‘ನನ್ನಲ್ಲಿ ಶರಣಾಗು, ಕರ್ತವ್ಯವೆಸಗು’

‘ನನ್ನಲ್ಲಿ ಶರಣಾಗು, ಕರ್ತವ್ಯವೆಸಗು’

‘ಜ್ಞಾನಿಯು ತಾನು ನಿರ್ಲಿಪ್ತಕರ್ಮವನ್ನು ಸಡಗರವಿಲ್ಲದೆ ಮಾಡುತ್ತಾ ಹೋಗುತ್ತಾನೆ. ಆದರೆ ಪ್ರಕೃತಿಯ ಗುಣ-ಕರ್ಮಗಳ ಮರ್ಮವನ್ನೂ, ಜೀವರ ವಿಕಾಸಪ್ರಕ್ರಿಯೆಯ ಸೂಕ್ಷ್ಮಗಳನ್ನೂ ಅರಿತಂತಹ ಆ ‘‘ಕೃತ್ಸ್ನವಿದನು’’ (ಸಮಗ್ರದರ್ಶನವುಳ್ಳವನು) ಪಕ್ವಮತಿಯಾಗಿರುತ್ತಾನೆ. ತನ್ನ ಜ್ಞಾನದಿಂದ ಮತ್ತೊಬ್ಬರನ್ನು ಪ್ರಭಾವಗೊಳಿಸಿ ವಿಚಲಿತಗೊಳಿಸಲು ಯತ್ನಿಸುವುದಿಲ್ಲ’ ಎನ್ನುವ ಕೃಷ್ಣನ ಮಾತನ್ನು ಚರ್ಚಿಸಿದ್ದೆವು. ಭೋಗಾಸಕ್ತಿ ಹಾಗೂ ಏಕಪಕ್ಷೀಯ ಆಲೋಚನೆಗಳಿಗೆ ಸಿಲುಕಿ ಅದರಂತೆ ಕರ್ಮವೆಸಗುವ ಅಕೃತ್ಸ್ನವಿದರನ್ನು (ಮುಗ್ಧರನ್ನು) ಒಮ್ಮೆಲೇ ಬದಲಿಸುವುದು ಸಾಧುವಲ್ಲ, ಸಾಧ್ಯವೂ ಇಲ್ಲ. ಹಾಗೆ ಮಾಡುವವನೂ ಅಕೃತ್ಸ್ನವಿದನೇ!
ಅರೆಬರೆ ಜ್ಞಾನಾನುಭವಗಳನ್ನು ಹೊಂದುತ್ತಲೇ ಮನುಷ್ಯನು ಜಗಜನರನ್ನು ‘ಬದಲಾಯಿಸಲು’ ಹೊರಟುಬಿಡುತ್ತಾನೆ! ಅತಿಯಾದ ಉಪದೇಶದಿಂದಲೋ, ಆಮಿಷದಿಂದಲೋ, ಬೆದರಿಕೆಯಿಂದಲೋ ಅಥವಾ ಕೊನೆಗೆ ರಕ್ತಪಾತದಿಂದಲಾದರೂ ಸರಿ, ‘ತಾನು ತೋರುವ ಮಾರ್ಗ’ಕ್ಕೆ ಜನರನ್ನು ಬರಸೆಳೆಯುವ ದುಸ್ಸಾಹಸವನ್ನು ತಾಳುತ್ತಾನೆ! ಪಶ್ಚಿಮದ ಮತಾಂಧ-ಪ್ರಚಾರಕರೂ ಈ ಅಪಕ್ವತೆಯ ಭರದಲ್ಲೇ ಜಗತ್ತಿನಲ್ಲೆಲ್ಲ ಸಂಚರಿಸಿ, ಇತರ ಜನಾಂಗಗಳ ಮತ, ಪಂಥ, ಭಾಷೆ, ಭಾವನೆ, ವಿಚಾರ, ಜೀವನಶೈಲಿಗಳನ್ನು ತಿರಸ್ಕಾರದಿಂದ ಕಾಣುತ್ತ, ಬಲವಂತದ ಮತಾಂತರವನ್ನು ಮಾಡುತ್ತ, ಈ ಸುಂದರ ಭೂಮಿಯಲ್ಲಿ ಅದೆಷ್ಟು ಅಶಾಂತಿ-ರಕ್ತಪಾತಗಳನ್ನೇ ಉಂಟುಮಾಡಿದ್ದಾರೆ, ಮಾಡುತ್ತಿದ್ದಾರೆ! ಇದನ್ನೆಲ್ಲ ಗಮನಿಸಿದಾಗ ಕೃಷ್ಣನ ಮಾತಿನ ಮಹತ್ವ ನಮಗೇ ತಿಳಿಯುತ್ತದೆ.
