ಬದುಕಿಗೆ ಭಗವದ್ಗೀತೆ – ಅನಿವಾರ್ಯವಾದದ್ದನ್ನು ಸಹಿಸಿಕೋ ಪಾರ್ಥ !

ಬದುಕಿಗೆ ಭಗವದ್ಗೀತೆ – ಅನಿವಾರ್ಯವಾದದ್ದನ್ನು ಸಹಿಸಿಕೋ ಪಾರ್ಥ !

“ಪರಿವರ್ತನಶೀಲವಾದ ಜಗತ್ತಿನ ಆಗುಹೋಗುಗಳ ಬಗೆಗೂ ಜನ್ಮಮರಣಗಳ ಬಗೆಗೂ ಪಂಡಿತನು ಹಿಗ್ಗದೆ ಕುಗ್ಗದೇ ಶಾಂತನಾಗಿರುತ್ತಾನೆ” ಎಂಬ ಮಾತನ್ನು ಶ್ರೀಕೃಷ್ಣನು ಹೇಳಿದ್ದನ್ನು ನೋಡಿದ್ದೇವೆ. ಮುಂದುವರೆಸುತ್ತಾನೆ- ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ I ಆಗಮಾಪಾಯಿನೋಽನಿತ್ಯಾಂಸ್ತಾಂಸ್ತಿತಿಕ್ಷಸ್ವ ಭಾರತ II (ಹೇ ಕೌಂತೇಯ, ಶೀತ-ಉಷ್ಣ-ಸುಖ-ದುಃಖ ಮುಂತಾದ ಅನುಭವಗಳೆಲ್ಲ ಇಂದ್ರಿಯಗಳ ಸಂಪರ್ಕಕ್ಕೆ ಬರುವಂತಹವು. ಇವು ಬಂದು ಹೋಗುತ್ತಲೇ ಇರುತ್ತವೆ. ಅವುಗಳನ್ನು ಸಹಿಸಿಕೋ.)
ಇಲ್ಲಿ ಶ್ರೀಕೃಷ್ಣನು ಎರಡು ಅಂಶಗಳನ್ನು ಮುಂದಿಡುತ್ತಿದ್ದಾನೆ- ಒಂದು- ಮಾತ್ರಾಸ್ಪರ್ಶಾಶೀತೋಷ್ಣಸುಖದುಃಖದಾಃ ಮತ್ತೊಂದು- ಆಗಮಾಪಯಿನಃ ಅನಿತ್ಯಾಃ .
ಮಾತ್ರಾಸ್ಪಶಾಃ……… – ವಸ್ತುತಃ ಈ ಶೀತೋಷ್ಣ-ಸುಖ-ದುಃಖಾದಿ ಅನುಭವಗಳು ಆಗುತ್ತಿರುವುದು ಯಾರಿಗೆ? ನಮ್ಮ ‘ಇಂದ್ರಿಯಗಳಿಗೆ’. ಅವುಗಳಲ್ಲೇ ಹರಿದಾಡುವ ಮನೋಬುದ್ಧಿಗಳಿಗೆ. ನಮ್ಮ ’ಆತ್ಮಸ್ವರೂಪ’ಕ್ಕಲ್ಲ. ನಮ್ಮ ವ್ಯಕ್ತಿತ್ವವು ಕೇವಲ ‘ದೇಹ’ಕ್ಕೆ ಸೀಮಿತವಲ್ಲ, ಅದರೊಳಗೆ ಮನೋ-ಬುದ್ಧಿ-ಪ್ರಾಣ-ಆನಂದತತ್ವಗಳ ಸೂಕ್ಷ್ಮತರ ಪದರಗಳೂ ಇವೆ. ಈ ಎಲ್ಲ ಪದರಗಳ ಅತ್ಯಂತ ಒಳಗಿನೊಳಗೆ ಇರುವುದು ನಮ್ಮ ಶುದ್ಧ-ನಿರ್ವಿಕಾರ ಆತ್ಮತತ್ವ. ಇದು ನಮ್ಮ ವ್ಯಕ್ತಿತ್ವದ ಮೂಲ(core), ಅಸ್ತಿತ್ವದ ಸಾರ. ಇದಕ್ಕೆ ಸುಖ-ದುಃಖ-ಜನ್ಮ-ಮರಣಾದಿ ವಿಕಾರಗಳಿಲ್ಲ. ಇದು ಸದಾ ಸತ್ಯ-ಜ್ಞಾನ-ಆನಂದಗಳ ನೆಲೆಯಾಗಿದೆ. ಆದರೆ ಮೇಲಿನ ಪದರಗಳಾದ ದೇಹ-ಪ್ರಾಣ-ಮನೋ-ಬುದ್ಧಿಗಳು ಹೊರಜಗತ್ತಿನ ಸಂಪರ್ಕದಿಂದ ಸುಖದುಃಖಗಳನ್ನು ಅನುಭವಿಸುತ್ತವೆ. ದೇಹವೇ ‘ನಾನು’ ಎಂಬ ಭ್ರಮೆ ಇಲ್ಲೇ ನೆಲೆಯೂರುವುದು. ಅದಕ್ಕೆ ಸಂಬಂಧಿಸಿದಂತೆ ವರ್ಣ-ಲಿಂಗ-ಕುಲ-ಸ್ಥಾನ-ಮಾನಾದಿಗಳ ಅಸ್ಮಿತೆಯೂ ಬಲವಾಗುತ್ತದೆ. ಈ ಭಾವವಿಕಾರಗಳೇ ಅಸಂಖ್ಯ ’ವಾಸನೆ’ಗಳಾಗಿ (imprints) ಬಲವಾಗುತ್ತವೆ. ಇದೇ ವಾಸನೆಗಳಿಗೆ ವಶವಾಗಿ ನಮ್ಮ ಮನೋಬುದ್ಧಿಗಳಲ್ಲಿ ಭಾವನೆಗಳು ವಿಚಾರಗಳು ಅನಿಯಂತ್ರಿತವಾಗಿ ಕುಣಿದಾಡುತ್ತವೆ! ಆದರೆ ಇದೆಲ್ಲದರ ಒಳಗೆ ’ಸುಮ್ಮನಿರುವ ‘ಆತ್ಮ’ವು ಯಾವುದಕ್ಕೂ ಸ್ಪಂದಿಸದೆ ತನ್ನ ಸತ್ಯಜ್ಞಾನಾನಂದಗಳಲ್ಲಿ ತನ್ಮಯವಾಗಿರುತ್ತದೆ. ಈ ಶಿತೋಷ್ಣಸುಖದುಃಖಾದಿಗಳು ನಮ್ಮ ಪಂಚತನ್ಮಾತ್ರೆಗಳಿಗೆ ಆಗುವ ಅನುಭವಗಳಷ್ಟೆ ಹೊರತು ನಮ್ಮ ಆತ್ಮಸ್ವರೂಪಕ್ಕಲ್ಲ, ಹಾಗಾಗಿ ಈ ಮನೋಬುದ್ಧಿಗಳ ಭಾವನಾವಿಕಾರವನ್ನು ನಿಯಂತ್ರಿಸಿದರೆ ಸಾಕು ಈ ಗೊಂದಲ ಮಾಯವಾಗುತ್ತದೆ ಎನ್ನುವುದು ಕೃಷ್ಣನ ನಿರ್ದೇಶ.
ಆಗಮಾಪಯಿನಃ –ಸುಖದುಃಖಾದಿ ಅನುಭವಗಳು ಬಂದು ಹೋಗುವ ಸ್ವಭಾವದವು. ಕಂಗಾಲಾಗಿ ಹೌಹಾರಿದರೆ, ಭಾವುಕರಾಗಿ ಅತ್ತರೆ ಪರಿಸ್ಥಿತಿಗಳೆಲ್ಲ ನಮಗೆ ಅನೂಕೂಲಕರವಾಗಿ ನಡೆದಾವೆ? ಹೇಳಲಾಗದು! ಆದರೆ ನಮ್ಮ ಮನಸ್ಸಂತೂ ಕೆಡುತ್ತದೆ! ಈ ಜಗತ್ತಿನ ಪರಿವರ್ತನಶೀಲ ಸ್ವರೂಪವನ್ನು ಅರ್ಥಮಾಡಿಕೊಂಡರೆ, ಒಂದು ಲಾಭವಿದೆ. ಅದೇನೆಂದರೆ – ನಮ್ಮ ಮನಸ್ಸು-ಬುದ್ಧಿಗಳು ಶಾಂತವಾಗುತ್ತವೆ. ಆಲೋಚನಾ ಧಾಟಿ ಸ್ಥಿರವಾಗುತ್ತದೆ.
ಜೀವನದಲ್ಲಿ ನಿರೀಕ್ಷಿತವೋ ಅನಿರೀಕ್ಷಿತವೋ ಆದ ಲಾಭವೂ ಆಗುತ್ತದೆ ನಷ್ಟವೂ ಆಗುತ್ತದೆ. ಲಾಭವಾದಾಗ ಅದೇ ‘ಶಾಶ್ವತಸಿದ್ಧಿ’ ಎಂಬಂತೆ ಹಿಗ್ಗುವುದು ಬಾಲಿಶ-ಬುದ್ಧಿ, ಅಂತೆಯೇ ಯಾವುದೋ ವ್ಯಕ್ತಿ-ವಸ್ತು-ಭೋಗ-ಸಂಬಂಧ-ಅವಕಾಶಾದಿಗಳನ್ನು ಕಳೆದುಕೊಂಡಾಗ “ನನ್ನ ಜೀವನವೇ ಅರ್ಥಹೀನವಾಯಿತು!!” ಎಂದು ಕುಗ್ಗಿಹೋಗುವುದೂ ಮೂರ್ಖತನದ ಪರಮಾವಧಿ! ಸಿಗುವುದು ಬಿಡುವುದೂ ಜೀವನದ ಆಟ. ಆದರೆ ತನ್ಮಧ್ಯೆ ನಮ್ಮ ಮನೋಬುದ್ಧಿಗಳು ಕಲಿಯುವುದು ಮಾತ್ರ ಅತ್ಯಂತ ಅಮೂಲ್ಯವಾದ ಪಾಠ! ಈ ಪಾಠವನ್ನು ಕಲಿತು ಜಾಣರಾಗಿ, ನಮ್ಮೊಳಗಿನ ವಿಕಾಸದತ್ತ ಗಮನಹರಿಯಿಸಬೇಕು ಎನ್ನುವುದು ಇಲ್ಲಿನ ಸೂಚನೆ.
ಜೀವನದ ಅನುಭವ Gaint Wheelನಲ್ಲಿ ಕುಳಿತಂತೆ- ಮೇಲೇರುವಾಗ Thrill ಇರುತ್ತದೆ! ಅಂತೆಯೇ ಕೆಳಗಿಳಿಯುವಾಗ ತಲೆಸುತ್ತಿ ಹೊಟ್ಟೆತೊಳಸಿದಂತಾಗುತ್ತದೆ! ಅದರಲ್ಲಿ ಕುಳಿತು ಸುತ್ತುತ್ತಿರುವ ತನಕವೂ ಈ ಅನುಭವ ತಪ್ಪದು?! ಅಂತೆಯೇ ಹುಟ್ಟು-ಸಾವು-ಸುಖ-ದುಃಖಗಳಲ್ಲಿ ಹಾಯುತ್ತಿರುವುದೇ ಜೀವನ! ಇದರ ಬಗ್ಗೆ ಅನೈಜ ಕನಸುಗಳನ್ನು ಕಟ್ಟಿಕೊಳ್ಳದೇ ‘ಇದ್ದದ್ದನ್ನು ಇದ್ದಂತೆ ಸ್ವೀಕರಿಸುವುದೇ’ ಜಾಣತನ, ಅದು ಸಾಧ್ಯವಾಗುವುದು ಪಕ್ವಮತಿಯಾದ ’ಪಂಡಿತ’ನಿಗೆ ಮಾತ್ರ. ಮಿಕ್ಕೆ ಬದ್ಧಜೀವಿಗಳು ಈ ಅನುಭವಗಳ ಮಧ್ಯದಲ್ಲೂ ಕಾಲ್ಪನಿಕವಾದ ‘ಶಾಶ್ವತ ಸುಖ’ವನ್ನು ಅರಸಿ ಅರಸಿ ದಣಿಯುತ್ತಲೇ ಇರುತ್ತಾರೆ!
ಸ್ವಭಾವತಃ ಪರಿವರ್ತನಶೀಲವಾದ, ಚಕ್ರದಂತೆ ಪರಿವರ್ತಿಸುವ ಜೀವನಕ್ಕೆ ಇಳಿದಾದ ಮೇಲೆ ಇಲ್ಲಿನ ಸವಾಲುಗಳನ್ನು ಎದುರಿಸದಿದ್ದರೆ ಹೇಗೆ? Obstacle Raceಗೆ ಇಳಿದ ಮೇಲೆ “ಅಯ್ಯೋ! ನನ್ನ ಹಾದಿಯಲ್ಲಿ ಇಷ್ಟೊಂದು ಅಡೆತಡೆಗಳು ಏಕಿವೆ?” ಎಂದು ಅಳುತ್ತ ಕೂತರೆ ಅದು ಹಾಸ್ಯಾಸ್ಪದವಲ್ಲವೆ? ಜೀವನದ ‘ಓಟ’ವನ್ನು ಪ್ರಾರಂಭಿಸಿಯಾಯಿತು, ಓಡೂತ್ತಲೋ, ನಡೆಯುತ್ತಲೋ, ಕುಂಟುತ್ತಲೋ ತೆವಳುತ್ತಲೋ —- ಹೇಗಾದರೂ ಸರಿ Race ಮುಗಿಸದೇ ಬೇರೆ ದಾರಿಯಿಲ್ಲ.
ಅನಿತ್ಯಾಃ= ಜೀವನದಲ್ಲಿ ನಮ್ಮ ಒಳಹೊರಗೂ ಬದಲಾವಣೆಗಳು ಅನಿಶ್ಚಿತವಾದ ಗತಿ-ವಿನ್ಯಾಸಗಳಲ್ಲಿ ಆಗುತ್ತಲೇ ಇರುತ್ತವೆ. ‘ಹೀಗೇ ಆದೀತು’, ‘ಹೀಗಾಗಲಾರದು’ ಎಂದೆಲ್ಲ ಸೃಷ್ಟಿಯ ನೀತಿಯನ್ನು, ವಿಧಿಯ ರೀತಿಯನ್ನು ಊಹಿಸಲೂ ಆಗದು! ಹಾಗಾಗಿಯೇ ಅದಕ್ಕೆ ಹೆಸರು ‘ಅನಿತ್ಯ’ ಎಂದು. ಹೀಗೆ ನಮ್ಮ ಕೈಯಲ್ಲಿಲ್ಲದ ಘಟನಾವಳಿಗೆ ನಾವೇಕೆ ಕೊರಗಬೇಕು? ಬಂದದ್ದನ್ನು ಎದುರಿಸಿ ನಮ್ಮ ಪಾಲಿನ ಧರ್ಮಕರ್ಮಗಳನ್ನು ನೆರವೇರಿಸಿ ಕೃತಕೃತ್ಯರೆನಿಸಬೇಕು. ಅದು ಜಾಣ್ಮೆ! 
‘ಅನಿತ್ಯವೂ ಅನಿವಾರ್ಯವೂ ಪರಿವರ್ತನಶಿಲವೂ ಆದ ಜೀವನಾನುಭವಗಳಿಗೆ ಆತಂಕಪಡುವೆಯೇಕೆ? ಸಹಿಸಿಕೊ!” ಎಂದು ದೃಢವಾಗಿ ನುಡಿಯುತ್ತಾನೆ ಶ್ರೀಕೃಷ್ಣ! ಆಹಾ ಈ ಮಾತುಗಳು ಎಲ್ಲಕಾಲಕ್ಕೂ ಎಷ್ಟು ಸರಿ ಅಲ್ಲವೆ?
ಡಾ ಆರತೀ ವಿ ಬಿ

ಕೃಪೆ : ವಿಜಯವಾಣಿ

Leave a Reply