ಬದುಕಿಗೆ ಭಗವದ್ಗೀತೆ- ನಿತ್ಯನಾದ ನೀನು ಶೋಕಿಸುವ ಅಗತ್ಯವಿಲ್ಲ

ಬದುಕಿಗೆ ಭಗವದ್ಗೀತೆ- ನಿತ್ಯನಾದ ನೀನು ಶೋಕಿಸುವ ಅಗತ್ಯವಿಲ್ಲ

ನೀರು, ಗಾಳಿ, ಬೆಂಕಿ ಮೊದಲಾದ ಭೌತಿಕಶಕ್ತಿಗಳಿಂದಲೂ ಶಸ್ತ್ರಾದಿಗಳಿಂದಲೂ ‘ನಾಶ’ಗೈಯಲಾಗದ ಆತ್ಮ’ದ ಕುರಿತಾಗಿ ಹೇಳುತ್ತ ಶ್ರೀಕೃಷ್ಣನು ಮುಂದುವರೆಸುತ್ತಾನೆ –
ನಿತ್ಯಃಸರ್ವಗತಃಸ್ಥಾಣುರಚಲೋಽಯಂ ಸನಾತನಃ ಎಂದು ಸೂಚಿಸುತ್ತಾನೆ ಕೃಷ್ಣ.
ಆತ್ಮವು ’ನಿತ್ಯ’ (ಎಂದೆಂದೂ ಇರುವಂತಹದ್ದು), ಸರ್ವಗತ (ಎಲ್ಲೆಲ್ಲೂ ಇರುವಂತಹದ್ದು) ಸ್ಥಾಣುಃ (ಸ್ಥಿರವೂ ಒಂದೇ ತೆರನಾಗಿಯೂ ಇರುವಂತಹದ್ದು) ಹಾಗೂ ಅಚಲವೂ (ಚಲಿಸದ ತತ್ವ) ಆಗಿದೆ.
ಅಸದ್ವಸ್ತು ಪ್ರಪಂಚದಲ್ಲಿ ಹುಟ್ಟುವ-ನಾಶವಾಗುವ ಪ್ರಕ್ರಿಯೆಯು ಚಕ್ರದಂತೆ ಮರಳಿ ಮರಳಿ ಘಟಿಸುತ್ತಿರುತ್ತದೆ. ಆದರೆ ಇದರೊಳಗಡೆ ‘ದೇಹಿ’ಯಾಗಿರುವ ‘ಸದ್ವಸ್ತು’ವು (ಆತ್ಮವು) ಹಾಗಲ್ಲ. ಅದು ನಿತ್ಯ-ಎಂದರೆ, ಅನಾದಿಯಿಂದಲೂ ಇದ್ದೇ ಇತ್ತು, ಈಗಲೂ ಇದೆ, ಮುಂದೆಯೂ ಇರುವಂತಹದ್ದೇ. ಅದು ಸರ್ವಗತ – ಎಂದರೆ, ಎಲ್ಲೆಲ್ಲೂ ಇರುವಂತಹದ್ದು. ದೇಹ-ಮನ-ಬುದ್ಧಿಗಳೆಂಬ ಆವರಣಗಳಿಗೆ ‘ಮಿತಿ’ಯುಂಟು. ಆದರೆ ಅದರೊಳಗೂ ಹೊರಗೂ ಆಕಾಶದಂತೆ ತುಂಬಿರುವ ಆತ್ಮತತ್ವಕ್ಕೆ ‘ಮಿತಿ’ಯಿಲ್ಲ.  ಅದು ಯಾವ ಒಂದು ದೇಹಕ್ಕೂ ವಸ್ತುವಿಗೂ ಕಾಲಕ್ಕೂ ದೇಶಕ್ಕೂ ಸೀಮಿತವಲ್ಲ. ಹಾಗಾಗಿ ಅದು ‘ಸರ್ವಗತ’.
ಆತ್ಮವು ಸ್ಥಾಣು- ಎಂದರೆ ದೃಢವೂ, ಅಲುಗಾಡಿಸಲಾಗದ್ದು ಎಂದರ್ಥ. ಯಾವ ಬಾಹ್ಯ ಪ್ರಭಾವವೂ ಅದನ್ನು ಅಲುಗುವಂತೆಯಾಗಲಿ, ಬೀಳುವಂತಾಗಲಿ, ಬದಲಾಗುವಂತಾಗಲೀ ಮಾಡಲಾಗದು. ಹಾಗಾಗಿ ಅದು ‘ಸ್ಥಾಣು’. ಅದು ಅಚಲ-ಎಂದರೆ, ಚಲಿಸುವುದಿಲ್ಲ. ‘ಸರ್ವಗತ’ವಾದ ಅಸ್ತಿತ್ವವು ‘ಚಲಿಸು’ವುದಾದರೂ ಎಲ್ಲಿಗೆ?! ಖಂಡವಾದರೆ ತಾನೆ, ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಲು ಸಾಧ್ಯ?ಎಲ್ಲೆಲ್ಲೂ ತಾನೇ ಇರುವ ಅಖಂಡ ತತ್ವವಾದ್ದರಿಂದ ಅದು ‘ಅಚಲ’. ಅದು ಸನಾತನ-ದೇಶ-ಕಾಲ-ಗಣನೆಗಳಾಚೆಗೇ ನಿಲ್ಲುವ ಅಸ್ತಿತ್ವವು ‘ಸನಾತನ’ ಎನಿಸುತ್ತದೆ. ಎಂದರೆ ಅನಾದಿಯಿಂದ ಇರುವಂತಹದ್ದು, ಅನಂತವಾಗಿ ಮುಂದುವರೆಯುವಂತಹದ್ದು.
ನಮ್ಮ ವ್ಯಕ್ತಿತ್ವದಲ್ಲಿ ದೇಹಾದಿಗಳ ಭಾಗದ ಅನಿತ್ಯತೆಯನ್ನು ಮನಗಂಡಾಗ, ಆತ್ಮದ ನಿತ್ಯಃವೂ ಸರ್ವಗತವೂ ಸ್ಥಾಣುವೂ ಅಚಲವೂ ಸನಾತನವೂ ಆದ ಸ್ವರೂಪದ ಅರಿವು ನಮಗಾಗುತ್ತದೆ. ಇಂತಹ ಬೋಧೆಯೇ ನಿಜಾರ್ಥದಲ್ಲಿ ದೃಢತೆಯನ್ನೂ ಸ್ಥೈರ್ಯವನ್ನೂ ತರಬಲ್ಲುದು. ಅದನ್ನೇ ಕೃಷ್ಣನು ಅರ್ಜುನನಿಗೆ ಅರ್ಥಪಡಿಸುತ್ತಿದ್ದಾನೆ.
ಆಕಾರ-ಅವಯವ-ಆಯಾಮಗಳಿಲ್ಲದ ಆಕಾಶವು ಅಮೂರ್ತವಾದ ಆತ್ಮತತ್ವಕ್ಕೆ ಹತ್ತಿರದ ಉದಾಹರಣೆ ಎನ್ನುವುದನ್ನು ಹಿಂದೆಯೇ ನೋಡಿದ್ದೇವೆ. ಆಕಾಶದಂತೆ ಮೂರ್ತವಲ್ಲದ್ದೂ, ಸೀಮಾತೀತವಾದದ್ದೂ, ಆಕಾರ ವಿಕಾರಗಳಿಲ್ಲದ್ದರಿಂದ ಮೂರ್ತಕಲ್ಪನೆಗಳಿಗೆ ನಿಲುಕದ್ದೂ ಆದ ಆತ್ಮದ ಅಸ್ತಿತ್ವವೇ ನಮ್ಮ ನಿಜವಾದ ನೆಲೆ.
ಸರಿ, ಆದರೆ ನಮ್ಮ ಬುದ್ಧಿಮನಗಳಿಗೇಕೆ ಇದು ಗ್ರಹಿಕೆಗೇ ಬಾರದು?ನಮ್ಮೊಳಗೇ ಇರುವ ನಮ್ಮದೇ ಸ್ವರೂಪವಾದ ಆತ್ಮದ ಬೋಧೆಯೇ ಆಗುವುದಿಲ್ಲವಲ್ಲ?!” ಅದಕ್ಕೆ ಕಾರಣವನ್ನೂ ಆತ್ಮಲಕ್ಷಣಗಳ ಮೂಲಕವೇ ತಿಳಿಸುತ್ತಾನೆ ಕೃಷ್ಣ-
ಅವ್ಯಕ್ತೋಽಯಮಚಿಂತ್ಯೋಽಯಮವಿಕಾರ್ಯೋಽಯಮುಚ್ಯತೇ I
ತಸ್ಮಾದೇವಂ ವಿದಿತ್ವೈನಂ ನಾನು ಶೋಚಿತುಮರ್ಹಸಿ II
ಆತ್ಮವು ’ಅವ್ಯಕ್ತ’ವೂ ಅಚಿಂತ್ಯವೂ ಅವಿಕಾರ್ಯವೂ ಆಗಿದೆ. ಹಾಗಾಗಿ ಶೋಕಿಸಬಾರದು.
ಆತ್ಮವು ಅವ್ಯಕ್ತ- ಎಂದರೆ ವ್ಯಕ್ತವಾಗಿ ಕಾಣಬರದು. ‘ಕಾಣಬರದು’ ಎಂದರೆ ಇಂದ್ರಿಯ-ಬುದ್ಧಿ-ಮನಾದಿಗಳಿಗೆ ಅದು ಗ್ರಾಹ್ಯವಲ್ಲ ಎಂದಷ್ಟೇ ಅರ್ಥ. ’ವ್ಯಕ್ತ’ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ನಮಗೆ ಇಂದ್ರಿಯ ಹಾಗೂ ಅಂತಃಕರಣಗಳು ಸಾಮಾನ್ಯ ಸಾಧನಗಳು. ಆದರೆ ಈ ಇಂದ್ರಿಯ-ಮನೋ-ಬುದ್ಧಿಗಳು ಭೌತಿಕ ವಿಷಯಗಳನ್ನಷ್ಟೇ ಗ್ರಹಿಸಬಲ್ಲುವು. ಸೂಕ್ಷ್ಮತಮವಾದ ಚೈತನ್ಯಸ್ವರೂಪದ ಆತ್ಮವನ್ನಲ್ಲ. ಹಾಗಾಗಿ, ಅದರ ಅಸ್ತಿತ್ವ ಭವ್ಯವಾಗಿದ್ದರೂ, ಇಂದ್ರಿಯ ಮನೋಬುದ್ಧಿಗಳ ಮಟ್ಟಿಗೇ ಅದು ಅವ್ಯಕ್ತವೇ ಆಗಿದೆ.
ಅದು ಅಚಿಂತ್ಯವೂ ಹೌದು. ಚಿಂತಿಸಲು ಸಾಧನ ಮಾಪನ ಮುಂತಾದವು ಬೇಕಾಗುತ್ತವೆ. ಆದರೆ ಆತ್ಮದ ವಿಷಯದಲ್ಲಿ ಲೌಕಿಕ ಸಾಧನಗಳೆಲ್ಲ ನಿಷ್ಪ್ರಯೋಜಕ. ಕಾಯಿ-ತರಕಾರಿಗಳಂತೆ ಹಾಲು-ನೀರುಗಳನ್ನು Kilogram ಲೆಕ್ಕದಲ್ಲಿ ಅಳೆಯಲಾಗದು. ನಗರ ನಗರಗಳ ಅಂತರವನ್ನು Litre ಲೆಕ್ಕದಲ್ಲಿ ಅಳೆಯಲಾಗದು. ದುಡ್ಡನ್ನು Kilometer ಲೆಕ್ಕದಲ್ಲಿ ಅಳೆಯಲಾಗದು, ಅಲ್ಲವೆ? ಹೀಗೆ ಭೌತಿಕ ನೆಲೆಯಲ್ಲೇ ’ಮಾಪನ’ದ ಸಾಧನವು ಬದಲಾಗುವುದನ್ನು ನೋಡುತ್ತೇವೆ! ಹೀಗಿರುವಾಗ ಭೌತಿಕವಲ್ಲದ ಇಂದ್ರಿಯ ಗೋಚರವಲ್ಲದ ಚೈತನ್ಯ ಸ್ವರೂಪದ ಬಗ್ಗೆ ಭೌತಿಕವಾಗಿ ವಿಚಾರಮಾಡಿ ಅಳೆಯುವುದು ಹೇಗೆ ತಾನೆ ಸಾಧ್ಯ? ಹೀಗೆ ಲೌಕಿಕ ಮಾಪನಕ್ಕೂ ತರ್ಕಕ್ಕೂ ನಿಲುಕದ ಸೂಕ್ಷ್ಮತಮ ಆತ್ಮವು ಸಹಜವಾಗಿಯೇ ಅಚಿಂತ್ಯವಾಗಿದೆ. ಮನೋಬುದ್ಧಿಗಳಿಗೆ ’ಮೂರ್ತ’ವಾದುದನ್ನಷ್ಟೇ ಚಿಂತಿಸಿ ಅನುಭವ. ದರ್ಶ್ಯವೋ ಸ್ಪೃಶ್ಯವೋ ಶ್ರಾವ್ಯವೋ ಆದುದನ್ನಷ್ಟೇ ಅದು ಗ್ರಹಿಸಲು ಚಿಂತಿಸಲು ಸಾಧ್ಯ. ಅಮೂರ್ತತತ್ವದ ಅನುಸಂಧಾನ ಮಾಡೆಂದರೂ ಮನೋದುಹ್ಹಿಗಳೂ ಚಿಂತ್ಯವಾದ ಕಲ್ಪನೆಗಳ ಜಾಲದಲ್ಲೇ ಸಿಲುಕುತ್ತವೆ!
ಆತ್ಮವು ಅವಿಕಾರ್ಯ. ವಿಕಾರ ಎಂದರೆ ಬದಲಾವಣೆ- ವೃದ್ಧಿ-ಹ್ರಾಸಗಳು. ಭೌತಿಕ-ಜಗತ್ತಿನ ಎಲ್ಲ ವಸ್ತುಗಳೂ ಭೌತಿಕ ಶಕ್ತಿಗಳಿಂದ ಪ್ರಭಾವಿತವಾಗಿ ವಿಕಾರಗೊಳ್ಳುತ್ತವೆ. ಹಾಗಾಗಿ ಅವೆಲ್ಲ ’ವಿಕಾರ್ಯ’. ಆತ್ಮವು ತಾನಾಗಿಯೂ ಬದಲಾಗದು ಅಥವಾ ಭೌತಿಕಶಕ್ತಿಗಳ ಪ್ರಭಾವದಿಂದಲೂ ಬದಲಾಗದು. ಹಾಗಾಗಿ ಅದು ಅವಿಕಾರ್ಯ ಎನಿಸುತ್ತದೆ.
ಭೌತಿಕವಾದ ಮಾಪನಗಳಿಗೆ ಸಿಕ್ಕದಿರುವುದೂ, ಊಹಾಪೋಹಗಳಿಗೆ ಅತೀತವೂ, ಅವಿಕಾರ್ಯವೂ ಆದ ಆತ್ಮದ ನೆಲೆಯತ್ತ ಪ್ರವೃತ್ತವಾದಾಗ, ನಿಜಾರ್ಥದಲ್ಲಿ ನಮ್ಮ ಶೋಕವು ತೊಲಗುತ್ತದೆ. ಇರುವುದು(ಸತ್) ಇದ್ದೇ ಇದೆ. ಇಲ್ಲದ್ದು(ಅಸತ್) ಬಂದು ಹೋಗುವಂತಹದ್ದು, ಇನ್ನೂ ಏತಕ್ಕಾಗಿ ಶೋಕಿಸಬೇಕು? ಬೋಧೆಯ ಬೆಳಕು ಮೂಡುತ್ತಲೆ ’ಶೋಕ’ವೆಂಬ ಕತ್ತಲು ತಾನಾಗಿಯೇ ಮಾಯವಾಗುತ್ತದೆ- ಎನ್ನುವುದು ಕೃಷ್ಣನ ಅಭಿಪ್ರಾಯ.
ವೃದ್ಧಿಹ್ರಾಸಗಳು ಜನ್ಮಮರಣಗಳೂ ಮಾನಾಪಮಾನಗಳೂ ನಮ್ಮ ದೇಹಾದಿ ಹೊರ-ಆವರವಣಗಳಲ್ಲಿ ನಡೆಯುವಂಥಹವು ಆತ್ಮಸ್ವರೂಪದಲ್ಲಲ್ಲ’ ಎಂಬ ಕೃಷ್ಣನ ಉಪದೇಶ ನಮಗೆಲ್ಲ ಭರವಸೆಯ ಪಾಠ. ದೇಹಬುದ್ಧಿಯನ್ನು ಬಿಟ್ಟು ಆತ್ಮಭಾವದಿಂದ ಪರ್ಯಾಲೋಚಿಸಿದಾಗ ನಮ್ಮೊಳಗಿನ ನಿತ್ಯಶುದ್ಧ ಚೈತನ್ಯದ ಶಕ್ತಿಯು ನಮಗೇ ಅನುಭಾವ್ಯವಾಗುತ್ತದೆ.

ಡಾ.ಆರತಿ ವಿ.ಬಿ.
ಕೃಪೆ : ವಿಜಯವಾಣಿ

Leave a Reply