ಕಾವೇರಿಯ ಪ್ರೀತಿ ಹರಿಯಲಿ ಕನ್ನಡಿಗರ ಮನಗಳಲ್ಲಿ; ಬಳಸುವುದರ ಜೊತೆಗೆ ಉಳಿಸುವ ಕುರಿತೂ ಚಿಂತಿಸೋಣ!

ಕಾವೇರಿಯ ಪ್ರೀತಿ ಹರಿಯಲಿ ಕನ್ನಡಿಗರ ಮನಗಳಲ್ಲಿ; ಬಳಸುವುದರ ಜೊತೆಗೆ ಉಳಿಸುವ ಕುರಿತೂ ಚಿಂತಿಸೋಣ!

– ಡಾ. ಆರತೀ ವಿ.ಬಿ.
ಭಾರತೀಯರು ಅನಾದಿಯಿಂದಲೂ ನದಿಯನ್ನು ಬಹಳವಾಗಿ ಪ್ರೀತಿಸುತ್ತ ಬಂದವರು. ಆದರೆ ಅರ್ವಾಚೀನ ದಶಕಗಳಲ್ಲಿ ಈ ಭಾವ ಕುಗ್ಗುತ್ತಿದೆ. ಆಂಗ್ಲರು ಹೇರಿದ ಶಿಕ್ಷಣ ಪದ್ಧತಿಯಲ್ಲಿ ನಮಗೆ ನದಿಯನ್ನು ‘ಚೈತನ್ಯಮಯ ಜೀವಧಾರೆ’ಯೆಂದು ಕಂಡು ಆದರಿಸುವುದನ್ನು ಕಲಿಸುವುದಿಲ್ಲ. ಉಪಭೋಗಕ್ಕಾಗಿ ಇರುವ ‘water resource’
ಎಂದೇ ‘ಕಲಿಸಲಾಗುತ್ತಿದೆ. ಹೀಗಾಗಿ ಸುತ್ತಲ ಪ್ರಕೃತಿಯನ್ನು ‘ಬೇಕೆಂಬಂತೆ ಬಳಸು, ಸಾಕಾದರೆ ಬಿಸಾಡು’ ಎನ್ನುವ ಸ್ವಾರ್ಥ, ಉಡಾಫೆ, ಅಹಂಕಾರಗಳು ನಮ್ಮಲ್ಲಿ ಬೆಳೆದಿವೆ. ದಶಕಗಳ ನಮ್ಮ ಈ ಮೂರ್ಖ ವರ್ತನೆಯಿಂದಾಗಿ, ಸಹಸ್ರಮಾನಗಳ ಕಾಲ ವಿಪುಲವಾಗಿ ಹರಿದ ನದಿಗಳು ಕ್ಷಯಿಸಲಾರಂಭಿಸಿವೆ.

ನೀರಿನ ಅಭಾವ ಕಾಡಹತ್ತಲಾರಂಭಿಸಿದಾಗ ಬೆಚ್ಚಿ ಬೀಳುತ್ತಿದೇವೆ. ಪರಿಸರ ಸ್ನೇಹದ ಬಗ್ಗೆ ‘ಮಾತನಾಡಲು’ ತೊಡಗಿದ್ದೇವೆ. ಆದರೆ ಇಂತಹ ಭಾಷಣ ಸಂಭಾಷಣಗಳಲ್ಲಿತೊಡಗುವ ನಾವೂ ನಮ್ಮ ಬಚ್ಚಲಲ್ಲೂ ಅಡುಗೆಮನೆಯಲ್ಲೂ ಕೊಡಗಟ್ಟಲೆ ನೀರು ಪೋಲು ಮಾಡಿದ್ದರೆ ಆಶ್ಚರ್ಯವಿಲ್ಲ! ಶವರ್‌ನಲ್ಲಿ ಗಂಟೆಗಟ್ಟಲೆ ಮಜ ತೆಗೆಯುವ ನಮಗೆ ನೀರಿನ ಮಹತ್ವ ಅರಿವಾಗಿಯೇ ಇಲ್ಲ.
ಅತ್ತ ತಲಕಾವೇರಿಯ ಕಾವೇರಿಗೆ ಕೈಮುಗಿಯುತ್ತೇವೆ, ಯಾತ್ರೆ ಹೋಗಿ ಬರುತ್ತೇವೆ, ಕಾವೇರಿಯ ಚಿತ್ರವನ್ನು ಪೂಜಿಸುತ್ತೇವೆ, ಕಾವೇರಿಯ ಜಲವನ್ನು ಮನೆಯಲ್ಲಿರಿಸುತ್ತೇವೆ. ಆದರೆ ಅದೇ ಕಾವೇರಿಯ ನೀರು ನಲ್ಲಿಯಲ್ಲಿ ಹರಿದುಬಂದು ನಮ್ಮನ್ನು ನಿತ್ಯವೂ ಸಾಕುವಾಗ ಮಾತ್ರ ಆ ಗೌರವಭಾವ ಅದೆಲ್ಲಿ ಮಾಯವಾಗಿ ಹೋಗುತ್ತದೊ! ಇದರ ಅರ್ಥವೇನು?! ಭಾವನೆ ಚೆನ್ನಾಗಿದೆ, ಆದರೆ ‘ತರಬೇತಿ’ ಸರಿಯಿಲ್ಲ ಎಂದು! ಕಾವೇರಿಯ ಬಗ್ಗೆ ಪೂಜ್ಯ ಭಾವವನ್ನು ಕಾರ್ಯರೂಪಕ್ಕೆ ತರುವ ಪದ್ಧತಿಯನ್ನು ಬಿಟ್ಟುಬಿಟ್ಟಿದ್ದೇವೆ. ಪಾಶ್ಚಾತ್ಯರ ‘ಯೂಸ್ ಆ್ಯಂಡ್ ಥ್ರೋ’ ಕುಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದೇವೆ!

ನಮ್ಮ ಈ ನಾಡಿನಲ್ಲಿ ಜಲಸಂಪನ್ಮೂಲಗಳನ್ನು ಬಳಸುವಾಗ ಧರಿಸಿದ ಭಾವವೇ ಬೇರೆ. ಅದನ್ನು ರಕ್ಷಿಸಲು ಬಳಸಿದ ಮಾರ್ಗಗಳೂ ಬೇರೆ. ಎಳೆಯ ಮನಸ್ಸುಗಳಲ್ಲೇ ಜಲವನ್ನು ‘ದೇವತೆ’ಯೆಂಬ ಭಾವದಿಂದ ನೋಡಲು ಕಲಿಸಲಾಗುತ್ತಿತ್ತು. ಊರಿನ ಕೆರೆ- ಹೊಳೆ- ಅಂತರ್ಜಲಗಳನ್ನು ‘ಗಂಗೆ’ ಎಂದು ಭಾವಿಸಲಾಗುತ್ತಿತ್ತು. ಬಾವಿ ತೋಡಿಸುವ ಮುನ್ನ ಗಂಗಾಪೂಜೆ ಮಾಡಲಾಗುತ್ತಿತ್ತು. ದಕ್ಷಿಣದ ಪ್ರತಿಯೊಂದು ನದಿಯನ್ನೂ ‘ದಕ್ಷಿಣ ಗಂಗೆ’ಯೆಂದೇ ಮಾನ್ಯ ಮಾಡಲಾಗುತ್ತದೆ. ವನರಾಶಿಯನ್ನು ಶಾಕಾಂಬರೀ ಎಂದೂ, ದವಸ-ಧಾನ್ಯಗಳನ್ನು ಧಾನ್ಯಲಕ್ಷ್ಮೀ ಎಂದೂ, ಆಕಳನ್ನು ಗೋಮಾತೆಯೆಂದೂ ಪೂಜಿಸುವುದನ್ನೂ ನೋಡಬಹುದು. ನದಿಯ ಉಗಮ, ಹರಿವು, ಕಡಲು ಸೇರುವಿಕೆ, ದ್ವೀಪ, ತೀರ, ಪ್ರವಾಹ, ಬತ್ತುವಿಕೆ- ಎಲ್ಲವನ್ನೂ ಚೈತನ್ಯಮಯವಾದ ನದಿಯ ಜೀವನದ ಅರ್ಥಪೂರ್ಣ ಪ್ರಕ್ರಿಯೆಗಳು ಎಂಬಂತೆಯೇ ಕಾಣಲಾಗುತ್ತದೆ.

ಮಾನವ ಜೀವನದ ಏಳುಬೀಳುಗಳೊಡನೆ ಸಮೀಕರಿಸಿ ಕಾಣಲಾಗುತ್ತಿತ್ತು. ನದಿಯೊಡನೆ ಮಾತನಾಡುವ, ಸುಖದುಃಖಗಳನ್ನು ತೋಡಿಕೊಳ್ಳುವ, ತಮ್ಮ ಮನೆಯ ರಕ್ಷಕಿ ಎಂದು ಭಾವಿಸುವ, ಅವಳು ಉಕ್ಕಿ ಬಂದರೆ ‘ನಮ್ಮಿಂದ ಏನೋ ತಪ್ಪಾಗಿದೆ, ಅದ್ದರಿಂದ ಗಂಗೆ ಮುನಿದಿದ್ದಾಳೆ’ ಎಂದೇ ಅಂತರೀಕ್ಷಣೆ ಮಾಡಿಕೊಳ್ಳುವ ಸಂಸ್ಕೃತಿ ನಮ್ಮದು! ನದಿಸ್ನಾನವನ್ನು ಪವಿತ್ರ, ಮೋಕ್ಷಕಾರಕ, ಪಾಪನಿವಾರಕ ಎಂದು ಪುರಾಣಗಳು ಹೊಗಳುವುದನ್ನು ಗಮನಿಸಬೇಕು.
ದಕ್ಷಿಣ ಭಾರತದಲ್ಲಿ ಮಾಘಮಾಸ ಬಂತೆಂದರೆ ತೀರ್ಥಸ್ನಾನದ ಸಂಭ್ರಮ ಪ್ರಾರಂಭ! ಉತ್ತರ ಭಾರತದಲ್ಲಿ ಜ್ಯೇಷ್ಠಮಾಸವನ್ನು ‘ಸ್ನಾನದ ಮಾಸ’ ಎಂದು ಹಬ್ಬದಂತೆ ಆಚರಿಸಲಾಗುತ್ತದೆ! ತೀರ್ಥಸ್ಥಾನಗಳಿಗೆ ಹೋಗಿಬರುವ ಯಾತ್ರಿಕರು ಆಯಾ ಕ್ಷೇತ್ರದ ಜಲವನ್ನು ಪುಟ್ಟ ಕುಂಭಗಳಲ್ಲಿ ತುಂಬಿ ತಂದು ಬಂಧುಮಿತ್ರರಿಗೆ ಹಂಚುವ ಪುಣ್ಯಕರ್ಮವನ್ನೂ ಮಾಡುತ್ತಾರೆ! ಇದಲ್ಲದೆ ಮನೆಮನೆಯ ದೇವರ ಕೋಣೆಯಲ್ಲೂ ಗಂಗೆ- ಕಾವೇರಿ ನದಿ ನೀರಿನ ಕಲಶಗಳನ್ನಿಟ್ಟು ಪೂಜಿಸುವ ಪದ್ಧತಿ ಇಂದಿಗೂ ಇದೆ. ಮದುವೆ ಮುಂಜಿ ಗೃಹಪ್ರವೇಶ ಮುಂತಾದ ಸಮಾರಂಭಗಳಿಗೆ, ಪುರುಡು-ಸೂತಕಗಳು ಕಳೆದರೆ ಪುಣ್ಯಾಹ ಮಾಡುವುದಕ್ಕೂ ಪವಿತ್ರ ಜಲವೇ ಬೇಕು! ಸಾಯುವ ಸ್ಥಿತಿಯಲ್ಲಿರುವವರಿಗೂ ಪವಿತ್ರ ಗಂಗಾಪಾನ ಮಾಡಿಸಿ ಕಳಿಸಿಕೊಡಲಾಗುತ್ತದೆ. ಪೂಜೆಗೆಂದೂ, ಅಡುಗೆಗೆಂದೂ ಮಡಿಯಾಗಿ ಎತ್ತಿಡುವ ನೀರನ್ನೂ ಬಹಳ ಎಚ್ಚರದಿಂದ ಪೂಜ್ಯಭಾವದಿಂದ ಕಾಪಿಡಲಾಗುತ್ತದೆ. ಯಾವಾಗೆಂದರೆ ಆವಾಗ ಮುಟ್ಟಿ, ಕೈಹಾಕಿ ಯಾರೂ ಕಲುಷಿತಗೊಳಿಸುವುದಿಲ್ಲ. ಬಾವಿಯಿಂದ ಸೇದಿದ ನೀರು ಹೆಚ್ಚಾದರೂ ಮತ್ತೆ ಬಾವಿಗೆ ಬಿಸುಡುವಂತಿಲ್ಲ. ನಮ್ಮ ಕೈಯಲ್ಲಿನ ಕೊಳೆ- ಕೀಟಾಣುಗಳು ಸಾರ್ವಜನಿಕರ ಸೊತ್ತಾದ ಭಾವಿಗೆ ಸೇರುವಂತಾಗಬಾರದು ಎನ್ನುವ ಎಚ್ಚರ ಇಲ್ಲಿ ಕಾಣಬರುತ್ತದೆ!

ಕೆರೆ- ಬಾವಿಗಳಲ್ಲಿ ಸ್ನಾನಕ್ಕಿಳಿಯುವಾಗ ಕಡಲೆಹಿಟ್ಟು, ಅರಸಿನಗಳನ್ನೂ ಉಜ್ಜಲು ಕಲ್ಲನ್ನೂ ಬಳಸುವುದೇ ಸಂಪ್ರದಾಯವಾಗಿತ್ತು. ನೀರನ್ನು ಜಲಜಂತುಗಳನ್ನು ಹಾಳುಗೆಡಹುವ ರಾಸಾಯನಿಕಗಳ ಸಾಬೂನು ಶ್ಯಾಂಪೂಗಳನ್ನು ಬಳಸುವುದು ನಮ್ಮ ಸಂಪ್ರದಾಯವಲ್ಲ. ಪೂಜಾವಿಧಿಗಳಲ್ಲಿ ಮೊದಲು ಕಲಶಪೂಜೆ. ಸಪ್ತನದಿಗಳನ್ನು ಕಲಶದ ಜಲದಲ್ಲಿ ಆವಾಹಿಸಿ ಪೂಜಿಸಿ, ಬಳಿಕ ಅದೇ ಜಲವನ್ನು ಅಭಿಷೇಕಾದಿ ವಿಧಿಗಳಿಗೆ ಬಳಸಲಾಗುತ್ತದೆ. ದೇವರಿಗೆ ನೀಡುವ ಅಘ್ರ್ಯ- ಪಾದ್ಯ- ಆಚಮನೀಯಗಳಲ್ಲೆಲ್ಲ ಉದ್ಧರಣೆ ನೀರನ್ನು ಬಿಡಲಾಗುತ್ತದೆ. ದಾನ ನೀಡುವಾಗಲೂ ಉದ್ಧರಣೆ ನೀರನ್ನು ಹಾಕಲಾಗುತ್ತದೆ. ಅಗ್ನಿಸಾಕ್ಷಿಗೆ ಇರುವಷ್ಟೇ ಮಹತ್ವ ಈ ‘ಜಲಸಾಕ್ಷಿ’ಗೂ ಇದೆ ಎನ್ನಬಹುದು! ಪ್ರಾಯಶ್ಚಿತ್ತದ ಪವಿತ್ರ ಮಂತ್ರಗಳನ್ನು ಹೇಳುವ ಮುನ್ನ ಆಚಮನ ಮಾಡಲಾಗುತ್ತದೆ.
ವೈದಿಕ- ಆಗಮ- ತಂತ್ರ- ಜಾನಪದದ ಎಲ್ಲಪೂಜಾವಿಧಿಗಳಲ್ಲೂ ಮೊದಲಲ್ಲೂ ಕೊನೆಯಲ್ಲೂ ಆಚಮನ ಮಾಡಲಾಗುತ್ತದೆ. ಭೋಜನಪೂರ್ವದಲ್ಲಿ ಜಲದಿಂದ ಪರಿಶಿಂಚನೆ ಮಾಡಿ ಊಟದ ಪ್ರಕ್ರಿಯೆಗೆ ‘ಯಜ್ಞಭಾವ’ವನ್ನು ಹೊಂದಿಸಿಕೊಳ್ಳುತ್ತೇವೆ! ಸ್ನಾನ ಮಾಡುವಾಗಲೂ ಸಪ್ತನದಿಗಳನ್ನು ಆವಾಹಿಸಿಕೊಂಡು ‘ಗಂಗೇಚ ಯಮುನೇಚೈವ ಗೋದಾವರೀ ಸರಸ್ವತೀ ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು” ಎನ್ನುತ್ತೇವೆ. ಪವಿತ್ರನದಿಗಳ ಸನ್ನಿಧಿಯನ್ನು ಅನುಭವಿಸುವ ಈ ಭಾವವು ಆಧ್ಯಾತ್ಮಿಕ ಸಂಕೇತವಷ್ಟೇ ಆಗಿರದೆ ನಮ್ಮ ನದಿಪ್ರೇಮವನ್ನೂ ಪ್ರತೀಕಿಸುತ್ತದೆ! ಭಾರತಾದ್ಯಂತ ಹೆಣ್ಣುಮಕ್ಕಳಿಗೆ ಗಂಗಾ, ಯಮುನ, ಕಾವೇರಿ, ಸಿಂಧೂ, ಸರಸ್ವತೀ ಎಂಬ ನದಿಯ ಹೆಸರುಗಳನ್ನಿಡಲಾಗುತ್ತದೆ.

ಆಕಳಿಗೂ, ಕುದುರೆಗಳಿಗೂ, ಮನೆಗೂ, ಸಂಸ್ಥೆಗಳಿಗೂ ಈ ಹೆಸರುಗಳನ್ನಿಡಲಾಗುತ್ತದೆ. ಗಂಗಮ್ಮನ ಗುಡಿ, ಕಾವೇರಮ್ಮನ ಗುಡಿಗಳಲ್ಲಂತೂ ಅವಳನ್ನು ಜಗನ್ಮಾತೆಯೆಂದೇ ವಿಧಿಯುಕ್ತವಾಗಿ ಆರಾಧಿಸಲಾಗುತ್ತದೆ. ಜಾತ್ರೆ ಉತ್ಸವಗಳು ನಡೆಯುತ್ತವೆ. ಸಂಕ್ರಮಣ, ಕುಂಭಮೇಳ, ಸ್ನಾನೋತ್ಸವ, ದೀಪೋತ್ಸವ ಮುಂತಾದ ಬಗೆಬಗೆಯ ಹಬ್ಬಗಳೂ ಉತ್ಸವಗಳೂ ನದಿಗಳ ಸುತ್ತ ಹರಡಿಕೊಂಡಿವೆ. ಗಂಗೆಯನ್ನುಶಿವನ ಸತಿಯೆಂದೂ ಯಮುನೆಯನ್ನು ಕೃಷ್ಣನ ಸತಿಯೆಂದೂ ಕಾವೇರಿಯನ್ನು ಅಗಸ್ತ್ಯರ ಪತ್ನಿಯೆಂದೂ ಪುರಾಣಕಥೆಗಳು ಸಾರುತ್ತವೆ. ಉದಾತ್ತ ಮನೋಭಾವದ ಮಹಿಳೆಯರೂ, ದೇವಿಯರೂ, ಲೋಕಹಿತಕ್ಕಾಗಿ ನದೀರೂಪ ತಾಳಿದ್ದಾರೆ ಎನ್ನುವ ಸ್ವಾರಸ್ಯಕರ ಕಥೆಗಳೂ ಇವೆ. ಲೋಕಹಿತಕ್ಕಾಗಿ ನದಿಯಾಗಿ ಹರಿಯಬೇಕೆಂದೇ ಘೋರ ತಪಸ್ಸನ್ನು ಮಾಡಿ, ವರ ಪಡೆದು ನದಿಯಾಗಿ ಪರಿವರ್ತನೆಯಾದ ಸತ್ಯವತೀ ಎಂಬ ಸಾಧ್ವಿಯ ಕಥೆ ರಾಮಾಯಣದಲ್ಲಿದೆ. ಅಂತೆಯೇ ಸಂಸಾರಕ್ಕಷ್ಟೇ ಸೀಮಿತವಾಗಿರದೆ ಲೋಕಕಲ್ಯಾಣಕ್ಕಾಗಿ ತನ್ನನ್ನು ತಾನು ನದಿಯನ್ನಾಗಿ ಪರಿವರ್ತಿಸಿಕೊಂಡು ಹರಿದ ಅಗಸ್ತ್ಯರ ಪತ್ನಿ ಕಾವೇರಿಯ ಕಥೆಯೂ ನಮಗೆಲ್ಲತಿಳಿದಿದೆ.

ಒಟ್ಟಿನಲ್ಲಿ ನದಿಯೆಂದರೆ ಸಾಕು, ನಮ್ಮ ಪಾಲಿಗೆ ಭೌತಿಕ ವಸ್ತುವಲ್ಲ, ತಾಯಿ. ಅವ್ಯಾಜ ಕರುಣೆಯ ಧಾರೆ. ಪೋಷಿಸುವ ಅನ್ನಪೂರ್ಣೆ, ಸಮೃದ್ಧಿಯೀಯುವ ಲಕ್ಷ್ಮೀ. ಮೈಮನಗಳನ್ನು ತೊಳೆಯುವ ಪಾವನಿ. ಮತಿಯನ್ನು ಬೆಳಗುವ ಸರಸ್ವತೀ. ನಾಡು-ನುಡಿ-ಕಲೆ-ಸಾಹಿತ್ಯ-ಸಂಸ್ಕೃತಿಗಳನ್ನೆಲ್ಲ ಪ್ರೇರೇಪಿಸುವ ದಿವ್ಯ ಸೌಂದರ್ಯಧಾರೆ!

ಕನ್ನಡಿಗರ ಪಾಲಿಗೆ ಕಾವೇರಿ ಕೇವಲ ಒಂದು ನೀರಿನ ಸಂಪನ್ಮೂಲ, ದೊಡ್ಡ ನದಿಯಷ್ಟೇ ಅಲ್ಲ. ನಮ್ಮ ಜೀವಧಾರೆ. ನಮ್ಮ ಸಾಂಸ್ಕೃತಿಕ ಹೆಗ್ಗುರುತು. ವೀರ ಕೊಡವರ ಪಾಲಿಗಂತೂ ಕುಲದೇವಿ. ಕನ್ನಡದ ಮನೆಮನೆಯ ಆರಾಧ್ಯ ದೇವತೆ. ಕಲೆ ಕಾವ್ಯಗಳಿಗೆ ಪ್ರೇರಕ ರಸಧಾರೆ. ಪ್ರಾಚೀನ ಪುರಾಣ ಕಾಲದಿಂದ ಸುದೀರ್ಘ ಇತಿಹಾಸದ ಪಥದಲ್ಲಿ ಹಾದು ಇಲ್ಲಿಯವರೆಗೂ ನಡೆದು ಬಂದ ಈ ನಾಡಿನ ಧರ್ಮಕರ್ಮಗಳಿಗೂ ಏಳುಬೀಳುಗಳಿಗೂ ಕಾವೇರಿಯೇ ಪರಮ ಸಾಕ್ಷಿ! ನದಿಯ ಹುಟ್ಟಿನ ದಿನಾಂಕವನ್ನು ತಿಳಿಯಲಾಗದು. ಆದರೂ ನಮ್ಮ ಔಪಾಸನಾತ್ಮಕ ಪ್ರೀತಿಗಾಗಿ ಸನಾತನಿಯಾದ ಕಾವೇರಿಗೂ ‘ಹುಟ್ಟುಹಬ್ಬ’ವನ್ನು ಆಚರಿಸುತ್ತೇವೆ! ಅನಂತನನ್ನುಸಾಂತನಾಮ ರೂಪಗಳಲ್ಲಿ ಬಂಧಿಸಿ ಆರಾಧಿಸುವ ಕಲೆ ನಮಗೆಲ್ಲಸಿದ್ಧಿಸಿದೆ!
ಈ ದಿವ್ಯ ಸುಂದರ ಭಾವಸಂಬಂಧ ಮೂಢನಂಬಿಕೆಯಲ್ಲ, ಇದೊಂದು ದಿವ್ಯ ಸಾಕ್ಷಾತ್ಕಾರ. ಸಹಸ್ರಮಾನಗಳ ಕಾಲ ನಮ್ಮ ಈ ದಿವ್ಯನದಿಗಳು ಉಳಿದದ್ದು ಬೆಳೆದದ್ದು ಅಕ್ಷಯವಾಗಿ ಉಳಿದದ್ದು ಈ ಭಾವನೆಗಳ ಆಧಾರದ ಮೇಲೆಯೇ! ಪೂಜ್ಯಭಾವವಿದ್ದದ್ದರಿಂದ ನದಿಗಳ ಅಪಬಳಕೆಯಾಗುತ್ತಿರಲಿಲ್ಲ. ಕೆರೆ- ಬಾವಿ- ನದಿಗಳ ಪಕ್ಕದಲ್ಲೇ ಊರುಗಳನ್ನೂ ಕಟ್ಟಿಕೊಂಡು, ಆಗಿಂದಾಗ್ಗೆ ಬೇಕಾಗುವಷ್ಟು ನೀರನ್ನು ತಮ್ಮ ಮನೆಯ ತೊಟ್ಟಿಗಳಲ್ಲಿ ಬಿಂದಿಗೆಗಳಲ್ಲಿ ತುಂಬಿಟ್ಟುಕೊಂಡು ಹಿತಮಿತವಾಗಿ ಬಳಸಲಾಗುತ್ತಿತ್ತು. ಕೈಯಲ್ಲೋ, ಎಲೆಯ ದೊನ್ನೆಗಳಲ್ಲೋ, ಮಡಕೆ – ಲೋಹದ ಚೆಂಬುಗಳಲ್ಲೋ ನೀರನ್ನು ಬಳಸುತ್ತಿದ್ದರು. ನೀರನ್ನು ಕುಡಿಯುವಾಗ ತುಟಿಗೆ ಮುಟ್ಟಿಸದೇ ಎತ್ತಿ ಕುಡಿಯುವ ಅಭ್ಯಾಸವನ್ನು ಎಳವೆಯಿಂದಲೇ ಮಾಡಿಸಲಾಗುತ್ತಿತ್ತು. ಹಾಗಾಗಿ ಒಂದು ಚೆಂಬು ನೀರಲ್ಲಿ ಹಲವರು ಕುಡಿಯಲು ಸಾಧ್ಯವಾಗುತ್ತಿತ್ತು. ನೀರು ವ್ಯಯವಾಗುತ್ತಿರಲಿಲ್ಲ. ಇದನ್ನೆಲ್ಲ’ಓಲ್ಡ್ ಫ್ಯಾಶನ್’ ಎಂದು ಬಗೆದು ಪಾಶ್ಚಾತ್ಯರಂತೆ ತುಟಿ ಹಚ್ಚಿ ಕುಡಿಯಲಾರಂಭಿಸಿದ ನಮಗೆ ಶುಚಿತ್ವವೂ ಮರೆತುಹೋಗಿದೆ.

ನೀರಿನ ಬೆಲೆಯೂ ತಿಳಿಯದಾಗಿದೆ. ಮದುವೆ ಮನೆಗಳಲ್ಲಿನೋಡಿ – ಒಬ್ಬನಿಗೆ ಒಂದೊಂದು ಪ್ಲಾಸ್ಟಿಕ್ ಬಾಟಲಿ ನೀರು ಹಂಚಲಾಗುತ್ತದೆ! ಎಕ್ಸ್ಟ್ರಾ ಬಾಟಲಿ ನೀರು ಗಿಟ್ಟಿಸಿಕೊಳ್ಳುವ ಲೋಭಿಗಳೂ ಇರುತ್ತಾರೆ! ಎಲ್ಲರೂ ಊಟ ಮಾಡಿ ಎದ್ದಾಗ ನೋಡಿದರೆ ಬಾಟಲಿಗಳಲ್ಲಿ ಸಾಕಷ್ಟು ನೀರು ಉಳಿದಿರುತ್ತದೆ. ಆ ನೀರೆಲ್ಲ ಮೋರಿಗೆ ಹೋಗುತ್ತದಲ್ಲದೆ, ನೂರಾರು ಬಾಟಲಿಗಳು ತೊಟ್ಟಿಗೆ ಸೇರುತ್ತವೆ. ಈ ಬಗ್ಗೆ ‘ನಾಗರಿಕ’ರಾದ ನಮಗೆ ಒಂದಿಷ್ಟೂ ಪಾಪಪ್ರಜ್ಞೆಯೇ ಇಲ್ಲ! ಕೆಲವೇ ವರ್ಷಗಳ ಮೊದಲು ಲೋಹದ ಲೋಟಗಳಲ್ಲಿ ಬಡಿಸುವ ನೀರನ್ನು ಹಿತಮಿತವಾಗಿ ನಾವೇ ಕುಡಿಯುತ್ತಿದ್ದದ್ದನ್ನು ನಾವೇಕೆ ಮರಳಿ ಕಲಿಯಬಾರದು? ‘ನನ್ನ ಹಣ, ನನ್ನ ಇಷ್ಟ’ ಎನ್ನುವ ಧಿಮಾಕು! ಮನೆಯಲ್ಲೇನೋ ನಲ್ಲಿಸೋರಿದರೆ ರಿಪೇರಿ ಮಾಡಿಸುತ್ತೇವೆ. ಆದರೆ ಬೀದಿಯ ನಲ್ಲಿ ಸೋರಿದರೆ ‘ಕ್ಯಾರೇ!’ ಅನ್ನುವುದಿಲ್ಲ. ಮಕ್ಕಳು ಅದನ್ನು ಪೋಲು ಮಾಡುವಾಗಲೂ ನಾವು ಚಕಾರವೆತ್ತುವುದಿಲ್ಲ.

ಕನ್ನಡದ ತಾಯಿ ಕಾವೇರಿಯ ಈ ಪವಿತ್ರ ತುಲಾ ಸಂಕ್ರಮಣದ ದಿನ ನಾವೆಲ್ಲಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಕನ್ನಡದ ಮನೆಮನೆಯ ನಲ್ಲಿಯಲ್ಲಿ ಕಾವೇರಿಯ ಅಥವಾ ಅವಳ ಉಪನದಿಗಳಾದ ಹೇಮಾವತೀ ಅರ್ಕಾವತಿಗಳ ನೀರೇ ಹರಿಯುವುದು. ಅವಳನ್ನು ಪೂಜ್ಯಭಾವದಿಂದ ಕಾಣೋಣ. ಕಾವೇರಿಯು ನಮಗೆ ಉಣ್ಣಲಿಕ್ಕುತ್ತಾಳೆ. ಬಾಯಾರಿದರೆ ಕುಡಿಯಲು ಒದಗುತ್ತಾಳೆ. ಮೀಯಲು ಒದಗುತ್ತಾಳೆ. ನಮ್ಮ ಪೂಜೆಯನ್ನುಸ್ವೀಕರಿಸಿ ಹರಸುತ್ತಾಳೆ. ಹೆತ್ತ ತಾಯಿಯಂತೆ ನಮ್ಮ ಹೊಲಸನ್ನೂ ತೊಳೆಯುತ್ತಾಳೆ! ಇಂತಹ ತಾಯಿಗೆ ನಾವದೆಷ್ಟು ಋುಣಿಗಳು! ಕಾವೇರಿಯ ಪೂಜೆಯನ್ನು ಕೇವಲ ಹೂ ಅಕ್ಷತೆಗಳಿಂದ ಮಾಡಿದರೆ ಸಾಲದು. ನೀರನ್ನುಎಚ್ಚರದಿಂದ ಹಿತಮಿತವಾಗಿ ಬಳಸುವ ಕಾಳಜಿ ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಲ್ಲೂ ಬಂಧುಮಿತ್ರರಲ್ಲೂ ನೆರೆಕೆರೆಯವರಲ್ಲೂ ಈ ಪರಿಸರ ಸ್ನೇಹವನ್ನು ಬಿತ್ತರಿಸುವ ಪ್ರಯತ್ನದಲ್ಲಿ ತೊಡಗೋಣ. ಹೀಗೆ ನಮ್ಮ ಪವಿತ್ರ ತೀರ್ಥವಾದ ಕಾವೇರಿಯನ್ನು ಭಾವನೆಯಿಂದ ಮಾತ್ರವಲ್ಲದೆ ಕೃತಿಯಲ್ಲೂ ಅಕ್ಷರಶಃ ಆದರಿಸುವ ಆತ್ಮಪರಿಷ್ಕಾರಕ್ಕೆ ತೊಡಗೋಣ. ಇಂತಹ ಹುಟ್ಟುಹಬ್ಬದ ಉಡುಗೊರೆಯನ್ನು ನಾವು ಕಾವೇರಿಗೆ ನೀಡಿದರೆ ಅವಳು ಒಲಿದು ಹರಸುವುದು ಖಂಡಿತ ಅಲ್ಲವೆ?!
ಕೃಪೆ : ವಿಜಯಕರ್ನಾ‍ಟಕ

Leave a Reply