ಬದುಕಿಗೆ ಭಗವದ್ಗೀತೆ – ವೇದಜ್ಞತ್ವದ ಹಾದಿ

ಬದುಕಿಗೆ ಭಗವದ್ಗೀತೆ – ವೇದಜ್ಞತ್ವದ ಹಾದಿ

ವೇದವನ್ನು ಸುಮ್ಮನೆ ಭಾಗಶಃ ಪಠಣ, ಮನನ ಸಂಶೋಧನ ಮಾಡುವವರೆಲ್ಲ, ಪರಿಪೂರ್ಣಾರ್ಥದಲ್ಲಿ ’ವೇದಜ್ಞ’ರೆನಿಸಲಾರರು. ವೇದಸಾಹಿತ್ಯದ ಅರ್ಥವನ್ನು ಗ್ರಹಿಸಲು ಸಂಸ್ಕೃತ ಹಾಗೂ ವೇದಾಂಗಗಳ ಕ್ರಮಯುತ ಅಧ್ಯಯನದಿಂದ ಸಿದ್ಧಿಸುವ ವೇದಭಾಷೆ-ಪರಿಭಾಷೆಗಳ ಪರಿಣತಿ ಅತ್ಯವಶ್ಯಕ. ಆದರೆ ಅಷ್ಟರಿಂದಲೇ ಅದರ ಅಧ್ಯಾತ್ಮ ರಹಸ್ಯಭಾಗಗಳು ಗ್ರಾಹ್ಯವಾಗುವುದಿಲ್ಲ ಎನ್ನುವುದೂ ಸತ್ಯ. ವೇದದ ದೇವತಾಸ್ತುತಿ, ಉಪಾಖ್ಯಾನ, ಧರ್ಮಮೀಮಾಂಸೆ, ನೀತಿ, ಕಾವ್ಯಾಂಶಗಳು ಮುಂತಾದ ಭಾಗಗಳು ಅಷ್ಟಷ್ಟು ಅರ್ಥವಾಗುವಂತೆ, ನಿಗೂಢಾರ್ಥವನ್ನು ಧ್ವನಿಸುವ ಆಧ್ಯಾತ್ಮಿಕ ವಿಚಾರಗಳು ಸಾಮಾನ್ಯ ತರ್ಕಕ್ಕೆ ನಿಲುಕಲಾರವು. ಋಷಿತ್ವಕ್ಕೇರಿದ ಮತಿಗೆ ಮಾತ್ರ ನಿಲುಕುವ ಲೋಕೋತ್ತರ ಅನುಭವದ ಹೊಳಹುಗಳು ವೇದವೇದಾಂತಗಳಲ್ಲಿ ಬಹಳಷ್ಟಿವೆ. ಚಿಂತನೆಗೊದಗುವ ವಿಪುಲ ವಿಚಾರಸಾಮಗ್ರಿಯೂ ಇರುವಂತೆ, ಮಾತು-ಮನಂಗಳಾಚೆಗೇ ನಿಲ್ಲುವ ಅನುಭವೈಕ ವಿಷಯಗಳ ಸಂಕೇತಗಳೂ ಧ್ವನಿಗಳೂ ಅಲ್ಲಿವೆ. ಇವುಗಳನ್ನು ಗ್ರಹಿಸಲು ಕೇವಲ ಪಾಂಡಿತ್ಯವಲ್ಲ, ಭಾವಶುದ್ಧಿಯೂ ಬೇಕಾಗುತ್ತದೆ. ಅದಕ್ಕಾಗಿಯೇ ಆಚಾರಸಂಹಿತೆಯನ್ನು ವಿಧಿಸಿರುವುದೂ ಕೂಡ.
