ಬದುಕಿಗೆ ಭಗವದ್ಗೀತೆ -7

ಬದುಕಿಗೆ ಭಗವದ್ಗೀತೆ -೭

ಶೋಕಾನ್ವಿತನಾಗಿ ಕುಸಿದು ಕುಳಿತ ತನ್ನನ್ನು ಕೃಷ್ಣನು ಸಾಂತ್ವನ ಮಾಡಿಯಾನೆಂದು ಕೊಂಡನೇನೋ ಅರ್ಜುನ! ಆದರೆ ಕೃಷ್ಣನು ಛೀಮಾರಿ ಹಾಕಿ “ಸಾಕು ಈ ಹೃದಯದೌರ್ಬಲ್ಯ! ಎದ್ದೇಳು, ಕರ್ತವ್ಯವನ್ನು ಮಾಡು!” ಎಂದು ಗುಡುಗಿದಾಗ ಬೆಚ್ಚಿದ ಅರ್ಜುನ! ತನ್ನ ಗೋಳಾಟ ಅರ್ಥಹೀನವಾದದ್ದು. ಅದಕ್ಕೆ ಕೃಷ್ಣನಂತಹ ಪ್ರಾಜ್ಞನಿಂದ ಸಹಾನುಭೂತಿ ಸಿಗುವುದಿಲ್ಲವೆಂದು ಅರಿತ. ಈಗ ತನ್ನ ನಿಜವಾದ ಭಾವವನ್ನು ಮುಂದಿಟ್ಟ- ನನಗೆ ಪೂಜ್ಯರಾದ ಭೀಷ್ಮದ್ರೋಣಾದಿಗಳ ಮೇಲೆ ಬಾಣ-ಪ್ರತಿಬಾಣಗಳನ್ನು ಹೇಗೆ ತಾನೆ ಪ್ರಯೋಗಿಸಲಿ?” (ಕಥಂ ಭೀಷ್ಮಮಹಂ ಸಂಖ್ಯೇ——) ತನ್ನ ಸಂಕಟಕ್ಕೆ ನಿಜವಾದ ಕಾರಣ ಇದು!- “ತನ್ನವರನ್ನು ಶಿಕ್ಷಿಸಬೇಕಲ್ಲ’ ಎಂಬ ಧರ್ಮಸಂಕಟ! ಅರ್ಜುನ ಹಾಗೂ ವಾದವನ್ನು ಮುಂದುವರಿಸುತ್ತಾನೆ – “ಪ್ರಿಯ ಬಂಧುಜನ’ರನ್ನು ಕೊಂದು ಗೆಲ್ಲುವ ಭೋಗಗಳು ರಕ್ತಸಿಕ್ತವೆನಿಸುವುದಿಲ್ಲವೆ?” ಹಾಗಾದರೆ ಇಲ್ಲಿವರೆಗೂ ಆತನು ’ಬಂಧುಗಳಲ್ಲದವರನ್ನು’ ಕೊಂದು ಗೆದ್ದದ್ದೂ ರಕ್ತಸಿಕ್ತವೇ ಆಗಿರಲಿಲ್ಲವೆ? ಇಲ್ಲಿ ಅರ್ಜುನನ ಪಕ್ಷಪಾತ ಬಯಲಾಗುತ್ತದೆ. ಸರ್ವಜ್ಞನಾದ ಕೃಷ್ಣನೆದುರು ತನ್ನ ವ್ಯಾಮೋಹದ ಬಣ್ಣವು ತನ್ನ ಮಾತಲ್ಲೇ ಅನಾವರಣವಾಯಿತು! ಅರ್ಜುನ ಪೇಚಾಡಿದ. ತನ್ನ ಮೋಹದ ಮೊದಲ ಝಲಕ್ ಆತನಿಗೇ ಕಣ್ ಕೋರೈಸುತ್ತ ಹೊಳೆದು ತೋರಿತೋ ಏನೋ, ಆತ ಕೂಡಲೆ ಹೇಳುತ್ತಾನೆ- “ಈ ಯುದ್ಧವನ್ನು ಮಾಡಬೇಕೋ ಮಾಡಬಾರದೋ, ಇದರಲ್ಲಿ ನಾವು ಗೆಲ್ಲುತ್ತೇವೋ ಅವರೇ ಗೆಲ್ಲುತ್ತಾರೋ ಗೊತ್ತಿಲ್ಲ!” ಅರ್ಜುನನ ಅಂತರ್ವಾಣಿಯು “ಧರ್ಮಕ್ಕಾಗಿ ಯುದ್ಧಮಾಡು” ಎಂದು ದೃಢವಾಗಿ ಹೇಳುತ್ತಿದ್ದರೆ, ವ್ಯಾಮೋಹವು ‘ಬೇಡ’ ಎಂದು ವಿಚಲಿತಗೊಳಿಸುತ್ತಿದೆ. ಅಪ್ರಿಯ ಕರ್ತವ್ಯವೊಂದೆಡೆ, ಪ್ರಿಯ ಬಂಧುಜನ ಮತ್ತೊಂದೆಡೆ. ಧರ್ಮವು ಅಪ್ರಿಯಕರ್ತವ್ಯದ ಕಡೆಗಿದೆ. ಮೋಹವು ಪ್ರಿಯಬಂಧು ಜನರ ಕಡೆಗಿದೆ- ಇದು ತನ್ನ ಸ್ಥಿತಿ ಎನ್ನುವುದು ಅವನಿಗೇ ಅರ್ಥವಾಗತೊಡಗಿದೆ!
ಇಲ್ಲಿ ನಾವು ಗಮನಿಸಬೇಕು, ಕೃಷ್ಣನಲ್ಲದೆ ಬೇರಾರಾದರೂ ಸಾಮಾನ್ಯ ವ್ಯಕ್ತಿ ಅಲ್ಲಿದ್ದಿದ್ದರೇ ಅರ್ಜುನನ ಗೊಂದಲವನ್ನು ಪುಷ್ಟೀಕರಿಸಿ, ಇಬ್ಬರೂ ಅವಿವೇಕದ ನಿರ್ಣಯ ತೆಗೆದುಕೊಳ್ಳುತ್ತಿದ್ದರೋ ಏನೋ. ಆದರೆ ಕೃಷ್ಣನಂತಹ ವಿವೇಕಿಯೂ ಸ್ಟ್ರಿಕ್ಟ್ ಮಾಸ್ಟರ್ ಎರಡು ಕಠಿಣ ಮಾತುಗಳ ಏಟು ಕೊಟ್ಟು, ಅರ್ಜುನನು ತನ್ನ ಗೊಡ್ಡುವಾದವನ್ನು ನಿಲ್ಲಿಸಿ, ತನಗಾಗಿರುವ ಗೊಂದಲವನ್ನು ತಾನೇ ಆತ್ಮನಿರೀಕ್ಷಣೆ ಮಾಡಿಕೊಳ್ಳುವಂತೆ ಪ್ರಚೋದಿಸಿದ. ರಾಗದ್ವೇಷಗಳ ಭಾವುಕತೆಗೆ ಕಿರುಗಾಸಿನಷ್ಟೂ ಬೆಲೆಕೊಡದ ಸ್ಥಿತಪ್ರಜ್ಞ ಶ್ರೀಕೃಷ್ಣ ಎನ್ನುವುದು ಅರ್ಜುನನಿಗೆ ಗೊತ್ತು. ತನ್ನನ್ನು ಇಂತಹ ಧರ್ಮಸಂಕಟದಿಂದ ಪಾರುಮಾಡುವ ಚಾತುರ್ಯ, ಯೋಗ್ಯತೆ ಹಾಗೂ ಕರುಣೆ ಆತನಿಗೇ ಇರುವುದು ಎನ್ನುವುದೂ ಗೊತ್ತು. ಹಾಗಾಗಿ ಅರ್ಜುನ ತನ್ನ ಮನವನ್ನು ಬಿಚ್ಚಿಟ್ಟು ಶ್ರೀಕೃಷ್ಣನಲ್ಲಿ ಶರಣಾಗುತ್ತ ತನ್ನನ್ನು ಉದ್ಧರಿಸಬೇಕೆಂದು (ಸರಿಯಾದ ದಾರಿ ತೋರಿಸಬೇಕೆಂದು) ಪ್ರಾರ್ಥಿಸುತ್ತಾನೆ- “ಶಿಷ್ಯಸ್ತೇಹಂ ಶಾಧಿ ಮಾಂ ತ್ವಾಂ ಪ್ರಪನ್ನಂ”
ಈ ಸಂದರ್ಭದ ಸ್ವಾರಸ್ಯವನ್ನು ನೋಡಿ- ಅರ್ಜುನನಿಗೆ ಗೊಂದಲವಾಗಿದೆ ಎನ್ನುವುದು ಅವನ ಅಂತರಂಗದಲ್ಲಿ ಚಿಂತನಮಂಥನ ಪ್ರಾರಂಭವಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಅವನು ತನ್ನೊಳಗಿನ ಭಾವನೆ-ಚಿಂತನೆಗಳ ನಡುವೆ ಗೊಂದಲವಾಗುತ್ತಿದೆ (ಕಾಂಟ್ರಡಿಕ್ಶನ್ಸ್) ಎನ್ನುವುದನ್ನು ಒಪ್ಪಿಕೊಂಡದ್ದು ಅವನ ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. “ನಾನು ನಿನ್ನ ಶಿಷ್ಯ, ನಿನ್ನಲ್ಲೇ ಶರಣಾಗಿದ್ದೇನೆ, ದಾರಿ ತೋರು” ಎಂದು ಶ್ರೀಕೃಷ್ಣನಲ್ಲಿ ಮೊರೆಹೋಗಿದ್ದು ಅವನ ದೊಡ್ಡತನವನ್ನು ವಿವೇಕವನ್ನೂ ತೋರಿಸುತ್ತದೆ. ಈ ಮೂರು ಗುಣವಿಶೇಷಗಳು ಅರ್ಜುನನಲ್ಲಿ ಕಾಣಿಸಿದ್ದರಿಂದಲೇ ಕೃಷ್ಣನ ಶ್ರೀಮುಖದಿಂದ ಪಾವನೆ ಗೀತಾಗಂಗೆಯು ಹರಿದು ಅರ್ಜುನನ ಮನಃಕ್ಲೇಷವನ್ನು ತೊಳೆದು, ಜ್ಞಾನವನ್ನು ಹೊಳೆಸಿತು.
ಅರ್ಜುನನಲ್ಲಿ ಚಿಗುರಿದಂತೆಯೇ ನಮ್ಮಲ್ಲೂ ಮೊದಲು ಒಂದಷ್ಟು ವಿಚಾರಗಳು, ಪ್ರಶ್ನೆಗಳೂ ಏಳಬೇಕು. ಅವು ಪಕ್ವವಾಗಿಲ್ಲದಿದ್ದರೂ ಪರವಾಗಿಲ್ಲ, ಪ್ರಾಮಾಣಿಕವಾಗಿರಬೇಕು. ಅವು ನಮ್ಮನ್ನು ಸುಖದ ಅಮಲಿನ ಕಂಫರ್ಟ್ ಜ಼ೋನ್ ನಿಂದ ಕದಲಿಸಿ ಎಬ್ಬಿಸಬೇಕು. ಸತ್ಯವನ್ನು ತಿಳಿಯುವ ಹಂಬಲವನ್ನು ಹುಟ್ಟಿಸಬೇಕು. ಆ ಬಳಿಕ ನಿರಂತರ ಶ್ರವಣಮನನಗಳಲ್ಲಿ ನಾವು ತೊಡಗುತ್ತ, ಸ್ವಂತ ದೃಷ್ಟಿಕೋನದಿಂದಲೂ ಜೀವನಾನುಭವವನ್ನೂ ಎಲ್ಲವನ್ನೂ ಒರೆಹಚ್ಚಿ ವಿಮರ್ಶಿಸಬೇಕು. ಹಾಗೆ ಮಾಡುತ್ತ ನಮ್ಮ ’ಅಹಮಿಕೆ’ ಕರಗಬೇಕು. ನಮ್ಮ ಮನೋಬುದ್ಧಿಗಳ ವ್ಯಾಪಾರಗಳಲ್ಲಿನ ಇತಿಮಿತಿಗಳೂ ನಮ್ಮ ಪೂರ್ವಾಗ್ರಹಗಳೂ ನಾವು ನಂಬುವ ಸುಂದರ ಸುಳ್ಳುಗಳೂ ನಮಗೇ ಬಯಲಾಗುತ್ತ ಹೋಗಬೇಕು! ನಮ್ಮ ಗೊಂದಲ, ದೌರ್ಬಲ್ಯವನ್ನು ನಾವು ಮನಸಾ ಒಪ್ಪಿಕೊಳ್ಳಬೇಕು. ಅದರಿಂದ ಆಚೆ ಬರಲು ಚಡಪಡಿಸಬೇಕು. ಅರ್ಜುನನು ಈ ಸ್ಥಿತಿಯನ್ನು ತಲುಪುತ್ತಿದ್ದಾನೆ. ತನ್ನ ಮತಿಯ ಕ್ಲೇಶವನ್ನು ಒಪ್ಪಿಕೊಂಡ. ಊರ್ಝಿತಸತ್ವನಾದ ವ್ಯಕ್ತಿಯ ಲಕ್ಷಣವಿದು.
ಅವಿವೇಕಿಯಾದವನ ರೀತಿಯೇ ಬೇರೆ. ಪೂರ್ವಾಗ್ರಹಗಳಿಂದ ಒಂದಷ್ಟು ವಿಚಾರಕ್ಕೆ ಇಳಿಯುತ್ತಲೇ, ತನಗೆ ’ಪ್ರಿಯ’ವೆನಿಸುವ ಯಾವುದೋ ಸಿದ್ಧಾಂತಕ್ಕೋ, ಸಿದ್ಧಾಂತಿಗೋ, ಮತ-ಮಠ-ಕುಲ-ದೇಶ-ಮಮಕಾರಗಳ ’ಚೌಕಟ್ಟಿ’ನೊಳಕ್ಕೋ ಇಷ್ಟದಿಂದ ಹೋಗಿ ಸಿಲುಕಿಕೊಳ್ಳುತ್ತೇವೆ. ಅಲ್ಲಿಂದಾಚೆಗೆ ಎಲ್ಲವನ್ನೂ ತನಗೆ ಸರಿಯೆನಿಸುವ ಸಿದ್ಧಾಂತದ ’ಚೌಕಟ್ಟಿನ’ ಒಳಗಿಟ್ಟೇ ’ವ್ಯಾಖ್ಯಾನಿಸುತ್ತಾನೆ’! ತೆರೆದ ಮನಸ್ಸಿಗೆ ಬಾಗಿಲುಹಾಕಿ ಕೂಪಮಂಡೂಕನಾಗುತ್ತಾನೆ. ತನ್ನದೇ ಸರಿಯೆಂಬ ಹಠದಿಂದ ಒಣ-ವಾದ-ವಿವಾದಗಳಿಗೆ ಇಳಿಯುತ್ತಾನೆ. ಅಶಾಂತನಾಗುತ್ತಾನೆ. ಅಲ್ಲಿಗೆ ಆತನ ’ಸತ್ಯಾನ್ವೇಷಣೆ’ ನಿಂತ ನೀರಾಗುತ್ತದೆ! ಅಲ್ಲಿ ದುರ್ಗುಣಗಳ ’ಪಾಚಿ’ಯೂ ಕಟ್ಟಲಾರಂಭಿಸುತ್ತದೆ! ನಾನು ಜ್ಞಾನಿ ನಾನು ಸಾಧಕ ಎಂಬ ಗರ್ವದಲ್ಲಿ ಮೋಹಾಂಧನಾಗುತ್ತಾನೆ. ಸಾಮಾನ್ಯರಾದ ನಮಗೆಲ್ಲ ಹೀಗೆಯೇ! “ನನಗೆ ಮೋಹ ಕವಿದಿದೆ” ಎಂದು ಅನಿಸುವುದೇ ಇಲ್ಲ. ಎಂತೆಂತಹ ಪಂಡಿತೋತ್ತಮರೂ ಕೂಡ ’ನಿರ್ಮಮ’ ಭಾವದಿಂದ ಇತರರನ್ನು ವಿಮರ್ಶಿಸಬಲ್ಲರಾದರೂ, ತಮ್ಮ ಆಲೋಚನೆಗೇ ಕವಿದ ವ್ಯಾಮೋಹದ ಸೂಕ್ಷ್ಮಲೇಪವನ್ನು ಗುರುತಿಸುವಲ್ಲಿ ವಿಫಲರಾಗಿಬಿಡುವುದುಂಟು! ಅಷ್ಟು ಭಯಂಕರ ಈ ಮೋಹದ ಬಲೆ! ಇಲ್ಲಿ, ಅರ್ಜುನನು ತನಗೆ ಗೊಂದಲವಾಗಿದೆ, ತನ್ನ ನಿರ್ಣಯಶಕ್ತಿ ಹ್ರಾಸವಾಗಿದೆ ಎಂದು ಮುಕ್ತವಾಗಿ ಒಪ್ಪಿಕೊಂಡನಲ್ಲ ಅದು ಅವನ ದೊಡ್ಡತನ, ಅದು ಅವನ ವಿವೇಕವನ್ನು ತೋರುತ್ತದೆ. ಈ ಪ್ರಾಮಾಣಿಕತೆಯೇ ಆತನನ್ನು ಉದ್ಧಾರದ ಹೆದ್ದಾರಿಗೆ ಕರೆದೊಯ್ದ ಶಕ್ತಿ.
ಆ ಬಳಿಕವೇ ಸಾಧಕನಿಗೆ ಯೋಗ್ಯ ಗುರುವಿನ ಅಗತ್ಯ ಇಳಿಯುತ್ತದೆ. ಇದೊಂದು ಕಷ್ಟದ ಹಂತ. ಅರ್ಜುನನ ಜನ್ಮಾಂತರದ ಪುಣ್ಯದ ಫಲವೋ, ಭಗವಂತನ ಅನನ್ಯ ಕರುಣೆಯೋ ತಿಳಿಯದು! ಆತನಿಗೆ ಯೋಗೇಶ್ವರನಾದ ಸಾಕ್ಷಾತ್ ಶ್ರೀಕೃಷ್ಣನೇ ಗುರುವಾಗಿ ಎದುರು ನಿಂತಿದ್ದ!
ಮನೋಬುದ್ಧಿಗಳ ವ್ಯಾಪಾರದಾಚೆಗೂ, ದೇಶ-ಕಾಲಗಳ ಒಳಗೂ ಹೊರಗೂ ವಿವೇಚಿಸದೇ ಯಾವ ಸತ್ಯವೂ ಸ್ಪಷ್ಟವಾಗದು ಅದಕ್ಕೆ ಬೇಕಾದದ್ದು, ಮೊದಲು ನಮ್ಮ ಇತಿಮಿತಿಗಳನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ, ವಿನಮ್ರತೆ. ಆಗ ಮಾತ್ರ ನಮ್ಮ ತಪ್ಪುಕಲ್ಪನೆಗಳು ಪೂರ್ವಾಗ್ರಹಗಳೂ ಕರಗಿ ಮತಿಯು ತಿಳಿಯಾದೀತು.
ಅರ್ಜುನನಲ್ಲಿ ಈಗಾಗಲೇ ವಿಚಾರಮಂಥನ ಪ್ರಾರಂಭವಾಗಿರುವುದರಿಂದ ಆತನ ಬುದ್ಧಿಯು ಜಾಗೃತವಾಗಿದೆ ಎಂದರ್ಥ. ಇದಲ್ಲದೆ ತನ್ನಲ್ಲಿ ಆಗುತ್ತಿವೆ ಎಂದು ತಾನೇ ಒಪ್ಪಿಕೊಂಡಿದ್ದಾನೆ ಅದು ಸತ್ಯಾನ್ವೇಷಿಯ ನಿಜವಾದ ಲಕ್ಷಣ, ತನಗೆ ಅನ್ನಿಸಿದ್ದು, ಕಾಣಿಸಿದ್ದು ಇಷ್ಟವಾಗಿದ್ದೆಲ್ಲ ಸರಿ ಎಂದು ವಾದಿಸುವ ಮೂರ್ಖತನ ಶಾಠ್ಯಗಳು ಅವನಲ್ಲಿರಲಿಲ್ಲ ಎಂದಂತೂ ಸ್ಪಷ್ಟವಾಗುತ್ತದೆ. ಶಠರ ಮನಸ್ಸಿಗೆ ಯಾವ ಉದಾತವಿಚಾರಮಂಥನಗಳು ನಿಲುಕಲಾರವು ಗೋರ್ಕಲ್ಲ ಮೇಲೆ ನೀರೆರೆದಂತೆ ಸರ್ವಜ್ಞ!
ಇದಲ್ಲದೆ ಅರ್ಜುನನು ಕೃಷ್ಣನಲ್ಲಿ ಶರಣಾಗುತ್ತಾನೆ ನೋಡಿ- ಅದು ಅವನ ವಿವೇಕವನ್ನು ತೋರಿಸುತ್ತದೆ! ತನ್ನ ಅಹಮಿಕೆಯನ್ನು ಕಳಚಿಟ್ಟು, ಕೃಷ್ಣ! ನಾನು ಶಿಷ್ಯ, ನಿನ್ನಲ್ಲಿ ಶರಣಾಗಿದ್ದೇನೆ, ದಾರಿ ತೋರು” ಎಂದು ಬೇಡಿಕೊಂಡನಲ್ಲ! ಅದು ಆತನ ಅರ್ಹತೆಯನ್ನು ತೋರುತ್ತದೆ! ನನಗೆಲ್ಲ ಗೊತ್ತು, ನನಗೂ ಬುದ್ಧಿಯಿದೆ. ಯಾರೇನೂ ಹೇಳಿತಿಳಿಸಬೇಕಿಲ್ಲ! ಎಂಬ ಧೋರಣೆ ನಮ್ಮಲ್ಲಿ ಭುಗಿಲೆದ್ದು ಮತಿಗೆಡಿಸುತ್ತದೆ. ನಿಜ, ಬೇರೆಯವರು ಹೇಳಿದ್ದನ್ನೇ ಆಧರಿಸಿ ನಾವು ನಮ್ಮ ವಿಚಾರಗೋಪುರವನ್ನು ಕಟ್ಟಿಕೊಳ್ಳಬೇಕಿಲ್ಲ, ಸ್ವತಂತ್ರಚಿಂತನೆ ಬೇಕು! ಆದರೆ ನಮ್ಮ ಬುದ್ಧಿಯೊಳಗಿರುವ ಪೂರ್ವಾಗ್ರಹಗಳಿಂದಲೂ ನಾವು ಸ್ವತಂತ್ರರಾಗಿದ್ದೇವೆಯೆ ಎಂಬ ಪ್ರಶ್ನೆಯನ್ನು ನಾವು ಹಾಕಿಲೊಳ್ಳುವುದೇ ಇಲ್ಲ! ಹಲವರು ತಪ್ಪು ಕಲ್ಪನೆಗಳು, ಸುಪ್ತ ರಾಗದ್ವೇಷಗಳು, ಅನೈಜ ಬಯಕೆಗಳು, ಪ್ರಿಯವೆನಿಸುವ್ದನ್ನು ಮಾತ್ರ ಒಪ್ಪುವ ಇಷ್ತಪಡುವ ದೌರ್ಬಲ್ಯ, ಕಠಿಣಸತ್ಯವನ್ನು ಎದುರಿಸಲಾರದ ಅಧೈರ್ಯ, ಹಿಂದೆಂದೋ ಕೇಳಿದ, ನೋಡಿದ, ಭಾವಿಸಿದ ವಿಚಾರಗಳಿಗೆ ವಿವೇಚನೆಯಿಲ್ಲದೆ ತಗಲುಹಾಕಿಕೊಂಡು ಮೊಂಡುವಾದ ಮಾಡುವುದು—- ಇವುಗಳೆಲ್ಲ ನಮ್ಮೊಳಗೆ ಇರುವತನಕ ನಾವು ನಿಜಾರ್ಥದಲ್ಲಿ ’ಸ್ವತಂತ್ರ ಚಿಂತಕ’ರಾಗಲು ಸಾಧ್ಯವೇ ಇಲ್ಲ. ನಮಗನಿಸಿದ್ದನ್ನೆಲ್ಲ ಬಡಬಡಾಯಿಸಿ ನಾವು ಸ್ವತಂತ್ರ ಚಿಂತಕರಾಗುವುದಿಲ್ಲ, ಪ್ರಾಜ್ಞರ ಜೀವನಾನುಭವಗಳು ಚಿಂತನೆಗಳು, ನಮ್ಮದೇ ಜೀವನಾನುಭವಗಳು ಚಿಂತನೆಗಳು ಎಲ್ಲವೂ ಸೇರಿ ಪಾಕವಾಗಿ ನಮ್ಮೊಳಗೆ ಅಂತರ್ದೃಷ್ಟಿಗಳು ಮೊಳೆಯಬೇಕು. ಅಲ್ಲಿಯವರೆಗೂ ಉತ್ತಮ ಗುರುವಿನ ಸಹಾಯ ಬೇಕಾಗುತ್ತದೆ. ಆದರೆ ಅಂತಹ ಉತ್ತಮ ಗುರುವು ಸಿಗುವುದೇ ಅತ್ಯಂತ ಅಪರೂಪ.
ಕಂಡಕಂಡವರನ್ನು ಎಳೆದುತಂದು ಬಲವಂತವಾಗಿ ಉಪದೇಶವನ್ನು ಹೇರಿ ಗುರುವಾಗ ಬಯಸುವ ಕಲಿಗಾಲದ ಅಗುರುಗಳ ಪೈಕಿಯವನಲ್ಲ ಕೃಷ್ಣ! ಪ್ರಾಮಾಣಿಕ ಜಿಜ್ಞಾಸುವೂ ಪ್ರಪನ್ನನೂ ಆದಂತಹ ಪ್ರಥಮಾಧಿಕಾರಿಗೇ ಮಾತ್ರ ಉಪದೇಶ ಸಲ್ಲಬೇಕು. ಬೇರೆಯವರಿಗೆ ಸಂದರೆ ತಪ್ಪೇನು? ತಪ್ಪೇನೂ ಇಲ್ಲ, ಅದು ನಿಷ್ಪ್ರಯೋಜಕ, ಅಷ್ಟೇ ಅಲ್ಲ ಇಲ್ಲದ ಗೊಂದಲವನ್ನು ಸೃಷ್ಟಿಸುತ್ತದೆ.

Leave a Reply