ಬದುಕಿಗೆ ಭಗವದ್ಗೀತೆ – ಶುಭಾಶುಭಗಳಿಗೆ ಅಂಟಿಕೊಳ್ಳದೆ ಮುಂದುವರೆಯುತ್ತಾನೆ ಜ್ಞಾನಿ

ಬದುಕಿಗೆ ಭಗವದ್ಗೀತೆ – ಶುಭಾಶುಭಗಳಿಗೆ ಅಂಟಿಕೊಳ್ಳದೆ ಮುಂದುವರೆಯುತ್ತಾನೆ ಜ್ಞಾನಿ

ಸುಖದುಃಖಗಳಲ್ಲಿ ಸಮಭಾವದಿಂದಿರುತ್ತ, ರಾಗ-ಭಯ-ಕ್ರೋಧಗಳನ್ನು ಗೆದ್ದು ಸ್ಥಿತಪ್ರಜ್ಞನಾಗಬಲ್ಲವನೇ ಮುನಿ ಎಂದು ಶ್ರೀಕೃಷ್ಣನು ವಿವರಿಸುತ್ತಿದ್ದ. ಮುಂದುವರೆಸುತ್ತಾನೆ-

ಯಃ ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಪ್ಯ ಶುಭಾಶುಭಂ |

ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ||

(ಸ್ಥಿತಪ್ರಜ್ಞನು ತನಗೆ ಪ್ರಾಪ್ತಿಯಾಗುವ ಶುಭ-ಅಶುಭ ಫಲಗಳಿಗೆ ಅಂಟಿಕೊಳ್ಳುವುದಿಲ್ಲ. ತುಂಬ ಖುಷಿಪಡುವುದೂ ಇಲ್ಲ, ದ್ವೇಷಿಸುವುದೂ ಇಲ್ಲ).
ಸಂಸ್ಕೃತ ಭಾಷೆಯಲ್ಲಿ ’ಸ್ನೇಹ’ ಎಂದರೆ ’ಜಿಡ್ಡು, ಅಂಟು’ ಎಂದರ್ಥ. ನಾವು ಮಿತ್ರರೊಂದಿಗೆ ’ನಂಟು’ ಬೆಳೆಸಿಕೊಳ್ಳುವುದರಿಂದ ಮೈತ್ರಿಗೂ ’ಸ್ನೇಹ’ ಎಂಬ ಪದವು ಪರ್ಯಾಯವಾಗಿ ವಾಡಿಕೆಯಲ್ಲಿ ಬಂದಿದೆ. ಈ ಶ್ಲೋಕದಲ್ಲಿ ’ಸ್ನೇಹ’ ಎಂದರೆ ’ಅಂಟಿಕೊಳ್ಳುವುದು/ಮಮಕಾರ ಬೆಳೆಸಿಕೊಳ್ಳುವುದು’ ಎಂದರ್ಥ ಮಾಡಿಕೊಳ್ಳಬೇಕು.
ನಾವು ನಮಗೆ ಬಂದೊದಗುವ ಶುಭ-ಅಶುಭಾನುಭವಗಳನ್ನು ತುಂಬ ಹಚ್ಚಿಕೊಳ್ಳುತ್ತೇವೆ. ಶುಭಕ್ಕೆ ಹಿಗ್ಗುತ್ತ ಅಶುಭಕ್ಕೆ ಕುಗ್ಗುತ್ತ, ಅದಕ್ಕೆ ಕಾರಣವೆನಿಸುವವರ ಬಗ್ಗೆ ದ್ವೇಷ ಸಾಧಿಸುತ್ತೇವೆ. ನಮ್ಮದೊಂದು ಭ್ರಮೆಯೇನೆಂದರೆ – ’ಜೀವನದಲ್ಲಿ ಶುಭವೇ ನಡೆಯುತ್ತಿದ್ದರೆ, ಆಗ ನಾವು ಜಯಶಾಲಿಗಳು! ಅಶುಭಗಳು ಘಟಿಸಿದರೆ, ಅದು ನಮ್ಮ ಹಿನ್ನಡೆ’ ಎಂದು! ಆದರೆ ವಾಸ್ತವದಲ್ಲಿ ಇವೆರಡೂ ಜೀವನಾನುಭವಗಳು, ಅಷ್ಟೆ. ನಿಜಕ್ಕೂ ’ಶುಭ’ವೂ ಇಲ್ಲ, ’ಅಶುಭ’ವೂ ಇಲ್ಲ. ನಾವು ನಮಗೆ ಇಷ್ಟವಾಗುವ ಘಟನೆಗಳಿಗೆಲ್ಲ ’ಶುಭ’ವೆಂದೂ, ಇಷ್ಟವಾಗದ ಘಟನೆಗಳಿಗೆಲ್ಲ ’ಅಶುಭ’ವೆಂದೂ ಪಟ್ಟಿಕಟ್ಟುತ್ತೇವೆ. ಸುಖ-ಸಂಪತ್ತು-ಅಧಿಕಾರ-ಸ್ವಜನಯೋಗ-ಕೀರ್ತಿ ಮೊದಲಾದುವನ್ನು ’ಶುಭ’ವೆಂದು ಬಗೆದು ಆಸೆಯಿಂದ ಇದಿರು ನೋಡುತ್ತೇವೆ. ಅವಮಾನ-ನಿರಾಶೆ-ನೋವು-ನಷ್ಟ-ವಿಯೋಗ ಮುಂತಾದವುಗಳನ್ನು ’ಅಶುಭ’ ಎಂದು ಬಗೆದು, ಹೆದರಿ, ಪಲಾಯನ ಮಾಡಹತ್ತುತ್ತೇವೆ. ನಾವೇ ಕಲ್ಪಿಸಿಕೊಂಡ ಈ ಶುಭಾಶುಭಗಳ ಅಳತೆಗೋಲಿನಿಂದ ಜೀವನದ ಸಾಫಲ್ಯವನ್ನೂ ಗುಣಮಟ್ಟವನ್ನೂ ಅಳೆಯುತ್ತ ಕೂರುತ್ತೇವೆ. ನಮ್ಮ ಲೆಕ್ಕಾಚಾರಕ್ಕೆ ಎಂದೂ ನಿಲುಕದೇ, ಜೀವನವೆನ್ನುವುದು ಊಹಾತೀತ ಗತಿಯಲ್ಲಿ ತನ್ನ ಪಾಡಿಗೆ ಸಾಗುತ್ತಿರುತ್ತದೆ! “ದಮ್ಮಿದ್ದರೆ ನಾನೊಡ್ಡುವ ಅನುಭವಗಳನ್ನು ಎದುರಿಸಿ, ಕಲಿತು, ಕಲಿತು ಜಾಣನಾಗು, ಕಳಚಿಕೊಂಡು ಮುಕ್ತನಾಗು!” ಎಂದು ಜೀವನವು ನಮಗೆ ಸವಾಲೊಡ್ಡುತ್ತದೆ! ಇದನ್ನು ಅರ್ಥಮಾಡಿಕೊಂಡು, ವಾಸ್ತವವನ್ನೊಪ್ಪಿ ಬದುಕು ನಡೆಸಲಾರಂಭಿಸಿದಾಗ, ಮನುಷ್ಯನು ಸಣ್ಣಪುಟ್ಟ ವಸ್ತುಲಾಭಗಳಿಗೆ ’ಕುಣಿದಾಡುವುದಿಲ್ಲ’, ’ಅಶುಭಗಳೂ ಘಟಿಸಿದಾಗ ಹೌಹಾರಿ, ಅವರಿವರನ್ನು ದೂಷಿಸಿ ಮತಿಮನಗಳನ್ನು ಪ್ರಕ್ಷುಬ್ಧಗೊಳಿಸಿಕೊಳ್ಳುವುದೂ ಇಲ್ಲ. ಎಲ್ಲವನ್ನೂ ’ಜೀವನಾನುಭವಗಳು’ ಎಂದು ಅಂಗೀಕರಿಸಿ, ನಿರ್ವಿಕಾರ ಭಾವದಿಂದ ತನ್ನ ಗಮ್ಯದತ್ತ ಸಾಗುತ್ತಿರುತ್ತಾನೆ.
ಶ್ರೀಕೃಷ್ಣನು ಸೂಚಿಸುವ ಸ್ಥಿತಪ್ರಜ್ಞನ ಈ ಲಕ್ಷಣವು ಇಂದಿನ ’ಅವಸರದ ಬದುಕಿನ’ ನಮಗೆ ಧ್ಯೇಯವಾದರೆ ಕ್ಷೇಮ. ಏಕೆಂದರೆ, ’ವಸ್ತುಗಳ ಲಾಭವೇ ಜೀವನ – ಸಾಫಲ್ಯ’ ಎಂಬ ಸಂಕುಚಿತಾರ್ಥದ ’ವೈಶ್ವಿಕ-ನಿರ್ವಚನವನ್ನು’ (Global Definition) ಮಾಡಿಕೊಂಡು, ಅದನ್ನು ಪ್ರಮಾಣಿಸಿಯೂ ನೋಡದೆ, ನಮ್ಮ ತಲೆಗೆ ನಾವೇ ಕಟ್ಟಿಕೊಂಡಿದ್ದೇವೆ! ಅದಕ್ಕನುಗುಣವಾಗಿ ಅನಿಯಂತ್ರಿತವಾದ ಗಳಿಕೆ-ಬಳಕೆಗಳ ಹುಚ್ಚಿಗೆ ಬಿದ್ದಿದ್ದೇವೆ! ಬದುಕಿನ ವಿಶಾಲಾರ್ಥವನ್ನೂ, ಸೌಂದರ್ಯ-ಸ್ವಾರಸ್ಯಗಳನ್ನೂ, ಅದರಲ್ಲಿನ ನಮ್ಮ ಧರ್ಮಕರ್ಮಗಳ ಪಾತ್ರವನ್ನೂ, ನಮ್ಮೊಳಗಿನ ಸುಪ್ತಸತ್ವ-ಸಾಮರ್ಥ್ಯಗಳನ್ನು ಧ್ಯನಿಸದೇ, ಸಾಕ್ಷಾತ್ಕರಿಸಿಕೊಳ್ಳದೇ, ’ಅದು ಇಲ್ಲ – ಇದು ಇಲ್ಲ’ವೆಂಬ ಕೊರತೆಯ ಭಾವಕ್ಕೆ ಕುಸಿದಿದ್ದೇವೆ! ಅವಾಸ್ತವಿಕ ’ಶುಭ’ದ ಕನಸು ಒಂದೆಡೆ ಹುಚ್ಚು ಹಿಡಿಸಿದರೆ, ’ಯಾವಾಗ ಯಾವ ಅಶುಭವು ವಕ್ಕರಿಸುವುದೋ!’ ಎಂಬ ನಿರಂತರ ಭೀತಿ ಮತ್ತೊಂದೆಡೆ ಕಾಡುತ್ತದೆ! ಹಾಗಾಗಿ ಮಾನಸಿಕ ಖಿನ್ನತೆ-ಆತ್ಮಹತ್ಯೆ-ಹಿಂಸಾಚಾರ-ಭ್ರಷ್ಟಾಚಾರ-ಮೋಸ ಮೊದಲಾದವು ಹೆಚ್ಚುತ್ತಿವೆ!
ನಮ್ಮ ಆಂತರಿಕ ಸತ್ವ ಸಾಮರ್ಥ್ಯಗಳನ್ನೂ ಅನ್ವೇಷಿಸದೆ, ಜೀವನದ ಸವಾಲುಗಳ ಪರಿಜ್ಞಾನವನ್ನೂ ಬೆಳೆಸಿಕೊಳ್ಳದೇ, ’ಗಳಿಸುವ-ಬಳಸುವ’ Blind Rat Raceಗಿಳಿದ ವ್ಯಕ್ತಿಗಳ ಪಾಲಿಗೆ ನೆಮ್ಮದಿ, ವಿಚಾರ-ಸ್ಪಷ್ಟತೆ ಮತ್ತೆಲ್ಲಿನದು? ’ಇದು ಸ್ಪರ್ಧಾತ್ಮಕ ಬದುಕಿನ ಕಾಲವಪ್ಪ, ಏನೂ ಮಾಡಲಾಗದು!’ ಎಂದು ಸಮರ್ಥಿಸಿಕೊಳ್ಳುತ್ತ, ನಮ್ಮ ತನುಮನಧನಗಳನ್ನು ಹಾಳುಮಾಡಿಕೊಳ್ಳುವ ಬದಲು, ಶ್ರೀಕೃಷ್ಣನ ಈ ವಿವೇಕ ನುಡಿಯನ್ನು ಮನನ ಮಾಡಿ ಎಚ್ಚೆತ್ತುಕೊಳ್ಳುವುದು ಒಳಿತು.
ಜೀವನದಲ್ಲಿ ಅದಾವುದೇ ಗಮ್ಯವನ್ನು ತಲುಪಬೇಕಾದರೂ, ದಾರಿಯಲ್ಲಿನ ವಿವಿಧಾನುಭವಗಳನ್ನು ಎದುರಿಸುವುದು ತಪ್ಪದು. ’ಎಲ್ಲ ಸುಗಮವಾಗಿಯೇ ಇರಬೇಕು’ ಎನ್ನುವ ಹಠಕ್ಕೆ ಅರ್ಥವಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ರಸ್ತೆಯ ಮಾರ್ಗವಾಗಿ ಹೊರಟಿದ್ದೇವೆ ಎಂದಿಟ್ಟುಕೊಳ್ಳೋಣ. ದಾರಿಯಲ್ಲಿ ಸಿಗುವ ಬಿಡದಿಯಲ್ಲಿ ಇಡ್ಲಿಯನ್ನು ಸವಿದು, ಚೆನ್ನಪಟ್ಟಣದಲ್ಲಿ ಬೊಂಬೆಗಳನ್ನು ಕೊಂಡು, ಮದ್ದೂರಿನಲ್ಲಿ ವಡೆಯನ್ನು ಆಸ್ವಾದಿಸಿ, ಶ್ರೀರಂಗಪಟ್ಟಣದ ಕಾವೇರಿಯಲ್ಲಿ ಮಿಂದು ಖುಶಿಪಡುತ್ತೇವೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತದೆ. ಆದರೂ ಸಮಯದ ಪರಿವೆಯಿಲ್ಲದೇ ಅಲ್ಲೆಲ್ಲೂ ಮೈಮರೆಯುವಂತಿಲ್ಲ, ಅದು ಮೈಸೂರಿನತ್ತ ಹೊರಡುತ್ತಿರಬೇಕು. ಅಥವಾ, ಕೆಲವೊಮ್ಮೆ ರಾಮನಗರದಲ್ಲೋ ಮಂಡ್ಯದಲ್ಲೋ ಅದಾವುದೋ ಹೋರಾಟವೋ ಮೆರವಣಿಗೆಯೋ Trafficಕ್ಕೋ ಅಡ್ಡಬಂದು ನಮ್ಮ ವಾಹನವು ಮುಂದೆ ಸಾಗುವುದೇ ಕಷ್ಟವಾಗಬಹುದು. ಮಧ್ಯದಲ್ಲಿ ಎಲ್ಲೂ ಏನೂ ನೋಡಲಾಗದೆ ಆಸ್ವಾದಿಸಲಾಗದೆ, ಪ್ರಯಾಸದಿಂದ ಹೇಗೋ ತಡವಾಗಿ ಮೈಸೂರು ತಲುಪಬೇಕಾಗಬಹುದು. ನಮ್ಮ Plan ಎಲ್ಲ ಏರುಪೇರಾಗಬಹುದು! ಒಟ್ಟಿನಲ್ಲಿ, ದಾರಿಯಲ್ಲಿ ನಮಗಾಗುವ ಅನುಭವಗಳು ಅನುಕೂಲವಾಗಿರಲಿ, ಪ್ರತಿಕೂಲವಾಗಿರಲಿ, ಮೈಸೂರು ತಲುಪುವ ತನಕ ಸಾಗುತ್ತಿರುವುದು ಅನಿವಾರ್ಯ. ಅಂತೆಯೇ, ಜೀವನದ ಹಾದಿಯಲ್ಲಿ ಶುಭವೇ ಬರಲಿ, ಅಶುಭವೇ ಬರಲಿ, ಅದನ್ನೆಲ್ಲ ಅಲ್ಲಿಗಲ್ಲಿಗೇ ಬಿಟ್ಟು, ಆತ್ಮಶಕ್ತಿಯನ್ನು ತೊಟ್ಟು, ಲಕ್ಷ್ಯಸಾಧನೆಗೆ ಮನಗೊಟ್ಟು ಮುಂದುವರೆಯುತ್ತಿರಬೇಕಾಗುತ್ತದೆ. ಶ್ರೀಕೃಷ್ಣನ ಈ ಮಹೋನ್ನತ ಸಂದೇಶವು ಇಂದಿನ ಯುಗದ ಬದುಕಿಗಂತೂ ಅದೆಷ್ಟು ಪ್ರಸ್ತುತ! ಅಲ್ಲವೆ?

ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply