ಬದುಕಿಗೆ ಭಗವದ್ಗೀತೆ – ನಿಜವಾದ ಪಂಡಿತನು ಹೇಗೆ ಆಲೋಚಿಸುತ್ತಾನೆ?

ಬದುಕಿಗೆ ಭಗವದ್ಗೀತೆ –  ನಿಜವಾದ ಪಂಡಿತನು ಹೇಗೆ ಆಲೋಚಿಸುತ್ತಾನೆ?

“ಅರ್ಜುನ, ನೀನು ಪಂಡಿತನ  ’ಧಾಟಿ’ಯಲ್ಲಿ ಮಾತನಾಡುತ್ತಿದ್ದೀಯೆ. ಆದರೆ ಶೋಕಿಸಬಾರದ ವಿಚಾರದಲ್ಲಿ ಶೋಕಪಡುವ ಬಾಲಿಷ ಬುದ್ಧಿಯನ್ನು ತೋರುತ್ತಿದ್ದೀಯೆ. ನಿಜವಾದ ಪಂಡಿತನು ಶೋಕಿಸುವುದಿಲ್ಲ” ಎಂಬ ಮಾತನ್ನು ಶ್ರೀಕೃಷ್ಣನು ಹೇಳಿದ್ದನ್ನು ಕಳೆದವಾರ ನೋಡಿದೆವು. ಹಾಗಾದರೆ ನಿಜವಾದ ಪಂಡಿತನ ಆಲೋಚನೆಯ ಧಾಟಿ ಹೇಗಿರುತ್ತದೆ?
ಅದನ್ನೇ ಕೃಷ್ಣನು ಮುಂದಿಡಲಾರಂಭಿಸುತ್ತಾನೆ- “ನ ತ್ವೇವಾಹಂಜಾತುನಾಸಂ ನ ತ್ವಂನೇಮೇಜನಾಧಿಪಾಃ I
ನ ಚೈವ ನ ಭವಿಷ್ಯಾಮಃ ಸರ್ವೇ ವಯಮತಃಪರಮ್ II ದೇಹಿನೋಽಸ್ಮಿನ್ಯಥಾದೇಹೇ ಕೌಮಾರೇಯೌವನೇ ತಥಾ I ತಥಾ ದೇಹಾಂತರ ಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ II”– (ಹೇ ಅರ್ಜುನ, ನಾನಾಗಲಿ ನೀನಾಗಲಿ ಈ ರಾಜರುಗಳಾಗಲಿ ’ಇರಲಿಲ್ಲ’ ಎಂಬುದೇ ಇಲ್ಲ. ಅಂತೆಯೇ ಮುಂದೆ ’ಇರುವುದಿಲ್ಲ’ ಎಂಬುದೂ ಇಲ್ಲ. ಈ ಕೌಮಾರ್ಯ, ಯೌವನ ಹಾಗೂ ವೃದ್ಧಾಪ್ಯಗಳು ಹಾಗೂ ’ದೇಹಾಂತರ ಪ್ರಕ್ರಿಯೆಯು (ಒಂದು ದೇಹವನ್ನು ಬಿಟ್ಟು ಮತ್ತೊಂದು ದೇಹವನ್ನು ತಳೆಯುವುದು / ಜನ್ಮ ಮರಣಗಳು) ’ದೇಹಿ’ಗಳಾದ (ದೇಹವನ್ನು ಹೊಂದಿರುವ) ನಾವು ಇರುವಂತಹ ಈ ’ದೇಹ’ಕ್ಕೆ ಮಾತ್ರ ಆಗುವ ವಿಕಾರಗಳು. ಧೀರನಾದವನು ಈ ವಿಚಾರದಲ್ಲಿ ಮೋಹಕ್ಕೆ ಒಳಪಡುವುದಿಲ್ಲ’) ಕೃಷ್ಣನ ಮಾತು ಸುಸ್ಪಷ್ಟ-    ‘ಧೀರನಾದವನು ಜನ್ಮ-ಮರಣ-ಸುಖ-ದುಃಖಗಳ ವಿಚಾರದಲ್ಲಿ ಮೋಹವಶನಾಗುವುದಿಲ್ಲ’. ಯಾರ “ಧೀ” (ಪ್ರಜ್ಞೆ) ಸತ್ವಸಂಪನ್ನವೂ ದೃಢವೂ ಆಗಿರುತ್ತದೋ ಅಂತಹವನು “ಧೀರ”. ಇಲ್ಲಿ ‘ಧೀರ’ ಶಬ್ದಕ್ಕೆ ಕಾಳಿದಾಸನು ಕೊಟ್ಟ ಲಕ್ಷಣ ಸ್ಮರಣೀಯ- “ವಿಕಾರಹೇತೌ ಸತಿವಿಕ್ರಿಯಂತೇ ಏಷಾಂ ನ ಚೇತಾಂಸಿ ಸ ಎವಧೀರಃ” (ಕುಮಾರಸಂಭವ ಮಹಾಕಾವ್ಯ) ವಿಕಾರಗೊಳಿಸುವ (ದೇಹ-ಮನೋ-ಬುದ್ಧಿಗಳಲ್ಲಿ ಭಯ-ಆತಂಕ-ಹಿಗ್ಗುವಿಕೆ-ಕುಗ್ಗುವಿಕೆ ಇತ್ಯಾದಿ) ಪ್ರಭಾವವುಳ್ಳ ವಸ್ತುವೋ ವ್ಯಕ್ತಿಯೋ ಸಂದರ್ಭಗಳೋ ಕಣ್ಮುಂದೆಯೇ ಬಂದೊದಗಿದರೂ, ಯಾರ ಚಿತ್ತವು ಗಲಿಬಿಲಿಗೊಳ್ಳುವುದಿಲ್ಲವೋ, ಅಂತಹವನೇ ’ಧೀರ’. ಧೀರಃತತ್ರ ನ ಮುಹ್ಯತಿ- ಧೀರನು ಈ ಲೋಕದಲ್ಲಿ ನಿರಂತರವೂ ಉಂಟಾಗುತ್ತಿರುವ ಬಾಲ್ಯ-ಯೌವನ-ವಾರ್ಧಕ್ಯಾದಿಗಳ ಹಾಗೂ ಜನ್ಮಮರಣ ಪ್ರಕ್ರಿಯೆಗಳನ್ನು ಶಾಂತವಾಗಿ ಗಮನಿಸಿಸುತ್ತಾನೆ, ‘ಇದು ಸೃಷ್ಟಿಯ ಸಹಜ ಪ್ರಕ್ರಿಯೆ’ ಎಂಬ ಅರಿವನ್ನು ತಾಳುತ್ತಾನೆ, ಈ ಆಗುಹೋಗುಗಳಿಗೆ ಭಾವುಕನಾಗಿ ಅತಿಶಯವಾಗಿ ಪ್ರತಿಕ್ರಿಸುವುದಿಲ್ಲ. ಹೀಗೆ ‘ನಿಜವಾದ ಪಂಡಿತನ’ ಆಲೋಚನೆಯ ನೆಲೆಯ ಔನ್ನತ್ಯವೇನು ಎನ್ನುವುದನ್ನು ಅರ್ಜುನನಿಗೆ ಅರ್ಥೈಸುತ್ತಾನೆ ಶ್ರೀಕೃಷ್ಣ. ಅರ್ಜುನನಿಗೆ ತಾನಿರುವ ಭಾವುಕತೆಯ ಗೊಂದಲದ ಸ್ಥಿತಿಯೆಂತಹದ್ದು, ಶಾಂತ ಸಮಚಿತ್ತದ ಪಂಡಿತನ ಅರಿವಿನ ನೆಲೆ ಎಂತಹದ್ದು ಎನ್ನುವ ವ್ಯತ್ಯಾಸ ಸ್ಪಷ್ಟವಾಗುವಂತೆ ದೃಢವಾಗಿ ನುಡಿಯುತ್ತಾನೆ.
