ನಿನ್ನೊಳಗಿನ ವಿಕೃತಿಯೇ ದೋಷಿ

ನಿನ್ನೊಳಗಿನ ವಿಕೃತಿಯೇ ದೋಷಿ

‘ಯಾರು ನನ್ನ ಈ ಅಭಿಮತವನ್ನು (ಶರಣಾಗತಿಯ ಮೂಲಕ ಪಾರಮ್ಯಕ್ಕೇರುವ ವಿಧಾನವನ್ನು) ಅನುಸರಿಸುತ್ತಾರೋ, ಅಂತಹ ಶ್ರದ್ಧಾಸಂಪನ್ನರೂ ಅಸೂಯಾದಿ ದುರ್ಗುಣಗಳಿಂದ ಮುಕ್ತರೂ ಆಗಿರುವವರು ಕರ್ಮ(ಜಾಲ)ದಿಂದ ಬಿಡುಗಡೆ ಹೊಂದುತ್ತಾರೆ’ ಎನ್ನುವ ಮಾತನ್ನು ಕೃಷ್ಣನು ಹೇಳುತ್ತಿದ್ದ. ‘ಶರಣಾಗತಿಯೆನ್ನುವುದು ಹೇಗೆ ಮನುಷ್ಯನ ಅಹಂಕಾರದ ಕಟ್ಟೆಯನ್ನೊಡೆದು, ಆತನ ಮತಿಮನಗಳ ಸಾಂತಸೀಮೆಗಳನ್ನು ಮುರಿದು, ತತ್ವದ ಆನಂತ್ಯದಲ್ಲಿ ವಿಸ್ತರಿಸಲು ಅನುವಾಗುತ್ತದೆ’ ಎನ್ನುವುದನ್ನೂ ಚರ್ಚಿಸಿದ್ದೆವು. ಮುಂದೆ ಶ್ರೀಕೃಷ್ಣನು ಹೇಳುತ್ತಾನೆ:
ಯೇ ತ್ವೇತದಭ್ಯಸೂಯಂತೋ ನಾನುತಿಷ್ಠಂತಿ ಮೇ ಮತಂ |
ಸರ್ವಜ್ಞಾನವಿಮೂಢಾಂಸ್ತಾನ್ ವಿದ್ಧಿ ನಷ್ಟಾನಚೇತಸಃ || 3.32
‘ಯಾರು ನನ್ನ ಈ ಅಭಿಮತವನ್ನು ಆಚರಿಸಲಾರರೋ, ಅಸೂಯಾದಿ ಗುಣಾವೃತರಾಗಿರುತ್ತಾರೋ, ಅಂತಹ ಜ್ಞಾನಹೀನರಾದ ವಿಮೂಢರು ನಾಶವನ್ನು ಹೊಂದುತ್ತಾರೆ.’ ಮನುಷ್ಯನು ‘ನಾನು-ನನ್ನದು’ ಎನ್ನುವ ಅಹಮಿಕೆಯ ಗೂಡನ್ನು ಕಟ್ಟಿಕೊಂಡು ಸಂಕುಚಿತವಾಗಿ ಬದುಕಲಾರಂಭಿಸಿದಾಗ, ಅವನ ಅಂತರಂಗದಲ್ಲಿ ಅಸೂಯಾದಿ ದುರ್ಗುಣಗಳು ಮೊಳೆಯಲಾರಂಭಿಸುತ್ತವೆ. ಮನಸ್ಸಿನ ಪ್ರಸನ್ನತೆ ಬಗ್ಗಡಗೊಳಿಸುವ ಯಾವುದೇ ನಕಾರಾತ್ಮಕ ಭಾವವು ‘ಅಸೂಯೆ’ ಎನಿಸುತ್ತದೆ. ಈ ನಕಾರಾತ್ಮಕತೆ ಚಿತ್ತವನ್ನು ಆವರಿಸಿದಾಗ ಮನುಷ್ಯನು ‘ಜ್ಞಾನಹೀನ’ನೂ ‘ನಷ್ಟಚೇತಸ’ನೂ ‘ವಿಮೂಢ’ನೂ ಆಗುತ್ತಾನೆ ಎನ್ನುವುದು ತಾತ್ಪರ್ಯ. ಕೃಷ್ಣನು ಮುಂದೆ ಹೇಳುತ್ತಾನೆ:
ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನವಾನಪಿ |
ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ || 3.33
‘ಜ್ಞಾನಿಗಳೂ ಸೇರಿದಂತೆ ಎಲ್ಲ ಜೀವರೂ ಅವರವರ ಪ್ರಕೃತಿಗನುಗುಣವಾಗಿ ವರ್ತಿಸುತ್ತಾರೆ. ಎಲ್ಲರೂ ‘‘ಪ್ರಕೃತಿ’’ಯನ್ನೇ ಹೊಂದುತ್ತಾರೆ. ಈ ವಿಷಯದಲ್ಲಿ ‘‘ನಿಗ್ರಹ’’ ಸಾಧ್ಯವಿಲ್ಲ.’
ಸರ್ವರ ದೇಹ, ಮನ, ಬುದ್ಧಿಗಳಲ್ಲಿ ಪ್ರವರ್ತಿಸುವುದು ‘ಪ್ರಕೃತಿ’ಯ ನಿಯಮವೇ. ಜೀವಿಗಳೆಲ್ಲರೂ ಪ್ರಕೃತಿಯಿಂದ ಪ್ರೇರೇಪಿತರಾಗಿ ಆಯಾ ಇಂದ್ರಿಯದ ಮೂಲಕ ಆಯಾ ಉಪಭೋಗದಲ್ಲೂ ತತ್ಸಂಬಂಧಿತ ಕರ್ಮದಲ್ಲೂ ತೊಡಗುತ್ತಾರೆ. ಹಸಿವು, ಬಾಯಾರಿಕೆ, ನಿದ್ರೆ, ಬೆಳವಣಿಗೆ, ಜರಾ, ಮೃತ್ಯುಗಳು ಪ್ರಕೃತಿಧರ್ಮಗಳು. ಅವುಗಳಿಗೆ ಪ್ರತಿಸ್ಪಂದಿಸುತ್ತ ಆಹಾರಸೇವನೆ, ನಿದ್ರೆ, ಓಡಾಟ, ಜೀವನನಿರ್ವಹಣಾದಿ ಪ್ರಕ್ರಿಯೆಗಳಲ್ಲಿ ಜೀವರು ತೊಡಗುವುದೂ ಪ್ರಕೃತಿಧರ್ಮವೆ. ಜೀವಿಗಳೆಲ್ಲರೂ ಇದಕ್ಕೆ ಬದ್ಧರು. ಜ್ಞಾನಿಗಳು ಕೂಡ. ಹಾಗಾದರೆ ಮನುಷ್ಯನು ಗೆಲ್ಲಬೇಕಾದದ್ದು ಏನನ್ನು? ಶ್ರೀಕೃಷ್ಣನು ಸ್ಪಷ್ಟಪಡಿಸುತ್ತಾನೆ:
ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ |
ತಯೋರ್ನ ವಶಮಾಗಚ್ಛೇತ್ ತೌ ಹ್ಯಸ್ಯ ಪರಿಪಂಥಿನೌ || 3.34
‘ಇಂದ್ರಿಯಗಳು ಇಂದ್ರಿಯಾರ್ಥಗಳಲ್ಲಿ (ಆಯಾ ವಿಷಯವಸ್ತುಗಳಲ್ಲಿ) (ಮನಸ್ಸಿನ ಮೂಲಕ) ರಾಗದ್ವೇಷಗಳನ್ನು ಹೊಂದುತ್ತವೆ. ಇವೆರಡೂ ಮಾರ್ಗದಲ್ಲಿನ (ತಡೆಗಳು). ಅವುಗಳಿಗೆ ವಶನಾಗಬೇಡ.’
ಇಂದ್ರಿಯಗಳಲ್ಲಾಗಲಿ, ಸುತ್ತಲ ವಿಷಯವಸ್ತುಗಳಲ್ಲಾಗಲಿ ಯಾವ ದೋಷವೂ ಇಲ್ಲ. ಅವು ಪ್ರಕೃತಿಧರ್ಮದಂತೆ ಇರುತ್ತವೆ, ವರ್ತಿಸುತ್ತವೆ. ಸಮಸ್ಯೆಯೇಳುವುದು ಅನಿಯಂತ್ರಿತ ಮನದಲ್ಲಿನ ರಾಗದ್ವೇಷಗಳ ಮೂಲಕ! ಇಂದ್ರಿಯ-ಇಂದ್ರಿಯಾರ್ಥಗಳ ಸಂಬಂಧದಲ್ಲಿ ಆಗುವ ಸಹಜ ಜೀವನಾನುಭವವನ್ನು, ಈ ರಾಗದ್ವೇಷಗಳು ಪಟ್ಟಿ ಕಟ್ಟಿ ನೋಡುವಂತೆ ಮಾಡುತ್ತವೆ – ‘ಇದು ನನಗಿಷ್ಟ’, ‘ಅದು ಇಷ್ಟವಿಲ್ಲ’, ‘ಇವರು ನನಗೆ ಮೆಚ್ಚುಗೆಯಾದರು’, ‘ಅವರನ್ನು ಕಂಡರೆ ನನಗಾಗೋದಿಲ್ಲ’, ‘ಇವರು ನನಗಿಂತ ಉಚ್ಚರು’, ‘ಅವರು ನನಗಿಂತ ನೀಚರು’, ‘ಇದು ಹೀಗೆ ಆಗಬೇಕಿತ್ತು’, ‘ಅದು ಹಾಗೆ ಆಗಬಾರದಿತ್ತು’ ಇತ್ಯಾದಿ! ಈ ಅನಿಸಿಕೆಗಳನ್ನು ‘ಸಾಧಿಸಲೇಬೇಕೆಂದು’ ಬುದ್ಧಿಯನ್ನೂ ದಾರಿ ತಪ್ಪಿಸುತ್ತವೆ. ಹೀಗೆ ಬುದ್ಧಿಯ ನಿರ್ಣಯಗಳೆಲ್ಲ ರಾಗದ್ವೇಷಾಧಾರಿತವೇ ಆಗಿಬಿಡುತ್ತವೆ! ಇಷ್ಟಾದ ಮೇಲೆ ವ್ಯಕ್ತಿಯು ತಾನೂ ನೆಮ್ಮದಿಯಿರಲಾರನು, ಇತರರನ್ನೂ ನೆಮ್ಮದಿಯಿಂದಿರಲು ಬಿಡಲಾರನು. ಅಂತರಂಗದಲ್ಲಿ ಆಸೆ, ದುರಾಸೆ, ನಿರಾಶೆ, ಹತಾಶೆಗಳನ್ನೂ ಬಹಿರಂಗದಲ್ಲಿ ಪರದೂಷಣ, ಕಲಹ, ಪ್ರತೀಕಾರಗಳನ್ನೂ ತುಂಬಿಕೊಂಡೇ ತಿರುಗಾಡುತ್ತಾನೆ. ಹೀಗೆ ಸಮಸ್ಯೆಯೇಳುವುದು ಇಂದ್ರಿಯ ಹಾಗೂ ಇಂದ್ರಿಯಾರ್ಥಗಳೆಂಬ ‘ಪ್ರಕೃತಿ’ಯಿಂದಲ್ಲ, ಮನಸ್ಸಿನಲ್ಲಿ ಮೂಡುವ ರಾಗದ್ವೇಷಗಳೆಂಬ ‘ವಿಕೃತಿ’ಯಿಂದ. ತೋಟದಲ್ಲಿನ ಹೂ-ಬಳ್ಳಿ-ಚಿಗುರುಗಳನ್ನು ಮೆಚ್ಚುವುದು ಪ್ರಕೃತಿ; ಕ್ಷಣಿಕ ಲೋಭಕ್ಕೊಳಪಟ್ಟು ಅವುಗಳನ್ನು ಕೀಳುವುದು ಅಥವಾ ಕದ್ದೊಯ್ಯುವುದು ವಿಕೃತಿ. ತಿನ್ನುವುದು ಪ್ರಕೃತಿ. ಹಿತವರಿಯದೆ ಮಿತವರಿಯದೆ ಭೋಗಾತುರದಲ್ಲಿ ಕಬಳಿಸುವುದು ವಿಕೃತಿ. ಅಂತೆಯೇ ಸಂಬಂಧಗಳು, ವ್ಯವಹಾರಗಳು ಎಲ್ಲವೂ ಕೂಡ! ಯೋಗವೂ ಋಣಾನುಬಂಧವೂ ಇದ್ದಷ್ಟು ಎಲ್ಲರೂ ಎಲ್ಲವೂ ನಮ್ಮ ಜೀವನದಲ್ಲಿ ಬಂದುಹೋಗುವುದು ಪ್ರಕೃತಿ. ಆದರೆ ಅವುಗಳಿಗೆ ಅಂಟಿಕೊಂಡು ನಿರೀಕ್ಷೆಗಳ ಭ್ರಾಂತಿಯನ್ನು ಬೆಳೆಸಿಕೊಳ್ಳುತ್ತೇವಲ್ಲ, ಅದೇ ವಿಕೃತಿ! ‘ಇಂತಹ ರಾಗದ್ವೇಷಗಳ ವಶಕ್ಕೆ ಬೀಳಬೇಡ’ ಎಂದು ಎಚ್ಚರಿಸುತ್ತಿದ್ದಾನೆ ಶ್ರೀಕೃಷ್ಣ – ‘ತಯೋರ್ನ ವಶಮಾಗಚ್ಛೇತ್…’.
ಮನುಷ್ಯನು ‘ಯಾರನ್ನು ನಂಬಬಹುದು, ಬಾರದು?’ ‘ಯಾವುದು ಕೈದಕ್ಕೀತು? ಕೈತಪ್ಪೀತು?’ ಎಂದು ಸದಾ ಚಿಂತಿಸುತ್ತಿರುತ್ತಾನೆ. ತಮಾಷೆಯೇನೆಂದರೆ, ಇದನ್ನೆಲ್ಲ ಚಿಂತಿಸಲು ಆತನು ಬಳಸುವ ಸಲಕರಣೆಗಳಾದ ತನ್ನದೇ ಮನಸ್ಸು-ಬುದ್ಧಿಗಳ ಶುದ್ಧಿಯನ್ನು ಪರೀಕ್ಷಿಸುವುದೇ ಇಲ್ಲ! ಕಿಟಕಿಯಲ್ಲಿ ಇಣುಕುತ್ತ ಒಬ್ಬಾಕೆ ಸದಾ ವ್ಯಂಗ್ಯವಾಗಿ ಹೇಳುತ್ತಿದ್ದಳಂತೆ; ‘ಪಕ್ಕದ ಮನೆಯವರು ಸರಿಯಾಗಿ ಬಟ್ಟೆ ತೊಳೆಯುವುದಿಲ್ಲಪ್ಪ! ಎಲ್ಲ ಕೊಳೆಕೊಳೆಯಾಗೇ ಇರುತ್ತವೆ’ ಎಂದು! ಒಂದು ದಿನ ತನ್ನ ಕಿಟಕಿಯ ಗಾಜನ್ನು ಒರೆಸಿದಾಗ ಗೊತ್ತಾಯಿತಂತೆ, ಕೊಳೆಯಾಗಿದ್ದದ್ದು ‘ಪಕ್ಕದ’ ಮನೆಯವರ ಬಟ್ಟೆಗಳಲ್ಲ, ‘ತನ್ನ’ ಕಿಟಕಿಯ ಗಾಜು ಎಂದು!
‘ಇಂದ್ರಿಯಗಳನ್ನೋ ಇಂದ್ರಿಯಾರ್ಥಗಳನ್ನೋ ದೂಷಿಸಬೇಡ. ಅವು ಪ್ರಕೃತಿಧರ್ಮದಂತೆ ಇರುತ್ತವೆ. ನಿನ್ನ ಮನಕ್ಕಂಟಿದ ರಾಗದ್ವೇಷಗಳನ್ನು ಮೊದಲು ಗುರುತಿಸಿಕೊ, ಅವುಗಳ ವಶನಾಗಬೇಡ, ಆಗ ಸರಿದಾರಿಗೆ ಬರುವೆ’ ಎನ್ನುವ ಅನುಷ್ಠಾನಯೋಗ್ಯ ನೀತಿಯನ್ನು ಇಲ್ಲಿ ಶ್ರೀಕೃಷ್ಣನು ಒತ್ತಿ ಹೇಳುತ್ತಿದ್ದಾನೆ.

ಡಾ. ಆರತೀ ವಿ. ಬಿ.

ಕೃಪೆ : ವಿಜಯವಾಣಿ

Leave a Reply