‘ಹಾಗಾದರೆ ನಾವು ಈ ಜಗತ್ತಿನಲ್ಲಿ ಸಹಮಾನವರನ್ನು ತಿದ್ದುವುದು ಬೇಡವೆ? ನಾವು ಕಂಡುಕೊಂಡ ಜ್ಞಾನವನ್ನು ಜಗತ್ತಿಗೆಲ್ಲ ಹಂಚುತ್ತ ಪರಮಾತ್ಮನ ಕೃಪೆಯ ‘‘ಕಾಲುವೆ’’ಗಳಾಗಿ ವರ್ತಿಸುವುದು ತಪ್ಪೇ?’ ಎಂಬ ಪ್ರಶ್ನೆಗಳೇಳಬಹುದು. ನದಿಯ ನೀರನ್ನು ದೂರದೂರದ ದಡಗಳಿಗೆ ತಲುಪಿಸುವ ಕಾಲುವೆಯು, ‘ಕಾಲುವೆ’ಯಾಗುವುದು ಹೇಗೆ ಹೇಳಿ? ತನ್ನೊಳಗಿನ ಕಲ್ಲು-ಮಣ್ಣುಗಳ ಹೂಳನ್ನು ಹೊರಹಾಕಿ ‘ಖಾಲಿ’ಯಾದಾಗ! ಮಹಾನದಿಗೆ ತನ್ನನ್ನು ತಾನು ‘ಜೋಡಿಸಿ’ಕೊಂಡಾಗ! ಅಲ್ಲವೆ? ಅಂತೆಯೇ ನಮ್ಮಲ್ಲಿ ‘ನಾನು ಮಹಾತ್ಮ! ಎಲ್ಲರನ್ನೂ ಉದ್ಧಾರ ಮಾಡುತ್ತೇನೆ’ ಎಂಬ ಅಹಮಿಕೆಯ ಕಲ್ಲು-ಮಣ್ಣುಗಳ ಹೂಳನ್ನು ಹೊರಹಾಕಬೇಕು, ಪರಮಾತ್ಮನಲ್ಲಿ ಶರಣಾಗಬೇಕು! ಆಗ ಸತ್ಯಜ್ಞಾನಾನಂದಗಳ ಅಮೃತಜಲವು ನಮ್ಮೊಳಗೆಲ್ಲ ಹರಿದು, ನಮ್ಮನ್ನೂ ಪಾವನವಾಗಿಸಿ, ನಮ್ಮ ಇಕ್ಕೆಲದಲ್ಲಿರುವವರಿಗೆಲ್ಲ ತನ್ನ ಅಮೃತಜ್ಞಾನವನ್ನುಣಿಸುತ್ತದೆ! ಹೀಗೆ ‘ನಮ್ಮಿಂದ’ ಲೋಕಕಲ್ಯಾಣವಾಗುವುದು ನಮ್ಮ ‘ಅಹಂಕಾರ ನಾಶ’ವಾದಾಗ ಮಾತ್ರ! ಇಂತಹ ಅಹಂಕಾರನಾಶಕ್ಕೆ ಸಾಧಕವಾದ ‘ಶರಣಾಗತಿ’ಯ ಬಗ್ಗೆಯೇ ಶ್ರೀಕೃಷ್ಣನು ಮುಂದಿನ ಶ್ಲೋಕದಲ್ಲಿ ಹೇಳುತ್ತಿದ್ದಾನೆ:
ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯಾಧ್ಯಾತ್ಮಚೇತಸಾ |
ನಿರಾಶೀರ್ನಿರ್ಮಮೋ ಭೂತ್ವಾ ಯುದ್ಧ್ಯಸ್ವ ವಿಗತಜ್ವರಃ || 3.30
‘ಸರ್ವಕರ್ಮಗಳನ್ನೂ ನನ್ನಲ್ಲಿ ಅರ್ಪಿಸಿಬಿಡು, ಆತ್ಮಭಾವದಲ್ಲಿ ನಿಲ್ಲು, ಆಶೆ ಹಾಗೂ ಮಮಕಾರಗಳೆರಡನ್ನೂ ಬಿಡು, (ಅಹಮಿಕೆಯ) ಜ್ವರ ಬಿಟ್ಟವನಾಗಿ ಯುದ್ಧವನ್ನು (ಕರ್ತವ್ಯವನ್ನು) ಮಾಡು.’
