ಬದುಕಿಗೆ ಭಗವದ್ಗೀತೆ : ಬಿಡು ಕ್ಲೈಬ್ಯವನ್ನು ಹಿಡಿ ಗಾಂಢೀವವನ್ನು !

ಬದುಕಿಗೆ ಭಗವದ್ಗೀತೆ : ಬಿಡು ಕ್ಲೈಬ್ಯವನ್ನು ಹಿಡಿ ಗಾಂಢೀವವನ್ನು !

“ವಿಷಮಕಾಲದಲ್ಲಿ ಇಂತಹ ಕಶ್ಮಲ ನಿನ್ನಲ್ಲೇಕೆ ಉಂಟಾಯಿತು? ಅನಾರ್ಯವೂ ಅಸ್ವರ್ಗ್ಯವೂ ಅಕೀರ್ತಿಕರವೂ ಆದ ನಿನ್ನ ಈ ವರ್ತನೆ ಸರಿಯಿಲ್ಲ!” ಎಂದು ಕೃಷ್ಣನು ಗುಡುಗಿದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದೆವು. ಶ್ರೀರಾಮಕೃಷ್ಣಪರಮಹಂಸರು ಈ ನಿದರ್ಶನವನ್ನು ನೀಡುತ್ತಾರೆ- ‘ಸಾಮಾನ್ಯ ವೈದ್ಯನು ಔಷಧವನ್ನು ವಿಧಿಸಿ ತನ್ನ ಶುಲ್ಕವನ್ನು ಪಡೆದು ಹೊರಟುಬಿಡುತ್ತಾನೆ. ಆದರೆ ಉತ್ತಮ ವೈದ್ಯನು ಅಗತ್ಯ ಬಂದಲ್ಲಿ ಕಹಿಯಾದ ಔಷಧಿಯನ್ನು ರೋಗಿಗೆ ಬಲವಂತವಾಗಿ ಕುಡಿಸಿಯೇ ತೀರುತ್ತಾನೆ’. ’ರೋಗಿಗೆ ತನ್ನ ಮೇಲೆ ಬೇಸರವಾಗದಿರಲಿ’ ಎಂದು ಸಿಹಿ ಮಾತಿನ ಉಪಚಾರವನ್ನು ಮಾಡುತ್ತ ಕೂಡುವುದಿಲ್ಲವಷ್ಟೆ? ಅಂತೆಯೇ ಕೃಷ್ಣನು ತಾನು ಅರ್ಜುನನಿಗೆ ಆಪ್ತನೆಂಬ ಕಾರಣಕ್ಕಾಗಿ ಕೇವಲ ಸಹಾನುಭೂತಿಯನ್ನು ತೋರುವುದಿಲ್ಲ. ಬದಲಾಗಿ, ಚುಚ್ಚುವಂತಹ ಧ್ವನಿಯಲ್ಲಿ ತಿಳಿ ಹೇಳಲಾರಂಭಿಸುತ್ತಾನೆ. ಏಕೆಂದರೆ, ಮೋಹದ ರೋಗಕ್ಕೆ ವಶನಾದ ಅರ್ಜುನನಿಗೆ ಕಣ್ಣೀರೊರೆಸಿ, ಸಹಾನುಭೂತಿ ತೋರಿಸಿದ್ದರೆ, ಆತನ ಮೋಹ ಮತ್ತಷ್ಟು ಗಟ್ಟಿಗೊಳ್ಳುತ್ತಿತ್ತೇ ಹೊರತು ವಾಸಿಯಾಗುತ್ತಿರಲಿಲ್ಲ! ಕೃಷ್ಣನು ಆ ಮೋಹದ ಆವರಣವನ್ನು ಸೀಳುವಂತಹ ತೀಕ್ಷ್ಣಮಾತುಗಳ ಔಷಧವನ್ನೇ ಉಣಿಸುತ್ತಾನೆ. ಕೃಷ್ಣನು ಉದ್ಗರಿಸುತ್ತಾನೆ- ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತದ್ವೈಯುಪಪದ್ಯತೆ ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ – ಅರ್ಥಾತ್- “ಶತ್ರುಗಳಲ್ಲಿ ನಡುಕವನ್ನು ಹುಟ್ಟಿಸುವಂತಹ (ಧೀರ) ಅರ್ಜುನನೇ! ಕ್ಲೈಬ್ಯಕ್ಕೆ (ಷಂಡತನಕ್ಕೆ) ವಶನಾಗಬೇಡ; ನಿನಗಿದು ಶೋಭಿಸುವುದಿಲ್ಲ; ಈ ಕ್ಷುದ್ರವಾದ ಹೃದಯ ದೌರ್ಬಲ್ಯವನ್ನು ತ್ಯಜಿಸಿ ಎದ್ದೇಳು (ಕರ್ತವ್ಯವನ್ನು ನಿರ್ವಹಿಸು)!”
