ಪಾರ್ಥನನ್ನಾವರಿಸಿತು ‘ಪ್ರಾಕೃತಕಾರುಣ್ಯ’

ಪಾರ್ಥನನ್ನಾವರಿಸಿತು ‘ಪ್ರಾಕೃತಕಾರುಣ್ಯ’

‘ತನ್ನವರು’ ಎನ್ನುವ ಮೋಹ ಆವರಿಸಿದ ಕಾರಣ ಅರ್ಜುನನಿಗೆ ಅಕ್ಷಮ್ಯ ಅಪರಾಧಿಗಳಲ್ಲೂ ‘ಅನುಕಂಪ’ ಮೂಡುತ್ತಿದೆ! ಆತ ಹೇಳುತ್ತಾನೆ – ನ ಕಾಂಕ್ಷೇ ವಿಜಯಂ ಕೃಷ್ಣ , ನ ಚ ರಾಜ್ಯಂ ಸುಖಾನಿ ಚ—-“ಕೃಷ್ಣ ! ನನಗೆ ಗೆಲುವೂ ಬೇಡ , ರಾಜ್ಯವೂ ಸುಖಭೋಗಗಳೂ ಬೇಡ! ನನ್ನ ಬಂಧುಬಾಂಧವರೇ ಸತ್ತ ಮೇಲೆ ಈ ರಾಜ್ಯಭೋಗಗಳಿಂದ ಏನಾಗಬೇಕು? ದುಷ್ಟರಾದ ಈ ಧಾರ್ತರಾಷ್ಟ್ರರು ಎಷ್ಟಾದರೂ ನನ್ನ ’ಸ್ವಜನರು’ “. ಅರ್ಜುನನ ಮಾತುಗಳು ಮೇಲ್ನೋಟಕ್ಕೆ ಅಹುದಹುದು ಎಂದೆನಿಸೀತು. ತಮಾಷೆಯೇನೆಂದರೆ ಆತನಿಗೆ ಕಷ್ಟವೆನಿಸುತ್ತಿರುವುದು ‘ಯುದ್ಧಮಾಡುವ ಕೆಲಸ’ವಲ್ಲ, ಬದಲಾಗಿ ’ತನ್ನವರನ್ನು ಶಿಕ್ಷಿಸಬೇಕಲ್ಲ!’ ಎಂಬ ಸಂಕಟ! ಅಪರಾಧಿ ಸ್ಥಾನದಲ್ಲಿ ಬೇರಾರಾದರೂ ನಿಂತಿದ್ದಲ್ಲಿ ಅರ್ಜುನನಿಗೆ ಈ ಗೊಂದಲವೇ ಬರುತ್ತಿರಲಿಲ್ಲ ಎಂದಾಯಿತು! ಅಪ್ರಿಯಕರ್ತವ್ಯವನ್ನು ಮಾಡಬೇಕಾದಾಗ ಅರ್ಜುನ ಭಾವುಕನಾದ . ‘ದೀರ್ಘಕಾಲ ಘೋರಪಾಪಗಳನ್ನೆಸಗಿದ ದುರ್ಯೋಧನಾದಿಗಳ ದರ್ಪವನ್ನಡಗಿಸಿ ತಮಗೆ ನ್ಯಾಯಕೊಡಿಸುತ್ತಾರೆ ಪಾಂಡವರು’ ಎಂದು ಕಾತರತೆಯಿಂದ ಇದಿರು ನೋಡುತ್ತಿದ್ದ ಅಸಂಖ್ಯ ಮುಗ್ಧಜನರ ವಿಷಯ ಆತನಿಗೆ ಮರೆತೇಹೋಯಿತು! ಸಾಧ್ವೀ ದ್ರೌಪದಿಗಾದ ಅಕ್ಷಮ್ಯ ಅನ್ಯಾಯ ಮರೆತೇ ಹೋಯಿತು! ಲಾಭವಿರಲಿ ಬಿಡಲಿ, ರಾಜಕುಮಾರನಾದವನು ಸದಾ ತನ್ನ ಸುತ್ತಲಿರುವ ಸಜ್ಜನರನ್ನು, ಸದಾಚರಗಳನ್ನು ಹಾಗೂ ಕ್ಷೇತ್ರಗಳನ್ನು ರಕ್ಷಿಸಬೇಕು ಎನ್ನುವ ಕರ್ತವ್ಯಪ್ರಜ್ಞೆ ಕಳಚಿಬಿತ್ತು! ಈ ಧರ್ಮಯುದ್ಧವು ‘ಸತ್ಯಧರ್ಮಗಳ ಪುನಃ ಸಂಸ್ಥಾಪನೆಗಾಗಿ’ ಎನ್ನುವುದನ್ನು ಮರೆತು, ಅದು ‘ತನ್ನೊಬ್ಬನ ಇಷ್ಟಾನಿಷ್ಟದ ವಿಷಯ’ ಎಂಬಂತೆ ಆಲೋಚಿಸತೊಡಗಿದ!
