ಮಾಡುವುದೆಲ್ಲ ‘ಬ್ರಹ್ಮಯಜ್ಞ’ವೇ!

ಮಾಡುವುದೆಲ್ಲಬ್ರಹ್ಮಯಜ್ಞವೇ!

ಕರ್ಮಯೋಗವನ್ನರಿತವನ ಪಾಲಿಗೆ ದೇವತಾಪೂಜನ, ನಿರ್ವಿಕಾರದ ಉಪಾಸನೆ, ಇಂದ್ರಿಯಸಂಯಮ, ತಪಸ್ಸು, ಅಧ್ಯಯನ, ಹವನಾದಿ ದ್ರವ್ಯಯಜ್ಞ – ಈ ಎಲ್ಲವೂ ‘ಬ್ರಹ್ಮಯಜ್ಞ’ವೇ ಆಗುತ್ತದೆ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನು. ಮುಂದುವರಿಸುತ್ತ ಹೇಳುತ್ತಾನೆ:

‘‘ಕೆಲವರು ಅಪಾನವನ್ನು ಪ್ರಾಣದಲ್ಲಿಯೂ ಪ್ರಾಣವನ್ನು ಅಪಾನದಲ್ಲಿಯೂ ಅರ್ಪಿಸುತ್ತ, ಪ್ರಾಣ-ಅಪಾನಗಳ ಗತಿಯನ್ನೇ ನಿರೋಧಿಸಿ ಪ್ರಾಣಾಯಾಮವನ್ನು (ಸಿದ್ಧಿಸಿಕೊಳ್ಳುವುದರ ಮೂಲಕ ಬ್ರಹ್ಮಯಜ್ಞ) ಮಾಡುತ್ತಾರೆ; ಇನ್ನು ಕೆಲವರು ನಿಯತಾಹಾರಿಗಳಾಗಿ (ಉಪವಾಸಾದಿ ಕಠಿಣ ಆಹಾರ-ನಿಯಮಗಳ ಮೂಲಕ) ತಮ್ಮ ಪ್ರಾಣಗಳನ್ನು (ಅಪಾನ-ಉದಾನ-ಸಮಾನ-ವ್ಯಾನವೆಂಬ ಪ್ರಾಣವಾಯುಗಳನ್ನು) ‘ಪ್ರಾಣ’ವೆಂಬ ಮುಖ್ಯವಾಯುವಿನಲ್ಲಿ ಅರ್ಪಿಸುತ್ತಾರೆ (ಇಂತಹ ರಾಜಯೌಗಿಕ ಕ್ರಿಯೆಗಳ ಮೂಲಕ ಬ್ರಹ್ಮಯಜ್ಞವನ್ನು ಮಾಡುತ್ತಾರೆ) – ಹೀಗೆ (ವಿವಿಧ ಸಾಧನಾಮಾರ್ಗಗಳ ಮೂಲಕ) ಪಾಪವನ್ನು ಕಳೆದುಕೊಂಡು ‘ಯಜ್ಞ’ವನ್ನು (ಯಜ್ಞಸ್ವರೂಪಿ ಬ್ರಹ್ಮನನ್ನು) ಅರಿಯುತ್ತಾರೆ’’ (ಭ.ಗೀ.: 4.29-30). ಮುಂದುವರೆಸುತ್ತ ಹೇಳುತ್ತಾನೆ; ‘‘ಯಾರು ಯಜ್ಞಶಿಷ್ಟವೆಂಬ ಅಮೃತವನ್ನು ತಿನ್ನುತ್ತಾರೋ, ಅವರು ಸನಾತನವಾದ ಬ್ರಹ್ಮವನ್ನೇ ಹೊಂದುತ್ತಾರೆ.’’ (4.31)

ಯಜ್ಞಶಿಷ್ಟ/ಯಜ್ಞಶೇಷ ಎಂದರೆ ‘ಪ್ರಸಾದ’. ಇದರ ಸಂಕೇತವಾಗಿಯೇ ಧರ್ಮಕಾರ್ಯಗಳ ಕೊನೆಯಲ್ಲಿ ದೇವರ ನೈವೇದ್ಯದ ಖಾದ್ಯವನ್ನೊಂದಿಷ್ಟನ್ನು ಎಲ್ಲರ ಕೈಗೂ ಹಂಚಲಾಗುತ್ತದೆ. ಆದರೆ ಇಲ್ಲಿ ಯಜ್ಞಶಿಷ್ಟವೆಂದರೆ ಕೇವಲ ‘ಪ್ರಸಾದವೆಂಬ ಖಾದ್ಯ’ ಎಂಬ ಸಂಕುಚಿತಾರ್ಥವನ್ನು ಗ್ರಹಿಸಬಾರದು. (ಆ ಅರ್ಥವೂ ಇಲ್ಲಿ ಅಂತರ್ಗತವಾಗಿದೆ. ಕೇವಲ ಯಜ್ಞಶೇಷವನ್ನು/ಮೊಖವನ್ನು/ದೇವತಾಪ್ರಸಾದವನ್ನು ಮಾತ್ರವೇ ತಿಂದು ಜೀವಿಸುವ ವ್ರತದವರು ಇರುತ್ತಾರೆ. ‘ಮೊಖಾಶೀ’ ಇತ್ಯಾದಿ ಉಪನಾಮಗಳೂ ಆ ವ್ರತಗಳನ್ನು ಆಚರಿಸುವವರನ್ನು ಸೂಚಿಸುತ್ತವೆ.

ಕರ್ಮವನ್ನು ದೇವತಾರ್ಪಣವಾಗಿ ಮಾಡಿದ ಮೇಲೆ, ‘ನಾನು ಮಾಡಿದೆ, ಫಲವೆಲ್ಲ ನನಗೆ ಸಲ್ಲಬೇಕು’ ಎಂಬ ಕರ್ತೃ-ಭೋಕ್ತೃಾವಗಳನ್ನು ತ್ಯಜಿಸಿ, ಕರ್ಮದ ಫಲಗಳನ್ನು ಸರ್ವಜನ ಹಿತಕ್ಕಾಗಿ ಹಂಚಿದ ಬಳಿಕ, ಮಿಗುವ ಅಥವಾ ಸಿಗುವ (ಇಷ್ಟಾರ್ಥಸಿದ್ಧಿ-ಭೋಗ-ಸಂತೋಷರೂಪದ) ಕರ್ಮಫಲವನ್ನು ‘ಯಜ್ಞಶೇಷ’ ಎನ್ನಲಾಗುತ್ತದೆ. ಆ ಯಜ್ಞಶೇಷವನ್ನು ಅತೃಪ್ತಿಯ ಗೊಣಗಾಟವಿಲ್ಲದೆ, ತುಂಬುಮನದಿಂದ ‘ಪಾಲಿಗೆ ಬಂದದ್ದು ಪಂಚಾಮೃತ’ ಎಂಬ ಭಾವದಿಂದ ಸ್ವೀಕರಿಸುವುದು ಮುಕ್ತಿಗೆ ಸಾಧನ ಎಂದರ್ಥ. ಕರ್ಮವನ್ನು ಯಜ್ಞಭಾವದಲ್ಲಿ ಮಾಡಿದರೆ ಮುಕ್ತಿ. ಭೋಗದಾಸೆಯಿಂದ ಮಾಡುತ್ತ ಹೋದರೆ ಬಂಧನ. ಕರ್ಮಕ್ಕೆ ಸಂಬಂಧಿಸಿದ ವ್ಯಕ್ತಿ-ವಸ್ತು-ಫಲಾಫಲಗಳನ್ನೇ ತುಂಬ ಬಯಸುತ್ತ ಮಾಡಿದಾಗ, ಲೋಕಸಂಗ ಹೆಚ್ಚುತ್ತದೆಯೇ ಹೊರತು ಬ್ರಹ್ಮತ್ವ ಸಿದ್ಧಿಸದು. ಯಜ್ಞಭಾವದಲ್ಲಿ ಕರ್ಮ ಮಾಡುವವರಿಗೆ ಫಲಾಫಲ ಏನೇ ಬರಲಿ ಅದನ್ನು ‘ಯಜ್ಞಶೇಷ’ ಎಂದು ಸ್ವೀಕರಿಸುವ ಭಾವ ಬಲಿಯುತ್ತದೆ. ಅಂತಹವರು ಕರ್ಮವನ್ನು ಮಾಡಿಯೂ ಮಾಡಿರುವುದಿಲ್ಲ, ಕರ್ಮಫಲಗಳನ್ನುಂಡೂ ಉಣ್ಣುವುದಿಲ್ಲ! ಅಂತಹವರು ಕರ್ಮಬಂಧದಿಂದ ಕಳಚಿಕೊಂಡು ಸನಾತನವಾದ ಬ್ರಹ್ಮದ ನೆಲೆಗೇರುತ್ತಾರೆ.

ಯಜ್ಞಶೇಷವನ್ನು ‘ಅಮೃತ’ ಎನ್ನಲಾಗಿರುವುದು ಗಮನೀಯ. ಅಮರತ್ವವೆಂದರೆ ಹುಟ್ಟು-ಸಾವಿಲ್ಲದ ಸ್ಥಿತಿ, ಬ್ರಹ್ಮಾನುಭವ, ಆತ್ಯಂತಿಕ ಆನಂದ ಎಂಬರ್ಥಗಳೆಲ್ಲ ಧ್ವನಿಸಿವೆ. ಜನ್ಮ-ಮರಣಗಳಿಗೆ ಕಾರಣವೇ ಋಣಾನುಬಂಧಗಳು, ಕರ್ಮಬಂಧನಗಳು, ಆಶಾಸಂಕಲ್ಪಗಳು. ಅವುಗಳೆಲ್ಲ ಅಳಿದು ಅಮರತ್ವದ ಪ್ರಾಪ್ತಿಯಾಗಬೇಕಾದರೆ ಕರ್ಮವನ್ನು ಯಜ್ಞಭಾವದಲ್ಲಿ ಮಾಡುತ್ತ, ಯಜ್ಞಶೇಷವನ್ನು ತೃಪ್ತಿ ನಿರ್ಲಿಪ್ತಿಗಳಿಂದ ಭುಂಜಿಸುವ ಕರ್ಮಯೋಗವನ್ನಾಚರಿಸಬೇಕು ಎಂದು ತಾತ್ಪರ್ಯ.

‘‘ಯಜ್ಞಭಾವದಿಂದ ಕರ್ಮವನ್ನು ಮಾಡದಿದ್ದರೆ ಇಹಲೋಕದಲ್ಲೂ ಏನೂ ಸಿಗದು, ಪರಲೋಕದಲ್ಲೂ ಏನೂ ದಕ್ಕದು’’ ಎನ್ನುತ್ತ ಗೀತಾಚಾರ್ಯನು ಹೀಗೆ ಹೇಳುತ್ತಾನೆ; ‘‘ಹೀಗೆ ಬಹುವಿಧವಾದ ಯಜ್ಞಗಳು (ಅವುಗಳ ವಿವರ) ಬ್ರಹ್ಮಮುಖದಲ್ಲಿ ವಿವರಿಸಲಾಗಿವೆ’’ (4.32). ಬ್ರಹ್ಮಮುಖ ಎಂದ ‘ವೇದಮುಖ’ವೆಂದರ್ಥ. ವೇದಕ್ಕೆ ‘ಬ್ರಹ್ಮ’ ಎಂಬ ಹೆಸರಿದೆ. ಸರ್ವಜ್ಞಾನ-ಧ್ಯಾನ-ಕರ್ಮಗಳ ಆಗರವಾದ ವೇದದಲ್ಲಿ ಪರಿಪರಿಯ ಕರ್ಮಗಳ ಮೂಲಕ ಬ್ರಹ್ಮಯಜ್ಞವನ್ನೇ ಆಚರಿಸುವ ಕರ್ಮಯೋಗದ ಸಂದೇಶವನ್ನು ಕೊಡಲಾಗಿದೆ ಎಂದರ್ಥ.

‘ಈ ಎಲ್ಲವೂ ಕರ್ಮಜವಾದವು ಎಂದು ತಿಳಿ. ಆಗ ನೀನು ಮುಕ್ತನಾಗುವೆ’’ (4.32) ಎನ್ನುತ್ತಾನೆ ಕೃಷ್ಣ. ಕರ್ಮಜ ಎಂದರೆ ‘ಕರ್ವೇಂದ್ರಿಯಗಳಿಂದ ಹುಟ್ಟಿದ್ದು’, ಅರ್ಥಾತ್ ಕೈ-ಕಾಲು ಮುಂತಾದ ದೇಹದ ಅವಯವಗಳಿಂದ ನಡೆಯುವ ಕ್ರಿಯೆಗಳು. ದೇಹವನ್ನು ಕಾಯಕದಲ್ಲಿ ತೊಡಗಿಸಿಯೇ ಎಲ್ಲ ವಿಹಿತ ಕರ್ಮವನ್ನೂ ಮಾಡುವುದು ಅನಿವಾರ್ಯ. ಅದನ್ನು ವಂಚನೆಯಿಲ್ಲದೆ ಅಚ್ಚುಕಟ್ಟಾಗಿ ಮಾಡಿಯೇ ತೀರಬೇಕು. ಮತಿಯಲ್ಲಿ ಧರ್ಮದ ನಿಶ್ಚಯ ಹೊಂದಿದ್ದು, ಮನದಲ್ಲಿ ನಿರ್ಲಿಪ್ತಿ ಹಾಗೂ ಫಲತ್ಯಾಗದ ಭಾವವನ್ನು ಹೊಂದಿದ್ದು ದೇಹದ ಮೂಲಕ ಎಲ್ಲ ಕರ್ಮಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಸಾಗಬೇಕು. ಈ ನಯವನ್ನು ಅರಿತವನು ಮುಕ್ತನಾಗುತ್ತಾನೆ. ಕರ್ಮ ಹಾಗೂ ಋಣಬಂಧಗಳಿಗೆ ಸಿಲುಕುವುದಿಲ್ಲ. ಆತನು ಮಾಡುವ ಕರ್ಮದ ಗುಣಮಟ್ಟವೂ ಉತ್ಕೃಷ್ಟವಾಗಿರುತ್ತದೆ, ಅದರಿಂದ ಲೋಕಸಂಗ್ರಹವೂ ಆಗುತ್ತದೆ, ಅವನೂ ಕಾಮ-ಲೋಭಗಳಿಗೆ ಬದ್ಧನಾಗುವುದಿಲ್ಲ. ಹೀಗೆ, ಕರ್ಮಯೋಗಿಯ ಕರ್ಮವೇ ಸವೋತ್ಕ ೃ್ಟವೆಂಬುದನ್ನೂ ಅದನ್ನು ಆಚರಿಸುವಂತೆಯೂ ಕೃಷ್ಣನು ಅರ್ಜುನನಿಗೆ ಸೂಚಿಸುತ್ತಿದ್ದಾನೆ.

‘ಅವರವರು ಅವರವರ ಪ್ರದೇಶ-ವೃತ್ತಿ-ಪ್ರವೃತ್ತಿ-ಅನುಕೂಲಗಳಿಗೆ ತಕ್ಕಂತೆ ಕರ್ಮವನ್ನೂ ಉಪಾಸನೆಯನ್ನೂ ಮಾಡುತ್ತ ಪಾರಮ್ಯದತ್ತ ಏರಬೇಕು’ ಎನ್ನುವುದೇ ಸನಾತನಧರ್ಮದ ಉದಾರ ನಿಲುವು.

ಡಾ. ಆರತೀ ವಿ.ಬಿ.

ಕೃಪೆ: ವಿಜಯವಾಣಿ

Leave a Reply