ಜ್ಞಾನ ಶ್ರದ್ಧೆಗಳಿಲ್ಲದೆ ನಾಶವಾಗುವ ಸಂಶಯಾತ್ಮ

ಜ್ಞಾನ ಶ್ರದ್ಧೆಗಳಿಲ್ಲದೆ ನಾಶವಾಗುವ ಸಂಶಯಾತ್ಮ

‘ಜ್ಞಾನವೇ ಎಲ್ಲ ಧರ್ಮಕರ್ಮಗಳ ಪರಮಗಮ್ಯ’ ಎನ್ನುವುದನ್ನೂ ‘ಶ್ರದ್ಧಾವಂತ ಮಾತ್ರ ಆ ಜ್ಞಾನವನ್ನು ಪಡೆದು ‘‘ಪರಾಶಾಂತಿ’’ಯನ್ನು ಹೊಂದುತ್ತಾನೆ’ ಎನ್ನುವುದನ್ನೂ ಶ್ರೀಕೃಷ್ಣನು ವಿವರಿಸುತ್ತಿದ್ದನಷ್ಟೆ? ಮುಂದುವರಿಸುತ್ತಾನೆ; ‘ಅಜ್ಞಾನಿಯೂ ಶ್ರದ್ಧೆಯಿಲ್ಲದವನೂ ಸಂಶಯಾತ್ಮನೂ ನಾಶವಾಗುತ್ತಾನೆ. ಸಂಶಯಾತ್ಮನಿಗೆ ಈ ಲೋಕವೂ ಇಲ್ಲ, ಪರಲೋಕವೂ ಇಲ್ಲ, ಸುಖವೂ ಇಲ್ಲ.’ (ಭ.ಗೀ.: 4.40)

ಶ್ರದ್ಧಾಹೀನನಿಗೆ ಜ್ಞಾನ ಲಭಿಸದು. ಜ್ಞಾನವಿಲ್ಲದವನಿಗೆ ಸತ್ಯಾಸತ್ಯಗಳ ಸ್ಪಷ್ಟತೆ ಮೂಡದು. ಹಾಗಾಗಿ ಆತನು ದಿಕ್ಕುಗಾಣದಾಗುತ್ತಾನೆ. ಶ್ರದ್ಧಾಹೀನನು ನಿಶ್ಚಲಮತಿ ಹೊಂದಲಾರ. ಭಾವುಕತೆಯಿಂದಲೋ ಕುತೂಹಲದಿಂದಲೋ ಯಾರ್ಯಾರನ್ನೋ ಯಾವ್ಯಾವುದೋ ಸಿದ್ಧಾಂತಗಳನ್ನೋ ಮತ-ಪಥ-ಪದ್ಧತಿಗಳನ್ನೋ ಅತ್ಯುತ್ಸಾಹದಲ್ಲಿ ಹಿಡಿಯುತ್ತಾನೆ. ಆದರೆ ಬಹಳ ಬೇಗನೆ ಅಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ! ಎಲ್ಲಕ್ಕೂ ಸುಲಭವಾಗಿ ಮನಸೋಲುವ, ಅಷ್ಟೇ ಬೇಗ ಬಿಟ್ಟುಬಿಡುವ ಮನೋದೌರ್ಬಲ್ಯವು ಶ್ರದ್ಧಾಹೀನನದು. ಶ್ರದ್ಧಾಹೀನ ಮನಃಸ್ಥಿತಿಗೆ ರಾಮಕೃಷ್ಣರು ಕೊಡುವ ನಿದರ್ಶನ: ‘ನೂರು ಅಡಿ ಭೂಮಿಯನ್ನು ಅಗೆದರೆ ನೀರು ಸಿಗುತ್ತದೆ’ ಎಂದು ಗುರುವು ಹೇಳಲು, ಶಿಷ್ಯನೊಬ್ಬನು ಅಲ್ಲಿ 5 ಅಡಿ, ಇಲ್ಲಿ 10 ಅಡಿ, ಮತ್ತೊಂದೆಡೆ 20 ಅಡಿ¬- ಹೀಗೆ ಒಟ್ಟು ನೂರು ಅಡಿಯನ್ನೇನೋ ತೋಡಿದನಂತೆ! ಆದರೂ ನೀರೇ ಸಿಗಲಿಲ್ಲವಂತೆ! ಒಂದೇ ಕಡೆ ಅಗೆದಿದ್ದರೆ ನೀರು ಸಿಗುತ್ತಿತ್ತು, ಆದರೆ ಅಷ್ಟು ಸಹನೆ, ಶ್ರದ್ಧೆ ಅವನಿಗಿಲ್ಲ!’

‘ತನ್ನ ನಷ್ಟಕ್ಕೆ ಅಶ್ರದ್ಧೆಯೇ ಕಾರಣ’ ಎಂದು ಇಂಥವರಿಗೆ ಅರ್ಥವಾಗದು. ‘ಗುರುವೇ ಸರಿಯಿಲ್ಲ, ಸಿದ್ಧಾಂತವೇ ಸರಿಯಿಲ್ಲ, ಪದ್ಧತಿಯೇ ಸರಿಯಿಲ್ಲ’ ಎಂಬುದೇ ಅವರ ವಾದವಾಗಿರುತ್ತದೆ! ಇಂತಹವನು ಯಾವುದನ್ನೂ ಹಿಡಿಯಲಾಗದೆ ಯಾವುದನ್ನೂ ಬಿಡಲಾಗದೆ ಎಲ್ಲದರಲ್ಲೂ ವಿಶ್ವಾಸವನ್ನು ಕಳೆದುಕೊಳ್ಳುತ್ತ ಬರಡುಮನದವನಾಗುತ್ತಾನೆ. ಜೀವನದ ಸ್ವಾರಸ್ಯಗಳು ಇವನ ಪಾಲಿಗೆ ಮರೆಯಾಗುತ್ತವೆ. ಗೋಳೊಂದೇ ಉಳಿಯುತ್ತದೆ! ಜೀವನದಿಂದಲೂ ಮತ-ಪಥ-ಗುರುಗಳಿಂದಲೂ ಕಲಿಯುತ್ತ, ಅದನ್ನೂ ಮೀರಿ ಬೆಳೆಯುವ ಚೈತನ್ಯ ಶ್ರದ್ಧಾವಂತನಿಗಿದ್ದರೆ, ಅದೇ ಜೀವನ-ಮತ-ಪಥ-ಗುರುಗಳಿಂದ ಕಲಿಯಲಾಗದೆ, ಬಿಡಲೂ ಆಗದೆ ಗೊಂದಲ-ನಿರಾಶೆಗಳಿಗೆ ಜಾರುವುದು ಅಶ್ರದ್ಧೆಯ ಲಕ್ಷಣ!

ಕೆಲವು ಶ್ರದ್ಧಾಹೀನರು ಕೊರಗುತ್ತ ಗೊಣಗುತ್ತ ದುಃಖಿಗಳಾಗುತ್ತಾರೆ. ಇವರು ಎಷ್ಟೋ ಪರವಾಗಿಲ್ಲ. ಮತ್ತೆ ಕೆಲವರು ಶ್ರದ್ಧಾಹೀನರಿರುತ್ತಾರೆ; ಅವರು ಅಂತರಂಗದ ಈ ಗೊಂದಲವನ್ನು ಸುತ್ತ ಹಂಚುತ್ತಾರೆ! ಇಂಥವರು ಅಪಾಯಕಾರಿ! ಇವರೇ ಸಂಶಯಾತ್ಮರು! ಹಿರಿಯರು, ಪರಂಪರೆಯೂ ತೋರಿದ ಮಾರ್ಗದಲ್ಲಿ ವಿಶ್ವಾಸವಿಡುವ ಶ್ರದ್ಧೆಯೂ ಇವರಿಗಿರದು. ಅದನ್ನು ವಿವೇಚಿಸಿ ತಿಳಿಯುವ ವೈಚಾರಿಕತೀಕ್ಷ್ಣತೆಯೂ ಅರಳದು. ಹೀಗಾಗಿ ಇವರು ಯಾವುದನ್ನೂ ಯಾರನ್ನೂ ಮೆಚ್ಚಲಾಗದೆ, ವಿಶ್ವಸಿಸಲಾಗದೆ ಗೊಂದಲಕ್ಕೀಡಾಗುತ್ತಾರೆ, ಇವರಲ್ಲಿ ಮೊಳೆಯುವುದೇ ಸಂಶಯಬುದ್ಧಿ! ಇವರ ಪಾಲಿಗೆ ಬದುಕು ಹೇಗೆ ನೋಡಿದರೂ ದೋಷಪೂರ್ಣವೇ! ತಮ್ಮ ಪಾಡಿಗೆ ಧರ್ಮಕರ್ಮಗಳಲ್ಲಿ ತೊಡಗಿದವರನ್ನು ಕಂಡರೆ ಇವರಿಗೆ ಅಸಹನೆ, ಅಸಹ್ಯ! ತನ್ನ ಅವಿಶ್ವಾಸ ಗೊಂದಲಗಳನ್ನು ಅರುಹಿ ಅಂತಹವರ ಮನಸ್ಸನ್ನೂ ಕೆಡಿಸಲು ನೋಡುತ್ತಾರೆ. ಅವರ ಶ್ರದ್ಧೆಯನ್ನೂ ವಿಚಾರವನ್ನೂ ಬದಲಿಸಲು ಯತ್ನಿಸುತ್ತಾರೆ! ಇವರಿಗೆ ಲೋಕದ ವಿಧಿವಿಧಾನಗಳಾವುವೂ ಸರಿಬಾರವು! ಪರಲೋಕದ ವಿಷಯವೆಂದರಂತೂ ಅಸಡ್ಡೆ! ದೂಷಣ, ತೇಜೋವಧೆ, ವಿಭಜನ, ತಾರತಮ್ಯ, ದಂಗೆ¬ಗಳೇ ಇವರಿಗೆ ಪ್ರಿಯ. ಅದನ್ನು ಇವರು ‘ಪ್ರಗತಿಯ ಮಾರ್ಗ, ಮಾನವೀಯತೆಯ ಸಮರ್ಥನೆ’ ಎಂದು ಸಮರ್ಥಿಸಿಕೊಳ್ಳುವ ಜಾಣತನ ತೋರುತ್ತಾರೆ!

ಅದು ಸರಿ, ಯಾವುದೇ ಸಿದ್ಧಾಂತ-ಪದ್ಧತಿಗಳನ್ನು ಒಪ್ಪಲು ಅಥವಾ ಒಪ್ಪದಿರಲು, ಇವರು ಮೂಲಗಳ ಅಧ್ಯಯನವನ್ನಾಗಲಿ, ಪ್ರಾಮಾಣಿಕ ಪರೀಕ್ಷಣವನ್ನಾಗಲಿ ಮಾಡುತ್ತಾರೆಯೆ? ಇಲ್ಲವೇ ಇಲ್ಲ! ಭಂಜಿಸುವ-ಹಂಗಿಸುವ-ದೂಷಿಸುವ ತಮ್ಮ ಚಟಕ್ಕೆ ಅನುಕೂಲಿಸುವಂತಹ ಯಾವುದಾದರೂ ರೆಡಿಮೇಡ್ ಸಿದ್ಧಾಂತವನ್ನು ಕೈಗೆತ್ತಿಕೊಂಡು, ಅದನ್ನು ತಮ್ಮದೆಂಬಂತೆ ವ್ಯಾಖಾನಿಸುತ್ತ, ಸುಲಭದ ಕೀರ್ತಿ-ಪ್ರಶಸ್ತಿಗಳನ್ನು ಗಿಟ್ಟಿಸಿಕೊಳ್ಳುತ್ತ ತಿರುಗುತ್ತಾರೆ!

ನಮ್ಮ ದೇಶ-ಧರ್ಮ-ಸಂಸ್ಕೃತಿ-ಸಮಾಜದ ಮಜಲುಗಳನ್ನೂ ಕೀಳೆಂದು ಬಿಂಬಿಸಿ ಅವಮಾನಿಸಲೆಂದೇ, ನಮ್ಮ ಅಸ್ಮಿತೆಯನ್ನು ಹಾಳುಗೆಡವಿ ಮತಾಂತರಿಸಲೆಂದೇ, ಅಂದು ರ್ಚಚಿಸ್ಟ್ ಬ್ರಿಟಿಷರು ಹುಟ್ಟಿಸಿದ ಸುಳ್ಳುಪೊಳ್ಳುಗಳ ‘ಇತಿಹಾಸ’ವನ್ನೂ ‘ವಿಶ್ಲೇಷಣೆ’ಗಳನ್ನೂ ಪ್ರಶ್ನಿಸದೆ ಪ್ರಮಾಣಿಸದೆ ಹಿಡಿದು, ಬಾಯಿ ತುಂಬ ಚಪ್ಪರಿಸುವ ಇಂಥ ಶ್ರದ್ಧಾಹೀನರೂ ಸಂಶಯಾತ್ಮರೂ ವೇದಿಕೆಗಳಲ್ಲಿ ಮೆರೆಯುವುದನ್ನು ಕಾಣಬಹುದು. ಸಮಾಜವನ್ನು ಪಂಗಡಗಳಲ್ಲಿ ವಿಂಗಡಿಸದೆ ಇವರು ಮಾತನಾಡಲಾರರು. ಧರ್ಮ-ದೇವರು-ವೇದ-ಸದಾಚಾರಗಳನ್ನು ಹಂಗಿಸದೆ ವಾದಿಸಲಾರರು. ತಾವಾಗಿಯೇ ‘ಪ್ರಗತಿಪರ’ರೆಂಬ ಪಟ್ಟ ಕಟ್ಟಿಕೊಂಡು, ಮನದ ಕಲ್ಮಶದ ದುರ್ವಾಸನೆಯನ್ನು ಸುತ್ತ ಹರಡುತ್ತಾರೆ. ಇವರಿಗೆ ಸತ್ಯ-ಧರ್ಮ-ನ್ಯಾಯಗಳ ಅಸ್ತಿತ್ವದಲ್ಲೇ ವಿಶ್ವಾಸವಿಲ್ಲ! ‘ಇರುವುದು ಇರಬಹುದಾದದ್ದು ಕೇವಲ ಭೇದವೇ! ಅನ್ಯಾಯವೇ!’ ಎನ್ನುವುದೇ ಇವರ ವಾದ! ಯಾವುದನ್ನೂ ಪ್ರೀತಿಸಲಾರರು, ಇತರರ ಪ್ರೀತಿ, ಶ್ರದ್ಧೆಗಳನ್ನು ಕಂಡು ಸುಮ್ಮನೆಯೂ ಇರಲಾರರು. ಮಾತೆತ್ತಿದರೆ ಖಂಡಿಸುವ ಇವರಲ್ಲಿ ಮಂಡಿಸಲು ಸತ್ವಸಂಪನ್ನವಾದದ್ದೇನೂ ಇರದು! ಇಂಥ ‘ಸಂಶಯಾತ್ಮನು ನಾಶವಾಗುತ್ತಾನೆ’ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾನೆ ಕೃಷ್ಣ.

ಡಾ ಆರತೀ ವಿ. ಬಿ.

ಕೃಪೆ: ವಿಜಯವಾಣಿ

Leave a Reply