“ಸ್ವಜನರಾದ ಕೌರವಾದಿಗಳು ನನಗೆ ಘಾಸಿ ಮಾಡಿದ್ದರೂ ಪರವಾಗಿಲ್ಲ, ನಾನು ಇವರನ್ನು ಕೊಲ್ಲುವ ‘ಪಾಪ’ ಮಾಡಲಾರೆ…..” ಎಂದು ಬೇರೆ ಹೇಳುತ್ತಿದ್ದಾನೆ! ಅಲ್ಲ! ದುಷ್ಟರನ್ನು ಶಿಕ್ಷಿಸದೇ ಬಿಟ್ಟುಬಿಟ್ಟರೆ ಸಮಾಜದಲ್ಲಿ ದೌಷ್ಟ್ಯಕ್ಕೆ ಬೆಂಬಲ ಕೊಟ್ಟಂತಾಗುವುದಿಲ್ಲವೆ? ಮುಗ್ಧಜನರಲ್ಲಿ ಶಾಶ್ವತಭೀತಿ-ಅಸುರಕ್ಷೆಗಳನ್ನು ಬಿತ್ತಿದಂತಾಗುವುದಿಲ್ಲವೆ? ಶಿಕ್ಷೆಯ ಭೀತಿಯಿಂದಾದರೂ ಸುಮ್ಮನಿರುವ ದುಷ್ಟರು ಮತ್ತಷ್ಟು ಕುಕಾರ್ಯಗಳನ್ನು ಮಾಡಹತ್ತುವುದಿಲ್ಲವೆ? ’ತನ್ನವರು’ ಎಂದು ನಾಲ್ಕು ಜನ ಕುಕರ್ಮಿಗಳನ್ನು ಇವತ್ತು ಕ್ಷಮಿಸಿ ಬಿಟ್ಟುಬಿಡಬಹುದು. ಆದರೆ ಅದೇ ಕುಕರ್ಮಿಗಳು ನಾಳೆ ನೂರಾರು ಜನರ ಸಾವುನೋವುಗಳಿಗೆ ಕಾರಣವಾದರೆ ಅದಕ್ಕೆ ಯಾರು ಹೊಣೆ?’ ಬಲವಿದ್ದವನು ಗೆಲ್ಲುತ್ತಾನೆ, ಇಲ್ಲದವನು ಮಣ್ಣು ಮುಕ್ಕಬೇಕು’ ಎಂಬ ಪೈಶಾಚಿಕನೀತಿ ಮೊದಲಾಗುವುದಿಲ್ಲವೆ? ವೈಯಕ್ತಿಕವಾಗಿ ಅಪ್ರಿಯವೆನಿಸಿದರೂ ಪರವಾಗಿಲ್ಲ, ಸಾರ್ವತ್ರಿಕ ಹಿತವನ್ನು ಸಾಧಿಸುವಂತಹ ಕೆಲಸಕ್ಕೇ ಮುಂದಾಗಬೇಕು ಎನ್ನುವ ಸನಾತನ-ನೀತಿ ಅರ್ಜುನನಿಗೆ ತಿಳಿದಿಲ್ಲವೆ?