ಈ ಜೀವನದಲ್ಲಿ ನಾವು ಧರ್ಮಕರ್ಮಗಳನ್ನೆಸಗುವಾಗ ಮಧ್ಯೆ ಹೆಡೆಯೆತ್ತಿ ನಮ್ಮ ಭಾವ, ವಿಚಾರ, ಕಾರ್ಯವಿಧಾನಗಳನ್ನೆಲ್ಲ ಹಾಳುಗೆಡವುವುದೇ ಈ ಅಹಂಕಾರ! ‘ನಾನು ಬಲ್ಲಿದ- ನನಗದು ಬೇಕು’ ಎಂಬ ಲೌಕಿಕ ಅಹಂಕಾರಗಳೂ ಕೆಟ್ಟವು. ‘ಭೋಗಾತುರಾಣಾಂ ನ ಭಯಂ ನ ಲಜ್ಜಾ’ ಎಂಬಂತೆ, ಭೋಗೇಚ್ಛೆಯ ಭರದಲ್ಲಿ, ಸತ್ಯಧರ್ಮಗಳನ್ನೂ ಶಿಷ್ಟಾಚಾರಗಳನ್ನೂ ಮಾನವೀಯತೆಯನ್ನೂ ಅತಿಕ್ರಮಿಸಿ ದುಷ್ಕೃತ್ಯಗಳಿಗಿಳಿಯುವಂತೆ ಮಾಡಿಬಿಡುತ್ತದೆ!
ಈ ಅಹಂಕಾರದ ಮತ್ತೊಂದು ಚೇಷ್ಟೆಯೇನು ಗೊತ್ತೆ? ಈ ಹಿತಶತ್ರುವು ‘ನಾನು ಧಾರ್ವಿುಕ, ನಾನು ಉತ್ತಮ, ನಾನು ಜ್ಞಾನಿ’ ಎಂಬ ಭಾವಗಳನ್ನು ಡಾಂಭಿಕತೆಗೆ ತಿರುಗಿಸಿಬಿಡುತ್ತದೆ! ಅಧ್ಯಯನ-ಜೀವನಾನುಭವಗಳಿಂದಲೂ, ಮಹಾತ್ಮರ ಸತ್ಸಂಗದಿಂದಲೂ ಪಡೆದ ಅಲ್ಪಸ್ವಲ್ಪ ಜ್ಞಾನ-ವರ್ಚಸ್ಸುಗಳನ್ನು ಸಾಧನೆಗೆ ಬಳಸಿ ಸಿದ್ಧಿ ಪಡೆಯುವತ್ತ ಗಮನ ಹರಿಯಿಸುವ ಬದಲು, ಅದನ್ನೆಲ್ಲ ತೋರಾಣಿಕೆಗೆ ಬಳಸಿ ಜನ-ಧನ-ಕೀರ್ತಿಗಳನ್ನು ಸಂಪಾದಿಸುವತ್ತ ನಮ್ಮನ್ನು ದಾರಿತಪ್ಪಿಸುತ್ತದೆ! ಹಲವು ಉತ್ತಮ ಸಾಧಕರೂ, ಧಾರ್ವಿುಕರೂ ಮೆಲ್ಲನೆ ‘ಮಾರ್ಕೆಟ್ ಗುರುಗಳಾಗಿ’ ಅವನತಿ ಹೊಂದುವುದು ಹೀಗೆಯೆ!
