ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ

ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ

ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋ ವಾಚಾ ಪ್ರಜಾಪತಿಃ |
ಅನೇನ ಪ್ರಸವಿಷ್ಯಧ್ವಂ ಏಷ ವೋsಸ್ತ್ವಿಷ್ಟಕಾಮಧುಕ್ ||
ದೇವಾನ್ ಭಾವಯತಾನೇನ ತೇ ದೇವಾಃ ಭಾವಯಂತು ವಃ |
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ || (3.10-11)
ಎಂಬ ಶ್ಲೋಕವನ್ನು ಚರ್ಚಿಸುತ್ತಿದ್ದೆವು. ಬ್ರಹ್ಮನು ‘ದೇವತೆಗಳನ್ನು ಯಜ್ಞದ ಮೂಲಕ ತೃಪ್ತಿಪಡಿಸಿ’ ಎನ್ನುತ್ತಾನೆ. ಯಜ್ಞದ ಮೂಲಕ ತುಷ್ಟಿಗೊಳಿಸಿದಾಗ ದೇವತೆಗಳ ಅನುಗ್ರಹದಿಂದ ಶ್ರೇಯಸ್ಸಾಗುತ್ತದೆ. ನಾವು ಬೇಗ ಕೃತಕೃತ್ಯತೆ ಪಡೆದು ಯೋಗಮುಖರಾಗುತ್ತೇವೆ.
‘ದೇವತಾಯಜ್ಞಗಳು ಇಷ್ಟ-ಕಾಮಧುಕ್’ ಅಂದರೆ, ‘ಬಯಸಿದ್ದನ್ನು ಕೊಡುವ ಕಾಮಧೇನು’ ಎನ್ನುತ್ತಾನೆ ಸೃಷ್ಟಿಕರ್ತ. ಭೋಗ ಬಯಕೆಗಳನ್ನು ಸುಲಭವಾಗಿ ಮೀರಿ ನಿಲ್ಲಲಾಗದ ಸಾಮಾನ್ಯರಿಗೆ ದೇವತಾಯಜ್ಞವು ಕಾಮಿತ ಫಲಗಳನ್ನು ಕೊಡುವ ಸಾಧನವೂ ಹೌದು. ಸಾಮಾನ್ಯರು ತಾವು ಬಯಸಿದ ಭಾಗ್ಯಗಳನ್ನು ಪಡೆಯಲು ಅಡ್ಡದಾರಿಗಿಳಿಯುವ ಬದಲು, ಯಜ್ಞದ ಮೂಲಕ ದೇವತಾನುಗ್ರಹವಾಗಿ ಅವನ್ನು ಪಡೆಯುವ ಮಾರ್ಗವಿದು. ತನುಮನಗಳ ಶುದ್ಧಿ ಉಪವಾಸ ಬ್ರಹ್ಮಚರ್ಯ ದಾನಾದಿ ವ್ರತನಿಯಮಗಳನ್ನು ನಿರ್ದಿಷ್ಟ ಕಾಲಾವಧಿಯೊಳಗೆ ಶ್ರದ್ಧೆಯಿಂದ ಆಚರಿಸುತ್ತ, ಉದ್ದಿಷ್ಟ ಫಲಕ್ಕಾಗಿ ನಿರ್ದಿಷ್ಟ ದೇವತಾಶಕ್ತಿಯನ್ನು ಶಾಸ್ತ್ರವಿಧಿವಿಧಾನಗಳಿಂದ ಆರಾಧಿಸುವುದರ ಮೂಲಕ, ಆ ದೇವತೆಯ ವರಪ್ರಸಾದವಾಗಿ ಕೋರಿದ ಭಾಗ್ಯಗಳನ್ನು ಪಡೆಯಬಹುದು. ಹೀಗೆ ಮಾಡುವಾಗ ಸಹಮಾನವರನ್ನೂ ಅನ್ನ ವಸ್ತ್ರ ದ್ರವ್ಯ ತಾಂಬೂಲ ದಕ್ಷಿಣೆಗಳ ಮೂಲಕ ತೃಪ್ತಿಪಡಿಸುತ್ತ, ಯಜ್ಞಫಲದ ಭಾಗವನ್ನು ಪ್ರಸಾದರೂಪದಲ್ಲಿ ಎಲ್ಲರಿಗೂ ವಿತರಿಸುತ್ತ ‘ಎಲ್ಲರಿಗೂ ಶುಭವಾಗಲಿ’ ಎಂದು ಪ್ರಾರ್ಥಿಸಲಾಗುತ್ತದೆ. ದೇವತಾಯಜ್ಞಕರ್ಮವನ್ನು ಮಾಡುವವನ ಶ್ರದ್ಧೆ ಹಾಗೂ ಪುಣ್ಯಸಂಚಯಕ್ಕೆ ಅನುಗುಣವಾಗಿ ದೇವತೆಗಳು ಅವನಿಗೆ ಸೂಕ್ತಫಲಗಳನ್ನೀಯುತ್ತಾರೆ. ಹಾಗೆ ಪಡೆದ ಫಲಗಳು ಧರ್ಮಸಮ್ಮತವೆನಿಸುತ್ತವೆ.
‘ಮಾಡುವವರು ಯೋಗವನ್ನೋ ಭೋಗವನ್ನೋ ಪಡೆಯುತ್ತಾರೆ’ ಎನ್ನುವುದಷ್ಟಕ್ಕೇ ಈ ದೇವತಾಯಜ್ಞಗಳ ಪ್ರಯೋಜನ ಸೀಮಿತವಲ್ಲ. ದೇವತಾಯಜ್ಞಗಳ ಆಯ್ಕೆಯಿರುವುದರಿಂದಲೇ, ಐಹಿಕ ಆಸೆಗಳುಳ್ಳ ಸಾಮಾನ್ಯರು ಭೋಗಕ್ಕಾಗಿ ತಪ್ಪುದಾರಿ ಹಿಡಿಯುವುದು ತಪ್ಪುತ್ತದೆ. ತಾತ್ಕಾಲಿಕವಾಗಿಯಾದರೂ ವ್ರತ ದಾನ ಧರ್ವದಿಗಳ ಆಚರಣೆ ಮಾಡಿ ಆತ್ಮಸಂಸ್ಕರಣವನ್ನೂ ಪಡೆಯುವಂತಾಗುತ್ತದೆ. ದೇವತಾಯಜ್ಞವನ್ನು ಆಚರಿಸುವ ಸಂದರ್ಭಗಳಲ್ಲಿ ಭೂರಿ ಅನ್ನ ವಸ್ತ್ರ ತಾಂಬೂಲ ದಕ್ಷಿಣಾದಿಗಳ ದಾನವು ನಡೆಯುವುದರಿಂದ ದೀನದುರ್ಬಲರಿಗೂ ಪೋಷಣೆ ಒದಗುತ್ತದೆ. ಅದಲ್ಲದೆ ದೇವತಾಯಜ್ಞಗಳೆಂಬ ವೇದಿಕೆಯಲ್ಲೇ ಅಸಂಖ್ಯ ಪ್ರಕಾರಗಳ ಗೀತ ನೃತ್ಯ ವಾದ್ಯ ಚಿತ್ರ ಶಿಲ್ಪ ನಾಟಕ ಕಾವ್ಯ ಸಾಹಿತ್ಯ ಕ್ರೀಡಾದಿ ವಿನೋದಗಳಿಗೆ ಆಶ್ರಯ ಸಿಗುತ್ತದೆ! ಈ ಸಂದರ್ಭಗಳಲ್ಲಿ ಅಪಾರ ವ್ಯಾಪಾರ ವಾಣಿಜ್ಯ ಯಾತ್ರಾದಿಗಳೂ ಬಹುವಾಗಿ ವರ್ಧಿಸುತ್ತವೆ. ಉತ್ಸವ ಜಾತ್ರೆ ಮೇಳಗಳ ಸಾಂಸ್ಕೃತಿಕ ವೈಭವವು ಅಸಂಖ್ಯ ದೇಶವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತ ಬಾಂಧವ್ಯಗಳನ್ನು ಬೆಸೆಯುತ್ತ ಸಾಮಾಜಿಕ ಉನ್ನತಿಯನ್ನೂ ಸಾಧಿಸುತ್ತದೆ. ಒಟ್ಟಿನಲ್ಲಿ ಸಹಸ್ರಮಾನಗಳ ಈ ಭಾರತೀಯ ಧಾರ್ವಿುಕ ಸಾಂಸ್ಕೃತಿಕ ಆರ್ಥಿಕ ಪರಂಪರೆಯ ಸರ್ವತೋಮುಖ ಹಾಗೂ ವೈವಿಧ್ಯಮಯವಾದ ಸೊಬಗನ್ನು ಬಹುವಾಗಿ ಉಳಿಸಿ ಬೆಳೆಸಿ ತಂದಿರುವುದು ಈ ದೇವತಾಯಜ್ಞವೇದಿಕೆಯೇ ಆಗಿದೆ! ಹೀಗೆ ಯೋಗವನ್ನಾಗಲಿ ಭೋಗವನ್ನಾಗಲಿ ಅರಸುವ ಮಾನವರು ದೇವತಾಪ್ರೀತ್ಯರ್ಥವಾಗಿ ಯಜ್ಞವನ್ನು ಮಾಡಿದಾಗ ಸರ್ವರಿಗೂ ಶ್ರೇಯಸ್ಸು!
ದೇವತೆಗಳು ಇರುವುದೇ ಸೃಷ್ಟಿಯ ಹಿತರಕ್ಷಣೆಗಾಗಿ. ಅವರಿಗೆ ‘ಮಾನವರು ಯಜ್ಞಭಾಗವಾಗಿ ಅರ್ಪಿಸುವ ಹವಿಸ್ಸೇ ಶಕ್ತಿವರ್ಧಕ’ ಎನ್ನುತ್ತವೆ ಪುರಾಣಾಗಮಗಳು. ದೇವತೆಗಳ ಬಲವರ್ಧನೆಯಾದಾಗ ದುಷ್ಟಶಕ್ತಿಗಳು ಕುಗ್ಗುತ್ತವೆ, ಸಜ್ಜನಿಕೆ ವರ್ಧಿಸುತ್ತವೆ. ಅದರಿಂದ ಭೂಲೋಕಕ್ಕೆಲ್ಲ ಉನ್ನತಿ. ಹೀಗಾಗಿಯೇ ‘ದೇವತೆಗಳಿಗೂ ಮಾನವರಿಗೂ ಶ್ರೇಯಸ್ಕರವಾದ ದೇವತಾಯಜ್ಞವನ್ನು ಆಚರಿಸಿ’ರೆಂದು ಬ್ರಹ್ಮನು ಹೇಳಿರುವುದು.
ದೇವತೆಗಳೆಂದರೆ ಪರಮಾತ್ಮನ ಶಕ್ತಿಯ ಅಭಿವ್ಯಕ್ತಿಗಳು. ಅವನ ವಿಭೂತಿಗಳು. ಅವನ ಆಣತಿಯಂತೆ ಈ ಪಂಚಭೂತಾತ್ಮಕವಾದ ಸೃಷ್ಟಿಯ ಪ್ರತಿಯೊಂದು ಸ್ಥೂಲ-ಸೂಕ್ಷ್ಮವಿವರವನ್ನೂ ನಿಯಂತ್ರಿಸುವವರು. ಚರಾಚರಗಳೆಲ್ಲದರ ಘಟನಾವಳಿಗಳನ್ನೂ ಧರ್ಮಕರ್ಮಗಳನ್ನೂ ನಿಯಮಿಸುವವರು. ಮಂತ್ರಶರೀರಿಗಳಾದ ಈ ದೇವತೆಗಳನ್ನು ಸೂಕ್ತ ಜಪತಪಾದಿಗಳ ಮೂಲಕ ಒಲಿಸಿಕೊಂಡವರಿಗೆ, ಅವರು ಐಹಿಕ ಹಾಗೂ ಪಾರಮಾರ್ಥಿಕ ಭಾಗ್ಯಗಳನ್ನು ಕರುಣಿಸುತ್ತಾರೆ. ಪರಾ-ಅಪರಾವಿದ್ಯೆಗಳನ್ನು ನೀಡುತ್ತಾರೆ. ಕಾರ್ಯಸಿದ್ಧಿಯನ್ನೂ ಕೊಡುತ್ತಾರೆ. ಧರ್ಮದಲ್ಲಿ ನೆಲೆನಿಲ್ಲಿಸುತ್ತ ಶ್ರೇಯಸ್ಸಿನೆಡೆಗೆ ಒಯ್ಯುತ್ತಾರೆ.
ನಿತ್ಯ-ನೈಮಿತ್ತಿಕ ಕರ್ಮಗಳ ಮೂಲಕ ಈ ದೇವತಾಕೃಪೆ ಪಡೆಯುವ ಸಾಧನಗಳಾದ ನೂರಾರು ಮಂತ್ರ ತಂತ್ರ ಯಂತ್ರ ವಿಧಿವಿಧಾನಗಳನ್ನು ವೇದಾಗಮ ತಂತ್ರ ಜಾನಪದಾದಿ ಪದ್ಧತಿಗಳು ತಿಳಿಸುತ್ತ ಬಂದಿವೆ. ತಮ್ಮ ಸ್ಥಳೀಯ ಅಥವಾ ಕುಲೀನ ಆಚಾರಗಳಂತೆ ಹಾಗೂ ಅಭಿರುಚಿಯಂತೆ ಯಥಾಶಕ್ತಿ ಯಥಾಪ್ರೀತಿ ಎಲ್ಲರೂ ದೇವತಾಯಜ್ಞವನ್ನಾಚರಿಸಿ ಬಯಸಿದ್ದನ್ನು ಪಡೆಯಬಹುದು. ಹಾಗಾಗಿಯೇ ಯಜ್ಞವನ್ನು ಬ್ರಹ್ಮನು ‘ಇಷ್ಟಕಾಮಧುಕ್’ ಎಂದು ಕರೆದದ್ದು. ದೇವತಾಕರ್ಮಗಳು ಎಲ್ಲಿ ನಡೆಯುತ್ತವೋ ಅಲ್ಲಿ ದೇವತಾಕೃಪೆಯಿಂದಾಗಿ ಮಳೆಬೆಳೆಗಳಾಗುತ್ತವೆ, ಸಮಾಜದಲ್ಲಿ ಸ್ವಾಸ್ಥ್ಯ ಸಮೃದ್ಧಿಗಳು ವರ್ಧಿಸುತ್ತವೆ, ಮನಸ್ಸಂತೋಷದೊಂದಿಗೆ ಉತ್ಸವಾಚರಣೆ ವ್ಯಾಪಾರ ಕಲೆ ಸಾಹಿತ್ಯಾದಿಗಳೂ ಪ್ರವರ್ಧಿಸುತ್ತವೆ. ಸಮಾಜವು ಸರ್ವತೋಮುಖವಾಗಿ ಅರಳುತ್ತದೆ.
‘ಬ್ರಹ್ಮನೂ, ದೇವತೆಗಳೂ ಹೀಗೆ ಸದಾ ಯಜ್ಞದಲ್ಲಿ ನಿರತರಾಗಿರುವಂತೆ, ಮಾನವರಾದ ನಾವೂ ಯಜ್ಞನಿರತರಾಗಿದ್ದರೆ ಸರ್ವಥಾ ಸರ್ವತ್ರ ಶ್ರೇಯಸ್ಸು’ ಎನ್ನುವುದು ತಾತ್ಪರ್ಯ.
ಡಾ. ಆರತೀ ವಿ. ಬಿ.

Courtesy : Vijayavani

Leave a Reply