ತಿಳಿದಿತ್ತು ! ಆದರೆ ಮೋಹಪಾರವಶ್ಯದಲ್ಲಿ ಅದು ಮನಃಪಟಲದಿಂದ ಮರೆಯಾಗಿತ್ತು ಅಷ್ಟೆ! ಅಪ್ರಿಯವೆನಿಸಿದಾಕ್ಷಣ, ಕರ್ತವ್ಯವೇ ‘ಪಾಪ’ ‘ನೀಚಕಾರ್ಯ’ ಎಂದೆನಿಸಲಾರಂಭಿಸಿತ್ತು! ‘ಸ್ವಜನ’ರೆಂಬ ಒಂದೇ ಕಾರಣಕ್ಕಾಗಿ ದುಷ್ಟರೂ ದಂಡ್ಯರೂ ಕೂಡ ‘ಕ್ಷಮಾರ್ಹ’ರೆನಿಸಿಬಿಟ್ಟರು! ಇದು ಹೇಗಾಯಿತೆಂದರೆ ಪೋಲೀಸ್ officer ಒಬ್ಬನು ಭಯಂಕರ ಪಾಪಗಳನ್ನು ಮಾಡಿರುವ ಆತಂಕವಾದಿಯನ್ನು ಸೆರೆಹಿಡಿದು ತಂದಿದ್ದಾನೆ ಎಂದಿಟ್ಟುಕೊಳ್ಳಿ. ಆದರೆ ನೋಡಿದರೆ ಆತ ತನ್ನ ಸಂಬಂಧಿಕರ ಹುಡುಗ! ಶಿಕ್ಷೆ ವಿಧಿಸುವ ಮುಹೂರ್ತ ಬಂದಾಗ ದುಃಖತಪ್ತನಾಗಿ “ಅಯ್ಯೋ, ಇವನು ನನ್ನ ಸಂಬಂಧಿಕ, ನನ್ನ ಮತದವನು, ನನ್ನ ಊರಿನವನು, ಇವನನ್ನ ಕೊಲ್ಲುವುದು ಪಾಪವಲ್ಲವೆ?” ಎಂದು ಗೋಳಿಟ್ಟಂತೆ! ’ಅಪರಾಧಿ ಸಂಬಂಧಿಕನಲ್ಲದಿದ್ದರೆ ಆಗ ಶಿಕ್ಷೆ ಮಾಡಬಹುದು, ಸಂಬಂಧಿಕನಾಗಿದ್ದರೇ ಬಿಟ್ಟುಬಿಡಬೇಕು!” ಇದು ಯಾವ ಸೀಮೆ ನ್ಯಾಯ?
ಕೌರವರ ವಿಷಯದಲ್ಲಿ ‘ಸಾಮ-ದಾನ-ಭೇದೋಪಾಯಗಳೆಲ್ಲ ವಿಫಲವಾದ ಮೇಲೆಯೇ ದಂಡೋಪಾಯಕ್ಕೆ ಇಳಿದಿದ್ದು ಎನ್ನುವುದು ಅರ್ಜುನನಿಗೆ ಗೊತ್ತು. ಆದರೆ ಮೋಹ ಕವಿದಾಗ, ಎಂತಹ ಧೀರನೂ ಮೂಢನಾಗಿಬಿಡುತ್ತಾನೆ ! ತನ್ನಲ್ಲಿ ಮೂಡಿರುವ ಮನೋದೌರ್ಬಲ್ಯವನ್ನು ’ಕ್ಷಮಾಶೀಲತೆ’, ’ಕರುಣಾಭಾವ’ ಎಂದೂ ಸಮರ್ಥಿಕೊಳ್ಳಲು ಮುಂದಾಗುತ್ತಾನೆ ಅರ್ಜುನ! ಕೌರವರನ್ನು ಕ್ಷಮಿಸಿ ‘ಕರುಣೆ ಔದಾರ್ಯ’ಗಳನ್ನು ಪ್ರದರ್ಶಿಸುವ ಮಾತನ್ನಾಡುತ್ತಾನೆ ! ಇದನ್ನೇ ಡಿವಿಜಿರವರು ‘ಪ್ರಾಕೃತಕಾರುಣ್ಯ’ ಎಂದು ಹೆಸರಿಸುತ್ತಾರೆ. ಇದು ಪ್ರಜ್ಞಾಪೂರ್ಣವಾದ ಕಾರುಣ್ಯವಲ್ಲ, ಮೋಹದ ದೆಸೆಯಿಂದ ಹುಟ್ಟಿದ ಭಾವ ವೈಪರೀತ್ಯ- ಅದನ್ನು ಸಮರ್ಥಿಸಿಕೊಳ್ಳುವಾಗ ಮನುಷ್ಯನ ವಿಕೃತಬುದ್ಧಿಯು ‘ಕರುಣೆ’ ‘ತ್ಯಾಗ’ ಮೊದಲಾದ ಸಾತ್ವಿಕಭಾವಗಳ ಮುಖವಾಡವನ್ನು ಬಳಸುತ್ತದೆ.
ಮೋಹವಶನಾದ ಅರ್ಜುನನು ’ವಿದ್ವತ್ಪೂರ್ಣವಾದ ವಾದ’ಕ್ಕೂ ಮೊದಲಾಗುತ್ತಾನೆ- ‘ಕೃಷ್ಣ! ಯುದ್ಧದಿಂದಾಗಿ ಪ್ರಾಣಹಾನಿ, ಕುಲಕ್ಷಯ, ಕುಲಧರ್ಮದ ನಾಶ, ತನ್ಮೂಲಕ ಕುಲನಾರಿಯರ ನೈತಿಕಪತನ, ವರ್ಣಸಂಕರ ಮೊದಲಾದವು ಒಂದರ ಹಿಂದೆ ಒಂದು ಉಂಟಾಗಿ ಧರ್ಮಕರ್ಮಗಳು ಚ್ಯುತವಾಗಿ ಪಿತೃಗಳು ಪತನವಾಗುತ್ತಾರೆ, ಎಲ್ಲರೂ ನರಕಕ್ಕೆ ಹೋಗುವಂತಾಗುತ್ತದೆ—‘ ಹೀಗೆ ಸಾಗುತ್ತದೆ ಆತನ ತರ್ಕಬದ್ಧ ವಾದಸರಣಿ. ಅರ್ಜುನನ ವಾದ ಮೇಲ್ನೋಟಕ್ಕೆ ಸಮಂಜಸವಾಗಿಯೂ ತೋರುತ್ತದೆ, ಆದರೆ ಇದನ್ನೆಲ್ಲ ಆತ ಹೇಳುವಾಗ ದುಃಖಭ್ರಾಂತನಾಗಿ ನಡುಗುತ್ತ, ಗೋಳಿಡುತ್ತ, ಅಳುತ್ತ ಹೇಳಿದ್ದನ್ನು ಗಮನಿಸಿ- ಸತ್ಯವನ್ನು ಎದುರಿಸಲಾಗದವನ ಸ್ಪಷ್ಟಲಕ್ಷಣಗಳವು ! ಅದು ಅವನ ‘ನಿಶ್ಚಯ’ವಲ್ಲ, ಅದು ಆತನ ಮತಿಯಲ್ಲುಂಟಾದ ‘ಗೊಂದಲ’ ! ಮಾಡಬೇಕಾದದ್ದು ಏನು ಅಂತ ಆತನಿಗೆ ಗೊತ್ತು. ಆದರೆ ಮಾಡುವ ’ಮನಸ್ಸಿಲ್ಲ’! ‘ಕರ್ತವ್ಯವನ್ನು ಮಾಡಲೇಬೇಕು ಎಂದು ಆತನ ಅಂತರ್ವಾಣಿ ನಿರ್ದೇಶಿಸುತ್ತಲೇ ಇದೆ. ಆದರೆ ’ತನ್ನವರನ್ನು’ ಶಿಕ್ಷಿಸುವುದು ಬೇಡ, ಬಿಟ್ಟುಬಿಡು’ ಎಂದು ಮಮಕಾರವು ಭುಗಿಲೆದ್ದು ಕೂಗಾಡುತ್ತಿದೆ. ಆ ಮಮಕಾರದ ಕೂಗಾಟದ ಭರದಲ್ಲಿ, ತನ್ನೊಳಗಿನ ಶಾಂತ-ನಿರ್ವಿಕಾರ ಧರ್ಮರ್ವಾಣಿಯು ಸರಿಯಾಗಿ  ಕೇಳಿಸದೆ ಹೋಯಿತು. ಕೊನೆಗೆ ಧರ್ಮಪ್ರಜ್ಞೆಯು ನಾಶವಾಗಿ ಮಮಕಾರವೇ ಮೇಲ್ಗೈ ಸಾಧಿಸಿತು.
ಅರ್ಜುನನು “ಅಯ್ಯೋ ನನ್ನಿಂದಾಗದು ಕೃಷ್ಣ! ನಿಶ್ಶಸ್ತ್ರನಾದ ನನ್ನನ್ನೇ ಆ ಕೌರವರೆಲ್ಲಕೊಲ್ಲಲಿ, ಅದೇ ವಾಸಿ ಅನಿಸುತ್ತಿದೆ..!” ಎಂದು ಅಳಲುತ್ತ ಬಿಲ್ಲುಬಾಣಗಳನ್ನು ಕೈಬಿಟ್ಟು ಶೋಕತಪ್ತಮನಸ್ಕನಾಗಿ ರಥದ ಹಿಂಭಾಗದಲ್ಲಿ ಕುಸಿದು ಕುಳಿತುಬಿಟ್ಟ.

ಡಾ ಆರತೀ ವಿ ಬಿ

ಕೃಪೆ : ವಿಜಯವಾಣಿ

Leave a Reply