ಆದರೆ ‘ಆಚರ’ ಎಂದರೆ ಕೇವಲ ಒಂದಷ್ಟು ಬಾಹ್ಯಾಚಾರಗಳಲ್ಲ, ಮಾತು-ಮನಸ್ಸು-ಕೃತಿಗಳೆಲ್ಲದರಲ್ಲೂ ಸಿದ್ಧಿಸಬೇಕಾದ ಋಜುತ್ವ. ಪ್ರಾಮಾಣಿಕತೆ ಹಾಗೂ ಪರಿಶುದ್ಧಿ. ಬಾಹ್ಯಾಚಾರಗಳನ್ನು ಶಿಸ್ತಿನಿಂದ ಪಾಲಿಸಿದ ಮಾತ್ರಕ್ಕೆ ತಮ್ಮನ್ನು ‘ತಾವು ಧರ್ಮಾತ್ಮರೆಂದು’ ಭ್ರಮಿಸುವವರೇ ಹೆಚ್ಚು. ಈ ಶಿಷ್ಟಾಚಾರಗಳಿಗೂ ಬಹಳ ಬೆಲೆ ಇದೆ ನಿಜ. ಸಮಾಧಾನ-ಸಂತೋಷಗಳು ಸಿಗುತ್ತವೆ ನಿಜ, ಆದರೆ ಸಾಮಾನ್ಯ-ಧರ್ಮವಿಲ್ಲದ (ಸತ್ಯ-ಧರ್ಮ-ಇಂದ್ರಿಯನಿಗ್ರಹ-ಅಸ್ತೇಯ-ದಯಾ ಮುಂತಾದ ಸಾರ್ವಕಾಲಿಕ ನೀತಿಗಳ ಪ್ರಜ್ಞೆ ಮತ್ತು ಪಾಲನೆ), ಕೇವಲ ಬಾಹ್ಯಾಚಾರದಿಂದ ಚಿತ್ತಶುದ್ಧಿ ಹಾಗೂ ಋಷಿತ್ವಗಳು ಸಿದ್ಧಿಸವು. ಹಾಗಾಗಿ  ಮಾತು-ಮನಸ್ಸು-ಕೃತಿಗಳೆಂಬ ಮೂರೂ ಸ್ತರಗಳಲ್ಲೂ ‘ಆಚಾರ’ವನ್ನು ಪಾಲಿಸಬೇಕಾಗುತ್ತದೆ.
ಚಾಚೂ ತಪ್ಪದೇ ಬಾಹ್ಯದ ಆಚಾರಗಳನ್ನು ಆಜನ್ಮ ಪಾಲಿಸುವ ಆಸ್ತಿಕರು ಶ್ಲಾಘ್ಯರೇ ನಿಜ. ಆದರೆ, ಅವರ ಆಚಾರ ‘ತ್ರಿಕರಣ-ಪೂರ್ವಕ’ವಾದದ್ದೇ ಎನ್ನುವ ಪ್ರಶ್ನೆಗೆ ಉತ್ತರ ಸಿಗುವುದು ಯಾವಾಗ ಗೊತ್ತೆ? ಅವರು ಜೀವನದ ಸುಖದುಃಖಗಳನ್ನು ಸಮವಾಗಿ ಕಾಣಬಲ್ಲವರಾದಾಗ! ನೋವಿನಲ್ಲೂ ನಗಬಲ್ಲವರಾದಾಗ! ಮೇಲು-ಕೀಳೆಂಬ ಭೇದಗಳನ್ನು ಅಳಿಸಿ ಸರ್ವಜೀವಹಿತರಾದಾಗ! ವಿದ್ಯಾವಿನಯಸಂಪನ್ನೇಬ್ರಾಹ್ಮಣೇ ಗವಿ ಹಸ್ತಿನಿ I ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ II(ಪಂಡಿತನಾದವನು ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣನಲ್ಲೂ ಸಿಂಹ-ಆನೆ-ನಾಯಿ-ಚಂಡಾಳಾದಿ ಎಲ್ಲ ಜೀವಿಗಳಲ್ಲೂ ಸಮಭಾವದಿಂದಿರುತ್ತಾನೆ) ಎಂದು ಘೋಷಿಸುತ್ತಾನೆ ಕೃಷ್ಣ.
