ಲೌಕಿಕರಲ್ಲಿ ಗೊಂದಲ ಹುಟ್ಟಿಸದಿರು

ಲೌಕಿಕರಲ್ಲಿ ಗೊಂದಲ ಹುಟ್ಟಿಸದಿರು

‘ಫಲದ ಆಸೆಯಿಂದ ಕರ್ಮಮಾಡಿ ಬಂಧನಕ್ಕೆ ಜಾರುವ ಲೌಕಿಕರಂತಾಗದೆ, ನಿರ್ಲಿಪ್ತಿಯಿಂದ ಕರ್ಮ ಮಾಡಿ ಲೋಕಕಲ್ಯಾಣವನ್ನು ಸಾಧಿಸು’ ಎನ್ನುವ ಕಿವಿಮಾತನ್ನು ಕೃಷ್ಣನು ಅರ್ಜುನನಿಗೆ ಹೇಳುತ್ತಿದ್ದನಷ್ಟೆ? ಕೃಷ್ಣ ಹೇಳುವ ಮುಂದಿನ ಮಾತು ಸ್ವಾರಸ್ಯಕರವಾಗಿದೆ: ‘ಕರ್ಮಸಂಗಿಗಳಾದ ಅಜ್ಞರಲ್ಲಿ ‘‘ಬುದ್ಧಿಭೇದ’’ವನ್ನು(ಗೊಂದಲವನ್ನು) ಉಂಟುಮಾಡಬಾರದು. ತಾನೂ ವಿಹಿತಕರ್ಮಗಳನ್ನು ಮಾಡುತ್ತ ಎಲ್ಲರೂ (ಆ ವ್ಯವಸ್ಥೆಯನ್ನು) ಪಾಲಿಸುವಂತೆ ನೋಡಿಕೊಳ್ಳಬೇಕು.’ (ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಂಗಿನಾಂ | ಜೋಷಯೇತ್ ಸರ್ವಕರ್ವಣಿ ವಿದ್ವಾನ್ ಯುಕ್ತಃ ಸಮಾಚರನ್ || 3.26)
ಈ ಶ್ಲೋಕದಲ್ಲಿ ಕೃಷ್ಣನು ಬಹುದೊಡ್ಡ ಸಂದೇಶವನ್ನೇ ಕೊಡುತ್ತಿದ್ದಾನೆ! ಮನುಷ್ಯರೆಲ್ಲರೂ ಅವರವರ ಪರಿಸರದಲ್ಲಿ ಅವರವರ ಕ್ರಮೋದ್ದೇಶಗಳಿಗೆ ಅನುಸಾರವಾಗಿ ಅವರವರ ಕರ್ಮಮಾಡುತ್ತ ಅವರವರ ವೇಗದಲ್ಲಿ ಜ್ಞಾನವಿಕಾಸವನ್ನು ಹೊಂದುತ್ತಾರೆ. ಇದೇ ಪ್ರಕೃತಿನಿಯಮ!
ಮಗುವು ನಡೆಯುವುದನ್ನು ನೋಡಿ! ತಾಯಿ ಮಗುವಿಗೆ ಪೌಷ್ಟಿಕಾಹಾರವಿತ್ತು ಪಾಲಿಸಬಹುದು, ಹುರಿದುಂಬಿಸಬಹುದು, ನಾಲ್ಕು ಹೆಜ್ಜೆ ಹಾಕಲು ಕೈಹಿಡಿದು ಸಹಾಯ ಮಾಡಬಹುದು. ಆದರೆ ಮಗುವು ತಾನೇ ಮತ್ತೆಮತ್ತೆ ಎದ್ದು ಬಿದ್ದು ನಿಯಂತ್ರಣ ಸಾಧಿಸಿ ನಿಲ್ಲಬೇಕು, ನಡೆಯಲಾರಂಭಿಸಬೇಕು! ತಾಯಿಯೇ ಮಗುವಿನ ಹೆಜ್ಜೆಹೆಜ್ಜೆಯನ್ನೂ ಇರಿಸಿ ನಡೆಯಿಸಲಾದೀತೆ? ಅದನ್ನು ನಿಸರ್ಗವು ಒಪ್ಪದು.
ಬೀಜವು ಮೊಳೆಯುವುದನ್ನು ನೋಡಿ – ನಾವು ಹೊರಗಡೆಯಿಂದ ಗೊಬ್ಬರ, ನೀರು ಹಾಕಿ ಪೋಷಿಸಬಹುದು, ಬೇಲಿ ಕಟ್ಟಿ ಕಾಯಬಹುದು, ಅಷ್ಟೆ. ಬೀಜವು ತನ್ನ ವೇಗದಲ್ಲಿ ತನ್ನ ರೀತಿಯಲ್ಲಿ ತಾನಾಗಿಯೇ ಚಿಗುರೊಡೆಯಬೇಕು. ನಾವೇನಾದರೂ ಬೀಜವನ್ನು ಬಗೆದು, ಅದರೊಳಗಿನ ಸತ್ವವನ್ನು ಬದಲಾಯಿಸಲು ಹೊರಟರೆ ಬೀಜವೇ ನಾಶವಾಗುತ್ತದೆ ಅಷ್ಟೆ!
ಆತ್ಮವಿಕಾಸದ ಆಂತರಿಕ ಪ್ರಕ್ರಿಯೆಯೂ ಹೀಗೆಯೆ! ಹೊರಗಡೆಯ ಗುರುವು, ದೀಕ್ಷೆ, ಮಾರ್ಗದರ್ಶನ, ಸಂವಾದ, ಚರ್ಚೆ, ನೀತಿಬೋಧನೆ, ಸತ್ಸಂಗ, ಪ್ರೋತ್ಸಾಹ ಇತ್ಯಾದಿಗಳೆಲ್ಲ ಆತ್ಮವಿಕಾಸಕ್ಕೆ ‘ಪೋಷಕ’ವಾದರೂ ‘ಕಾರಕ’ವಾಗಲಾರವು. ನಾವು ಹೆಚ್ಚಿನವರು ಈ ಸೂಕ್ಷ್ಮವನ್ನು ಗಮನಿಸುವುದೇ ಇಲ್ಲ!
‘ತಾವು ಒಂದಷ್ಟು ಜ್ಞಾನವನ್ನು ಪಡೆದಿದ್ದೇವೆ’ ಎಂದೆನಿಸಿದಾಕ್ಷಣ ಮನುಷ್ಯರು ಅದನ್ನು ಬಳಸಿ ತನ್ನೊಳಗೆ ಸತ್ಯಾಸತ್ಯಗಳನ್ನು ವಿವೇಚಿಸುವುದಕ್ಕಿಂತ ಹೆಚ್ಚಾಗಿ, ತರ್ಕದಿಂದ ಇತರರನ್ನು ಪ್ರಭಾವಗೊಳಿಸಲು ಉತ್ಸುಕರಾಗುವುದುಂಟು! ‘ನಾವೇನೋ ಬಹಳ ಬಲ್ಲವರು, ನಾವು ಮಾತ್ರ ಸರಿಯಾಗಿರುವವರು, ಬೇರೆಲ್ಲರೂ ಬಾಲಿಶರು, ಅಜ್ಞರು’ ಎನ್ನುವ ಧೋರಣೆಯಲ್ಲಿ ಬೀಗಲಾರಂಭಿಸುತ್ತಾರೆ. ಒಂದಿಷ್ಟು ತರ್ಕ-ವಾಕ್ಚಾತುರ್ಯಗಳು ಗೊತ್ತಿದ್ದರಂತೂ ಆಯಿತು! ಎಲ್ಲವನ್ನೂ ಎಲ್ಲರನ್ನೂ ಕುತರ್ಕದಲ್ಲೇ ಅಳೆಯುವುದೇನು! ಕಂಡವರ ಆಚಾರ-ವಿಚಾರಗಳನ್ನೂ ಅಭಿಪ್ರಾಯಗಳನ್ನೂ ತಿದ್ದಿ ಬದಲಾಯಿಸಲು ‘ಗುರು-ಗಿರಿ’ ಮಾಡುವುದೇನು! ‘ಯುಕ್ತಿ ಬಲ್ಲವರಿಗೆ ತತ್ವ ಹೇಳುವ ಚಿಂತೆ!’ ಎಂದು ಸುಮ್ಮನೆ ಹೇಳಿಲ್ಲ ಪುರಂದರದಾಸರು! ಇವರ ಉದ್ದೇಶವು ಒಳ್ಳೆಯದೇ ಆಗಿದ್ದರೂ, ಇವರ ಗರ್ವಾತುರಗಳು ಅವರಿಂದ ವಿಪರೀತವನ್ನೆಸಗಿಸುತ್ತವೆ! ‘ತಾನು ನಂಬಿದ – ಒಲಿದ ವಿಚಾರವು – ಮಾರ್ಗವು ಎಲ್ಲರಿಗೂ ಪಥ್ಯ’ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ. ತನ್ನ ಮತವನ್ನು ಲೋಕಕ್ಕೆಲ್ಲ ಹೇರುವ ಹಠವನ್ನು ಬೆಳೆಸುತ್ತದೆ. ಜೀವರ ವಿಕಾಸದ ನೈಸರ್ಗಿಕ ಕ್ರಮವನ್ನು ವೈವಿಧ್ಯಮಯ ವಿಧಾನಗಳನ್ನೂ ಅರ್ಥಮಾಡಿಕೊಳ್ಳದೆ ಅಂಥ ವ್ಯಕ್ತಿ ಸುಮ್ಮನೆ ಕೂಗಾಡುತ್ತಾನೆ!
ಜನರ ಜಾನಪದೀಯ ಹಿನ್ನಲೆ, ನಂಬಿಕೆ, ಭಾವನಾತ್ಮಕ ಅಗತ್ಯಗಳ ಬಗ್ಗೆ ಸಂವೇದನೆಯಿಲ್ಲದ ಶುಷ್ಕತರ್ಕದ ‘ಜ್ಞಾನಿ’ಗಳು ಇತರರನ್ನು ಹೀಯಾಳಿಸುತ್ತ ತಮ್ಮದು ‘ಎತ್ತರದ ವಿಚಾರ’ ಎನ್ನುತ ಬೀಗುವಾಗ ಇದೇ ತಪ್ಪು ಮಾಡುತ್ತಾರೆ! ತಮ್ಮ ನಾಡು-ನುಡಿ-ಕುಲ-ಸಂಸ್ಕೃತಿಗಳ ತಾಯಿಬೇರಿನಲ್ಲಿ ಪೋಷಣೆಗೊಳ್ಳುತ್ತ ಮೆಲ್ಲನೆ ಅರಳುವ ಸರಳ ಮುಗ್ಧ ಜನರ ಶ್ರದ್ಧೆಯನ್ನೂ ವಿಚಾರವಿಧಾನಗಳನ್ನೂ, ಒಮ್ಮೆಲೆ ಅಲ್ಲಿಂದ ಕಿತ್ತು ಬೇರಾವುದೋ ಹೊಸವಿಚಾರದ ಮಣ್ಣಲ್ಲಿ ಬಲವಂತವಾಗಿ ನೆಟ್ಟು ‘ಪ್ರಗತಿಪರತೆಯನ್ನು ಸಾಧಿಸುತ್ತಿದ್ದೇವೆ’ ಎನ್ನುತ್ತ ಸಮರ್ಥಿಸಿಕೊಳ್ಳುವ ವಾಮಪಂಥೀಯರೂ ಇದೇ ತಪ್ಪನ್ನೇ ಮಾಡುತ್ತಾರೆ. ‘ಜಗತ್ತನ್ನು ಉದ್ಧರಿಸುತ್ತೇವೆ’ ಎನ್ನುತ್ತ ತಮ್ಮ ಮತ, ಭಾಷೆ, ವೇಷ, ಭೂಷ, ಜೀವನಶೈಲಿ, ವಿಚಾರವಿಧಾನಗಳನ್ನೇ ಜಗಜನರ ಮೇಲೂ ಆರೋಪಿಸುವ ಹಠದ ಸೆಮೆಟಿಕ್ ಮತದವರು ಅಂದಿನಿಂದ ಇಂದಿನವರೆಗೂ ಅದೆಷ್ಟು ಆಕ್ರಮಣ, ಹಿಂಸಾಚಾರ, ಮತಾಂತರ, ಅಕ್ರಮ ಹಾಗೂ ರಾಜಕೀಯ ಆಟಗಳನ್ನು ಆಡಿಲ್ಲ! ಇದಕ್ಕೆಲ್ಲ ಅವರ ಸಮರ್ಥನೆ- ‘ಕತ್ತಲೆಯಲ್ಲಿರುವ ಜಗತ್ತಿಗೆ ನಾವು ‘‘ನಿಜವಾದ’’ ಬೆಳಕು ಕೊಡುತ್ತಿದ್ದೇವೆ’ ಎನ್ನುವುದೇ ಆಗಿದೆ! ಕಾಲಕಾಲಕ್ಕೆ ಸಮಾಜದಲ್ಲಿ ನುಸುಳುವ ದೋಷಗಳನ್ನು ಖಂಡಿಸುವುದು, ಸುಧಾರಣೆಗೈಯುವುದು ಅಗತ್ಯವೇ. ಆದರೆ ಹಾಗೆ ಮಾಡುವಾಗ ಜಗಜನರ ಮೂಲ ಸ್ವಭಾವ, ಬೆಳೆದಬಂದ ಪರಿಸರ-ಪರಿಸ್ಥಿತಿಗಳೂ, ಮತಿಮನಗಳಲ್ಲಿನ ಸಂವೇದನೆಗಳನ್ನೆಲ್ಲ ಗಣಿಸಬೇಕಾಗುತ್ತದೆ. ಕಳೆ ತೆಗೆಯಲು ಹೋಗಿ ‘ಮೂಲಬೇರ’ನ್ನೇ ಕತ್ತರಿಸಿದರೆ, ವಿಕಾಸವಾಗದು. ವಿನಾಶವಾಗುತ್ತದೆ!
ಲೌಕಿಕರಾಗಲಿ ಆಧ್ಯಾತ್ಮಿಕ ಸಾಧಕರಾಗಲಿ, ಅವರವರ ಏಳುಬೀಳುಗಳಲ್ಲಿ ಅವರವರೇ ಹಾದು, ಕಾಲಾಂತರದಲ್ಲಿ ಕಲಿಯುತ್ತಾರೆ, ಕಳಿಯುತ್ತಾರೆ. ಆರ್ಷಧರ್ಮವು ಎಂದೂ ‘ಪ್ರಚಾರದ ಧರ್ಮ’ವಾಗದೆ ‘ಆಚಾರಧರ್ಮ’ವಾಗಿರುವುದು ಈ ಕಾರಣಕ್ಕಾಗಿಯೇ! ಅದೇ ಪರಂಪರೆಯ ಮಹಾಚಾರ್ಯನಾದ ಶ್ರೀಕೃಷ್ಣನೂ ಇದೇ ಉದಾತ್ತದೃಷ್ಟಿಯಿಂದ ಅರ್ಜುನನಿಗೆ ಹೇಳುತ್ತಿದ್ದಾನೆ; ‘ನೀನು ಸ್ವತಃ ನಿರ್ಲಿಪ್ತಿಯನ್ನು ಹಿಡಿದು ಕರ್ಮವೆಸಗು. ಆದರೆ ಭೋಗಕ್ಕಾಗಿಯೇ ಕರ್ಮಾಸಕ್ತರಾದ ಲೌಕಿಕರಲ್ಲಿ ಇದರ ಬಗ್ಗೆ ಮಾತನಾಡಿ ಸುಮ್ಮನೆ ‘‘ಬುದ್ಧಿಭೇದ’’ವನ್ನು ಉಂಟುಮಾಡಬೇಡ!’.
ಡಾ. ಆರತೀ ವಿ. ಬಿ.

ಕೃಪೆ : ವಿಜಯವಾಣಿ

Leave a Reply