ಬದುಕಿಗೆ ಭಗವದ್ಗೀತೆ – ಪ್ರತಿ ಕ್ಷಣವೂ ನಡೆಯುವ ಕರ್ಮ

ಬದುಕಿಗೆ ಭಗವದ್ಗೀತೆ – ಪ್ರತಿ ಕ್ಷಣವೂ ನಡೆಯುವ ಕರ್ಮ

ನೈಷ್ಕರ್ಮ್ಯವೆಂದರೆ ‘ಸುಮ್ಮನಿರುವುದಲ್ಲ’, ಅಂತರಂಗದ ಸಂಕಲ್ಪಗಳ ಗಂಟುಗಳನ್ನು ನಿರ್ಲಿಪ್ತಕರ್ಮದ ಮೂಲಕ ಕರಗಿಸಿಕೊಂಡು ಮುಕ್ತವಾಗುವುದು. ಹಾಗೆ ಕೃತಕೃತ್ಯನಾದ ಮೇಲೆ ಮನುಷ್ಯನು ಯಾವುದೇ ಕರ್ಮಗಳಲ್ಲಿ ತೊಡಗಿದರೂ, ಆತ ಅವುಗಳಿಂದ ಬದ್ಧನಾಗುವುದಿಲ್ಲ. ಹಾಗಾಗಿ ಆತನು ಕರ್ಮ ಮಾಡಿಯೂ ‘ಮಾಡಿಲ್ಲ’ ಎಂಬ ನೈಷ್ಕರ್ಮ್ಯಸ್ಥಿತಿಯನ್ನು ಹೊಂದುತ್ತಾನೆ ಎಂಬ ವಿಚಾರವನ್ನು ನೋಡಿದ್ದೇವೆ. ಶ್ರೀಕೃಷ್ಣನು ಮುಂದುವರಿಸುತ್ತಾನೆ;
ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ |
ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗಣೈಃ || (ಭ.ಗೀ.: 3.5)
‘ಯಾರೂ ಕ್ಷಣಕಾಲವೂ ‘‘ಏನು ಮಾಡದೆ’’ ಇರುವುದು ಸಾಧ್ಯವೇ ಇಲ್ಲ! ಎಲ್ಲರೂ ಸ್ವಭಾವಜನ್ಯವಾದ ಗುಣಗಳಿಗೆ ವಶರಾಗಿ ಕರ್ಮದಲ್ಲಿ ಅವಶ್ಯವಾಗಿ ತೊಡಗಿಯೇ ಇರುತ್ತಾರೆ.’’
‘ನಾನು ಏನೂ ಮಾಡುವುದಿಲ್ಲ’ ಎಂದು ಘೊಷಿಸುವುದೇ ಹಾಸ್ಯಾಸ್ಪದ! ಏಕೆಂದರೆ ಮನುಷ್ಯನು ದೈಹಿಕವಾಗಿಯೂ ಬೌದ್ಧಿಕವಾಗಿಯೂ ಭಾವನಾತ್ಮಕವಾಗಿಯೂ ಅದೆಷ್ಟೋ ಸ್ಥೂಲ ಹಾಗೂ ಸೂಕ್ಷ್ಮ ಕರ್ಮಗಳಲ್ಲಿ ಅವಿರತವಾಗಿ ತೊಡಗಿಯೇ ಇರುತ್ತಾನೆ!
‘ಕರ್ಮ’ ಎಂದರೆ ಕಣ್ಣಿಗೆ ಕಾಣುವಂತಹ ನಿರ್ದಿಷ್ಟ ಬಾಹ್ಯಚಟುವಟಿಕೆಯೊಂದೇ ಅಲ್ಲ; ಹೃದಯದ ಬಡಿತ, ಉಸಿರಾಟ, ರಕ್ತಸಂಚಾರ, ಕಣ್ಣು ಮಿಟುಕಿಸುವಿಕೆ ಮುಂತಾದ ನಮ್ಮೊಳಗಿನ ಹಲವು ಸೂಕ್ಷ್ಮತರ ಪ್ರಕ್ರಿಯೆಗಳೂ ಕರ್ಮಗಳೇ. ನಿರ್ದಿಷ್ಟ ಉದ್ದೇಶವಿಲ್ಲದೆಯೂ ನಾವು ಓಡಾಡುತ್ತ, ಏಳುತ್ತ, ಕೂರುತ್ತ, ಅವಯವಗಳನ್ನು ಚಾಲಿಸುತ್ತೇವಲ್ಲ, ಅವೂ ಕರ್ಮಗಳೇ! ಮನಸ್ಸು ಅವಿರತವಾಗಿ ಅದಾವುದೋ ವಸ್ತುವನ್ನೋ ಸನ್ನಿವೇಶವನ್ನೋ ವ್ಯಕ್ತಿಯನ್ನೋ ಸುಖ-ದುಃಖದ ಅನುಭವಗಳನ್ನೋ ನೆನೆಯುತ್ತ, ಬಯಸುತ್ತ, ಕೊರಗುತ್ತ ಇರುತ್ತದಲ್ಲವೆ? ಅದೂ ಕರ್ಮವೇ! ಬುದ್ಧಿಯು ಅದಾವುದನ್ನೋ ತರ್ಕಿಸುತ್ತ, ನಿರ್ಣಯಿಸುತ್ತ, ಲೆಕ್ಕ ಹಾಕುತ್ತ, ಯೋಜನೆ ಹೂಡುತ್ತ ಇರುವುದೂ ಕರ್ಮವೇ! ಹೀಗೆ ನಮ್ಮ ದೇಹ-ಬುದ್ಧಿ-ಮನಸ್ಸುಗಳ ಪರಸ್ಪರ ಸಂಯೋಗದಿಂದಾಗಿ ಅದೆಷ್ಟೋ ಸ್ಥೂಲವೂ ಸೂಕ್ಷ್ಮವೂ ಆದ ಕರ್ಮಗಳು ಸತತವಾಗಿ ನಡೆಯುತ್ತಲೇ ಇವೆ. ಇವೆಲ್ಲ ನಮ್ಮದೇ ಪ್ರಕೃತಿಜನ್ಯವಾದ ಗುಣಗಳಿಂದ ಕ್ರಮಬದ್ಧವಾಗಿ (programmed) ನಡೆಯುತ್ತವೆ! ಗರ್ಭಸ್ಥವಾದಾಗಿನಿಂದಲೂ, ಹುಟ್ಟಿ, ಬೆಳೆದು ಸಾಯುವ ತನಕವೂ ದೇಹವು ತನ್ನೊಳಗಿನ ಅದಾವುದೋ ಗುಣದ ನಿರ್ದೇಶದಂತೆ ಬೆಳೆಯುತ್ತದೆ, ಅಳಿಯುತ್ತದೆ. ಕೈಕಾಲುಗಳನ್ನು ಆಡಿಸುವುದು, ಮಾತನಾಡುವುದು ಇತ್ಯಾದಿಗಳು ನಮ್ಮ ಇಚ್ಛೆ-ನಿಯಂತ್ರಣದಿಂದ ನಡೆದರೆ, ಹೃದಯದ ಬಡಿತ, ರಕ್ತಸಂಚಾರಾದಿಗಳನ್ನು ನಾವು ನಮಗರಿವಿಲ್ಲದೆಯೇ ನಿರ್ವಹಿಸುತ್ತಿರುತ್ತೇವೆ! ನಮಗಿಷ್ಟವಿರುವ ಅಥವಾ ಇಷ್ಟವಿಲ್ಲದ ರುಚಿಯೋ ಶಬ್ದವೋ ದೃಶ್ಯವೋ ವಾಸನೆಯೋ ಸ್ಪರ್ಶವೋ ಅನುಭವಕ್ಕೆ ಬರುತ್ತಲೇ, ನಮ್ಮ ದೇಹ-ಮನಗಳು ಥಟ್ಟನೆ ತಾವೇ ತಾವಾಗಿ ಪ್ರತಿಕ್ರಿಯಿಸುತ್ತವಲ್ಲ! ಅದೂ ಒಂದು ತರಹ pre-programmed ನಡೆಯುವ ಕರ್ಮಗಳು.
ಅಷ್ಟೇ ಅಲ್ಲ, ಒಮ್ಮೆಲೇ ಹತ್ತಾರು ಕೆಲಸಗಳನ್ನೂ ಆಲೋಚನೆಗಳನ್ನೂ ಒಟ್ಟೊಟ್ಟಿಗೆ ಮಾಡುವ ಕರ್ಮಕುಶಲರೂ ಆಗಿರುತ್ತೇವೆ! ಮನೆಯೊಡತಿಯು ಅಡುಗೆ ಮಾಡುತ್ತಿರುವಾಗಲೇ, ದೂರವಾಣಿಯಲ್ಲೂ ಸಂಭಾಷಿಸುತ್ತ, ಒಂದು ಕೈಯಲ್ಲಿ ಪಾತ್ರೆ ಹಿಡಿದು, ಮತ್ತೊಂದರಲ್ಲಿ ಅಳತೆಗೆ ತಕ್ಕಂತೆ ತರಕಾರಿ-ಉಪ್ಪು-ಮಸಾಲೆ ಹಾಕಿ ಬೇಯಿಸುತ್ತ, ತನ್ಮಧ್ಯೆ ಕುಕರ್ ಸೀಟಿಯನ್ನು ಲೆಕ್ಕ ಇಡುತ್ತ, ದೂರದರ್ಶನದ ಧಾರಾವಾಹಿಯತ್ತಲೂ ಇಣುಕುತ್ತ, ಮಗನನ್ನು ಊಟಕ್ಕಾಗಿ ಕಣ್ಸನ್ನೆಯಿಂದ ಕರೆಯುತ್ತ, ಗಡಿಯಾರದತ್ತ ನೋಡುತ್ತ ಮುಂದಿನ ಕಲಾಪಕ್ಕೆ ಸಿದ್ಧವಾಗುತ್ತಿರುತ್ತಾಳೆ! ಇಲ್ಲಿ, ದೇಹದ ಅಸಂಖ್ಯ ನರನಾಡಿಗಳೂ, ಅವಯವಗಳೂ ಬುದ್ಧಿ-ಮನಸ್ಸುಗಳ ಸಂಯೋಗದಿಂದಾಗಿ ವಿವಿಧ ಕರ್ಮಗಳಲ್ಲಿ ಒಮ್ಮೆಲೆ ತೊಡಗಿಕೊಂಡಿರುತ್ತವಲ್ಲ! ಹೀಗೆ ನಮ್ಮ ಒಳಗೂ ಹೊರಗೂ ನಮ್ಮ ಗಮನಕ್ಕೆ ಬರುವ ಹಾಗೂ ಬರದಿರುವ ಅದೆಷ್ಟೋ ಕರ್ಮಗಳು ಪ್ರಕೃತಿಜನ್ಯಗುಣಗಳ ನಿರ್ದೇಶದಂತೆ ನಡೆಯುತ್ತಲೇ ಇವೆ. ಹೀಗಿರುವಾಗ ನಾವು ‘ಸುಮ್ಮನಿರುವ’ ಕ್ಷಣವೇ ಇಲ್ಲ ಎನ್ನಿ!
ನಾವು ನಿದ್ರೆ ಮಾಡುವಾಗಲಾದರೂ ಸುಮ್ಮನಿರುತ್ತೇವೆಯೇ? ಊಹ್ಞೂಂ! ಆಗಲೂ ಎದೆಬಡಿತ, ರಕ್ತಸಂಚಾರಾದಿಗಳಂತೂ ನಡೆಯಲೇಬೇಕಲ್ಲ! ಅತ್ತಿತ್ತ ಹೊರಳಾಡುವುದು, ಹೊದಿಕೆ ಸರಿಪಡಿಸಿಕೊಳ್ಳುವುದು, ಕನಸು ಕಾಣುವುದು – ನಡೆಯುತ್ತಲೇ ಇರುತ್ತವಲ್ಲ! ಇದಲ್ಲದೆ ನಮ್ಮ ಮಿದುಳಿನ ನಿಗದಿತ ಸ್ಥಳಗಳಲ್ಲಿ ಕ್ಷಣಕ್ಷಣವೂ ಅಪಾರವಾದ Memory Processing ನಡೆಯುತ್ತಲೇ ಇರಬೇಕಲ್ಲ! ಹೀಗೆ, ದೇಹವು ತನ್ನ ಪ್ರಕೃತಿಯಂತೆ ವೃದ್ಧಿಹ್ರಾಸಾದಿಗಳಲ್ಲಿ ತೊಡಗಿದ್ದರೆ, ಮನಸ್ಸು ತನ್ನ ಪ್ರವೃತ್ತಿಯಂತೆ ರಾಗದ್ವೇಷಗಳಲ್ಲಿ ಹಿಗ್ಗುತ್ತ, ಕುಗ್ಗುತ್ತ ಇರುತ್ತದೆ. ಬುದ್ಧಿಯು ತನ್ನ ಸಂಸ್ಕಾರಕ್ಕನುಗುಣವಾದ ಚಿಂತನೆಗಳಲ್ಲಿ ತೊಡಗುತ್ತದೆ. ಒಟ್ಟಿನಲ್ಲಿ ಎಲ್ಲ ಜೀವಿಗಳೂ, ನಿಸರ್ಗವೂ ತಮ್ಮೊಳಗಿನ ಪ್ರಕೃತಿಜನ್ಯಗುಣಗಳ ನಿರ್ದೇಶದಂತೆ ಅವಿರತವೂ ಒಂದಲ್ಲ ಒಂದು ಬಗೆಯ ಕರ್ಮವೆಸಗುತ್ತಲೇ ಇರುತ್ತವೆ. ಕರ್ಮದ ಈ ವ್ಯಾಪ್ತಿಯ ಪರಿಜ್ಞಾನವಿಲ್ಲದೆ ನಾವು ಒಂದೆರಡು ಕಲಾಪಗಳನ್ನೋ ನಿಲ್ಲಿಸಿಬಿಟ್ಟು ‘ನಾನೇನೂ ಮಾಡುವುದೇ ಇಲ್ಲ, ನನ್ನದು ನೈಷ್ಕರ್ಮ್ಯಭಾವ!’ ಎಂದು ಹೇಳುವುದು ಅರ್ಥಹೀನವಷ್ಟೇ ಅಲ್ಲ, ಹಾಸ್ಯಾಸ್ಪದ! ಅಷ್ಟಕ್ಕೂ ‘ನಾನು ಏನನ್ನೂ ಮಾಡುವುದಿಲ್ಲ’ ಎಂದು ಆಲೋಚಿಸುವುದೂ, ಬಾಯಲ್ಲಿ ಹೇಳುವುದೂ ಕರ್ಮಗಳೇ ಅಲ್ಲವೆ?!
ಅದಕ್ಕೇ ಶ್ರೀಕೃಷ್ಣನು ಹೇಳಿದ್ದು – ‘ಕ್ಷಣಕಾಲವೂ ಯಾರೂ ಕರ್ಮ ಮಾಡದೆ ಇರಲಾರರು, ಸ್ವಭಾವಜನ್ಯ ಗುಣಗಳಿಂದ ಪ್ರೇರೇಪಿತರಾಗಿ ಎಲ್ಲವೂ ಅವಶ್ಯವಾಗಿ ಕರ್ಮ ಮಾಡುತ್ತಲೇ ಇರುತ್ತಾರೆ!’
(ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್…) ಎಂದು. ಹೀಗಾಗಿ ‘ನೈಷ್ಕರ್ಮ್ಯ’ವೆಂದರೆ ‘ಸುಮ್ಮನಿರುವು’ದಂತೂ ಅಲ್ಲ, ‘ಮಾಡಬೇಕದ್ದನ್ನು ಮಾಡಿಮುಗಿಸಿ ಕೃತಕೃತ್ಯರಾಗುವುದು’, ‘ಬಂಧಮುಕ್ತರಾಗುವುದು’ ಎಂದೇ ಅರ್ಥ.

ಡಾ ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply