ಬದುಕಿಗೆ ಭಗವದ್ಗೀತೆ – ಆಶ್ಚರ್ಯಜನಕವಾದ ಆತ್ಮ !

ಬದುಕಿಗೆ ಭಗವದ್ಗೀತೆ – ಆಶ್ಚರ್ಯಜನಕವಾದ ಆತ್ಮ !

ಅವ್ಯಕ್ತದಿಂದ ವ್ಯಕ್ತವಾಗಿ ಬಂದ ಭೌತಿಕ ಪ್ರಪಂಚವು, ಕೆಲಕಾಲವಿದ್ದು, ಮತ್ತೆ ಅವ್ಯಕ್ತದಲ್ಲೇ ಲಯವಾಗುತ್ತದೆ. ಆತ್ಮಸ್ವರೂಪವಾದರೋ, ವ್ಯಕ್ತಾವ್ಯಕ್ತಗಳ ಲೀಲೆಗೆ ತೊಡಗದೆ ನಿತ್ಯವೂ ನಿರ್ವಿಕಾರವೂ ಆಗಿ ಉಳಿದಿರುತ್ತದೆ. ನಾವು ಆತ್ಮದ ನೆಲೆಯಲ್ಲಿ ನಿಂತು ಆಲೋಚಿಸಿದರೆ ದುಃಖವೇ ಇಲ್ಲ. ಭೌತಿಕದ ನೆಲೆಯಲ್ಲಿ ನಿಂತು ನೋಡಿದರೂ ಅಷ್ಟೇ, ವಿಕಾರ-ನಾಶಗಳು ಅನಿವಾರ್ಯವಾದ್ದರಿಂದ ಶೋಕಿಸುವ ಅಗತ್ಯವಿಲ್ಲ. ಇದಿಷ್ಟನ್ನು ಕೃಷ್ಣನ ಮಾತುಗಳಲ್ಲಿ ಹಿಂದಿನ ಸಂಚಿಕೆಯಲ್ಲಿ ನೋಡಿದ್ದೆವು. ಕೃಷ್ಣನು ಆತ್ಮವಸ್ತುವಿನ ವಿಷಯಕ್ಕೆ ಮರಳಿ ಹೀಗೆ ಹೇಳುತ್ತಾನೆ-
ಆಶ್ಚರ್ಯವದ್ಪಶ್ಯತಿಕಶ್ಚಿದೇನಮಾಶ್ಚರ್ಯ ವದ್ವದತಿತಥೈವಚಾನ್ಯಃ I
ಆಶ್ಚರ್ಯವಚ್ಚೈನಮನ್ಯಂಶೃಣೋತಿ ಶ್ರುತ್ವಾಪ್ಯೇನಂವೇದನಚೈವಕಶ್ಚಿತ್ II
ಇದನ್ನು (ಆತ್ಮವಸ್ತುವನ್ನು) ಕೆಲವರು ಆಶ್ಚರ್ಯದಿಂದ ನೋಡುತ್ತಾರೆ. ಕೆಲವರು ಆಶ್ಚರ್ಯದಿಂದ ಅದರ ಬಗ್ಗೆ ಹೇಳುತ್ತಾರೆ ಮತ್ತೆ ಕೆಲವರು ಆಶ್ಚರ್ಯದಿಂದ ಕೇಳುತ್ತಾರೆ. ಆದರೆ ಇವರಾರೂ ಆತ್ಮವನ್ನು ತಿಳಿದಿಲ್ಲ.
ಭೌತಿಕ ನೆಲೆಯ ಚೌಕಟ್ಟಿನಲ್ಲೇ ಇದ್ದು ಆಲೋಚಿಸುವ ಮನೋಬುದ್ಧಿಗಳ ಪಾಲಿಗೆ ‘ಆತ್ಮದ ಸ್ವರೂಪವು ಸದಾ ‘ವಿಸ್ಮಯ-ಜನಕ’ವೇ ಸರಿ. ಸಾಮಾನ್ಯ ಜನರಿಗೆ ಆನಂತ್ಯದ ಬೋಧೆಯಾಗುವುದು ಕಷ್ಟಸಾಧ್ಯ. ಹಾಗಾಗಿ ‘ಆತ್ಮ’ ಎಂದರೆ ಸಾಕು ಅದರ ಬಗ್ಗೆ ವಿಸ್ಮಯ-ಭಯ-ಕುತೂಹಲಗಳ ಕಲ್ಪನೆಗಳೇ ಬೆಳೆದುನಿಂತಿವೆ. ಕೃಷ್ಣನು ಹೇಳುವ ಮಾತು ಇಂದಿಗೂ ಅದೆಷ್ಟು ನಿಜ! ಯುಗಯುಗಾಂತರಗಳಿಂದ ಹಲವರು ಆತ್ಮದ ವಿಚಾರವಾಗಿ ‘ಆಶ್ಚರ್ಯದಿಂದ ನೋಡುತ್ತ’ ಭಾವಿಸುತ್ತ ವಿಚಾರಮಾಡಿದ್ದಾರೆ. ಅದರ ಬಗ್ಗೆ ತಮ್ಮ ತರ್ಕವನ್ನು ಶಾಸ್ತ್ರಾಧಾರದಿಂದಲೂ ಲೋಕನೀತಿಯಿಂದಲೂ ‘ಮಂಡಿಸುತ್ತ’ ಬಂದಿದ್ದಾರೆ. ಮತ್ತೆ ಕೆಲವರು ತಮ್ಮ ಮುಗ್ಧಕಲ್ಪನೆಗಳನ್ನೂ, ಭೀತಿ-ಮೂಢನಂಬಿಕೆಗಳನ್ನೂ ಹರಿಯಬಿಟ್ಟಿದ್ದಾರೆ. ಇದೆಲ್ಲದರ ಬಗ್ಗೆ ಭಯಕುತೂಹಲ ವಿಸ್ಮಯಗಳಿಂದ ‘ಕೇಳುವ’ವರೂ ಕಡಿಮೆಯಿಲ್ಲ. ಹೀಗಿದ್ದರೂ. ಯಾರೂ ಆತ್ಮವನ್ನು ಅನುಭವಪೂರ್ಣವಾಗಿ ‘ತಿಳಿದ’ವರಲ್ಲ! Everyone KNOWS ABOUT the soul, but no one KNOWS the soul! ವಿಡಂಬನೆಯೇನೆಂದರೆ, ನಮ್ಮ ಮೂಲಸ್ವರೂಪವೇ ನಮಗೆ ಅರ್ಥವಾಗದ ಒಗಟಾಗಿದೆ ! ತಾತ್ಕಾಲಿಕ ಭೌತಿಕ ದೇಹದ ಮಮಕಾರ ಅದೆಷ್ಟೆಂದರೆ,ಅದು ಕಣ್ಣಮುಂದೆ ಬದಲಾಗುತ್ತ ಗತಿಸಿ ಹೋಗುತ್ತಲೇ ಇದ್ದರೂ ಅದರ ಬಗ್ಗೆಯೇ ನಂಬಿಕೆ! ಅದೇ ನಮ್ಮ ‘ನೆಲೆ’! ಗತಿಸುವ ದೇಹಗಳಲ್ಲಿ ಗತಿಸದೇ ಉಳಿಯುವ ಆತ್ಮದ ಕಡೇಗೆ ಗಮನವೇ ಇಲ್ಲ!
ಭೌತಿಕ-ದೇಹಗಳು ಬಿದ್ದರೂ ಅದರೊಳಗೆ ವಾಸಿಸುವ ದೇಹಿಯು (ಆತ್ಮವು) ಮಾತ್ರ ’ಅವಧ್ಯ’ವಾಗಿ ಉಳಿದಿರುವ ನಿತ್ಯಾಸ್ತಿತ್ವ ಎನ್ನುತಾನೆ ಕೃಷ್ಣ-
ದೇಹೀ ನಿತ್ಯಮವಧ್ಯೋಽಯಂದೇಹೇ ಸರ್ವಸ್ಯ ಭಾರತ I
ತಸ್ಮಾತ್ಸರ್ವಾಣಿ ಭೂತಾನಿ ನ ತ್ವಂ ಶೋಚಿತುಮರ್ಹತಿ II
ಆಕಾಶದಲ್ಲಿ ಮೋಡಗಳು ಮತ್ತೆ ಮತ್ತೆ ಮೈದಾಳುತ್ತ ಕರಗಿ ಮಳೆಯಾಗುತ್ತ ಲೀಲೆಯಾಡುವುದನ್ನು ನಾವು ನೋಡುತ್ತೇವೆ. ಹಾಗೆ ಮೋಡಗಳು ಮೈದಾಳುತ್ತ ಕರಗುತ್ತಿದ್ದರೂ ಅದಕ್ಕೆ ಆಶ್ರಯವಾದ ಆಕಾಶ ಏನೂ ಆಗುವುದಿಲ್ಲ.
ಹಾಗೆ ಮೋಡಗಳು ಮೈದಾಳುತ್ತ ಕರಗುತ್ತಿದ್ದರೂ. ಮೋಡದ ಒಳಗೂ ಹೊರಗೂ ವಾಸಿಸಿರುವ ಆಕಾಶತತ್ವಕ್ಕೆ ಏನೂ ಆಗುವುದೇ ಇಲ್ಲ! ಮೋದವನ್ನೇ ನೋಡಿದರೆ ಬಂತು ಹೋಯಿತು ಎನಿಸುತ್ತದೆ! ಆಕಾಶವನ್ನು ನೋಡಿದರೆ ಏನೂ ಆಗಿಯೇ ಇಲ್ಲ ಎನಿಸುತ್ತದೆ. ಭೌತಿಕ ದೇಹಾದಿಗಳನ್ನೇ ನೋಡಿದರೆ ‘ಬಂತು-ಹೋಯಿತು’ ಎಂಬ ಭಾವನೆಗಳು ಭುಗಿಲೇಳುತ್ತವೆ! ಆತ್ಮವನ್ನಷ್ಟೇ ನೋಡಿದರೆ ‘ಏನೂ ಆಗಿಯೇ ಇಲ್ಲ’ ಎನಿಸುತ್ತದೆ !
ಹಾಗಾದರೆ ನಮಗೇಕೆ ಆತ್ಮದ ನೆಲೆಗೇರಿ ಆಲೋಚಿಸಲು ಸಾಧ್ಯವಾಗುತ್ತಿಲ್ಲ? ಏಕೆಂದರೆ ನಾವು ಕೂಪಮಂಡೂಕದಂತೆ ಭೌತಿಕ ಚೌಕಟ್ಟೆಂಬ ಭಾವಿಯಲ್ಲಿ ಸಿಲುಕಿದ್ದೇವೆ. ಭಾವಿಯಲ್ಲೇ ಹುಟ್ಟಿ ಆ ಜೀವನವೂ ಅಲ್ಲೇ ವಾಸಿಸುವ ಕಪ್ಪೆಯ ಪಾಲಿಗೆ ಪ್ರಪಂಚವೆಂದರೆ ಆ ‘ಭಾವಿ’, ಅಷ್ಟೆ! ಆ ಭಾವಿಯಾಚೆಗೆ ವಿಶಾಲವೂ ವೈವಿಧ್ಯಮಯವೂ ಆದ ಪ್ರಪಂಚವಿದೆ ಎನ್ನುವುದು ಅದಕ್ಕೆ ಅರ್ಥವೇ ಆಗದು! ಏಕೆಂದರೆ ಅದರ ಮನೋಬುದ್ಧಿಗಳಿಗೆ ಅದನ್ನು ನೋಡಿ-ಕೇಳಿ ಅನುಭವವಿಲ್ಲ! ‘ತನ್ನ’ ಮನೋಬುದ್ಧಿಗಳಿಗೆ ಗ್ರಾಹ್ಯವಲ್ಲದ್ದು ‘ಇಲ್ಲವೇ ಇಲ್ಲ’ ಎಂದು ತೀರ್ಮಾನಿಸಿಬಿಟ್ಟಿರುತ್ತದೆ! ಭೌತಿಕ-ನೆಲೆಯ ‘ಭಾವಿ’ಯಲ್ಲಿ ಹುಟ್ಟಿ-ಬೆಳೆವ ನಮ್ಮ ಮನೋಬುದ್ಧಿಗಳೂ ಹಾಗೆಯೇ! ಪಂಚೇಂದ್ರಿಯಗಳಾಚೆಗೂ ‘ಅಸ್ತಿತ್ವ’ವಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ಅದಕ್ಕೆ ‘ಪ್ರತ್ಯಕ್ಷ’ವಷ್ಟೇ ನಿಜದ ನೆಲೆ! ‘ಕಾಣದ ಆತ್ಮ’ದ ಬಗ್ಗೆ ನಂಬಿಕೆಯೋ ಅಪನಂಬಿಕೆಯೋ ಭೀತಿಯೋ ವಿಸ್ಮಯವೋ ಕುತೂಹಲವೋ ಅದಾವುದೋ ಒಂದು ಧೋರಣೆಯಿರಬಹುದೇನೋ, ಆದರೆ ಅದು ನೆಚ್ಚುವುದು ಮಾತ್ರ ಭೌತವನ್ನೇ! ಆದರೆ ಆ ಭೌತದಲ್ಲಿ ಎಲ್ಲವೂ ಗತಿಸಿಹೋಗುವುದರಿಂದ, ಕಂಗಾಲಾಗುವುದು ತಪ್ಪದು!
ಒಟ್ಟಿನಲ್ಲಿ, ಭಾವಿಯಿಂದ ಆಚೆ ಬಂದು ನೋಡಿದಾಗ ಮಾತ್ರ ಸತ್ಯ-ತಥ್ಯಗಳು ಗೋಚರಿಸುವುದು. ಶಾಂತ-ನಿರ್ಲಿಪ್ತ-ಚಿತ್ತದಿಂದ ಭೌತಿಕ-ಜಗತ್ತನ್ನೇ ಗಮನಿಸುತ್ತಿದ್ದರೂ ಕ್ರಮೇಣ ಅರ್ಥವಾಗುತ್ತದೆ- ’ಇದು ಇದ್ದಂತೆ ಇರುವುದಿಲ್ಲ’ ಎಂದು! ಹುಟ್ಟು-ಸಾವುಗಳೂ ತನ್ಮಧ್ಯೆ ಸುಖ-ದುಃಖಾದಿಗಳೂ ಅನಾದಿಯಿಂದಲೂ ‘ಚಕ್ರವತ್’ ಸುತ್ತಿಬರುತ್ತಲೇ ಇವೆ. ಇದನ್ನು ಅರ್ಥಮಾಡಿಕೊಂಡಾಗ ಒಪ್ಪಿಕೊಂಡಾಗ, ದುಃಖಮೋಹಗಳು ಬಹಳಷ್ಟು ಕಡಿಮೆಯಾಗುತ್ತವೆ.ಇನ್ನು ಆತ್ಮದ ಭಾಸವಾಗುತ್ತಲೇ ಅಳಿದುಳಿದ ದುಃಖ-ಮೋಹಲೇಶವೂ ಕರಗುತ್ತದೆ.
ಹೀಗೆ ಕ್ರಮೇಣಸತ್ಯದ ನೆಲೆಗೇರುತ್ತ ದೃಢತೆಯನ್ನು ಪಡೆಯುವ ಪರಿಯನ್ನು ಕೃಷ್ಣನು ಬೋಧಿಸುತ್ತಿದ್ದಾನೆ.

ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply