ನಿಯತ ಕರ್ಮಗಳನ್ನಾಚರಿಸು

ನಿಯತ ಕರ್ಮಗಳನ್ನಾಚರಿಸು

‘ಕರ್ಮವು ಪ್ರಕೃತಿಜನ್ಯ ಗುಣಗಳಿಂದ ಪ್ರೇರಿತವಾಗಿ ಅವಿರತವೂ ನಮ್ಮೊಳಗೂ ಹೊರಗೂ ನಡೆಯುತ್ತಲೇ ಇರುವ ಪ್ರಕ್ರಿಯೆ’ ಎನ್ನುವ ಕೃಷ್ಣನ ಮಾತನ್ನು ಅನುಸಂಧಾನ ಮಾಡಿದೆವು.
ಈ ನೈಷ್ಕರ್ಮ್ಯಭಾವದ ಮರ್ಮವನ್ನು ಅರಿಯದವರು ಅದನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಂಡು, ಕಷ್ಟವೆನಿಸುವಂತಹ ಧರ್ಮಕರ್ಮಗಳನ್ನು ಬಿಟ್ಟು ಕೂರುವ ಜಾಣತನ ತೋರುವುದುಂಟು! ಅಂತಹವರು ಬಾಹ್ಯದಲ್ಲಿ ಕರ್ಮವನ್ನು ಬಿಟ್ಟಂತಿದ್ದರೂ, ಮನಸಿನಲ್ಲಿ ಅದನ್ನೇ ನೆನೆಯುತ್ತ, ಅದರ ಬಗ್ಗೆ ರಾಗದ್ವೇಷಗಳನ್ನೂ ಮುಂದುವರಿಸುತ್ತಾರೆ. ಕರ್ಮತ್ಯಾಗದ ನಾಟಕ ಮಾಡುತ್ತ ಒಳಗೊಳಗೆ ಪಾಪಪ್ರಜ್ಞೆಯನ್ನೂ ಅನುಭವಿಸುತ್ತಾರೆ. ಇಂತಹ ಆತ್ಮವಂಚಕರನ್ನು ಕೃಷ್ಣನು ಮುಲಾಜಿಲ್ಲದೆ ‘ಮಿಥ್ಯಾಚಾರಿ’ಗಳೆಂದು ಕರೆಯುತ್ತಾನೆ;
ಕರ್ಮೇಂದ್ರಿಯಾಣಿ ಸಂಯಮ್ಯ ಯ ಆಸ್ತೇ ಮನಸಾ ಸ್ಮರನ್ |
ಇಂದ್ರಿಯಾರ್ಥಾನ್ವಿಮೂಢಾತ್ಮಾ ಮಿಥ್ಯಾಚಾರಃ ಸ ಉಚ್ಯತೇ || (3.6)
‘ಯಾವ ಮನುಷ್ಯನು ಕರ್ಮೇಂದ್ರಿಯಗಳನ್ನು ಮಾತ್ರ ಸಂಯಮಿಸಿ, ಇಂದ್ರಿಯಾರ್ಥಗಳನ್ನು (ಭೋಗಗಳನ್ನು) ಮನದಲ್ಲೇ ಸ್ಮರಿಸುತ್ತಾನೋ, ಅಂತಹವನು ಮಿಥ್ಯಾಚಾರಿ.’
‘ಬಿಟ್ಟ ಕರ್ಮದ ಬಗ್ಗೆ ನಿಜಕ್ಕೂ ನಿರ್ಲಿಪ್ತಿ ಇದೆಯೇ?’ ಎನ್ನುವುದು ಸವಾಲು. ನಾವು ‘ಬಿಟ್ಟಿದ್ದೇವೆ’ ಎನ್ನುವ ವಸ್ತು/ಕರ್ಮವನ್ನು ಮನದಲ್ಲೇ ಅದೆಷ್ಟು ನೆನೆಯುತ್ತೇವೆ! ಏಕಾದಶೀ ಉಪವಾಸವನ್ನು ಮಾಡುತ್ತೇವೆ. ಆಹಾರನಿದ್ರಾದಿ ಭೋಗಕರ್ಮಗಳನ್ನು ಬಿಟ್ಟು ಭಗವದ್ಧ್ಯಾನ ಮಾಡಬೇಕೆನ್ನುವುದು ಉದ್ದೇಶ. ಆದರೆ ‘ತಾನು ಏನೂ ತಿಂದಿಲ್ಲವಲ್ಲ!’ ಎಂದು ಸಂಕಟಪಡುತ್ತ, ಅದನ್ನೇ ಹೇಳಿಕೊಂಡು ತಿರುಗುತ್ತ, ಅಥವಾ ‘ತಾನು ಉಪವಾಸವನ್ನಾಚರಿಸುವ ಮಹಾತ್ಮ’ ಎಂದು ಬೀಗುತ್ತ ತಿರುಗಾಡಿದರೆ, ನಿಜಕ್ಕೂ ನಾವು ಏನನ್ನು ತಾನೆ ‘ಬಿಟ್ಟಂ’ತಾಯಿತು?! ದೇಹಕ್ಕೇನೋ ಉಪವಾಸ! ಮನದಲ್ಲಿ ಸದಾ ಆಹಾರದ್ದೇ ಮೆಲುಕು!
ದಾನ ಮಾಡಿದ ವಸ್ತುವನ್ನು ಆಸೆಯಿಂದ ನೆನೆಯುತ್ತಲೇ ಇದ್ದರೆ, ಮಾನಸಿಕವಾಗಿ ಆ ವಸ್ತುವನ್ನು ಇನ್ನೂ ಉಪಭೋಗಿಸುತ್ತಲೇ ಇದ್ದೇವೆಂದೇ ಅರ್ಥವಲ್ಲವೆ? ಸಂಸಾರಜೀವನ ಒಲ್ಲೆನೆಂದು ಹೊರಟವರೂ, ಮುಕ್ತಿಯಾಗುವ ತನಕ, ಸಾತ್ವಿಕವೆನಿಸುವ ಜಪತಪಾದಿಕರ್ಮಗಳಲ್ಲಿ ತೊಡಗುವುದು ಅನಿವಾರ್ಯ! ಅಲ್ಲೂ ಫಲತ್ಯಾಗದ ಭಾವವಿಲ್ಲದಿದ್ದರೆ ಮನ್ನಣೆ, ಶಿಷ್ಯಸಂಪಾದನೆ, ಅಧಿಕಾರ ಮುಂತಾದವುಗಳ ಜಾಲಕ್ಕೆ ಬೀಳುವ ಅಪಾಯವಿದ್ದೇ ಇದೆ! ಕರ್ಮದ ಬೀಜವಿರುವುದು ಮನದಲ್ಲಿ! ಅಲ್ಲಿ ಅದು ನಿರ್ಲಿಪ್ತಿಯಿಂದ ದಗ್ಧವಾಗದ ಹೊರತು ಬಾಹ್ಯದಲ್ಲಿ ಕರ್ಮದ ವೃತ್ತಾಂತ ನಿಲ್ಲುವ ಮಾತೇ ಇಲ್ಲ!
ಪ್ರವಾಹದಿಂದಾಗಿ ನದಿಯನ್ನು ದಾಟಿ ಮನೆಗೆ ತೆರಳಲಾಗದೆ ಯುವತಿಯೊಬ್ಬಳು ತೀರದಲ್ಲಿ ಅಳುತ್ತ ಕೂತಿದ್ದಳು. ಯುವ ಬೌದ್ಧ ಸಂನ್ಯಾಸಿಗಳಿಬ್ಬರು ಅತ್ತ ಬಂದರು. ಮೊದಲನೆಯ ಭಿಕ್ಷುವು ಕರುಣೆಯಿಂದ ಆಕೆಯನ್ನು ಹೆಗಲ ಮೇಲೆ ಹೊತ್ತು ನದಿಯನ್ನು ದಾಟಿಸಿದ. ಭಿಕ್ಷುಗಳಿಬ್ಬರೂ 5-6 ಮೈಲಿ ದೂರ ಮೌನವಾಗಿ ಪ್ರಯಾಣ ಮುಂದುವರಿಸಿದರು. ಎರಡನೆಯ ಭಿಕ್ಷು ಕುತೂಹಲದಿಂದ ಕೇಳಿದ; ‘ನೀನು ಯುವತಿಯನ್ನು ಹೊತ್ತಿದ್ದು ಸರಿಯೆ?’ ಎಂದು. ಮೊದಲನೆಯ ಭಿಕ್ಷು ಶಾಂತವಾಗಿ ನುಡಿದ; ‘ನಾನು ಆಕೆಯನ್ನು ಅಲ್ಲೇ ಬಿಟ್ಟು ಬಂದೆನಲ್ಲ! ನೀನೇಕೆ ಇನ್ನೂ ಮನದಲ್ಲೇ ಹೊತ್ತು ತಂದಿದ್ದೀಯೆ?’ ಯುವತಿಯನ್ನು ದೈಹಿಕವಾಗಿ ಹೊತ್ತವನ ಕರ್ಮಕ್ಕಿಂತ ಮನಸಿನಲ್ಲಿ ಹೊತ್ತವನಿಗೇ ಭಾರ ಹೆಚ್ಚು! ಮನದಲ್ಲಿ ಕರ್ಮತ್ಯಾಗವಾಗದಿದ್ದರೆ ಹೀಗೆಯೇ! ಒಟ್ಟಿನಲ್ಲಿ ‘ಮನದಲ್ಲಿ ಕರ್ಮಫಲತ್ಯಾಗವೇ ಸಾಧನವೇ ಹೊರತು, ಕರ್ಮವನ್ನೇ ಬಿಟ್ಟುಬಿಡಲಾಗದು’ ಎನ್ನುವುದು ಆಚಾರ್ಯ ಕೃಷ್ಣನ ಸ್ಪಷ್ಟ ಸಂದೇಶ.
ಯಸ್ತ್ಯಿವಂದ್ರಿಯಾಣಿ ಮನಸಾ ನಿಯಮ್ಯಾರಭತೇರ್ಜುನ |
ಕಮೇಂದ್ರಿಯೈಃ ಕರ್ಮಯೋಗಂ ಆಸಕ್ತಃ ಸ ವಿಶಿಷ್ಯತೇ || (3.7)
ನಿಯತಂ ಕುರು ಕರ್ಮ ತ್ವಂ ಕರ್ಮ ಜ್ಯಾಯೋ ಹ್ಯಕರ್ಮಣಃ |
ಶರೀರಯಾತ್ರಾಪಿ ಚ ತೇ ನ ಪ್ರಸಿದ್ಧ್ಯೇತ್ ಅಕರ್ಮಣಃ || (3.8)
‘ಯಾವನು ಇಂದ್ರಿಯಗಳನ್ನು ಮನಸ್ಸಿನ ಮೂಲಕ ನಿಯಮಿಸಿ, ಅನಾಸಕ್ತಿ ಬೆಳೆಸಿಕೊಂಡು, ಅದೇ ಕಮೇಂದ್ರಿಯಗಳ ಮೂಲಕ ಕರ್ಮ ಮಾಡುತ್ತಾನೋ, ಆತನೇ ವಿಶೇಷನು. ನೀನು ನಿಯತ ಕರ್ಮವನ್ನು ಮಾಡು. ಅಕರ್ಮಕ್ಕಿಂತ ಕರ್ಮ ಮಾಡುವುದು ಲೇಸು. ಅದಲ್ಲದೆ, ಅಕರ್ಮದಿಂದ ಶರೀರಯಾತ್ರೆಯೂ (ಜೀವನವೂ) ನಡೆಯದು.’
ನಿಯತಕರ್ಮವೆಂದರೆ ಶಾಸ್ತ್ರವಿಹಿತಕರ್ಮ. ಶಾಸ್ತ್ರವು ದೇಶ ಕಾಲ ಸಂದರ್ಭಾನುಸಾರವಾದ ಕರ್ತವ್ಯರೂಪದ ಧರ್ಮಕರ್ಮಗಳನ್ನು ಎಲ್ಲರಿಗೂ ವಿಧಿಸುತ್ತದೆ. ಇವುಗಳನ್ನು ಬಿಡಬಾರದು. ನಿಯತಕರ್ಮಗಳನ್ನು ಮನುಷ್ಯರು ಬಿಟ್ಟರೆ ಸಮಾಜದ ನ್ಯಾಯ-ಸಮರಸಗಳಲ್ಲಿ ಏರುಪೇರು ಉಂಟಾಗುತ್ತದೆ. ರಾಜನು ತನ್ನ ವೈಯಕ್ತಿಕ ಇಷ್ಟವನ್ನನುಸರಿಸಿ, ಕರ್ತವ್ಯವನ್ನು ಮರೆತರೆ, ಮಂತ್ರಿ ಅಮಾತ್ಯರೂ ಪ್ರಜೆಗಳೂ ಭ್ರಷ್ಟರಾಗುತ್ತಾರೆ, ದುರ್ಜನರು ಮೆರೆಯುತ್ತಾರೆ, ಸಜ್ಜನರು ನರಳುತ್ತಾರೆ.
ಮನೆಯ ಯಜಮಾನ ತನ್ನ ಕರ್ತವ್ಯವನ್ನು ಬಿಟ್ಟರೆ, ಮನೆಮಂದಿ ಬಡತನಕ್ಕಿಳಿದು, ಶೋಷಣೆ ದೂಷಣೆಗೊಳಗಾಗುತ್ತಾರೆ. ಬೇಸತ್ತ ಅವರು ಮೋಸ, ಕಳ್ಳತನಗಳಿಗೆ ಇಳಿದಾರು ಕೂಡ. ಗುರುಹಿರಿಯರು ಕಿರಿಯರಿಗೆ ಸೂಕ್ತ ನೈತಿಕ ಶಿಕ್ಷಣವನ್ನು ಕೊಡುವ ಜವಾಬ್ದಾರಿಯನ್ನು ಕೈಬಿಟ್ಟರೆ ಭ್ರಷ್ಟ ಜನಾಂಗಗಳು ನಿರ್ವಣವಾಗಿ, ಸಮಾಜವು ಅವನತಿಯತ್ತ ಉರುಳುತ್ತದೆ. ಹೀಗಾಗಿ ಎಲ್ಲರೂ ತಮ್ಮ ತಮ್ಮ ನಿಯತಕರ್ಮಗಳನ್ನು ಪ್ರಶ್ನಾತೀತವಾಗಿ ಕರ್ತವ್ಯೈಕಭಾವದಿಂದ ಮಾಡಿ ಪೂರೈಸಲೇಬೇಕೆಂದು ಶಾಸ್ತ್ರವು ವಿಧಿಸುತ್ತದೆ. ‘ನಿಯತಕರ್ಮಗಳನ್ನು ಮಾಡು’ ಎಂದು ಕೃಷ್ಣನೂ ನಿರ್ದೇಶಿಸುತ್ತಿದ್ದಾನೆ. ಮನದಲ್ಲಿ ನಿರ್ಲಿಪ್ತಿಯನ್ನೂ ಸಂಕಲ್ಪರಾಹಿತ್ಯವನ್ನೂ ಸಾಧಿಸದೆ ಸುಮ್ಮನೆ ಅಕರ್ಮದ ನಾಟಕವಾಡುವುದರಿಂದ ಯಾರಿಗೂ ಶ್ರೇಯಸ್ಸಿಲ್ಲ. ಎಲ್ಲರಿಗೂ ಅನನುಕೂಲವೇ ಆಗುತ್ತದೆ. ಜೊತೆಗೆ ದೇಹಧಾರಣೆ ಹಾಗೂ ಜೀವನಯಾತ್ರೆಯು ಮುಂದುವರಿಯುವುದೇ ಕರ್ಮದಿಂದ. ಅತ್ಯವಶ್ಯಕವಾದ ಆಹಾರ-ನಿದ್ರಾದಿಗಳನ್ನಂತೂ ಬಿಡಲಾಗದಲ್ಲ! ಒಟ್ಟಿನಲ್ಲಿ ಅರ್ಥಹೀನವಾದ ಅಕರ್ಮಕ್ಕಿಂತ ನಿಯತಕರ್ಮಗಳ ನಿರ್ಲಿಪ್ತ ಆಚರಣೆಯೇ ಶ್ರೇಷ್ಠ ಎನ್ನುವುದನ್ನು ಶ್ರೀಕೃಷ್ಣನು ಒತ್ತಿ ಹೇಳುತ್ತಿದ್ದಾನೆ.

ಡಾ ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply