ಬದುಕಿಗೆ ಭಗವದ್ಗೀತೆ – ಸಮಚಿತ್ತದಿಂದ ಯುದ್ಧಮಾಡು, ಪಾಪವು ಅಂಟದು !

ಬದುಕಿಗೆಭಗವದ್ಗೀತೆ – ಸಮಚಿತ್ತದಿಂದಯುದ್ಧಮಾಡು, ಪಾಪವುಅಂಟದು !

ಅನುಷ್ಠಾನಕ್ಕೆ ಬಾರದ ತತ್ವವು ನಿಪ್ರಯೋಜಕ. ಹಾಗಾಗಿ ನಿತ್ಯಜೀವನದಲ್ಲಿ ತತ್ವಾಭಿಮುಖ-ಪ್ರಜ್ಞೆಯನ್ನು ಯಾವ ಗುಣನಡತೆಗಳ ಮೂಲಕ ಸಾಧಿಸಬೇಕೆನ್ನುವುದನ್ನು ಕೃಷ್ಣನು ಹೇಳಲಾರಂಭಿಸಿದ್ದಾನೆ-
ಸುಖದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ I
ತತೋಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ II
ಸುಖವಾಗಲಿ, ದುಃಖವಾಗಲಿ, ಲಾಭವಾಗಲಿ, ನಷ್ಟವಾಗಲಿ ಸಮಭಾವವನ್ನು ತಾಳಿ, ಯುದ್ಧಕ್ಕಾಗಿ (ಕರ್ತವ್ಯ ನಿರ್ವಹಣೆಗಾಗಿ) ಯುದ್ಧ ಮಾಡು. ಆಗ ನಿನಗೆ ಪಾಪ ಅಂಟಿಕೊಳ್ಳುವುದಿಲ್ಲ.
’ಸುಖದುಃಖಗಳಲ್ಲಿ ಸಮವಾಗಿರು’ ಎನ್ನುವುದನ್ನು ಮೊಟ್ಟಮೊದಲೇ ಹೇಳಿದ್ದನ್ನು ನೋಡಿದ್ದೇವೆ. ಕೃಷ್ಣನು ಮುಂದುರೆಸುತ್ತಾನೆ- ‘ಲಾಭಾಲಾಭಗಳಲ್ಲೂ ಜಯಾಜಯಗಳಲ್ಲೂ ಸಮನಾಗಿರು’ ಎಂದು.  ಜೀವನದಲ್ಲಿ ಈ ಲಾಭ-ಅಲಾಭ, ಜಯ-ಅಪಜಯಾದಿ ದ್ವಂದ್ವಗಳು ಅನಿವಾರ್ಯ. ಈ ಸಂದರ್ಭಗಳು ಬಂದಾಗ ನಮ್ಮೊಳಗಿನ ಅಸಂಸ್ಕೃತ ಅಹಂ-ಮಮಭಾವಗಳು ಭುಗಿಲೆದ್ದು ಸುಖದುಃಖಗಳನ್ನು ಪ್ರಚೋದಿಸುತ್ತವೆ. ಹೀಗೆ ಸುಖದುಃಖಗಳ ಹಿಗ್ಗು-ಕುಗ್ಗುವಿಕೆಗೆ ವಶರಾದಾಗ ನಮ್ಮ ಅಂತರಂಗವು ಪ್ರಕ್ಷುಬ್ಧವಾಗುವುದು ಸಹಜವೇ! ಹಾಗಾಗಿಯೇ ಸುಖದುಃಖಗಳಿಗೆ ಎಡೆಮಾಡಿಕೊಡದೆ ಸಮಭಾವವನ್ನು ಬೆಳೆಸಿಕೊಳ್ಳುವಂತೆ ಕೃಷ್ಣನು ಮೊದಲೇ ಹೇಳುತ್ತಿದ್ದಾನೆ.
‘ಇಂತಹ ಸಮಚಿತ್ತತೆ ಆಧ್ಯಾತ್ಮಿಕ ಸಾಧಕರಿಗೇ ಸರಿ. ಪ್ರಾಪಂಚಿಕ-ವ್ಯವಹಾರಗಳಲ್ಲಿ ತೊಡಗಿರುವ ನಮ್ಮಂತಹವರಿಗಲ್ಲ’ ಎನ್ನುವಿರೋ? ಖಂಡಿತ ಅಲ್ಲ! ಜೀವನವನ್ನು ಸ್ಥಿರ-ಶಾಂತ-ಚಿತ್ತದಿಂದ ಎದುರಿಸುವುದನ್ನು ಕಲಿತರೆ ಮಾತ್ರ ವ್ಯವಹಾರಗಳಲ್ಲಿಯು ಏನನ್ನಾದರೂ ಸಾಧಿಸಲು ಸಾಧ್ಯ.
ಯುದ್ಧಕ್ಕೆ ನಿಂತ ಅರ್ಜುನನಿಗೆ ಕೃಷ್ಣನು “ದ್ವಂದ್ವಗಳ ವಿಷಯದಲ್ಲಿ ಸಮಭಾವದಿಂದಿರು” ಎಂದು ಹೇಳುತ್ತಿರುವುದು ಅತ್ಯಂತ ಮಾರ್ಮಿಕವಾಗಿದೆ. ಯುದ್ಧವೆಂದ ಮೇಲೆ ಅದರ ಪ್ರಕ್ರಿಯೆಯಲ್ಲೂ ಪರಿಣಾಮದಲ್ಲೂ ಕಷ್ಟ-ನಷ್ಟಗಳು, ಸಾವು-ನೋವುಗಳು, ಸೋಲು-ಗೆಲುವುಗಳು ಇದ್ದೇ ಇರುತ್ತವೆ. ಅದನ್ನು ಎದುರಿಸುವ ಗಟ್ಟಿತನ ದೇಹದಲ್ಲಷ್ಟೇ ಅಲ್ಲ, ಮನಸ್ಸಿನಲ್ಲೂ ಇರುವುದು ಅತ್ಯಗತ್ಯ. ಮನಸ್ಸು ಗಟ್ಟಿಯಾದರೆ ಮಾತ್ರ ದೇಹದ ಗಟ್ಟಿತನ ಕೆಲಸಕ್ಕೆ ಒದಗುವುದು. ನಾವೂ ಜೀವನವೆಂಬ ಸಂಗ್ರಾಮದಲ್ಲಿ ಹೋರಾಡಬೇಕಾಗಿದೆ. ಲಾಭಾಲಾಭಾದಿ ದ್ವಂದ್ವಗಳನ್ನೇ ಲೆಕ್ಕ ಹಾಕುತ್ತ ಕೂತರೆ ಏನು ಸಾಧಿಸಿದಂತಾದೀತು?ನಮ್ಮ ದೇಹ-ಮನ-ಬುದ್ಧಿ ಮುಂತಾದ ಪದರಗಳಲ್ಲಿ ಹಲವಾರು ಜ್ಞಾನ-ಪ್ರತಿಭಾ-ವಿಶೇಷಗಳು ಅಡಗಿರುತ್ತವೆ. ಅವುಗಳನ್ನು ಅಭಿವ್ಯಂಜಿಸುವುದರಲ್ಲಿ ಜೀವನದ ಸ್ವಾರಸ್ಯವಿದೆ. ಆದರೆ ಸುಖದುಃಖಗಳ ಕುದಿತದಲ್ಲಿ ಬೇಯುತ್ತಿರುವ ನಮಗೆ ಅದರ ಕಡೆಗೆ ಗಮನಹರಿಸಲು ವ್ಯವಧಾನವಾದರೂ ಎಲ್ಲಿ?! ಸುಖಕ್ಕೆ ಕಾರಣವಾದ ವ್ಯಕ್ತಿ-ವಿಷಯಗಳನ್ನು ಶಾಶ್ವತವಾಗಿ ಅಪ್ಪಿ ಹಿಡಿಯಲು ಹೋಗುತ್ತೇವೆ. ದುಃಖಕ್ಕೆ ಕಾರಣವೆನಿಸುವ ವ್ಯಕ್ತಿ-ವಿಷಯಗಳನ್ನು ದ್ವೇಷಿಸುತ್ತ ಸಮಯ-ಭಾವಗಳನ್ನು ನಷ್ಟಮಾಡಿಕೊಳ್ಳುತ್ತೇವೆ. ಹೀಗೆ ಲಾಭಾಲಾಭಾದಿ ದ್ವಂದ್ವಗಳನ್ನೂ ತತ್ಸಂಬಂಧಿತ ಸುಖದುಃಖಗಳನ್ನೂ ಸಮಚಿತ್ತದಿಂದ ಅಂಗೀಕರಿಸಲಾರದ ಅಂತರಂಗ ಕೇವಲ ಆತಂಕ-ಪರಿತಾಪಗಳ ಮಡುವಾಗುತ್ತದೆ.
ಸಮಚಿತ್ತತೆಯ ಶಕ್ತಿಯೇ ಬೇರೆ. ಅದನ್ನು ಸಾಧಿಸಿದ ವ್ಯಕ್ತಿಯು ಎಂತಹ ಘೋರ ಪರಿಸ್ಥಿತಿಯನ್ನಾದರೂ ಎದೆಗುಂದದೆ ಎದುರಿಸುವ ಧೀರನಾಗಬಲ್ಲ, ಅವನಿಗೆ ಸೋಲು ನೋವು ನಿರಾಶೇಗಳ ಬಗ್ಗೆ ಅಂಜಿಕೆಯೇ ಉಳಿಯದು! Bob Wheelings ಎನ್ನುವ ಅಮೇರಿಕದ ಸೈನಿಕನೊಬ್ಬನು ಒಂದಾನೊಂದು ಭೂಸ್ಫೋಟಕಕ್ಕೆ ಸಿಲುಕಿ, ತನ್ನ ಎರಡು ಕಾಲುಗಳನ್ನೂ ಕಳೆದುಕೊಂಡಿದ್ದ. ಆದರೆ ಆತ ಖಿನ್ನನಾಗಿ ಕೂಡಲಿಲ್ಲ. ತೊಡೆಗಳನ್ನೂ ಹಸ್ತಗಳನ್ನೂ ಬಳಸಿಯೇ ಹಲವಾರು Para-Olympics ಕ್ರೀಡೆಗಳಲ್ಲಿ ವಿಜೇತನಾಗುತ್ತಲೇ ಮುಂದುವರೆದ! ಅಷ್ಟೇ ಅಲ್ಲ, ತನ್ನ ಎರಡು ಹಸ್ತಗಳ ಮೇಲೆ ನಡೆಯುತ್ತ ಇಡೀ ಅಮೇರಿಕಾ ದೇಶವನ್ನೇ ಎರಡು ಬಾರಿ ಪರಿಕ್ರಮಣ ಮಾಡಿದ ಅದ್ಭುತ ಸಾಧಕನಾದ! ಹೀಗಿರುತ್ತವೆ ನೋಡಿ- ನೋವುನಲಿವುಗಳನ್ನು ನುಂಗಿ ಮೇಲೇಳಬಲ್ಲ ವ್ಯಕ್ತಿಯ ಛಲಬಲಗಳು! ಸಂದರ್ಶನವೊಂದರಲ್ಲಿ Bob ಹೇಳಿದ ಮಾತು- “The bomb destroyed my legs not my confidence!” ಇದಲ್ಲವೇ ಜೀವನಕ್ಕೆ ಬೇಕಾದ ಯಶಸ್ಸೂತ್ರ?! ಕಳೆದುಕೊಂಡದ್ದರ ಚಿಂತೆಯು ನಮ್ಮ ವರ್ತಮಾನದ ಸಾಧನೆಯನ್ನು ಹೊಸಕಬಾರದೆಂದರೆ ಸಮಚಿತ್ತವನ್ನು ಬೆಳೆಸಿಕೊಳ್ಳುವುದೊಂದೇ ದಾರಿ!
“ಸಮಚಿತ್ತವನ್ನುತಾಳಿ ಯುದ್ಧಮಾಡು, ನಿನಗೆ ಪಾಪ ತಟ್ಟುವುದಿಲ್ಲ” ಎನ್ನುತ್ತಾನೆ ಕೃಷ್ಣ. ಮಾಡುವ ಕರ್ಮವು ತಾನೇ ಸ್ವತಃ ‘ಪಾಪ’ವೋ ‘ಪುಣ್ಯ’ವೋ ಆಗಿರುವುದಿಲ್ಲ. ಆದರೆ ಮಾಡುವ ವ್ಯಕ್ತಿಯ ಸ್ವಭಾವ-ಉದ್ದೇಶಗಳು ಅದನ್ನು ಪಾಪವನ್ನಾಗಿಯೋ ಪುಣ್ಯವನ್ನಾಗಿಯೋ ಮಾಡುತ್ತವೆ. ಅನ್ಯಾಯವನ್ನು ದಮನಮಾಡುವ ಸಲುವಾಗಿ ಆರಕ್ಷಕನು ದುಷ್ಟರನ್ನು ಬಂಧಿಸಿ, ಶಿಕ್ಷಿಸಿದರೆ ಅದು ಪಾಪವಾಗುವುದಿಲ್ಲ. ಆದರೆ ವೈಯಕ್ತಿಕ ದ್ವೇಷ. ಸ್ವಾರ್ಥಗಳ ನಿಮಿತ್ತವಾಗಿ ಯಾರನ್ನಾದರೂ ಹಾಗೆ ಮಾಡಿದರೆ ಅದು ಪಾಪವಾಗುತ್ತದೆ. ನೋಯಿಸುವ ಸಲುವಾಗಿಯೇ ಯಾರನ್ನಾದರೂ ಚೂರಿಯಿಂದ ಇರಿದರೆ ‘ಪಾಪ’, ಶಸ್ತ್ರಚಿಕಿತ್ಸೆ ಮಾಡುವಾಗ ಚೂರಿಯಿಂದ ವೈದ್ಯನು ಕತ್ತರಿಸುವುದು ‘ಪಾಪ’ ಎನಿಸುವುದಿಲ್ಲ,
ದುರ್ಯೋಧನಾದಿಗಳ ಉದ್ದೇಶದಲ್ಲಿ ಸ್ವಾರ್ಥ-ದ್ವೇಷ-ಲೋಭಗಳೆ ತುಂಬಿವೆ. ಹಾಗಾಗಿ ಅವರು ಯುದ್ಧವನ್ನು ಕೆರಳಿಸಿದ್ದು ಪಾಪ. ಆದರೆ ಅನ್ಯಾಯಕ್ಕೆ ಪ್ರತಿಭಟನೆಯಾಗಿ, ಧರ್ಮವ್ಯವಸ್ಥೆಯ ರಕ್ಷಣೆಗಾಗಿ ಹೋರಾಡುತ್ತಿರುವ ಪಾಂಡವರು ಯುದ್ಧಕ್ಕೆ ನಿಂತದ್ದು ‘ಪಾಪ’ವಲ್ಲ. ಇಲ್ಲಿ ಇಬ್ಬರದು ಬಾಹ್ಯಕ್ರಿಯೆ ಒಂದೆ- ’ಯುದ್ಧ ಮಾಡುವುದು’. ಆದರೆ ಉದ್ದೇಶಗಳೂ ಬೇರೆಬೇರೆ. ಕರ್ತವ್ಯಕ್ಕಾಗಿ, ಧರ್ಮರಕ್ಷಣೆಗಾಗಿ, ನಿರ್ಮಲ ನಿಶ್ಚಲ ಮನದಿಂದ ಮಾಡುವ ಕೆಲಸವು ಅದಾವುದೇ ಆಗಿರಲಿ, ಭಯಂಕರ ಯುದ್ಧವೇ ಆಗಿರಲಿ, ಅದರಿಂದ ಪಾಪದ ಲೇಪವುಂಟಾಗದು. ಹಾಗಾಗಿ “ಸಮಚಿತ್ತನಾಗಿದ್ದುಕೊಂಡು ಕರ್ತವ್ಯವನ್ನು ಮಾಡು, ನಿನಗೆ ಪಾಪವು ತಾಗದು” ಎಂದು ಕೃಷ್ಣನು ತಿಳಿಹೇಳುತ್ತಿದ್ದಾನೆ.

ಆರತೀ ವಿ ಬಿ
ಕೃಪೆ : ವಿಜಯವಾಣಿ

Leave a Reply