ಬದುಕಿಗೆ ಭಗವದ್ಗೀತೆ – ಬುದ್ಧಿಯೋಗವಿಲ್ಲದ ವೇದವಾದ ಅಸಂಬದ್ಧ

ಬದುಕಿಗೆ ಭಗವದ್ಗೀತೆ – ಬುದ್ಧಿಯೋಗವಿಲ್ಲದ ವೇದವಾದ ಅಸಂಬದ್ಧ

ಆಂತರ್ಯದ ಪಾಕದ ಕಡೆಗೆ ಗಮನವನ್ನೇ ಹರಿಸದೇ, ಕೇವಲ ಬಾಹ್ಯ ವಿವರಗಳನ್ನು ಮಾಡಿ, ‘ತಾವು ತಾತ್ವಿಕರು, ಧಾರ್ಮಿಕರು’ ಎಂದು ಬೀಗುವ ಆಸೆಬುರುಕ-ಜನರ ಬಗ್ಗೆ ಹೇಳುತ್ತಾನೆ ಕೃಷ್ಣ-
ಯಾಮಿಮಾಂ ಪುಷ್ಪಿತಾಂ ವಾಚಂ ಪ್ರವದಂತ್ಯವಿಪಶ್ಚಿತಃ I ವೇದವಾದರತಾಃ ಪಾರ್ಥ ನಾನ್ಯದಸ್ತೀತಿ ವಾದಿನಃ II
ಕಾಮಾತ್ಮಾನಃ ಸ್ವರ್ಗಪರಾ ಜನ್ಮಕರ್ಮಫಲಪ್ರದಾಂ I ಕ್ರಿಯಾವಿಶೇಷಬಹುಲಾಂ ಭೋಗೈಶ್ವರ್ಯಗತಿಂ ಪ್ರತಿ II
ಭೋಗೈಶ್ವರ್ಯಪ್ರಸಕ್ತಾನಾಂ ತಯಾಪಹೃತಚೇತಸಾಂ I ವ್ಯವಸಾಯಾತ್ಮಿಕಾ ಬುದ್ಧಿಃ ಸಮಾಧೌ ನ ವಿಧೀಯತೆ II
ಕಾಮಾತ್ಮರೂ, ಸ್ವರ್ಗಾದಿಗಳ ಲೋಭವುಳ್ಳವರೂ, ಭೋಗೈಶ್ವರ್ಯಾದಿಗಳಿಗೇ ಮನಸೋತವರೂ, ಮತ್ತೆಮತ್ತೆ ಹುಟ್ಟು-ಸಾವುಗಳಿಗೇ ಕಾರಣವಾಗುವಂತಹ ಅತಿಯಾದ (ಕಾಮ್ಯ)ಕ್ರಿಯೆಗಳಲ್ಲೇ ತೊಡಗುವವರೂ, ‘ತಾನು ಹೇಳುವ ಮಾಡುವಂತಹ ಪರಿಯೇ ’ವೇದಗಳ ಪರಿ’, ಬೇರೆಲ್ಲವೂ ಸರಿಯಲ್ಲ’ ಎಂಬಂತೆ ಆಕರ್ಷಕ ಮಾತುಗಳಿಂದ ಸಮರ್ಥಿಸುವಂತಹ, ವೇದದ ಹೆಸರನ್ನು ಹೇಳಿಕೊಂಡಷ್ಟೆ ತಿರುಗುವವರಿಗೆ, ‘ಸಮಾಧಿ’ (ಸಮತ್ವ) ಎಂದೂ ಸಿದ್ಧಿಸುವುದಿಲ್ಲ.
ಇಲ್ಲಿ ಕೃಷ್ಣನು ‘ವೇದವಾದರತರು’ ಎಂದು ಸೂಚಿಸುತ್ತಿರುವುದು ಯಾರನ್ನು?ವೇದವನ್ನು ಆಶ್ರಯಿಸಿದವರೆಲ್ಲರನ್ನೂ ಸಾರಸಗಟಾಗಿ ಮೂದಲಿಸುತ್ತಿದ್ದಾನೆಯೆ? ‘ಕೃಷ್ಣನೇ ವೇದವಿರೋಧಿ’ ಎಂದು ‘ಸಾಬೀತು’ಪಡಿಸಿ ವಿಕೃತ-ಸಂತೋಷಪಟ್ಟುಕೊಳ್ಳುವ ವಿಕೃತಮತಿಗಳು ಹೀಗೇ ಅರ್ಥೈಸುತ್ತಾರೆನ್ನಿ! ಆದರೆ ಉಪನಿಷತ್ತುಗಳ ಸಾರವೆಂಬಂತಿರುವ ಭಗವದ್ಗೀತೆಯಲ್ಲಿ ಕೃಷ್ಣನು ಹೀಗೆ ಆತ್ಮವೈರುದ್ಧ್ಯದ(Self contradiction) ಮಾತುಗಳನ್ನು ಹೇಳಲು ಸಾಧ್ಯವಿಲ್ಲ.
