ಬದುಕಿಗೆ ಭಗವದ್ಗೀತೆ- ಬ್ರಾಹ್ಮೀಸ್ಥಿತಿಯಲ್ಲಿ ಶಾಂತಿಯನ್ನು ಹೊಂದು

ಬದುಕಿಗೆ ಭಗವದ್ಗೀತೆ- ಬ್ರಾಹ್ಮೀಸ್ಥಿತಿಯಲ್ಲಿ ಶಾಂತಿಯನ್ನು ಹೊಂದು

ಮೋಹದ ನೆಲೆಯಲ್ಲೇ ಆಲೋಚಿಸುವ ಸಾಮಾನ್ಯರ ಪಾಲಿಗೆ ಉನ್ನತಸತ್ಯಗಳು ‘ರಾತ್ರಿ’(ರಹಸ್ಯ) ಎನಿಸಿದರೆ, ನಿರ್ಮೋಹರಾದ ಮುನಿಗಳ ಪಾಲಿಗೆ ಅದು ಸ್ಪಷ್ಟವಾಗಿ ಅರ್ಥವಾಗುವ ‘ಹಗಲು’. ಅನಿತ್ಯದ ಕುರಿತಾದ ಸಾಮಾನ್ಯರ ವ್ಯಾಮೋಹವು ಮುನಿಗಳಿಗೆ ಕತ್ತಲೆಯಂತೆ ಕಾಣಬರುತ್ತದೆ- ಎಂದು ಶ್ರೀಕೃಷ್ಣನು ವಿವರಿಸುತ್ತಿದ್ದ. ಮುಂದುವರೆಸುತ್ತಾನೆ-
ಆಪೂರ್ಯಮಾಣಮಚಲಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್ I
ತದ್ವತ್ ಕಾಮಾಃ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ II
(ನದಿ-ತೊರೆಗಳ) ನೀರು ತನ್ನೊಳಗೆ ಬಂದು ತುಂಬಿಕೊಳ್ಳುತ್ತಲೇ ಇದ್ದರೂ, ಸಮುದ್ರವು ವಿಚಲಿತವಾಗದು. ಅಂತೆಯೇ ಎಲ್ಲ ಕಾಮಭೋಗಗಳು ಸ್ಥಿತಪ್ರಜ್ಞನನೆಡೆಗೆಬರುತ್ತಿದ್ದರೂ ಅವನು ಶಾಂತವಾಗಿರುತ್ತಾನೆ. ಆದರೆ ಕಾಮ-ಕಾಮಿಯು(ಬಯಕೆಗಳಿಂದ ಕೂಡಿದವನು) ಹಾಗಿರಲಾರ.
ಸಣ್ಣ ಮೋರಿಯೊಳಗೆ ಒಂದು ಬಿಂದಿಗೆ ನೀರನ್ನು ಚೆಲ್ಲಿದರೂ ಅದು ಅಲ್ಲೋಲಕಲ್ಲೋಲವಾಗಿ ಆಚೆಗೆಲ್ಲ ಸಿಡಿದು, ಕೊಳಕಾಗಿಸುತ್ತದೆ. ಆದರೆ ಸಮುದ್ರದೊಳಗೆ ನಿತ್ಯನಿರಂತರವೂ ಅದೆಷ್ಟೋ ಮಳೆ-ನದಿ-ನಾಲೆಗಳ ನೀರು ಸೇರುತ್ತಲೇ ಇದ್ದರೂ, ಅದು ಅಲ್ಲೋಲಕಲ್ಲೋಲವಾಗದು! ಭೋರ್ಗರೆಯುತ್ತ ಸಮುದ್ರದೊಳಗೆ ನುಗ್ಗುವ ಜಲಧಾರೆಗಳು ಅದರೊಳಗೆ ಲೀನವಾಗಿ ಶಾಂತವಾಗಿಬಿಡುತ್ತವೆ! ಅದಕ್ಕೆ ಕಾರಣ- ಸಮುದ್ರದ ಅಪಾರವಾದ ಆಳ-ಅಗಲಗಳು! ಸಮುದ್ರವು ಅದೆಷ್ಟು ವಿಶಾಲವೆಂದರೆ, ಅದರೊಳಗೆ ಅದೇನೇ ಬಂದರೂ ಹೋದರೂ, ಅದರ ಪ್ರಮಾಣದಲ್ಲೂ ಸ್ಥಿತಿಯಲ್ಲೂ ವ್ಯತ್ಯಾಸ ಕಾಣುವುದಿಲ್ಲ. ಅಪಾರವಾದ ವ್ಯಾಪ್ತಿ-ವೈಶಾಲ್ಯಗಳಿರುವಲ್ಲಿ ಇಂತಹ ಶಾಂತಿಯೂ ಶಕ್ತಿಯೂ ಇರುವುದು ನಿಸರ್ಗಸಹಜವೇ! ಶ್ರೀಕೃಷ್ಣನು ಸ್ಥಿತಪ್ರಜ್ಞನ ಅಂತರಂಗವನ್ನು ‘ಅನಂತ ಸಮುದ್ರ’ಕ್ಕೆ ಹೋಲಿಸಿರುವುದು ಅತ್ಯಂತ ಮನೋಜ್ಞವಾಗಿದೆ! ಎಲ್ಲ ಕಾಮಗಳೂ(ಸುಖ-ಸಂಪದ-ಕೀರ್ತಿ-ಪದವಿಗಳು ಅಥವಾ ತತ್ಸಂಬಂಧಿತವಾಗಿ ಬರುವ ನಿಂದಾ-ಸ್ತುತಿ-ನಷ್ಟ-ಅವಮಾನಾದಿಗಳು) ಎಲ್ಲರಂತೆಯೇ ಅವನ ಜೀವನದಲ್ಲೂ ಬಂದುಹೋಗುತ್ತವೆ. ಆದರೆ ಅವುಗಳಿಂದಾಗಿ ಅವನೊಳಗೆ ಭಾವನಾಕಲ್ಲೋಲಗಳು ಉಂಟಾಗವು. ಅಂತರಂಗದ ವಿಸ್ತಾರದಲ್ಲಿ ವಿಹರಿಸುವುವಂತಹ ಅವನು, ಈ ‘ಬಂದು-ಹೋಗುವ’ ಬಾಹ್ಯಾಂಶಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ! ಈ ಕಾರಣದಿಂದಾಗಿಯೇ ಅವನ ಮನಸ್ಸು ಕೆಡುವುದಿಲ್ಲ, ಅವನ ಬುದ್ಧಿಯು ಗೊಂದಲಪಡುವುದಿಲ್ಲ, ಅವನ ಕರ್ಮವು ಹಾಳಾಗುವುದಿಲ್ಲ. ಆದರೆ ‘ನಾನು-ನನ್ನದು’, ‘ನನ್ನ ಸುಖದುಃಖಗಳು’ ಎಂಬ ಸಂಕುಚಿತವಾದ ಮೋಹದ ‘ಮೋರಿ’ಯ ಮೈಲಿಗೆಯಲ್ಲಿ ಮಗ್ನಮಾನಸರಾದ ಮನುಷ್ಯರು, ಸಣ್ಣಪುಟ್ಟ ಆಗುಹೋಗುಗಳಿಗೂ ‘ಕಲ್ಲೋಲ’ವಾಗುವುದಲ್ಲದೆ, ತಮ್ಮ ಸುತ್ತಲಿರುವವರ ಮೇಲೂ ಕೆಸರೆರಚಿ ಗುಲ್ಲೆಬ್ಬಿಸುತ್ತಾರೆ! ಪರಿಸರ-ಪರಿಸ್ಥಿತಿಗಳು ಒಂದೇ! ಆದರೆ ಸ್ಥಿತಪ್ರಜ್ಞನು ನಿರ್ವಿಕಾರನಾಗಿದ್ದರೆ, ಮೋಹಗ್ರಸ್ತನು ಭಾವಕಲ್ಲೋಲಗಳಲ್ಲಿ ಬಳಲುತ್ತಾನೆ!
ಅನಿತ್ಯವಾದ ಕಾಮವನ್ನು ನೆಚ್ಚುವವರೆಗೂ ಮನುಷ್ಯನ ಈ ಗಲಾಟೆ ಗೊಂದಲಗಳು ಅಳಿಯವು, ಕಾಮಾತೀತನಾದವನು ಮಾತ್ರವೇ ಶಾಂತಿಯನ್ನು ಹೊಂದಬಲ್ಲ ಎಂದು ಖಚಿತವಾಗಿ ಹೇಳುತ್ತಿದ್ದಾನೆ ಕೃಷ್ಣ-
ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಃಸ್ಪೃಹಃ I
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ II
ಎಲ್ಲ ಕಾಮಗಳನ್ನು (ಕಾಮಿತಗಳ ವ್ಯಾಮೋಹವನ್ನು) ಬಿಟ್ಟು, ಯಾವ ಮನುಷ್ಯನು ನಿಃಸ್ಪೃಹನೂ ನಿರ್ಮಮನೂ ನಿರಹಂಕಾರಿಯೂ ಆಗಿ ಬದುಕುತ್ತಾನೋ ಅವನು ಶಾಂತಿಯನ್ನು ಪಡೆಯುತ್ತಾನೆ.
ಏಷಾ ಬ್ರಾಹ್ಮೀಸ್ಥಿತಿಃ ಪಾರ್ಥ ನೈನಾಂ ಪ್ರಾಪ್ಯ ವಿಮುಹ್ಯತೇ I
ಸ್ಥಿತ್ವಾಸ್ಯಾಮಂತಕಾಲೇಽಪಿ ಬ್ರಹ್ಮನಿರ್ವಾಣಮೃಚ್ಛತಿ II
ಇದನ್ನೇ ‘ಬ್ರಾಹ್ಮೀಸ್ಥಿತಿ’ ಎನ್ನಲಾಗುತ್ತದೆ. ಇದನ್ನು ಪಡೆದ ಮೇಲೆ, ವ್ಯಕ್ತಿಗೆ ಮತ್ತೆ ಮೋಹವು ಕವಿದುಕೊಳ್ಳದು. ಈ ಸ್ಥಿತಿಯಲ್ಲಿ ನೆಲೆಗೊಂಡವನು, ತನ್ನ ಅಂತ್ಯಕಾಲದಲ್ಲಿ ‘ಬ್ರಹ್ಮನಿರ್ವಾಣ’ವನ್ನು (ಹುಟ್ಟುಸಾವುಗಳ ಚಕ್ರಕ್ಕೆ ಮತ್ತೆ ಸಿಲುಕದ ಮುಕ್ತಿಯ ಪದವಿಯನ್ನು) ಹೊಂದುತ್ತಾನೆ. ಕಾಮಭೋಗಗಳನ್ನು ‘ಬೇಕು-ಬೇಡ’ ಎಂದು ನಿರ್ಧರಿಸುವುದು ನಮ್ಮ ಕೈಯಲ್ಲಿಲ್ಲ. ಆದರೆ ಆ ಕಾಮಭೋಗಗಳು ಸಿಗಲಿ, ಸಿಗದಿರಲಿ, ನಮ್ಮೊಳಗಿನ ಅನಂತ ಶಾಂತಿಯನ್ನು ನಾವು ಕಂಡುಕೊಳ್ಳುವುದು ಜಾಣತನ ಎನ್ನುವುದು ಅನುಭಾವಿಗಳ ಸಾಕ್ಷಾತ್ಕಾರ.
ಅಲ್ಲ! ಕೃಷ್ಣನು ಅರ್ಜುನನನ್ನು ಯುದ್ಧಕ್ಕಾಗಿ ಸನ್ನದ್ಧಗೊಳಿಸುತ್ತಿರುವಾಗ, ಹೀಗೆ, ಶಾಂತಿ-ಅಂತರ್ಮುಖತೆಗಳ ಬ್ರಾಹ್ಮೀಸ್ಥಿತಿಯ ಬಗ್ಗೆ ಹೇಳುತ್ತಿದ್ದಾನಲ್ಲ?! ಜೀವನದ ಸಾಫಲ್ಯದ ಗುಟ್ಟು! ಬ್ರಾಹ್ಮೀಸ್ಥಿತಿ ಎಂದರೆ ‘ಎಲ್ಲವನ್ನೂ ‘ಬೇಡ’ ಎಂದು ನಿರಾಕರಿಸಿ ಸುಮ್ಮನೆ ಕೂಡುವುದಲ್ಲ! ನಮ್ಮ ಕರ್ಮದ ಬುತ್ತಿಯು ಕ್ಷಯವಾಗುವವರೆಗೂ ಹಾಗೆ ಸುಮ್ಮನಾಗುವುದು ಸಾಧ್ಯವೇ ಇಲ್ಲ ಬಿಡಿ! ಮಾಡಬೇಕಾದ ಧರ್ಮಕರ್ಮಗಳನ್ನು ಪೂರೈಸಿ, ಫಲಗಳ ಮೋಹವನ್ನು ಬಿಟ್ಟು, ನಿರ್ಲಿಪ್ತಿಯಿಂದ ಅಂತರ್ಮುಖವಾದಾಗ ಮಾತ್ರವೇ ಬ್ರಾಹ್ಮೀಸ್ಥಿತಿಯತ್ತ ನಾವು ಸಾಗಲಾರಂಭಿಸುವುದು. ಅದನ್ನೇ ಕೃಷ್ಣನು ಮೊದಲಿನಿಂದಲೂ ಮನಗಾಣಿಸಲೆತ್ನಿಸುತ್ತಿರುವುದು ಕೂಡ. ಕರ್ಮವನ್ನು ‘ಮಾಡಬೇಕೇ ಬೇಡವೆ?’ ಎನ್ನುವುದಲ್ಲ ಇಲ್ಲಿನ ಪ್ರಶ್ನೆ. ‘ಮಾಡುವುದನ್ನೆಲ್ಲ ಯಾವ ಪ್ರಜ್ಞಾಸ್ತರದಲ್ಲಿ ನಿಂತು ಮಾಡಬೇಕು?’ ಎನ್ನುವುದು ಪ್ರಶ್ನೆ! ಬ್ರಾಹ್ಮತತ್ವದೆಡೆಗೇರುತ್ತ ಹೋಗುವ ವ್ಯಕ್ತಿಯು ಮಾತ್ರವೇ ಕರ್ಮಗಳನ್ನು ಅಚ್ಚುಕಟ್ಟಾಗಿ ಪೂರೈಸಿ ‘ಕೃತಕೃತ್ಯ’ನೆನಿಸುವುದು. ಲೌಕಿಕ ಫಲಗಳ ಬೆನ್ನಟ್ಟಿ ಓದುವವರು, ಮತಿಮನಗಳನ್ನು ಕೊಳಕಾಗಿಸಿಕೊಳ್ಳುತ್ತ, ಮಾಡಬೇಕಾದ್ದನ್ನು ಬಿಟ್ಟು ಮಾಡಬಾರದ್ದನ್ನೇ ಮಾಡುತ್ತ ಕರ್ಮಬಂಧನಕ್ಕೆ ಸಿಲುಕುತ್ತಾರೆ.
ಇಲ್ಲಿ, ಅರ್ಜುನನು ಮಾಡಬೇಕಾದ ಕರ್ತವ್ಯ ಯಾವುದು? ಸ್ವಜನರೊಂದಿಗೆ ಯುದ್ಧ! ಅಪ್ರಿಯವಾದ ಕರ್ತವ್ಯವೇ ಸರಿ! ಆದರೆ ಪ್ರಿಯಾಪ್ರಿಯಗಳ ಲೆಕ್ಕಾಚಾರವನ್ನು ಪಕ್ಕಕ್ಕಿಟ್ಟು, ಕರ್ತವ್ಯವನ್ನು ನಿಭಾಯಿಸಲೇಬೇಕು. ಆದರೆ ಮೋಹವು ಭಾವನೆಗಳ ಬಿರುಗಾಳಿಯೆಬ್ಬಿಸಿ ಕೆಲಸವನ್ನು ಕೆಡಿಸುತ್ತದಲ್ಲ! “ಅದನ್ನು ಗೆದ್ದು, ಕರ್ಮವನ್ನು ಪೂರೈಸು, ಫಲಾಫಲಗಳನ್ನು ವಿಧಿಗೆ ಬಿಟ್ಟು, ಅಂತರಂಗದ ಉನ್ನತತರ ಶಾಂತಿಯಲ್ಲಿ ನೆಲೆ ನಿಲ್ಲು”- ಎಂದು ಕೃಷ್ಣನು ಅರ್ಜುನನಿಗೆ ಕರ್ಮಯೋಗದ ಪರಿಯನ್ನು ವಿಶದಪಡಿಸುತ್ತಿದ್ದಾನೆ.

ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply