ಜಾತಿಭೇದವಿಲ್ಲದ ವರ್ಣವ್ಯವಸ್ಥೆಯ ನಿದರ್ಶನಗಳು

ಜಾತಿಭೇದವಿಲ್ಲದ ವರ್ಣವ್ಯವಸ್ಥೆಯ ನಿದರ್ಶನಗಳು

ವರ್ಣವ್ಯವಸ್ಥೆಯು ವ್ಯಕ್ತಿಗಳ ಸತ್ವಸಾಮರ್ಥ್ಯಗಳ ಅಭಿವ್ಯಕ್ತಿಗೆ ಪ್ರತಿಬಂಧಕವಾಗುವಂತಹ ‘ಜಾತಿ’ಯ ಉರುಳಾಗಿರಲಿಲ್ಲ ಎನ್ನುವುದನ್ನು ಮನಗಾಣಬೇಕಾದರೆ ಪ್ರಾಚೀನ ಉದಾಹರಣೆಗಳನ್ನು ನೋಡಬೇಕಾಗುತ್ತದೆ. ಈಗಾಗಲೇ ಒಂದಷ್ಟು ಪೌರಾಣಿಕ ಉದಾಹರಣೆಗಳನ್ನು ನೋಡಿದ್ದೇವೆ. ಇನ್ನಷ್ಟು ಉದಾಹರಣೆಗಳನ್ನು ನೋಡೋಣ.

ಕ್ಷೌರಿಕರ ವಂಶದಲ್ಲಿ ಹುಟ್ಟಿದ ಮಹಾಪದ್ಮನಂದನು ಕ್ಷತ್ರಿಯ ರಾಜರನ್ನೆಲ್ಲ ಧ್ವಂಸ ಮಾಡಿ ‘ನಂದಸಾಮ್ರಾಜ್ಯ’ವನ್ನು ಕಟ್ಟಿದ. ಕ್ಷೌರಿಕ-ಕುಲದ ಈ ವೀರನನ್ನು ಸಮಾಜವು ರಾಜನನ್ನಾಗಿ ಅಂಗೀಕರಿಸಿತ್ತು ಎನ್ನುವುದು ಗಮನೀಯ. ಬ್ರಾಹ್ಮಣಕುಲದ ಭಗವಾನ್ ಚಾಣಕ್ಯರು ವೃತ್ತಿಯಲ್ಲಿ ಶಿಕ್ಷಕರಾದರೂ ರಾಜನೀತಿಯಲ್ಲಿ ಅದಮ್ಯ ಉತ್ಸಾಹ-ಪರಿಣತಿಗಳನ್ನು ಮೆರೆದರು. ಭ್ರಷ್ಟಾಚಾರದ ಉತ್ತುಂಗಕ್ಕೇರಿದ ನಂದರ ಅಧಿಕಾರವನ್ನು ನಾಶಗೈಯಲು ಹಾಗೂ ಭಾವೀ ಸಾಮ್ರಾಜ್ಯವನ್ನು ಕಟ್ಟಲು ಅವರು ಆಯ್ದುಕೊಂಡದ್ದು ವೀರಯುವಕ ಚಂದ್ರಗುಪ್ತ ಮೌರ್ಯನನ್ನು. ಈ ಚಂದ್ರಗುಪ್ತನು ‘ಮೋರೀ’ ಎಂಬ ಹೆಸರಿನ ದಾಸಿಯ ಮಗ. ಬ್ರಾಹ್ಮಣನಾಗಿಯೂ ರಾಜನೀತಿಯಲ್ಲಿ ತೊಡಗಿದ ಚಾಣಕ್ಯರನ್ನಾಗಲಿ, ದಾಸಿಯ ಮಗನಾದರೂ ಸಾಮ್ರಾಟನ ಸ್ಥಾನಕ್ಕೇರಿದ ಚಂದ್ರಗುಪ್ತ ಮೌರ್ಯನನ್ನಾಗಲಿ ಈ ಸಮಾಜವು ತಿರಸ್ಕರಿಸಲಿಲ್ಲ, ಮೆಚ್ಚಿ ಆದರಿಸಿತು. ಆ ಕಾಲದಲ್ಲೂ ವರ್ಣವು ‘ಜಾತಿ’ಯ ಉರುಳಾಗಿರಲಿಲ್ಲವೆನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಆಂಧ್ರದ ರಾಜವಂಶದಲ್ಲಿ ಹುಟ್ಟಿಯೂ ವಿರಕ್ತಿಯ ಪಥವನ್ನು ಹಿಡಿದು ಹೊರಟ ಅವಧೂತ-ಕವಿ ಮಹಾತ್ಮ ವೇಮನನನ್ನು ಈ ಸಮಾಜವು ‘ಕರ್ತವ್ಯಭ್ರಷ್ಟ’ ಎನ್ನಲಿಲ್ಲ, ‘ಯೋಗಿ’ಯೆಂದು ಗುರುತಿಸಿ ತಲೆಬಾಗಿತು. ‘ಜ್ಞಾನ-ಬೋಧನೆಗಳೆಲ್ಲ ನಮ್ಮ ಸೊತ್ತು, ಇದಕ್ಕೆ ಕೈ ಹಾಕಬೇಡ’ ಎಂದು ಬ್ರಾಹ್ಮಣರಾರೂ ಆತನಿಗೆ ಅಡ್ಡಿಯೂ ಮಾಡಲಿಲ್ಲ!

ಸಂಗಮಸಂಸ್ಥಾನದ ಸ್ಥಾಪಕರಾದ ಹರಿಹರ-ಬುಕ್ಕರಾಯರು ಮೂಲತಃ ಕುರುಬರಾಗಿದ್ದು, ಮಾಧವ-ವಿದ್ಯಾರಣ್ಯ ಯತಿವರೇಣ್ಯರ ಮಾರ್ಗದರ್ಶನದಿಂದ ರಾಜ್ಯವನ್ನು ಕಟ್ಟಿದವರು. ಆಕ್ರಮಣಕಾರರ ವಶಕ್ಕೆ ಬಿದ್ದು, ಬಲವಂತದ ಮತಾಂತರಕ್ಕೂ ಒಳಪಟ್ಟಿದ್ದ ಅವರನ್ನು ಮಾತೃಧರ್ಮಕ್ಕೆ ಕರೆತಂದು, ಅವರ ಮೂಲಕ ಭವ್ಯ ಕರ್ನಾಟಸಾಮ್ರಾಜ್ಯವನ್ನು (ವಿಜಯನಗರ ಸಾಮ್ರಾಜ್ಯ) ಸ್ಥಾಪಿಸಿದವರು ವಿದ್ಯಾರಣ್ಯರು. ಈ ರಾಜಕುಮಾರರ ಹುಟ್ಟಾಗಲಿ, ಮತಾಂತರಗಳ ಹಿನ್ನೆಲೆಯಾಗಲಿ ಯಾವುದೂ ಅವರ ರಾಜ್ಯಸ್ಥಾಪನೆಗೆ ಅಡ್ಡಿಯಾಗಲಿಲ್ಲ ಎನ್ನುವುದು ಗಮನೀಯ. ಅವರನ್ನು ಶಿಷ್ಯರಾಗಿ ಸ್ವೀಕರಿಸಿದ ವಿದ್ಯಾರಣ್ಯರೂ, ದೊರೆಗಳಾಗಿ ಅಂಗೀಕರಿಸಿದ ಸಮಾಜವೂ, ವರ್ಣವ್ಯವಸ್ಥೆಯ ಔದಾರ್ಯಕ್ಕೆ ಕನ್ನಡಿ ಹಿಡಿಯುತ್ತವೆ. ಕರ್ಮಜಾಟಿಲ್ಯವನ್ನೂ, ಅವೈದಿಕಮತಗಳನ್ನೂ ಖಂಡಿಸಿ ಜ್ಞಾನಪಾರಮ್ಯವನ್ನು ಸಾರಿದ ಆಚಾರ್ಯ ಶಂಕರರನ್ನು ಭಕ್ತಿಯಿಂದ ಗುರುವೆಂದು ಆದರಿಸಿದ ಇದೇ ಸಮಾಜವು, ಕಾಲಾಂತರದಲ್ಲಿ ಅದೇ ಶಾಂಕರತತ್ವವನ್ನು ಖಂಡಿಸಿ ವಿಶಿಷ್ಟಾದ್ವೆ ೖತ ಹಾಗೂ ದ್ವೆ ೖತಮತಗಳನ್ನೂ ಭಕ್ತಿಪ್ರಾಶಸ್ತ್ಯನ್ನೂ ಮಂಡಿಸಿದ ರಾಮಾನುಜ-ಮಧ್ವಾಚಾರ್ಯರುಗಳನ್ನೂ ಅಷ್ಟೇ ಗೌರವದಿಂದ ಸ್ವೀಕರಿಸಿತು.

ತುಳುವವಂಶದ ಹೆಣ್ಣುಮಗಳಲ್ಲಿ ಜನಿಸಿದ ರಾಜಾ ಶ್ರೀಕೃಷ್ಣದೇವರಾಯನು ಕ್ಷಾತ್ರ-ಸಾಹಿತ್ಯ-ಕಲೆಗಳ ಮಹಾಪೋಷಕನಾಗಿ ವಿಜಯನಗರಸಾಮ್ರಾಜ್ಯದ ಕುಲತಿಲಕನೆನಿಸಿ, ಕೀರ್ತಿಶೃಂಗಕ್ಕೇರಿದ ದೊರೆ. ಚೆನ್ನಮ್ಮಾದೇವೀ ದೇವದಾಸಿ ಕುಲದಲ್ಲಿ ಜನಿಸಿಯೂ ವಿದ್ಯೆ, ಪ್ರತಿಭೆ ಹಾಗೂ ಬುದ್ಧಿಮತ್ತೆಯಿಂದ ಅಪಾರ ಜನಮನ್ನಣೆ-ರಾಜಮನ್ನಣೆಗಳನ್ನು ಗಳಿಸಿ, ವಿಜಯನಗರಸಾಮ್ರಾಜ್ಯದರಸ ಶ್ರೀ ಕೃಷ್ಣದೇವರಾಯರ ಮಹಾರಾಣಿಯ ಪಟ್ಟಕ್ಕೇರಿದಾಕೆ ಎನ್ನುವುದೂ ಗಮನೀಯ!

ವಿಷ್ಣುಭಕ್ತಿಯ ಪಾರಮ್ಯವನ್ನು ಮೆರೆದ ತಮಿಳನಾಡಿನ ಆಳ್ವಾರರಲ್ಲೂ, ಶಿವಭಕ್ತಿಧುರೀಣರಾದ ನಾಯನ್ಮಾರರಲ್ಲೂ ಬಹುತೇಕರು ಬ್ರಾಹ್ಮಣರಲ್ಲ. ಬ್ರಾಹ್ಮಣರೂ ಸೇರಿದಂತೆ ಸಮಸ್ತರೂ ಆ ಎಲ್ಲ ಆಳ್ವಾರುಗಳ ಮೂರ್ತಿಗಳನ್ನು ಇಂದಿಗೂ ದೇಗುಲಗಳಲ್ಲಿರಿಸಿ ಪೂಜಿಸುವುದನ್ನು ಕಾಣಬಹುದು. ಇಲ್ಲಿ ಆಳ್ವಾರರ ಹುಟ್ಟು ಮುಖ್ಯವಲ್ಲ, ಅವರ ಸಾಧನೆಗೆ ಅಗ್ರಸ್ಥಾನ ಎನ್ನುವುದು ಸ್ವಯಂ ಸ್ಪಷ್ಟ.

ಮತ್ತಷ್ಟು ಉದಾಹರಣೆಗಳನ್ನು ಮುಂದೆ ನೋಡೋಣ.

ಡಾ. ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply