ಬದುಕಿಗೆ ಭಗವದ್ಗೀತೆ – ಫಲದಾಸೆಯ ಕರ್ಮವು ತುಚ್ಛ, ಬುದ್ಧಿಯೋಗವೇ ಉಚ್ಛ

ಬದುಕಿಗೆ ಭಗವದ್ಗೀತೆ – ಫಲದಾಸೆಯ ಕರ್ಮವು ತುಚ್ಛ, ಬುದ್ಧಿಯೋಗವೇ ಉಚ್ಛ

‘ಜೀವನದ ಆಗು ಹೋಗುಗಳಿಗೆ ನಾವು ಒಗ್ಗಿಕೊಳ್ಳುತ್ತ ಅಲ್ಲಿನ ಸಿದ್ಧ್ಯಸಿದ್ಧಿಗಳ ವಿಷಯದಲ್ಲಿ ಸಮವಾಗಿ ಇರಬೇಕು’ ಎನ್ನುವ ಪಾಠವನ್ನು ಕೃಷ್ಣನು ಕಲಿಸಲಾರಂಭಿಸಿದ್ದನಷ್ಟೆ? ಹೀಗೆ ಮುಂದುವರೆಸುತ್ತಾನೆ – ಸಮತ್ವಂ ಯೋಗ ಉಚ್ಯತೆ(ಸಮತ್ವವೇ ’ಯೋಗ’). ‘ಯೋಗ’ವೆಂದರೆ ಯಾವುದೋ ‘ಬೆರಗುಗೊಳಿಸುವ ಸಾಧನಾಕ್ರಮವಾಗಿರಬೇಕು’ ಎಂದೇ ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ಎಂತೆಂತಹ ಸಾಧನೆಗಳನ್ನೂ ಒಂದಷ್ಟು ಪರಿಶ್ರಮ ಹಾಗೂ ಛಲಬಲಗಳಿಂದ ಮಾಡಿಬಿಡಬಹುದು, ಆದರೆ ಎಲ್ಲಕ್ಕಿಂತಲೂ ಕಷ್ಟತಮ ಸಾಧನೆ ಯಾವುದು ಗೊತ್ತೆ? ಜೀವನದ ಗತಿಗಳನ್ನೆಲ್ಲ ಸಾಕ್ಷೀಭಾವದಿಂದ ಕಾಣುತ್ತ, ಕಲಿಯುತ್ತ, ಏಳುಬೀಳುಗಳೆಲ್ಲದರಲ್ಲೂ ಸಮಭವಾದಿಂದಿರುವುದು! ಜೀವನದಲ್ಲಿ ಕಷ್ಟ-ನಷ್ಟ-ನಿರಾಶೆ-ತಿರಸ್ಕಾರಾದಿಗಳನ್ನು ಅನುಭವಿಸಿದವರು ನೋಯದೆ ಇರುವುದು ಸುಲಭವೇ? ನೋವನ್ನು ನುಂಗಿ, ಪ್ರತಿಕ್ರಿಯಿಸದೇ ಸುಮ್ಮನಿದ್ದರೂ, ದುಗುಡ-ದುಃಖಗಳು ಮನದೊಳಗೆ ಕಾಡದೇ ಇದ್ದಾವೆಯೆ? ನೋವನ್ನು ಸಹಿಸಿ, ಪ್ರತಿಕ್ರಿಯಿಸದೆ ಇದ್ದೂ, ಅಂತರಂಗದಲ್ಲಿ ಚಿಂತಾವಿಲಾಪಗಳಿಲ್ಲದೇ ಶಾಂತವಾಗಿರುವುದನ್ನು ‘ತಿತಿಕ್ಷಾ’ಗುಣ ಎನ್ನುತ್ತಾರೆ ಆಚಾರ್ಯ ಶಂಕರರು- ಸಹನಂ ಸರ್ವದುಃಖಾನಾಂ ಅಪ್ರತೀಕಾರಪೂರ್ವಕಂI ಚಿಂತಾವಿಲಾಪರಹಿತಂ ಸಾತಿತಿಕ್ಷಾ ನಿಗದ್ಯತೆ II- ವಿವೇಕಚೂಡಾಮಣಿ. ಅಸಹಾಯಕರಾಗಿದ್ದಾಗ, ಬೇರೆ ದಾರಿ ಕಾಣದೆ ನಾವು ನೋವನ್ನು ಸಹಿಸಿ ಸುಮ್ಮನಿರುವುದುಂಟು. ಆದರೆ ‘ಮುಂದೆಂದಾದರೂ ಸರಿಯಾಗಿ ಪ್ರತೀಕಾರ ತೀರಿಸಿಕೊಳ್ಳಬೇಕು!’ ಎಂದು ಲೆಕ್ಕಾಚಾರ ಹಾಕುತ್ತಲೇ ಇರುತ್ತವೆ! ಅಥವಾ ಪ್ರತಿಕಾರ ತೀರಿಸಿಕೊಳ್ಳುವ ಯೋಚನೆಯಿಲ್ಲದಿದ್ದರೂ ತಿರಸ್ಕೃತರಾದೆವೆಂದೋ ಅವಮಾನಿತರಾದೆವೆಂದೋ ವರ್ಷಗಟ್ಟಲೇ ಕೊರಗುತ್ತಲೇ ಇರುತ್ತೇವೆ! ಮನವನ್ನು ಮುದುಡಿಸುವ ಈ ಕೊರಗು ಬುದ್ಧಿಯನ್ನೂ ನಿಯಂತ್ರಿಸತೊಡಗುತ್ತದೆ. ಆಗ ಆವೇಶದ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ. ಮತ್ತಷ್ಟು ಸಂಕಷ್ಟಗಳಿಗೆ ಸಿಲುಕುತ್ತೇವೆ! ಇದೊಂದು ಚಕ್ರ. ಇದರಿಂದ ಪಾರಾಗಬೇಕಾದರೇ, ‘ಸಮತ್ವ’ವನ್ನು ಯೇನ-ಕೇನ-ಪ್ರಕಾರೇಣ ಸಂಪಾದಿಸುವ ಅಭ್ಯಾಸ ಮಾಡಲೇಬೇಕು! ಅದಕ್ಕೇ, Practical ಗುರುವಾದಂತಹ ಕೃಷ್ಣನು ಅಸಂಗತ್ವವನ್ನೂ ಸಮತ್ವವನ್ನೂ ಸಾಧನಾಪಥದ ಮೊದಲ ಹೆಜ್ಜೆಗಳಾಗಿ ಉಪದೇಶಿಸುತ್ತಿದ್ದಾನೆ! ಅಸಂಗತ್ವವಿಲ್ಲದಿದ್ದರೇ ಗತವನ್ನು ಮರೆಯಲಾರದೇ ಭವಿಷ್ಯದ ಬಗ್ಗೆ ಕಂಗಾಲಾಗುತ್ತ ವರ್ತಮಾನದ ನೆಮ್ಮದಿಯನ್ನು ಕೆಡಿಸಿಕೊಳುತ್ತಾನೆ ಮನುಷ್ಯ. ಸಮತ್ವವಿಲ್ಲದಿದ್ದಲ್ಲಿ ಬದುಕೇ ಭಾವನೆಗಳಾಲ್ಲೋಲಕಲ್ಲೋಲಕ್ಕೆ ಸಿಲುಕಿ ದುರ್ಭರವೆನಿಸುತ್ತದೆ. ಹೀಗೆ ನೆಮ್ಮದಿಗೆಟ್ಟ ವ್ಯಕ್ತಿಯಿಂದ ಮತ್ತಾವ ಸಾಧನೆಯು ತಾನೆ ಸುಸೂತ್ರವಾಗಿ ಸಾಗೀತು?
ಕೃಷ್ಣನು ಮುಂದುವರೆಸುತ್ತಾನೆ- ದೂರೇಣಹ್ಯವರಂ ಕರ್ಮಬುದ್ಧಿಯೋಗಾದ್ಧನಂಜಯI ಬುದ್ಧೌಶರಣಮನ್ವಿಚ್ಛ ಕೃಪಣಾಃಫಲಹೇತವಃII- ಬುದ್ಧಿಯೋಗದಿಂದ ಬಲುದೂರವೆನಿಸುವ ಕರ್ಮವು ಕ್ಷುಲ್ಲಕವಾದದ್ದು. ಹಾಗಾಗಿ, ಬುದ್ಧಿಯೋಗದಲ್ಲಿ ನೆಲೆನಿಲ್ಲು. ಫಲಕ್ಕಾಗಿಯೇ ಕರ್ಮಮಾಡುವವರು ಕೃಪಣರು (ದೀನರು).
ಈಗಾಗಲೇ ನೋಡಿದಂತೆ ಬುದ್ಧಿಯೋಗ ಎಂದರೆ- ‘ನಿರ್ಲಿಪ್ತಭಾವದಿಂದ ಕರ್ಮವನ್ನು ಮಾಡಿ ಸಿದ್ಧಿ-ಅಸಿದ್ಧಿ ಮುಂತಾದ ದ್ವಂದ್ವಗಳಲ್ಲಿ ಸಮತ್ವವನ್ನು ಸಾಧಿಸುವ ಕಲೆ’. ಕೃಷ್ಣನು ‘ಕರ್ಮವು ‘ಅವರ’ (ತುಚ್ಛ) ಎಂದು ಹೇಳುತ್ತಿದ್ದಾನಲ್ಲ?!’ ಎಂದು ಗೊಂದಲಪಡಬೇಕಿಲ್ಲ. ವಾಸ್ತವವನ್ನೂ ಧರ್ಮವನ್ನೂ ಮರೆತು ಅನಿಶ್ಚಿತ ಫಲಗಳ ಹುಚ್ಚಿಗಿಳಿದು ಮಾಡುವ ಕರ್ಮ’ವನ್ನಷ್ಟೇ ಕೃಷ್ಣನು ‘ಅವರ’ ಎಂದು ಕರೆದಿರುವುದು ಸುಸ್ಪಷ್ಟ,
ಚಿಕ್ಕಮಕ್ಕಳು ಬೊಂಬೆಯನ್ನಪ್ಪಿಟ್ಟಿಕೊಂಡೇ ತಿರುಗಾಡುತ್ತಾರೆ, ದೊಡ್ಡವರಾಗುತ್ತಲೇ ಬೊಂಬೆಗಳನ್ನು ಬಿಟ್ಟು ಗಂಭೀರವಾಗುತ್ತಾರೆ. ಅಂತೆಯೇ, ಜೀವನವೆಂಬ ನಿರಂತರ ವಿಕಾಸದ ಪ್ರಕ್ರಿಯೆಯಲ್ಲಿ, ವ್ಯಾಮೋಹವೆಂಬ ಬಾಲಿಶ ಬುದ್ಧಿಯ ಮಿತಿಯಿಂದ ಮೇಲೇರಿ, ನಿರ್ಲಿಪ್ತಿಯ ಪಕ್ವತೆಯನ್ನು ಪ್ರತಿಯೊಂದು ಜೀವವೂ ಸಾಧಿಸಲೇಬೇಕು. ಮನುಷ್ಯ ಬೊಂಬೆಯಾಸೆಯನ್ನು ಬಿಡದೇ ದೊಡ್ಡವನಾಗುವುದಿಲ್ಲ. ಅಂತೆಯೇ ವ್ಯಾಮೋಹವನ್ನು ಬಿಡದೇ ವಿವೇಕಿಯಾಗಲಾರ. ನಮ್ಮನ್ನು ಅಲ್ಲಲ್ಲೇ ವ್ಯಾಮೋಹವೆಂಬ ಗೂಟಕ್ಕೆ ಕಟ್ಟಿಹಾಕಿ, ಆಂತರಿಕ ವಿಕಾಸದ ಮುನ್ನಡೆಯಾಗದಂತೆ ತಡೆಯುವ ‘ಸಂಗ’ವೆಂಬ ಹಗ್ಗವನ್ನು ಬಿಡಿಸಿಕೊಳ್ಳುತ್ತಲೇ ಸಾಗಬೇಕು-ಅದೇ ಬುದ್ಧಿಯೋಗ! ಅದನ್ನು ಆಚರಿಸು – ‘ಬುದ್ಧೌಶರಣಮನ್ವಿಚ್ಛ’ ಎಂದು ನಿರ್ದೇಶಿಸುತ್ತಿದ್ದಾನೆ ಕೃಷ್ಣ-.
ಕೃಪಣಾಃ ಫಲಹೇತವಃ(ಫಲಹೇತುವಾಗಿ ಕೆಲಸ ಮಾಡುವವರು ‘ಕೃಪಣರು’- ಅರ್ಥಾತ್ ದೀನರು)
ಯಾವುದೋ ವೈಯಕ್ತಿಕ ಆಸೆ-ಕೆಲಸ ಕೈಗೂಡಬೇಕೆಂಬ ಹಂಬಲವಿರುವವರು ತಮ್ಮ ಆರಡಿ ದೇಹವನ್ನು ಮೂರಡಿಗೆ ಬಾಗಿಸುವುದು ಕಾಣುಬರುತ್ತದಲ್ಲವೆ? ಆ ಕಾರ್ಪಣ್ಯದ ಬಗ್ಗೆಯೇ ಕೃಷ್ಣನು ಹೇಳುತ್ತಿರುವುದು! ಫಲದಾಸೆಯನ್ನು ಹದ್ದಿಕ್ಕಲಾರದವನು ತನ್ನ ಸ್ವಾಭಿಮಾನವನ್ನೂ ಬದಿಗಿಟ್ಟು ಹೇಗೆ ಹಲ್ಲುಗಿಂಜಲಾರಂಭಿಸುತ್ತಾನೆ ಎನ್ನುವುದನ್ನು ಹಲವು ಗಾದೆ-ಸುಭಾಷಿತಗಳು ಅನಾದಿಯಿಂದಲೂ ಹೇಳುತ್ತಲೇ ಇವೆ- ‘ಕಾರ್ಯವಾಸೀ ಕತ್ತೆಕಾಲು ಹಿಡಿ’, ‘ಲೋಭಾತುರಾಣಾಂ ನ ಭಯಂ ನ ಲಜ್ಜಾ’ ಇತ್ಯಾದಿ. “ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ, ಕಷ್ಟಬೇಡೆಂಬಾಸೆ ಕಡು-ಸುಖವ ಕಾಂಬಾಸೆ, ನಷ್ಟ ಜೀವನದಾಸೆ ಪುರಂದರವಿಠಲ—” ಎಂದು ಈ ಫಲದಾಸೆಯ ಜಾಲದಲ್ಲಿ ಸಿಲುಕುವುದನ್ನು ಮೂದಲಿಸುತ್ತಾರೆ ದಾಸಾಗ್ರೇಸರರು. ಆಸೆಯನ್ನು ತೊರೆಯಲಾಗದವನು ಮಾಡುವ ಆಚಾರಗಳೂ ಅಪೂರ್ಣ’ ಎನ್ನುತ್ತಾರೆ – “ಹಂಬಲವ ಬಿಡದವಗೆ ಹರಿನಾಮವೇಕೆ?….”ಇನ್ನು, ಫಲದಾಸೆಯನ್ನು ಮೀರುವ ತಾಕತ್ತು ಇದೆಯಲ್ಲ, ಅದು ಭಕ್ತಿ-ನಂಬಿಕೆಗಳಿಗಿಂತಲೂ ಶ್ರೇಷ್ಠತಮ ಎನ್ನುತ್ತಾರೆ ಡಿವಿಜಿರವರು- “ಹಂಬಲವ ತೊರೆದವಗೆ ನಂಬಿಕೆಯ ಹಂಗೇಕೆ?” ‘ಆಸೆಯೇ ದುಃಖಕ್ಕೆ ಮೂಲ’ ಎಂದು ಬುದ್ಧ ಭಗವಂತನೂ ಪದೇಪದೇ ಹೇಳಿದ್ದು ಸ್ಮರಣೀಯ.
ಒಟ್ಟಿನಲ್ಲಿ, ‘ಕಾರ್ಪಣ್ಯಕ್ಕೆ ಬೀಳಿಸುವ ಫಲಹೇತುವಾದ ಕರ್ಮಕ್ಕೆ ಸಿಲುಕುವ ಬದಲು ಸರ್ವಥಾ ಉನ್ನತಿಯನ್ನು ಸಾಧಿಸಿಕೊಡುವ ಬುದ್ಧಿಯೋಗವನ್ನು ಅನುಸರಿಸು’ ಎಂದು ತಿಳಿಹೇಳುತ್ತಿದ್ದಾನೆ ಕೃಷ್ಣ.
Dr ಆರತೀ V ಬಿ
ಕೃಪೆ : ವಿಜಯವಾಣಿ

Leave a Reply