ಬದುಕಿಗೆ ಭಗವದ್ಗೀತೆ – ಹುಟ್ಟೇ ಇಲ್ಲದ ಆತ್ಮ ಸಾಯವುದೂ ಇಲ್ಲ

ಬದುಕಿಗೆ ಭಗವದ್ಗೀತೆ – ಹುಟ್ಟೇ ಇಲ್ಲದ ಆತ್ಮ ಸಾಯವುದೂ ಇಲ್ಲ

ಪ್ರಾಮಾಣಿಕ ಜಿಜ್ಞಾಸುವಾದ ಅರ್ಜುನನಿಗೆ ತತ್ವನಿಶ್ಚಯವನ್ನು ಉಂಟುಮಾಡುವ ಸಲುವಾಗಿ, ’ರಣರಂಗ’ ಎಂಬುದನ್ನೂ ಗಣಿಸದೆ ಕೃಷ್ಣನು ತತ್ವೋಪದೇಶಕ್ಕೆ ಮೊದಲಾದ. ಅವಿನಾಶಿಯೂ, ಅಪ್ರಮೇಯವೂ ಆದ ‘ಸದ್ವಸ್ತು’ವಿನ ನಿತ್ಯತೆಯನ್ನೂ ಹಾಗೂ ಸದಾ ಬದಲಾಗುವ, ನಾಶಹೊಂದುವ ‘ಅಸದ್ವಸ್ತು’ವಿನ ಅನಿಶ್ಚಿತಸ್ವರೂಪವನ್ನು ವಿವರಿಸುತ್ತ ಕೃಷ್ಣನು ಮುಂದುವರೆಸುತ್ತಾನೆ-
“ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಂ I ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ II”
– ಈ (ಆತ್ಮವನ್ನು/ಸದ್ವಸ್ತುವನ್ನು) ‘ಕೊಲ್ಲುವವನು’ ಎಂದೋ ‘ಕೊಲ್ಲಲ್ಪಡುವವ’ನೆಂದೂ ಭ್ರಮಿಸುವ ಜನರೂ “ಏನನ್ನೂ ತಿಳಿದಿಲ್ಲ’! ಏಕೆಂದರೆ ಅದು (ಸದ್ವಸ್ತುವು) ಕೊಲ್ಲುವುದೂ ಇಲ್ಲ, ಸಾಯುವುದೂ ಇಲ್ಲ.
ಅಸದ್ವಸ್ತುವನ್ನೇ ತನ್ನ ನೆಲೆಯಾಗಿಸಿ ಆಲೋಚಿಸುವವರ ಪಾಲಿಗೆ ಉಂಟಾಗುವ ಗೊಂದಲ-ಅಪಾರ್ಥಗಳನ್ನು ಕೃಷ್ಣನು ಇಲ್ಲಿ ಸೂಚಿಸುತ್ತಿದ್ದಾನೆ- ಅಸತ್ತಿನ ವಲಯದ ದೃಷ್ಟಪ್ರಪಂಚದಲ್ಲಿ ಹುಟ್ಟು-ಸಾವುಗಳನ್ನು, ವೃದ್ಧಿ-ಹ್ರಾಸಗಳನ್ನೂ ನೋಡುತ್ತೇವೆ. ಅದನ್ನು ನೋಡುತ್ತ ಹರ್ಷಶೋಕಗಳಿಗೆ ವಶರಾಗಿ, ಏನನ್ನೋ ‘ಪಡೆದೆ’ವೆಂದೋ, ಮತ್ತೇನನ್ನೋ ‘ಕಳೆದುಕೊಂಡೆ’ವೆಂದೋ ಭಾವಿಸಿ ಪ್ರತಿಸ್ಪಂದಿಸುತ್ತೇವೆ. ಏಕೆಂದರೆ ಕಣ್ಣಿಗೆ ಕಾಣುವ ದೇಹ ಹಾಗೂ ವ್ಯವಹಾರದಲ್ಲಿ ಅನುಭವಕ್ಕೆ ಬರುವ ಮನೋ-ಬುದ್ಧಿಗಳನ್ನಷ್ಟೇ ‘ನಿತ್ಯ’ವೆಂದು ಭಾವಿಸುತ್ತೇವೆ. ಈ ದೇಹ-ಮನೋ-ಬುದ್ಧಿಗಳ ಸಂಕೀರ್ಣವು (Mind-intellect-body-complex)ನಾಶವಾಗುತ್ತಿದ್ದರೂ ಅದರೊಳಗಿರುವ ಸದ್ವಸ್ತುವು ಮಾತ್ರ ಏನೂ ಆಗದು. ದೇಹವು ಕ್ರಿಯೆಯ ಮೂಲಕವೂ, ಮನಸ್ಸು ಭಾವನೆಗಳ ಮೂಲಕ ಹಾಗೂ ಬುದ್ಧಿಯು ಆಲೋಚನೆಗಳ ಮೂಲಕ ಪ್ರಪಂಚದ ಕಲಾಪಗಳಲ್ಲಿ ತೊಡಗುವಂತೆ, ಸದ್ವಸ್ತುವು ತೊಡಗುವುದಿಲ್ಲ. ಅದು ಸಾಕ್ಷೀಭಾವದಿಂದ ತನ್ನ ಪಾಡಿಗೆ ಬೆಳಗುತ್ತಿರುತ್ತದೆ. ಅದು ಏನನ್ನೂ ‘ಮಾಡುವುದಿಲ್ಲ’. ಆದರೆ ಅದರ ಇರುವಿಕೆಯಿಂದಲೇ ಚೈತನ್ಯ ಪಡೆವ ದೇಹ-ಮನ-ಬುದ್ಧಿಗಳು ಆ ಎಲ್ಲವನ್ನೂ ಮಾಡುತ್ತವೆ!
ಭೌತಪ್ರಪಂಚದಲ್ಲಿ ಸದ್ವಸ್ತುವಿಗೆ ಹತ್ತಿರವಾದ ಉದಾಹರಣೆ ಎಂದರೆ ‘ಆಕಾಶ’ ಎನ್ನುವುದನ್ನು ಹಿಂದೆ ನೋಡಿದ್ದೇವೆ. ಮನೆಯಂಗಳದ ಮಧ್ಯದಲ್ಲಿ ದೀಪವೊಂದಿದೆ ಎಂದಿಟ್ಟುಕೊಳ್ಳಿ. ಆ ದೀಪದ ಬೆಳಕಿನಲ್ಲೇ ಅಡುಗೆ, ಮನೆಗೆಲಸ, ಎಲ್ಲರ ಒಡನಾಟ, ಪಠನ-ಲೇಖನ ಇತ್ಯಾದಿ ಎಲ್ಲ ಕಲಾಪಗಳು ನಡೆಯುತ್ತವೆ. ಆ ದೀಪದ ಬೆಳಕಲ್ಲಿ ಒಬ್ಬರು ಭಗವದ್ಗೀತೆಯನ್ನು ಓದಬಹುದು, ಮತ್ತೊಬ್ಬರು ಪತ್ತೇದಾರೀ ಪುಸ್ತಕವನ್ನೂ, ಇನ್ನೊಬ್ಬರು ಅಶ್ಲೀಲ ಪತ್ರಿಕೆಯನ್ನೂ ಓದುತ್ತಿರಬಹುದು! ಆದರೆ ದೀಪವು ಈ ಯಾವ ಕ್ರಿಯೆಗಳಿಂದಲಾದರೂ ಪ್ರಭಾವಗೊಳ್ಳುತ್ತದೆಯೇ? ಇಲ್ಲವಲ್ಲ! ದೀಪದ ಬೆಳಕೇ ಎಲ್ಲಕ್ಕೂ ಆಧಾರ! ಆದರೆ ದೀಪವು ಸ್ವತಃ ಏನನ್ನೂ ಮಾಡುತ್ತಿಲ್ಲ, ಯಾವ ಪುಣ್ಯಪಾಪಗಳನ್ನೂ ಅನುಭವಿಸುತ್ತಿಲ್ಲ! ಹಾಗೆಯೇ ಸದ್ವಸ್ತುವೂ. ನಮ್ಮೊಳಗೇ ಇದ್ದು ನಮ್ಮ ದೇಹ-ಮನ-ಬುದ್ಧಿ-ಪ್ರಾಣಾಹಂಕಾರ-ತತ್ವಗಳನ್ನು ಪೋಷಿಸಿದೆ, ಆದರೆ ಅದಾವುಗಳ ಸಂಕಲ್ಪ-ವಿಕಲ್ಪ-ಕ್ರಿಯೆ-ಪ್ರಕ್ರಿಯೆಗಳ ಸ್ಪರ್ಶವನ್ನೂ ಹೊಂದಿಲ್ಲ!
ಹಾಗಾಗಿ ಒಬ್ಬನು ಮತ್ತೊಬ್ಬನನ್ನು ‘ಕೊಂದ’ ಎಂದರೆ, ಅವನ ದೇಹ-ಮನ-ಬುದ್ಧಿಗಳು ಕೊಲ್ಲುವ ಪ್ರಕ್ರಿಯೆಯಲ್ಲಿ ತೊಡಗಿದವು ಎಂದಷ್ಟೇ ಅರ್ಥ. ಅಂತೆಯೇ ಮತ್ತೊಬ್ಬ ‘ಕೊಲ್ಲಲ್ಪಟ್ಟ’ ಎಂದರೆ. ಅವನ ‘ದೇಹ-ಮನ-ಬುದ್ಧಿಗಳ ಸಂಕೀರ್ಣವು’ ನಾಶವಾಯಿತೆಂದಷ್ಟೇ ಅರ್ಥ. ಕೊಲ್ಲುವವನ ಹಾಗೂ ಕೊಲ್ಲಲ್ಪಡುವವನ ‘ಅಂತರಾತ್ಮ’ವು ಮಾತ್ರ ಈ ಯಾವ ಪ್ರಕ್ರಿಯೆಗಳಿಗೂ ಒಳಪಡದೆ, ನಿತ್ಯಶುದ್ಧ-ಬುದ್ಧ-ಮುಕ್ತವಾಗಿಯೇ ಉಳಿಯುತ್ತದೆ. ಅದು ಎಂದೂ ‘ಕೊಲ್ಲುವುದೂ’ ಇಲ್ಲ, ‘ಕೊಲ್ಲಲ್ಪಡುವುದೂ’ ಇಲ್ಲ.
‘ಆತ್ಮ’ದ ನೆಲೆಯಲ್ಲಿ ಜೀವಿಗಳನ್ನೆಲ್ಲ ಕಾಣುವ ದಾರ್ಶನಿಕನ ಪಾಲಿಗೆ ಈ ಲೋಕದಲ್ಲಿನ ಹುಟ್ಟು-ಸಾವು ಮುಂತಾದ ಪ್ರಕ್ರಿಯೆಗಳು ಹೊರಾವರಣಗಳಲ್ಲಿನ ಲೀಲೆಯಂತೆ ಕಾಣಬರುತ್ತದೆ. ಅಂತಹ ವ್ಯಕ್ತಿಯು ವಿಚಲಿತನಾಗುವುದಿಲ್ಲ. ಭಾವುಕನಾಗದೆ, ಕೇವಲ ಧರ್ಮಾಧರ್ಮಗಳ ವಿವೇಚನೆಯನ್ನಾಧರಿಸಿ ಕಾರ್ಯವೆಸಗುತ್ತಾನೆ.
ಆದರೆ ದೇಹಮನಬುದ್ಧಿಗಳ ನೆಲೆಯಲ್ಲಷ್ಟೇ ಆಲೋಚಿಸುವ ಅಪೂರ್ಣ ದರ್ಶನದ ಸಾಮಾನ್ಯರು ಹುಟ್ಟು ಸಾವುಗಳಿಗೆ ಅತೀವವಾಗಿ ಸ್ಪಂದಿಸುತ್ತ ಭಾವುಕರಾಗುತ್ತಾರೆ. ಗೊಂದಲಕ್ಕೆ ಒಳಪಡುತ್ತಾರೆ. ಅವರ ನಿರ್ಣಯಳಲ್ಲೂ ಗೊಂದಲಗಳೇ ಇರುತ್ತವೆ. ಸತ್-ಅಸತ್-ಗಳ ವ್ಯತ್ಯಾಸವನ್ನೇ ಮತ್ತಷ್ಟು ಸ್ಪಷ್ಟಪಡಿಸಲು, ಕೃಷ್ಣನು ಹೀಗೆ ಹೇಳುತ್ತಾನೆ-
ನ ಜಾಯತೇ ಮ್ರಿಯತೇ ವಾ ಕದಾಚಿತ್ I ನಾಯಂ ಭೂತ್ವಾ ಭವಿತಾ ವಾ ನ ಭೂಯಃ I
ಅಜೀ ನಿತ್ಯಃ ಶಾಶ್ವತೋಽಯಂ ಪುರಾಣೋ I ನ ಹನ್ಯತೆ ಹನ್ಯಮಾನೇ ಶರೀರೇ II
ಶರೀರವು ಮಾತ್ರ ನಾಶವಾಗುತ್ತದೆ. ಆದರೆ ಆತ್ಮವು ಹುಟ್ಟುವುದೂ ಇಲ್ಲ, ಸಾಯುವುದೂ ಇಲ್ಲ, ಮಧ್ಯೆ ‘ವ್ಯಕ್ತ’ವಾಗಿ ಆಮೇಲೆ ‘ಇಲ್ಲ’ವೆನಿಸುವುದೂ ಇಲ್ಲ. ಅದು ನಿತ್ಯವೂ ಶಾಶ್ವತವೂ ಜನ್ಮವಿಲ್ಲದ್ದೂ ಹಾಗೂ ಅತ್ಯಂತ ಹಳೆಯದ್ದು ಆಗಿದೆ.
ಇಲ್ಲಿ ‘ಶರೀರ’ ಎಂದರೆ ಸ್ಥೂಲಸೂಕ್ಷ್ಮಸ್ತರಗಳ ದೇಹ-ಮನ-ಬುದ್ಧಿಗಳೆಲ್ಲವನ್ನೂ ವಿವಕ್ಷೆಗೆ ತೆಗೆದುಕೊಳ್ಳಬೇಕು ಎನ್ನುವುದನ್ನು ಹಿಂದೆಯೇ ನೋಡಿದ್ದೇವೆ. ಇವೆಲ್ಲವೂ ಹುಟ್ಟು-ಸಾವುಗಳಿಗೂ ಬದಲಾವಣೆಗಳಿಗೂ ವಶ. ಆದರೆ ಆತ್ಮವು ‘ಉತ್ಪತ್ತಿ’ಯೇ ಆಗುವುದಿಲ್ಲವಾದ್ದರಿಂದ ‘ಸಾಯುವುದೂ’ ಇಲ್ಲ! ಅದು ನಿತ್ಯವೂ ಶಾಶ್ವತವೂ ಆದದ್ದು. ಅಷ್ಟೇ ಅಲ್ಲ, ವ್ಯಕ್ತಪ್ರಪಂಚದಲ್ಲಿ ಕಾಣುವ ಈ ಸಮಸ್ತ ಸೃಷ್ಟಿಯೆಲ್ಲಕ್ಕಿಂತಲೂ ಹಳೆಯದು, ಮೊದಲಿನದು. ಭೂತ-ವರ್ತಮಾನ-ಭವಿಷ್ಯತ್ಕಾಲಗಳ ಸೀಮೆಯೇ ಇಲ್ಲದೆ, ಸದಾ ‘ಇರುವ’ ಅಖಂಡ ಅಸ್ತಿತ್ವ ಅದು.
ಭೌತಿಕ ನೆಲೆಯ ‘ಖಂಡ-ಅಸ್ತಿತ್ವ’ವನ್ನೂ ಆತ್ಮದ ನೆಲೆಯ ‘ಅಖಂಡ ಅಸ್ತಿತ್ವ’ವನ್ನೂ ಸ್ಪಷ್ಟವಾಗಿ ಬೇರ್ಪಡಿಸಿ ತೋರುತ್ತಿದ್ದಾನೆ ಶ್ರೀಕೃಷ್ಣ. ಖಂಡ-ಅಸ್ತಿತ್ವದ ವಿವರಗಳಿಂದ ಕಳಚಿಕೊಂಡು ‘ಅಖಂಡ’ದ ನೆಲೆಗೇರಿದ ಕೂಡಲೆ ತತ್ವನಿಶ್ಚಯದ ಉದ್ದೀಪನವಾಗುತ್ತದೆ- ಎನ್ನುವುದು ತಾತ್ಪರ್ಯ.

Dr ಆರತೀ V B

ಕೃಪೆ : ವಿಜಯವಾಣಿ

Leave a Reply