ಯಜ್ಞ ಎಂದರೇನು?

ಯಜ್ಞ ಎಂದರೇನು?

‘‘ಲೌಕಿಕರಂತೆ ಅನಗತ್ಯ ಕರ್ಮಗಳ ಜಾಲದಲ್ಲಿ ಸಿಲುಕಬೇಡ, ಮಾಡಬೇಕಾದ ಧರ್ಮಕರ್ಮಗಳನ್ನು ‘ಯಜ್ಞ’ಭಾವದಿಂದ ಮಾಡು. ಆಗ ಬಂಧನವಾಗದು’’ ಎಂದು ಕೃಷ್ಣನು ತಿಳಿಹೇಳುತ್ತಿದ್ದಾನಷ್ಟೆ? ‘ಯಜ್ಞ’ದ ಕುರಿತಾಗಿ ಮುಂದೆ ಹೀಗೆ ಹೇಳುತ್ತಾನೆ:
ಸಹಯಜ್ಞಾಃ ಪ್ರಜಾಃ ಸೃಷ್ಟಾ ಪುರೋ ವಾಚಾ ಪ್ರಜಾಪತಿಃ |
ಅನೇನ ಪ್ರಸವಿಷ್ಯಧ್ವಂ ಏಷವೊಸ್ತಿಷ್ಟಕಾಮಧುಕ್ ||
ದೇವಾನ್ ಭಾವಯತಾನೇನ ತೇ ದೇವಾಃ ಭಾವಯಂತು ವಃ |
ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯ ||
(ಭ.ಗೀ. 3.10-11)
ಪ್ರಜಾಪತಿಯು (ಬ್ರಹ್ಮನು) ‘ಯಜ್ಞ’ದ ಮೂಲಕ ಸೃಷ್ಟಿಯನ್ನು ಮಾಡಿ ಎಲ್ಲರಿಗೂ ಹೇಳಿದನು; ‘ನೀವು ಯಜ್ಞದ ಮೂಲಕ ಉತ್ಕರ್ಷ ಹೊಂದಿ, ಯಜ್ಞವು ನಿಮ್ಮೆಲ್ಲ ಇಷ್ಟಾರ್ಥಗಳನ್ನು ಪೂರೈಸುವ ಕಾಮಧೇನುವಾಗಲಿ. ದೇವತೆಗಳನ್ನು (ಯಜ್ಞದಿಂದ) ಸಂತುಷ್ಟಗೊಳಿಸಿ, ದೇವತೆಗಳು ನಿಮ್ಮನ್ನು (ವರದಾನಗಳಿಂದ) ಸಂತುಷ್ಟಗೊಳಿಸಲಿ. ಪರಸ್ಪರರನ್ನು ತೃಪ್ತಿಪಡಿಸುತ್ತ ಪರಮ ಶ್ರೇಯಸ್ಸನ್ನು ಹೊಂದಿ’ ಎಂದು. ಈ ಶ್ಲೋಕಗಳಲ್ಲಿನ ಮುಖ್ಯಾಂಶಗಳು:
ಪ್ರಜಾಪತಿಯು ಸೃಷ್ಟಿಯನ್ನೇ ‘ಯಜ್ಞ’ವಾಗಿ ಮಾಡಿದ್ದಾನೆ.
ಬ್ರಹ್ಮನು ‘ಯಜ್ಞವನ್ನು ಮಾಡಿರಿ’ ಎಂದು ಸೃಷ್ಟಿಯ ಆದಿಯಲ್ಲೇ ಎಲ್ಲರಿಗೂ ನಿರ್ದೇಶಿಸಿದ್ದಾನೆ
ಯಜ್ಞದ ಮೂಲಕ ಉತ್ಕರ್ಷವನ್ನು ಹೊಂದಬಹುದು.
ಯಜ್ಞದ ಮೂಲಕ ದೇವತೆಗಳನ್ನು ತುಷ್ಟಿಪಡಿಸಬಹುದು.
ತುಷ್ಟರಾದ ದೇವತೆಗಳು (ನಮಗೆ ವರಗಳನ್ನು ಕೊಡುತ್ತಾರೆ).
ಮಾನವರು ದೇವತೆಗಳು ಪರಸ್ಪರರಿಗೆ ಶ್ರೇಯಸ್ಕರರಾಗಲು ಯಜ್ಞವೇ ಸಾಧನ.
ಇಂತಹ ವೈವಿಧ್ಯಮಯವಾದ ಸೋಜಿಗದ ಸೃಷ್ಟಿಯನ್ನು ಮಾಡುವಾಗ ಬ್ರಹ್ಮನೂ ಅದನ್ನು ‘ಯಜ್ಞ’ವಾಗಿ ಮಾಡಿದ್ದಾನಂತೆ! ‘ಯಜ್ಞ’ ಎಂದರೇನು? ‘ಯಜ್ಞ’ ಎನ್ನುವ ಶಬ್ದದ ಅರ್ಥವ್ಯಾಪ್ತಿಯು ದೊಡ್ಡದು. ಕೆಲವು ಅರ್ಥಗಳನ್ನು ನೋಡೋಣ:
ಉದ್ದೇಶಶುದ್ಧಿ, ಕ್ರಮಶುದ್ಧಿಗಳಿಂದ ಕೂಡಿದಂತಹ ವೇದೋಕ್ತ ಅಥವಾ ಔಪಾಸನಾತ್ಮಕ ಕರ್ಮಗಳು ‘ಯಜ್ಞ’ಗಳೆನಿಸುತ್ತವೆ. ನಿಷ್ಠೆ-ಶ್ರದ್ಧೆಗಳಿಂದ ಅಚ್ಚುಕಟ್ಟಾಗಿ ಪಾಲಿಸುವ ಎಲ್ಲ ಕರ್ತವ್ಯಕರ್ಮಗಳೂ ‘ಯಜ್ಞ’ಗಳೇ. (ಇದನ್ನೇ ಬಸವಣ್ಣನವರು ಸರಳವಾಗಿ ‘ಕಾಯಕವೇ ಕೈಲಾಸ’ ಎಂದು ಒಕ್ಕಣಿಸಿದ್ದಾರೆ.) ಪ್ರತಿಫಲಾಪೇಕ್ಷೆ ಅಥವಾ ಭೋಗಪ್ರಾಪ್ತಿಯ ಸಂಕಲ್ಪವಿಲ್ಲದೆ, ನಿಃಸ್ವಾರ್ಥವಾಗಿ, ಪರಹಿತಕ್ಕಾಗಿ, ದೇಶ-ಧರ್ಮ-ವಿಶ್ವಗಳ ಹಿತಕ್ಕಾಗಿ ಮಾಡುವ ಲೋಕೋಪಯೋಗಿ ಸೇವಾಕರ್ಮಗಳೂ ‘ಯಜ್ಞ’ವೆನಿಸುತ್ತವೆ. ದೈವೇಚ್ಛೆಗೆ ಸಂಪೂರ್ಣ ಮಣಿದು, ಜೀವನದ ಎಲ್ಲ ಸುಖದುಃಖಗಳನ್ನೂ ಇದ್ದಂತೆ ಅಂಗೀಕರಿಸುತ್ತ, ತಾಳ್ಮೆ-ಉಲ್ಲಾಸಗಳಿಂದ ಎದುರಿಸುವ ಬದುಕಿನ ಬಗೆಯನ್ನು ‘ಯಜ್ಞ’ವೆಂದು ಶ್ರೀಕೃಷ್ಣನು ಹಿಂದೆ ವಿವರಿಸಿದ್ದನ್ನು ನೋಡಿದ್ದೇವೆ.
ಮಾಡಿದ ಎಲ್ಲ ಕರ್ಮಗಳನ್ನೂ ಕರ್ಮಫಲಗಳನ್ನೂ ಮಾನಸಿಕವಾಗಿ ದೇವರಿಗೆ ಸಮರ್ಪಿಸಿ, ‘ನಾನು ಕರ್ತೃವೂ ಅಲ್ಲ, ಭೋಕ್ತೃವೂ ಅಲ್ಲ’ (ಮಾಡುವವನೂ ಅಲ್ಲ ಅನುಭವಿಸುವವನೂ ಅಲ್ಲ) ಎಂದು ನಿರ್ಲಿಪ್ತವಾಗಿರುವುದು ‘ಯಜ್ಞ’ವೆನಿಸುತ್ತದೆ. ನ ಮಮ (ನನ್ನದಲ್ಲ) ಎಂಬ ಮಂತ್ರೋಚ್ಚಾರದ ಹಿಂದಿನ ಭಾವವೂ ಇದೇ ಆಗಿದೆ. ಮಾಡಿದ ಯಾವುದೇ ಕರ್ಮದ ಸತ್ಫಲವನ್ನು ತಾನೊಬ್ಬನೇ ಭೋಗಿಸದೆ, ಸರ್ವರೊಂದಿಗೂ ಹಂಚಿಕೊಳ್ಳುವುದೂ ‘ಯಜ್ಞ’ವೆನಿಸುತ್ತದೆ. (ಧಾರ್ವಿುಕ – ಸಾಂಸ್ಕೃತಿಕ ಕಲಾಪಗಳಲ್ಲಿ ಬಹುಜನರನ್ನು ಅನ್ನ-ಪಾನ-ದಕ್ಷಿಣೆ-ದ್ರವ್ಯದಾನಗಳಿಂದ ತೃಪ್ತಿಪಡಿಸುವುದು ಈ ಭಾವದಿಂದಲೇ.)
ಹೀಗೆ, ಜೀವನದ ಪ್ರತಿವಿವರವೂ ‘ಯಜ್ಞ’ವಾಗಬಹುದು. ಜೀವನವನ್ನೇ ಒಂದು ‘ಯಜ್ಞ’ ಎಂದೂ ಭಾವಿಸಬಹುದು! ವಿದ್ಯಾರ್ಥಿಗೆ ತನುಮನಶುದ್ಧಿ – ಸರಳತೆ – ಕೈಂಕರ್ಯ – ಅಧ್ಯಯನಾದಿಗಳೇ ‘ಯಜ್ಞ’ವೆನಿಸಿದರೆ, ಗೃಹಸ್ಥನಿಗೆ ಪರಿವಾರದ ಪೋಷಣೆ-ರಕ್ಷಣೆ ಹಾಗೂ ಸಾಮಾಜಿಕ ಉತ್ತರದಾಯಿತ್ವವೇ ‘ಯಜ್ಞ’. ಸಂನ್ಯಾಸಿಗೆ ಹಗಲಿರುಳೂ ತತ್ತ್ವಚಿಂತನೆ ಹಾಗೂ ಚರಮಾನುಭವದ ಪ್ರಯತ್ನವೇ ‘ಯಜ್ಞ’ವೆನಿಸಿದರೆ, ಅರಸನಿಗೆ ರಾಜ್ಯದ ಆರ್ಥಿಕ – ಸಾಮಾಜಿಕ – ಧಾರ್ವಿುಕ – ರಾಜನೈತಿಕ ವ್ಯವಸ್ಥೆಗಳ ಯೋಗಕ್ಷೇಮ ನಿರ್ವಹಣೆಯೇ ‘ಯಜ್ಞ’. ಕಲಾವಿದನಿಗೆ ಕಲೆಯಲ್ಲಿ ಪಾರಮ್ಯವನ್ನೂ ಸಿದ್ಧಿಯನ್ನೂ ಪಡೆವುದೇ ‘ಯಜ್ಞ’ವಾದರೆ, ಉಪಾಸಕನಿಗೆ ಉಪಾಸ್ಯವನ್ನು ಸಿದ್ಧಿಸಿಕೊಳ್ಳುವ ತಪಸ್ಸೇ ‘ಯಜ್ಞ’. ಗೃಹಿಣಿಗೆ ತನ್ನ ಗೃಹಕಾರ್ಯ, ಪರಿವಾರದ ಪಾಲನೆ-ಪೋಷಣೆಗಳು ಪವಿತ್ರ ‘ಯಜ್ಞ’ವೆನಿಸಿದರೆ, ಕೃಷಿಕನಿಗೆ ವ್ಯವಸಾಯ ಮಾಡುತ್ತ, ಜಗತ್ತಿಗೆ ಅನ್ನವನ್ನೀಯುವುದೇ ‘ಯಜ್ಞ’. ಇದಲ್ಲದೆ ಸತ್ಯ, ದಾನ, ಅಪರಿಗ್ರಹ (ಯಾರಿಂದ ಏನನ್ನೂ ಸ್ವೀಕರಿಸದಿರುವುದು), ಆತ್ಮಸಂಯಮ, ಜಪ, ಧ್ಯಾನ, ವ್ರತನಿಯಮಾದಿಗಳನ್ನೂ ಸಿದ್ಧಿಯ ತನಕವೂ ಅವಿಚ್ಛಿನ್ನವಾಗಿ ಮುಂದುವರಿಸುವ ಸಾತ್ವಿಕಕರ್ಮಗಳೂ ‘ಯಜ್ಞ’ವೆನಿಸುತ್ತವೆ.
ಒಟ್ಟಿನಲ್ಲಿ, ಮಾಡುವ ಯಾವುದೇ ಕರ್ಮದ ಉದ್ದೇಶವೂ ಸ್ವರೂಪವೂ ಶುದ್ಧವಾಗಿದ್ದು, ಪಾರಮ್ಯದತ್ತ, ಸಿದ್ಧಿಯತ್ತ ಸಾಗುತ್ತಿದ್ದು, ನಿರ್ಲಿಪ್ತಭಾವವೇ ಮೊದಲಾಗಿದ್ದು, ಸರ್ವಜನಹಿತಸಾಧಕವೂ ದೇವತಾರ್ಪಣವೂ ಆದಾಗ, ಅದು ‘ಯಜ್ಞ’ವೆನಿಸುತ್ತದೆ. ಹೀಗಾಗಿಯೇ ಎಲ್ಲ ಶಾಸ್ತ್ರ-ವಿದ್ಯೆಗಳ, ವೃತ್ತಿ-ಕರ್ತವ್ಯ-ಕರ್ಮಗಳ ಆತ್ಯಂತಿಕ ಪ್ರಯೋಜನವು ‘ಮೋಕ್ಷ’ ಎಂದೇ ಹೇಳಲಾಗುವುದು.
ಮಾಡಿದ ಎಲ್ಲವನ್ನೂ ಭಗವದರ್ಪಣ ಮಾಡುವುದೂ, ಕರ್ಮವನ್ನೆಲ್ಲ ಯಜ್ಞವನ್ನಾಗಿಸುತ್ತದೆ. ನಮ್ಮ ಅಂತರಂಗವನ್ನು ಶುದ್ಧ ಹಾಗೂ ನಿರ್ಲಿಪ್ತವನ್ನಾಗಿಸುತ್ತದೆ. ‘ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ಎಂದು ಆಚಾರ್ಯ ಶಂಕರರೂ ಇದನ್ನೇ ತಮ್ಮ ಸ್ತೋತ್ರದಲ್ಲಿ ಧ್ವನಿಸಿದ್ದಾರೆ.
‘ಯಾವ ಕರ್ಮವು ಯಜ್ಞ? ಯಾವುದು ಅಲ್ಲ?’ ಎಂಬ ಭೌತಿಕ ಲೆಕ್ಕಾಚಾರ ಬೇಕಿಲ್ಲ, ಮಾಡುವಾಗ ‘ಭಾವ ಹಾಗೂ ಉದ್ದೇಶ ಯಾವುದು?’ ಎನ್ನುವುದಷ್ಟೇ ಕರ್ಮವನ್ನು ಯಜ್ಞವನ್ನಾಗಿಯೋ ಬಂಧನಕಾರಿಯನ್ನಾಗಿಯೋ ಆಗಿಸುತ್ತದೆ.

ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply