ಬದುಕಿಗೆ ಭಗವದ್ಗೀತೆ – ಸುಖದುಃಖಗಳಲ್ಲಿ ಸಮನಾಗಿರು

ಬದುಕಿಗೆ ಭಗವದ್ಗೀತೆ – ಸುಖದುಃಖಗಳಲ್ಲಿ ಸಮನಾಗಿರು

ಶ್ರವಣಮಾತ್ರದಿಂದ ತತ್ವವು ಅನುಷ್ಠಾನದಲ್ಲಿ ಸಿದ್ಧಿಸದು. ಕೃಷ್ಣನಿಗದು ಗೊತ್ತು. ಹಾಗಾಗಿಯೇ ತತ್ವವಿಚಾರವನ್ನು ಹೇಳಿ ಅಷ್ಟಕ್ಕೇ ನಿಲ್ಲಿಸದೆ,  ಅದನ್ನು ಯಾವ ಗುಣ-ವಿಧಾನಗಳ ಮೂಲಕ ಜೀವನದಲ್ಲಿ ಅಳವಡಿಸಬೇಕೆಂಬುದನ್ನೂ ಹೇಳುತ್ತ ಸಾಗುತ್ತಾನೆ. ಭಗವದ್ಗೀತೆಯಲ್ಲೇ  ಈ ಭಾಗ ಅತ್ಯಂತ ಅನುಷ್ಠಾನ ಯೋಗ್ಯ. ಈ ಅಧ್ಯಾಯವನ್ನೇ ‘ಗೀತೆಯ ಸಾರ ಭಾಗ’ ಎಂದೂ, ಇದರ ಬಳಿಕ ಬರುವ ಎಲ್ಲ ಅಧ್ಯಾಯಗಳು, ‘ಇದಕ್ಕೆ ಪೂರಕವಾದ ಚರ್ಚೆಗಳು’ ಎಂಬ ಅಭಿಪ್ರಾಯವೇ ಇದೆ. ಜೀವನ ಸಂಗ್ರಾಮದಲ್ಲಿನ ಏರಿಳಿತಗಳಲ್ಲಿ ಬಿದ್ದೆದ್ದು ಈಜಬೇಕಾದ ಮನುಷ್ಯಲೋಕಕ್ಕೆ ಅತ್ಯಂತ ಪ್ರಸ್ತುತವೆನಿಸುವ ಅಮೂಲ್ಯವಾದ ಸಂದೇಶಗಳು ಇಲ್ಲಿವೆ. ಎತ್ತರದ ತತ್ವವನ್ನು ನಿತ್ಯಜೀವನದಲ್ಲಿ ಅನ್ವಯಿಸುವ ವಿಧಾನವನ್ನು ಭಗವಂತನು ’ಬಾಲಾನಾಂಸುಖಬೋಧಾಯ’ ವಿವರಿಸುತ್ತ ಹೋಗುತ್ತಾನೆ-
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ I
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ II
ಸುಖವಾಗಲಿ, ದುಃಖವಾಗಲಿ, ಲಾಭವಾಗಲಿ, ನಷ್ಟವಾಗಲಿ ಸಮಭಾವವನ್ನು ತಾಳಿ, ಯುದ್ಧಕ್ಕಾಗಿ (ಕರ್ತವ್ಯ ನಿರ್ವಹಣೆಗಾಗಿ) ಯುದ್ಧಮಾಡು. ಆಗ ನಿನಗೆ ಪಾಪ ಅಂಟಿಕೊಳ್ಳುವುದಿಲ್ಲ. 
‘ಸುಖ-ದುಃಖಗಳಲ್ಲಿ ಸಮವಾಗಿರುವುದು’- ಅತ್ಯಂತ ಪ್ರಾಥಮಿಕವೂ ಪ್ರಧಾನವೂ ಆದ ಈ ಸಾಧನೆಯೇ ಕಷ್ಟತಮವೂ ಹೌದು! ಮೈಬಗ್ಗಿಸಿ ವ್ರತ-ನೇಮಗಳನ್ನು ಮಾಡಿಬಿಡಬಹುದು. ಜಪ-ಪಾರಾಯಣ-ಪೂಜೆ-ದಾನ-ತೀರ್ಥಾಟನೆಗಳನ್ನೂ ಕಷ್ಟಪಟ್ಟು ಮಾಡಿಬಿಡಬಹುದು. ಆದರೆ “ದುಃಖಗಳನ್ನು ನೆನೆಯದೇ ಇರುವುದು’, ‘ಸುಖಗಳ ಬಗ್ಗೆ ನಿರ್ಲಿಪ್ತರಾಗಿ ಇರುವುದು’- ಊಹೂಂ!ಅದು ಮಾತ್ರ ಸಾಧ್ಯವೇ ಇಲ್ಲವೋ ಎಂಬಷ್ಟು ಕಷ್ಟವೆನಿಸುತ್ತದೆ!
ನಾವು ಹೆಚ್ಚಿನವರು ವ್ರತ-ಪೂಜಾದಿಗಳನ್ನು ಮಾಡುವುದೇ ‘ಸುಖಗಳನ್ನು ಪಡೆಯುವ ಹಾಗೂ ದುಃಖವನ್ನು ನೀಗಿಸಿಕೊಳ್ಳುವ’ ಲೆಕ್ಕಾಚಾರದಲ್ಲಿ! ಆದರೆ ಎಷ್ಟು ಪೂಜಿಸಿದರೂ ಪ್ರಸಾದ ಪಡೆದರೂ, ನಮ್ಮ ’ದುಃಖ ಕುಗ್ಗಿದೆಯೇ?’ ಎನ್ನುವ ಪ್ರಶ್ನೆ ಉಳಿದೇ ಇರುತ್ತದೆ! ಹೊಸ ಸುಖ ಬಂದಾಗ, ಗರ್ವದಲ್ಲಿ ತಪ್ಪೆಸಗಿ ಮತ್ತೆ ಎಡವುವುದು ತಪ್ಪದು! ಇದನ್ನು ಗಮನಿಸಿದಾಗ, ಕೃಷ್ಣನ ಮಾತಿನ ಮಹತ್ವ ಮನವರಿಕೆಯಾಗುತ್ತದೆ.
ಪೂಜೆ-ಜಪ-ತಪಾದಿ ಅನುಷ್ಠಾನಗಳಲ್ಲಿ ಇಳಿಯುವುದಕ್ಕೂ ಮುನ್ನ, ಶಮ-ದಮ-ತಿತಿಕ್ಷಾದಿ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಶಾಸ್ತ್ರಗಳೂ ನಿರ್ದೇಶಿಸುತ್ತವೆ. ಮನುಷ್ಯನ ಬಲಾಬಲಗಳನ್ನು ಚೆನ್ನಾಗಿ ಅರಿತ ಕೃಷ್ಣನೂ ಅದನ್ನೇ ಮೊಟ್ಟಮೊದಲು ಹೇಳುತ್ತಿದ್ದಾನೆ.
ಸುಖದುಃಖಗಳನ್ನು ನಿಭಾಯಿಸಲಾಗದ ನಾವು ಮತ್ತೇನನ್ನು ಮಾಡಿದರೂ ಅದು ಅಪೂರ್ಣವೇ ಸರಿ. ಸಮತ್ವವಿಲ್ಲದ ಜೀವನದಲ್ಲಿ ’ಸಾಧನೆ’ಗಿಂತ ’ಗೋಳಾಟ’ವೇ ಜಾಸ್ತಿ! ಸಮಯ-ದ್ರವ್ಯಗಳ ವ್ಯಯ ಜಾಸ್ತಿ! ಮನಸ್ಸು ಮುದುಡಿ, ಬುದ್ಧಿಯು ಬಾಡಿ, ಉತ್ಸಾಹವು ಕುಸಿದು, ಬಾಳು ಭಾರವೆನಿಸುತ್ತದೆ. ಮಾನಸಿಕ-ಕುಸಿತದ ಸಮಸ್ಯೆಗಳಲ್ಲಿ ತೊಳಲುವ ಬಹುಜನರ ಸಮಸ್ಯೆ ಇದೇ ತಾನೆ!
ಶೀಕೃಷ್ಣನು ‘ಸಮತ್ವ’ವನ್ನು ಮೊಟ್ಟಮೊದಲು ಹೇಳುತ್ತಿರುವುದು ತುಂಬ ಅರ್ಥಪೂರ್ಣ. “ನಮ್ಮಲ್ಲಿಗೆ ಬನ್ನಿರಿ!ಪವಾಡ ಮಾಡಿ ನಿಮ್ಮ ಪಾಪತಾಪಗಳನ್ನು ಪರಿಹರಿಸುತ್ತೇವೆ” ಎಂದು ಜಾಹಿರಾತು ಮಾಡುವ ‘Market-ಗುರುಗಳ’ ಈ ಕಾಲದಲ್ಲಿ, ನೈಜ-ಗುರುವಾದ ಕೃಷ್ಣನ ಸನಾತನ-ಸಂದೇಶವನ್ನು ನೆನೆಸಿಕೊಳ್ಳುವುದು ಸರ್ವಥಾ ಕ್ಷೇಮ!
‘ಹಾಗಾದರೆ ಸುಖದುಃಖಗಳಿಗೆ ಸ್ಪಂದಿಸಲೇಬಾರದೇನು?’ ‘ಸುಖದುಃಖಗಳಿಗೆ ಸ್ಪಂದಿಸದೇ ಇರುವುದು ಸಾಧ್ಯವೇನು?’ ಎಂಬ ಪ್ರಶ್ನೆಗಳು ಏಳುತ್ತವೆ. ಸುಖದುಃಖಗಳಿಗೆ ಸ್ಪಂದಿಸುವುದು ಸಹಜ, ಅನಿವಾರ್ಯ. ಆದರೆ ಅದಕ್ಕೆ Over-react ಅಥವಾ continued reaction ಮಾಡಬಾರದೆನ್ನುವುದು ಪಾಠ. ನಮ್ಮ ಕರ್ತವ್ಯವನ್ನೂ, ಧ್ಯೇಯವನ್ನೂ ಮರೆಸುವಷ್ಟರಮಟ್ಟಿಗೆ ಸುಖದುಃಖಗಳು ನಮ್ಮನ್ನು ಆವರಿಸಿ ದಿಗ್ಗೆಡಿಸಬಾರದು. ಕೊನೆಯಿಲ್ಲದೆ ಕೊರಗುವುದು ಮೂರ್ಖತನ, ಅಂತಹ ಕೊರಗುವಿಕೆಗೆ ‘ಸಹಾನುಭೂತಿ ಸಿಕ್ಕೀತು’ ಎಂಬ ಸುಪ್ತನಿರೀಕ್ಷೆಯಿದ್ದಲ್ಲಿ ಅದು ಮತ್ತಷ್ಟು ಮೂರ್ಖತನ!
ಯೋಗಜೀವನದ ಮಾತಂತಿರಲಿ, ನಮ್ಮ ಪರಿವಾರ, ವೃತ್ತಿ ಹಾಗೂ ಸಾಮಾಜಿಕ ಜೀವನಗಳಲ್ಲೂ ಕನಿಷ್ಠ ಮಟ್ಟದ ಸಮಭಾವ ಇಲ್ಲದಿದ್ದಲ್ಲಿ ಎಡವಟ್ಟಾಗುತ್ತದೆ. ಹೊಗಳುವಿಕೆ, ತೆಗಳುವಿಕೆ, ಸೋಲು, ಗೆಲುವು, ಖುಶಿ, ನಿರಾಶೆ-ಇವು ಸಾಲುಸಾಲಾಗಿ ಬಂದು ಹೋಗುತ್ತವೆ. ಈ ಒಂದೊಂದು ಆಗುಹೋಗುವಿಕೆಗೂ ಅತಿಯಾಗಿ ಹಿಗ್ಗುತ್ತಲೇ ಕುಗ್ಗುತ್ತಲೇ ಇದ್ದರೆ ನಮ್ಮ ಮನಸ್ಸಿಗೆ ಆಯಾಸವಾಗುವುದಿಲ್ಲವೆ! ಮನಸ್ಸಿನ ಆಯಾಸವು ದೇಹದ ಆಯಾಸಕ್ಕಿಂತ ಸಾವಿರ ಪಾಲು ತ್ರಾಸದಾಯಕ! ಅಂತಹ ಆಯಾಸಕ್ಕೆ ಎಡೆಗೊಡುವ ವ್ಯಕ್ತಿಗಳು ಜೀವನದಲ್ಲಿ ಬೇರಾವ ಸಾಧನೆಗೂ, ಗಂಭೀರ ಚಿಂತನೆಗೂ ಬೇಕಾದ ಮನಶ್ಶಕ್ತಿಯನ್ನು, ವ್ಯವಧಾನವನ್ನೂ ಉಳಿಸಿಕೊಳ್ಳಲಾರರು.
ಜೀವನದ ಬೆಲೆ ತಿಳಿದಿರುವ ಜಾಣರು ಸುಖದುಃಖಗಳ ಲೆಕ್ಕಾಚಾರದಲ್ಲಿ ಸಮಯವ್ಯರ್ಥಗೊಳಿಸುವುದಿಲ್ಲ. George Bernardshawರ ಮಾತು ಸ್ಮರಣಯೋಗ್ಯ- “The problem with people is that they have too much time to keep counting their joys and sorrows”
ಚಿಕ್ಕ ವಯಸ್ಸಿನಿಂದಲೇ ನಾವು ಜೀವನದಲ್ಲಿನ ಸುಖದುಃಖಗಳೆಂಬ ಎರಡು ಮುಖಗಳನ್ನು ಗಮನಿಸಿ, ಅರಿತು ಅಂಗೀಕರಿಸುತ್ತ ಬೆಳೆಯುವಂತೆ ಶಿಕ್ಷಕರೂ ಪೋಷಕರೂ ತಮ್ಮ ಎಳೆಯರನ್ನು ಪ್ರೋತ್ಸಾಹಿಸಬೇಕು. ಆಗ ಮಾತ್ರವೇ ಜೀವನ ನಿಜದ(Realistic) ನೆಲೆಯಲ್ಲಿ ಅರಳಲು ಸಾಧ್ಯ. ಆಗ ಮಾತ್ರ ‘ಸಣ್ಣಪುಟ್ಟ ಸೋಲು-ನಿರಾಶೆ-ಅವಮಾನಗಳಿಗೂ ಕೆರೆಗೆ ಬಿದ್ದು ಸಾಯುವ’ ಯುವಜನರ ದೌರ್ಬಲ್ಯ-ದೌರ್ಭ್ಯಾಗ್ಯಗಳಿಗೆ ಕಡಿವಾಣ ಹಾಕುವುದು ಸಾಧ್ಯ.
ಸಮತ್ವವೇ ಜೀವನ ಸಾಫಲ್ಯದ ಮೊಟ್ಟಮೊದಲ ಸೂತ್ರ ಎನ್ನುವುದು ಸಕಲ ಶಾಸ್ತ್ರಗಳ ಮರ್ಮ, ಸರ್ವಪ್ರಾಜ್ಞರ ಅನುಭವಾಮೃತ, ಜಗದ್ಗುರು ಶೀಕೃಷ್ಣನ ಸ್ಪಷ್ಟ ನಿರ್ದೇಶನ.

ಆರತೀ ವಿ ಬಿ
ಕೃಪೆ : ವಿಜಯವಾಣಿ

Leave a Reply