ಅಹಂಕಾರದ ಈ ಆಟಕ್ಕೆ ಕಡಿವಾಣ ಹಾಕುವುದು ಹೇಗೆ? ಅದಕ್ಕಾಗಿಯೇ ಇರುವ ದಿವ್ಯೋಪಾಯ ‘ಶರಣಾಗತಿ’! ‘ನಾನು-ನನ್ನದು’ ಎಂಬ ಸಾಂತ-ಸೀಮೆಗಳನ್ನು ಭಗವಂತನ ಅನಂತದಲ್ಲಿ ಕರಗಿಸಿಬಿಡುವುದೇ ‘ಶರಣಾಗತಿ’. ಬಿಂದುವು ಸಿಂಧುವಿನಲ್ಲಿ ಬೆರೆತು ತನ್ನ ಅಸ್ತಿತ್ವವನ್ನೇ ಕರಗಿಸಿಕೊಳ್ಳುವಂತೆ, ನಾವೂ ಅನಂತ-ಪರತತ್ವದ ಅನುಭೂತಿಯಲ್ಲಿ ‘ಕರಗಬೇಕು!’ ‘ನಾನು’ ಎನ್ನುವುದು ‘ಇಲ್ಲ’ವಾದಾಗಲೇ ನಮ್ಮಿಂದ ಲೋಕಕಲ್ಯಾಣವು ಸಾಧ್ಯ.
ಇಂತಹ ಅನನ್ಯ ಶರಣಾಗತಿಯನ್ನು ಸಿದ್ಧಿಸಿಕೊಂಡ ಜ್ಞಾನಿಯು ಮಾತ್ರವೇ, ಕರ್ಮಗಳ ಬಂಧದಿಂದ ನಿಜವಾಗಿಯೂ ‘ಕಳಚಿಕೊಳ್ಳಬಲ್ಲ’ ಎನ್ನುವುದನ್ನು ಗೀತಾಚಾರ್ಯನು ಮುಂದಿನ ಶ್ಲೋಕದಲ್ಲಿ ಹೇಳುತ್ತಿದ್ದಾನೆ:
ಯೇ ಮೇ ಮತಮಿದಂ ನಿತ್ಯಮನುತಿಷ್ಠಂತಿ ಮಾನವಾಃ |
ಶ್ರದ್ಧಾವಂತೋsನಸೂಯಂತೋ ಮುಚ್ಯಂತೇ ತೇsಪಿ ಕರ್ಮಭಿಃ ||
‘ಯಾರು ನನ್ನ ಈ (ಅಭಿ)ಮತವನ್ನು ಅನುಷ್ಠಾನಕ್ಕೆ ತರುತ್ತಾರೋ, ಅಂತಹವರು ಶ್ರದ್ಧಾಸಂಪನ್ನರೂ ಅಸೂಯಾದಿ ದುರ್ಗಣಗಳಿಂದ ಮುಕ್ತರೂ ಆಗಿ, ಕರ್ಮ(ಜಾಲ)ದಿಂದ ಬಿಡುಗಡೆ ಹೊಂದುತ್ತಾರೆ.’ ‘ನಾನು ಮಾಡುತ್ತೇನೆ’ ಎಂಬ ಅಹಂಕಾರದ ಬೀಜವು ಅಳಿಯುತ್ತಲೇ, ಅದರ ಫಲಗಳಾದ ಅಸೂಯಾ-ಮೋಹಾದಿ ಭ್ರಾಂತಿಗಳೂ ಅಳಿಯುತ್ತವೆ. ಅಂತಹ ಶುದ್ಧಾಂತರಂಗದಲ್ಲಿ ಸತ್ಯತತ್ವದಲ್ಲಿ ಶ್ರದ್ಧೆ ಮೂಡುತ್ತದೆ. ಸತ್ಯತತ್ವದಲ್ಲಿ ನೆಲೆನಿಂತ ಮೇಲೆ ವ್ಯಕ್ತಿಯು ‘ತನಗಾಗಿ’ ಮಾಡಬೇಕಾದ ಕರ್ಮವಿನ್ನೇನೂ ಉಳಿದಿರದು! ನಿಃಸ್ಪೃಹನಾದ ಆತನು ಮುಂದೆ ಅದೇನೇ ನುಡಿದರೂ ಮಾಡಿದರೂ ಅದರಿಂದ ಆಗುವುದೆಲ್ಲವೂ ಲೋಕಕಲ್ಯಾಣವೇ!

ಡಾ ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply