ಬದುಕಿಗೆ ಭಗವದ್ಗೀತೆ – ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ನನ್ನಲ್ಲಿ ನಿಲ್ಲು

ಬದುಕಿಗೆ ಭಗವದ್ಗೀತೆ – ಹೇಗಾದರೂ ಮಾಡಿ ಇಂದ್ರಿಯಗಳನ್ನು ಗೆಲ್ಲು, ನನ್ನಲ್ಲಿ ನಿಲ್ಲು

ಬೇಕಾದಾಗ ಜೀವನ್ಮುಖಿಯಾಗಿ ಬದುಕು ನಡೆಸುತ್ತ, ಕರ್ತವ್ಯಗಳು ಮುಗಿದಾಗ, ಎಲ್ಲದರಿಂದಲೂ ಕಳಚಿಕೊಂಡು ಅಂತರ್ಮುಖನಾಗಿ ವಿರಮಿಸುವ ಕೌಶಲದ ಬಗ್ಗೆ ಶ್ರೀಕೃಷ್ಣನು ವಿವರಿಸುತ್ತಿದ್ದ. ಅದಕ್ಕೆ ಆಮೆಯ ಮುದ್ದು ನಿದರ್ಶನವನ್ನೂ ಕೊಟ್ಟ.
ಯಯತೋಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ I ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂಮನಃ II
(ಅಂತರ್ಮುಖವಾಗಲು) ಯತ್ನಿಸುತ್ತಿರುವ ಚತುರ ಮನುಷ್ಯನ ಮನಸ್ಸನ್ನೂ ಕೂಡ (ಅದು ಭೋಗೇಚ್ಛೆಯ ದೌರ್ಬಲ್ಯದಿಂದ ಕೂಡಿರುವುದರಿಂದ) ಬಲವತ್ತರವಾದ ಇಂದ್ರಿಯಗಳು ಅಪಹರಿಸಿಬಿಡುತ್ತವೆ.
ಸ್ಥಿತಪ್ರಜ್ಞನಾಗುವುದು ಅಷ್ಟು ಸುಲಭವಲ್ಲ. ನಮ್ಮನ್ನು ಗುರಿ ತಪ್ಪಿಸುವ ಭೋಗೇಚ್ಛೆಯು ಅಳಿದಲ್ಲದೇ ನಾವು ಅಂತರಂಗದಲ್ಲಿ ’ವಿರಮಿಸ’ಲಾರೆವು. ರಾಮಕೃಷ್ಣರು ಕೊಡುವ ದೃಷ್ಟಾಂತ ಮನೋಜ್ಞವಾಗಿದೆ- ’ಮೂವರು ಕುಡುಕರು ದೋಣಿಯಲ್ಲಿ ನದಿಯನ್ನು ದಾಟಿ, ಅಲ್ಲಿ ಕಂಠಪೂರ್ತಿ ಮದ್ಯ ಕುಡಿದರಂತೆ. ವಿಪರೀತ ನಶೆಯೇರಿದ ಸ್ಥಿತಿಯಲ್ಲೇ ಮತ್ತೆ ದೋಣಿ ಹತ್ತಿ ಹುಟ್ಟು ಹಾಕುತ್ತ ತಮ್ಮ ಹಳ್ಳಿಯತ್ತ ಸಾಗಿದರಂತೆ. ಆದರೆ ಬೆಳಗ್ಗಿನವರೆಗೂ ಹುಟ್ಟು ಹಾಕಿದರೂ, ನದಿಯನ್ನು ದಾಟಲಾಗಲಿಲ್ಲವಂತೆ! ನಶೆ ಇಳಿದಾಗ ಸರಿಯಾಗಿ ಗಮನಿಸಿ ನೋಡಿದಾಗ ಗೊತ್ತಾಯಿತು- ಗೂಟಕ್ಕೆ ಕಟ್ಟಿದ್ದ ದೋಣಿಯ ಹಗ್ಗವನ್ನೇ ಬಿಚ್ಚಿರಲಿಲ್ಲವಂತೆ! ಭೋಗೇಚ್ಛೆಯೆಂಬ ಗೂಟಕ್ಕೆ ಕಟ್ಟಿಕೊಂಡ ಮನಸ್ಸೆಂಬ ಹಗ್ಗವನ್ನು ಬಿಚ್ಚದೆ, ನಾವು ಸಾಧನೆ ಮಾಡಿ  ’ಮುಂದುವರೆಯುವುದೂ’ ಇದೇ ಅರ್ಥದಲ್ಲೇ!’
‘ಮೊದಲು ಕಳಚಿಕೋ, ಆ ಬಳಿಕ ಸಾಧನೆಯು ಮುಂದುವರೆಯುತ್ತದೆ’ ಎನ್ನುವ ದಿಟ್ಟ ಸತ್ಯವನ್ನು ಕೃಷ್ಣನು ಎತ್ತಿ ಹೇಳುತ್ತಿದ್ದಾನೆ. ಭೋಗೇಚ್ಛೆಯು ಮನದಾಳದಲ್ಲಿ ಲೇಶಮಾತ್ರ ಉಳಿದಿದ್ದರೂ, ಮನಸ್ಸು ದುರ್ಬಲವಾಗಿ ಉಳಿಯುತ್ತದೆ. ಕಾಮಕಾಂಚನಾದಿ ಬಾಹ್ಯ ಪ್ರಲೋಭನೆಗಳು ಇಂದ್ರಿಯಗಳನ್ನು ಸೆಳೆಯುತ್ತಲೇ ಇರುತ್ತವೆ. ಅವು ದುರ್ಬಲ ಮನಸ್ಸನ್ನು ಬಹಿರಂಗಕ್ಕೆ ಸೆಳೆಯುತ್ತಲೇ ಇರುತ್ತವೆ. ನಾವು ಮಾಡುವ ಅದೆಷ್ಟೋ ಯೋಗ-ಪೂಜೆ-ಜಪ-ಧ್ಯಾನ-ಧರ್ಮಕಾರ್ಯಾದಿಗಳೂ, ನಮಗೆ ಒಂದಷ್ಟು ಶಾಂತಿ ಸಂತೋಷ ತೃಪ್ತಿಗಳನ್ನು ಒದಗಿಸಿದರೂ, ನಮ್ಮ ಮನೋನಿಗ್ರಹಕ್ಕೆ ಮಾತ್ರ ಸಾಧನವಾಗದೇ ಉಳಿಯುವುದು ಈ ಕಾರಣಕ್ಕಾಗಿಯೇ! ಮನೋನಿಗ್ರಹದ ಮೂಲಕ ಸಾಧನೆಗಿಳಿಯುವವರೇ ವಿರಳರು. ’ಪೂಜೆ ಧರ್ಮಕರ್ಮಗಳನ್ನೆಲ್ಲ ‘ಆಸೆಗಳ ಪೂರೈಕೆ’ಗಾಗಿಯೇ ಬಳಸುವವರೇ ಹೆಚ್ಚಿನವರು. ಧಾರ್ಮಿಕ ಕರ್ಮಗಳ ಉನ್ನತಾರ್ಥಗಳನ್ನು ತ್ಯಜಿಸಿ ಅವುಗಳನ್ನು ತಮ್ಮ ಇಷ್ಟಾರ್ಥಪೂರ್ತಿಯ ಸಾಧನೆಗಳನ್ನಾಗಿಯಷ್ಟೇ ಬಳಸುವುದು ದೊಡ್ಡ ವ್ಯಸನವೇ ಆಗಿ ಬೆಳೆದುಬಿಟ್ಟಿದೆ! ಈ ದೌರ್ಬಲ್ಯವನ್ನೇ ಬಳಸಿಕೊಂಡು ’ನಮ್ಮಲ್ಲಿಗೆ ಬನ್ನಿರಿ! ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ಧಿಸುತ್ತವೆ’ ಎಂದು Marketing ಮಾಡಿಕೊಳ್ಳುತ್ತ ಹಣ ವಸೂಲಿ, ಮತಾಂತರ, ವಶೀಕರಣಾದಿಗಳನ್ನುಡಿ ದಾರಿತಪ್ಪಿಸುತ್ತ ಧರ್ಮಾಚರಣೆಗೇ ಕಳಂಕ ತರುವಂತಹ ಜಾಣರೂ ಹೆಚ್ಚುತ್ತಿದ್ದಾರೆ.
ಮನುಷ್ಯನು ‘ಆಸೆಪಡುವುದೇ ತಪ್ಪು’ ಎಂದಲ್ಲ. ಆದರೆ ’ತಾನು ಅಂದುಕೊಂಡಿದ್ದೆಲ್ಲವೂ ನಡೆಯಲೇಬೇಕು’ ಎಂಬ ಹಠಕ್ಕೆ ಅರ್ಥವಿಲ್ಲ, ಗೆಲುವಿಲ್ಲ. ಆ ಹಠವನ್ನು ಬಿಡುವವರೆಗೂ ನಿರಾಶೆ-ನೋವು-ಅಶಾಂತಿಗಳು ತಪ್ಪವು. ’ಅದು ಆಗಲಿಲ್ಲ, ಇದು ನಿಂತುಹೋಯಿತೆನ್ನುವ ಎದೆಯುಬ್ಬಗದಲ್ಲಿ ಜೀವನದ ಸಾರ-ಸಂತೋಷಗಳೂ ಆಯಸ್ಸೂ ಗತಿಸಿಯೇ ಹೋಗಿಬಿಡುತ್ತವೆ! ಈ ಗಲಾಟೆಯಲ್ಲಿ ತನ್ನೊಳಗಿನ ಆತ್ಮಶಕ್ತಿಯನ್ನು ಗುರುತಿಸಿ ಅಭಿವ್ಯಂಜಿಸುವುದರ ಕಡೆಗೆ ಮನುಷ್ಯನ ಗಮನವೇ ಹರಿಯದು!
ಭೋಗಾನುಭವಕ್ಕೆ ಮಿತಿಯಿಲ್ಲ. ಆದರೆ ಕಷ್ಟಪಟ್ಟು ಭೋಗೇಚ್ಛೆಗೆ ಕಡಿವಾಣ ಹಾಕಿ, ಯೋಗೇಚ್ಛೆಯನ್ನು ಬೆಳೆಸಿಕೊಳ್ಳುವುದು ಜಾಣ್ಮೆ ಎನ್ನುವುದು ಸ್ಪಷ್ಟ ಕೃಷ್ಣಾಚಾರ್ಯನ ನಿರ್ದೇಶ-
ತಾನಿ ಸರ್ವಾಣಿ ಸಂಯಮ್ಯ ಯುಕ್ತಆಸೀತ ಮತ್ಪರಃI ವಶೇಹಿಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾಪ್ರತಿಷ್ಠಿತಾ II
(ಕಷ್ಟಪಟ್ಟಾದರೂ ಸರಿ) ಆ ಎಲ್ಲ ಇಂದ್ರಿಯಗಳನ್ನು ಸಂಯಮಿಸಿ, ನನ್ನಲ್ಲಿ (ಪರತತ್ವದಲ್ಲಿ) ತೊಡಗಿಸು. (ಏಕೆಂದರೆ,) ಯಾರು (ಮನಸ್ಸು ಎಂಬ ಜ್ಞಾನೇಂದ್ರಿಯವೂ ಸೇರಿದಂತೆ) ತಮ್ಮ ಇಂದ್ರಿಯಗಳನ್ನೆಲ್ಲ ವಶದಲ್ಲಿರಿಸಿಕೊಳ್ಳುತ್ತಾನೋ, ಅವನೇ ಸ್ಥಿತಪ್ರಜ್ಞ.
ಜೀವನದಲ್ಲಿ ನಾವು ಹೊರಗಡೆ ಎದುರಿಸುವ ಸವಾಲುಗಳಿಗಿಂತ ’ಒಳಗಡೆ’ ಎದುರಿಸುವ ಸವಾಲುಗಳೇ ಕಷ್ಟತಮ!ಹೊರಗಡೆಯ ಶತ್ರುಗಳನ್ನು ಗುರುತಿಸಬಹುದು, ದೂರವಿಡಬಹುದು. ಆದರೆ ನಮ್ಮ ಅಂತಃಕರಣಗಳೇ ಆಗಿರುವ ನಮ್ಮ ಮನೋಬುದ್ಧಿಗಳು ನಮ್ಮನ್ನು ದಾರಿತಪ್ಪಿಸಿದಾಗ, ಮಾಡುವುದೇನು?! ಅವುಗಳನ್ನು ಗುರುತಿಸುವುದೂ ಕಷ್ಟ! ಹೊರಗಟ್ಟಲೂ ಆಗದು! ಅವುಗಳನ್ನು ’ಯೇನ-ಕೇನ-ಪ್ರಕಾರೇಣ’ ಪಳಗಿಸುವುದೊಂದೇ ಉಪಾಯ. ’ಜಿತಂಜಗತ್ಕೇನ? ಮನೋಹಿಯೇನ!’ (ಪ್ರಶ್ನೆ- ಯಾರು ಜಗತ್ತನ್ನು ಗೆದ್ದವನು? ಉತ್ತರ- ಮನಸ್ಸನ್ನು ಗೆದ್ದವನೇ ಜಗತ್ತನ್ನು ಗೆದ್ದವನು!)” ಎಂಬುದು ಆಚಾರ್ಯ ಶಂಕರರ ಮಾತು. (ಪ್ರಶ್ನೋತ್ತರ ರತ್ನಮಾಲಿಕಾ). ಇಂದ್ರಿಯಗಳನ್ನು ಸತತ ಯತ್ನದಿಂದ ಪಳಗಿಸಿ, ಸರ್ವಾಂತರ್ಯಾಮಿಯಾದ ’ತನ್ನಲ್ಲಿ’ (ಪರಮಾತ್ಮನಲ್ಲಿ) ಹರಿಯಿಸಬೇಕು ಎನ್ನುತ್ತಾನೆ ಕೃಷ್ಣ. ಇಲ್ಲಿ ’ತನ್ನಲ್ಲಿ’ ಎಂದು ಕೃಷ್ಣನು ಘಂಟಾಘೋಷವಾಗಿ ಹೇಳುವುದರ ಮೂಲಕ ’ತಾನೇ ಆ ಸರ್ವಾಂತರ್ಯಾಮಿ’ ಎಂದು ಸಾರುವ ಕರುಣೆ ತೋರಿದ್ದಾನೆ. ’ತನ್ನಲ್ಲಿ’ ಎಂದರೆ ’ತನ್ನ ಅಂತರಾತ್ಮದಲ್ಲಿ’ ಎಂದೂ ಅರ್ಥಮಾಡಿಕೊಳ್ಳುವ ಅನುಕೂಲವೂ ಇದೆ. ನಮ್ಮಾತ್ಮವೂ ಅದೇ ಪರಮಾತ್ಮನದೇ ಕಿಡಿಯದ್ದರಿಂದ ಉಭಯತ್ರವೂ ಅರ್ಥವು ಸಿದ್ಧಿಸುತ್ತದೆ.
ಒಟ್ಟಿನಲ್ಲಿ ಬಾಹ್ಯ ಜೀವನವನ್ನೇ ಸರ್ವಸ್ವ ಎಂದು ಭಾವಿಸದೇ ಅಂತರಂಗದ ಜೀವನದ ಪಾರಮ್ಯವನ್ನು ಮನಗಾಣುವ ಊರ್ಧ್ವ ಪ್ರವೃತ್ತಿಯನ್ನು ಪ್ರೋತ್ಸಾಹಿಸುತ್ತಿದ್ದಾನೆ ಆಚಾರ್ಯ ಕೃಷ್ಣನು.
ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply