ಬದುಕಿಗೆ ಭಗವದ್ಗೀತೆ – ಸಿದ್ಧಿ-ಅಸಿದ್ಧಿಗಳಲ್ಲಿ ಸಮನಾಗಿರು

ಬದುಕಿಗೆ ಭಗವದ್ಗೀತೆ – ಸಿದ್ಧಿ-ಅಸಿದ್ಧಿಗಳಲ್ಲಿ ಸಮನಾಗಿರು

‘ಯೋಗದಲ್ಲಿ ಪ್ರಜ್ಞೆಯನ್ನು ಕೇಂದ್ರೀಕರಿಸಿ, ಫಲಗಳಿಗೆ ಸಂಬಂಧಗಳಿಗೆ ಅಂಟಿಕೊಳ್ಳದೆ ಕರ್ಮವನ್ನು ಮಾಡು’ ಎಂದು ಕೃಷ್ಣನು ಕರ್ಮಕೌಶಲದ ರಹಸ್ಯವನ್ನು ಹೇಳುತ್ತಿದ್ದ. ಕರ್ಮದ ಹಾದಿಯಲ್ಲಿ ಬರುವ ವ್ಯಕ್ತಿ-ವಸ್ತು-ಲಾಭಾಲಾಭಗಳ ಬಗ್ಗೆ ಬೆಳೆಯುವ ಮಮಕಾರ-ವ್ಯಾಮೋಹಗಳು ನಮ್ಮನ್ನು ತಪ್ಪು ನಿರ್ಣಯಗಳಿಗೆ ಎಳೆಯುತ್ತವೆ. ಪರಿಣಾಮವನ್ನೂ ನೆಮ್ಮದಿಯನ್ನೂ ಕೆಡಿಸುತ್ತದೆ! ‘ಇವರು ಬೇಕಾದವರು’, ‘ಇವರು ಬೇಡದವರು’, ‘ಎಷ್ಟೇ ತಪ್ಪಾಗಲಿ, ಇವರನ್ನು ಹೇಗೆ ಬಿಟ್ಟುಕೊಡಲಾದೀತು?’, ‘ಅವರನ್ನು ಸರ್ವಥಾ ಸಹಿಸಬಾರದು’ ಎಂಬ ಅಭಿಪ್ರಾಯಗಳನ್ನು ಹುಟ್ಟಿಸಿ, ಸಂಸಾರದಲ್ಲೂ ನೆರೆಕೆರೆಯಲ್ಲೂ ಉದ್ಯೋಗಕ್ಷೇತ್ರದಲ್ಲೂ ಸಂಘಸಂಸ್ಥೆಗಳಲ್ಲೂ ಭೇದಭಾವಗಳ ಬಿರುಕನ್ನು ಮೂಡಿಸುತ್ತವೆ. ನನ್ನ ಮಕ್ಕಳು, ನಮ್ಮ ನೆಂಟರು, ನಮ್ಮ ಜಾತಿಯವರು ಎಂಬ ದುರಭಿಮಾನವನ್ನು ಮೂಡಿಸಿ, ಎಲ್ಲ ನಿರ್ಣಯಗಳೂ ಅದಕ್ಕನುಗುಣವಾಗಿ ಸಾಗುವಂತೆ ನಿಯಂತ್ರಿಸಿಬಿಡುತ್ತದೆ!
ಭಯಂಕರ ಆತಂಕವಾದಿಯನ್ನೂ, ದೇಶದ್ರೋಹಿಯನ್ನೂ ’ತನ್ನ ಮತದವನು’ ಎಂಬ ವ್ಯಾಮೋಹದಿಂದ ಕುರುಡಾಗಿ ಸಮರ್ಥಿಸುವಂತೆ ತಲೆಕೆಡಿಸುತ್ತದೆ! ಒಂದಿಷ್ಟು ಮತಗಳಿಗಾಗಿ ಅಂತಹ ಆತಂಕವಾದಿಗಳನ್ನೂ ಮಡಿಲಲ್ಲಿ ಲಾಲಿಸಿ ಪಾಲಿಸುವಂತೆ ನಾಯಕರನ್ನೇ ಕಂಗೆಡಿಸಿ ಪಾಪಕ್ಕೆಳೆಯುತ್ತದೆ! ನ್ಯಾಯವನ್ನೂ ಪ್ರಜಾಹಿತವನ್ನೂ ಮರ್ಯಾದೆಯನ್ನೂ ಗಾಳಿಗೆ ತೂರಿ, ತನ್ನ ಮಕ್ಕಳಂತೆಯೇ ಇದ್ದ ಸಜ್ಜನರಾದ ಪಾಂಡವರನ್ನು ನರಳಲು ಬಿಟ್ಟುಕೊಟ್ಟ ಧೃತರಾಷ್ಟ್ರನನ್ನು ಹಾಗೆ ’ಕುರುಡ’ನನ್ನಾಗಿಸಿದ್ದು, ಪುತ್ರವ್ಯಾಮೋಹವೇ ಅಲ್ಲವೆ? ದೊಡ್ಡಪಕ್ಷ-ಸಂಸ್ಥೆ-ಉದ್ಯಮಗಳನ್ನು ಪರಿಶ್ರಮದಿಂದ ಕಟ್ಟಿ ಉನ್ನತಮಟ್ಟಕ್ಕೆ ಬೆಳೆಸಿದ ಯಜಮಾನರು, ಅವರಿಗಾಗಿ ವರ್ಷಗಟ್ಟಲೆ ನಿಯತ್ತಿನಿಂದ ದುಡಿದ ವಿಶ್ವಾಸಾರ್ಹ ಸಹಚರರನ್ನು ಕಡೆಗಣಿಸಿ, ಯಾವ ಅನುಭವವೂ ಕೌಶಲವೂ ಇಲ್ಲದ ‘ತಮ್ಮ ಮಕ್ಕಳಿಗೆ’ ವಾರಸುದಾರರ ಪಟ್ಟಕಟ್ಟುವುದು ಕಾಣಬರುತ್ತದೆ! ಹಾಗೆ ಮಾಡಿದ ಮೇಲೆ ನಿಶ್ಚಿಂತೆಯೇ? ಊಹೂಂ! ‘ಅಯ್ಯೋ ನನ್ನ ಮಗನಿಗೆ ಅನುಭವ ಸಾಲದು, ವ್ಯವಹಾರ ಜ್ಞಾನವಿಲ್ಲ, ಮೋಸ ಹೋದಾನು, ಪೋಲು ಮಾಡಿಯಾನು—‘ಎನ್ನುವ ಆತಂಕವಿದ್ದೇ ಇರುತ್ತದೆ! ಬಿಸಿ-ತುಪ್ಪವನ್ನು ನುಂಗಲಾಗದೆ ಉಗಿಯಲಾಗದೆ ಒದ್ದಾಡುವಂತಾಗುತ್ತದೆ! ಮನದಲ್ಲಿ ‘ಸಂಗ’ ಎದ್ದಾಗ ಹೀಗೆಯೇ! ವ್ಯಾಮೋಹ ಅಡ್ಡಿಬಂದು ಬುದ್ಧಿಯನ್ನು ನಿಯಂತ್ರಿಸಲಾರಂಭಿಸುತ್ತದೆ, ಎಲ್ಲವನ್ನು ಹಾಳುಮಾಡುತ್ತದೆ. ‘ಇಂತಹ ಸಂಗವನ್ನು ಬೆಳೆಯಲು ಅವಕಾಶವೇ ಕೊಡದೆ, ಕರ್ಮದಲ್ಲಿ ತೊಡಗು’ ಎಂದು ನಿರ್ದೇಶಿಸುತ್ತಿದ್ದಾನೆ ಕೃಷ್ಣ!
ಪ್ರಾತಃಸ್ಮರಣೀಯರಾದ Sir M ವಿಶ್ವೇಶ್ವರಯ್ಯನವರು ತಾವು ದಿವಾನರಾಗಿ ನಿಯುಕ್ತರಾದದಿನವೇ, ತಮ್ಮ ಎಲ್ಲ ಬಂಧು ಮಿತ್ರರಿಗೆ ಖಡಾಖಂಡಿತವಾಗಿ ಹೇಳಿಬಿಟ್ಟರಂತೆ “ನೀವು ‘ನನ್ನ’ ಬಂಧು-ಮಿತ್ರರು ಎನ್ನುವ ಹಕ್ಕಿನಿಂದ ನನ್ನಿಂದ ಯಾವ ವಿಶೇಷ ಸರ್ಕಾರೀ ಶಿಫಾರಸು-ಸವಲತ್ತುಗಳನ್ನು ನಿರೀಕ್ಷಿಸುವಂತಿಲ್ಲ!” ಎಂದು! ಅಷ್ಟು ನಿರ್ಮೋಹವಾಗಿದ್ದ ಕಾರಣದಿಂದಾಗಿಯೇ ಅಲ್ಲವೆ, ವಿಶ್ವೇಶ್ವರಯ್ಯನವರು ಮಹತ್ತರವಾದ ಲೋಕೋಪಯೋಗಿ ಯೋಜನೆಗಳನ್ನು ಅಭೂತಪೂರ್ವ ಯಶಸ್ಸಿನಿಂದ ಸಾಧಿಸಲು ಸಾಧ್ಯವಾಗಿದ್ದು?!
ಕೃಷ್ಣನು ಮುಂದುವರೆಸುತ್ತಾನೆ- ಸಿದ್ಧ್ಯಸಿದ್ಧ್ಯೋಃಸಮೋಭೂತ್ವಾ (ಕರ್ಮಾಣಿಕುರು)
ಕರ್ಮದಮಾರ್ಗದಲ್ಲಿ ಅನಿವಾರ್ಯವಾಗಿ ಬಂದು ಹೋಗುವ ಸಿದ್ಧಿ ಹಾಗೂ ಅಸಿದ್ಧಿಗಳನ್ನು (ಗೆಲುವು ಸೋಲುಗಳನ್ನು). ಮೊದಲೇ ನಿರೀಕ್ಷಿಸಿಯೇ ಕಾರ್ಯಕ್ಷೇತ್ರಕ್ಕೆ ಪದಾರ್ಪಣೆ ಮಾಡುವುದು ಜಾಣತನ. ಪೂರ್ವತಯ್ಯಾರಿ ಮನಲ್ಲಿದ್ದರೆ ಅಂತರಂಗವು ಗಲಿಬಿಲಿಗೊಳ್ಳದು. ಜೀವನವು ಕೇವಲ ಓಟವಲ್ಲ, ಒಂದು Obstacle Race ಎನ್ನುವುದನ್ನು ಅರಿತಿದ್ದರೆ, Obstacle ಬರುತ್ತಲೇ, ಅದನ್ನು ಎದುರಿಸಿ ಹಾರಿಹೋಗುವ ಧೈರ್ಯ, ಕೌಶಲ, ಲೆಕ್ಕಾಚಾರಗಳು ಬುದ್ಧಿಯಲ್ಲಿ ತಾವಾಗಿಯೇ ಉದ್ಭವಿಸುತ್ತವೆ!ಕರ್ಮದಹಾದಿಯಲ್ಲಿ ಅದೆಷ್ಟೋ ಸಣ್ಣಪುಟ್ಟ ಸಿದ್ಧಿಗಳನ್ನು ಅನುಭೋಗಿಸುತ್ತ ನಮ್ಮಲ್ಲಿ ಅರಿವು, ಅನುಭವ ಹಾಗೂ ಆತ್ಮವಿಶ್ವಾಸ ಮೂಡುತ್ತದೆ. ಅಂತೆಯೇ ಅದೆಷ್ಟೋ ಅಸಿದ್ಧಿಗಳನ್ನೂ ಉಂಡು, ನೊಂದು, ಸರಿತಪ್ಪುಗಳ ಪಾಠಕಲಿತು, ತಿದ್ದಿಕೊಳ್ಳುತ್ತ ಸಾಗುತ್ತೇವೆ. ಇವುಗಳು ನಿಜಕ್ಕೂ ಸೋಲುಗಳೇ ಅಲ್ಲ, ಮಾರ್ಗದಲ್ಲಿನ ಘಟ್ಟಗಳು ಅಷ್ಟೇ!ಗಂಗಾನದಿಯ ಮೂಲವೆನಿಸುವ ‘ಗೋಮುಖ’ದ ದರ್ಶನಕ್ಕಾಗಿ ಸುಮಾರು ೨೦ಕಿಮಿಗಳ ಪರ್ವತಾರೋಹಣ ಮಾಡುವಾಗ ಆಗುವ ಅನುಭವ ಇಲ್ಲಿ ಸ್ಮರಣೀಯ-
ನಾವೇರುವ ಪ್ರಾರಂಭದ ಶೃಂಗವಂತೂ ತುಂಬ ಎತ್ತರದ್ದು. ಅದನ್ನು ಕಂಡೇ ಒಂದಷ್ಟು ಜನ ಹೆದರಿ ವಾಪಾಸ್ಸಾಗುವುದುಂಟು! ಆದರೆ ಅದನ್ನು ಏರಿಯಾದ ಮೇಲೆ ದಾರಿ ಸಾಕಷ್ಟು ಸುಗಮವೆನಿಸಿಬಿಡುತ್ತದೆ!  ಬೆಟ್ಟಗಳ ಮೇಲೆಯೇ ಸುಮತಟ್ಟಾದ ಸುದೀರ್ಘಮಾರ್ಗ. ಒಂದಷ್ಟು ಸಾಗಿದ ಮೇಲೆ ದಿಗಂತದಲ್ಲಿ ಅನತಿದೂರವೋ ಎಂಬಂತೆ ಕಣ್ಣೆದುರಿಗೇ ಗೋಮುಖವು ಕಂಗೊಳಿಸುತ್ತದೆ!ಆದರೂ ಅದನ್ನು ತಲುಪಲು ದಿನವಿಡೀ ನಡೆಯುತ್ತಲೇ ಇರಬೇಕು! ಅಲ್ಲಿಂದ ಮುಂದೆ ಎಲ್ಲೆಲ್ಲೋ ಹಿಂದಕ್ಕೆ ಮುಂದಕ್ಕೆ ಬೆಟ್ಟದ ಗೋಡೆಗಳನ್ನು ಸುತ್ತಿಬಳಸಬೇಕು. ಎಲ್ಲೆಲ್ಲೋ ಇಳಿಯಬೇಕು, ಹತ್ತಬೇಕು. ಚಳಿಗಾಳಿಂದಲೂ ಏದುಸಿರಿನಿಂದಲೂ ಕಾಲುನೋವಿನಿಂದಲೂ ಆಯಾಸದಿಂದಲೂ ಬಳಲಬೇಕು. “ಅಯ್ಯೋ ಇನ್ನೆಷ್ಟು ದೂರವಪ್ಪ?!” ಎಂದೆನಿಸುತ್ತದೆ! “ಸಾಕಾಯಿತಪ್ಪ” ಎಂದು ಅಲ್ಲಲ್ಲಿ ಉಸ್ಸೆಂದು ಕುಳಿತುಬಿಡುತ್ತೇವೆ. ಇವೆಲ್ಲ ನಮ್ಮ ಸೋಲುಗಳಲ್ಲ, ಅಸಿದ್ಧಿಗಳಲ್ಲ, ಇವೆಲ್ಲ ಗೋಮುಖದ ಪರ್ವತಾರೋಹಣದ ಸಹಜ ಅನುಭವಗಳು, ಅಷ್ಟೆ! ಸತತ ಪರ್ವತಾರೋಹಣ ಮಾಡುವ ನಿಪುಣರ ಪಾಲಿಗೆ ಇದೆಲ್ಲ ಯಾವ ಲೆಕ್ಕವೂ ಇಲ್ಲ! ಏಕೆಂದರೆ ಅವರ ದೇಹಮನಬುದ್ಧಿಗಳು ಅದಕ್ಕೆಲ್ಲ ಒಗ್ಗಿಬಿಟ್ಟಿರುತ್ತವೆ. ಜೀವನದಲ್ಲೂ ಹಾಗೆ ನಾವು ಒಗ್ಗಿಕೊಂಡಷ್ಟೂ ಈ ಸಿದ್ಧ್ಯ ಸಿದ್ಧಿಗಳು ನಮಗೆ ಸಹ್ಯವೆನಿಸುತ್ತವೆ. ಅಂತರಂಗವು ಶಾಂತವೂ ಶಕ್ತವೂ ಆಗಿ ಎಲ್ಲವನ್ನೂ ಎದುರಿಸಬಲ್ಲದಾಗುತ್ತದೆ.
ಡಾ.ಆರತೀ ವಿ ಬಿ

ಕೃಪೆ : ವಿಜಯವಾಣಿ

Leave a Reply