನಾಪರಿಗಳನ್ನು ಗುರುತಿಸಿ ಗೌರವಿಸಿ, ಹೆಚ್ಚು ಹಸ್ತಕ್ಷೇಪ ಮಾಡದೆ, ಅಗತ್ಯವಿದ್ದಷ್ಟೇ ಮಾರ್ಗದರ್ಶನಗೈಯುತ್ತ ಮುನ್ನಡೆಸುತ್ತಾರೋ, ಅಂತಹ ಪ್ರಸಂಗಗಳಲ್ಲಿ ಕಿರಿಯರ ವಿಕಾಸ ಚೆನ್ನಾಗಿ ಆಗುತ್ತದೆ. ಕೃಷ್ಣನ ಈ ಕಿವಿಮಾತನ್ನು ಎಲ್ಲ ಹಿರಿಯರೂ ನಾಯಕರೂ ಗುರುಗಳು ಅರ್ಥಮಾಡಿಕೊಂಡರೆ, ಅವರಿಂದಾಗಿ ಅದೆಷ್ಟೋ ಕಿರಿಯರು ಉಸಿರುಗಟ್ಟುವುದೂ, ಕುಗ್ಗುವುದೂ ಅಥವಾ ತಾಳಲಾಗದೆ ದಂಗೆಯೇಳುವುದು, ಪರಂಪರೆಯ ಕೊಂಡಿಯನ್ನು ಕಳಚಿಕೊಂಡು ಹೊರಟೇಹೋಗುವುದು ಇತ್ಯಾದಿ ದುರಂತಗಳು ಖಂಡಿತ ತಪ್ಪುತ್ತವೆ, ಅಲ್ಲವೆ?!
ಡಾ. ಆರತೀ ವಿ. ಬಿ.
ಕೃಪೆ : ವಿಜಯವಾಣಿ

Leave a Reply