ಸ್ವಧರ್ಮವೇ ಶ್ರೇಯಸ್ಕರ

ಸ್ವಧರ್ಮವೇ ಶ್ರೇಯಸ್ಕರ

ಶರಣಾಗತಿ ಹಾಗೂ ರಾಗದ್ವೇಷನಿಗ್ರಹದ ಬಗ್ಗೆ ಹೇಳಿದ ಬಳಿಕ ಕೃಷ್ಣನು ಮತ್ತೊಮ್ಮೆ ಸ್ವಧರ್ಮನಿಷ್ಠೆಯ ವಿಷಯಕ್ಕೆ ಬರುತ್ತಾನೆ:
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ ಸ್ವನುಷ್ಠಿತಾತ್ |
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ |
‘ಬೇರೆಯವರ (ಕರ್ತವ್ಯವೆಂಬ) ಧರ್ಮವನ್ನು (ಆಸೆಪಟ್ಟು) ಚೆನ್ನಾಗಿ ಮಾಡುವುದಕ್ಕಿಂತ, ತನ್ನ (ಕರ್ತವ್ಯವೆಂಬ) ಧರ್ಮವು ವಿಗುಣವಾಗಿದ್ದರೂ (ಅದನ್ನು ಮಾಡುವುದೇ) ಶ್ರೇಯಸ್ಕರ. ತನ್ನ ಧರ್ಮದಲ್ಲೇ ಸಾಯುವುದು ಮೇಲು, ಪರರ ಧರ್ಮವನ್ನು (ಮೋಹದ ಭರದಲ್ಲಿ) ಅಪ್ಪಿಕೊಳ್ಳುವುದು ಭಯಾವಹ.’
ಇಲ್ಲಿ ‘ಸ್ವಧರ್ಮ’ ಎನ್ನುವ ಪದವನ್ನು ಹಲವು ಹಿನ್ನೆಲೆಗಳಲ್ಲಿ ಅರ್ಥಮಾಡಿಕೊಳ್ಳಬಹುದು; ವೃತ್ತಿಧರ್ಮ- ಪ್ರವೃತ್ತಿಧರ್ಮಗಳೆಂದೂ, ಹುಟ್ಟಿದ ಕುಲ-ನಾಡು-ನುಡಿಗಳಲ್ಲಿರಬೇಕಾದ ನಿಷ್ಠೆ ಎಂದೂ, ಹಿಡಿದ ಉದ್ಯೋಗದಲ್ಲೂ ಕಾರ್ಯದಲ್ಲೂ, ಕೈಗೆ ತೆಗೆದುಕೊಂಡ ಕೆಲಸದಲ್ಲಿರಬೇಕಾದ ನಿಷ್ಠೆ ಎಂದೂ, ತಾನು ಹುಟ್ಟಿ ಬೆಳೆದ ಮತ-ಪಂಥ ದೇವರು-ಪದ್ಧತಿಗಳಲ್ಲಿರಬೇಕಾದ ನಿಷ್ಠೆ ಎಂದೂ, ಮಾನವೀಯತೆಯ ನೆಲೆಯಲ್ಲಿ ಪಾಲಿಸಬೇಕಾದ ದೈನಂದಿನ ಹಾಗೂ ಆಪತ್ಕಾಲೀನ ಕರ್ತವ್ಯಗಳು ಎಂದು ಅರ್ಥಮಾಡಿಕೊಳ್ಳಬಹುದು. ಈ ಸ್ವಧರ್ಮವು ಮನುಷ್ಯನು ಹುಟ್ಟುತ್ತಲೇ ಅವನೊಂದಿಗೆ ಬೆಳೆಯುತ್ತದೆ. ವ್ಯಕ್ತಿಯಾಗಿಯೂ, ಪರಿವಾರದ ಸದಸ್ಯನಾಗಿಯೂ, ರಾಜ್ಯದ ಹಾಗೂ ರಾಷ್ಟ್ರದ ಪ್ರಜೆಯಾಗಿಯೂ ಮನುಷ್ಯನ ಸ್ವಧರ್ಮವು ರೂಪುಗೊಳ್ಳುತ್ತದೆ. ಇದನ್ನು ಅಭಿಮಾನದಿಂದಲೂ ಜವಾಬ್ದಾರಿಯಿಂದಲೂ ಅಂಗೀಕರಿಸಿ ಅದಕ್ಕನುಗುಣವಾಗಿ ತನ್ನ ಪಾತ್ರವನ್ನು ಮನುಷ್ಯನು ಅರಿಯುತ್ತ ಆಚರಿಸುತ್ತ ಬೆಳೆಯಬೇಕು. ಸ್ವಧರ್ಮದ ಬಗ್ಗೆ ಕೀಳರಿಮೆ ತಾತ್ಸಾರ ಬೆಳೆದರೆ ಅದರಿಂದ ವ್ಯಕ್ತಿಗೂ ವ್ಯವಸ್ಥೆಗೂ ಹಲವು ಬಗೆಯ ಅನನುಕೂಲಗಳು ಉಂಟಾಗಲು ಶುರುವಾಗುತ್ತದೆ. ಆದ್ದರಿಂದ ಸ್ವಧರ್ಮಪಾಲನೆ ಪ್ರಮುಖವೆಂದು ಒತ್ತಿಹೇಳಲಾಗಿದೆ.
ವಸ್ತುತಃ ಯಾವ ವೃತ್ತಿಯೂ ಹೇಯವಲ್ಲ, ಯಾವ ಕುಲವೂ ಹೀನವಲ್ಲ, ಯಾವ ನಾಡೂ-ನುಡಿಯೂ ತಿರಸ್ಕಾರ್ಯವಲ್ಲ. ಆದರೂ ಮಾನವನ ಮನೋವಿಕಾರಗಳು ಇವುಗಳಲ್ಲಿ ಮೇಲು-ಕೀಳು, ಚೆನ್ನಾಗಿದೆ-ಚೆನ್ನಾಗಿಲ್ಲ ಎಂಬ ತಾರತಮ್ಯಗಳನ್ನು ಹುಟ್ಟಿಸಿ, ಮನುಷ್ಯನನ್ನು ಸ್ವಧರ್ಮಶ್ರದ್ಧೆಯಿಂದ ವಿಚಲಿತಗೊಳಿಸುತ್ತದೆ. ಸ್ವಧರ್ಮನಿಷ್ಠೆ ಹಾಳಾಗುತ್ತಲೇ ಕಾರ್ಯಕ್ಷೇತ್ರಕ್ಕೂ ಸಮಾಜಕ್ಕೂ ವ್ಯಕ್ತಿಗೂ ಹಾನಿ ಸಂಭವಿಸುತ್ತದೆ. ಸ್ವಧರ್ಮವೆಂದರೆ ‘ವೃತ್ತಿಧರ್ಮ’ ಎಂದಿಟ್ಟುಕೊಳ್ಳೋಣ. ರೈತನಿಗೆ ತನ್ನ ವ್ಯವಸಾಯಕರ್ಮದಲ್ಲಿ ಹೆಗ್ಗಳಿಕೆ ಇರಬೇಕು; ಸೈನಿಕನಿಗೆ ತನ್ನ ಕರ್ತವ್ಯದಲ್ಲಿ ಅವಿಚಲನಿಷ್ಠೆ ಇರಬೇಕು; ಅಂತೆಯೇ ರಾಜನಿಗೆ ಅವನ ವೃತ್ತಿಯಲ್ಲೂ ನಿಷ್ಠೆಯಿರಬೇಕು. ಹೀಗೆ, ಎಲ್ಲರೂ ಅವರವರ ಪಾಲಿನ ಕರ್ತವ್ಯವನ್ನು ಅಭಿಮಾನದಿಂದ ಅಚ್ಚುಕಟ್ಟಾಗಿ ಮಾಡುತ್ತಿದ್ದರೇ ಚೆನ್ನ! ರಾಜನು ಕರ್ತವ್ಯವಿಮುಖನಾದರೆ ಆಡಳಿತ ಹಾಳಾಗಿ ಸಮಸ್ಯೆಗಳೇಳುತ್ತವೆ. ರೈತನು ಕರ್ತವ್ಯವಿಮುಖವಾದರೆ ಸಾಮಾಜಿಕರೆಲ್ಲರೂ ಕಷ್ಟಪಡುತ್ತಾರೆ; ಸೈನಿಕನು ಕರ್ತವ್ಯವಿಮುಖನಾದರೆ ದೇಶವೇ ಅಪಾಯಕ್ಕೀಡಾಗುತ್ತದೆ; ಶಿಕ್ಷಕನು ಕರ್ತವ್ಯವಿಮುಖನಾದರೆ ಮಕ್ಕಳ ಕಲಿಕೆ ಕುಂಠಿತವಾಗುತ್ತದೆ; ಮನೆಯಜಮಾನ ಕರ್ತವ್ಯವಿಮುಖನಾದರೆ, ಮನೆತನವೇ ಸಮಸ್ಯೆಗಳ ಬೀಡಾಗುತ್ತದೆ. ಹೀಗೆ ಯಾವುದೇ ವೃತ್ತಿಯಲ್ಲಿ ಕರ್ತವ್ಯಲೋಪವಾದಾಗ, ಸಮಾಜವೂ ಸಾಮಾಜಿಕರೂ ಕಷ್ಟಕ್ಕೊಳಗಾಗುವಂತಾಗುತ್ತದೆ. ಹಾಗಾಗಬಾರದೆಂದೇ ಸ್ವಧರ್ಮನಿಷ್ಠೆಯನ್ನು ಒತ್ತಿಹೇಳುವುದು. ಎಲ್ಲರೂ ಅವರವರ ಕರ್ತವ್ಯವನ್ನು ಸರಿಯಾಗಿ ಮಾಡಿಬಿಟ್ಟರೆ, ಎಲ್ಲರಿಗೂ ಹಕ್ಕುಗಳು ದಕ್ಕುವುದೂ ಖಂಡಿತ!
ಸ್ವಧರ್ಮ ಎಂದರೆ ‘ಪ್ರಜಾಧರ್ಮ’ (ನಾಡು-ನುಡಿ, ಸಂಸ್ಕೃತಿ-ಪರಂಪರೆಗಳಲ್ಲಿ ನಿಷ್ಠೆ) ಎಂದು ಅರ್ಥಮಾಡಿಕೊಳ್ಳಬಹುದು. ಕನ್ನಡನಾಡಿನಲ್ಲಿ ಹುಟ್ಟುತ್ತಲೇ ಇಲ್ಲಿನ ಭಾಷೆ, ಸ್ಥಳೀಯ ಆಚಾರ-ವಿಚಾರ, ಶಿಷ್ಟಾಚಾರ, ಕಲೆ-ಸಾಹಿತ್ಯ, ಇತಿಹಾಸ-ಚರಿತ್ರೆಗಳನ್ನೂ ಅಭಿಮಾನದಿಂದ ಕಲಿತು ಉಳಿಸಿ-ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಸ್ವಧರ್ಮವೆನಿಸುತ್ತದೆ. ಬೇರೆಯದನ್ನು ಕಲಿತರೂ, ಸ್ವಧರ್ಮ ಬಿಡಬಾರದು. ನಾಡು-ನುಡಿಗಳ ಕೊಂಡಿ ಕತ್ತರಿಸಿಕೊಂಡುಹೋದವನು ಪರಕೀಯ ಪ್ರಭಾವಕ್ಕೆ ಸುಲಭವಾಗಿ ವಶವಾಗುತ್ತಾನೆ. ಮುಂದಿನ ಪೀಳಿಗೆಗೆ ಪರಂಪರೆಯ ಸಮೃದ್ಧ ಸಂಸ್ಕಾರ ದಕ್ಕದೆ ಹೋಗುತ್ತದೆ. ಅವನೂ ಭಾವನಾತ್ಮಕವಾಗಿ ಬಡವಾಗುತ್ತಾನಲ್ಲದೆ, ಅವನ್ನು ಪಡೆದ ನಾಡಿಗೂ ನಷ್ಟವಾಗುತ್ತದೆ.
ಸ್ವಧರ್ಮ ಎಂದರೆ ಜನ್ಮತಃ ಪಡೆದುಬಂದ ‘ಮತ-ಪಂಥ- ಪರಂಪರೆ’ ಎಂದು ಅರ್ಥಮಾಡಿಕೊಂಡರೆ, ಅದು ‘ಧರ್ಮನಿಷ್ಠೆ’ ಎನಿಸುತ್ತದೆ. ಮನುಷ್ಯನು ಆಯಾ ದೇಶ-ಕಾಲ-ಪರಿಸರ ಕುಲ-ಪರಂಪರೆಗಳ ಹಿನ್ನಲೆಯಲ್ಲಿ, ಸಹಜವಾಗಿಯೂ ಸುಲಭವಾಗಿಯೂ ಒಂದಷ್ಟು ಒಲವು-ನಲಿವುಗಳನ್ನು ಬೆಳೆಸಿಕೊಳ್ಳುತ್ತಾನೆ. ಅಂಥ ಆತ್ಮೀಯ ಮಾತೃಸಂಸ್ಕೃತಿಯಲ್ಲಿ ಅವನಲ್ಲಿ ಜ್ಞಾನವಿಕಾಸವೂ ಆತ್ಮವಿಕಾಸವೂ ಸಹಜವೂ ಸುಲಭವೂ ಆಗುತ್ತದೆ. ಆದರೆ ಈ ಸ್ವತಂತ್ರ-ಸ್ವಚ್ಛಂದ-ವಿಕಾಸ ತಡೆದು, ಬಾಹ್ಯದಿಂದ ಬೇರೆಯದೇ ಭಾವನೆ-ವಿಚಾರ ನಂಬಿಕೆ-ಆಚರಣೆಗಳನ್ನು ಹೇರಿದಾಗ, ಹಳೆಯದನ್ನು ಮರೆಯಲಾಗದೆ, ಹೊಸತನ್ನು ಒಮ್ಮೆಲೇ ಜೀರ್ಣಿಸಿಕೊಳ್ಳಲಾಗದೆ ಸಂಕಟಕ್ಕೊಳಗಾಗುತ್ತಾನೆ. ಭಾವುಕತೆಯ ಭರದಲ್ಲೋ, ಆಮಿಷಗಳ ದುರಾಸೆಯಿಂದಲೋ, ಹೊಸಸಿದ್ಧಾಂತದ ಕ್ಷಣಿಕ ಆಕರ್ಷಣೆಗೋ ಮನಸೋತು, ಮಾತೃಧರ್ಮ ತ್ಯಜಿಸಬಹುದು. ಆದರೆ ಅದು ಆಂತರಿಕ ಪರಿವರ್ತನೆಯಾಗಿರದೆ, ಬಾಹ್ಯವಿವರಗಳ ಬದಲಾವಣೆಯಷ್ಟೇ ಆಗಿರುತ್ತದೆ. ಮಾತೃಸಂಸ್ಕೃತಿಯ ಬಗ್ಗೆ ದ್ವೇಷವನ್ನು ಹೆಚ್ಚಿಸಿಕೊಳ್ಳುತ್ತ, ಹೊಸದಾಗಿ ಅಂಗೀಕರಿಸಿದ್ದರ ಬಗ್ಗೆ ಅಂಧಮೋಹವನ್ನು ಬೆಳೆಸಿಕೊಳ್ಳುತ್ತ, ಭಾವುಕತೆಯಲ್ಲಿ ಕುದಿಯುತ್ತಾರೆ. ಅಂತಹ ಮತಿ-ಮನಗಳಲ್ಲಿ ಪ್ರೌಢ ಜಿಜ್ಞಾಸೆಯಾಗಲಿ ಪ್ರಾಮಾಣಿಕ ಧ್ಯಾನಾನುಭವಗಳಾಗಲಿ ಸಾಗಲಾರವು. ಇಂತಹ ಮತಾಂತರ ವ್ಯಕ್ತಿಗೆ ಆತ್ಮಸಂಕೋಚಕಾರಕವೇ ಹೊರತು ಆತ್ಮವಿಕಾಸಕಾರಕವಾಗಲಾರದು. ಜೀವಿಗಳೆಲ್ಲರೂ ಅವರವರ ವೇಗದಲ್ಲಿ, ಅವರವರದೇ ಮಾರ್ಗದಲ್ಲಿ ಸತ್ಯಸಾಕ್ಷಾತ್ಕಾರ ಮಾಡಿಕೊಳ್ಳಲು ಅವರವರದೇ ಅಂತರಂಗದಲ್ಲಿ ನೆಲೆಯನ್ನು ಕಂಡುಕೊಳ್ಳಬೇಕು, ಅದನ್ನೇ ‘ಸ್ವಧರ್ಮ’ ಎನ್ನುವುದು. ಇಂತಹ ಸ್ವಧರ್ಮವೇ ಸರ್ವರಿಗೂ ಸರ್ವಥಾ ಶ್ರೇಯಸ್ಕರ ಎನ್ನುತ್ತಿದ್ದಾನೆ ಕೃಷ್ಣ.

ಡಾ. ಆರತೀ ವಿ. ಬಿ.

ಕೃಪೆ : ವಿಜಯವಾಣಿ

Leave a Reply