ಬದುಕಿಗೆ ಭಗವದ್ಗೀತೆ : ಏಕೆ ತಪಿಸುವೆ ಪರಂತಪನೆ?

ಬದುಕಿಗೆ ಭಗವದ್ಗೀತೆ

ಏಕೆ ತಪಿಸುವೆ ಪರಂತಪನೆ?

ಮೊದಲನೆಯ ಅಧ್ಯಾಯದಲ್ಲಿ ಅರ್ಜುನನ ವಿಷಾದದ ಮನಃಸ್ಥಿತಿಗೂ ಒಂದು ಮಹತ್ವದ ಅರ್ಥವಿದೆ ಎನ್ನುವುದನ್ನು ನೋಡಿದ್ದೇವೆ. ಭಗವದ್ಗೀತೆಯ ಉಪದೇಶಾಮೃತವನ್ನು ಹನಿಹನಿಯಾಗಿ ಜೀರ್ಣಿಸಿಕೊಳ್ಳಲು ಆತನ ಅಂತರಂಗದಲ್ಲಿ ಯೋಗ್ಯವೇದಿಕೆ ನಿರ್ಮಾಣವಾಗುತ್ತ ಸಾಗುವುದನ್ನು ಗಮನಿಸಬಹುದು. ಸಾಮಾನ್ಯ ಗುರುವು ಶಿಷ್ಯನೊಬ್ಬ ಕೈಗೆ ಸಿಕ್ಕಕೂಡಲೆ ಒಂದಷ್ಟು ಉಪದೇಶಕ್ಕೆ ಮೊದಲಾಗುತ್ತಾನೆ! ಆದರೆ ಮಹಾಗುರುವು ಶಿಷ್ಯನನ್ನು ಅವನಿರುವ ಪ್ರಜ್ಞಾಸ್ತರದಿಂದ ಹಂತಹಂತವಾಗಿ ಮೇಲೇರಲು ಪ್ರೇರಣೆ ನೀಡುತ್ತಾನೆ. ಅರ್ಜುನನ ವಿಷಯದಲ್ಲೂ ಹಾಗೆ, ಶ್ರೀಕೃಷ್ಣನು ಆತನ ಮನಃಕ್ಷೋಭೆಯನ್ನು ಮೊದಲು ಹೋಗಲಾಡಿಸಿ ತಿಳಿಯಾಗಿಸುತ್ತಾನೆ. ಆ ಬಳಿಕ ಅರ್ಜುನನಲ್ಲಿ ಸ್ತರಸ್ತರವಾಗಿ ಮೂಡುತ್ತ ಬಂದ ಪ್ರಾಮಾಣಿಕ ತತ್ವಜಿಜ್ಞಾಸೆಗೆ ಉತ್ತರಗಳನ್ನು ಒದಗಿಸುತ್ತ ಸಾಗುತ್ತಾನೆ. ಇದೇ ಒಬ್ಬ ಯೋಗ್ಯ ಗುರುವಿನ ರೀತಿ!
ಅರ್ಜುನನು ಬಿಲ್ಲುಬಾಣಗಳನ್ನು ಕೈಬಿಟ್ಟು, ಅಶ್ರುಪೂರ್ಣಲೋಚನನಾಗಿ, ಶೋಕತಪ್ತನಾಗಿ ರಥದ ಹಿಂಬದಿಯಲ್ಲಿ ಕುಸಿದು ಕುಳಿತಾಗ, ಕೃಷ್ಣ ಅವನಿಗೆ ‘ಅಯ್ಯೋಪಾಯ’ ಎಂದು ಸಮಾಧಾನ ಮಾಡಿದನೆ? ಇಲ್ಲ! ಅಥವಾ ಒಮ್ಮೆಲೆ ಉನ್ನತ-ತತ್ವಸಿದ್ಧಾಂತಗಳ ಪ್ರವಚನವನ್ನು ನೀಡಲಾರಂಭಿಸಿದನೇ? ಇಲ್ಲವೇ ಇಲ್ಲ! ಅರ್ಜುನನಿಗೆ ಸದ್ಯಕ್ಕೆ ಎದ್ದಿರುವುದು ತತ್ವಜಿಜ್ಞಾಸೆಯಲ್ಲ, ಅವನಿಗೆ ಕರ್ತವ್ಯಾನುಷ್ಠಾನದ ವಿಷಯದಲ್ಲಿ ಧರ್ಮಸಂಕಟ ಉಂಟಾಗಿದೆ. ಹಾಗಾಗಿ ಕೃಷ್ಣನು ಅವನ ಭ್ರಮೆಯನ್ನು ಸೀಳುವಂತಹ ತೀಕ್ಷ್ಣಧ್ವನಿಯಲ್ಲಿ ಗುಡುಗುತ್ತಾನೆ- ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತೆ ಅನಾರ್ಯಜುಷ್ಟಮಸ್ವರ್ಗ್ಯಂ ಅಕೀರ್ತಿಕರಮರ್ಜುನ (“ಎಲೈ ಅರ್ಜುನನೇ! ವಿಷಮ-ಕಾಲದಲ್ಲಿ ಇಂತಹ ಮನಃಕಲ್ಮಷ ನಿನಗೇಕೆ ಬಂತು? ಇದು ‘ಅನಾರ್ಯ’ವಾದ ನಡವಳಿಕೆ, ನಿನಗೆ ಅಪಕೀರ್ತಿ ತರುವಂತಹದ್ದು, ಇದು ನಿನಗೆ ಸ್ವರ್ಗವನ್ನೂ ತಪ್ಪಿಸುವಂತಹದ್ದು.)
ನ್ಯಾಯಸಂರಕ್ಷಣೆ ಹಾಗೂ ಪ್ರಜಾಹಿತಕ್ಕಾಗಿ ತನು-ಮನ-ಶಸ್ತ್ರಾಸ್ತ್ರಗಳಿಂದ ಸದಾ ಸನ್ನದ್ಧವಾಗಿರುವುದು ಕ್ಷಾತ್ರವೃತ್ತಿ; ಧರ್ಮಯುದ್ಧದಲ್ಲಿ ಹೋರಾಡಿ ಮಣಿಯುವ ಕನಸನ್ನೇ ಕಾಣುವುದು ಕ್ಷಾತ್ರಪ್ರವೃತ್ತಿ! ಹಾಗಿರುವಾಗ ಯುದ್ಧರಂಗಕ್ಕೆ ಬಂದಮೇಲೆ ಇದ್ದಕ್ಕಿದ್ದ ಹಾಗೆ ಭಾವುಕನಾಗಿ ಹಿಮ್ಮೆಟ್ಟುವುದು ಯಾವ ನೀತಿ? ಶ್ರೀಕೃಷ್ಣನು ಗುಡುಗುತ್ತಾನೆ- “ಈ ವಿಷಮಕಾಲದಲ್ಲಿ ನಿನಗೇಕೆ ಇಂತಹ ಕಶ್ಮಲವುಂಟಾಗಿದೆ?” ಹೌದು! ಅದು ಅರ್ಜುನನ ದೃಷ್ಟಿಯನ್ನು ಆವರಿಸಿ ಮಂಕಾಗಿಸಿದ ಕಶ್ಮಲವೇ ಸರಿ. ಅದನ್ನು ನಿರ್ದಯವಾಗಿ ಕಣ್ಣಿನಿಂದ ತೆಗೆದು ಹಾಕಬೇಕು. ಇಲ್ಲದಿದ್ದರೆ, ಕಣ್ಣಲ್ಲಿ ಚರಿಸುತ್ತ ನೋಟವನ್ನೂ ಅಸ್ಪಷ್ಟಗೊಳಿಸುತ್ತ ಹಿಂಸಿಸುತ್ತಲೇ ಇರುತ್ತದೆ. ಹಾಗಾಗಿ ಕೃಷ್ಣನು ನಿರ್ಧಾರದ ಧ್ವನಿಯಲ್ಲಿ ಹೇಳಿಬಿಟ್ಟ ಇದು ‘ಕಶ್ಮಲ’ ಎಂದು. ಈ ಕಶ್ಮಲದ ಪ್ರಭಾವದಿಂದಾಗಿ ತೋರುತ್ತಿರುವ ಈ ದೌರ್ಬಲ್ಯವು ಮುಂದೆ ಕೆಟ್ಟಪರಿಣಾಮಗಳಿಗೆ ಕಾರಣವಾಗುತ್ತ ಸಾಗುತ್ತದೆ…. ಹಾಗಾಗಿ “ಇದು ಅನಾರ್ಯವರ್ತನೆ” ಎಂದು ಎಚ್ಚರಿಸುತ್ತಾನೆ ಕೃಷ್ಣ.
’ಆರ್ಯ’ ಎಂದರೆ ಸತ್ಯಧರ್ಮಗಳನ್ನು ಪಾಲಿಸುವ, ಸಮಾಜದ ಶಿಷ್ಟಾಚಾರಗಳನ್ನು ಗೌರವಿಸಿ, ಎಲ್ಲರಿಗೂ ಹಿತಕರನಾಗಿ ಬಾಳುವ Gentleman ಎಂದು ಅರ್ಥಮಾಡಿಕೊಳ್ಳಬಹುದು. (ಮಧ್ಯಕಾಲೀನ Colonialist British ಮೂಲದ ’ವಿದ್ವಾಂಸರು’ ಈ ಆರ್ಯಪದದ ಅರ್ಥವನ್ನು ‘ಜನಾಂಗವಾಚಕ’ವೆಂದು ತಿರುಚಿ ಅಪಾರ್ಥವನ್ನು ಹರಡಿದ್ದಾರೆ. ಆದರೆ ಪರಂಪರೆಯಲ್ಲಿ ಆರ್ಯಪದವನ್ನು ಬಳಸಿರುವುದು ಮನುಷ್ಯನ ಚಾರಿತ್ರ್ಯ-ವರ್ತನೆಗಳನ್ನು ಸೂಚಿಸುವ ದೃಷ್ಟಿಯಿಂದಲೇ ಹೊರತು ಜನಾಂಗದ ಹಿನ್ನಲೆಯಲ್ಲಲ್ಲ ಎನ್ನುವುದು ಎಂದೋ ಸಾಬೀತಾಗಿದೆ). ಇಲ್ಲಿ ಶ್ರೀಕೃಷ್ಣನೂ ಅರ್ಜುನನಿಗೆ ’ಅನಾರ್ಯ’ರೀತಿಯಲ್ಲಿ ವರ್ತಿಸಬೇಡ’ ಎಂದು ಎಚ್ಚರಿಸುವಾಗಲೂ, ಅವನ ದೋಷಯುಕ್ತ ಮನಃಸ್ಥಿತಿ ಹಾಗೂ ನಿರ್ಣಯಗಳನ್ನೇ ಉದ್ದೇಶಿಸಿ ಹೇಳುತ್ತಿರುವುದು ಸುಸ್ಪಷ್ಟ. ಹೌದಲ್ಲವೆ? ಕರ್ತವ್ಯಚ್ಯುತನಾಗಿ, ತನಗೂ ಪರಿವರಕ್ಕೂ ಸಮಾಜಕ್ಕೂ ಧರ್ಮದವ್ಯವಸ್ಥೆಗೂ ಧಕ್ಕೆ ತರುವವನು ’ಆರ್ಯ’ (Gentleman) ಹೇಗಾದಾನು?
ಕೃಷ್ಣನು ಮುಂದುವರಿಸುತ್ತಾನೆ “ಅರ್ಜುನ ಇದು ಅಸ್ವರ್ಗ್ಯವೂ ಹೌದು!” ಅಸ್ವರ್ಗ್ಯ ಎಂದರೆ ‘ಸ್ವರ್ಗವನ್ನು ದಕ್ಕಿಸಿಕೊಡುವಂತಹ ನಡೆಯಲ್ಲ’ ಎಂದರ್ಥ. ಯುದ್ಧದಲ್ಲಿ ಸೋತರೂ ಪರವಾಗಿಲ್ಲ, ಪರಾಕ್ರಮದಿಂದ ಹೋರಾಡಿ ಮಣಿದರೆ ‘ವೀರಸ್ವರ್ಗ’ ಖಚಿತ ಎನ್ನಲಾಗುತ್ತದೆ. ಇಂತಹ ವೀರಸ್ವರ್ಗವು ರಣದಿಂದ ಪಲಾಯನ ಮಾಡಿದರೆ ದಕ್ಕೀತೆ? ಹಾಗಾಗಿ ಇದು ’ಅಸ್ವರ್ಗ್ಯ’ ಎಂದು ಎಚ್ಚರಿಸುತ್ತಾನೆ ಕೃಷ್ಣ.
ಅಷ್ಟೇ ಅಲ್ಲ ಇದು ’ಅಕೀರ್ತಿಕರವೂ’ ಹೌದು. ‘ಅಕೀರ್ತಿಕರ’ ಎಂದರೆ ‘ಬರಬಹುದಾದ ಸತ್ಕೀರ್ತಿಯನ್ನು ತಪ್ಪಿಸುವಂತಹದ್ದು’ ಎಂದೂ, ‘ಅಪಕೀರ್ತಿಯನ್ನು ತರುವಂತಹದ್ದು’ ಎಂದೂ ಅರ್ಥೈಸಬಹುದು. ಅರ್ಜುನನು ರಣವನ್ನು ಬಿಟ್ಟುಹೋಗಲು ವೈಯಕ್ತಿಕ ಕಾರಣಗಳು ಅದೇನೇ ಇರಲಿ, ಆದರೆ ‘ಆತ ಕೌರವರ ಸೇನಾಬಲ-ಸಂಖ್ಯಾಬಲಗಳನ್ನು ಕಂಡು ಹೆದರಿಯೇ ಓಡಿಹೋಗಿದ್ದು’ ಎಂದು ಜನರು ಆಡಿಕೊಳ್ಳುವುದಿಲ್ಲವೆ? ‘ತಾನೇ ಸರ್ವಶ್ರೇಷ್ಠ ಧನುರ್ಧರ, ಅಪ್ರತಿಮಶೂರ ಎಂದೆಲ್ಲ ಇಷ್ಟು ವರ್ಷ ಬಿಂಬಿಸಿಕೊಂಡ ಅರ್ಜುನ ನಿಜಕ್ಕೂ ಒಬ್ಬ ಹೇಡಿ ಎನ್ನುವ ಸತ್ಯವು ಇಂದು ಬಟ್ಟಬಯಲಾಯ್ತು ಬಿಡಿ!’ ಎಂದೇ ಎಲ್ಲರೂ ನುಡಿಯುವುದಿಲ್ಲವೆ? ಅರ್ಜುನನಿಗೆ ಮೊದಲಿನಿಂದಲೂ ಈ ರಾಜ್ಯ-ಯುದ್ಧ-ರಕ್ತಪಾತ-ರಾಜಕೀಯಗಳು ಬೇಕಾಗಿಯೇ ಇರಲಿಲ್ಲ ಎಂದು ಹೇಳಲಾದೀತೆ? ಇಲ್ಲ! ‘ಆತ ಅಜಾತಶತ್ರುವೇ? ಇಲ್ಲ! ಅನ್ಯಾಯಪಕ್ಷವನ್ನು ಸೇರಿ ಕುಲವಧು ದ್ರೌಪದಿಗೆ ಘೋರಾಪಮಾನವನ್ನು ಮಾಡಿಸಿದ ‘ಕರ್ಣನನ್ನು ಸಂಹರಿಸಿಯೇ ತೀರುತ್ತೇನೆ!’ ಎಂದು ತುಂಬಿದ ಸಭೆಯಲ್ಲಿ ಪ್ರತಿಜ್ಞೆ ಮಾಡಿದವ ಈತ! ಅಷ್ಟಕ್ಕೂ ಈ ಯುದ್ಧದ ನಿಶ್ಚಯವಾದರೋ ಆತುರದಲ್ಲಿ ಮಾಡಿದಂತಹದ್ದಲ್ಲ. ದುರ್ಯೋಧನನೊಂದಿಗಿನ ಎಷ್ಟೋ ವರ್ಷಗಳ ಮಾತುಕತೆ-ಸಂಧಾನಗಳೆಲ್ಲ ವಿಫಲವಾದ ಮೇಲೆ, ಪಾಂಡವರು ಅನೇಕ ಹಿರಿಯರೊಂದಿಗೆ ಸಾಕಷ್ಟು ಪರ್ಯಾಲೋಚಿಸಿ ತೆಗೆದುಕೊಂಡ ನಿರ್ಣಯವಿದು. ಹಾಗಾಗಿ ಆ ಸಂದರ್ಭದಲ್ಲೆಲ್ಲ ಬರದ ’ಕಾರುಣ್ಯ’ವು ಈಗೇಕೆ ಹೊಮ್ಮಿತು? ಇದು ‘ಕಾರುಣ್ಯ’ವಲ್ಲ, ಹೇಡಿತನ’ ಎಂದೇ ಅರ್ಥವಾಗುತ್ತದಲ್ಲವೆ? ಹೀಗೆ ಪರಾಕ್ರಮಿಯೂ ಧರ್ಮಾತ್ಮನೂ ಆದ ಅರ್ಜುನನಿಗೆ ‘ರಣಹೇಡಿ’ ಎಂಬ ಶಾಶ್ವತವಾದ ಕಳಂಕ ಅಂಟಿಕೊಳ್ಳುವುದು ಖಂಡಿತ ಎನ್ನುವುದು ಕೃಷ್ಣನ ಮತ. ಸನ್ನಡತೆಯನ್ನೂ, ಧರ್ಮದಿಂದ ಒದಗಬಹುದಾದ ವೀರಸ್ವರ್ಗದ ಪ್ರಾಪ್ತಿಯನ್ನೂ ಭಾವುಕತೆಯ ಭರದಲ್ಲಿ ಕೈಬಿಟ್ಟು, ‘ಹೇಡಿ’ಯೆಂಬ ಘೋರಾಪಕೀರ್ತಿಯನ್ನೂ ತಾನೇ ತನ್ನ ತಲೆಯ ಮೇಲೇರಿಸಿಕೊಳ್ಳುವಂತಹ ಅವಿವೇಕಕ್ಕೆ ಅರ್ಜುನನು ಬೀಳದಿರಲಿ, ಎನ್ನುವುದು ಕೃಷ್ಣನ ಕಹಿಯಾದ ಮಾತಿನ ಚಾಟಿಯಲ್ಲಿದ್ದ ಸಿಹಿಯಾದ ಸ್ನೇಹದ ಕಾಳಜಿ.
ಡಾ ಆರತೀ ವಿ ಬಿ

ಕೃಪೆ : ವಿಜಯವಾಣಿ

Leave a Reply