ಭವದ ಗೀತೆ – ಭಗವದ್ಗೀತೆ ೧

ಭವದ ಗೀತೆ – ಭಗವದ್ಗೀತೆ ೧

ಭಗವದ್ಗೀತೆಯ ತಾತ್ಪರ್ಯವನ್ನು ’ಇದಿಷ್ಟೇ’ ಎಂದು ಮಿತಿಗೊಳಿಸಿ ನಿರ್ವಚಿಸುವುದು ಅಸಾಧ್ಯ. ಧಾರ್ಮಿಕ, ಆಧ್ಯಾತ್ಮಿಕ, ಮನಶ್ಶಾಸ್ತ್ರೀಯ, ಯೋಗಶಾಸ್ತ್ರೀಯ ಹಾಗೂ ಸಾಮಾಜಿಕ ನೀತಿಯ ಹಿನ್ನಲೆಗಳನ್ನಿಟ್ಟುಕೊಂಡು ಬೇರೆ ಬೇರೆ ಪರಿಗಳಲ್ಲಿ ನೋಡಿದಾಗ ತತ್ಸಂಬಂಧಿತವಾದ ಅನೇಕಾಂಶಗಳನ್ನು ಗೀತೆಯಲ್ಲಿ ಅನ್ವೇಷಿಸಬಹುದು. ಗೀತೆಯಲ್ಲಿನ ಕೆಲವು ವಿಷಯಗಳು ಮಹಾಭಾರತದ ಕಾಲದೇಶಸಂಸ್ಕೃತಿಗಳ ಹಿನ್ನಲೆಯಲ್ಲಿ ಅರ್ಥವಾಗುತ್ತವೆಯಾದರೆ, ಮತ್ತೆ ಕೆಲವು ವಿಚಾರಗಳು ದೇಶಕಾಲಾತೀತವಾದ ಸಾರ್ವಕಾಲಿಕ ನೀತಿಗಳಾಗಿಯೂ ಬೆಳಗಿ ತೋರುತ್ತವೆ. ಹೀಗೆ, ಹಲವಾರು ಆಯಾಮಗಳ ಗೀತೆಗೆ ಹಲವು ದರ್ಶನಗಳು ಒದಗಿ ಬಂದಿರುವುದು ಸಹಜವೆ. ಗೀತೆಯು ಜ್ಞಾನಮಯವಾದ ಒಂದು ತೇಜಸ್ಸಾಗರ, ಇಲ್ಲಿನ ಒಂದಷ್ಟು ಬಿಂದುಗಳನ್ನು ಯಥಾಶಕ್ತಿ ಸಂಗ್ರಹಿಸಿ ನಮ್ಮ ದಿನನಿತ್ಯದ ಜೀವನವನ್ನು ಬೆಳಗಿಕೊಳ್ಳುವ ನಮ್ರ ಯತ್ನವನ್ನು ಇಲ್ಲಿ ಮಾಡುತ್ತ ಸಾಗೋಣ.
’ಉಪನಿಷತ್ತುಗಳೆಂಬ ಹಸುಗಳ ಜ್ಞಾನಾಮೃತವೆಂಬ ಹಾಲನ್ನು ಪಾರ್ಥನೆಂಬ ಕರುವಿನ ನಿಮಿತ್ತವಾಗಿ ನಮಗೆಲ್ಲ ಕರೆದು ಕೊಟ್ಟ ದಿವ್ಯ ಗೋವಳನು ಶ್ರೀಕೃಷ್ಣ’ ಎಂದು ಸ್ತುತಿಸಿದ ಗೀತಾಧ್ಯಾನಶ್ಲೋಕಗಳ ತಾತ್ಪರ್ಯವನ್ನು ಈಗಾಗಲೇ ನೋಡಿದ್ದೇವೆ. ಈಗ ಅಧ್ಯಾಯಗಳ ತಾತ್ಪರ್ಯ-ಸ್ವಾರಸ್ಯ-ಸಂದೇಶಗಳನ್ನು ಸ್ಥೂಲವಾಗಿ ಅವಲೋಕಿಸೋಣ.
ಪ್ರಥಮಾಧ್ಯಾಯ – ಅರ್ಜುನವಿಷಾದಯೋಗ
ಈ ಅಧ್ಯಾಯವು ಭಗವದ್ಗೀತೆಯ ಪೀಠಿಕಾಭಾಗ. ಇಲ್ಲಿ ಯುದ್ಧದ ಸಂದರ್ಭವನ್ನೂ, ಯುದ್ಧಕ್ಕೆ ಸನ್ನದ್ಧರಾಗಿ ಬಂದ ಯೋಧರ ಬಗ್ಗೆಯೂ ಹಾಗೂ ಆ ಸಂದರ್ಭದಲ್ಲಿ ನಡೆದ ಕೃಷ್ಣಾರ್ಜುನರ ಸಂಭಾಷಣೆಯನ್ನೂ ವಿವರಿಸಲಾಗಿದೆ. ಕುರುಡನಾದ ರಾಜ ಧೃತರಾಷ್ಟ್ರನು ದೂರದ ರಾಜಭವನದಲ್ಲಿ ಕುಳಿತು ಯುದ್ಧರಂಗದ ವಿವರಗಳನ್ನು ತಿಳಿಯಲು ಬಯಸಿದ. ಶ್ರೀಕೃಷ್ಣನು ಕರುಣಿಸಿದ ದಿವ್ಯದೃಷ್ಟಿಯ ಸಹಾಯದಿಂದ ಕುಳಿತಲ್ಲಿಂದಲೇ ಯುದ್ಧಭೂಮಿಯ ಆಗುಹೋಗುಗಳನ್ನು ವೀಕ್ಷಿಸುತ್ತ ಅದೆಲ್ಲವನ್ನೂ ಆತನಿಗೆ ವಿವರಿಸಿದವನು ಸಾರಥಿಯಾದ ಸಂಜಯ. ಧೃತರಾಷ್ಟ್ರನ ಪ್ರಶ್ನೆಯೊಂದಿಗೆ ಈ ಅಧ್ಯಾಯ ಪ್ರಾರಂಭ-
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ I ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ II ೧ II
(ಸಂಜಯ! ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ನೆರೆದಿರುವ ಯುದ್ಧೋತ್ಸಾಹಿಗಳು, ಅಲ್ಲಿರುವ ನನ್ನವರೂ (ಕೌರವರು) ಹಾಗೂ ಪಾಂಡವರೂ ಇದೀಗ ಏನು ಮಾಡುತ್ತಿದ್ದಾರೆ?)
ಗೀತೆಯ ಮೊದಲ ಶ್ಲೋಕದ ಮೊದಲ ಪದವು ‘ಧರ್ಮ’ ಎನ್ನುವ ಮಂಗಲವಾಚಕ ಶಬ್ದದೊಂದಿಗೆ ಪ್ರಾರಂಭವಾಗಿದೆ. ’ಧರ್ಮ’ ಶಬ್ದದ ಅರ್ಥವಿಶೇಷದ ವ್ಯಾಪ್ತಿ-ವೈಶಾಲ್ಯಗಳು ಅತಿ ವಿಸ್ತಾರವಾದ ವ್ಯಾಖ್ಯಾನಕ್ಕೆ ಆಸ್ಪದ ಕೊಡುತ್ತದೆ. ’ಧರ್ಮಯುದ್ಧ’ ಎಂಬ ಪದದಲ್ಲಿ ಧರ್ಮ ಎಂಬ ಪದದ ಅರ್ಥವಿಶೇಷಗಳೂ ಸೇರಿವೆ. ಆದರೆ ಇಲ್ಲಿನ ಸಂದರ್ಭಕ್ಕೆ ಬೇಕಾದಷ್ಟನ್ನು ಮಾತ್ರ ಸಂಗ್ರಹವಾಗಿ ಹೇಳುವುದಾದರೆ – ಕುರುಕ್ಷೇತ್ರ ಯುದ್ಧವು ಧರ್ಮವನ್ನು ಸ್ಥಾಪಿಸುವ ಸಲುವಾಗಿ ನಡೆದ ಯುದ್ಧ. ಅರ್ಥಸಾಧನೆ ಅಥವಾ ಕಾಮಪ್ರಾಪ್ತಿಗಾಗಿ ನಡೆದ ಯುದ್ಧಗಳು ಮಾನವ ಇತಿಹಾಸದಲ್ಲಿ ಸರ್ವೇಸಾಮಾನ್ಯ. ಆದರೆ ಕುರುಕ್ಷೇತ್ರ ಯುದ್ಧವು ಮೇಲ್ನೋಟಕ್ಕೆ ರಾಜ್ಯಪ್ರಾಪ್ತಿಗಾಗಿ ನಡೆದ ಯುದ್ಧವೇ ಆದರೂ, ಅದು ದೌಷ್ಟ್ಯದಮನ ಹಾಗೂ ಧರ್ಮಸ್ಥಾಪನದ ನಿರ್ಣಾಯಕ ಘಟ್ಟವಾಗಿದೆ.
ಲೋಭ-ಸ್ವಾರ್ಥ-ಮಾತ್ಸರ್ಯಗಳನ್ನು ತೋರಿದ, ಕುಯುಕ್ತಿಗಳ ಮೂಲಕ ’ತಾನು ಹೇಳುವುದೇ ಧರ್ಮ, ತಾನು ಮಾಡಿದ್ದೇ ಸರಿ’ ಎಂದು ಹಟ ತೊಟ್ಟ ದುರ್ಯೋಧನ ,ಮತ್ತು ಅವನ ಅನುವರ್ತಿಗಳದ್ದು ಒಂದು ಪಕ್ಷ. ತನ್ನ ಪರಿವಾರಕ್ಕೂ, ಕುಲನಾರಿಗೂ, ಶಾಂತಸಮೃದ್ಧ ರಾಜ್ಯಪಾಲನೆಗೂ ಪ್ರಜಾಹಿತಕ್ಕೂ ನಿಷ್ಕಾರಣವಾಗಿ ಧಕ್ಕೆ ತಂದ ದುರ್ಯೋಧನಾದಿಗಳನ್ನು ದಮನ ಮಾಡಿ ತನ್ನ ಸ್ವತ್ತನ್ನೂ ನ್ಯಾಯವನ್ನೂ ಪಡೆಯುವ ಸಲುವಾಗಿ ನಿಂತ ಯುಧಿಷ್ಠಿರಾದಿಗಳದ್ದು ಮತ್ತೊಂದು ಪಕ್ಷ. ರಾಜ್ಯಪ್ರಾಪ್ತಿಯ ವಿಷಯ ಈ ಇಬ್ಬರಿಗಷ್ಟೇ ಸೀಮಿತವಾಗಿದ್ದರೂ, ಈ ಯುದ್ಧದಲ್ಲಿ ಭಾಗವಹಿಸಿದವರ ಸಂಖ್ಯೆ ಮಾತ್ರ ಅಪಾರ. ವೈಯಕ್ತಿಕ ನಿಷ್ಠೆ ಹಾಗೂ ಸಮಷ್ಟಿ ಧರ್ಮದ ನಡುವಿನ ವೈರುಧ್ಯಗಳ ಗೊಂದಲದಲ್ಲಿ ಸಿಕ್ಕ ಭೀಷ್ಮಾದಿಗಳು ಈ ಯುದ್ಧದಲ್ಲಿದ್ದರು. ಸ್ವಾರ್ಥದಿಂದಲೋ ಭಯದಿಂದಲೋ ಸಹಜವಾಗಿಯೇ ಬಲಿಷ್ಠರ ಪಕ್ಷವೆನಿಸಿದ ದುರ್ಯೋಧನನ ಪಕ್ಷಕ್ಕೆ ಸೇರಿದವರು ಹಲವರು. ಸೋಲುಗೆಲುವುಗಳ ಲೆಕ್ಕಾಚಾರವನ್ನು ಬಿಟ್ಟು ಧರ್ಮಪಕ್ಷಿಯಾದ ಯುಧಿಷ್ಟಿರನನ್ನು ನಿಷ್ಠೆಯಿಂದ ಬೆಂಬಲಿಸಿ ಧರ್ಮಕ್ಕೆ ಜಯವನ್ನು ಕೋರಿದವರು ಕೆಲವರು. ಹೀಗೆ ಅಸಂಖ್ಯ ರಾಜವಂಶಗಳು, ಕ್ಷತ್ರಿಯ ವೀರರೂ ಈ ಯುದ್ಧದಲ್ಲಿ ಭಾಗಿಗಳಾದರು. ಗೆದ್ದವರಿಗೆ ರಾಜ್ಯಲಾಭ, ಸೋತವರಿಗೆ ರಣರಂಗದಲ್ಲಿ ಹೋರಾಡಿದ ಹೆಮ್ಮೆ, ಸತ್ತವರೆಲ್ಲರಿಗೂ ವೀರಸ್ವರ್ಗ — ಅದಲ್ಲದೆ ಎಲ್ಲ ಯೋಧರೂ ತಮ್ಮ ಕ್ಷಾತ್ರತೇಜಸ್ಸನ್ನೂ, ರಣಚಾತುರ್ಯವನ್ನೂ, ಧರ್ಮನಿಷ್ಠೆಯನ್ನೂ ಪ್ರದರ್ಶಿಸಲು ಇದೊಂದು ಅಪೂರ್ವ ಅವಕಾಶವೂ ಆಯಿತು!
ಧರ್ಮಯುದ್ಧದಲ್ಲಿ ನಿರ್ದಿಷ್ಟ ನೀತಿ ರೀತಿಗಳುಂಟು. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಯುದ್ಧ ಮಾಡಬೇಕು, ರಾತ್ರಿ ಮಲಗಿದವರ ಮೇಲೆ ಮುತ್ತಿಗೆ ಹಾಕುವಂತಿಲ್ಲ, ಪದಾಥಿಯೊಂದಿಗೇ ಪದಾಥಿ-ರಥಿಕನೊಂದಿಗೆ ರಥಿಕ-ಅಶ್ವಾರೂಢನೊಂದಿಗೆ ಅಶ್ವಾರೂಢ-ಗಜಾರೂಢನೊಂದಿಗೆ ಗಜಾರೂಢರುಗಳೇ ಹೋರಾಡಬೇಕು. ಶಸ್ತ್ರಸಹಿತರು ಶಸ್ತ್ರಹೀನರ ಮೇಲೆ ಎರಗುವಂತಿಲ್ಲ, ಗೊತ್ತಿಲ್ಲದೆ ಹಿಂದಿನಿಂದ ಇರಿಯುವಂತಿಲ್ಲ, ಯುದ್ಧ ಮುಗಿದ ಮೇಲೆ ಯುದ್ದಪೂರ್ವದ ಒಪ್ಪಂದಗಳಂತೆ ಎಲ್ಲವೂ ನಡೆಯಬೇಕು—-ಹೀಗೆ ಹಲವಾರು ನಿಯಮಗಳಿಂದ ಬದ್ಧವಾಗಿದ್ದರಿಂದ ಇದು ’ಧರ್ಮಯುದ್ಧ’.
ಎಲ್ಲಕ್ಕಿಂತ ಮಿಗಿಲಾಗಿ ಧರ್ಮಮೂರ್ತಿಯಾದ ಯೋಗೇಶ್ವರ ಶ್ರೀಕೃಷ್ಣನೇ ಈ ಯುದ್ಧದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದ. ಸತ್ಯಧರ್ಮನಿಷ್ಠರಾದ ಪಾಂಡವರಿಗೆ ಮಾರ್ಗದರ್ಶನ ಮಾಡುತ್ತ, ಕೌರವರ ಕಪಟ-ಕೂಟತಂತ್ರಗಳನ್ನೆಲ್ಲ ಧ್ವಂಸಮಾಡಿದ, ಬಲದಿಂದ ಊರ್ಝಿತರಾಗಿದ್ದ ದುಷ್ಟರ ಮದವನ್ನಡಗಿಸಿದ, ಸೋತುಸೊರಗಿದ್ದ ಶಿಷ್ಟರಲ್ಲಿ ಛಲವನ್ನೂ ಬಲವನ್ನೂ ಪ್ರೇರಣೆಯನ್ನೂ ತುಂಬಿದ, ಅಧಿಕಾರ, ಬಲ, ಸೇನಾಸಂಖ್ಯೆಗಳು ಹೆಚ್ಚಾಗಿದ್ದರೂ ಅಧರ್ಮಪಕ್ಷಿಗಳಾದ ಕೌರವರು, ಅಧಿಕಾರಹೀನರೂ, ಸಣ್ಣ ಸೈನ್ಯದವರೂ ಆದ ಪಾಂಡವರಿಗೆ ಸೋಲಬೇಕಾಯಿತು! ಏಕೆಂದರೆ ಧರ್ಮವು ಅವರ ಕಡೆ ಇತ್ತು! ಹೀಗೆ ಅದೆಷ್ಟೇ ಬೀಗಿದರೂ ಆರ್ಭಟಿಸಿದರೂ ಅಧರ್ಮವು ಧರ್ಮದ ಮುಂದೆ ಕೊನೆಗೂ ಸೋಲಲೇ ಬೇಕೆಂಬ ದೊಡ್ಡ ಸತ್ಯಕ್ಕೆ ಈ ಮಹಾಯುದ್ಧವು ಜ್ವಲಂತ ನಿದರ್ಶನವಾಯಿತು. ಹಾಗಾಗಿ ಇದು ’ಧರ್ಮಯುದ್ಧ’ ಎನಿಸಿದೆ. ಇಂತಹ ಧರ್ಮನಿರ್ಣಾಯಕವಾದ ಯುದ್ಧಕ್ಕೆ ಆಶ್ರಯವಾದ ಕುರುಕ್ಷೇತ್ರವನ್ನು ಇಲ್ಲಿ ’ಧರ್ಮಕ್ಷೇತ್ರ’ ಎಂದೇ ಕರೆದಿರುವುದು ಅರ್ಥಪೂರ್ಣ.
-ಡಾ ಆರತೀ ವಿ ಬಿ

ಕೃಪೆ : ವಿಜಯವಾಣಿ

Leave a Reply