“ಕ್ಲೈಬ್ಯಕ್ಕೆ (ಷಂಡತನಕ್ಕೆ) ವಶನಾಗಬೇಡ!” ಎಂದು ಎಚ್ಚರಿಸುತ್ತಾನೆ ಶ್ರೀಕೃಷ್ಣ! ಅತ್ಯಂತ ಮಹತ್ವದ ನಿರ್ಧಾರಕ್ಕೆ ಆಶ್ರಯವಾದ ಕುರುಕ್ಷೇತ್ರದ ಧರ್ಮಯುದ್ಧದಲ್ಲಿ ಪಾಂಡವರೇ ಪ್ರಮುಖರು, ಅರ್ಜುನನ ಪಾತ್ರವಂತೂ ತುಂಬ ಮಹತ್ವದ್ದು. ಇದೆಲ್ಲ ತಿಳಿದಿದ್ದೂ, ಕರ್ತವ್ಯಕ್ಕೆ ಸಿದ್ಧನಾಗಿಯೂ, ಶಸ್ತ್ರಾಸ್ರಗಳೊಂದಿಗೆ ಸನ್ನದ್ಧನಾಗಿಯೂ ಬಂದಿದ್ದ ಅರ್ಜುನ, ಈಗ ಇದ್ದಕ್ಕಿದಂತೆ ಹಿಮ್ಮೆಟ್ಟುವುದೆಂದರೆ ಲೋಕದೃಷ್ಟಿಯಿಂದ ಅರ್ಜುನನ ವರ್ತನೆ ‘ಕ್ಲೈಬ್ಯ’ವೆನಿಸುವುದು ಖಂಡಿತ. ಅರ್ಜುನನ ಹಿತೈಶಿಯಾಗಿ ಕೃಷ್ಣನು ಹೀಗೆ ಖಾರವಾಗಿಯೇ ನುಡಿಯುತ್ತಾನೆ. ‘ಅರ್ಜುನ ನಿನ್ನ ಈ ಅಳು, ‘ಕರುಣೆ’ಗಳೆಲ್ಲ ಸಾತ್ವಿಕಗುಣಗಳಲ್ಲ, ಅವು ಷಂಡತನದ ಲಕ್ಷಣಗಳು ಎನ್ನುವ ಸ್ಪಷ್ಟ ನಿಲುವು ಕೃಷ್ಣನ ಮಾತಿನಲ್ಲಿದೆ.
ಕೃಷ್ಣನು ಮುಂದುವರೆಸುತ್ತಾನೆ- ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವಾ ಉತ್ತಿಷ್ಠ— (ಕ್ಷುದ್ರವಾದ ಹೃದಯದೌರ್ಬಲ್ಯವನ್ನು ತ್ಯಜಿಸು) ಭಾವನೆಗಳು ವಸ್ತುತಃ ಮನಸ್ಸಿನ ವ್ಯಾಪಾರಗಳು. ಆದರೂ ರೂಢಿಯಲ್ಲಿ ಇವನ್ನು ‘ಹೃದಯ’ಕ್ಕೆ ಕಲ್ಪಿಸಿ ನುಡಿಯುವುದು ವಾಡಿಕೆ. ಇಲ್ಲೂ ಹಾಗೆಯೆ. ಭಾವವಶವಾದ ಮನಸ್ಸಿನ ದೌರ್ಬಲ್ಯವನ್ನೇ ’ಹೃದಯದೌರ್ಬಲ್ಯ’ ಎನ್ನಲಾಗಿದೆ. ಮನುಷ್ಯಜೀವನದಲ್ಲಿ ಭಾವನೆಗಳ ಪಾತ್ರ ಪ್ರಮುಖವಾದದ್ದು. ಇವುಗಳಿಂದಾಗಿಯೇ ಮನುಷ್ಯನು ಸುಖದುಃಖಗಳನ್ನು ಅನುಭವಿಸುವುದು, ಸಂಬಂಧಗಳನ್ನು ಬೆಳೆಸುವುದು, ಅಳಿಸಿಕೊಳ್ಳುವುದು ಎಲ್ಲ! ರಾಗ-ದ್ವೇಷ. ಬೇಕು-ಬೇಡ, ಇಷ್ಟ-ಇಷ್ಟವಿಲ್ಲ, ಸುಖ-ದುಃಖ ಮುಂತಾದ ಹಲವು ಭಾವದ್ವಂದ್ವಗಳು ನಮ್ಮೊಳಗೆ ಎದ್ದೆದ್ದು ಬೀಳುತ್ತಲೇ ಇರುತ್ತವೆ. ಭಾವನೆಗಳು ನಮ್ಮ ಅಂತರಂಗವನ್ನೂ ಸಂಬಂಧಗಳನ್ನೂ ಕೆಲವೊಮ್ಮೆ ಚೆಂದಗೊಳಿಸುತ್ತವೆ, ಇನ್ನು ಕೆಲವೊಮ್ಮೆ ಅಂದಗೆಡಿಸುತ್ತವೆ ಕೂಡ ! ನಮಗೆ ಇಷ್ಟವಾದ ವ್ಯಕ್ತಿ-ವಸ್ತು-ಪದವಿ-ಸಂದರ್ಭಗಳ ಬಗ್ಗೆ ಕಾಲ್ಪನಿಕ ಸಂಬಂಧವನ್ನು ಮನದಾಳದಲ್ಲಿ ಮೂಡಿಸುತ್ತವೆ! ಒಟ್ಟಿನಲ್ಲಿ ನಮ್ಮನ್ನು ಅವಾಸ್ತವಿಕ ಸುಖದುಃಖಮಿಶ್ರಿತ ಕಲ್ಪನೆಗಳ ಜಾಲದಲ್ಲಿ ಸಿಲುಕಿಸಿ ಚಡಪಡಿಸುವಂತೆ ಮಾಡುವುದು ಈ ಭಾವನೆಗಳೆ, ವಾಸ್ತವದಲ್ಲಿ ಈ ಅವಾಸ್ತವಿಕ ಭಾವನೆಗಳ ಹಿಮಗಡ್ಡೆ ಕರಗಿ ನೀರಾದಾಗ, ಮತ್ತಷ್ಟು ದುಃಖ ದುಗುಡಗಳನ್ನು ಉಂಟು ಮಾಡುತ್ತವೆ. ಇದೆಲ್ಲ ಭಾವನಾ ಪ್ರಪಂಚದ ಕಥೆಗಳು ! ಈ ಭಾವನೆಗಳು ‘ಬೇಡವೇ ಬೇಡ’ ಎಂದು ಕೈಬಿಡಲೂ ಆಗದು! ಬದುಕಿನುದ್ದಕ್ಕೂ ಭಾವನೆಯನ್ನು ಸತತವೂ ಸತ್ಯಾಸತ್ಯಗಳ ವಿವೇಕಕ್ಕೆ ಒಳಪಡಿಸಿ ಸಂಸ್ಕರಿಸುತ್ತಲೇ ಇರಬೇಕಾಗುತ್ತದೆ! ಅದೊಂದೇ ದಾರಿ! ಇಲ್ಲದಿದ್ದರೆ ಅವು ನಮ್ಮ ಬುದ್ಧಿಯನ್ನು ಆವರಿಸಿ ಭಾವುಕರನ್ನಾಗಿಸುತ್ತವೆ, ಅರ್ಜುನನಿಗೂ ಹೀಗೆ ಆಗಿದ್ದು- ಅವನ ವಿವೇಕವನ್ನು ಭಾವುಕತೆ ಆವರಿಸಿತ್ತು, ಹೃದಯದೌರ್ಬಲ್ಯವನ್ನು ಉಂಟುಮಾಡಿತು.
ಈ ಹೃದಯದೌರ್ಬಲ್ಯವನ್ನು ಕೃಷ್ಣನು ’ಕ್ಷುದ್ರ’ ಎಂದು ಕರೆಯುತ್ತಿದ್ದಾನೆ. ಹೌದು! ನಮ್ಮನ್ನು ಅವನತಿಗೆ ಒಯ್ಯುವಂತಹದ್ದಾದರಿಂದ ಇದು ‘ಕ್ಷುದ್ರ’ವೇ. ಆದರೆ ಇದು ಬಲದಲ್ಲಿ ಅಸಾಮಾನ್ಯವಾದದ್ದು! ವೀರಾದಿವೀರನೂ ವಿವೇಕಿಯೂ ಆದ ಅರ್ಜುನನನ್ನೇ ಕಂಗೆಡಿಸಿದಂತಹದ್ದು! ಆಜೀವನವೂ ಧರ್ಮಕ್ಕಾಗಿ, ನ್ಯಾಯಕ್ಕಾಗಿ, ಪ್ರಜಾರಕ್ಷಣೆಗಾಗಿ ವ್ರತತೊಟ್ಟು ನಿಂತ ವೀರಪಾಂಡವನ ಕೈಯಿಂದಲೂ ಗಾಂಢೀವವೇ ಜಾರುವಂತೆ ಮಾಡಿತು! ಪರಮದುಷ್ಟರಾದ ಕೌರವರ ಬಗ್ಗೆಯೇ ’ಕರುಣೆ’ ಮೂಡುವಂತೆ ಮಾಡಿಬಿಟ್ಟಿತು! ಈ ‘ಧರ್ಮಯುದ್ಧದಿಂದ ನ್ಯಾಯ ಸಿಕ್ಕೀತು’ ಎಂದು ಕಾದು ಕುಳಿತ ಶಿಷ್ಟ ಜನರಿಗೆ ತಾನಿತ್ತ ಭರವಸೆಯ ಮಾತುಗಳನ್ನು ಮರೆಸಿಬಿಟ್ಟಿತ್ತು!
ಈ ಭಾವನೆಗಳನ್ನು ‘ಸರಿ’ / ‘ತಪ್ಪು’ ಎಂದು ಗುರುತಿಸುವುದು ಸುಲಭದ ಮಾತಲ್ಲ. ಏಕೆಂದರೆ ಇವುಗಳು ‘ಮೃದುತ್ವದ ಮುಖವಾಡ’ವನ್ನು ಧರಿಸಿ ಬರುತ್ತವೆ. ಧರ್ಮಕರ್ಮಗಳಿಗಿಂತ ಭಾವನೆಗಳೆ ಪ್ರಿಯವೆನಿಸುವಂತೆ ಮಾಡಿಬಿಡುತ್ತವೆ! ಕೊನೆಗೆ ಸತ್ಯಧರ್ಮಗಳನ್ನೇ ’ಕಠಿಣ’, ’ಕ್ರೂರ’ ಎಂಬಂತೆ ಬಿಂಬಿಸಿ ಕೈಬಿಡುವಂತೆ ಮಾಡುತ್ತವೆ! ಹೃದಯದೌರ್ಬಲ್ಯವು ಆಡಿಸುವ ಇಂತಹ ಆಟಗಳನ್ನು ಲೋಕದಲ್ಲಿ ನೋಡುತ್ತಲೇ ಇರುತ್ತೇವೆ! ಅರ್ಜುನನ ವಿಷಯದಲ್ಲೂ ಹೀಗೆ- ಭಾವುಕತೆಯು ಬುದ್ಧಿಯನ್ನಾವರಿಸಿತ್ತು. ತಮಾಷೆಯೇನೆಂದರೆ ನಾವೂ ಕೂಡ ಭಾವುಕತೆಯ ನೆಲೆಯಲ್ಲೇ ನೋಡಿದರೆ ಅರ್ಜುನನು ಹೇಳಿದ್ದೆಲ್ಲ ‘ಸರಿ’ಯಾಗಿಯೇ ತೋರೀತು! ಅಪಾತ್ರರಲ್ಲಿ ’ಕರುಣೆ’, ಕರ್ತವ್ಯದಲ್ಲಿ ಔದಾಸೀನ್ಯ, ನ್ಯಾಯವು ಕಠಿಣವಾಗಿ ಕಾಣಬಂದಾಗ ಆತುರದಿಂದ ತ್ಯಾಗಕ್ಕೆ ಮೊದಲಾಗುವುದು …… ಹೀಗೆ ವಿಪರೀತ ಚಿಂತನೆ-ವಿಪರೀತ ನಡವಳಿಕೆಗಳನ್ನು ಪ್ರಚೋದಿಸುವುದು ಈ ಹೃದಯ ದೌರ್ಬಲ್ಯವೇ.
ಇಂಥ ಕ್ಷುದ್ರವಾದ ಹೃದಯ ದೌರ್ಬಲ್ಯವನ್ನು ತ್ಯಜಿಸು- ’ಉತ್ತಿಷ್ಠ ಪರಂತಪ!’ ಎಂದು ಅರ್ಜುನನಿಗೆ ಖಾರವಾಗಿಯೇ ಹೇಳುತ್ತಾನೆ ಕೃಷ್ಣ. ‘ಶತ್ರುಗಳಲ್ಲಿ ನಡುಕ ಉಂಟುಮಾಡುವಂತ ಅಪ್ರತಿಮ ವೀರನಾದ ಅರ್ಜುನನೆ! ನಿನ್ನನ್ನು ನೀ ತಿಳಿದು ಏಳು! ಎದ್ದೇಳು! ಕರ್ತವ್ಯವನ್ನು ನಿರ್ವಹಿಸು’ ಎಂದು ಪ್ರೇರೇಪಿಸುತ್ತಾನೆ.
ಡಾ ಆರತೀ ವಿ ಬಿ

ಕೃಪೆ : ವಿಜಯವಾಣಿ

Leave a Reply