ಬದುಕಿಗೆ ಭಗವದ್ಗೀತೆ – ತ್ರಿಗುಣಗಳನ್ನೂ ಮೆಟ್ಟಿ ಮೇಲೇಳು ಪಾರ್ಥ

ಬದುಕಿಗೆ ಭಗವದ್ಗೀತೆ – ತ್ರಿಗುಣಗಳನ್ನೂ ಮೆಟ್ಟಿ ಮೇಲೇಳು ಪಾರ್ಥ

ವೇದವು ಭೋಗ-ಯೋಗಗಳೆರಡಕ್ಕೂ ಧರ್ಮದ ಹಾದಿಯನ್ನು ತೋರಿಕೊಡುತ್ತದೆ. ಆದರೆ, ಯೋಗದ ನೆಲೆಗೇರದೆ, ವೇದಕರ್ಮವನ್ನು ಕೇವಲ ಭೋಗಪ್ರಾಪ್ತಿಗಾಗಿ ಬಳಸಿಕೊಳ್ಳುತ್ತ, ಅಷ್ಟಕ್ಕೇ ಪಂಡಿತಂ-ಮನ್ಯರಾಗಿ ಮೆರೆಯುವ ’ವೇದವಾದರತ’ರನ್ನು ಕೃಷ್ಣನು ಖಂಡಿಸಿದ್ದನ್ನು ನೋಡಿದ್ದೇವೆ. ಮಾತನ್ನು ಮುಂದುವರೆಸುತ್ತಾನೆ ಕೃಷ್ಣ-
ತ್ರೈಗುಣ್ಯ ವಿಷಯಾವೇದಾ ನಿಸ್ತ್ರೈಗುಣ್ಯೋ ಭವಾರ್ಜುನ – ವೇದ(ಕರ್ಮ)ಗಳು ತ್ರಿಗುಣದ ವಿಷಗಳು. ಹಾಗಾಗಿ ನೀನು ನಿಸ್ತ್ರೈಗುಣ್ಯನಾಗು ಅರ್ಜುನ.
ಅರ್ಥಾತ್, ಕರ್ಮಕಾಂಡದಲ್ಲಿ ತ್ರಿಗುಣಗಳದೇ ದರ್ಬಾರು! ಆ (‘ಸತ್ವ-ರಜಸ್-ತಮಸ್’ ಎಂಬ ಮೂರು ಗುಣಗಳ ಪ್ರಧಾನವಾದ) ಕರ್ಮಗಳ ಜಾಲದಿಂದ ಮೇಲೆದ್ದು, ‘ನಿಸ್ತ್ರೈಗುಣ್ಯ’ನಾಗಬೇಕು ಎಂದರ್ಥ.
ಈ ಮೂರು ಗುಣಗಳೇ ಎಲ್ಲ ಜೀವಿಗಳ ಸಂಕಲ್ಪ-ವಿಕಲ್ಪಗಳನ್ನೂ ಕ್ರಿಯಾ-ಕಲಾಪಗಳನ್ನೂ ಫಲಾಫಲಗಳನ್ನೂ ತತ್ಸಂಬಂಧಿಯಾದ ಸುಖ-ದುಃಖಗಳನ್ನೂ ಉಂಟುಮಾಡುವ ಶಕ್ತಿವಿಶೇಷಗಳು. ಮನುಷ್ಯನ ಸ್ವಭಾವ-ವರ್ತನೆಗಳೆಲ್ಲ ಇವುಗಳ ಪರಿಣಾಮಗಳಷ್ಟೆ.
ಸತ್ವಗುಣವು ಭಾವೋನ್ನತಿಯನ್ನು ಉಂಟುಮಾಡುತ್ತದೆ. ರಜಸ್ಸು ಮನೋಬುದ್ಧಿಗಳನ್ನು ಬಹಿರ್ಮುಖಗೊಳಿಸಿ ಕರ್ಮಚಾಪಲ್ಯವನ್ನುಂಟುಮಾಡುತ್ತದೆ. ತಮಸ್ಸು ಕಾಮ-ಕ್ರೋಧ-ಮೋಹ-ಲೋಭ-ಮದ-ಮಾತ್ಸರ್ಯಾದಿ ಭಾವಗಳನ್ನು ಸೃಜಿಸಿ ಅಂತರಂಗವನ್ನು ಕ್ಷೋಭೆಗೊಳಿಸುತ್ತದೆ. ಈ ಮೂರು ಗುಣಗಳಿಗನುಗುಣವಾಗಿ ಮನುಷ್ಯನ ಸ್ವಭಾವ, ಅಭಿರುಚಿ ಹಾಗೂ ಕ್ರಿಯೆಗಳೂ ರೂಪುಗೊಳ್ಳುತ್ತವೆ.
ಮನುಷ್ಯನನ್ನು ಸತ್ಭಾವ-ಸತ್ಕರ್ಮಗಳಲ್ಲಿ ತೊಡಗಿಸುವುದು ಸತ್ವಗುಣದ ನೀತಿ. ಬುದ್ಧಿ-ಮಾನಸಗಳಲ್ಲಿ ಹಣ-ಕೀರ್ತಿ ಲೋಭಗಳನ್ನು ಮೂಡಿಸಿ, ಅಗತ್ಯಕ್ಕಿಂತ ಹೆಚ್ಚು ಕರ್ಮಗಳಲ್ಲಿ ತೊಡಗಿಸುತ್ತದೆ ರಜೋಗುಣ. ಸರಿಯಾದ ಧರ್ಮ-ಕರ್ಮಗಳಿಂದ ವಿಮುಖಗೊಳಿಸಿ ಕುಕರ್ಮಗಳಲ್ಲಿ ತೊಡಗಿಸುವುದು ತಮೋಗುಣದ ರೀತಿ. ಎಲ್ಲ ಬಗೆಯ ಮನುಷ್ಯರೂ ಕೂಡ ಈ ತ್ರಿಗುಣಗಳಿಗೆ ವಶರೇ.
ಈ ಗುಣಗಳ ಪೈಕಿ ಸತ್ವಗುಣ ಒಳ್ಳೆಯದು, ಅನಪಾಯಕಾರಿ. ಆದರೆ ಹಾಗೆಂದು ಅದನ್ನು ಹಿಡಿದು ಕೂತರೆ. ರಜಸ್ತಮೋಗುಣಗಳೂ ಬಂದು ಸೇರಿಕೊಳ್ಳುತ್ತವೆ. ಏಕೆಂದರೆ ಈ ಮೂರು ಗುಣಗಳೂ ಒಂದನ್ನು ಬಿಟ್ಟು ಮತ್ತೊಂದಿರವು. ಒಂದು ಗುಣವನ್ನು ‘ಚೆನ್ನಾಗಿದೆ’ ಎಂದು ಹಿಡಿದು ಮಿಕ್ಕದ್ದನು ‘ಬೇಡ’ ಎಂದು ಬಿಡಲಾಗದು. ಬಿಟ್ಟರೆ ಮೂರನ್ನೂ ಬಿಟ್ಟು ತ್ರಿಗುಣಾತೀತವಾಗಬೇಕು, ಅಥವಾ ಮೂರರಿಂದಲೂ ಬದ್ಧರಾಗಿದ್ದು ಹುಟ್ಟಿ ಸಾಯುತ್ತಲೇ ಇರಬೇಕು!
ಹೀಗೆ ಈ ಸತ್ವ-ರಜ-ತಮೋಗುಣಗಳು ಬಗೆ ಬಗೆಯ ಸಂಕಲ್ಪ-ಕ್ರಿಯೆಗಳಲ್ಲಿ ಜೀವಿಗಳನ್ನು ತೊಡಗಿಸಿ ಜನ್ಮಮರಣಗಳೆಂಬ ಚಕ್ರದಲ್ಲಿ ತಿರುಗಿಸುವ ಪ್ರಾಕೃತಿಕ ಶಕ್ತಿ ವಿಶೇಷಗಳು, ಈ ಗುಣಗಳನ್ನು ಮೀರದ ಹೊರತು ಜನ್ಮಮರಣಗಳಿಂದ ಬಿಡುಗಡೆಯಿಲ್ಲ, ಸತ್ವರಜಸ್ತಮೋಗುಣಗಳ ಸ್ವರೂಪವನ್ನು ನಿದರ್ಶಿಸುವ ಸುಂದರ ದೃಷ್ಟಾಂತವನ್ನು ಶ್ರೀರಾಮಕೃಷ್ಣ ಪರಮಹಂಸರು ನೀಡುತ್ತಾರೆ-
ಒಂದು ಕಾಡಲ್ಲಿ ಒಬ್ಬ ಧನಿಕನು ಸಂಚಾರ ಮಾಡುತ್ತಿದ್ದನಂತೆ. ಹಠಾತ್ತನೇ ಮೂವರು ಕಾಡುಗಳ್ಳರು ಬಂದು ಅವನನ್ನು ಮುತ್ತಿದರಂತೆ. ಒಬ್ಬ ಕಳ್ಳ ಧನಿಕನನ್ನು ಕೊಲ್ಲಲು ನುಗ್ಗಿದನಂತೆ. ಆಗ ಇನ್ನೊಬ್ಬ ಕಳ್ಳನು “ಇವನನ್ನು ಕೊಲ್ಲುವುದು ಬೇಡ!“ ಎಂದು ಹೇಳುತ್ತ, ಆತನನ್ನು ಮರಕ್ಕೆ ಕಟ್ಟಿ ಹಾಕಿ ಎಲ್ಲವನ್ನು ದೋಚಿದನಂತೆ, ದೋಚಿದ ಮಾಲಿನೊಂದಿಗೆ ಮೂವರೂ ಕಳ್ಳರು ಹೊರಟುಬಿಟ್ಟರಂತೆ. ಆದರೆ ಮೂರನೆಯ ಕಳ್ಳನು ಹಿಂದಿರುಗಿ ಬಂದು, ಧನಿಕನನ್ನು ಬಂಧನದಿಂದ ಬಿಡಿಸಿ, ಕೈಹಿಡಿದು ಕಾಡಿನಂಚಿನವರೆಗೂ ಕರೆದೊಯ್ದನಂತೆ. ಧನಿಕನು ಕೃತಜ್ಞತೆಯಿಂದ ಅವನಿಗೆ ಹೇಳಿದನಂತೆ “ನಿನ್ನಿಂದ ಮಹದುಪಕಾರವಾಯಿತು. ದಯವಿಟ್ಟು ನನ್ನ ಮನೆಯವರೆಗೂ ಬಂದು ಆತಿಥ್ಯವನ್ನು ಸ್ವೀಕರಿಸು” ಎಂದು. ಆದರೆ ಮೂರನೆಯ ಕಳ್ಳನು ಉತ್ತರಿಸಿದನಂತೆ- “ಇಲ್ಲ ಸ್ವಾಮಿ. ಎಷ್ಟಾದರೂ ನಾನು ಕಳ್ಳನೆ, ನಾನು ಕಾಡನ್ನು ಬಿಟ್ಟು ನಾಡೊಳಗೆ ಬರಲಾರೆ”. ಹೀಗೆ ಹೇಳುತ್ತ ಮೂರನೆಯ ಕಳ್ಳನು ಕಾಡೊಳಕ್ಕೆ ಓಡಿಹೋಗಿ ತನ್ನ ಸಹಚರರನ್ನು ಕೂಡಿಕೊಂಡನಂತೆ.
ಈ ದೃಷ್ಟಾಂತದಲ್ಲಿ ಜನ್ಮಮರಣಗಳ ಜಾಲವೇ ‘ಅರಣ್ಯ’. ಜೀವಾತ್ಮನೇ ‘ಧನಿಕ’ನು. ಆ ಮೂವರು ಕಳ್ಳರು ‘ಸತ್ವರಜಸ್ತಮೋಗುಣ’ಗಳು, ನಿರ್ದಯವಾಗಿ ಕೊಂದು ನಾಶಗೈಯಲು ಮುಂದಾದ ಮೊದಲ ಕಳ್ಳನೇ ‘ತಮೋಗುಣ’. ಅವನಷ್ಟು ಕ್ರೂರಿಯಲ್ಲದಿದ್ದರೂ ಧನಿಕನನ್ನು ಕಟ್ಟಿ ಹಾಕಿ ಎಲ್ಲವನ್ನೂ ದೋಚಿದ ಎರಡನೆಯ ಕಳ್ಳನೇ ‘ರಜೋಗುಣ’. ರಜತಮೋಗುಣಗಳ ಬಂಧನದಿಂದ ಬಿಡಿಸಿ ದಾರಿ ತೋರಿಸಿದ ಮೂರನೆಯ ಕಳ್ಳನೇ ‘ಸತ್ವಗುಣ’. ಆದರೆ ಸತ್ವಗುಣವೂ ಸಂಸಾರವೆಂಬ ಅರಣ್ಯಕ್ಕೇ ಸೀಮಿತ, ಅಲ್ಲದೆ, ರಜಸ್ತಮೋಗುಣಗಳ ಸಹಚರನೂಹೌದು. ಬಿಡುಗಡೆಯ ಹಾದಿಯತ್ತ ನಮ್ಮನ್ನು ಒಯ್ಯುವಂತಹ ಪುಣ್ಯಕಾರಿ ಗುಣ. ಆದರೆ ಸಂಸಾರವೆಂಬ ಅರಣ್ಯದಿಂದಾಚೆಗೆ ಹೋಗಬೇಕಾದರೇ ಈ ಸತ್ವಗುಣವನ್ನೂ ಹಿಂದೆ ಬಿಟ್ಟು ಸಾಗುವುದು ಅನಿವಾರ್ಯ. ಆಹ! ಸತ್ವರಜಸ್ತಮೋಗುಣಗಳ ಸ್ವರೂಪವನ್ನು ಅರ್ಥೈಸಲು ರಾಮಕೃಷ್ಣರು ನೀಡುವ ಈ ದೃಷ್ಟಾಂತಕ್ಕಿಂತ ಸರಳ-ಸ್ಪಷ್ಟ ಉದಾಹರಣೆ ಮತ್ತೊಂದು ಸಿಗಲಾರದು!
ಪುಣ್ಯಸಂಚಯಕ್ಕಾಗಿಯೂ, ಪಾಪತಾಪಗಳ ನಿವಾರಣೆಗಾಗಿಯೂ ಸತ್ವಗುಣವನ್ನಾಶ್ರಯಿಸಬೇಕು. ಅದಕ್ಕಾಗಿಯೇ ವೇದವು ಒಂದಷ್ಟು ಕರ್ಮಕಾಂಡವನ್ನೂ ನಮ್ಮ ಮುಂದಿಡುತ್ತದೆ. ಆದರೆ ಅಲ್ಲೇ ನಿಲ್ಲದೇ, ನಾವು ನಿಸ್ತ್ರೈಗುಣ್ಯರಾಗಬೇಕು ಎನ್ನುವ ಕಿವಿಮಾತನ್ನು ಕೃಷ್ಣನು ಹೇಳುತ್ತಿದ್ದಾನೆ. ತಮಸ್ಸು ರಜಸ್ಸುಗಳು ಅಪಾಯಕಾರಿ ಹಾಗೂ ಬಂಧನಕಾರಿಯಾದ್ದರಿಂದ ಸರ್ವಥಾ ಅವುಗಳು ವರ್ಜ್ಯ. ಆದರೆ ಸತ್ವೋತ್ಕರ್ಷದಿಂದಾಗಿ ಸಜ್ಜನಿಕೆ ಸದಾಚಾರಗಳು ನಡೆಯುತ್ತವೆ. ಪರಮಾರ್ಥದಕಡೆಗೆ ಮನಸ್ಸು ತಿರುಗುತ್ತದೆ. ಆದರೆ ಸತ್ವಗುಣದ ಜೊತೆಜೊತೆಗೇ ರಜಸ್ತಮೋಗುಣಗಳು ನಿಂತಿರುತ್ತವೆ. ಸತ್ವವು ನಿರ್ಲಿಪ್ತಿಯಲ್ಲಿ ಕರಗದಿದ್ದಲ್ಲಿ ತಕ್ಷಣವೇ ’ನಾನು ಮಾಡಿದೆ’ ಎಂಬ ಅಹಮಿಕೆ ಹಾಗೂ ಫಲಾಪೇಕ್ಷೆಯು ನಮ್ಮನ್ನು ಆವರಿಸಿಬಿಡುತ್ತವೆ! ಅಲ್ಲಿಂದ ಮತ್ತೆ ಪತನ ಪ್ರಾರಂಭ!ಹೀಗೆ ಸತ್ವಗುಣವೊಂದೇ ಇದ್ದರೂ ಸಾಲದು. ಬುದ್ಧಿಯೋಗವನ್ನು ಆಶ್ರಯಿಸಿ ನಿರ್ಲಿಪ್ತಿಯನ್ನು, ಗುಣಾತೀತರಾಗುವ ಕೌಶಲವನ್ನೂ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಆತ್ಯಂತಿಕ ಶ್ರೇಯಸ್ಸು ಲಭ್ಯ ಎನ್ನುವುದು ಕೃಷ್ಣನ ಮಾತಿನ ಸಾರ.

ಡಾ. ಆರತೀ ವಿ ಬಿ
ಕೃಪೆ : ವಿಜಯವಾಣಿ

Leave a Reply