ಬದುಕಿಗೆ ಭಗವದ್ಗೀತೆ – ಕೃತನಿಶ್ಚಯನಾಗಿ ಕರ್ತವ್ಯ ಮಾಡು

ಬದುಕಿಗೆ ಭಗವದ್ಗೀತೆ – ಕೃತನಿಶ್ಚಯನಾಗಿ ಕರ್ತವ್ಯ ಮಾಡು

ಕ್ಷತ್ರಿಯನ ಬಾಳೇ ಧರ್ಮರಕ್ಷಣೆಗೆ. ಹಾಗಿರುವಾಗ ಧರ್ಮಯುದ್ಧಕ್ಕಾಗಿ ಧರ್ಮಪಕ್ಷದಲ್ಲಿ ಹೋರಾಡುವ ಮಹದವಕಾಶ ಒದಗಿಬಂದಾಗ ಕೈಬಿಡುವುದು ಮೂರ್ಖತನವಲ್ಲವೆ? ಒಟ್ಟಿನಲ್ಲಿ ಅರ್ಜುನನಿಗೀಗ ಬೇರೆ ಆಯ್ಕೆ ಇಲ್ಲ. ಸೋತರೂ ಸರಿ, ಗೆದ್ದರೂ ಸರಿ, ಸತ್ತರೂ ಸರಿ ಉಳಿದರೂ ಸರಿ, ಯುದ್ಧವೇ ಮುಂದಿರುವ ನಿಶ್ಚಿತಕರ್ತವ್ಯ ಎನ್ನುವುದನ್ನು ಮನಗಾಣಿಸುತ್ತಿದ್ದಾನೆ ಕೃಷ್ಣ;
ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾ ವಾ ಭೋಕ್ಷ್ಯಸೇ ಮಹೀಂ|
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯಃ||
‘ಅರ್ಜುನ, ಸತ್ತರೆ ಸ್ವರ್ಗವನ್ನು ಪಡೆಯುವೆ, ಗೆದ್ದರೆ ರಾಜ್ಯಭೋಗಗಳನ್ನು ಪಡೆಯುವೆ. ಹಾಗಾಗಿ ಯುದ್ಧಕ್ಕಾಗಿ “ಕೃತನಿಶ್ಚಯ”ನಾಗಿ ಎದ್ದು ಹೋರಾಡು’. (ಭ.ಗೀ. 2.37)
‘ಕೃತನಿಶ್ಚಯ’ನಾಗಿ ಯುದ್ಧಕ್ಕೆ ನಿಲ್ಲು ಎನ್ನುತ್ತಾನೆ ಕೃಷ್ಣ! ನಿಶ್ಚಲಮನದಿಂದ ಮಾಡುವ ನಿರ್ಧಾರವೇ ಜೀವನದ ಪ್ರತಿ ಹಂತದಲ್ಲೂ ಮುಖ್ಯವೆನಿಸುತ್ತದೆ. ಭಾವುಕತೆ, ಗೊಂದಲ, ಅರೆಮನಸ್ಸು, ಅಶ್ರದ್ಧೆ, ಕಾಟಾಚಾರ ಇವುಗಳಿಂದಾಗಿಯೇ ನಮ್ಮ ಧರ್ಮಕರ್ಮಗಳು ಕೆಡುವುದು. ಫಲಿತಾಂಶಗಳೂ ಕೆಡುವುದು. ಅರ್ಜುನನ ಕೈಯಲ್ಲಿ ‘ಸುಮ್ಮನೆ ಯುದ್ಧ ಮಾಡಿಸಿಬಿಟ್ಟರಾಯಿತು’ ಎನ್ನುವುದು ಕೃಷ್ಣನ ಲೆಕ್ಕಾಚಾರವಲ್ಲ. ಆತ ‘ಕೃತನಿಶ್ಚಯ’ನಾಗಬೇಕು, ಅಂದರೆ, ಆತನ ಮನೋಬುದ್ಧಿಗಳನ್ನಾವರಿಸಿದ ಕಶ್ಮಲವು ಕರಗಬೇಕು. ತಾನೇನು ಮಾಡುತ್ತಿದ್ದೇನೆ? ಇದರ ಉದ್ದೇಶ, ಮಹತ್ವ, ಅಗತ್ಯಗಳೇನು? ಎನ್ನುವುದನ್ನೆಲ್ಲ ಅವನಿಗೆ ಚೆನ್ನಾಗಿ ಅರಿವಿಗೆ ಬರಬೇಕು. ಆಗ ಮಾತ್ರ ಅವನ ಕೆಲಸದಲ್ಲಿ ಹೃತ್ಪೂರ್ವಕತೆ, ನೈಪುಣ್ಯ, ಪರಾಕ್ರಮಗಳು ಪ್ರಕಟವಾದಾವು. ಅಂತಹ ಕರ್ಮನೈಪುಣ್ಯಕ್ಕೆ ಪೂರಕವಾದ ‘ಕೃತನಿಶ್ಚಯತ್ವ’ವನ್ನು ಅರ್ಜುನನಲ್ಲಿ ಪ್ರಚೋದಿಸುತ್ತಿದ್ದಾನೆ ಕೃಷ್ಣ.
ಮೊದಲಿನಿಂದ ಏನಾಯಿತೆಂಬುದನ್ನು ಸ್ವಲ್ಪ ನೆನಪಿಸಿಕೊಳ್ಳೋಣ: ತನ್ನ ಎದುರಾಳಿಗಳನ್ನು ಹತ್ತಿರದಿಂದ ನೋಡಿದಾಗ ಅರ್ಜುನನಿಗೆ ಅವರೆಲ್ಲ ‘ತನ್ನ’ ಬಂಧುಮಿತ್ರರು ಎಂಬುದು ಮನಸ್ಸಿಗೆ ಬಂದು ಭಾವುಕನಾದ. ಮನಸ್ಸು ಶೋಕಾವೃತವಾಯಿತು, ಬುದ್ಧಿಯು ಭ್ರಾಂತವಾಯಿತು. “ಅಯ್ಯೋ! ‘ನನ್ನ’ವರನ್ನು ಹೇಗೆ ಸಾಯಿಸಲಿ? ಅವರು ಪಾಪಿಗಳಾದರೂ ಪರವಾಗಿಲ್ಲ, ಕ್ಷಮಿಸಿ ಸುಮ್ಮನಾಗುತ್ತೇನೆ’ ಎನ್ನುತ್ತ ಕುಸಿದುಬಿಟ್ಟ.
ಅವನಿಗೆ ಕರ್ತವ್ಯಬೋಧೆಯನ್ನು ಮಾಡಿಸುವ ಸಲುವಾಗಿ ಕೃಷ್ಣನು ಹೇಳಿದ ಮಾತುಗಳ ಸಾರವನ್ನು ನೆನೆಯೋಣ:
1. ಅರ್ಜುನ! ವಿಷಮಕಾಲದಲ್ಲೇಕೆ ಇಂತಹ ಮನಃಕಶ್ಮಲ ನಿನಗೆ? ಇದು ಸಭ್ಯನ ರೀತಿಯಲ್ಲ, ಇದು ಕೆಟ್ಟ ಹೆಸರನ್ನು ತರುವಂತಹದು.
2. ಕ್ಷುದ್ರವಾದ ಹೃದಯದೌರ್ಬಲ್ಯವನ್ನು ತ್ಯಜಿಸಿ ಎದ್ದುನಿಂತು ಕರ್ತವ್ಯವನ್ನು ನಿರ್ವಹಿಸು.
3. ಯಾರನ್ನು ‘ಸಾಯಿಸಬೇಕೆಂದು’ ಅಳುತ್ತಿರುವೆಯೋ, ಅವರು ಮೂಲದಲ್ಲಿ ‘ಅವಿನಾಶಿ-ಆತ್ಮಸ್ವರೂಪ’ರು. ಬೀಳುವುದು ಅವರ ದೇಹಗಳು ಮಾತ್ರ.
4. ಆತ್ಮಸ್ವರೂಪವು ಶಸ್ತ್ರಾಸ್ತ್ರಗಳಿಂದಾಗಲಿ, ಗಾಳಿ-ನೀರು-ನೆಲ-ಆಕಾಶ-ಬೆಂಕಿಗಳಿಂದ ‘ವಧಿಸಲಾಗದ’, ‘ಚೈತನ್ಯಮಯವಾದ’ ಅಸ್ತಿತ್ವ. ನಾಶವಿಲ್ಲದ್ದಕ್ಕಾಗಿ ಅಳುವುದು ಅರ್ಥಹೀನ.
5. ಭೌತಿಕ ದೇಹಗಳಿಗೆ ಹುಟ್ಟು-ಮುಪ್ಪು-ರೋಗ-ಸಾವುಗಳೆಂಬ ಪ್ರಕ್ರಿಯೆಯು ಅನಿವಾರ್ಯ. ಹಾಗಿರುವಾಗ ಬೀಳುವ ದೇಹಗಳಿಗಾಗಿ ಅಳುವುದೂ ಅರ್ಥಹೀನ.
6. ಹುಟ್ಟಿದವರೆಲ್ಲ ಸಾಯುವುದು, ಮರಳಿ ಹುಟ್ಟುವುದು ಅವಿರತವಾದ ಸೃಷ್ಟಿಚಕ್ರವೆಂದು ತಿಳಿದು ಶಾಂತನಾಗು.
7. ಜೀವಿಗಳನ್ನು ‘ಆತ್ಮ’ದ ನೆಲೆಯಲ್ಲಿ ಕಂಡರೆ, ‘ಅಳಿವೇ ಇಲ್ಲ’. ‘ಭೌತಿಕ’-ನೆಲೆಯಲ್ಲೇ ಕಂಡರೆ, ಸಾವು-ಬದಲಾವಣೆಗಳು ಅನಿವಾರ್ಯ! ಹಾಗಾಗಿ ಎರಡೂ ದೃಷ್ಟಿಯಿಂದಲೂ ಶೋಕಿಸಬೇಕಿಲ್ಲ.
8. ‘ಕರ್ತವ್ಯದೃಷ್ಟಿ’ಯಿಂದ ನೋಡಿದರೂ ಹೀಗೆ ವಿಚಲಿತನಾಗಬಾರದು. ಏಕೆಂದರೆ ಕ್ಷತ್ರಿಯನಿಗೆ ಧರ್ಮಪಕ್ಷದಲ್ಲಿ ನಿಂತು ಧರ್ಮಯುದ್ಧ ಮಾಡುವ ಅವಕಾಶ ಅಪರೂಪಕ್ಕೆ ಸಿಗುತ್ತದೆ.
9. ‘ನನಗೆ ಇಷ್ಟವಿಲ್ಲ’ ಎಂದು ನೆಪವೊಡ್ಡಿ ನೀನು ಯುದ್ಧಮಾಡದೆ ನಿಂತಲ್ಲಿ, ಪಾಪ ಉಂಟಾಗುತ್ತದೆ.
10. ಕರ್ತವ್ಯವನ್ನು ಮಾಡುವಾಗ ‘ನನಗೆ ಬೇಕಿಲ್ಲ’ ‘ಇಷ್ಟವಿಲ್ಲ’ ಎಂಬ ವೈಯಕ್ತಿಕ ಇಷ್ಟಾನಿಷ್ಟಗಳಿಗೆ ಆಸ್ಪದವೇ ಇಲ್ಲ. ತನ್ನನ್ನೇ ನೆಚ್ಚಿರುವ ಜನಸಾಮಾನ್ಯರಿಗೆ ನ್ಯಾಯವನ್ನು ಒದಗಿಸುವುದು ಕ್ಷತ್ರಿಯನ ಆದ್ಯಕರ್ತವ್ಯ.
11. ಯುದ್ಧಮಾಡದಿದ್ದಲ್ಲಿ ಘೋರ ಅಪಕೀರ್ತಿ ಮುತ್ತಿಕೊಳ್ಳುತ್ತದೆ. ಅಲ್ಲಿಯವರೆಗೂ ಅರ್ಜುನನ್ನು ವೀರ-ಶೂರ ಎಂದು ಹೊಗಳುತ್ತಿದ್ದ ಜನರು ‘ಅರ್ಜುನನು ರಣರಂಗದಿಂದ ಪಲಾಯನಗೈದ ಹೇಡಿ’ ಎಂದು ಆಡಿಕೊಳ್ಳಲಾರಂಭಿಸುತ್ತಾರೆ. ಅಲ್ಲಿಯವರೆಗಿನ ಆತನ ಶೌರ್ಯವೃತ್ತಾಂತಗಳೆಲ್ಲ ಮಿಥ್ಯೆಯೆನಿಸಿ ಪಾಂಡವವಂಶಕ್ಕೇ ಕಳಂಕ ಮುತ್ತಿಕೊಳ್ಳುತ್ತದೆ. ಸ್ವಾಭಿಮಾನಿಯಾದವನಿಗೆ ಅಪಕೀರ್ತಿಗಿಂತ ಹೀನಸ್ಥಿತಿಯು ಬೇರಾವುದಿದ್ದೀತು?
12. ಸತ್ತರೆ ವೀರಸ್ವರ್ಗ ಪಡೆಯುವೆ. ಗೆದ್ದರೆ ರಾಜ್ಯವನ್ನು ಭೋಗಿಸುವೆ. ಯಾವುದಾದರಾಗಲಿ! ಕೃತನಿಶ್ಚಯನಾಗಿ ಯುದ್ಧಕ್ಕೆ ನಿಲ್ಲು ಅರ್ಜುನ!

ಕೃಷ್ಣನು ಮೊದಲು ಅರ್ಜುನನನ್ನು ಹುರಿದುಂಬಿಸಿದ; ಆ ಬಳಿಕ ಆತನ ಗೊಂದಲವನ್ನು ನೀಗಿಸಲು ತತ್ವನಿಶ್ಚಯದ ನೈಜಪರಿಯನ್ನು ಮನಗಾಣಿಸುತ್ತ ಸಾಗಿದ; ಆ ಬಳಿಕ ಆತ್ಮದ ನೆಲೆಯಲ್ಲಿ ಜೀವನವನ್ನು ನೋಡುತ್ತ ಶೋಕಮೋಹಗಳನ್ನು ಮೀರುವ ಜ್ಞಾನವನ್ನು ತೋರಿದ; ಧರ್ಮಕರ್ಮಗಳನ್ನು ಮಾಡುವಾಗ ಇರಬೇಕಾದ ನಿಶ್ಚಲಮತಿಯ ಕಡೆಗೆ ಗಮನ ಹರಿಯಿಸಿದ; ಕರ್ತವ್ಯಚ್ಯುತಿಯಿಂದಾಗ ಮುತ್ತಬಹುದಾದ ಪಾಪ ಹಾಗೂ ಘೋರ ಅಪಕೀರ್ತಿಯ ಬಗ್ಗೆ ಎಚ್ಚರವನ್ನೂ ಹೇಳಿದ!
ಅಂತೂ ತನ್ನ ಪ್ರಾಣಸಖನನ್ನು ಯೇನ ಕೇನ ಪ್ರಕಾರೇಣ ಸರಿ ದಾರಿಗೆ ತರುವ ಕೃಷ್ಣನ ಕಾಳಜಿ ಹಾಗೂ ನೈಪುಣ್ಯವನ್ನು ಮೆಚ್ಚಲೇಬೇಕು. ಇಂತಹ ಸಖನನ್ನು ಪಡೆದ ಅರ್ಜುನನೇ ಧನ್ಯ!
ಡಾ. ಆರತೀ ವಿ.ಬಿ.
ಕೃಪೆ : ವಿಜಯವಾಣಿ

Leave a Reply