ಇಲ್ಲಿ ‘ವೇದವಾದರತ’ರು ಎಂಬ ಶಬ್ದದ ಜೊತೆಗೇ ಬರುವ ವಿಶೇಷಣಗಳೇ ಅದನ್ನು ಸ್ಪಷ್ಟಪಡಿಸುತ್ತದೆ-
ಕಾಮಾತ್ಮಾನಃ(ಆಸೆಬುರುಕರಾದ)/  ಸ್ವರ್ಗಪರಾಃ(ಸ್ವರ್ಗಾದಿ ಸುಖಭೋಗಗಳಿಗಾಗಿ ಹಂಬಲಿಸುವವರಾದ), ಭೋಗೈಶ್ವರ್ಯ ಪ್ರಸಕ್ತಾಃ ತಯಾಪಹೃತ ಚೇತಸಾಃ (ಭೋಗೈಶ್ವರ್ಯಗಳಿಗೇ ಮನಸೋತವರಾದ), ಜನ್ಮಕರ್ಮಫಲಪ್ರದ ಕ್ರಿಯಾವಿಶೇಷಬಹುಲ—(ಮತ್ತೆಮತ್ತೆ ಹುಟ್ಟು-ಸಾವುಗಳಿಗೆ) ಕಾರಣವಾಗುವಂತಹ ಅತಿಯಾದ ಕಾಮ್ಯಕರ್ಮಗಳಲ್ಲೇ ತೊಡಗುವಂತಹವರಾದ), ನಾನ್ಯದಸ್ತೀತಿ ವಾದಿನಃ(ಸರಿಯೋ ತಪ್ಪೋ, ‘ತಮ್ಮ ಅಭಿಮತವೇ ವೇದಮತ’, ಬೇರಾವುದೂ ಸರಿಯಲ್ಲ’ ಎಂದು ವಾದಿಸುವವರಾದ), ಪುಷ್ಪಿತಾಂ ವಾಚಾಂ ಪ್ರವದಂತಿ-(ಆಕರ್ಷಕ ಮಾತುಗಾರಿಕೆಯಿಂದ ತಮ್ಮನ್ನು ಸಮರ್ಥಿಸಿಕೊಳ್ಳುವವರಾದ, ’ವೈದಿಕರ’ ಸೋಗಿನ ಮಿಥ್ಯಾಚಾರಿಗಳನ್ನು ಶ್ರೀಕೃಷ್ಣನು ‘ವೇದವಾದರತಾಃ’ ಎಂಬ ಶಬ್ದದಿಂದ ಸೂಚಿಸುತ್ತಿದ್ದಾನೆ.
’ಓದಿಬಿಟ್ಟೆ, ಎಲ್ಲ ಗೊತ್ತಾಯಿತು” ಎಂದು ಕೊಚ್ಚಿಕೊಳ್ಳಲು, ವೇದವೆಂಬುವುದು ಕೇವಲ ಒಂದು ‘ಪುಸ್ತಕ’ವಲ್ಲ! ಅದೊಂದು ವಿಶಾಲ ಗ್ರಂಥಾಲಯ, ಅನುಭವಗಳ ಆಗರ!ಅಲ್ಲಿ ಸಹಸ್ರಮಾನಗಳಿಂದ ಸಂಗ್ರಹವಾದ ಹಲವಾರು ಋಷಿ-ಋಷಿಕೆಯರ ಚಿಂತನೆಗಳು, ಪ್ರೌಢವಾದ ಪ್ರಶ್ನೋತ್ತರ-ಚರ್ಚೆಗಳು, ಲೌಕಿಕ-ಪಾರಮಾರ್ಥಿಕ ವಿಚಾರಗಳು, ವಿಭಿನ್ನ ಬೌದ್ಧಿಕನೆಲೆಯ ಆಲೋಚನೆಗಳು, ದೇವ-ದಾನವ-ಮಾನವ-ಪಶು-ಪಕ್ಷಿ-ವನಸ್ಪತಿಗಳ ರೂಪ-ಸ್ವರೂಪ-ಗುಣಾಗುಣಗಳ ಸ್ಥೂಲ-ಸೂಕ್ಷ್ಮ-ವಿಮರ್ಶೆಗಳು, ದೇಶ-ಕಾಲ-ಸಂದರ್ಭಗಳಿಗನುಗುಣವಾದ ಧರ್ಮ-ಕರ್ಮಗಳ ನಿರ್ದೇಶಗಳು ಹಾಗೂ ಹಲವು ಮಂತ್ರ-ತಂತ್ರ-ರಹಸ್ಯ-ಪ್ರಯೋಗಾದಿಗಳ ಅಸಂಖ್ಯ ವಿಷಯಗಳು ಇವೆ. ಎಲ್ಲರಿಗೂ ನಿಲುಕುವ ಭಕ್ತಿದುಂಬಿದ ದೇವತಾಸ್ತುತಿ, ನಿಸರ್ಗವರ್ಣನೆ, ನೀತಿ-ಬೋಧನೆಗಳಿಂದ ಹಿಡಿದು, ಗಣನೆಯಲ್ಲೂ ಪ್ರಜ್ಞಾಮಟ್ಟದಲ್ಲೂ ಸಾಮಾನ್ಯ ಮನೋಬುದ್ಧೀಂದ್ರಿಯಗಳ ಗ್ರಹಿಕೆಗೆ ಸಿಗಲಾರದಷ್ಟು ಎತ್ತರದ ಲೋಕೋತ್ತರ ವಿಷಯಗಳೂ ಅಲ್ಲಿ ದಾಖಲಾಗಿವೆ.
ವೇದಾಧ್ಯಯನದ ವಿಷಯದಲ್ಲಿ, ಪ್ರಾಥಮಿಕ ಮೆಟ್ಟಿಲುಗಳಾದ ಸಂಸ್ಕೃತ ಭಾಷೆಯನ್ನೂ ಕ್ರಮಯುತವಾಗಿ ವೇದಾಂಗಗಳನ್ನೂ ವೇದಭಾಷೆ-ಪರಿಭಾಷೆ-ವಿನ್ಯಾಸಾದಿಗಳ ಪರಿಚಯವನ್ನೂ ಮಾಡಿಕೊಳ್ಳಬೇಕಾಗುತ್ತದೆ.
ಅಷ್ಟು ಮಾಡುವುದಕ್ಕೇ ಅದೆಷ್ಟೋ ಪರಿಶ್ರಮಬೇಕಾಗುತ್ತದೆ! ಪೂರ್ವಾಗ್ರಹಗಳಿಲ್ಲದೇ, ಪ್ರಜ್ಞಾಪೂರ್ವಕವಾಗಿ, ತೀವ್ರವಾದ ಅಧ್ಯಯನ-ಮನನ-ವಿಶ್ಲೇಷಣಗಳನ್ನು ದೀರ್ಘಕಾಲ ಮಾಡುವುದು ಅನಿವಾರ್ಯ. ಅದರ ಜೊತೆಗೆ ಶುದ್ಧಚಾರಿತ್ರ್ಯ, ತಪಸ್ಸು, ಕರ್ತವ್ಯಪೂರ್ತಿ ಹಾಗೂ ಭಾವಶುದ್ಧಿಗಳೂ ಸೇರಿದಾಗ ಮಾತ್ರ, ವೇದಾಧ್ಯಯನಕ್ಕೆ ‘ಜೀವಂತಿಕೆ’ ಬರುತ್ತದೆ. ಮಂತ್ರಗಳ ಶಬ್ದಾರ್ಥಗಳಾಚೆಗಿನ ರಹಸ್ಯಾರ್ಥಗಳು ‘ಗ್ರಾಹ್ಯ’ವಾಗುವುದು ಆಗ ಮಾತ್ರ ಸಾಧ್ಯ. ಇದಾವುದೂ ಇಲ್ಲದೆ ಅನುವಾದಗಳ ಪುಟಗಳನ್ನು ತಿರುವಿ ಹಾಕಿ ‘ವೇದ ಓದಲು’ ಹೊರಟೆವೆಂದರೆ, ಅಆಇಈ ಬಾರದ ಮಗುವು ವಾಕ್ಯಗಳನ್ನು ಬರೆಯ ಹೊರಟಂತೆಯೇ ಸರಿ!
ವೇದವೇದಾಂತಗಳ ಮಾತಂತಿರಲಿ, ಸರಳಲೌಕಿಕ-ಸಂಸ್ಕೃತದ ಕನಿಷ್ಟ-ಜ್ಞಾನವನ್ನೂ ಬೆಳೆಸಿಕೊಳ್ಳುವ ತಾಳ್ಮೆಯಿಲ್ಲದೆ, ಪರಂಪರೆಯ ರೀತಿ-ನೀತಿ-ಇತಿಹಾಸ-ಉದ್ದೇಶ-ವ್ಯಾಪ್ತಿಗಳನ್ನೂ ಅರ್ಥಮಾಡಿಕೊಳ್ಳದೆ, ವೇದದ ಯಾವುದೋ ಒಂದಷ್ಟು ಮಂತ್ರ-ತಂತ್ರಭಾಗಗಳನ್ನಷ್ಟೇ ಬಾಯಿಪಾಠ ಮಾಡಿಯೋ ಪ್ರಯೋಗಿಸಿಯೋ, ’ನಾನು ವೇದವೇದಾಂತಗಳನ್ನೆಲ್ಲ ಬಲ್ಲೆ’ ಎಂದು ಹೇಳಿಕೊಳ್ಳುವುದು ಹಾಸ್ಯಾಸ್ಪದವಲ್ಲವೆ? ವೇದಮಂತ್ರಗಳ ಶಬ್ದಾರ್ಥಗಳನ್ನಷ್ಟೇ ಗ್ರಹಿಸಿ, ಅವುಗಳ ಪರಮಾರ್ಥವನ್ನು ಸರ್ವಥಾ ಕಡೆಗಣಿಸುವುದು ವೇದಕ್ಕೆ ಎಸಗುವ ಅಪಚಾರವಲ್ಲವೆ?
ವೇದದ ಅರೆಬರೆಜ್ಞಾನ-ಪ್ರಯೋಗಗಳನ್ನು ಕೇವಲ ವಿಚಿತ್ರ-ವಿಕೃತ-ಭೋಗೈಶ್ವರ್ಯಗಳ ಪ್ರಾಪ್ತಿಗಾಗಿ ಬಳಸುವುದು, ಅಷ್ಟೇ ಅಲ್ಲದೆ, ‘ವೇದ ಹೇಳಿದ್ದನ್ನೇ ತಾನು ಮಾಡುತ್ತಿರುವುದು’ ಎಂದು ಸಮರ್ಥಿಸಿಕೊಳ್ಳುವುದು, ಆಕರ್ಷಕವಾಗಿ ವಾದಮಾಡಿ ಎಲ್ಲರನ್ನೂ ಬಾಯಿಮುಚ್ಚಿಸುವುದು— ಇದೆಲ್ಲ ಆಷಾಢಭೂತಿತನವಲ್ಲದೆ ಮತ್ತೇನು? ಇಂತಹವರು ಧಾರ್ಮಿಕರಂತೆ ವೇಷತೊಟ್ಟು, ಮಂತ್ರಗಳನ್ನೇ ಪಠಿಸಿದರೂ, ಅಂತರಂಗದಲ್ಲಿ ‘ಭೋಗಾಪಹೃತಚೇತಸರೇ’ ಆಗಿರುತ್ತಾರೆ. ಅಂತಹವರು ಎಂದೂ ಸಮತ್ವವನ್ನು ಸಿದ್ಧಿಸಿಕೊಳ್ಳಲಾರರು ಎನ್ನುವುದು ತಾತ್ಪರ್ಯ.
ಅಂತರಂಗವನ್ನು ಪಕ್ವಗೊಳಿಸುವುದನ್ನು ಕಲಿಸುವ ವಿಜ್ಞಾನವಾದ ‘ಬುದ್ಧಿಯೋಗ’ವನ್ನು ಹಿಡಿಯದೇ ವೇದದಂತಹ ಉನ್ನತವಿಷಯವನ್ನೂ ತಮ್ಮಕ್ಷುಲ್ಲಕ ಲೌಕಿಕ ಆಸೆಗಳ ಪೂರ್ತಿಗಷ್ಟೇ ಬಳಸಿಕೊಂಡು, ವೇದಾರ್ಥವನ್ನೂ ತಿರುಚುವ ಹೀನರನ್ನು ದಿಟ್ಟ ಕೃಷ್ಣನು ನೇರನುಡಿಗಳಲ್ಲಿ ತಿವಿಯುತ್ತಿದ್ದಾನೆ.
ವೇದವೇದಾಂತಗಳ ನೈಜ ಅಧ್ಯಯನದಿಂದ ಆಚರಣೆಯಿಂದ ಬುದ್ಧಿ ಪಾಕವಾಗುವುದಂತೂ ಖಂಡಿತ. ಆದರೆ ’ವೈದಿಕ’ನಂತೆ ನುಡಿದರೂ ’ನಡೆ’ಯದ ಆಶಾಢಭೂತಿಗಳು ದರ್ವೀಪಾಕರಸಾವಿವ (ಸಾರನ್ನು ಬಡಿಸುವ ಸೌಟು ತಾನು ಮಾತ್ರ ಸಾರಿನ ರುಚಿಯನ್ನು ಅರಿಯದೇ ಉಳಿಯುವಂತೆ!) ನಿಸ್ಸಾರ ಬದುಕಿನವರಾಗಿ ಉಳಿಯುತ್ತಾರೆ ಎಂದು ಎಚ್ಚರಿಸುತ್ತಿದ್ದಾನೆ ಆಚಾರ್ಯ ಕೃಷ್ಣನು.

ಡಾ ಆರತಿ ವಿ ಬಿ

ಕೃಪೆ : ವಿಜಯವಾಣಿ

Leave a Reply