ಬದುಕಿಗೆ ಭಗವದ್ಗೀತೆ – ವೇದಾದಿಗಳು ಅನುಭವದ ಬಾಗಿಲಿನವರೆಗೆ ಮಾತ್ರ

ಬದುಕಿಗೆ ಭಗವದ್ಗೀತೆ – ವೇದಾದಿಗಳು ಅನುಭವದ ಬಾಗಿಲಿನವರೆಗೆ ಮಾತ್ರ

‘ವೇದಕರ್ಮಗಳನ್ನು ಭೋಗಪ್ರಾಪ್ತಿಗಾಗಿಯಷ್ಟೇ ಬಳಸುತ್ತ, ಸತ್ವರಜಸ್ತಮೋಗುಣಗಳಿಗೆ ಅಧೀನರಾಗಿರುತ್ತ ಹುಟ್ಟುಸಾವುಗಳ ಚಕ್ರಕ್ಕೆ ಸಿಲುಕಿ ಅಶಾಂತರಾಗುವ ಜನರಂತೆ ನೀನೂ ಆಗಬೇಡ. ತ್ರಿಗುಣಗಳನ್ನು ಮೀರಿದವನಾಗು. ಸಮತ್ವವನ್ನು ಸಿದ್ಧಿಸಿಕೋ’ ಎಂದು ಅರ್ಜುನನಿಗೆ ಕೃಷ್ಣನು ಕಿವಿಮಾತುಗಳನ್ನು ಹೇಳುತ್ತಿದ್ದನಷ್ಟೆ?
ತ್ರಿಗುಣಗಳು ನಮ್ಮ ವಿಚಾರ-ವ್ಯಾಪರದ ಮೂಲದ್ರವ್ಯಗಳು. ಅವುಗಳ ಪಾಶದಲ್ಲಿರುವ ತನಕ ನಾವು ‘ಸರ್ವತಂತ್ರಸ್ವತಂತ್ರ’ವಾಗಿ ಆಲೋಚಿಸಲಾರೆವು. ಗುಣಗಳಿಂದ ಮೇಲೇಳದೆ ಸತ್ಯ ಗೋಚರಿಸದು. ಸಮತ್ವವು ಸಿದ್ಧಿಸದು. ಈ ವಾಸ್ತವವನ್ನು ಅರ್ಥಮಾಡಿಸುತ್ತಿದ್ದಾನೆ ಕೃಷ್ಣ.
ಒಟ್ಟಿನಲ್ಲಿ ಗುಣಗಳ ವಶರಾಗಿರುವುದರಿಂದಾಗಿಯೂ ಬುದ್ಧಿಯೋಗದ ಅಭಾವದಿಂದಾಗಿಯೂ ಕರ್ಮವು ಬಂಧನಕಾರಿಯಾಗುತ್ತದೆ. ಕರ್ಮನಿಷ್ಠೆಗೂ ಕರ್ಮಚಾಪಲ್ಯಕ್ಕೂ ವ್ಯತ್ಯಾಸವೇ ತಿಳಿಯದಾಗುತ್ತದೆ. ಕರ್ಮನಿಷ್ಠೆ ಭಾವಶುದ್ಧಿಯನ್ನೂ ತೃಪ್ತಿಯನ್ನೂ ದಕ್ಕಿಸಿಕೊಡುತ್ತದೆ. ಆದರೆ ಕರ್ಮಚಾಪಲ್ಯವು ಡಾಂಭಿಕತೆಯನ್ನೂ ಬಹಿರ್ಮುಖ ವಿವರಗಳ ಗೀಳನ್ನೂ ಫಲ-ಮನ್ನಣೆಗಳ ದುರಾಸೆಯನ್ನೂ ಹುಟ್ಟಿಸುತ್ತದೆ. ಅಹಮಿಕೆಯ ತೃಪ್ತಿಗಾಗಿಯೋ, ಭೋಗಪ್ರಾಪ್ತಿಗಾಗಿಯೋ, ಗೀಳಿನಿಂದಾಗಿಯೋ, ತನ್ನ ಕರ್ಮಚಾಪಲ್ಯವನ್ನೇ ‘ಕರ್ಮನಿಷ್ಠೆ’ ಎಂದು ಭ್ರಮಿಸಿ ಅಲ್ಲೇ ಸಿಲುಕಿರುವವರೇ ಹೆಚ್ಚು. ಇನ್ನು ಮಾಡಬಾರದ್ದನ್ನು ಮಾಡುತ್ತಲೇ ಇದ್ದು ವೇದವಿಹಿತ ಪ್ರಾಯಶ್ಚಿತ್ತ-ವಿಧಿಗಳನ್ನು ಮಾಡಿ, ‘ಪಾಪವನ್ನು ತೊಳೆದುಕೊಳ್ಳುವ ಕುಹಕಬುದ್ಧಿಯ ಜಾಣರೂ ಇಲ್ಲದಿಲ್ಲ! ಕಳ್ಳದುಡ್ಡನ್ನು ದೇವರ ಹುಂಡಿಗೆ ಹಾಕಿ ಪಾಪವನ್ನು ‘ಪುಣ್ಯ’ವಾಗಿ ಬದಲಾಯಿಸಿಕೊಳ್ಳುವ ಲೆಕ್ಕಾಚಾರದಂತೆಯೇ ಇದೂ ಕೂಡ! ಇವರೆಲ್ಲ ವೇದಕರ್ಮಗಳ ಅಪವಿನಿಯೋಗ ಮಾಡುವ ಆತ್ಮವಂಚಕರೇ ಹೊರತು ನಿಜವಾದ ಅರ್ಥದಲ್ಲಿ ‘ವೇದ-ನಿಷ್ಠ’ರಲ್ಲ. ‘ಇಂತಹವರಂತೆ ನೀನೂ ದಿಗ್ಗೆಡಬೇಡ’ ಎಂದು ಕೃಷ್ಣನು ಅರ್ಜುನನಿಗೆ ಪಟ್ಟಾಗಿ ಎಚ್ಚರಿಸುತ್ತಿದ್ದಾನೆ.
ಒಂದು ಮಾತು- ಇಲ್ಲಿ ಕೃಷ್ಣನು ಆಚಾರವನ್ನೆಲ್ಲ ಸಾರಾಸಗಟಾಗಿ ಕಡೆಗಣಿಸುತ್ತಿದ್ದಾನೆ ಎಂದು ಭಾವಿಸಬಾರದು. ‘ಆಚಾರದೊಂದಿಗೆ ಇರಬೇಕಾದ ಬುದ್ಧಿಯೋಗವನ್ನು ಕೈಬಿಟ್ಟರೆ ಶಾಂತಿ-ಸಮತ್ವಗಳು ಸಿದ್ಧಿಸವು’ ಎನ್ನುವ ಎಚ್ಚರವನ್ನು ಕೊಡುತ್ತಿದ್ದಾನಷ್ಟೆ. ಈ ಮಾತುಗಳ ಸಂದರ್ಭ ಗಮನದಲ್ಲಿಟ್ಟುಕೊಳ್ಳದೆ, ಈ ವಾಕ್ಯವನ್ನಷ್ಟೇ ಬಿಡಿಯಾಗಿ ಹೆಕ್ಕಿ ನೋಡದರೆ ‘ಕೃಷ್ಣನು ವೇದನಿಂದಕ’ ಎಂಬ ಭ್ರಾಂತಿ ಮೂಡೀತು! ದ್ವೇಷದಿಂದ ವೇದಮೂಲದ ಧರ್ಮ ಸಂಸ್ಕೃತಿ ಆಚಾರಸಂಹಿತೆಗಳನ್ನು ಹಳಿಯುವ ಬುದ್ಧಿಗೇಡಿಗಳು. ‘ನೋಡಿದಿರಾ? ಕೃಷ್ಣ ವೇದವನ್ನೂ ವೈದಿಕರನ್ನೂ ಹೇಗೆ ಬೈಯುತ್ತಿದ್ದಾನೆ! ನಾವು ಹೇಳುತ್ತಿರುವುದು ಇದನ್ನೇ! ಎಂದು ವಿಕೃತ ಸಂತೋಷಪಡುವುದು ಇಂಥ ಅಸಂಬದ್ಧ ಅರ್ಥಗ್ರಹಣದಿಂದ ಬುದ್ಧಿಯೋಗದೆತ್ತರದ ಕೃಷ್ಣನ ವೇದಕರ್ಮ ವಿಮರ್ಶೆಗೂ ವೇದದ್ವೇಷಮೂಲದ ಈ ಅಪಲಾಪಗಳಿಗೂ ಅಜಗಜಾಂತರ!
ಪ್ರಾಮಾಣಿಕ ವಿಮರ್ಶೆ-ಸತ್ತರ್ಕಗಳು ನಮ್ಮ ಪರಂಪರೆಯ ಹೆಗ್ಗುರುತುಗಳು. ಇವುಗಳು ಇರುವುದು ನಮ್ಮ ಶ್ರದ್ಧೆಯನ್ನು ಹಳಿಯುವುದಕ್ಕಾಗಿಯಲ್ಲ. ತಪ್ಪುಕಲ್ಪನೆ, ಮೂಢನಂಬಿಕೆ ಹಾಗೂ ವಿಚಾರವೈಕಾರ್ಯಗಳ ಕಳೆಯನ್ನು ನಿರ್ಮೂಲನೆ ಮಾಡಿ, ಶ್ರದ್ಧೆಯನ್ನು ಸತ್ಯದ ನೆಲೆಯಲ್ಲಿ ಬಲಪಡಿಸುವುದಕ್ಕಾಗಿ ಈ ಸನಾತನ ಪದ್ಧತಿಯನ್ನೇ ಆಚಾರ್ಯ ಕೃಷ್ಣನು ಸಮರ್ಥವಾಗಿ ಇಲ್ಲಿ ಮಾಡಿದ್ದಾನೆ.
ಎಲ್ಲ ಬಗೆಯ ಕರ್ಮಗಳೂ ಆತ್ಮಜ್ಞಾನಕ್ಕೊಯ್ಯುವ ಸಾಧನಗಳಾಗಬೇಕೆಂಬುದು ಸರ್ವಶಾಸ್ತ್ರಗಳ ಸಮಾನಮತ. ಕರ್ಮಕ್ಕೊಂದು ಮಿತಿಯಿರುತ್ತದೆ. ಆದರೆ ಆತ್ಮಜ್ಞಾನವು ಅಮಿತ. ಈ ಅಮಿತ ತತ್ವವನ್ನು ಗ್ರಹಿಸಲು ಮನೋಬುದ್ಧಿಗಳ ಶುದ್ಧಿಯನ್ನೂ ಸೂಕ್ಷ್ಮಗ್ರಾಹಿತ್ವವನ್ನೂ ಸಿದ್ಧಿಸಿಕೊಳ್ಳಲು ಕರ್ಮವು ‘ಸಾಧನ’ವಷ್ಟೇ.
ನಿತ್ಯನೈಮಿತ್ತಿಕ ಕರ್ಮಗಳಾಗಲಿ ವೈದಿಕ-ಆಗಮ-ತಂತ್ರ-ಜಾನಪದಾದಿ ಮೂಲಗಳ ಕರ್ಮಗಳಾಗಲಿ ಉದ್ದೇಶಶುದ್ಧಿ-ಭಾವಶುದ್ಧಿಗಳಿದ್ದಲ್ಲಿ ಅವುಗಳಿಂದ ಪುಣ್ಯ-ಧನ್ಯತಾಭಾವಗಳು ಸಿದ್ಧಿಸುವುದು ಖಂಡಿತ. ಆದರೆ ಅವುಗಳೂ ‘ಜ್ಞಾನ’ವೆಂಬ ಅತ್ಯಂತಿಕ ಗಮ್ಯಕ್ಕೆ ಸಾಧನೆಗಳು ಮಾತ್ರ. ಆತ್ಮಜ್ಞಾನವಾದ ಬಳಿಕ ಅವುಗಳು ಪ್ರಯೋಜನಾತೀತವಾಗುತ್ತವೆ. ಅದನ್ನೇ ಕೃಷ್ಣ ಹೀಗೆ ಒಕ್ಕಣಿಸುತ್ತಾನೆ:
ಯಾವಾನರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ|
ತಾವಾನ್ ಸರ್ವೇಷು ವೇದೇಷು ಬ್ರಾಹ್ಮಣಸ್ಯ ವಿಜಾನತಃ|| (ಭ. 2.46)
‘ಎಲ್ಲ ಕಡೆಗಳಿಂದಲೂ ನೀರಿನಿಂದಲೇ ಆವೃತನಾಗಿರುವ ವ್ಯಕ್ತಿಗೆ ಬೇರೊಂದು ಸಣ್ಣ ಜಲಾಶಯ ಹೇಗೋ ಹಾಗೆಯೇ ಬ್ರಹ್ಮವನ್ನು ತಿಳಿದ ಬಳಿಕ, ವ್ಯಕ್ತಿಗೆ ವೇದಗಳು ಅಗತ್ಯವೆನಿಸುವುದಿಲ್ಲ.’
ಕಡಲತೀರದ ಒಂದು ಗ್ರಾಮದೊಳಗೆ ಪ್ರವಾಹ ಬಂತು ಎಂದುಕೊಳ್ಳಿ. ನೀರು ಹಳ್ಳಿಯ ನೆಲ ಕೆರೆ ಬಾವಿ ನದಿಗಳನ್ನೆಲ್ಲ ಆವರಿಸಿ ಏಕವಾಗಿ ನಿಲ್ಲುತ್ತದೆ. ಆಗ ‘ಬಾವಿಯ ನೀರಿನ ಪ್ರತ್ಯೇಕ ಅಗತ್ಯವೂ ಬೋಧೆಯೂ ಉಳಿಯದು’! ಅಂತೆಯೇ ಬ್ರಹ್ಮದಲ್ಲಿ ನೆಲೆನಿಂತು ಸರ್ವತ್ರ ಸತ್ಯ ಜ್ಞಾನಗಳನ್ನು ಕಾಂಬವನಿಗೆ ವೇದವೇ ಇಲ್ಲ ಅಥವಾ ಎಲ್ಲ! ‘ಮಳೆ ಯಾವಾಗ? ‘ಶುಭ ಮುಹೂರ್ತ ಯಾವುದು?’ ಎಂದು ನಿರ್ದೇಶಿಸುವುದು ಪಂಚಾಂಗದ ಕೆಲಸ. ಆದರೆ ಪಂಚಾಂಗವು ಸ್ವತಃ ಮಳೆಯನ್ನು ಸುರಿಸದು. ಮುಹೂರ್ತವನ್ನೂ ಸೃಜಿಸದು! ಹಾಗೆಯೇ ನಿರ್ದೇಶಿಸುವುದು ವೇದದ ಕೆಲಸ. ಆದರೆ ಸ್ವಾನುಭವದಲ್ಲಿ ಮಾತ್ರವೇ ಸತ್ಯದ ಸಾಕ್ಷಾತ್ಕಾರ. ರಾಮಕೃಷ್ಣ ಪರಮಹಂಸರು ಕೊಡುವ ಉಪಮೆ: ‘ಹಳ್ಳಿಯ ವ್ಯಕ್ತಿಯೊಬ್ಬ ವ್ಯಾಪಾರಕ್ಕಾಗಿ ಪಟ್ಟಣಕ್ಕೆ ಹೊರಟ. ಬರುವಾಗ ಏನೇನು ವಸ್ತುಗಳನ್ನು ತರಬೇಕೆಂದು ಹೆಂಡತಿ ಪಟ್ಟಿಮಾಡಿ ಚೀಟಿಯನ್ನು ಕೈಯಲ್ಲಿಟ್ಟಳಂತೆ. ಆತ ಆ ಚೀಟಿಯ ಉದ್ದೇಶವು ಪೂರ್ಣವಾದ ಮೇಲೆ, ಅದರ ಅಗತ್ಯ ಅವನಿಗಿಲ್ಲ.’
ವೇದಕರ್ಮಗಳು ಭಾವ-ವಿಚಾರಶುದ್ಧಿಯ ಮೂಲಕ ನಮ್ಮನ್ನು ಆತ್ಮಜ್ಞಾನದ ಬಾಗಿಲಿನವರೆಗೂ ಒಯ್ಯುತ್ತವೆ, ಆದರೆ ಒಳಹೋಗಲು ಸ್ವಾನುಭವವೇ ಬೇಕು! ಆ ಸ್ವಾನುಭವಕ್ಕೆ ಸೋಪಾನ ಬುದ್ಧಿಯೋಗ.
ಡಾ.ಆರತೀ ವಿ ಬಿ
ಕೃಪೆ : ವಿಜಯವಾಣಿ

Leave a Reply