’ನಾನೇ ದೇಹ’ ಎಂಬ ಭ್ರಾಂತಿಯಲ್ಲಿರುವ ಸಾಮಾನ್ಯರು ಆಲೋಚಿಸುವ ಧಾಟಿಯೇ ಬೇರೆ! ಮನೋಬುದ್ಧಿಗಳು ವಿವೇಕದಿಂದ ಪಕ್ವವಾಗದಿರುವ ಕಾರಣ ಅವರು ಜೀವನದ ಆಗುಹೋಗುಗಳ ಬಗ್ಗೆ ತಮ್ಮ ಮನದಲ್ಲಿ ಎದ್ದೆದ್ದು ಬೀಳುವ ಸುಖದುಃಖಗಳಿಗೆ ಅತಿಯಾದ ಪ್ರಾಮುಖ್ಯತೆ ಕೊಡುತ್ತಾರೆ. ಈ ಬಾಲ್ಯ-ಯೌವನ-ವಾರ್ಧಕ್ಯಗಳಿಗೂ ಹುಟ್ಟುಸಾವುಗಳಿಗೂ ಹಿಗ್ಗುತ್ತ ಕುಗ್ಗುತ್ತ ಹೆದರಿ ಹೌಹಾರುತ್ತ ಭಾವುಕರಾಗಿ ಪ್ರತಿಕ್ರಿಯಿಸುತ್ತಾರೆ! ಹುಟ್ಟಿನ ಬಗ್ಗೆ ಎಂತಹ ವ್ಯಾಮೋಹವೆಂದರೆ ಅದಕ್ಕೆ ಸಂಬಂಧಿಸಿದಂತೆ ಲಿಂಗ-ವರ್ಣ-ಕುಲ-ಅಂತಸ್ತು-ರೂಪ-ಗುಣ-ವಿದ್ಯೆ- ದೇಶ-ಕಾಲಗಳ identityಯ ಬಗ್ಗೆ ಅತಿಶಯವಾದ ಮಮಕಾರವನ್ನು ಹೊಂದುತ್ತಾರೆ. ಜೀವನವೆಲ್ಲ ಆ ಅಸ್ಮಿತಾಭಾವವನ್ನೇ ಪೋಷಿಸಿಕೊಳ್ಳುತ್ತ ಇದ್ದುಬಿಡುತ್ತಾರೆ! ’ನನ್ನವರನ್ನೂ’ ’ನನ್ನವುಗಳನ್ನೂ’ ಬಿಟ್ಟುಹೋಗಬೇಕಲ್ಲ!’ ಎಂಬ ವ್ಯಥೆಯಿಂದ ಸಾವಿನ ಬಗ್ಗೆಯೂ ವಿಪರೀತವಾದ ಭಯವನ್ನೂ ಬೆಳೆಸಿಕೊಳ್ಳುತ್ತಾರೆ!
ಆದರೆ ನಮ್ಮ ಸುಖ-ದುಃಖ-ಸಂವೇದನೆಗಳು ಅದೆಷ್ಟೇ ಉತ್ಕಟವಾಗಿ ಬಂದು ಹೋಗುತ್ತಿರಲಿ, ಕಾಲಚಕ್ರವು ಅದಾವುದನ್ನೂ ಲಕ್ಷಿಸದೇ, ತನ್ನ ಪಾಡಿಗೆ ಹುಟ್ಟಿಸುವ-ಪಾಲಿಸುವ-ನಾಶಗೈವ ನಿರಂತರ ಪ್ರಕ್ರಿಯೆಯಲ್ಲಿ ತೊಡಗಿರುತ್ತದೆ! ಮದಿಸಿದ ಗಜವು ಗಂಭೀರವಾಗಿ ನಡೆದು ಹೋಗುವ ಹಾದಿಯಲ್ಲಿ ಅದೆಷ್ಟು ಕೀಟಗಳನ್ನೂ ಇರುವೆಗಳನ್ನೂ ತನಗೇ ಗೊತ್ತಿಲ್ಲದೇ ಹೊಸಕಿ ಹಾಕುತ್ತದೋ! ಇದೂ ಹಾಗೆಯೇ! ಈ ಕಾಲದ ಗತಿಯನ್ನು ಅಂಗೀಕರಿಸದೆ ಜೀವನದಲ್ಲಿ ಜಾಣರಾಗಲು ಸಾಧ್ಯವೇ ಇಲ್ಲ. ಈ ಕಹಿ ಸತ್ಯವನ್ನು ಒಪ್ಪಲು ಇಷ್ಟವಿಲ್ಲದೆ ಧೈರ್ಯ ಸಾಲದೆ ಸಾಮಾನ್ಯರು ಕಾಲ್ಪನಿಕ ಸುಖದ ಕನಸಲ್ಲೇ ಮೈಮರೆಯುತ್ತಾರೆ. ಸಿಗದ ಸುಖಕ್ಕಾಗಿ ಕರ್ಮಜಾಲಗಳಲ್ಲಿಯೂ ಭಾವುಕತೆಯಲ್ಲಿಯೂ ಮುಳುಗಿ ಬಳಲುತ್ತಾರೆ. ಆದರೆ ’ಧೀರ’ನು ಜೀವನದ ಈ ಕಹಿ ಸತ್ಯವನ್ನು ಒಪ್ಪುತ್ತಾನೆ, ಶಾಂತನಾಗುತ್ತಾನೆ, ಅನೈಜವಾದ ಭಾವನಾ-ಕಲ್ಪನಾವಿಕಾರಗಳಿಗೆ ಮನಸೋಲುವುದಿಲ್ಲ. ಅಂತಹವನೇ ’ಪಂಡಿತ’ ಎನ್ನುವುದು ಕೃಷ್ಣನ ಮಾತುಗಳ ತಾತ್ಪರ್ಯ.
ಇಲ್ಲಿ ನೋಡಿ! ಕಾಲಚಕ್ರದ ಮಹಾಗತಿಯನ್ನು ಭಾವಿಸಲೂ ಭಯಪಡುತ್ತೇವೆ! ಏಕೆಂದರೆ ಅಲ್ಲಿ ದರ್ಶನವಾಗುವುದು ನಾವು ಕಟ್ಟಿಕೊಂಡ ಕನಸ್ಸುಗಳೆಲ್ಲ ‘ಕ್ಷಣಿಕ’ ಎಂಬ ಕಟುಸತ್ಯ! ನಮಗದು ಇಷ್ಟವಾಗುವುದಿಲ್ಲ! ಸುಳ್ಳಾದರೂ ಪರವಾಗಿಲ್ಲ ಅದಕ್ಕಿಂತ ನಮ್ಮ ಸುಂದರ ಸ್ವಪ್ನಗಳಲ್ಲೇ ಸುಖವೂ ಸುರಕ್ಷಿತವೂ ಎನಿಸುತ್ತದೆ! ಧರ್ಮ-ಸತ್ಯ-ನ್ಯಾಯ-ಜೀವನಗಳು ‘ನಮಗೆ ಬೇಕಾದಂತೆಯೇ’ ನಡೆಯುವುದಿಲ್ಲ ಎಂಬುದನ್ನು ಅರ್ಥಮಾಡಿ ಕೊಂಡಾಗಲೇ ನಮ್ಮ ಭಾವೋದ್ವೇಗಗಳು ಅಳಿದು, ಬುದ್ಧಿಯಲ್ಲಿ ಸ್ಪಷ್ಟ ಆಲೋಚನೆಯು ಚಿಗುರಲಾರಂಭಿಸುತ್ತದೆ.
ಅಂತಹ ಧೀರನೆ ಪಂಡಿತನು, ಅವನು ಜೀವನದ ಗತಿಯನ್ನು ಅರಿತವನಾಗಿದ್ದು, ಮೋಹವಶನಾಗಿ ಶೋಕಿಸುವುದಿಲ್ಲ. ಅಂತಹವನು ತನ್ನ ನಡೆನುಡಿಗಳಲ್ಲಿ ನೈಜವಾದ ಅರ್ಥದಲ್ಲಿ ಸತ್ಯಧರ್ಮಗಳ ಮರ್ಮವನ್ನು ತಿಳಿದುಪಾಲಿಸುತ್ತಾನೆ. ಅಷ್ಟೇ ಅಲ್ಲ, ಚರಾಚರದಲ್ಲೆಲ್ಲ ದೈವದ ಲೀಲೆಯ ವಿಲಾಸವನ್ನೂ ಗುರುತಿಸುತ್ತ ಮಗುವಿನಂತೆ ನಿತ್ಯವೂ ನಗುತಿರುತ್ತಾನೆ!
ಡಾ. ಆರತಿ ವಿ ಬಿ

ಕೃಪೆ : ವಿಜಯವಾಣಿ

Leave a Reply