ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ

ಬದುಕಿಗೆ ಭಗವದ್ಗೀತೆ- ಆಮೆಯಂತೆ ಅಂತರ್ಮುಖ-ಬಹಿರ್ಮುಖತೆಗಳ ನಿಯಂತ್ರಣವನ್ನು ತಿಳಿ

ಎಲ್ಲ ಜೀವನಾನುಭವಗಳನ್ನು ಜೀರ್ಣಿಸಿಕೊಳ್ಳುತ್ತ ಬದುಕಬಲ್ಲ ’Practical ಮನುಷ್ಯನೇ ಸ್ಥಿತಪ್ರಜ್ಞ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಸ್ಥಿತಪ್ರಜ್ಞನ ಅಂತಶ್ಶಕ್ತಿಯ ಬಗ್ಗೆ ಮತ್ತಷ್ಟು ಹೇಳುತ್ತಾನೆ-
ಯದಾಸಂಹರತೇ ಚಾಯಂ ಕೂರ್ಮೋಂಗಾನೀವ ಸರ್ವಶಃ ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾಪ್ರತಿಷ್ಠಿತಾ
(ಆಮೆಯು ತನ್ನ ಅಂಗಾಂಗಗಳನ್ನು ಎಲ್ಲೆಡೆಗಳಿಂದ ಒಳಸೆಳೆದುಕೊಳ್ಳುವಂತೆ, ಎಲ್ಲ ವಿಷಯವಸ್ತುಗಳಿಂದ ತನ್ನ ಇಂದ್ರಿಯಗಳನ್ನು ಒಳಸೆಳೆದುಕೊಂಡಿರಬಲ್ಲವನೇ ಸ್ಥಿತಪ್ರಜ್ಞ)
ಶ್ರೀಕೃಷ್ಣನು ಕೊಡುವ ಆಮೆಯ ನಿದರ್ಶನವು ಮನೋಜ್ಞವಾಗಿದೆ! ಅಪಾಯದ ಸುಳಿವು ಸಿಗುತ್ತಲೇ, ಅಥವಾ ತನ್ನೊಳಗೆ ತಾನಿರಬೇಕೆನಿಸಿದರೆ ಸಾಕು, ಆಮೆಯು ತನ್ನ ಅಂಗಾಂಗಗಳನ್ನು ಕಠಿಣವಾದ ತನ್ನ ಬೆನ್ನ ಚಿಪ್ಪಿನೊಳಗೆ ಸೆಳೆದು ಸ್ಥಿರವಾಗಿ ಕೂತುಬಿಡುತ್ತದೆ! ಎಷ್ಟು ಅಪ್ಪಳಿಸಿದರೂ, ಬಡಿದರೂ ಹೊರಬರದು!  ವ್ಯಕ್ತಿಯೂ ಹೀಗೆ ’ಬೇಡ’ವೆಂದಾಗ ಬಾಹ್ಯದ ಎಲ್ಲದರಿಂದ ಕಳಚಿಕೊಳ್ಳಲು ಸಾಧ್ಯವಾದರೆ ಎಷ್ಟು ಚೆನ್ನ! ನಮಗೆ ಕೈಕೊಟ್ಟ ವಸ್ತು-ವ್ಯಕ್ತಿಗಳನ್ನು ಮರೆಯಲಾಗದೇ ವರ್ಷಗಟ್ಟಲೇ ಅಳಲುತ್ತ ಆರೋಗ್ಯ ಕೆಡಿಸಿಕೊಳ್ಳುವುದೂ ತಪ್ಪುತ್ತದಲ್ಲವೆ? ನಮ್ಮೊಳಗೇ ನೆಮ್ಮದಿಯನ್ನು ಕಂಡುಕೊಳ್ಳಬಹುದಲ್ಲವೆ?
ಸ್ಥಿತಪ್ರಜ್ಞನು ಜನಧನದ ಸಂಗದಲ್ಲೇ ಇದ್ದರೂ ಈ ’ಕಳಚಿಕೊಳ್ಳುವ ಕೌಶಲ’ವನ್ನು ಬೆಳೆಸಿಕೊಂಡಿರುತ್ತಾನೆ!ಕರ್ತವ್ಯ ಪಾಲನೆಗಾಗಿ ಬಹಿರ್ಮುಖದ ಎಲ್ಲ ಕಾರ್ಯಗಳನ್ನು ಎಸಗಿದರೂ, ಅದೆಲ್ಲ ಮುಗಿಯುತ್ತಲೇ, ತನ್ನಿಂದ್ರಿಯಗಳನ್ನು (ಕಣ್ಣು-ಕಿವಿ-ಮೂಗು-ತ್ವಚೆ-ನಾಲಗೆಗಳು, ಕೈಕಾಲುಗಳು ಹಾಗೂ ಮನಸ್ಸು) ಹೊರಜಗತ್ತಿನಿಂದ ಕಳಚಿಕೊಂಡು, ಅಂತರ್ಮುಖನಾಗಿ ವಿರಮಿಸುತ್ತಾನೆ. ಬಾಹ್ಯದ ಸುಖದುಃಖಗಳ ಹೊರೆಯನ್ನು ತನ್ನ ಅಂತರಂಗಕ್ಕೊಯ್ಯುವುದೇ ಇಲ್ಲ. ಅಲ್ಲಲ್ಲೇ ಬಿಟ್ಟು ನಡೆಯುತ್ತಾನೆ. ಬೇಕಾದಾಗ ಜೀವನ್ಮುಖಿಯಾಗಿ ಬದುಕು ನಡೆಸಲೂ ಬಲ್ಲ! ಸಾಕೆನಿಸಿದಾಗ ಎಲ್ಲದರಿಂದಲೂ ಕಳಚಿಕೊಂಡು ಆತ್ಮಸ್ಥನಾಗಿ ವಿರಮಿಸಲೂ ಬಲ್ಲ! ಇದೇ ಅವನ ಬಲ! ವೈಶಿಷ್ಟ್ಯ!
ಲೌಕಿಕ ಜೀವನದ ಸಾಧನೆಗಳ ವಿಷಯದಲ್ಲೇ ಇಂತಹ ಎಷ್ಟೋ ತ್ಯಾಗಗಳು ನಡೆಯಬೇಕಾಗುತ್ತವೆ! Olympics ಕ್ರೀಡಾಪಟುಗಳು ಪಂದ್ಯದ ಮೊದಲು ಮೌನವಾಗಿದ್ದು ತಮ್ಮ ದೇಹ-ಮನೋಬಲಗಳನ್ನು ವರ್ಧಿಸಿಕೊಳ್ಳುವುದಿಲ್ಲವೆ? ಇತ್ತೀಚಿನ Olympics Badmintonನಲ್ಲಿ ಸಿಂಧು ಪೂಸರಲಾ ಬೆಳ್ಳಿ ಪದಕವನ್ನು ಗೆದ್ದಾಗ, ಅವಳ Coach ಗೋಪಿಚಾಂದ್ಹೇಳಿದ್ದು- “ಸಿಂಧೂಗೆ 4 ತಿಂಗಳಿಂದ Mobileನ್ನು ಇಣುಕಿ ನೋಡಲೂ ನಾನು ಬಿಟ್ಟಿಲ್ಲ!” ಎಂದು. ಗಾನದರಸಿ ಭಾರತರತ್ನ ಲತಾ ಮಂಗೇಷ್ಕರ್ “ಸಂಗೀತದ Careerಗಾಗಿ, ನಾನು ಅತ್ಯಂತ ಇಷ್ಟವಾದ Icecreamನ್ನು ಅದೆಷ್ಟೋ ವರ್ಷಗಳಿಂದ ಮುಟ್ಟೇ ಇಲ್ಲ!” ಎನ್ನುತ್ತಾರೆ. ಹೀಗೆ ಬಾಹ್ಯದ ವಸ್ತು-ವಿಷಯಗಳ ಅವಲಂಬನೆಯನ್ನು ಬಿಟ್ಟು ತಾತ್ಕಾಲಿಕವಾಗಿಯಾದರೂ ಅಂತರ್ಮುಖವಾದಾಗ, ಅಪಾರಶಕ್ತಿ ಸಂಚಯವಾಗುತ್ತದೆ!ಇನ್ನು ಯೋಗಸಾಧನೆಯಂತಹ ಪರಮೋಚ್ಛಗುರಿ ಸಾಧನೆಯ ಉದ್ದೇಶದಿಂದ ಇಂದ್ರಿಯಗಳನ್ನು ಇಂದ್ರಿಯಾರ್ಥಗಳಿಂದ ಕಳಚಿ ಒಳಸೆಳೆದುಕೊಂಡಾಗ, ಅಂತಹ ವ್ಯಕ್ತಿಯ ಅಂತರಂಗದಲ್ಲಿ ಅದಿನ್ನೆಷ್ಟು ಶಕ್ತಿ ಸಂಚಯವಾಗಲಿಕ್ಕಿಲ್ಲ!
ಲೌಕಿಕ ಗುರಿ ಸಾಧನೆಗಳನ್ನು ಮಾಡುವ ವ್ಯಕ್ತಿಗಳಾದರೋ, ಲಕ್ಷ್ಯ ಸಿದ್ಧಿಯಾದ ಮೇಲೆ ಮತ್ತೆ ಭೋಗಗಳ ಕಡೆಗೆ ಮರಳುವುದುಂಟು. ಆದರೆ ಸ್ಥಿತಪ್ರಜ್ಞನು ಅವರನ್ನೂ ಮೀರಿ ನಿಲ್ಲುವ ಮಹಾತ್ಮ. ಏಕೆ ಗೊತ್ತೆ? ಲೌಕಿಕ ಗುರಿಗಳಿಗಾಗಿ ಮಹತ್ತರ ತ್ಯಾಗ ಮಾಡಿದವರಿದ್ದಾರಲ್ಲ, ಅವರ ಅಂತರಂಗದಲ್ಲಿ ಭೋಗನಿಗ್ರಹವಿರುತ್ತದೆಯೇ ಹೊರತು, ಭೋಗವಾಸನೆ(ರಸ) ಪೂರ್ಣ ಅಳಿದಿರಲಿಕ್ಕಿಲ್ಲ. ಆದರೆ ಯಾರು ಯೋಗದ ಮೂಲಕ ಪರತತ್ವವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೋ, ಅಂತಹ ಸ್ಥಿತಪ್ರಜ್ಞನ ಮನದಲ್ಲಿನ ಭೋಗವಾಸನೆಯು ಲೇಶಮಾತ್ರವೂ ಉಳಿದಿರದು! ಮತ್ತೆಂದಿಗೂ ಆತನೊಳಗೆ ಭೋಗದ ಚಪಲವೇ ಏಳಲಾರದು! ಇದನ್ನೇ ಈ ಶ್ಲೋಕ ವಿವರಿಸುತ್ತಿದೆ-
ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃI ರಸ್ವರ್ಜ್ಯಂರಸೋಽಪ್ಯಸ್ಯಪರಂದೃಷ್ಟ್ವಾನಿವರ್ತತೇ II
ನಿರಾಹಾರಿಯಲ್ಲಿ (ಭೋಗವನ್ನು ಬಿಟ್ಟವನಲ್ಲಿ) ವಿಷಯವು (ಭೋಗವು) ಇಲ್ಲದಿದ್ದರೂ, ಅದರ ರಸವು (ಆಸೆಯೆಂಬ ವಾಸನೆಯು) ಉಳಿದೇ ಇರುತ್ತದೆ. ಆದರೆ ಪರತತ್ವವನ್ನು ನೋಡಿದ ಮೇಲೆ (ಅಂತಹ ಸ್ಥಿತಪ್ರಜ್ಞನಲ್ಲಿ) ಅದೂ ಅಳಿಯುತ್ತದೆ.
ಇಲ್ಲಿ ಭೋಗವನ್ನು ತಪ್ಪೆಂದು ಹಳಿಯುವುದು ಉದ್ದೇಶವಲ್ಲ. ಆದರೆ ನಾವು ಭೋಗವನ್ನೇ ’ಅವಲಂಬಿಸಿ’ ಬದುಕುವ ದೌರ್ಬಲ್ಯವನ್ನು ಹಳಿಯುವುದು ಉದ್ದೇಶ. ಭೋಗದ ಅವಲಂಬನೆ ಇಲ್ಲದೆ ಬದುಕಲಾಗದ ದುರ್ಬಲರೇ ಬಂಧನಕ್ಕೊಳಪಡುವುದು. ’ಭೋಗವಿದ್ದರೂ ಸರಿ, ಇಲ್ಲದಿದ್ದರೂ ಸರಿ’, ಎಂದು ತನ್ನೊಳಗಿನ ಆತ್ಮಸುಖದಲ್ಲಿ ನೆಲೆ ನಿಲ್ಲುವ ಜಾಣನೇ ಸಬಲ. ಅಂತಹ ಜಾಣ್ಮೆಯನ್ನು ಸ್ಥಿತಪ್ರಜ್ಞನು ಪಡೆಯುತ್ತಾನೆ ಎಂದು ಸೂಚಿಸುತ್ತಿದ್ದಾನೆ ಆಚಾರ್ಯ ಕೃಷ್ಣನು.
ಪಟ್ಟಾಭಿಷೇಕ ಆಯೋಜನೆಯಾದಾಗ, ಶ್ರೀರಾಮನು ಕಂಕಣ ಕಟ್ಟಿಸಿಕೊಂಡು ಸಂತೋಷದಿಂದ ಸಿದ್ಧನಾಗತೊಡಗಿದ. ಆದರೆ ಮಧ್ಯರಾತ್ರಿಯ ಹೊತ್ತಿಗೆ ಮಲತಾಯಿಯು ಪಟ್ಟಾಭಿಷೇಕವನ್ನು ತಪ್ಪಿಸಿ, ಕಾಡಿಗಟ್ಟಿದಾಗ, ಆಘಾತವಾದರೂ, ಗೋಳಾಡಲಿಲ್ಲ, ಖಿನ್ನನಾಗಲಿಲ್ಲ, ಆತ್ಮಹತ್ಯೆಗೂ ಮೊದಲಾಗಲಿಲ್ಲ, ದಂಗೆ-ಹೋರಾಟಗಳನ್ನೂ ಹುಟ್ಟುಹಾಕಲಿಲ್ಲ. ವಿಧಿಯೊಡ್ಡಿದ್ದ ಪರೀಕ್ಷೆಯನ್ನು ಅಂಗೀಕರಿಸಿ ಎದುರಿಸಿದ. ನೋವನ್ನು ನುಂಗಿ, ವನವಾಸಕ್ಕೆ ಹೊರಟೇಬಿಟ್ಟ! ವನವಾಸದಲ್ಲೂ ಶಾಂತಿ-ಸಂತೋಷ-ಸುಖ-ಸುರಕ್ಷೆಗಳಿಂದಿರುವ ವಿಧಾನವನ್ನು ಬೇಗನೇ ಕಲಿತ. ಮುನಿಗಳನ್ನೂ ಕಾಡುಜನರನ್ನೂ ವನ್ಯ-ಮೃಗ-ಖಗಗಳನ್ನೇ ಬಂಧುಮಿತ್ರರನ್ನಾಗಿಸಿಕೊಂಡು ಸಗ್ಗವನ್ನು ಕಟ್ಟಿಕೊಂಡ! ೧೪ ವರ್ಷಗಳಾಗುತ್ತಲೇ ಅಯೋಧ್ಯೆಗೆ ಮರಳಿದ. ಪ್ರಜಾಭಿಮತವನ್ನು ಗೌರವಿಸಿ, ‘ಕರ್ತವ್ಯ’ಭಾವದಿಂದ ಪಟ್ಟವನ್ನೇರಿದ, ದಕ್ಷತೆಯಿಂದ ಆಳಿದ. ಹೀಗೆ, ಪಟ್ಟ ತಪ್ಪಿದಾಗಲೂ, ಪಟ್ಟ ಒದಗಿದಾಗಲು, ಶ್ರೀರಾಮನು ಪರಿಸ್ಥಿತೆಗೆ ಹೊಂದಿಕೊಂಡು ಗೆದ್ದುನಿಂತನೇ ಹೊರತು, ಆ ಸಿಹಿ-ಕಹಿ ಆಗುಹೋಗುಗಳಿಂದ ತನ್ನ ಅಂತರಂಗವನ್ನು ಪ್ರಕ್ಷುಬ್ಧಗೊಳಿಸಿಕೊಳ್ಳಲಿಲ್ಲ! ಇದನ್ನೇ ಸ್ಥಿತಪ್ರಜ್ಞನ ಶಕ್ತಿ ಎನ್ನುವುದು!

ಡಾ ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply