ತಿಳಿದವರು ಮುಗ್ಧರನ್ನು ವಿಚಲಿತಗೊಳಿಸಬಾರದು

ತಿಳಿದವರು ಮುಗ್ಧರನ್ನು ವಿಚಲಿತಗೊಳಿಸಬಾರದು

‘ಗುಣ-ಕರ್ಮ-ವಿಭಾಗಗಳನ್ನು ತಿಳಿದಂತಹ ತತ್ವಜ್ಞನು, ಅದರಲ್ಲಿ ಮೋಹಾಸಕ್ತನಾಗುವುದಿಲ್ಲ. ಶಾಂತನೂ ನಿರ್ಲಿಪ್ತನೂ ಆಗಿ ಲೋಕಸಂಗ್ರಹಕ್ಕಾಗಿಯಷ್ಟೇ ಕರ್ಮವನ್ನಾಚರಿಸುತ್ತಾನೆ’ ಎನ್ನುವ ಕೃಷ್ಣನ ಮಾತನ್ನು ಚರ್ಚಿಸಿದ್ದೇವೆ.
ಪ್ರಕೃತೇರ್ಗಣಸಂಮೂಢಾಃ ಸಜ್ಜಂತೇ ಗುಣಕರ್ಮಸು |
ತಾನಕೃತ್ಸ್ನವಿದೋ ಮಂದಾನ್ ಕೃತ್ಸ್ನವಿನ್ನ ವಿಚಾಲಯೇತ್ || 3.29
‘ಪ್ರಕೃತಿಯ ಗುಣಗಳಲ್ಲಿ ಮೋಹ ಬೆಳೆಸಿಕೊಂಡವರು ಅದರಲ್ಲಿ ತುಂಬ (ಮಮಕಾರದಿಂದ) ತೊಡಗಿಕೊಳ್ಳುತ್ತಾರೆ. ಇಂತಹ ‘‘ಅಕೃತ್ಸ್ನವಿದ ’’ರನ್ನು ಕೃತ್ಸ್ನವಿದರು ವಿಚಲಿತಗೊಳಿಸಬಾರದು.’
ಕೃಷ್ಣನು ‘ಕೃತ್ಸ್ನವಿತ್’ (ಸಮಗ್ರಜ್ಞಾನವಿರುವವ) ಮತ್ತು ‘ಅಕೃತ್ಸ್ನವಿತ್’ (ಸಮಗ್ರಜ್ಞಾನವಿಲ್ಲದವ) ಎನ್ನುವ ಎರಡು ಬಗೆಯ ಜನರತ್ತ ಸೂಚಿಸುತ್ತಿದ್ದಾನೆ. ‘ಕೃತ್ಸ್ನ’  ಎಂದರೆ ‘ಸಮಗ್ರ’ ಎಂದರ್ಥ. ಎಲ್ಲವನ್ನೂ ಸಮಗ್ರಭಾವದಿಂದ ನೋಡುವ ಪಕ್ವಮತಿಗಳು ‘ಕೃತ್ಸ್ನವಿದರು’. ಸಂಕುಚಿತ ವಲಯದೊಳಗಷ್ಟೇ ಆಲೋಚಿಸಬಲ್ಲ ಅಪಕ್ವಮತಿಗಳು ‘ಅಕೃತ್ಸ್ನವಿದ’ರು. ಜೀವನದ ಸ್ವರೂಪ, ಜೀವಿಯ ವಿಕಾಸದ ಹಂತಗಳು, ಆಯಾ ಸ್ತರದಲ್ಲಿನ ಅವರವರ ಅಗತ್ಯ-ಅನಿವಾರ್ಯತೆಗಳು, ಜೀವಿಯ ಸಾಂಸ್ಕೃತಿಕ, ಭಾವನಾತ್ಮಕ ಹಿನ್ನೆಲೆಗಳು, ಸೃಷ್ಟಿಯಲ್ಲಿನ ವಿಕಾಸಪ್ರಕ್ರಿಯೆಯ ವೈವಿಧ್ಯಮಯ ಸಾಧ್ಯಾಸಾಧ್ಯತೆಗಳು – ಇತ್ಯಾದಿ ಎಲ್ಲವನ್ನೂ ಸಮಗ್ರಭಾವದಿಂದ ಗುರುತಿಸಿ ಅರ್ಥಮಾಡಿಕೊಳ್ಳಬಲ್ಲವರು ಕೃತ್ಸ್ನವಿದರು.
ಇಂತಹವರು ಎಲ್ಲರನ್ನೂ ಎಲ್ಲವನ್ನೂ ಸೃಷ್ಟಿಯ ಸುಂದರ ಅಂಶವೆಂದೇ ಉದಾರಭಾವದಿಂದ ನೋಡುತ್ತಾರೆ. ಎಲ್ಲರ ವೈಯಕ್ತಿಕ ಆಯ್ಕೆ, ಸ್ಥಿತಿಗತಿ ಹಾಗೂ ಹಿನ್ನೆಲೆಗಳನ್ನೂ ಗೌರವಿಸುತ್ತಾರೆ. ‘ತನ್ನ ವಿಚಾರ ಹಾಗೂ ತನ್ನ ಮಾರ್ಗ’ಗಳೇ ಸರಿ, ‘ಅದೇ ಎಲ್ಲರಿಗೂ ಏಕೈಕ ಗತಿ’ ಎಂಬ ಭ್ರಾಂತಿಗಿಳಿಯರು. ತಮ್ಮಿಂದಾಗಬಹುದಾದ ಸಹಾಯವನ್ನು ನೀಡಿಯಾರೇ ಹೊರತು ಮತ್ತೊಬ್ಬರ ವೈಯಕ್ತಿಕ ವಿಕಾಸದ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡರು. ಇಂತಹವರು ‘ಕೃತ್ಸ್ನವಿದ’ರು ಮಾತ್ರವೇ ನಿಜವಾದ ‘ಗುರು’ಗಳಾಗಬಲ್ಲವರು. ದತ್ತಾತ್ರೇಯರು, ರಮಣರು, ರಾಮಕೃಷ್ಣರು, ಅಲ್ಲಮರು, ಸರ್ವಜ್ಞ ಮುಂತಾದ ಹಲವು ಮಹನೀಯರು ಇಂತಹ ಮಹಾಗುರುಗಳು. ಇಂತಹವರ ಸತ್ಸಂಗದಲ್ಲಿ ಎಲ್ಲರಿಗೂ ತಾನಾಗಿಯೇ ಶಾಂತಿಸಂತಸಗಳು ಸಿಗುತ್ತವೆ, ಪ್ರಾಮಾಣಿಕ ಜಿಜ್ಞಾಸುಗಳಿಗೆ ಬೇಕಾದ ಬೆಳಕೂ ಸಿಗುತ್ತವೆ.
ಆದರೆ ಏಕಪಕ್ಷೀಯವಾಗಿ ಆಲೋಚಿಸುತ್ತ, ಜೀವನದ ನೈಸರ್ಗಿಕ ವಿಕಾಸದ ನೀತಿರೀತಿಗಳನ್ನು ಅರಿಯಲಾಗದವರು, ತಮ್ಮ ಭಾವನೆ-ವಿಚಾರ-ಮತ-ಪಂಥಗಳನ್ನೇ ‘ಸರ್ವಶ್ರೇಷ್ಠ’ವೆಂದು ಭ್ರಮಿಸುತ್ತ, ಅದನ್ನೇ ಎಲ್ಲರ ಮೇಲೂ ಹೇರಲು ಅವಸರ ಪಡುತ್ತಾರೆ. ಅವರೇ ‘ಅಕೃತ್ಸ್ನವಿದರು’. ಅಂತೆಯೇ ಅದಾವುದೋ ವಸ್ತು, ವ್ಯಕ್ತಿ, ಪದವಿ, ಲಾಭ, ಆಕಾಂಕ್ಷೆಗಳನ್ನೇ ಶಾಶ್ವತ ಎಂದು ನಂಬುತ್ತ, ಅದನ್ನು ಪಡೆಯುವ ಸಲುವಾಗಿ ಕೊನೆಯಿಲ್ಲದ ಭೋಗಕರ್ಮಗಳಲ್ಲೇ ತೊಡಗಿ, ಬಳಲಿ ಬೆಂಡಾಗುವ ದೂರದೃಷ್ಟಿಯಿಲ್ಲದ ಮುಗ್ಧರೂ ‘ಅಕೃತ್ಸ್ನವಿದ’ರೇ. ಮೊದಲನೆಯ ಬಗೆಯ ಅಕೃತ್ಸ್ನವಿದರು ‘ತಾವು ಮಹಾಜ್ಞಾನಿಗಳು, ಎಲ್ಲರನ್ನೂ ಉದ್ಧರಿಸಬೇಕಾದವರು’ ಎಂಬ ಅಹಮಿಕೆಯನ್ನು ತಾಳಿ ಎರಡನೆಯ ಬಗೆಯ ಅಕೃತ್ಸ್ನವಿದರನ್ನು ‘ಪಾಪಿಗಳು! ಮೂರ್ಖರು!’ ಎಂದು ತಿರಸ್ಕಾರದಿಂದ ಕಾಣುತ್ತಾರೆ. ತಮ್ಮ ಬುದ್ಧಿ, ವಾಕ್, ಚಮತ್ಕಾರ, ಕೌಶಲಗಳಿಂದ ಆ ಮುಗ್ಧರನ್ನು ಹಠತ್ತನೆ ಬದಲಾಯಿಸಿಬಿಡುವ ಕೃತಕಯತ್ನಗಳಲ್ಲಿ ತೊಡಗುತ್ತಾರೆ. ಮುಗ್ಧರು ಇವರಿಂದ ಬೆರಗಾಗಿ, ವಿಚಾರಿಸದೆ, ಅಂಧಾನುಚರರಾಗುತ್ತಾರೆ. ಅಕೃತ್ಸ್ನವಿದರು ಅಕೃತ್ಸ್ನವಿದರನ್ನು ‘ಉದ್ಧರಿ’ಸುವ ಈ ಯತ್ನವು ‘ಕುರುಡನು ಕುರುಡನಿಗೆ ದಾರಿ ತೋರಿದಂತೆಯೇ’ ಸರಿ! ಕಾಲಾಂತರದಲ್ಲಿ ಇವರೀರ್ವರಲ್ಲೂ ವೈಮನಸ್ಯ-ವಿರಸತೆಗಳೂ ಮೂಡಿ ಎಲ್ಲವೂ ದುಃಖಾಂತವಾಗುವುದೂ ಉಂಟು. ಆದರೆ, ಕೃತ್ಸ್ನವಿದರು ತಮ್ಮ ಜ್ಞಾನಸಾಕ್ಷಾತ್ಕಾರಗಳ ಬೆಳಕನ್ನು ಅಕೃತ್ಸ್ನವಿದರ ಮೇಲೆ ಒಮ್ಮೆಲೆ ಚೆಲ್ಲಿ, ಬೆರಗುಗೊಳಿಸಿ, ತಮ್ಮತ್ತ ಆಕರ್ಷಿಸುವ ಯತ್ನ ಮಾಡುವುದಿಲ್ಲ. ಅವರನ್ನು ಅವರ ಆಸೆ-ಆಕಾಂಕ್ಷೆ, ಆಚಾರ-ವಿಚಾರಗಳ ಮಟ್ಟದಿಂದ ಒಮ್ಮೆಲೆ ಕಿತ್ತು ‘ಉದ್ಧರಿಸುವ’ ಆತುರಕ್ಕೆ ಕೈಹಾಕುವುದಿಲ್ಲ.
ಶಿಶುವು ಬೊಂಬೆಯನ್ನು ಹಿಡಿದು ಆಡುತ್ತದೆ. ಅದಕ್ಕೇನೋ ಒಂದು ಸಂತಸ, ತೃಪ್ತಿ! ಬೆಳೆದು ದೊಡ್ಡವನಾಗುತ್ತಲೇ ಆ ಮಗುವಿಗೆ ಆ ಆಟಿಕೆಗಳ ಆವಶ್ಯಕತೆಯಿರದು. ಆಡುವ ಶಿಶುವಿನ ಕೈಯಿಂದ ಆಟಿಕೆಯನ್ನು ಕಸಿದು ‘ಇದೆಲ್ಲ ಬಾಲಿಶ. ನೀನು ಪ್ರೌಢನಂತೆ ವರ್ತಿಸು’ ಎಂದು ಉಪದೇಶವೀಯುವುದು ಸಮಂಜಸವಲ್ಲ. ಮನುಷ್ಯನೂ ಹಾಗೆಯೇ! ಆಯಾ ವೈಚಾರಿಕ-ಭಾವನಾತ್ಮಕ ಸ್ತರಗಳಲ್ಲಿ ಆಯಾ ವ್ಯಕ್ತಿ-ವಸ್ತು-ಭಾವನೆ-ಸಿದ್ಧಾಂತಗಳನ್ನೂ, ಕರ್ಮಗಳನ್ನೂ ಅವಲಂಬಿಸುತ್ತಾನೆ. ಅದನ್ನೆಲ್ಲ ಅನುಭವಿಸುತ್ತ ಕ್ರಮೇಣ ತಾನಾಗಿ ಅದರ ಇತಿಮಿತಿಗಳನ್ನು ಕಂಡುಕೊಳ್ಳುತ್ತ ಪ್ರೌಡನಾಗುತ್ತಾನೆ. ಆದರೆ ಇಂತಹವರ ಜೀವನದಲ್ಲಿ ಅಕೃತ್ಸ್ನವಿದ ‘ಗುರು’ಗಳು ನುಗ್ಗಿ, ಒಮ್ಮೆಲೆ ಉನ್ನತೋನ್ನತ ಸಿದ್ಧಾಂತಗಳನ್ನರುಹಿ, ಬೆರಗು ಮೂಡಿಸಿ, ತ್ಯಾಗ-ನಿರ್ಲಿಪ್ತಿಗಳನ್ನು ಹೇರಿದರೆ, ಆ ಮುಗ್ಧರು ಇದ್ದ ಶ್ರದ್ಧೆಯನ್ನು ಕಳೆದುಕೊಂಡು, ಹೊಸತನ್ನೂ ದಕ್ಕಿಸಿಕೊಳ್ಳಲಾಗದೆ ಅತ್ರಾಣರಾಗುತ್ತಾರೆ. ಸಂಕಟವನ್ನು ಅನುಭವಿಸುತ್ತಾರೆ. ಇದು ಅಸಹಜ, ಅಹಿತಕರ. ಇಂತಹ ಬಾಹ್ಯಪ್ರಭಾವವೇ ಪ್ರಧಾನವಾದ ವಿಚಾರವಾಗಲಿ ಸಾಧನೆಯಾಗಲಿ ಹೆಚ್ಚುಕಾಲ ನಿಲ್ಲದು. ದಿಢೀರ್ ಶಿಷ್ಯಸಂಖ್ಯಾವರ್ಧನೆಗಾಗಿ ಹೀಗೆಲ್ಲ ಮಾಡುವ ಮಾರ್ಕೆಟ್ ಗುರುಗಳು ಇದ್ದಾರು. ಆದರೆ ಪ್ರಕೃತಿಯ ರೀತಿನೀತಿಗಳನ್ನು ಅರಿತ ಕೃತ್ಸ್ನವಿದ ಗುರುಗಳು ಎಂದೂ ಹೀಗೆ ಮಾಡುವುದಿಲ್ಲ. ದೇಶ ಕಾಲ ಪಾತ್ರಗಳನ್ನರಿತು, ತಾಳ್ಮೆಯಿಂದ ಹೆಜ್ಜೆಯಿಡುತ್ತಾರೆ. ಸಹಮಾನವರ ಭಾವನಾತ್ಮಕ ವೈಚಾರಿಕ ಸಾಂಸ್ಕೃತಿಕ ಹಿನ್ನೆಲೆಗಳನ್ನರಿತು, ಅವರವರಿಗೆ ಸ್ನೇಹದಿಂದ ಹಿತಮಿತ ಉಪದೇಶವಿತ್ತು ಮುನ್ನಡೆಸುತ್ತಾರೆ. ಸ್ವತಃ ಶ್ರೀಕೃಷ್ಣನು ಏಕಕಾಲದಲ್ಲಿ ಮುಗ್ಧ ಗೊಲ್ಲ-ಗೊಲ್ಲತಿಯರ ಗೆಳೆಯನಾಗಿಯೂ ರಾಜ-ಋಷಿ-ವಿದ್ವಾಂಸರುಗಳ ಆಪ್ತಮಿತ್ರನಾಗಿಯೂ ಇರಬಲ್ಲವನಾಗಿದ್ದನಲ್ಲ! ಇದು ಅವನು ಕೃತ್ಸ್ನವಿದನಾದ್ದರಿಂದಲೇ ಸಾಧ್ಯವಾಯಿತು! ಉನ್ನತೋನ್ನತ ತತ್ತ್ವಸಾಕ್ಷಾತ್ಕಾರದ ಪ್ರೌಢಿಮೆಯೂ, ಸರ್ವಜನಸಾಧಾರಣವಾಗಿ ಇರಬಲ್ಲ ಸರಳತೆಯೂ ಏಕಕಾಲದಲ್ಲಿ ಒಲಿಯುವುದು ‘ಕೃತ್ಸ್ನವಿದ’ನಿಗೆ ಮಾತ್ರ!

ಡಾ. ಆರತೀ ವಿ. ಬಿ.

ಕೃಪೆ : ವಿಜಯವಾಣಿ

Leave a Reply