ಲಂಗುಲಗಾಮಿಲ್ಲದೆ ಬದುಕುವವನು ಪಾಪಾಯು

ಲಂಗುಲಗಾಮಿಲ್ಲದೆ ಬದುಕುವವನು ಪಾಪಾಯು

ಜೀವಿಗಳ ಅಸ್ತಿತ್ವಕ್ಕೆ ಆಧಾರವಾದ ಅನ್ನವೂ, ಅದಕ್ಕೆ ಆಧಾರವಾದ ಮಳೆಬೆಳೆಗಳೂ, ಅದಕ್ಕೆ ಪೋಷಕವಾದ ಕರ್ಮಗಳನ್ನು ನಿರ್ದೇಶಿಸುವ ವೇದವೂ, ವೇದಕ್ಕೆ ಆಧಾರವಾದ ಅಕ್ಷರತತ್ವವೂ ‘ಯಜ್ಞ’ದಲ್ಲೇ ಪ್ರತಿಷ್ಠಿತವಾಗಿವೆ ಎನ್ನುವುದನ್ನು ಕೃಷ್ಣ ಹೇಳಿದ.
‘ಯಜ್ಞ’ವೆಂದರೆ ‘ವೇದೋಕ್ತವಾದ ಯಾಗಾದಿ ಕರ್ಮ’ಗಳಷ್ಟೇ ಅಲ್ಲ. ಭಾವಶುದ್ಧಿ ಹಾಗೂ ಸಮರ್ಪಣಭಾವಗಳಿದ್ದಲ್ಲಿ ಎಲ್ಲ ದೈಹಿಕ ಮಾನಸಿಕ ಬೌದ್ಧಿಕಕರ್ಮಗಳೂ ‘ಯಜ್ಞ’ವೆನಿಸುತ್ತವೆ ಎನ್ನುವುದನ್ನು ಈ ಹಿಂದೆಯೇ ಚರ್ಚಿಸಿದ್ದೇವೆ. ಸೃಷ್ಟಿ-ಸ್ಥಿತಿಗಳೂ ‘ಯಜ್ಞ’ವಾಗಿ ನಡೆಯುತ್ತಿವೆಯಾದ್ದರಿಂದ, ಅದರೊಳಗಿರುವ ನಮ್ಮೆಲ್ಲರ ಉಳಿವಿಗೂ ಬೆಳವಣಿಗೆಗೂ ‘ಯಜ್ಞ’ವೇ ಆಧಾರ. ಅನುಭವ ಹಾಗೂ ಅಂತರೀಕ್ಷಣೆಗಳಿಂದ ನೋಡಿದಾಗ ಜೀವನವನ್ನು ‘ಯಜ್ಞ’ವನ್ನಾಗಿಸಿಕೊಳ್ಳುವ ವಿಧಾನವು ನಮಗೇ ಅರ್ಥವಾಗುತ್ತ ಹೋಗುತ್ತದೆ. ‘ಯಜ್ಞ’ವೆಂಬ ಈ ಜಗನ್ನಿಯಮವನ್ನು ಅನುಸರಿಸಿದಲ್ಲಿ ಎಲ್ಲರಿಗೂ ಕ್ಷೇಮ. ಅದನ್ನು ‘ಉಲ್ಲಂಘಿಸಿ ಭೋಗವನ್ನಟ್ಟಿ ಹೊರಟರೆ ನಮ್ಮಿಂದ ಪಾಪಗಳಾಗುತ್ತವೆ’ ಎನ್ನುತ್ತಾನೆ ಕೃಷ್ಣ:
ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ |
ಅಘಾಯುರಿಂದ್ರಿಯಾರಾಮೋ ಮೋಘಂ ಪಾರ್ಥ ಸ ಜೀವತಿ ||
(ಭ.ಗೀ.: 3.16)
‘‘ಹೀಗೆ ಪ್ರವರ್ತಿಸುವ (ಜೀವನ) ಚಕ್ರದಲ್ಲಿ ಯಾರು ಅನುವರ್ತಿಯಾಗಿರದೆ (ಅರ್ಥಾತ್ ವಿಹಿತ ಯಜ್ಞವನ್ನಾಚರಿಸದೆ) ಇರುತ್ತಾನೋ, ಇಂದ್ರಿಯಗಳೆಂಬ ತೋಟದಲ್ಲಿ (ಭೋಗದಲ್ಲಿ) ಅಲೆಯುತ್ತಿರುತ್ತಾನೋ ಅಂತಹ ‘ಪಾಪಾಯು’ವು ವ್ಯರ್ಥವಾಗಿ ಬದುಕುತ್ತಾನೆ.’’
ನಾವು ಈ ಸೃಷ್ಟಿಯ ಭಾಗ. ಹಾಗಾಗಿ ಸಮಷ್ಟಿಭಾವದಿಂದ ಬದುಕುವುದೇ ನೀತಿ. ಅದರಿಂದ ನಮ್ಮ ಉದ್ಧಾರವೂ ಆಗುತ್ತದೆ, ಜಗತ್ತಿಗೂ ಕ್ಷೇಮ. ಆದರೆ ಇಂದ್ರಿಯಲೋಲುಪರಿಗೆ ಇದು ಅರ್ಥವಾಗದು. ಹಿಂದಿನವರ ಸಲಹೆಯನ್ನೂ ಗಣಿಸದೆ, ಮುಂದಿನ ಸಂಭಾವ್ಯಗಳ ಬಗ್ಗೆಯೂ ಆಲೋಚಿಸದೆ, ಸುತ್ತಲ ಜಗತ್ತಿನ ಹಿತಾಹಿತಗಳನ್ನೂ ಲೆಕ್ಕಿಸದೆ, ತಾತ್ಕಾಲಿಕ ಚಪಲವನ್ನಷ್ಟೇ ತೀರಿಸಿಕೊಳ್ಳುವ ಧಾವಂತದಲ್ಲಿ ಬದುಕಿ ಪಾಪವೆಸಗುತ್ತಾರೆ. ಅಂತಹವರನ್ನು ಶ್ರೀಕೃಷ್ಣನು ‘ಪಾಪಾಯು’ ಎಂದು ಕರೆಯುತ್ತಿದ್ದಾನೆ.
‘ನಾನು-ನನ್ನಿಷ್ಟ’ ಎಂದು ಪ್ರವರ್ತಿಸುವುದರಿಂದ ಎಷ್ಟೆಲ್ಲ ಅನಾಹುತಗಳಾಗುತ್ತವೆ! ಕುಡಿದ ಅಮಲಿನಲ್ಲಿ ಥ್ರಿಲ್ ಗಾಗಿ ಕಾರು-ಬೈಕುಗಳು ಚಾಲಿಸುವವವರು ಮತ್ತಾರದೋ ಪ್ರಾಣವನ್ನು ಬಲಿ ತೆಗೆದುಕೊಳ್ಳುತ್ತಾರೆ! ಮೋಜಿಗಾಗಿ ಹರಡಿಸುವ ಸುಳ್ಳುಮಾತು ಮತ್ತಾರದೋ ಮಾನ-ಪ್ರಾಣಗಳನ್ನು ಬಲಿ ತೆಗೆದುಕೊಳ್ಳುತ್ತದೆ! ಎಚ್ಚರಗೇಡಿತನದಿಂದ ನಡುರಸ್ತೆಯಲ್ಲಿ ಎಸೆಯುವ ಬಾಳೆಹಣ್ಣಿನ ಸಿಪ್ಪೆಯು ಮತ್ತಾರದೋ ಕಾಲನ್ನು ಮುರಿಯುತ್ತದೆ! ಒಬ್ಬರು ಸೇದುವ ಸಿಗರೇಟ್ ಹೊಗೆ ಅವರ ಶ್ವಾಸವನ್ನಷ್ಟೇ ಅಲ್ಲದೆ ಸುತ್ತಲಿನವರ ಶ್ವಾಸವನ್ನೂ ಕೆಡಿಸುತ್ತದೆ! ನಾವು ಕೊಡುವ ಲಂಚವು, ಹಣ ಕೊಡಲಾಗದ ಮತ್ತಾರೋ ಅಸಹಾಯಕರ ಕೆಲಸವನ್ನು ಕೆಡಿಸುತ್ತದೆ! ಕೆಲವು ಲಜ್ಜೆಗೆಟ್ಟ ನಟ-ನಟಿಯರ ಅಶ್ಲೀಲ ವೇಷಗಳೂ ವಿಕೃತ ಭಂಗಿಗಳೂ ಎಳೆಯ ಮನಸ್ಸುಗಳಲ್ಲಿ ಕಾಮವನ್ನು ಕೆರಳಿಸಿ ದಾರಿ ತಪ್ಪಿಸುತ್ತವೆ! ಮತ್ತಾರೋ ಮುಗ್ಧ ಹೆಣ್ಣುಮಗಳ ಅತ್ಯಾಚಾರಕ್ಕೂ ಕಾರಣವಾಗುತ್ತವೆ! ವಕ್ರಮಾರ್ಗದಲ್ಲಿ ನಾವು ಗಿಟ್ಟಿಸಿಕೊಳ್ಳುವ ಉದ್ಯೋಗ-ಸ್ಥಾನಮಾನಗಳು ಮತ್ತಾರದೋ ಅನ್ನವನ್ನೇ ಕಿತ್ತುಕೊಳ್ಳುತ್ತವೆ! ಹೀಗೆ ಈ ‘ನಾನು-ನನ್ನಿಷ್ಟ’ ಎನ್ನುವ ಧೋರಣೆಯು ಉಂಟುಮಾಡುವಂತಹ ಅನಾಹುತಗಳ ಪಟ್ಟಿ ಮುಗಿಯುವುದೇ ಇಲ್ಲ!
‘ನಾನು-ನನ್ನಿಷ್ಟ’ ಎಂಬ ಉದ್ಧಟತನವಿಲ್ಲದೆ, ಲೋಕಹಿತವನ್ನೂ ಆತ್ಮೋನ್ನತಿಯನ್ನೂ ಮನದಲ್ಲಿ ತಂದುಕೊಂಡಾಗ ‘ಯಾವುದು ಕಾರ್ಯ? ಯಾವುದು ಅಕಾರ್ಯ?’ ಎಂಬ ಪ್ರಾಮಾಣಿಕ ವಿಮರ್ಶೆ ನಮ್ಮೊಳಗೆ ಮೂಡತೊಡಗುತ್ತದೆ. ಹೀಗೆ ಆಲೋಚಿಸುವ ವಾಙ್ಮಯವೇ ವೇದವಾಗಿದೆ. ಸಮಷ್ಟಿಹಿತ ಬಲಿಗೊಡದೆ ವ್ಯಷ್ಟಿಹಿತವನ್ನು ಸಾಧಿಸಲು ಅನುಕೂಲಿಸಲೆಂದೇ ಅದು ವಿಹಿತಕರ್ಮಗಳನ್ನೂ ಉಪಾಸನಾಕ್ರಮಗಳನ್ನೂ ಮನನಯೋಗ್ಯ ತತ್ವಸಿದ್ಧಾಂತಗಳನ್ನೂ ನಮ್ಮ ಮುಂದಿಟ್ಟಿದೆ. ಅವನ್ನು ಯಥಾಶಕ್ತಿ ಯಥಾಪ್ರೀತಿ ಆಚರಿಸುವ ಆಯ್ಕೆಯನ್ನೂ ಕೊಟ್ಟಿದೆ. ‘ನಾನು-ನನ್ನಿಷ್ಟ’ ಎಂಬ ಮದಾಂಧತೆಯಿಂದ ಬದುಕುವುದಕ್ಕಿಂತ ವೇದೋಕ್ತಿಗಳನ್ನೂ, ಜೀವನಾನುಭವವನ್ನೂ ಸ್ವಂತ ಬುದ್ಧಿಯನ್ನೂ ಸರ್ವಜನ ಹಿತವನ್ನೂ ಮನದಲ್ಲಿಟ್ಟುಕೊಂಡು ಬದುಕುವುದು ಅರ್ಥಪೂರ್ಣ.
ಮಾವಿನಮರವು ತನ್ನ ಮೊಮ್ಮಕ್ಕಳ ಕಾಲಕ್ಕೇ ಫಲವೀಯುವುದು ಎಂದು ತಿಳಿದಿದ್ದರೂ, ರೈತನು ಕರ್ತವ್ಯೈಕದೃಷ್ಟಿಯಿಂದ ಬೀಜ ನೆಟ್ಟು, ನೀರೆರೆದು ಬೆಳೆಸುತ್ತಾನಲ್ಲ! ಅದೇ ಸಮಷ್ಟಿಭಾವದ ಸೌಂದರ್ಯ! ಶೋಕಿಗಾಗಿ ನಿಸರ್ಗವನ್ನು ಲೂಟಿ ಹೊಡೆಯುತ್ತ, ಅಗತ್ಯಕ್ಕಿಂತ ಹೆಚ್ಚಿನ ಕಟ್ಟಡಗಳನ್ನು ಕಟ್ಟುತ್ತ, ಆಹಾರ-ನೀರು-ಸಂಪನ್ಮೂಲಗಳನ್ನು ಮಿತಿಮೀರಿ ಚೆಲ್ಲಾಡುತ್ತ, ಪ್ರಾಣಿಪಕ್ಷಿಗಳನ್ನೂ ಸಹಮಾನವರನ್ನೂ ಶೋಷಿಸುತ್ತ, ನೆಲ-ಜಲ-ಗಾಳಿಗಳನ್ನೆಲ್ಲ ಪ್ರದೂಷಣಗೊಳಿಸುತ್ತ, ಮುಂದಿನ ಪೀಳಿಗೆಗೆ ರೋಗರುಜಿನಗಳನ್ನೂ ಸಂಪನ್ಮೂಲಗಳ ಕೊರತೆಯನ್ನೂ ಸೃಷ್ಟಿಸಿ ಹೋಗುತ್ತಾನಲ್ಲ! ಅವನೇ ‘ಪಾಪಾಯು ಮನುಷ್ಯ’. ‘This is MY Life! I don’t care!‘ ಎನ್ನುವ ಇಂತಹ ಸ್ವೇಚ್ಛಾಭಾವ ಆಧುನಿಕ ಯುಗದಲ್ಲಿ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವಷ್ಟೆ? ಅದರಿಂದ ಆಗುತ್ತಿರುವ ನೈಸರ್ಗಿಕ ಪ್ರದೂಷಣ, ಸಾಮಾಜಿಕ ಅನ್ಯಾಯಗಳು ಹಾಗೂ ಸಂಪನ್ಮೂಲಗಳ ಕ್ಷಯವನ್ನೂ ಪ್ರತ್ಯಕ್ಷವಾಗಿ ನೋಡುತ್ತಲೇ ಇದ್ದೇವಷ್ಟೆ?
ಸಮಷ್ಟಿಭಾವದಲ್ಲಿ ಬದುಕಲು ಏನು ಬೇಕು? ‘ನಾನು-ನನ್ನಿಷ್ಟ’ ಎಂಬ ಧೋರಣೆಯ ತ್ಯಾಗ. ಅದೆಷ್ಟು ಕಷ್ಟ! ಅದನ್ನು ಬಿಡಲಾಗದ ನಾವು ವೇದವನ್ನೂ ಶಿಷ್ಟಾಚಾರಗಳನ್ನೂ ‘ಮೂಢನಂಬಿಕೆ Old fashioned’ ಎಂದು ಜರಿಯುವ ಸುಲಭದ ದಾರಿ ಹಿಡಿಯುತ್ತೇವೆ! ‘ವ್ಯಷ್ಟಿ-ಸಮಷ್ಟಿಹಿತಗಳ ಪ್ರಜ್ಞೆಯಿಂದ ಬದುಕುವ ಯಜ್ಞವೇ ಜೀವನನೀತಿ. ಅದನ್ನು ಬಿಟ್ಟು ಭೋಗಾತುರದಲ್ಲಿ ಮಾಡಬಾರದ್ದನ್ನು ಮಾಡುತ್ತ ತನಗೂ ಜಗತ್ತಿಗೂ ಅಹಿತವನ್ನು ತರುವ ಪಾಪಾಯುವಿನ ಜೀವನವು ವ್ಯರ್ಥ!’ ಎನ್ನುವುದು ಕೃಷ್ಣನ ಮಾತಿನ ಇಂಗಿತ.

ಡಾ. ಆರತಿ ವಿ ಬಿ
ಕೃಪೆ : ವಿಜಯವಾಣಿ

Leave a Reply