ಸಂಭವಾಮಿ ಯುಗೇ ಯುಗೇ

ಸಂಭವಾಮಿ ಯುಗೇ ಯುಗೇ

‘ಭಗವಂತನಾದ ತಾನು ಆದಿಯಲ್ಲೇ ಸೂರ್ಯನ ಮೂಲಕ ಈ ಜ್ಞಾನಯೋಗವನ್ನು ಪರಂಪರಾಗತವಾಗಿ ಮನುಕುಲಕ್ಕೆ ಹರಿಯಿಸಿದ್ದೆನು’ ಎಂದು ಕೃಷ್ಣನು ಹೇಳಿದ. ಒಂದೇ ಜನ್ಮ-ದೇಹ-ಸಂಬಂಧ- ಆಗುಹೋಗುಗಳ ‘ಗೋಡೆ’ಯೊಳಗೆ ಆಲೋಚಿಸದೆ, ಸೃಷ್ಟಿಚಕ್ರದ ದೇಶಕಾಲಾತೀತ ನಡೆಯನ್ನು ಸಮಷ್ಟಿಭಾವದಿಂದ ಗ್ರಹಿಸಿದಾಗ ಮಾತ್ರ ಕೃಷ್ಣನ ಈ ಮಾತನ್ನು ಅರ್ಥೈಸಲು ಸಾಧ್ಯ ಎನ್ನುವುದನ್ನೂ ರ್ಚಚಿಸಿದ್ದೆವು. ಭಗವಂತನು ಯಾವುದೇ ಜನ್ಮಕ್ಕೂ ಬದ್ಧನಾಗದೆ ಸ್ವತಂತ್ರನಾಗಿರುತ್ತಾನೆ! ಆತನ ಪಾಲಿಗೆ ಜೀವತ್ವವನ್ನು ಆರೋಪಿಸಿಕೊಳ್ಳುವುದು, ಕಳಚಿಡುವುದು ಲೀಲೆ. ಇಲ್ಲಿ ಕೃಷ್ಣನು ‘ನಾನು’ ಎಂದಾಗ ತನ್ನನ್ನು ತಾನು ‘ವೃಷ್ಣಿವಂಶದ ವಸುದೇವ – ದೇವಕಿಯರ ಪುತ್ರ’ನೆಂದು ಸೂಚಿಸದೆ, ‘ಜನ್ಮಮರಣಾತೀತವಾದ ನಿತ್ಯಸತ್ಯ ಪರಮಾತ್ಮ’ನೆಂದು ಸೂಚಿಸುತ್ತಿದ್ದಾನೆ.
ಶ್ರೀಕೃಷ್ಣನು ಮಹಾವಿಷ್ಣುವಿನ ವಿಶಿಷ್ಟಾವತಾರ ಎಂಬ ಅನೇಕ ಉಲ್ಲೇಖಗಳು ಪುರಾಣ- ಜಾನಪದ-ಪರಂಪರೆಗಳಲ್ಲಿವೆ. ವೇದದಲ್ಲೂ ಅವನ ನಾಮೋಲ್ಲೇಖವಿದೆ. ಭಾರತೀಯ ಧರ್ಮ, ಸಂಸ್ಕೃತಿ, ಲೋಕದಲ್ಲಿನ ಅಸಂಖ್ಯ ಸಾಹಿತ್ಯ-ಕಲಾಪ್ರಕಾರಗಳೂ, ಹಬ್ಬಹರಿದಿನಗಳೂ ಕೃಷ್ಣನ ದೈವತ್ವವನ್ನೇ ಮೆರೆಸುತ್ತವೆ. ಇಲ್ಲಿ, ತತ್ವಚರ್ಚೆಯ ಸಂದರ್ಭದಲ್ಲಿ ಶ್ರೀಕೃಷ್ಣನು ತನ್ನ ಈಶ್ವರತ್ವವನ್ನು ಮುಕ್ತವಾಗಿ ಘೊಷಿಸುತ್ತಿರುವುದು ವಿಶೇಷ. ಧರ್ಮರಕ್ಷಣೆಯ ನಿಮಿತ್ತವಾಗಿ ಪರಮಾತ್ಮನು ಆಂಶಿಕವಾಗಿಯೋ ಮಹತ್ತಾಗಿಯೂ ಸೃಷ್ಟಿಯಲ್ಲಿ ತನ್ನ ವಿಭೂತಿಗಳನ್ನು ಪ್ರಕಟಪಡಿಸುತ್ತಲೇ ಇರುತ್ತಾನೆ. ಆದರೆ ಅದನ್ನು ಗುರುತಿಸುವ ಸಾಮರ್ಥ್ಯ ನಮಗಿರದೆ ಹೋಗಬಹುದು! ಕೃಷ್ಣ ಹೇಳುತ್ತಿದ್ದಾನೆ, ‘ತಾನು ಕಾಲಕಾಲಕ್ಕೂ ಧರ್ಮಸಂಸ್ಥಾಪನೆಗಾಗಿ ಸಂಭವಿಸುತ್ತೇನೆ’ ಎಂದು. ‘ಹೇ ಭಾರತ! ಧರ್ಮದ ಗ್ಲಾನಿಯುಂಟಾದಾಗ, ಅಧರ್ಮವು ಏರುತ್ತ ಹೋದಾಗ ನಾನು ಹುಟ್ಟಿಬರುತ್ತೇನೆ. ಸಜ್ಜನರ ರಕ್ಷಣೆಗಾಗಿಯೂ ದುಷ್ಟರ ನಾಶಕ್ಕಾಗಿಯೂ ಧರ್ಮಸಂಸ್ಥಾಪನೆಯ ಸಲುವಾಗಿಯೂ ಯುಗಯುಗದಲ್ಲೂ ಸಂಭವಿಸುತ್ತೇನೆ.’ (4-7.8)
ಶ್ರೀಕೃಷ್ಣನ ಈ ಮಾತು ಸಜ್ಜನಲೋಕಕ್ಕೆ ಭರವಸೆಯ ಧ್ಯೇಯವಾಕ್ಯ! ಸೃಷ್ಟಿಯಲ್ಲಿ ಆಗಾಗ ಅಧರ್ಮವು ಮೇಲುಗೈ ಸಾಧಿಸುವುದುಂಟು. ಉತ್ತಮಬೀಜ ಬಿತ್ತಿ, ಮಣ್ಣು-ಗೊಬ್ಬರ-ನೀರು ಹಾಕಿ ಸಂರಕ್ಷಿಸಿ ಫಲಕ್ಕಾಗಿ ಕಾಯುವಾಗ, ಅದೇ ಮಣ್ಣು ನೀರು ಗೊಬ್ಬರಗಳನ್ನುಂಡು ಕಳೆಯು ಬೆಳೆದುಬಿಡುವುದುಂಟು! ಆ ಕಳೆಯು ಬೆಳೆಯನ್ನೇ ಹಾಳುಮಾಡುತ್ತದಲ್ಲದೆ, ಬಹಳ ಬೇಗನೆ ಹರಡಿ ನಿಲ್ಲುತ್ತದೆ ಕೂಡ! ಅಧರ್ಮವೂ ಹಾಗೆ! ಗುಣದಲ್ಲಿ ನಿಕೃಷ್ಟವಾದರೂ, ಪ್ರಮಾಣದಲ್ಲೂ ವೇಗದಲ್ಲೂ ಬೇಗ ಹೆಚ್ಚುತ್ತದೆ! ಸಮಾಜದಲ್ಲಿ ನಾಯಕರಾದವರು ಧರ್ಮನಿಷ್ಠರೂ ಸಜ್ಜನರೂ ಆಗದ್ದರೆ ಸಾಲದು. ದೂರದೃಷ್ಟಿಯುಳ್ಳವರೂ ಸಮರ್ಥರೂ, ಸದಾ ಜಾಗೃತರೂ ಆಗಿರಬೇಕಾಗುತ್ತದೆ! ಅಧರ್ಮವನ್ನೂ ದೌಷ್ಟ್ಯನ್ನೂ ಮೊಳಕೆಯಾಗಿರುವಾಗಲೇ ಅಲ್ಲಲ್ಲೇ ಆಗಾಗಲೇ ಚಿವುಟಿಹಾಕಬೇಕಾಗುತ್ತದೆ! ಕಿಡಿಯನ್ನು ನಿರ್ಲಕ್ಷಿಸಿದರೆ ಅದೇ ಬೆಂಕಿಯಾಗಿ ಕಾಡನ್ನೆಲ್ಲ ವ್ಯಾಪಿಸಿ ನುಂಗುತ್ತದೆ! ಅಂತೆಯೇ ದುಷ್ಟರು ದುರ್ಬಲರೆಂದು ನಿರ್ಲಕ್ಷಿಸಿದರೆ, ಅವರೇ ಬೆಳೆದು ಸಜ್ಜನರನ್ನೂ ಸುವ್ಯವಸ್ಥೆಗಳನ್ನೂ ನುಂಗಿಹಾಕುತ್ತಾರೆ! ಸಜ್ಜನರು ಎಚ್ಚರ ತಪ್ಪುತ್ತಲೇ ದುಷ್ಟರು ಅಧಿಕಾರ ಕಬಳಿಸುತ್ತಾರೆ. ಅಲ್ಲಿಗೆ ಧರ್ಮವ್ಯವಸ್ಥೆಯೇ ಹದಗೆಡುತ್ತದೆ. ಅನ್ಯಾಯ-ಅಕ್ರಮಗಳು ತಾಂಡವವಾಡುತ್ತವೆ. ಶಿಷ್ಟಮತಪದ್ಧತಿಗಳನ್ನು ನಾಶಗೈದು, ಭೋಗಪ್ರವೃತ್ತಿಯತ್ತ ‘ಮತಾಂತರ’ಗೈಯಲಾಗುತ್ತದೆ. ಹೀಗೆ ಮಾನುಷ ಛಲ-ಬಲಗಳಿಗೆ ಜಗ್ಗದ-ಬಗ್ಗದ ಮಟ್ಟಿಗೆ ದೌಷ್ಟ್ಯು ಬಲಿತಾಗ, ಭಗವಂತನೇ ಮಾನುಷರೂಪದಲ್ಲಿ ಸಂಭವಿಸಿ ಪರಿಹಾರವೀಯಬೇಕಾಗುತ್ತದೆ. ರೋಗವು ಉಲ್ಬಣಿಸಿದಾಗ ಸಾಮಾನ್ಯ ಔಷಧಿಗಳು ಕೆಲಸಮಾಡದೆ, ಸ್ಟಿರಾಯ್್ಡಳನ್ನೇ ಕೊಡಬೇಕಾಗುತ್ತದಲ್ಲ, ಹಾಗೆ!
ಭಗವಂತ ಅವತರಿಸಿದಾಗ ಏನೋ ‘ಪವಾಡ’ ಮಾಡಿ ಒಮ್ಮೆಲೆ ಎಲ್ಲ ದೌಷ್ಟ್ಯನ್ನು ‘ಮಾಯ’ ಮಾಡಿಬಿಡುವುದಿಲ್ಲ. ಆತನೂ ಮನುಷ್ಯನಂತೆಯೇ ಜೀವನಾನುಭವಗಳಲ್ಲಿ ಹಾದು, ಛಲ-ಬಲ-ಪರಿಶ್ರಮಗಳಿಂದ ಬೆಳೆದು ನಿಲ್ಲುವುದನ್ನು ಮಾಡಿತೋರುತ್ತಾನೆ. ಅಮಿತ ಪ್ರೇಮ-ಕರುಣೆಗಳಿಂದ ಸಜ್ಜನರನ್ನು ಒಗ್ಗೂಡಿಸಿ, ಅವರ ಅಸಹಾಯಭಾವವನ್ನು ಹೋಗಲಾಡಿಸಿ, ನವಶಕ್ತ್ಯುತ್ಸಾಹಗಳನ್ನು ತುಂಬುತ್ತಾನೆ. ಸುಸಂಘಟಿತ ಸಜ್ಜನಶಕ್ತಿಯಿಂದಲೇ ಧರ್ಮದ ಪುನರುಜ್ಜೀವನಕಾರ್ಯವನ್ನೂ ಮಾಡಿಸುತ್ತಾನೆ. ರಾಮ-ಕೃಷ್ಣಾದಿ ಅವತಾರಪುರುಷರ ಜೀವನದಲ್ಲಿ ನಾವು ಕಾಣುವುದು ಇದನ್ನೇ.

ಡಾ. ಆರತಿ ವಿ. ಬಿ
ಕೃಪೆ: ವಿಜಯವಾಣಿ

Leave a Reply