ಭಗವದ್ಗೀತೆ – ವೀರಪಾರ್ಥ! ರಣಹೇಡಿ ಎನಿಸದಿರು!

ಭಗವದ್ಗೀತೆ – ವೀರಪಾರ್ಥ! ರಣಹೇಡಿ ಎನಿಸದಿರು!

ನಮ್ಮ ಮೂಲಸ್ವರೂಪವಾದ ಆತ್ಮವೇ ನಮಗೆ ‘ಅರ್ಥವಾಗದ ಒಗಟಾ’ಗಿರುವುದಕ್ಕೆ ನಮ್ಮ ಮನೋಬುದ್ಧಿಗಳ ‘ಕೂಪಮಂಡೂಕಸ್ಥಿತಿ’ಯೇ ಕಾರಣ ಎಂಬ ವಿಚಾರ ನೋಡಿದ್ದೇವೆ. ತತ್ವವಿಚಾರದ ನೆಲೆಯಿಂದ ಮತ್ತೊಮ್ಮೆ ಕರ್ತವ್ಯವಿಚಾರಕ್ಕೇ ಮರಳಿ ಕೃಷ್ಣನು ಅರ್ಜುನನಿಗೆ ಹೀಗೆ ಬುದ್ಧಿ ಹೇಳುತ್ತಾನೆ:
ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಂಪಿತುಮರ್ಹಸಿ|
ಧರ್ಮ್ಯಾದ್ಧಿ ಯುದ್ಧಾಚ್ಛೇಯೋsನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ||
‘ಸ್ವಧರ್ಮವನ್ನು (ಕರ್ತವ್ಯವನ್ನು) ಪರಿಗಣಿಸಿ ಆಲೋಚಿಸುವುದಾದರೂ ಸರಿ, ನೀನು ಈ ರೀತಿ ಕಂಪಿಸುವುದರಲ್ಲಿ ಅರ್ಥವಿಲ್ಲ. ಕ್ಷತ್ರಿಯನಾದವನಿಗೆ ಧರ್ಮಯುದ್ಧಕ್ಕಿಂತ ಶ್ರೇಯಸ್ಕರವಾದದ್ದು ಬೇರೊಂದಿಲ್ಲ.’
ವ್ಯಕ್ತಿಯು ತನಗೂ ತನ್ನ ವೃತ್ತಿ ಹಾಗೂ ಸಮಾಜಗಳಿಗೂ ಸಂಬಂಧಿಸಿದ ಕರ್ತವ್ಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದಲ್ಲಿ ಆತನೂ ಪತನವಾಗುವನಲ್ಲದೆ ಸಾಮಾಜಿಕ ವ್ಯವಸ್ಥೆಗೂ ಧಕ್ಕೆಯಾಗುತ್ತದೆ. ಅರ್ಜುನನು ಕ್ಷತ್ರಿಯ, ರಾಜಕುಮಾರ. ಇದೀಗ ಘೋರ ಸಾಮಾಜಿಕ ಅನ್ಯಾಯವನ್ನು ದಮನಗೊಳಿಸುವ ಕರ್ತವ್ಯ ಬಂದೊದಗಿದೆ. ಸಾಮ-ದಾನ-ಭೇದೋಪಾಯಗಳು ಫಲಿಸದ್ದರಿಂದ ‘ಯುದ್ಧ’ವೇ ಚರಮೋಪಾಯವೆನಿಸಿದೆ. ಧರ್ಮಸ್ಥಾಪನೆಗಾಗಿ ಯುದ್ಧದಲ್ಲಿ ಹೋರಾಡುವುದಕ್ಕಿಂತ ಶ್ರೇಯಸ್ಕರವಾದದ್ದು ಕ್ಷತ್ರಿಯನಾದವನಿಗೆ ಬೇರಾವುದೂ ಇಲ್ಲ! ಕೃಷ್ಣನು ತಿಳಿಹೇಳುತ್ತಿದ್ದಾನೆ:
ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಮಪಾವೃತಮ್|
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀದೃಶಮ್||
‘ಸ್ವರ್ಗದ ಬಾಗಿಲನ್ನು ತೆರೆದಿಡುವಂತಹ ಇಂತಹ ಯುದ್ಧಾವಕಾಶವು ತಾನೇ ತಾನಾಗಿ ಬಂದೊದಗುವುದು ಸುಖಿಗಳಾದ (ಭಾಗ್ಯಶಾಲಿಗಳಾದ) ಕ್ಷತ್ರಿಯರುಗಳಿಗೆ ಮಾತ್ರ.’
ಲೋಭ-ಪ್ರತೀಕಾರಾದಿಗಳಿಗಾಗಿ ಮಾಡುವ ಯುದ್ಧಗಳು ಹಲವಾರು. ಧರ್ಮೈಕಕಾರಣದ ಯುದ್ಧಗಳು ಅಪರೂಪವೆ. ಹಾಗಿರುವಾಗ, ಧರ್ಮಪಕ್ಷದಲ್ಲಿ ನಿಂತು ಧರ್ಮಯುದ್ಧಗೈಯುವ ಸೌಭಾಗ್ಯವೇ ಒದಗಿಬಂದಿದೆ ಅರ್ಜುನನಿಗೆ! ಗೆದ್ದರೂ ಮಡಿದರೂ ಸ್ವರ್ಗವಂತೂ ಸಿದ್ಧಿಸುತ್ತದೆ. ಇಂತಹ ಅಪೂರ್ವ ಅವಕಾಶವು ಕೆಲವೇ ಕ್ಷತ್ರಿಯರಿಗೆ ಸಿಗುವಂತಹದ್ದು! ‘ಇಂತಹದ್ದನ್ನು ಕಳೆದುಕೊಳ್ಳಬೇಡವೋ ಮರುಳೆ’ ಎಂದು ಕೃಷ್ಣನು ಬುದ್ಧಿ ಹೇಳುತ್ತಿದ್ದಾನೆ:
ಅಥ ಚೇತ್ ತ್ವಮಿಮಂ ಧರ್ಮ್ಯಮ್ ಸಂಗ್ರಾಮಂ ನ ಕರಿಷ್ಯಸಿ|
ತತಃ ಸ್ವಧರ್ಮಂ ಕೀರ್ತಿಂ ಚ ಹಿತ್ವಾ ಪಾಪಮವಾಪ್ಸ್ಯಸಿ||
‘ಈ ಯುದ್ಧವನ್ನು ಮಾಡದೆ ಹೋದಲ್ಲಿ, ಸ್ವಧರ್ಮವನ್ನೂ ಕೀರ್ತಿಯನ್ನೂ ಕಳೆದುಕೊಂಡು ಪಾಪವನ್ನು ಪಡೆಯುವಂತಾಗುತ್ತದೆ.’
ಕೃಷ್ಣನು ಧರ್ಮದ ನಿಲುವನ್ನು ದೃಢಪಡಿಸುತ್ತಿದ್ದಾನೆ-‘ಕರ್ತವ್ಯ’ವೆಂದರೆ ‘ಕರ್ತವ್ಯ’. ಅದನ್ನು ಸರ್ವಥಾ ಆಚರಿಸಲೇಬೇಕು. ‘ನನಗೆ’ ಯುದ್ಧಬೇಕಿಲ್ಲ, ‘ನನಗೆ’ ರಾಜ್ಯ ಸಿಗದಿದ್ದರೂ ಪರವಾಗಿಲ್ಲ, ‘ನನಗೆ’ ಸ್ವರ್ಗದ ಆಸೆ ಇಲ್ಲ-ಎಂಬ ‘ವೈಯಕ್ತಿಕ’ ಇಷ್ಟಾನಿಷ್ಟಗಳ ಲೆಕ್ಕಾಚಾರಕ್ಕಿಲ್ಲಿ ಎಡೆಯೇ ಇಲ್ಲ. ಕರ್ತವ್ಯಭ್ರಷ್ಟನಾದರೆ ಪಾಪ ಮುತ್ತಿಕೊಳ್ಳುತ್ತದೆ. ತನ್ನ ವೃತ್ತಿಯ ಘನತೆಗೂ ಕುಲದ ಕೀರ್ತಿಗೂ ಅಪಚಾರವೆಸಗಿದಂತಾಗುತ್ತದೆ. ಒಬ್ಬ ಪೋಲೀಸ್ ಅಧಿಕಾರಿ ‘ತನಗೆ ಮನಸ್ಸಿಲ್ಲ’ ಎಂದು ನೆಪವೊಡ್ಡಿ ಕರ್ತವ್ಯ ನಿರ್ವಹಿಸದೆ ಕೂತರೆ, ಅಂಥವನಿಂದ ಪೋಲೀಸ್ ವೃತ್ತಿಗೂ ರಕ್ಷಣಾ ವ್ಯವಸ್ಥೆಗೂ ಕೆಟ್ಟ ಹೆಸರು ಬರದೆ? ಅರ್ಜುನನು ಯುದ್ಧ ಕೈಬಿಟ್ಟರೆ ‘ಅವನು ಕ್ಷಾತ್ರಕುಲಕ್ಕೇ ಕಲಂಕಪ್ರಾಯ!’ ಎಂಬ ನಿಂದೆಗೆ ಗುರಿಯಾಗುವುದು ಖಂಡಿತ. ಅನವಶ್ಯಕವಾಗಿ ಅಂಥ ಅಪಕೀರ್ತಿಗೆ ಬಲಿಯಾಗಬೇಡ ಎನ್ನುತ್ತಾನೆ ಕೃಷ್ಣ:
ಅಕೀರ್ತಿಂ ಚಾಪಿ ಭೂತಾನಿ ಕಥಯಿಷ್ಯಂತಿ ತೇsವ್ಯಯಾಮ್|
ಸಂಭಾವಿತಸ್ಯ ಚಾಕೀರ್ತಿಃ ಮರಣಾದತಿರಿಚ್ಯತೇ||
‘ಎಲ್ಲರೂ ನಿನ್ನ ಅಪಕೀರ್ತಿಯನ್ನೇ ಬಹಳ ಕಾಲ ಆಡಿಕೊಳ್ಳುವಂತೆ ಆಗುತ್ತದೆ. ಸಂಭಾವಿತನಾದ ವ್ಯಕ್ತಿಗೆ ಅಪಕೀರ್ತಿಯೆನ್ನುವುದು ಮರಣಕ್ಕಿಂತಲೂ ದೊಡ್ಡ ಬಾಧೆ.’
ಮರಣವೆನ್ನುವುದು ದೇಹವನ್ನಷ್ಟೇ ಅಂತ್ಯಗೊಳಿಸುತ್ತದೆ. ಆದರೆ ಅಪಕೀರ್ತಿಯೆನ್ನುವುದು ಜೀವಂತ ವ್ಯಕ್ತಿಯ ಮಾನ-ಸಮ್ಮಾನಗಳನ್ನೇ ನುಚ್ಚುನೂರು ಮಾಡಿಬಿಡುತ್ತದೆ. ನಿರಂತರ ದೂಷಣೆ-ಅಪಹಾಸ್ಯಕ್ಕೆ ಒಳಪಟ್ಟು ಬದುಕುವುದಕ್ಕಿಂತ ಹೇಯವಾದುದಾವುದಿದೆ?
ಸದಾಚಾರಿಯೂ ಸ್ವಾಭಿಮಾನಿಯೂ ಆದ ವ್ಯಕ್ತಿಯ ಪಾಲಿಗಂತೂ ಇಂತಹ ಅಪಕೀರ್ತಿ ದುರ್ಭರವಾದದ್ದು. ಕೃಷ್ಣನು ಅಪಕೀರ್ತಿ ಹರಡಿದರೆ, ಆ ದುಃಸ್ಥಿತಿ ಹೇಗಿರುತ್ತದೆ. ಎನ್ನುವ ಚಿತ್ರಣವನ್ನು ಮುಂದಿಡುತ್ತಾನೆ:
ಭಯಾದ್ರಣಾದುಪರತಂ ಮಂಸ್ಯಂತೇ ತ್ವಾಂ ಮಹಾರಥಾಃ|
ಯೇಷಾಂ ಚ ತ್ವಂ ಬಹುಮತೋ ಭೂತ್ವಾ ಯಾಸ್ಯಸಿ ಲಾಘವಮ್||
ಅವಾಚ್ಯವಾದಾಂಶ್ಚ ಬಹೂನ್ ವದಿಷ್ಯಂತಿ ತವಾಹಿತಾಃ|
ನಿಂದಂತಸ್ತವ ಸಾಮರ್ಥ್ಯಮ್ ತತೋ ದುಃಖತರಂ ನು ಕಿಮ್||
‘ನಿನ್ನನ್ನು ಬಹಳ ಮಾನದಿಂದ ಕಾಣುತ್ತಿದ್ದವರೆಲ್ಲ ಇನ್ನು ಮುಂದೆ “ರಣರಂಗದಿಂದ ಹೆದರಿ ಓಡಿದವನು” ಎಂದೇ ನಿನ್ನನ್ನು ತುಚ್ಛವಾಗಿ ಕಾಣಲಾರಂಭಿಸುತ್ತಾರೆ. ನಿನ್ನ ಬಗ್ಗೆ ಆಡಬಾರದ ಮಾತುಗಳನ್ನು ಆಡುತ್ತಾರೆ. ನಿನ್ನ ಸಾಮರ್ಥ್ಯವನ್ನೇ ನಿಂದಿಸುತ್ತಾರೆ. ಇದಕ್ಕಿಂತ ದುಃಖತರವಾದದ್ದು ಯಾವುದಿರಲು ಸಾಧ್ಯ?
‘ಅರ್ಜುನನು ಕಾರುಣ್ಯದಿಂದ ರಣದಿಂದ ಹೊರಟುಬಿಟ್ಟ’ ಎಂದು ಜನರು ಭಾವಿಸುತ್ತಾರೇನು? ಖಂಡಿತ ಇಲ್ಲ! ‘ತಾನೇ ದೊಡ್ಡ ವೀರ ಎಂದು ಕೊಚ್ಚಿಕೊಳ್ಳುತ್ತಿದ್ದ ಅರ್ಜುನನು, ಯುದ್ಧರಂಗದಲ್ಲಿ ಕೌರವಸೈನ್ಯದ ಬಲವನ್ನು ನೋಡಿ ಹೆದರಿ ಓಡಿಹೋದ’ ಎಂದೇ ಆಡಿಕೊಳ್ಳುತ್ತಾರೆ. ಅರ್ಜುನನ ಕೀರ್ತಿಯಷ್ಟೇ ಅಲ್ಲ. ಪಾಂಡವವಂಶದ ಶೌರ್ಯಸಾಹಸಗಳ ಚಿರಕಾಲದ ಕೀರ್ತಿಯೂ ಇದರಿಂದಾಗಿ ಮಣ್ಣುಪಾಲಾಗುತ್ತದೆ. ಜನರು ಅರ್ಜುನನ ಈ ವರೆಗಿನ ಶೌರ್ಯ-ವೃತ್ತಾಂತಗಳನ್ನೂ ಗಾಳಿಗೆ ತೂರಿ ಆತನು ‘ಹೇಡಿ’ ಎಂಬುದನ್ನೇ ಎತ್ತಿ ಆಡುತ್ತ, ತೇಜೋವಧೆಗೆ ತೊಡಗುವುದು ಖಂಡಿತ. ಆಡಿಕೊಳ್ಳುವ ಚಪಲವಿರುವ ಲೋಕಜನರಿಗೆ ಅರ್ಜುನನು ತಾನಾಗಿಯೇ ಮಾತಿಗೆ ಸೊಪ್ಪು ಹಾಕಿದಂತಾಗುತ್ತದೆ. ಹೀಗೆ ಕರ್ತವ್ಯನಿಷ್ಠೆಯನ್ನೂ ಅದರ ಚ್ಯುತಿಯಿಂದಾಗಬಹುದಾದ ದುರಂತವನ್ನೂ ಅರ್ಜುನನಿಗೆ ಮನಗಾಣಿಸುತ್ತಿದ್ದಾನೆ ಕೃಷ್ಣ.
-ಡಾ. ಆರತೀ ವಿ ಬಿ
ಕೃಪೆ : ವಿಜಯವಾಣಿ

Leave a Reply