ಮೊದಲು ಕಾಮವನ್ನು ಜಯಿಸು

ಮೊದಲು ಕಾಮವನ್ನು ಜಯಿಸು

‘ನಮ್ಮೊಳಗೇ ಹುಟ್ಟಿ ನಮ್ಮಲ್ಲೇ ಇದ್ದುಕೊಂಡು ನಮ್ಮನ್ನು ದಾರಿತಪ್ಪಿಸುವ ಕಾಮವೇ ನಿಜವಾದ ವೈರಿಯೆಂದು ತಿಳಿ’ ಎಂದು ಕೃಷ್ಣನು ಹೇಳುತ್ತಿದ್ದನಷ್ಟೆ? ಮುಂದುವರೆಸುತ್ತಾನೆ; ‘ಹೊಗೆಯಿಂದ ಬೆಂಕಿಯೂ, ಧೂಳಿನಿಂದ ಕನ್ನಡಿಯೂ, ಉಲ್ಬದಿಂದ ಗರ್ಭವೂ ಆವರಿಸಲ್ಪಡುವಂತೆ ನಿತ್ಯವೈರಿಯೂ ಪೂರೈಸಲಾಗದಂತಹದ್ದೂ ಆದ ಕಾಮದಿಂದ ಜ್ಞಾನಿಯು ಆವರಿಸಲ್ಪಡುತ್ತಾನೆ.’ (3.38)
ನಮ್ಮ ಅರಿವಿಗೆ ಮಂಕು ಕವಿಯುವುದು ‘ಕಾಮ’ದಿಂದಾಗಿ ಎಂದು ತಾತ್ಪರ್ಯ. ಹೊಗೆಯು ಬೆಂಕಿಯನ್ನಾವರಿಸಿ ಅದರ ಕಾಂತಿಯನ್ನು ಮುಚ್ಚಿಹಾಕುತ್ತದೆ; ಧೂಳು ಕನ್ನಡಿಯನ್ನಾವರಿಸಿ ಏನೂ ಪ್ರತಿಬಿಂಬಿಸದಂತೆ ಮಾಡುತ್ತದೆ; ಉಲ್ಬವು (ಗರ್ಭದ ಚೀಲವು) ಗರ್ಭವನ್ನು ಮುಚ್ಚಿಹಾಕುತ್ತಾದೆ. ಅಂತೆಯೇ ಕಾಮವು ಮನುಷ್ಯನ ಜ್ಞಾನವನ್ನು ಆವರಿಸಿ ಮಂಕಾಗಿಸುತ್ತದೆ.
‘ಏನೋ ಸ್ವಲ್ಪ ಆಸೆ. ಅದನ್ನು ಪೂರೈಸಿಕೊಂಡುಬಿಡೋಣ. ಆಮೇಲೆ ನಿಶ್ಚಿಂತರಾಗಿರೋಣ’ ಎಂಬ ಭ್ರಾಂತಿಯಲ್ಲೇ ನಾವಿರುತ್ತೇವೆ! ಆದರೆ ವಾಸ್ತವಿಕವಾಗಿ ಕಾಮವು ಪೂರೈಸಲಾಗದಂತಹದ್ದು! ಸಮುದ್ರದಲ್ಲಿ ನಿರಂತರವೂ ಚಿಕ್ಕ-ದೊಡ್ಡ ಅಲೆಗಳು ಎದ್ದೆದ್ದು ಬೀಳುತ್ತಲೇ ಇರುವಂತೆ, ಆಸೆಗಳಲೆಗಳು ಎದ್ದೆದ್ದು ಬರುತ್ತಲೇ ಇರುತ್ತವೆ! ಈ ಅರಿವು ಮೂಡುವನಕ, ಮನುಷ್ಯನು ‘ಇಷ್ಟು¬-ಅಷ್ಟು¬-ಇನ್ನಷ್ಟು¬-ಮತ್ತಷ್ಟು¬’ ಎಂದು ಆಸೆಗಳನ್ನು ‘ಪೂರೈಸಿಕೊಳ್ಳುವ’ ಹುಚ್ಚಿನಿಂದ ಓಡುತ್ತಲೇ ಇರುವುದು ತಪ್ಪದು!
‘ಈ ಕಾಮವು ನೆಲೆಸುವುದು ಮನೋಬುದ್ಧೀಂದ್ರಿಯಗಳಲ್ಲಿ. ಅಲ್ಲಿದ್ದು ಮನುಷ್ಯನ ಜ್ಞಾನವನ್ನಾವರಿಸಿಬಿಡುತ್ತದೆ.’ (3-39)
ಮನುಷ್ಯನು ಹೊರಜಗತ್ತಿನೊಂದಿಗೆ ಸಂಪರ್ಕವನ್ನು ಪಡೆಯುವುದು ಕಣ್ಣು ಕಿವಿ ಮೂಗು ನಾಲಗೆ ಚರ್ಮಗಳ ಮೂಲಕ. ಅದರ ಮೂಲಕ ಹೊರ ಹರಿಯುವುದು ಮನಸ್ಸು. ತತ್ಸಂಬಂಧಿತ ಸಂಗತಿಗಳನ್ನು ವಿಚಾರ ಮಾಡುವುದು ಬುದ್ಧಿ. ಇಂದ್ರಿಯಗಳು ಹೊರಜಗತ್ತಿನ ಸಂಪರ್ಕದಲ್ಲಿ ಅನುಭವಿಸುವ ಭೋಗವನ್ನು ನಿಯಂತ್ರಿಸಿದರೆ ಚೆನ್ನ. ಆರೋಗ್ಯ, ನೆಮ್ಮದಿ, ಸಂತೋಷಗಳು ಉಳಿಯುತ್ತವೆ. ಮನಸ್ಸು ಅಗತ್ಯವಿದ್ದಷ್ಟೇ ತೊಡಗಿಕೊಂಡಾಗಲೂ ಸಮಸ್ಯೆಯೇಳದು! ಆದರೆ ಮನಸ್ಸಿನಲ್ಲಿ ಕಾಮವೆಂಬ ಭೂತ ಸೇರಿತೆನ್ನಿ! ಈ ಇಂದ್ರಿಯಾನುಭವಗಳನ್ನು ‘ಇಷ್ಟ-ಇಷ್ಟವಿಲ್ಲ’, ‘ಅದು ಬೇಕು, ಇದು ಬೇಡ’, ‘ಅದು ಉಚ್ಚ-ಇವ ನೀಚ’ ಎಂದು ಬಣ್ಣ ಬಳಿದು ನೋಡಲಾರಂಭಿಸುತ್ತದೆ. ಬುದ್ಧಿಯು ‘ಸಾಕು, ಬೇಡ, ಇದು ತಪ್ಪು!’ ಎಂದೆಲ್ಲ ಮೊದಮೊದಲು ಮನಸ್ಸಿಗೆ ಬೋಧಿಸುತ್ತದೆ. ಆದರೆ ಮನಸ್ಸಿನ ಕಾಮವು ಬುದ್ಧಿಗೂ ಸಂಕ್ರಮಿಸಿದಾಗ, ಬುದ್ಧಿಯು ಭಾವನೆಗಳ ಕೀಳುಗೊಂಬೆಯಾಗಿಬಿಡುತ್ತದೆ! ಅಹರ್ನಿಶಿಯೂ ಇಂದ್ರಿಯಾನುಭವಗಳ ಹುಚ್ಚನ್ನು ಕಾಮವು ಹುಟ್ಟಿಸುವುದರ ಮೂಲಕ ಮನೋಬುದ್ಧಿಗಳನ್ನು ಧೃತಿಗೆಡಿಸುತ್ತದೆ!
ಮುಗಿಯದ ಬಯಕೆಗಳನ್ನು ತೀರಿಸಿಕೊಳ್ಳಲು ಮನುಷ್ಯನ ಬುದ್ಧಿಯು ಏನೇನೋ ಸದಸದುಪಾಯಗಳನ್ನು ಹೂಡತೊಡಗುತ್ತದೆ! ತನ್ನ ಕಾಮಕ್ಕೆ ಪೂರಕವೆನಿಸುವುದನ್ನೆಲ್ಲ ಬಾಚಿ ಹಿಡಿಯಲೂ, ಹಾಗೂ ಕಾಮಕ್ಕೆ ಅಡ್ಡವೆನಿಸುವುದನ್ನೆಲ್ಲ ತೊಡೆದುಹಾಕಲು ಶ್ರಮಿಸುತ್ತಿರುತ್ತದೆ! ಗತಿಸಿ ಹೋಗುತ್ತಿರುವ ಸಮಯ, ಆಯುಸ್ಸು ಹಾಗೂ ಅವಕಾಶಗಳನ್ನೂ ಗಣಿಸದೆ ಆಜೀವನವೂ ‘ಅದಿದನ್ನು ಪಡೆಯುವ’ ಹಾಗೂ ‘ಅವರಿವರನ್ನು ದ್ವೇಷಿಸುವ’ ಹುಚ್ಚೋಟದಲ್ಲಿ ತೊಡಗುವಂತೆ ಮಾಡಿಬಿಡುತ್ತದೆ! ಹೀಗೆ ಮನುಷ್ಯನು ಕಾಮದ ಬಿರುಗಾಳಿಗೆ ಸಿಕ್ಕ ಎಂಜಲೆಲೆಯಾಗಿ, ಭೋಗಾತುರದಲ್ಲಿ ಅತ್ತಿಂದಿತ್ತ ಪರದಾಡುತ್ತಲೇ ಇರುತ್ತಾನೆ, ಅದು ಮುಗಿಯದಾಗಿ ಸೋತು ಸೊರಗುತ್ತಾನೆ!
ಆದ್ದರಿಂದ, ‘ಓ ಭರತರ್ಷಭನೆ! ಮೊದಲು ಇಂದ್ರಿಯಾದಿಗಳನ್ನು ನಿಯಮಿಸು. ಜ್ಞಾನ-ವಿಜ್ಞಾನಗಳೆರಡನ್ನೂ ನಾಶಗೈಯುವ ಈ ಪಾಪಿ ಕಾಮವನ್ನು ಜಯಿಸು.’ (3.40)
ಇಂದ್ರಿಯಗಳನ್ನೂ, ಮನಸ್ಸನ್ನೂ ಹದ್ದಿಕ್ಕಿ, ಬುದ್ಧಿಯನ್ನು ಧರ್ಮದ ಚೌಕಟ್ಟಿನಲ್ಲಿಟ್ಟು ಪರಿಷ್ಕರಿಸಬೇಕು. ಆಗ ಲೋಕಜೀವನಕ್ಕೆ ಬೇಕಾದ ‘ಜ್ಞಾನ’ವೂ ಇಂದ್ರಿಯಲೋಲುಪತೆಯಲ್ಲಿ ಬಗ್ಗಡವಾಗದೆ, ಧರ್ಮದಲ್ಲಿ ಮುನ್ನಡೆಯುತ್ತದೆ. ಅಂತಹ ನಿರ್ಮಲವೂ ಶಾಂತವೂ ಆದ ಬುದ್ಧಿಯಲ್ಲಿ ಲೋಕೋತ್ತರವಾದ ತತ್ವಾವಬೋಧೆಗೆ ಬೇಕಾದ ‘ವಿಜ್ಞಾನ’ವೂ ಉದಿಸಲು ಶಕ್ಯ. ಆದರೆ ಕಾಮವೆಂಬ ವೈರಿಯು ಈ ಮನೋಬುದ್ಧೀಂದ್ರಿಯಗಳನ್ನು ಆವರಿಸಿದರೆ, ಐಹಿಕ ಜೀವನಕ್ಕೆ ಉಪಕರಣವಾದ ‘ಜ್ಞಾನ’ವೂ ಕೆಡುತ್ತದೆ, ಪರಮಾರ್ಥದ ಬೋಧೆಗೆ ಉಪಕರಣವಾದ ‘ವಿಜ್ಞಾನ’ವೂ ಕೆಡುತ್ತದೆ! ಕಾಮವಶನಾದ ಮನುಷ್ಯನು ಲೌಕಿಕಜೀವನದಲ್ಲಿ ಧರ್ಮದ ಚೌಕಟ್ಟಿನಲ್ಲಿ ಬದುಕುವ ತಾಳ್ಮೆ ಕಳೆದುಕೊಳ್ಳುತ್ತಾನೆ. ಭೋಗಾತುರದಲ್ಲಿ ಅಡ್ಡದಾರಿಗಳನ್ನು ಹಿಡಿದು, ಪಾಪಗಳನ್ನೆಸಗಿ, ಸುತ್ತಲಿನವರಿಗೂ ಹಾನಿಯುಂಟುಮಾಡುತ್ತಾನೆ. ಇಂತಹ ದಿಕ್ಕೆಟ್ಟವನಿಗೆ ಪರಮಾರ್ಥ ಚಿಂತನೆಯಂತೂ ಬಲುದೂರದ ಮಾತು ಬಿಡಿ! ಹೀಗೆ ಇಹದಲ್ಲೂ ಪಾಪಕ್ಕಿಳಿಸುತ್ತ, ಪರಮಾರ್ಥಕ್ಕೂ ಏರಲಾಗದಂತೆ ಮನುಷ್ಯನನ್ನು ಕಂಗೆಡಿಸುವ ಕಾಮವು ‘ವೈರಿ’ಯಲ್ಲದೆ ಮತ್ತೇನು? ‘ಇದನ್ನು ಮೊದಲು ಜಯಿಸು’ ಎಂಬ ಕೃಷ್ಣನ ಮಾತು ಬಹಳ ಅರ್ಥಪೂರ್ಣ!

ಡಾ. ಆರತೀ ವಿ. ಬಿ.

ಕೃಪೆ : ವಿಜಯವಾಣಿ 

Leave a Reply