ಆಚಾರವು ‘ತನು’ವನ್ನಷ್ಟೇ ಅಲ್ಲದೆ ವಾಙ್ಮನಗಳನ್ನೂ ಪುನೀತಗೊಳಿಸಿದಾಗ, ಬುದ್ಧಿಯು ಮೋಹಮುಕ್ತವಾಗುತ್ತದೆ. ಮೋಹಮುಕ್ತವಾದ ಮತಿಯು ಜೀವನಾನುಭವದಿಂದ ಬಹಳಷ್ಟನ್ನು ಕಲಿಯತೊಡಗುತ್ತದೆ. ವಾಸ್ತವ ಹಾಗೂ ಕಲ್ಪಿತಗಳ ವಿವೇಚನೆಯನ್ನು ಪಡೆಯುತ್ತದೆ. ಭೌತಿಕ-ಭಾವನಾತ್ಮಕ ಇತಿಮಿತಿಗಳಿಂದ ಮೇಲೆದ್ದು, ಸತ್ಯಶೋಧಿತವಾದ ಅಂತರ್ದೃಷ್ಟಿಯನ್ನು ಪಡೆಯುತ್ತದೆ. ಅಂತಹ ಮತಿಯು ವೇದವೇದಾಂತಗಳನ್ನು ಪ್ರವೇಶಿಸಿದಾಗ, ಆಗುವುದೇ ನಿಜಾರ್ಥದಲ್ಲಿ ‘ವೇದಾನುಸಂಧಾನ’. ಬುದ್ಧಿಯು ‘ಸರ್ವತಂತ್ರ ಸ್ವತಂತ್ರ’ವಾಗಿ ಜೀವನವನ್ನೂ ಪರತತ್ವವನ್ನೂ ಸತ್ಯದ ನೆಲೆಯಲ್ಲಿ ಗ್ರಹಿಸುವ ಯೋಗ್ಯತೆಯನ್ನು ಪಡೆಯುತ್ತದೆ. ‘ವೇದಜ್ಞ’ನು ಉದಿಸುವುದು ಹೀಗೆ. ಅಲ್ಲಿಯವರೆಗೂ ಮನುಷ್ಯನು ಲೌಕಿಕವ್ಯವಹಾರಗಳಲ್ಲೇ ತೊಡಗಲಿ ಅಥವಾವೇದ-ಶಾಸ್ತ್ರ-ದೇವರು-ಸೇವೆ-ಸಂಶೋಧನೆ-ತರ್ಕ ಮುಂತಾದ ವಿಚಾರಗಳಲ್ಲೇ ತೊಡಗಲಿ, ಅದರಲ್ಲೂ ಅವನ ಮೋಹ-ಭ್ರಾಂತಿ-ಭೋಗಲಾಲಸೆಗಳೇ ಕಾರುಬಾರು ಮಾಡುತ್ತವೆ! ಆ ಎಲ್ಲ ಕರ್ಮಗಳು ಮೋಹ-ಮಮಕಾರಲಿಪ್ತವಾಗಿರುವುದರಿಂದ ಜನ್ಮಮರಣಗಳ ಬಂಧನಕ್ಕೆ ಕಾರಣವಾಗುತ್ತವೆ. ತ್ರಿಕರಣಶುದ್ಧಿ ಹಾಗೂ ವಿವೇಕಗಳನ್ನು ಹೊಂದದ ಇಂತಹ ಜಡಮತಿಯ ‘ವೇದವಾದರತಾಃ’, ‘ಕಾಮಾತ್ಮಾನಃ’, ‘ಕ್ರಿಯಾವಿಶೇಷಬಹುಲಾಃ’, ‘ಭೋಗಾಪಹೃತಚೇತಸಾಃ’ ಆದಂತಹವರಿಗೆ ‘ಸಮತ್ವವು’ ಸಿದ್ಧಿಸದು ಎಂಬುದು ಕೃಷ್ಣನ ಮಾತಿನ ಇಂಗಿತ. ‘ಕರ್ಮವನ್ನೇ ಬಳಸಿ ಕರ್ಮಪಾಶದಿಂದ ಬಿಡಿಸಿಕೊಳ್ಳುವುದು ಹೇಗೆ?’ ಎನ್ನುವುದನ್ನು ಕೃಷ್ಣನು ಬುದ್ಧಿಯೋಗದ ಮೂಲಕ ತಿಳಿಸುತ್ತ ಹೋಗುವುದನ್ನು ನೋಡಲಿದ್ದೇವೆ.
ಕರ್ಮವು ಬಂಧನಕ್ಕೆ ಕಾರಣವಾಗದೆ, ಬಿಡುಗಡೆಯ ಸಾಧನವಾಗಬೇಕಾಗುವುದು ಮುಖ್ಯ. ಸ್ವತಃ ‘ಕರ್ಮ’ವು ಬಂಧನಕ್ಕಾಗಲಿ ಮೋಕ್ಷಕ್ಕಾಗಲಿ ಕಾರಣವಲ್ಲ. ಆದರೆ ಕರ್ಮದಲ್ಲಿ ತೊಡಗುವ ಜೀವಿಯ ‘ಉದ್ದೇಶ-ಭಾವನೆಗಳೇ’ ಕಾರಣ. ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ ಎಂಬ ಆಚಾರ್ಯಶಂಕರರ ಮಾತು ಇಲ್ಲಿ ಸ್ಮರಣೀಯ, ಪೂಜೆ-ವೇದಾಧ್ಯಯನ ಮಾಡುವಾಗಲು ಉದ್ದೇಶವು ಭೋಗಪ್ರಾಪ್ತಿ ಆಗಿದ್ದಲ್ಲಿ, ಅದು ಬಂಧನಕಾರಿ. ಲೌಕಿಕ ವ್ಯವಹಾರಗಳನ್ನೇ ಮಾಡುತ್ತಿದ್ದರೂ ಅಂತರಂಗದಲ್ಲಿ ಕರ್ತವ್ಯೈಕ ದೃಷ್ಟಿ ಹಾಗೂ ಧರ್ಮೈಕನಿಷ್ಠೆಗಳು ಇದ್ದಲ್ಲಿ, ಆ ಕರ್ಮವು ‘ಬಂಧಮೋಚಕ’ ಎಂಬುದು ವೇದಾಂತದ ದಿಗ್ದರ್ಶನ. ‘ಪಂಚಮವೇದ’ವೆನಿಸಿರುವ ಮಹಾಭಾರತವು ಇದಕ್ಕೆ ಧರ್ಮವ್ಯಾಧ, ತುಲಾಧಾರ ಮೊದಲಾದವರ ಸ್ವಾರಸ್ಯಕರ ಜೀವನೋದಾಹರಣೆಗಳನ್ನೂ ಒದಗಿಸುತ್ತದೆ! ಹೀಗೆ ಕರ್ಮದ ಮೂಲಕವೇ ಕರ್ಮಬಂಧನದಿಂದ ಕಳಚಿಕೊಂಡು ಚಿರಾನಂದದ ನೆಲೆಗೇರುವ ಕೌಶಲವನ್ನು ಕೃಷ್ಣಗುರುವು ನಮಗೆ ಕಲಿಸುತ್ತ ಹೋಗುತ್ತಾನೆ.
ಒಟ್ಟಿನಲ್ಲಿ ಒಳಹೊರಗಿನ ಜಗತ್ತುಗಳೆಲ್ಲವನ್ನೂ ಅಳೆದು ಅರಿಯುವ ತಾಕತ್ತು ನಮ್ಮೊಳಗೇ ಇದೆ. ಆದರೆ ಆ ತಾಕತ್ತಿನ ಅಭಿವ್ಯಕ್ತಿಗೆ ಬಾಧಕಗಳು ನಮ್ಮದೇ ಭೋಗಾಸಕ್ತಿ ಹಾಗೂ ವ್ಯಾಮೋಹ. ಅವು ಎಷ್ಟು ಪ್ರಬಲವೆಂದರೆ, ನಾವು ಲೌಕಿಕ ವ್ಯವಹಾರಗಳಲ್ಲೇ ಇರಲಿ, ಆಧ್ಯಾತ್ಮಿಕ ಚಿಂತನೆಯಲ್ಲೇ ತೊಡಗಿರಲಿ, ನಮ್ಮ ಅರಿವಿಗೇ ಬಾರದಂತೆ ಅಲ್ಲಲ್ಲೇ ನಮ್ಮ ಮನದಾಳದಲ್ಲಿ ಮಮಕಾರವನ್ನೂ ಬುದ್ಧಿಯಲ್ಲಿ ಮಿಥ್ಯಾರ್ಥಗಳನ್ನೂ ಮೂಡಿಸಿ, ದಾರಿತಪ್ಪಿಸುತ್ತವೆ. ಹಾಗಾಗಿ ಕೃಷ್ಣನಂತಹ ನಿಷ್ಣಾತನೂ ಮನೋವಿಜ್ಞಾನಿಯೂ ಆದ ಮಹಾಗುರುವಿನ ಮಾರ್ಗದರ್ಶನದಲ್ಲಿ ಬುದ್ಧಿಯೋಗವನ್ನು ಕಲಿತು ಮುನ್ನಡೆವುದು ಇಹಕ್ಕೂ ಪರಕ್ಕೂ ಕ್ಷೇಮ.
Dr II ಆರತೀ ವಿ ಬಿ

ಕೃಪೆ : ವಿಜಯವಾಣಿ

Leave a Reply